Saturday, April 30, 2011

ಇರುಳ ಕನ್ನಿಕೆ


ಭಾವನೆಗಳ ಬಟ್ಟಲಿನಲಿ ಕನಸ ಕನ್ನಿಕೆ
ಮೌನದೊಡವೆಯ ಕಾವ್ಯದ ಒಡತಿ
ಮಬ್ಬು ಬೆಳಕಲಿ ಕುಳಿತೆ ಏತಕೆ
ಸಂಭ್ರಮಿಸಲು ಬಾ ನಿನ್ನ ಇನಿಯ ತೋಟಕೆ.........

ಇರುಳ ಕಣ್ಣಿಗೆ ಕಾಣದ ಸೌಂದರ್ಯ ಮರೆಸಿ
ಏಕಾಂತ ತೋರುವ ನಿನ್ನ ಧೈರ್ಯ ಸರಿಸಿ
ಕಾಡುವ ಕಡೆತಗಳ ಮುಚ್ಚಿಟ್ಟು ಬೆಳಕಿಗೆ
ಮುಖ ಮಾಡಿ ಸೇರಿಬಿಡು ನಿನ್ನಿಯನ ಮಡಿಲಿಗೆ...

ಹೆಜ್ಜೆಗಳು ನಮ್ಮ ನೆಡೆಗೆ ದಾರಿಯಾಗಿವೆ
ಕಣ್ಣು ಆಸೆ ಬಿಂಬಿಸುವ ಪ್ರತಿಯಾಗಿಹುದು
ಹೀಗೆಲ್ಲಾ ಬೀರುವ ಅಂಗಗಳು ನಮ್ಮಲಿರುವಾಗ
ನೀನೇಕೆ ಬೆರೆತೆ ಈ ಕತ್ತಲ ಜೊತೆಗೆ...

ದಿನ-ರಾತ್ರಿ ಬಂದು ಹೋಗುವವು
ನೆಡೆದ ಘಟನೆಗಳು ಹಾದುಹೋಗುವವು
ಯಾವ ನೆನಪನು ಬಚ್ಚಿಡದೆ ಇನಿಯನೆಡೆ ಬಿಚ್ಚಿಡು
ತನಗೆ ತಾನಾಗೆ ಕವಿದ ಇರುಳು ಬೆಳಕ ಚೆಲ್ಲುವುದು....


ಚಿತ್ರ: ಪ್ರಕಾಶಣ್ಣ

Saturday, April 23, 2011

ಕದನ ವಿರಾಮ


ಎತ್ತ ನೋಡು ಗಿಜಿಗುಡುವ ಜನಜಂಗುಳಿ
ಮುಕ್ತ ಮಾತುಕತೆಗೆಲ್ಲಿ ನಿಶಬ್ಧದೋಕುಳಿ
ಅದಕೆ ಹುಡುಕಿ ಕರದೆ ಪ್ರೇಮ ಸೌಧಕೆ
ಮೌನ ಮುರಿದು ಮಾತಿಗಿಳಿ ನನ್ನ ಕನ್ನಿಕೆ......

ಸ್ವರ್ಗ ದೇಗುಲ ಇರುವುದು ನಾವಿರುವಲ್ಲೆ
ಇದ್ದ ಸ್ಥಳಕೆ ಪುಷ್ಠಿ ನೀಡಿ ಸಹಕರಿಸು ನಲ್ಲೆ
ಯಾವ ಗಾಜುಗೋಜಿಲ್ಲ ಯಾರ ಭಯವಿಲ್ಲ
ಸುರಿಸುಬಿಡು ಮನದಲಿದ್ದ ಬಿಗುಡವೆಲ್ಲ ........

ಜನನಿಬಿಡ ಸ್ಥಳಕೆ ಇಟ್ಟ ಹೆಜ್ಜೆ
ಮೌನವಿಸಿದ ನಿನ್ನ ಮನದ ಗೆಜ್ಜೆ
ಎಲ್ಲ ವಿರುದ್ಧ ಪಥದಲಿ ಸಾಗಿದೆ
ದಿಕ್ಕು ಬದಲಿಸಿ ಚರ್ಚಿಸು ಇಂದೇ..!!!

