Sunday, January 31, 2010

ಕುಸುಮ ಕೋಮಲೆ - ೧


ಬೆಂಗಳೂರಿನ ಒಂದು ಪುಟ್ಟ ಕುಟುಂಬ ಇವರು ಉತ್ತರ ಭಾರತದ ಮೂಲೆಯಿಂದ ಬಂದು ನೆಲೆಸಿ ಬೆಂಗಳೂರಿನವರೇ ಆಗಿಬಿಡುತ್ತಾರೆ. ತಂದೆ ತಾಯಿ ಇಬ್ಬರು ಮಕ್ಕಳು ಪುಟ್ಟ ಸಂಸಾರ. ಸುಂದರ ಸಂಸಾರವೂ ಹೌದು... ಬೆಂಗಳೂರಿಗೆ ಬಂದ ಕೂಡಲೆ ಇಲ್ಲಿ ಅಕ್ಕಪಕ್ಕದವರಿದ್ದವರೆಲ್ಲ ಹಿಂದೂ ಧರ್ಮದವರೇ ಆದ್ದರಿಂದ ಅವರುಗಳು ಅವರಂತೆ ಹಬ್ಬ ಹರಿದಿನ ಆಚರಿಸುವುದರ ಜೊತೆಗೆ, ತಮ್ಮ ಕ್ರೈಸ್ತಧರ್ಮದ ಹೆಸರನ್ನು ಹಿಂದೂ ಧರ್ಮಕ್ಕೆ ತಕ್ಕಂತೆ ಬದಲಿಸಿಕೊಂಡು ಬಿಡುತ್ತಾರೆ. ಅಂದರೆ ಆ ಕುಟುಂಬ ಅಷ್ಟರ ಮಟ್ಟಿಗೆ ಮಾರು ಹೋಗಿರುತ್ತಾರೆ. ಸುತ್ತಮುತ್ತಲ ಜನರ ಪೂಜೆ ಪುನಸ್ಕಾರ ಹಾಗು ಅವರ ಸಂಸಾರದ ಶಾಂತಿ ಎಲ್ಲವೂ ಪೂರಕವಾಗಿತ್ತು ಇವರ ಹೆಸರು ಬದಲಾವಣೆಗೆ.

ತಂದೆ ಮಹದೇವ್, ತಾಯಿ ಮಮತ, ಗಂಡುಮಗ ರಾಜೀವ್, ಮಗಳು ಕ್ಷಮ. ಮಹದೇವ್ ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಲಿರುತ್ತಾರೆ. ಅವರಿಗೆ ಹುದ್ದೆಯಲ್ಲಿ ಉನ್ನತ ಸ್ಥಾನ ಹಾಗು ತಮ್ಮ ಕೈಕೆಳಗೆ ಕೆಲಸ ಮಾಡುವವರಲ್ಲಿ ಒಳ್ಳೆಯ ಭಾಂದವ್ಯವು ಸಹ ಏನೇ ಕೆಲಸ ಕಾರ್ಯಗಳು ನೆಡೆಯುವಾಗ ಮಹದೇವರ ಹಸ್ತ ಯಾವಾಗಲೂ ಮೀಸಲು. ಮಮತ ಕೂಡ ಅತ್ಯುತ್ತಮ ಗೃಹಿಣಿ ಈಕೆ ತನ್ನ ಗಂಡನ ಪ್ರತಿ ಹೆಜ್ಜೆಗೂ ಮತ್ತೊಂದು ಹೆಜ್ಜೆಯನ್ನಿಟ್ಟು ಅವರಿಗೆ ಸಾತ್ ನೀಡುವಂತಹ ಗುಣ. ಗಂಡನ ಕೆಲಸಗಾರರಿಗೆ ಪ್ರತಿ ವಾರಕೊಮ್ಮೆ ಊಟ ಉಪಚಾರ, ತೀರ ಬಡವರಾದ ಮಕ್ಕಳಿಗೆ ವಿದ್ಯಾಭ್ಯಾಸ ಎಲ್ಲವನ್ನು ಮಾಡುತ್ತಲಿದ್ದರು.

