Saturday, June 18, 2016

ಅಪ್ಪನೆಂದರೆ

ಅಪ್ಪನೆಂದರೆ 
ಬದುಕು ಬವಣೆ ಎರಡು
ಕತ್ತಲೆ ಬೆಳಕಲೆರಡರಲ್ಲೂ 
ಕೈ ಹಿಡಿವ ನೆರಳು 

ಅಪ್ಪನೆಂದರೆ
ಸಾಗರದ ಸಾರದಲ್ಲಿ 
ಅರ್ಜುನನಂತಾ ಅಮ್ಮನಿಗೆ 
ಕೃಷ್ಣನಂತಾ ಸಾರಥಿ 

ಅಪ್ಪನೆಂದರೆ
ತಿಳಿ ನೀರಿನ ಮೌನ
ಅರಿತಷ್ಟು ಆಳ
ಬೆರೆತಷ್ಟು ವಿಶಾಲ 

ಅಪ್ಪನೆಂದರೆ 
ಆಗಸದ ಚಿತ್ತಾರ 
ಕಣ್ಣರಳಿಸಿದರೆ ಕಾಂತಿ
ಮನತೆರೆದರೆ ಮಿಂಚು 

Tuesday, June 14, 2016

ಮಣ್ಣಿನ ಹಾದಿ - 01

ಬಿಸಿ ನೀರು ಕೊತ ಕೊತ ಕುದಿಯುತ್ತಿದೆ. ಅಪ್ಪ ಸ್ನಾನ ಮಾಡುವುದು ಬಿಟ್ಟು ಬೈಗುಳ ಶುರು ಹಚ್ಚಿ ಕೊಂಡಿದ್ದಾನೆ.

ಡಾಕ್ಟರರ ಮಕ್ಕಳು ಡಾಕ್ಟರ್ ಆಗುತ್ತಾರೆ, ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗುತ್ತಾರೆ, ಹಾಗೆ ನಾನು ಒಬ್ಬ ರೈತ ನನ್ನ ಮಗನೂ ರೈತನಾಗಲಿ ಎಂದು ಬಯಸುವುದು ತಪ್ಪಾ?  ಇವಳಿದ್ದಾಳಲ್ಲ ನನ್ನ ಹೆಂಡತಿ ಅನ್ನಿಸಿಕೊಂಡವಳು, ಯಾವುದೊ ಒಂದು ಚೂರು ಬೆಂಗಳೂರಿನ ಮೂಲೆ ನೋಡಿಕೊಂಡು ಬಂದು ಬಿಟ್ಟಿದ್ದಾಳೆ. ತನ್ನ ಕುಲಪುತ್ರನನ್ನು  ಆಫೀಸರ್ ಮಾಡೋಕೆ ಹೊರಟಿದ್ದಾಳೆ. ನಾನು ಬಿಡ್ತೀನಾ, ನಾ ಹೇಳಿದಂತೆ ಅವನು ಬೆಳೆಯಬೇಕು. ನನ್ನ ಮಗ ಅಂದ್ರೆ ನನಗೂ ಹಕ್ಕಿದೆ. ಏನೋ ಕೇಳಿಸ್ತೇನೋ ಶಂಕ್ರ, ನಾ ಹೇಳೋದು ಕಿವಿಗೆ ಹಾಕ್ಕೊ ಗೊತ್ತಾಯ್ತಾ ಎಂದು ಅರಚುತ್ತಾ, ಕುದಿವ ನೀರನ್ನೆ ಮೈಮೇಲೆ ಸುರಿದುಕೊಂಡು ಲಬೊಲಬೊ ಎಂದು ಕಿರುಚುತ್ತಿದ್ದ ಅಪ್ಪನ ಸದ್ದಿಗೆ ಎಲ್ಲರೂ ದೌಡಾಯಿಸಿದರು.

ಮೈಮೇಲೆ ಕೆಂಪು ಕೆಂಪಾದ ಗುಳ್ಳೆಗಳು ಎದ್ದಿವೆ ಬೈಯ್ಸಿಕೊಂಡವರೆಲ್ಲಾ ಮುಲಾಮು ಹಚ್ಚುತ್ತಿದ್ದಾರೆ. ಅಪ್ಪನ ಗೊಣಗಾಟ ಮುಗಿಯಲೇ ಇಲ್ಲ. ನೀವೆಲ್ಲ ನನ್ನ ಮಾತು ಕೇಳಿದ್ರೆ ಹಿಂಗೆ ಆಗ್ತಾ ಇರಲಿಲ್ಲ, ಇಲ್ಲೂ ಅವರುಗಳ ಮೇಲೆ ಗೂಬೆ ಕೂರಿಸಿ ಬಿಟ್ಟ.