ಮುಳುಗೋ ಸೂರ್ಯ ತಿರುಗಿದ ಕೆಂಪಿಗೆ
ಮುನಿಸು ನಿಂತು ದೂರವಾಗಲಿ ಇಂದಿಗೆ
ಕದನವಿಲ್ಲದ ಜೀವನ ತಿಳಿದಿದೆಯ ನಿನಗೆ
ಎಲ್ಲ ಮರೆತು ನಗುತಲಿರು ಬರುವ ನಾಳೆಗಳಿಗೆ............


ದಿಗ್ವಾಸ್ ಚಿತ್ರಕ್ಕೆ ಕವನ...

Thursday, April 21, 2011

-ಒಲವ ಸಿರಿ-

ನಲ್ಲ, ಸುಂದರ ಸಂಜೆಯಲಿ
ಪ್ರೇಮದ ಜಗುಲಿಯಲಿ
ಸಂಜೆ ಹಸಿರ ಉಸಿರೊಡನೆ
ನಿನ್ನುಸಿರು ಎನ್ನೆದೆಯ ತಾಗಿ
ಮೌನದೊಡವೆಯ ಬಿಚ್ಚಿಡಬೇಕೆನಿಸಿತು.......

ನಲ್ಲ, ಎಷ್ಟೋ ದಿನಗಳ ಹರಕೆ
ಪೂರೈಸಿದ ನನ್ನೆಲ್ಲ ಬಯಕೆ
ಏಕಾಂತದ ಜೊತೆಯಲಿ
ಬೆಟ್ಟದಡವಿಯ ನೋಡುತ
ರೆಕ್ಕೆಪುಕ್ಕಗಳ ಬಿಚ್ಚಿಡಬೇಕೆನಿಸಿದೆ.....

ವಾಹನಗಳ ಗದ್ದಲದಲಿ
ಏಕಾಂತದ ಕೊರೆತೆಯಲಿ
ತಂಗಾಳಿಯ ಹಿತವಿಲ್ಲದೆ
ಪ್ರೇಮದ ಹನಿಗೂ ಮಂಕು ಕವಿದಿತ್ತು
ಇಂದು ಪ್ರಕೃತಿಯ ಎದುರು ಬಿಚ್ಚಿಡಬೇಕೆನಿಸಿದೆ......

ನಿಶಬ್ಧದ ಬರಧಿ
ಮಾತಿನ ಶರಧಿ....
ಪ್ರೇಮದಬ್ಬರದಿ
ನನ್ನೆದೆಗೆ ಅಪ್ಪಳಿಸಿ ಬರುತಿದೆ...
ನಲ್ಲ,ನನ್ನೊಲವ ಸ್ವೀಕರಿಸಿ
ಮೆಲ್ಲುಸಿರ ಧನಿಯವಳ ಆಲಿಂಗಿಸು........


"ದಿಗ್ವಾಸ್ ಅವರು ಕೊಟ್ಟ ಚಿತ್ರಕ್ಕೆ ನನ್ನ ಕಿರು ಸಾಲುಗಳು..."

Tuesday, April 19, 2011

-ಸಾಲುಗಳು-


-
-
ಮಧ್ಯರಾತ್ರಿ ಸಾಕು ನಾಯಿ
ಗೂಳಿಡುತ್ತ ಅಳುತ್ತಿತ್ತು..

ಎಲ್ಲಿಂದಲೋ ಸಾವಿನ ಸೂತಕ ಛಾಯೆ
ಬರುವುದೆಂದು ಮನೆಯೇ ಆತಂಕದಲ್ಲಿತ್ತು....

ಸಾವಿನ ಸೂತಕ ಎಲ್ಲಿಂದಲೋ ಅಲ್ಲ
ಮನೆಯದೇ ಎಂದು ಅರಿವಾದಾಗ
ರಾತ್ರಿ ನೆಡೆದ ಮಗಳ ಪ್ರೇಮ ವಿವಾಹದ
ಘರ್ಷಣೆಗಳು ಎಲ್ಲರ ಕಣ್ಣ ಮುಂದೆ ಬಂದಿತ್ತು......
--------

--
ಅವಳು
ಭೋಳು ಮರ
ಎಂದು
ಬಳಿದರು ಬಿಳಿ ಬಣ್ಣ...