ಇಂತಹ ಪರೋಪಕಾರಿ ಕುಟುಂಬಕ್ಕೆ ಮುತ್ತಿನಂತ ಮಕ್ಕಳು ಮಹದೇವ್ ಅವರ ಮಗ ರಾಜೀವ್ ಇವನು ಸಹ ಅವರಿಗೆ ಹೇಳಿ ಮಾಡಿಸಿದಂತಾ ಮಗ, ಅವನಿನ್ನು ಹತ್ತನೇ ತರಗತಿ ಮುಗಿಸಿ ೧೧ ನೆ ತರಗತಿಯಲ್ಲಿ ಓದುತ್ತಲಿದ್ದಾನೆ, ತನ್ನ ವಿದ್ಯೆಯಲ್ಲೇನು ಕಡಿಮೆ ಇರದೆ ಅತಿ ಉತ್ಸಾಹದಿಂದ ಸಾಗುತ್ತಲಿದ್ದಾನೆ. ಇನ್ನು ಕ್ಷಮ ಬಹಳ ಚುರುಕು, ರೂಪವಂತೆ ಗುಣವಂತೆ ೮ನೇ ತರಗತಿಯಲ್ಲಿ ಓದುತ್ತಲಿದ್ದಾಳೆ ಕನ್ನಡ ಮೀಡಿಯಮ್ ನಲ್ಲೇ ವಿದ್ಯಾಭ್ಯಾಸ ಸಾಗುತ್ತಲಿದೆ, ಇವಳು ಶಾಲೆಗೆ ಮೊದಲು ಯಾರು ಇವಳನ್ನು ಸೋಲಿಸಲಾಗದು ಅಷ್ಟು ಬುದ್ಧಿವಂತೆ ವಿದ್ಯೆಯಲ್ಲಿ ಗುರುಗಳಿಗೆ ಅಷ್ಟೇ ಪ್ರಿಯಳು.

ಈ ಇಬ್ಬರು ಮಕ್ಕಳೊಟ್ಟಿಗೆ ಮಹದೇವ್ ಅವರ ಅಣ್ಣನ ಮಗಳನ್ನು ಸಹ ಸಾಕಿಕೊಂಡಿರುತ್ತಾರೆ ದೀಕ್ಷ ಪ್ರೀತಿ ಪಾತ್ರಳು ಮನೆಮಂದಿಗೆಲ್ಲ ಅವಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕೆಗೆ ಕಳಿಸುತ್ತಾರೆ ಅಂತೆಯೇ ಅವಳು, ಅವಳದೇ ಕ್ಷೇತ್ರವಾದ ಎಲೆಕ್ಟ್ರಾನಿಕ್ಸ್ ನಲ್ಲಿ ಮಾಸ್ಟರ್ಸ್ ಪಡೆದು ಬರುತ್ತಾಳೆ ತಂದೆಯ ಕಂಪನಿಯಲ್ಲಿಯೇ ಒಳ್ಳೆ ಕೆಲಸವನ್ನು ಗಿಟ್ಟಿಸುತ್ತಾಳೆ. ಇಂಜಿನಿಯರ್ ಆದ ಅವಳು ಕಂಪನಿಯ ಏಳಿಗೆಗೆ ತಂದೆಯೊಂದಿಗೆ ಕೈಜೋಡಿಸುತ್ತಾಳೆ.

ತಂದೆ ಮಗಳು ಕಚೇರಿಯಲ್ಲಿ ಒಳ್ಳೆ ಹೆಸರು ಮಾಡುತ್ತಾರೆ. ಕೆಲಸದ ಹೆಸರಲ್ಲಿ ಸಾಕು ಮಗಳ ಮದುವೆ ಮಾಡುವ ಹೊಣೆ ಮರೆಯಲಿಲ್ಲ, ಮಹದೇವ್ ಆ ಮುದ್ದು ಮೊಗಕೆ ಬೆಂಗಳೂರು ಬಿಟ್ಟು ದೂರದ ಊರಲ್ಲಿ ಗಂಡು ಹುಡುಕಿ ಮದುವೆಯನ್ನು ಅದ್ಧೂರಿಯಿಂದ ಮಾಡುತ್ತಾರೆ. ಇತ್ತ ಅತ್ತೆ ಮನೆ ಸೇರಿದ ದೀಕ್ಷ ತನ್ನದೇ ಜವಾಬ್ದಾರಿಯಲ್ಲಿ ಮುಳುಗುತ್ತಾಳೆ.