ಶಂಕ್ರ ಬೆಳಗ್ಗೆ ಕಾಲೇಜಿಗೆ ಹೊರಟು ನಿಂತ. ಅಪ್ಪನದು ಅದೇ ಸುಪ್ರಭಾತ, ನೀನು ಪಿಯುಸಿ ಓದಿದ್ದು ಸಾಕು, ನನ್ನ ಕೈಲಿ ಆಗೋದಿಲ್ಲ ಭೂಮಿ ಕ್ಯಾಮೆ ಒಬ್ಬನೇ ಮಾಡೋಕೆ, ನೀನು ನನ್ನ ಜೊತೆಗೂಡಿದರೆ ಚಿನ್ನ ಬೆಳೀಬಹುದು ನಮ್ಮ ಭೂಮಿಲಿ... ನಮ್ಮ ಜಮೀನಿನ ಮಣ್ಣು ಬಂಗಾರ ಇದ್ದಂತೆ, ಏನ್ ಹಾಕಿದ್ರು ಬೆಳೆಯುತ್ತೆ. ಒಳ್ಳೆ ಫಸಲು ಕೊಡುತ್ತೆ. ಕೇಳಿಸ್ತೇನೋ ಶಂಕ್ರ

ಅಯ್ಯೋ ಅಪ್ಪನದು ಯಾವಾಗಲೂ ಇದಿದ್ದೇ, ಆಯ್ತು ಅಪ್ಪಾ ಆಗ್ಲಿ ನೀನು ಹೇಳಿದಂತೆ ಮಾಡ್ತೀನಿ ಎಂದು ಹೇಳಿ ಬೀಸೊ ದೊಣ್ಣೆ ತಪ್ಪಿಸಿಕೊಂಡ.

ಇತ್ತ ಮಗ ಒಪ್ಪಿಗೆ ಕೊಟ್ಟನಲ್ಲ ಎಂಬ ಖುಷಿಯಲ್ಲಿ ಹೆಂಡತಿಯನ್ನು ಛೇಡಿಸುತ್ತಿದ್ದ. ನೋಡಿದ್ಯೇನೆ ನನ್ನ ಮಗನ್ನ ನನ್ನ ಮಾತೇ ಕೇಳೋದು ಅವನು, ನೀನೇನು ಲಾಯರ್ರೋ, ಇಂಜಿನಿಯರ್ರೊ ಓದು ಅಂತಿದ್ದಲ್ಲಾ ಅದೆಲ್ಲಾ ಕನಸು ನಿನಗೆ, ಅವೆಲ್ಲಾ ಬಯಕೆ ಇಟ್ಕಂಬೇಡ ಸರಿ ಏನು? ತತ್ತಾ ಹೊಲದ ತಕ್ಕೆ ಹೋಗಿ ಬರ್ತೀನಿ ಏನಾರಾ ಬೇಯಿಸಿದ್ದೀಯೋ ಇಲ್ವೋ.. ತಾಂಬಾ ಬೇಗ... ಎಂದು ಮೂದಲಿಸುತ್ತಿದ್ದಾನೆ.

ಸೆರಗಿನಲ್ಲಿ ಕಣ್ಣು ಒರೆಸಿಕೊಂಡು ಕ್ವಾಡೊಲೆ ಮೇಲಿದ್ದ ಚಿತ್ರಾನ್ನವನ್ನು ಗಂಡನಿಗೆ ತಟ್ಟೆಯಲ್ಲಿ ತಂದಿಟ್ಟು, ನೀವು ಇಷ್ಟೆಲ್ಲಾ ಕ್ವಾಪ ಮಾಡ್ಕ ಬೇಡಿ. ನನಗೂ ಮಗ ಚೆನ್ನಾಗಿರಲಿ, ನಮ್ಮ ಮನೆ ಬೆಳಗಲಿ ಅಂತಾನೇ ಹೇಳಿದ್ದು. ನಿಮಗೆ ಅದೇನು ಇಷ್ಟನೋ ಅದೇ ಮಾಡ್ಸಿ. ಕೆಲಸವಿಲ್ಲದಂತೆ ಕಿರುಚೋದು, ಮೈಕೈ ಬಾಸುಂಡೆ ಬರುಸ್ಕೊಳ್ಳೋದು ಇವೆಲ್ಲಾ ಯಾಕೆ. ಕೋಪಕ್ಕೆ ಮಾತು ಕೊಟ್ರೆ ಆಗೋದೇ ಹೀಗೆ. ವಸಿ ಯೋಚಿಸಿ ತೀರ್ಮಾನ ಮಾಡಿ. ಊರಾಗಿನ ಗೌಡ್ರ ಮನೆಗೆ ಹೋಗಿ ವಿಚಾರ ಮಾಡಿ ಅವರು ದೊಡ್ಡೋರು ಏನಾದ್ರು ತಿಳಿದಿದ್ದು ಹೇಳ್ತಾರೆ