---------

-೩-
ಮಾರ್ಜಾಲ ಹೆದ್ದಾರಿಯಲಿ
ಯಾರ ಭಯವಿಲ್ಲದೆ ಮಲಗಿತ್ತು
ಕಾರಣ
ನಾಲ್ಕು ಚಕ್ರದ ವಾಹನ
ಅವನನ್ನ ಗಾಢನಿದ್ರೆಗೆ ತಳ್ಳಿತ್ತು....
--------

-
-
ಕಡಲಿನಂತಾ
ಆಸೆಗಳು
ಸುನಾಮಿ ಅಲೆಗಳಿಗೆ
ಕಾರಣ
-------
-೫-

ಮೋಸಗೈದ ಹೆಜ್ಜೆಗಳು
ಕಡಲ ಅಬ್ಬರಕೆ ಮಾಸಿದೆ...
ಆದರೆ
ನೆನಪುಗಳು ಮಾತ್ರ ಹಾಗೆ ಉಳಿದಿದೆ...



ಚಿತ್ರ: ಅಂತರ್ಜಾಲ

Thursday, April 14, 2011

What an Idea Madamji..!!!

ಬೆಳ್ಳಿಗ್ಗೆ ಸುಮಾರು ೮ ಗಂಟೆ ಕಟ್ಟಡ ಕೆಲಸಗಾರಿಕೆ ನೆಡೆಯುವ ಸ್ಥಳ ವೀಕ್ಷೆಣೆಗೆ ಹೋಗಿದ್ದ ನಮ್ಮ ಮೇಲಧಿಕಾರಿ(ಬಾಸ್) ಕಾಲು ಎಳೆದುಕೊಂಡು ಬಂದು ನಿಂತರು. ನಾನು ಏನಾದರು ಏಟಾಗಿದೆಯ ಎಂದು ಆಶ್ಚರ್ಯದಿಂದ ನೋಡ್ತಾ ಇದ್ದೆ... ಅಷ್ಟರಲ್ಲಿ ನಮ್ಮ ಬಾಸ್ ನನಗೆ ಈಗ ಮೀಟಿಂಗ್ ಇದೆ.. (ಅದಕ್ಕೆ ನಾನೇನು ಮಾಡಲಿ!! ಎಂದುಕೊಂಡೆ ಮನಸಿನಲ್ಲಿ ಅವರ ಎದುರಲ್ಲ...) ಆದರೆ ನನ್ನ ಶೂ ಕಿತ್ತು ಹೋಯ್ತು, ಈಗ ಸಮಯ ಬೇರೆ ಇಲ್ಲ ಮನೆಗೆ ಹೋಗಿ ಬರಲು... ಜೊತೆಗೆ ಚಪ್ಪಲಿ ಒಲೆಯುವವರೂ ಸಹ ಇಲ್ಲ...(ಕುವೈತಿನಲ್ಲಿ ಹೊಸ ಚಪ್ಪಲಿ ಕೊಳ್ಳಲು ಬೇಜಾನ್ ಅಂಗಡಿಗಳು ಸಿಗುತ್ತವೆಯೋ ಹೊರತು ಚಪ್ಪಲಿ ಹೊಲೆಯುವವರು ಯಾರೂ ಸಿಗೋಲ್ಲ) ಏನು ಮಾಡೋದು ಗೊತ್ತಾಗುತ್ತಿಲ್ಲ..,, ಏನಾದರು ಐಡಿಯಾ!! ಇದೆಯಾ ಎಂದರು...

ಐಡಿಯಾ ಕೇಳಿದ್ದೆ ತಡ..!!! ಅಲ್ಲೇ ಪಕ್ಕದಲ್ಲಿದ್ದ ಹೆವಿ ಡ್ಯೂಟಿ ಸ್ಟೇಪಲ್ ತೆಗೆದುಕೊಟ್ಟೆ... ಏಕೆ ಏನಾಯ್ತು ಇದನ್ನ ಕೊಡ್ತಾ ಇದ್ದೀಯಾ ಅಂದರು... ಸರ್ ಇದನ್ನು ತಗೊಂಡು ಪಿನ್ ಮಾಡಿಕೊಳ್ಳಿ ಸದ್ಯಕ್ಕೆ ಆಮೇಲೆ ಬೇಕಾದರೆ ಹೊಸ ಶೂ ತೆಗೆದುಕೊಳ್ಳುವಿರಂತೆ ಎಂದೆ..!!!