ಮುಂದುವರಿಯುವುದು.....
ಚಿತ್ರ (ಅಂತರ್ಜಾಲ)



Friday, January 15, 2010

ಬಾನಂಗಳ-ಕಂಕಣ


ಮಕರ ಸಂಕ್ರಮಣ ಮುಗಿಸಿ ತದನಂತರದಿ
ಬಂದಿದೆ ರವಿ-ಚಂದ್ರರ ಸಮಾಗಮ
ರವಿ-ಭುವಿಯ ನಡುವೆ ಶಶಿಯು ಹಾದು
ಮೂಡಿಸುವನು ಸೂರ್ಯಗ್ರಹಣ!!!!

ಸೂರ್ಯಗ್ರಹಣವು ಅಮಾವಾಸ್ಯೆಯಂದು
ಚಂದ್ರಗ್ರಹಣವು ಹುಣ್ಣಿಮೆಯಂದು
ನಿಗದಿತ ಸಮಯಕ್ಕೆ ಸರಿಯಾಗಿ
ಗೋಚರಿಸುವವು ನಿರ್ದಿಷ್ಟ ಸ್ಥಳಗಳಲ್ಲಿ
ಇದು ನಿಸರ್ಗ ಸೃಷ್ಟಿಸುವ ಪ್ರಕ್ರಿಯೆಯೇ ಗ್ರಹಣ !!!

ದಕ್ಷಿಣಆಫ್ರಿಕದಿ ಪ್ರಾರಂಭಿಸಿ
ಹಿಂದೂಮಹಸಾಗರ ದಾಟಿ
ಹಲವಾರು ವರುಷಗಳ ನಂತರದಿ
ದಕ್ಷಿಣ ಭಾರತದ ಆಗಸದಿ ಚಿತ್ತಾರ ಬಿಡಿಸಿ
ರವಿಚಂದ್ರರು ತಣಿಸುವರು ಕಣ್-ಮನ!!!!

ಚಂದಿರನ ಗಾತ್ರವು ನೆಸರನಿಗಿಂತ ಕಿರಿದು
ಗ್ರಹಣದಂದು ರವಿಯ ಮೇಲೆ ಶಶಿಯ ನೆರಳು
ಚಿತ್ರಿಸುವುದು ಬಳೆಯಾಕಾರದ ರಂಗೋಲಿ
ನೋಡಲಾನಂದ ಸುತ್ತಲೂ ಕೆಂಬಣ್ಣದ ಕಂಕಣ!!!

Monday, January 4, 2010

ಹೊಸ ಪ್ರಯತ್ನ-೨


ಹಮ್ಮು-ಬಿಮ್ಮು

ಕೇಕ್ ಕತ್ತರಿಸಿ ಹುಟ್ಟುಹಬ್ಬ
ಆಚರಣೆ ಬೇಡವೆನಿಸಿತು
ಕಾರಣ
ಅದು ನಮ್ಮ ಸಂಪ್ರದಾಯವಲ್ಲ
ಆದರೂ
ಕೇಕ್ ತಂದು ಕತ್ತರಿಸಿಬಿಟ್ಟೆವು
ಕಾರಣ
ಬೇರೆಯವರು ಆಚರಿಸುತ್ತಾರಲ್ಲ
ನಾನೇನು ಅವರಿಗಿಂತ ಕಮ್ಮಿಯಿಲ್ಲ
ಎಂಬ ಹಮ್ಮು-ಬಿಮ್ಮಿನ ವರಸೆ ತೋರಿಸಿಬಿಡಬೇಕಲ್ಲ.

______ ______

ಮಗು

ಮುದ್ದಾದ ಮಗು
ಬಲು ಚೆಂದ ಅದರ ನಗು
ಮಾತನಾಡಿಸಿಬಿಟ್ಟೆ...
ನಾಲಿಗೆ ತೋರಿತು
ಏನೆಂಬ ಆಶ್ಚರ್ಯ ಮೂಡಿತು
ತಾಯ ನೋಡಿದರೆ
ಅವಳ ಕಣ್ಣಲಿ
ಕಂಬನಿ ತುಂಬಿತ್ತು....
ಕಾರಣ
ಅದು ಮಾತು ಬಾರದ ಮೂಕ ಮಗು....