ನೀನು ನನಗೆ ಬುದ್ದಿ ಹೇಳಬೇಡ. ನಿನ್ನ ಕೆಲಸ ಏನದೊ ನೋಡ್ಕೊ ಹೋಗು. ಏನೋ ೭ನೇ ಕ್ಲಾಸ್ ಓದಿದ್ದೀಯಾ, ಪತ್ರಿಕೆ, ಟಿವಿನಾಗೆ ಬರೋ ಅಕ್ಷರ ಓದಕ್ಕೆ ಬತ್ತದೆ ಅಂತಾ ನನ್ನೂ ನೀನು ಓದೋಕೆ ಹೋಗ ಬೇಡ ಅರ್ಥ ಆಯ್ತಾ.... ಸುಮ್ಕೆ ಮರ್ವಾದೆ ಆಗಿ ಇದ್ದುಬಿಡು. ಎಂದು ಹೆಗಲ ಮೇಲಿದ್ದ ವಸ್ತ್ರ ಒದರಿಕೊಂಡು ದಾಪುಗಾಲು ಹಾಕುತ್ತ ಹೊರಗೆ ನಡೆದ.

ಇನ್ನು ಮುಂಗೋಪಿನ ಒಲಿಸೋದು ಕಷ್ಟವೇ ಸರಿ, ಗೌಡ್ರ ಮನೆಗೆ ಹೋಗಿ ವಸಿ ಹೇಳಿ ಇವರ ಮನಸ್ಸು ಸರಿ ಮಾಡಬೇಕಪ್ಪೋ. ಎಂದು ಸರಬರನೆ ತಯಾರಾಗುತ್ತಿದ್ದಳು ಲಕ್ಷಮ್ಮ.

ಚಂದ್ರಪ್ಪ ಹೆಂಡತಿಯ ಮೇಲೆ ಕೋಪಗೊಂಡು ಬಂದವಾ ಉಸಿರುಬಿಡುತ್ತಾ, ತೋಟದ  ಬೇಲಿ ತಟಿಕೆ ತೆಗೆದು "ನೋಡವ್ವಾ..!! ನೀನು ಇಷ್ಟು ಸಮೃದ್ಧವಾಗಿ ಬೆಳೆದಿದ್ದೀಯಾ, ತೋಟದ ಪಕ್ಕದಲ್ಲೇ ನಾಲೆ ಹರಿಯುತ್ತೆ, ಅದು ಅಲ್ಲದೇ ನಮ್ಮದೇ ಬಾವಿ ಇದೆ, ಅದೃಷ್ಟದ ಮಣ್ಣು", ಒಂದು ಎಕರೆ ತೆಂಗಿನ ಗಿಡಗಳನ್ನ ನೆಟ್ಟಿದ್ದೇನೆ, ಅದಾಗಲೇ ಫಸಲು ಬರುವಂತಾಗಿದೆ. ಈಗ ಮಾವಿನ ತೋಪು ಮಾಡೊ ಆಸೆ, ಗದ್ದೆಯಲ್ಲಿ ರಾಶಿ ರಾಶಿ ಭತ್ತ ಬೆಳೆಯುತ್ತಿದ್ದೇನೆ. ಕಣ ಮಾಡಲು ಊರಲ್ಲೇ ಯಾರ ಕಣಕ್ಕೂ ಬರದಷ್ಟು ಆಳುಗಳು ನನ್ನ ಕಣಕ್ಕೆ ಬಂದು ಕೆಲಸ ಮಾಡುತ್ತಾರೆ. ಇಷ್ಟು ಸಿರಿವಂತ ಜಮೀನನ್ನು ಎಲ್ಲಿ ಕೈ ಬಿಡುತ್ತಾರೋ ನನಗೇ ಗೊತ್ತಾಗ್ತಿಲ್ಲವ್ವ. ತನ್ನೊಳಗೇ ಬೇಸರ ಪಟ್ಟುಕೊಳ್ಳುತ್ತ ತೋಟ ಒಂದು ಸುತ್ತು ಬಂದ. ದುಗುಡ ಸ್ವಲ್ಪ ಮಟ್ಟಿಗೆ ಕಮ್ಮಿಯಾದರೂ ಕೋಪ ಯಾವುದೋ ಮೂಲೆಯಲ್ಲಿತ್ತು.