ತಕ್ಷಣ ಅವಕ್ಕಾದ ಬಾಸ್..!! ನಗುತ್ತಾ ಎಂತಾ ಮಹಾನ್ ತಲೆ ನಿನ್ನದು ಇದು ಎಲ್ಲ ವರ್ಕ್ ಆಗೋಲ್ಲ ಎಂದರು... ಸುಮ್ಮನೆ ಒಮ್ಮೆ ಪ್ರಯತ್ನ ಪಟ್ಟುನೋಡಿ ಆಮೇಲೆ ಮಾತನಾಡಿ ಎಂದೆ... ಸರಿ ಎಂದು ಅವರ ರೂಮಿಗೆ ಸ್ಟೇಪ್ಲರ್ ತೆಗೆದುಕೊಂಡು ಹೋದವರು... ೫ ನಿಮಿಷದಲ್ಲೇ ಜಟ್-ಪಟ್ ಎಂದು ಹೆಜ್ಜೆ ಹಾಕುತ್ತ ಬಂದರು ಮುಖದಲ್ಲಿ ನಗು ಎದ್ದು ಕಾಣುತ್ತಿತ್ತು. ಏನಾಯಿತು ಎಂದು ನೋಡಿದರೆ ತಮ್ಮ ಬೂಟು ಕಾಲಿನ ದರ್ಪದಲ್ಲೇ ಹಾ!! ಈಗ ಶೂ ಸರಿ ಹೋಯ್ತು ಥ್ಯಾಂಕ್ಯು... ಆದರೆ ಈ ಸ್ಟೇಪ್ಲರ್ ಪಿನ್ ಎದ್ದು ಕಾಣುತ್ತಲ್ಲಾ ಅಂದರು...

ಅದಕ್ಕೂ ಐಡಿಯಾ ಇದೆ ಸರ್....

ಏನು

ಶೂ ಪಾಲಿಷ್ ಇದೆಯಲ್ಲ ಅದನ್ನ ಸ್ವಲ್ಪ ಹೆಚ್ಚು ಬಳಿದು ಪಾಲಿಷ್ ಮಾಡಿ... ಆಗ ಕಪ್ಪು ಬಣ್ಣಕ್ಕೆ ತಿರುಗುತ್ತೆ ಎಂದೆ..!!!

ಹೇಗೆ ಹೊಳಿತು ಈ ತರದ ಐಡಿಯಾಗಳು ಎಲ್ಲಾ? ಅಂದರು...

ಅಲ್ಲೇ ಇದ್ದ ಇನ್ನೊಬ್ಬ ಬಾಸ್ ತುಂಬಾ ಐಡಿಯಾ ಇದಾವೆ ಮೊನ್ನೆ ನನ್ನ ಕನ್ನಡಕ ಹೊಡೆದು ಹೋಗಿತ್ತು ಡ್ರೈವ್ ಮಾಡಿಕೊಂಡು ಹೋಗಲು ಕಷ್ಟವಾಗುತ್ತೆ ಏನು ಮಾಡೋದು ಎಂದಾಗ ನನಗೆ ಅಲ್ಲೆ ಇದ್ದ ಸೆಲ್ಲೋ ಟೇಪ್ನಿಂದ ಸರಿಮಾಡಿಕೊಟ್ಟರು ಆದರೆ ಮತ್ತೆ ಅದನ್ನ ರಿಪೇರಿ ಮಾಡಿಸಲು ಹೋಗೇ ಇಲ್ಲ... ಆ ಪುಟ್ಟ ಐಡಿಯದಿಂದ ಇನ್ನೂ ಗಟ್ಟಿಯಾಗಿದೆ ... ಏನು ತೊಂದರೆ ಇಲ್ಲ ........

