Wednesday, July 16, 2014

ನಿಶ್ಯಬ್ದ


ಚಿತ್ರ @ ಅಂತರ್ಜಾಲ


ಮೋಟಾರುಗಳ ಸದ್ದಿಲ್ಲ, ತಣ್ಣನೆ ಮಲಗಿರುವ ನಗರ
ದಿನಪತ್ರಿಕೆ, ಹಾಲು, ಹೂ ಮಾರುವವರ ಧ್ವನಿಯಿಲ್ಲ
ಮನೆಗಳ ಮುಂದೆ ರಂಗೋಲಿ ಇರಲಿ, ಬೀದಿ ನಾಯಿಗಳ ಓಡಾಟವಿಲ್ಲ
ಸಾಲು ಸಾಲು ಮರಗಳು ತಮ್ಮ್ ತಮ್ಮ ನೆರಳ ಮೇಳದಲಿವೆ

ಬಾಯ್ತೆರೆದು ನಿಂತಿರುವ ಆಗಸದಲಿ ಪ್ರಶಾಂತ ಮೋಡಗಳು
ಆಗಸನ ಪ್ರತಿಬಿಂಬ, ಕನ್ನಡಿಯಲಿ ಮುಖ ತೋರುವಂತಾ ಕೊಳ
ಹಸಿರ ಹಾಸಿಗೆಯಲ್ಲಿ ಇಬ್ಬನಿಗಳ ಹನಿ ಮಿಣುಕು ಬೆಳಕಂತೆ
ಯಾರ ಕಾಲ್ತುಳಿತಕೂ ಸಿಗದೆ ಬೀರುತಿವೆ ಮಂದಹಾಸ...!!

ತುಂಬು ರಸ್ತೆಯಲಿ ಶಬ್ದವಿಲ್ಲದ  ಏಕಾಂತ
ಸ್ವರ್ಗ ಸೃಷ್ಟಿಸಿದೆ ಆ ಸಾಲು ಮರಗಳಿಗೆ
ತೊಟ್ಟು ಕಳಚಿ ಬಿದ್ದ ಬಿನ್ನಾಣದ ತರಗೆಲೆಗಳು 
ಮಾತ್ರ ಸಂತೃಪ್ತಿಯಲಿ ಸರಿದಾಡುವುದೇ  ಸದ್ದು!!

Tuesday, July 8, 2014

ಜೀವ-ಭಾವ

ಜೀವ-ಭಾವ

ನಾವೇ ಬೆಳೆಸಿದ ಬಂಧನಗಳಲಿ
ಕೂಡು ಕುಟುಂಬದ ಒಕ್ಕಲಲಿ
ಸಂಬಂಧಗಳ ಹೊನಲಿನಲಿ
ನಾವಿರುವುದು ಹರಿವ ತೊರೆಗಳಲಿ 

ಬಿರುಕು ಮನೆಗಳ ಹೊಡೆತ
ಒಂಟಿ ನೆಲೆಗಳ ಸೆಳೆತ
ಒಡಕು ಮನಗಳ ಮಿಡಿತ
ದೂರ ನೆಲೆಸುವ ತುಡಿತ 

ಸಂಸ್ಕೃತಿ-ಜನರ ನಡುವೆ
ಬದಲಾವಣೆಯ ಕೊಳವೆ
ಹಿಂದಿನದು ಇಂದಿಗೆ ದಾವೆ
ಮರುಕಳಿಸುವುದು ಅಸಾಧ್ಯವೆ

ಬಂಧುತ್ವ ಬೆಸುಗೆಗಳ ಭಾವ
ನಶ್ವರತೆಯಲಿ  ಹಾವಭಾವ
ಜನಪದದ ಹಿರಿಮೆಯ ಜೀವ
ಪ್ರಸ್ತುತ ನಲುಗುತಿದೆ ಅನುಭಾವ

ಪೂರ್ಣ ಸೊಗಡಿನ ತೆನೆಗಳು
ಅರಳದೆ ಮೊಗಚಿದೆ ದಿನಗಳು
ಸಾಂಪ್ರದಾಯದ ಚಿಲುಮೆಗಳು
ಈಗ ನೇತಾಡುವ ಬಾವುಲಿಗಳು