ಇತ್ತ ಲಕ್ಷಮ್ಮಗೌಡರ ಮನೆ ಬಾಗಿಲು ತಟ್ಟಿದಳು, ಗೌಡ್ರೇ ವಸಿ ನಿಮ್ಮಿಂದ ಸಹಾಯ ಆಗಬೇಕು, ನಮ್ಮ ಯಜಮಾನ್ರಿಗೆ ರವಷ್ಟು ಬುದ್ಧಿ ಹೇಳಿ, ದಿನಾ ಚೀರಾಡ್ತಾರೆ. ನನ್ನ ಮಗ ಶಂಕ್ರ ಈಗ ಪಿಯುಸಿ ಬರೀಬೇಕು, ಅವನಿಗೆ ಸಾಕು ಓದಿದ್ದು ಪಿಯುಸಿ ಮುಗ್ಸಿ ಮುಂದೆ ಭೂಮಿಲಿ ಹೊಲ ಉಳು, ರೈತನ ಮಗ ರೈತನೇ ಆಗು ಅಂತಿದ್ದಾರೆ ಬುದ್ದಿ. ನೀವಾದರೂ ವಸಿ ಅವರಿಗೆ ತಿಳಿ ಹೇಳಬಾರ್ದಾ?

ಅದ್ಯಾಕವ್ವ ಹಿಂಗಾಡಿಯಾ? ಭೂಮ್ತಾಯಿ ಕೆಲಸ ಮಾಡೋದ್ರಲ್ಲೇನು ತಪ್ಪು, ನಾವು ನಮ್ಮ ಮಕ್ಕಳು ಎಲ್ಲಾ ಏನ್ ಮಾಡ್ತಿದ್ದೀವಿ ಈಗ. ನಿನ್ನ ಗಂಡ ಹೇಳೋದು ಸರಿನೇ ಅಯ್ತೆ. ಹೋಗು ಸುಮ್ಮನೆಬೆಂಗಳೂರು ಬಸ್ ಹತ್ತಬಹುದು ಬಣ್ಣಬಣ್ಣದ ಸೀರೆ ತಗೋಬಹುದು ಅಂತಾ ಆಸೆ ಇಟ್ಕಬೇಡ. ಹೋಗ್ ಹೋಗ್ ಮನೆ ಕೆಲಸ ನೋಡು. ಎಂದು ಗೌಡರು ಲಕ್ಷ್ಮಮ್ಮನ ಗದರುತ್ತಿದ್ದಾರೆ. ಕೋಣೆಯಲ್ಲೆ ಇದ್ದ ಗೌಡ್ರ ಹೆಂಡತಿ ಸ್ವಲ್ಪ ಇರ್ರಿ.. ಅವಳಿಗೆ ಯಾಕೇ ಓದು ಬೇಕು ಅನ್ನೋದು ಹೇಳಲಿ ಮೊದಲೇ ಮೂಗು ಮುರಿಬೇಡಿ ಎಂದು ಸಮಾಧಾನ ಮಾಡಿದಳು.