ಹೌ!!! ಹೌದಾ ಹೇಗೆ ಬಂತು ಈ ತರಹದ ಐಡಿಯಾ ಎಂದರು... ನಮ್ಮ ಊರಲ್ಲಿ ಚಿಕ್ಕ ಮಕ್ಕಳಿಂದಿಡಿದು ಮುದುಕರವರೆಗೂ ಈ ರೀತಿ ಸಮಯಕ್ಕೆ ತಕ್ಕಂತೆ ಐಡಿಯಾ ಮಾಡ್ತನೇ ಇರ್ತಾರೆ ಸರ್ ಎಂದೆ......ಹೌ... ವೆರಿ ಗುಡ್ ಎಂದೇಳಿ ಅದು ಸರಿ!! ಈಗ ನೀ ಕೊಟ್ಟ ಪ್ಲಾನ್ ಹೇಗೆ ??? ಎಂದರು..

ಸರ್.. ನಿಮಗಾದ ಈ ತೊಂದರೆ ನನಗೂ ಆಗಿತ್ತು....ಆಗ ನನ್ನ ಚಪ್ಪಲಿಗೂ ಈ ಸ್ಟೇಪ್ಲರ್ ಪಿನ್ ತೋರಿಸಿದ್ದೆ !!! ಎಂದಿದ್ದೇ ಎಲ್ಲರು ಜೋರು ನಕ್ಕುಬಿಟ್ಟರು ಜೊತೆಗೆ ಥ್ಯಾಂಕ್ಸ್ ಕೂಡ ಸಿಕ್ಕಿತು.....

What an Idea Madamji..!!! ಎಂದರು...

Tuesday, April 12, 2011

ವಜ್ರಮಾಲೆ



ಎಳೆ ಮುಂಜಾವಿನ ಹಸಿರೆಲೆಯಲಿ
ವಜ್ರಗಳ ಪೋಣಿಸಿದ ಸರಮಾಲೆ
ಫಳ ಫಳನೆ ಹೊಳೆಯುತಿದೆ
ಇದು ಸೃಷ್ಟಿಯ ಕೆಲಸವೇ ಇರಬೇಕು...

ಬಂಗಾರದ ಬೆಲೆಯು ಶಿಖರಕ್ಕೆ ಏರಿಹುದು
ಇಂತಹದರಲೂ ಹೊಳೆವ ರತ್ನಗಳ
ಪೋಣಿಸಿ ಮೈತುಂಬ ಅಲಂಕರಿಸಿಹೆ
ನಿನ್ನ ಸಿರಿವಂತಿಕೆಗೆ ಸಾಟಿ ಯಾರೇ..??

ಬಂಗಾರದೆಲೆಗೆ ವಜ್ರಗಳ ಮಾಲೆ
ಮದುವೆ ಹೆಣ್ಣಿಗೆ ಮಗ್ಗಿನ ಜಡೆ
ಎಂಬಂತೆ ಹೊಸ ತನದಿ ಕಾಣುತಿಹಳು
ಈ ಬೆಳ್ಳಂ ಬೆಳಗಿನ ಇಬ್ಬನಿ

ಹನಿ ಹನಿಗಳು ಸೇರಿ ಸಾಲುಗಟ್ಟಿ
ಆ ಎಳೆದಿಂಡಿಗೆ ಭದ್ರಕೋಟೆ ಕಟ್ಟಿ
ಅತ್ತಿತ್ತ ಅಲುಗದೆ ಮಿಂಚುತಿರುವ
ಮುಂಜಾವಿನ ತುಷಾರ ಇವಳು...

ದಿಗ್ವಾಸ್ ತೆಗೆದಿರುವ ಫೋಟೋಗೆ ಪುಟ್ಟ ಸಾಲುಗಳು

Sunday, April 10, 2011

ಖರ್ಚು ಮಾಡಿದ್ದಕ್ಕಾದರೂ..!!!??


ಮೊನ್ನೆ ಕಚೇರಿಗೆ ತಡವಾಗಿತ್ತು. ರಕ್ತ ಪರೀಕ್ಷೆಗೆ ಹೋಗಿದ್ದೆ ಅದಕ್ಕೆ ತಡವಾಯ್ತು ಎಂದು ನನ್ನ ಮೇಲಧಿಕಾರಿಗಳಿಗೆ ಕಾರಣ ಹೇಳುತ್ತಿದ್ದಂತೆ... ಏನು ಈಗ ರಕ್ತ ಪರೀಕ್ಷೆ ಎಂದರು, ಸಕ್ಕರೆ ಖಾಯಿಲೆಯಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಹೋಗಿದ್ದೆ ಎಂದೇಳುತ್ತಲಿದ್ದಂತೆ ... ರಿಪೋರ್ಟ್ ಬಂತಾ..!!? ಹಾ ಬಂದಿದೆ ಏನು ಹಾಗಿದ್ದರೆ ಸಕ್ಕರೆಯೋ, ಉಪ್ಪೋ (sugar or salt) ಎಂದು ಗೇಲಿ ಮಾಡಿದ್ದಕ್ಕೆ ಎರಡೂ ಇಲ್ಲ ಸರ್... ಎಂದೇಳಿದೆ... ಡಾಕ್ಟರ್ ಹತ್ತಿರ ಗಲಾಟೆ ಮಾಡಿಲ್ಲ ತಾನೇ ಎಂದರು..!!?? ನಾನು ಏಕೆ ಗಲಾಟೆ ಮಾಡಲಿ ಸದ್ಯ ಯಾವ ರೋಗವಿಲ್ಲದೆ ಆರಾಮಾಗಿ ಇದ್ದೀನಲ್ಲ ಎಂದು ಖುಷಿ ಪಡಬೇಕು ಸದ್ಯಕ್ಕೆ ಅವರ ಮೇಲೆ ಏಕೆ ಗಲಾಟೆ ಮಾಡಬೇಕು ಎಂದುಕೊಳ್ಳುತ್ತಲಿದ್ದೆ....

ನಂತರ ನನ್ನ ಬಾಸ್ ಒಂದು ಪ್ರಸಂಗವನ್ನು ನನಗೆ ಹೇಳಿದರು ಪ್ರತಿಷ್ಠಿತ (ದುಬಾರಿ) ಆಸ್ಪತ್ರೆಗೆ ಒಬ್ಬ ತನ್ನ ಖಾಯಿಲೆ ಪರೀಕ್ಷೆ ಮಾಡಿಸಲು ಹೋಗಿದ್ದನಂತೆ, ಡಾಕ್ಟರ್... ನಿನಗೆ ರಕ್ತ ಪರೀಕ್ಷೆಗಳಲ್ಲಿ ಹಲವು ವಿಧಗಳಿವೆ ಅವೆಲ್ಲವನ್ನು ಒಮ್ಮೆ ಮಾಡಿಸಿ. ನಂತರ ಏನು ತೊಂದರೆ ಇದೆ ಎಂದು ತಿಳಿದು ಅದಕ್ಕೆ ತಕ್ಕಂತೆ ಔಷಧೋಪಚಾರ ಮಾಡೋಣ ಎಂದಿದ್ದಾರೆ. ಸರಿ ಎಂದು ಅಂದು ಲ್ಯಾಬ್ ನಲ್ಲಿ ರಕ್ತವನ್ನು ಕೊಟ್ಟು ಹೋಗಿದ್ದಾನೆ.

ಲ್ಯಾಬ್ ನವರು ಮರುದಿನ ಬರಲು ಹೇಳಿದ್ದರಿಂದ ಮಾರನೇ ದಿನ ಬಂದು ಕೌಂಟರ್ ನಲ್ಲಿ ತನ್ನ ಲ್ಯಾಬ್ ರಿಪೋರ್ಟ್ ತೆಗೆದುಕೊಂಡು ಅಲ್ಲೇ ಇದ್ದ ಒಬ್ಬರನ್ನು ವಿಚಾರಿಸಿ ಸರ್, ನನ್ನ ರಕ್ತ ಪರೀಕ್ಷೆ ಮಾಡಿದ್ದೀರಲ್ಲ ಏನಾದರು ತೊಂದರೆ ಇದೆಯೇ ನನಗೆ, ಯಾವುದಾದ್ರು ಖಾಯಿಲೆಗಳ ಸೂಚನೆ ಇದೆಯೆ ಎಂದು ಕೇಳಿದ್ದಾನೆ....