ಲಕ್ಷ್ಮಮ್ಮ ತಲೆ ಕೆರೆಯುತ್ತ, ಸೆರಗು ಹೊದ್ದು, ಬುದ್ದಿ ಅದು ಹಂಗಲ್ಲಾ, ಈಗ ನೀವೇ ನೋಡಿ ಪಕ್ಕದ ಮನೆ ಗೋಪಾಲಪ್ಪ ಬೋರು ಕೊರೆಸಿ, ಇದ್ದ ಬದ್ದ ದುಡ್ಡು ಕಳ್ಕೊಂಡು ಈಗ್ಲೋ ಆಗ್ಲೋ ಅನ್ನೋ ತರ ಆಗಿಲ್ವಾ? ಅವನ ಮಗನಿಗಂತೂ ನಾಲ್ಕು ಅಕ್ಷರ ಕಲಿಸಲಿಲ್ಲ, ಈಗ ಜಮೀನು ಮಾರಕ್ಕೆ ಇಟ್ಟಿದ್ದಾನೆ ಸಾಲ ತೀರಿಸ ಬೇಕಲ್ಲಾ, ಏನ್ ಮಾಡ್ತಾನೆ. ಎಲ್ಲಾ ಚೆನ್ನಾಗಿ ನಡೆಯುತ್ತಿದ್ರೆ ನಡೆಯುತ್ತೆ. ಇಲ್ಲಾ ಅಂದ್ರೆ ಎಲ್ಲಾ ಪೋಲಾಗುತ್ತೆ. ಭೂಮಿತಾಯಿ ತಾನೇ ಎಷ್ಟು ದಿನ ತನ್ನ ರಕ್ತ ಬಸಿದಾಳು, ಅವಳಿಗು ಸಾಕಾಗಿ ಯಾವಾಗ ಮುನಿಸಿಕೊತಾಳೋ ಗೊತ್ತಿಲ್ಲಈಗ ಮಗ ಓದೋದ್ರಿಂದ  ಏನೂ ತೊಂದ್ರೆ ಇಲ್ಲ, ಓದೋದು ಓದಲಿ, ಓದಿರೋರು ಭೂಮಿ ಕೆಲಸ ಮಾಡಬಾರದು ಅಂತಾ ಏನಿಲ್ಲವಲ್ಲಅವನು ಓದು ಮುಗಿಸಿದ ಕಾಲಕ್ಕೆ ನೋಡೋಣ ಪರಿಸ್ಥಿತಿ ಹೇಗಿರುತ್ತೋ ಹಾಗೆ ಬದಲಾಗೋದು. ಆದರೆ ನೀವು ವಸಿ ನಮ್ಮನೆಯವರಿಗೆ ಹೇಳಿ, ಓದು ಮುಂದುವರಿಸೋಕೆ. ಏನಂತಿರಿ ಬುದ್ದಿ.

ಆಯ್ತು ಲಕ್ಷ್ಮಮ್ಮ, ನೀ ಹೇಳೋದ್ರಲ್ಲೂ ವಿಚಾರವಿದೆ, ಮಕ್ಕಳು ವಿದ್ಯಾವಂತರಾಗಬೇಕು ದೇಶ, ವಿದೇಶಗಳ ವಿಷಯ ತಿಳ್ಕೋಬೇಕು. ಸರಿ ನಿಮ್ಮ ಯಜಮಾನನ ಹತ್ತಿರ ಮಾತಾಡ್ತೀನಿ ಬಿಡು ಎಂದಾಗಲೇ ಲಕ್ಷಮ್ಮನಿಗೆ ನಿರಾಳ.

ಮಟ ಮಟ ಮಧ್ಯಾಹ್ನ ಊಟಕ್ಕೆಂದು ಮನೆ ಕಡೆ ಹೋಗುತ್ತಿದ್ದ ಚಂದ್ರಪ್ಪನನ್ನು ಕಂಡ ಅಲ್ಲೇ ಹುಣಸೆ ಮರದಡಿ ನಿಂತಿದ್ದ ಗೌಡರು, ಚಂದ್ರಪ್ಪ ಏನ್ ಸಮಾಚಾರ ಊಟಕ್ಕೆ ಹೊರಟಾ ಏನು, ಎಂದು ಮಾತಿಗೆ ಕರೆದರು. ಹೌದು ಗೌಡ್ರೇ ಈಗಷ್ಟೇ ಗದ್ದೆಗೆ ನೀರು ಬಿಟ್ಟಿದ್ದೀನಿ ನೀರು ಹರಿಯೋಷ್ಟರಲ್ಲಿ ಮನೆಗೆ ಹೋಗಿ ಊಟ ಮಾಡೋಣ ಅಂತಾ ಬಂದೆ. ಏನ್ ವಿಷ್ಯ ಇಲ್ಲಿ ನಿಂತಿದ್ದೀರಿ ಎನ್ನುತ್ತ ಚಂದ್ರಪ್ಪ ಗೌಡರ ಹತ್ತಿರಕ್ಕೆ ಬಂದ. ಗೌಡರ ಕಿವಿಯಲ್ಲಿ ಇನ್ನೂ ಲಕ್ಷ್ಮಮ್ಮನ ಮಾತು ಗುಯ್ಯುಗುಡುತ್ತಿತ್ತು, ಏನಿಲ್ಲ ಸುಮ್ನೇ ನಿಂತೆ, ಮತ್ತೆ ಏನ್ ವಿಶೇಷ, ಮಗ ಪಿಯುಸಿ ಪರೀಕ್ಷೆ ಇನ್ನೇನು ಬಂತು, ಹೆಂಗೆ ಓದ್ತಾ ಇದ್ದಾನೆ, ಮುಂದೇನು ಮಾಡ್ತೀಯಾ ಅವನಿಗೆ, ಎಂದು ಗೌಡರು ಕೇಳಿದರು.