ರಿಪೋರ್ಟ್ ನೋಡುತ್ತ ಲ್ಯಾಬ್ನವರು ಸರ್ ನಿಮಗೆ ಯಾವುದೇ ತೊಂದರೆ ಇಲ್ಲ... ಎಲ್ಲಾ ನಾರ್ಮಲ್ ಆಗಿದೆ ಹೋಗಿ ಡಾಕ್ಟರಿಗೆ ಒಮ್ಮೆ ತೋರಿಸಿ ಎಂದೇಳುತ್ತಿದ್ದಂತೆ... ರಪ್ಪನೆ ರಿಪೋರ್ಟ್ ನೋಡುತ್ತಿದ್ದವನ ಕೈಯಿಂದ ಪೇಪರ್ ಗಳನ್ನೆಲ್ಲ ಕಿತ್ತುಕೊಂಡು ರಪರಪ ಎಂದು ಅತಿ ವೇಗವಾಗಿ ಓಡುತ್ತಲಿದ್ದವನನ್ನು ಕಂಡ ಲ್ಯಾಬ್ ನವರು ಓಹೋ ಬಹಳ ಖುಷಿಯಾಗಿರಬೇಕು ಎಂದು ಮಾತನಾಡಿಕೊಳ್ಳುತ್ತಲಿದ್ದರಂತೆ.... ಆದರೆ ಕೋಪದಲ್ಲಿ ಹೋಗುತ್ತಲಿದ್ದವನ ಮುಖಭಾವ ಅವರ್ಯಾರಿಗೂ ಕಂಡಿರಲಿಲ್ಲ.

ಕೋಪದಲ್ಲಿ ಹೋಗುತ್ತಲಿದ್ದವ ೫ನೇ ಮಹಡಿಯಲ್ಲಿದ್ದ ಡಾಕ್ಟರ್ ನ್ನು ನೋಡಲು ಲಿಫ್ಟ್ ಬಳಸದೆ ಮೆಟ್ಟಲುಗಳನ್ನೇ ಹತ್ತಿ ಹೋದ...... ಅಲ್ಲಿ ಡಾಕ್ಟರ್ ತಮ್ಮ ರೂಮಿನಲ್ಲಿ ರೋಗಿಗಳ ಪರೀಕ್ಷೆ ನೆಡೆಸುತ್ತಲಿದ್ದರು, ಆದರು ಈತ ರಭಸದಿ ಒಳಹೊಕ್ಕು ..... ಡಾಕ್ಟರ್...!!(ಚೀರುತ್ತಾ) ನಿಮಗೆ ಗೊತ್ತ "ನಾನು ರಕ್ತ ಪರೀಕ್ಷೆಗೆ ೧೦೦ ಕೆ.ಡಿ (ಸುಮಾರು ೧೫,೦೦೦ ರೂ) ಖರ್ಚು ಮಾಡಿದ್ದೀನಿ ಆದರೆ ನನಗೆ ಏನೂ ಖಾಯಿಲೆಯೇ ಇಲ್ಲ..!!!"

ಡಾಕ್ಟರ್ ಅವನನ್ನೇ ನೋಡುತ್ತಾ... ಅವಕ್ಕಾದರು ಅಯ್ಯೊ ಕರ್ಮವೇ ಇದಕ್ಕೆ ಖುಷಿ ಪಡಪ್ಪಾ... ನಿನಗೆ ಏನು ಖಾಯಿಲೆ ಇಲ್ಲವಲ್ಲ ಸದ್ಯ, ಆರೋಗ್ಯವಾಗಿದ್ದೀಯಾ..!!!

ಅದು ಹೇಗೆ ನಾನು ಇಷ್ಟೆಲ್ಲಾ ಖರ್ಚುಮಾಡಿದ್ದೀನಿ...!!???? ಎಂದು ಜೋರು ಗಿರುಚುತ್ತಲಿದ್ದನಂತೆ...

ಪಾಪ ಡಾಕ್ಟರ್ ತಲೆಕೆಡೆಸಿಕೊಂಡಿರ ಬೇಕು...

ಕಾಸು ಕೊಟ್ಟರೆ ಖಾಯಿಲೆ ಇರಲೇಬೇಕು ಎಂದುಕೊಂಡಿರಬೇಕು ಈತ ಹಹಹ...!!!

Sunday, April 3, 2011

ಖರ ಸಂವತ್ಸರ


ಚೈತ್ರ ಕಾಲದ ಹಸಿರು ಚಿಗುರಿ
ಸುಗಂಧ ಹೂಗಳು ಸುವಾಸನೆ ಪಸರಿಸಿ
ಝೇಂಕಾರದಲಿ ದುಂಬಿಗಳು ನಲಿದಾಡಿ
ಹಕ್ಕಿ-ಪಿಕ್ಕಿಗಳು ಚಿಲಿಪಿಲಿಯ ನಾದದಲಿವೆ
ಇದ ಕಂಡು ಮನುಜ ಮನಸು ಅಹ್ಲಾದಿಸಿ
ಹೊಸ ವರುಷವ ಹರುಷದಿ ಆಹ್ವಾನಿಸೋಣ...

ಭೂರಮಿಯು ರಂಗು ರಂಗಿನ ಹೊಸತನದಿ
ಹಸಿರ ಚೈತ್ರ ಶುದ್ಧ ಪಾಡ್ಯಮದಿ
ವಿಕೃತಿ ಸಂವತ್ಸರ ಯುಗವ ದಾಟಿಸಿ
ಖರ ಸಂವತ್ಸರದಿ ನವ ಯುಗವ ಸೃಷ್ಟಿಸಿಹನು
ಬನ್ನಿ ಸ್ವೀಕರಿಸುವ ಹೊಸತನದ ಹರುಷವನು....

ಪ್ರತಿಪದೆ ಎಂದೇ ಹೆಸರಿಸುವ ನವ ಯುಗಕೆ
ಅಭ್ಯಂಜನ ಸ್ನಾನದಿ ಹೊಸ ಉಡುಗೆ ತೊಟ್ಟು
ಸೂರ್ಯದೇವಗೆ ನಮಿಸಿ ಕಷ್ಟ-ಸುಖಗಳ ಸಮಾನತೆಗೆ
ಬೇವು ಬೆಲ್ಲವ ಎಲ್ಲರಿಗೂ ಹಂಚಿ ಯುಗಾದಿಯ ಸ್ವಾಗತಿಸಿ
ಸಿಹಿ ಅಡುಗೆಯಲಿ ಮನೆಮಂದಿಯೆಲ್ಲ ನಲಿಯುವ ಬನ್ನಿ......

ಭೂರಮಿಯು ರಂಗು ರಂಗಿನ ಹೊಸತನದಿ
---------

ಬೇವಿನ ಕಹಿ ಬೆಲ್ಲದ ಸಿಹಿ
ಎರಡೂ ಜೀವನದ ಜೋಡಿ
ಕೈ ಹಿಡಿದು ನೆಡೆದರೆ
ಎಲ್ಲ ವಿಸ್ಮಯಗಳ ಮೋಡಿ.........

ಸಿಹಿ-ಕಹಿ ಮಿಶ್ರಣದ ಜೀವನ
ಕಂಡವನೇ ಧನ್ಯ
ಯಾವುದು ಒಂದೇ ಒಂದಿದ್ದರೂ
ಜೀವನದ ಅರಿವಾಗದು ತಕ್ಷಣ....

ಬೆಲ್ಲಕೆ ಕಬ್ಬು ಬೇವಿನೆಲೆಗೆ ವೃಕ್ಷ
ಕಷ್ಟಕೆ ನಷ್ಟ ಸುಖಕೆ ಆದಾಯ
ಎಲ್ಲದಕು ಕಾರಣವಾದ ಮೂಲ
ಹುಡುಕಿದರೂ ಸಿಗದು ಅದರ ಜಾಲ

ಬದುಕ ಬವಣೆ ಸುಖದ ಸ್ವಪ್ನ
ಎರಡು ಜೋಡಿ ಹೆತ್ತಿನ ಪಯಣ
ಇರುವುದನೇ ತಿಳಿಸಿ ಹೇಳುವುದು
ಈ ಯುಗಾದಿ ಹಬ್ಬದ ವಿಶೇಷ ದಿನ

ವಿಕೃತದ ಮನೆ ಮನಸು ದೂರವಿಸಿ
ಸಮಶೃತಿಯ ನೈವೇದ್ಯ ಭರಿಸಿ
ಎಲ್ಲ ಕಷ್ಟ-ಸುಖಗಳ ಸಮಧೂಗಿಸಿ
ಸ್ವೀಕರಿಸುವ ಬನ್ನಿ ಖರ ಸಂವತ್ಸರವ...


ಯುಗಾದಿ ಹಬ್ಬದ ಶುಭಾಶಯಗಳು