ಏನಿಲ್ಲ ಗೌಡ್ರೇ, ಅವನೂ ನನ್ನ ದಾರಿನೇ ಭೂಮ್ ತಾಯಿ ಕೆಲಸ ಅಷ್ಟೇ, ಕಿತ ಪರೀಕ್ಷೆ ಮುಗಿದ್ ಮೇಲೆ ಮನೆನಲ್ಲೇ ಇರ್ತಾನೆ. ನನಗೂ ಒಬ್ಬನೇ ಕೆಲಸ ಮಾಡೋಕೆ ಆಗೊಲ್ಲ, ಕೈಗಾವಲಿಗೆ ಇರಲಿ ಇವನು, ಎಂದು ಯೋಚಿಸಿದ್ದೀನಿ.

ಅಯ್ಯೋ ಕಥೆಯೇ, ಹಂಗೇನಾರಾ ಮಾಡ್ ಗೀಡಿಯೋ ಪುಣ್ಯಾತ್ಮ, ಮಕ್ಕಳು ಓದಲಿ, ನಿನಗೇ ಗೊತ್ತಲ್ಲ ಹತ್ತನೇ ಕ್ಲಾಸ್ ನಲ್ಲಿ ಇವನೇ ನಮ್ಮ ನೆಲಮಂಗಲಕ್ಕೆಲ್ಲ ಹೆಚ್ಚು ಅಂಕ ತಗೊಂಡು ಪಾಸಾಗಿದ್ದ. ಅಲ್ಲಿ ಅದ್ಯಾವುದೊ ಫಂಕ್ಸನ್ನಾಗೆ  ನನ್ನನ್ನೆ ಕರೆದಿದ್ರು, ನಿನ್ನ ಮಗನಿಗೆ ದುಡ್ಡು ಕೊಡಿಸಿದ್ರು. ನಮ್ಮೂರಿಗೂ ಒಂದು ಒಳ್ಳೆ ಹೆಸರು ಬರ್ತದೇ ಕಣೋ ಚಂದ್ರಪ್ಪ. ಓದೊ ಮಕ್ಕಳು ಓದಲಿ. ಈಗ ನೋಡು ನನ್ನ ಮಕ್ಕಳಿಗೆ ಎದೆ ಸೀಳಿದ್ರು ಒಂದು ಅಕ್ಷರ ಬರಕಿಲ್ಲ, ಏನ್ ಮಾಡ್ತೀಯಾ ಅವ್ಕೆ ಓದಿಸಿ ದುಡ್ಡು ದಂಡ ಅದಕೆ ಹೊಲದಲ್ಲಿ  ಗೇಯೋಕ್ಕೆ ಹಾಕಿದ್ದೀನಿ.

ಅಂಗಲ್ಲಾ ಗೌಡ್ರೇ, ಓದಿ ಅವನು ಉದ್ದಾರ ಆಗೋದು ಅಷ್ಟರಲ್ಲೇ ಅಯ್ತೆ ಬಿಡಿ. ಮುಂದೆ ನನಗೂ ವಯಸ್ಸು ಆಗುತ್ತೆ ಭೂಮಿ ಕೆಲಸ ಮಾಡೋಕೆ ಆಗುತ್ತಾ ಹೇಳಿ, ನನ್ನ ಕೆಲಸ ಯಾರಾದ್ರು ವಹಿಸ್ಕೊ ಬೇಕಲ್ವಾ, ಯಾರ್ ಮಾಡ್ತಾರೆ ಇನ್ನೊಬ್ಬ ಇರೋನು ಇನ್ನು ಚಿಕ್ಕೋನು ಬೇರೆ. ಎಲ್ರೂ ಓದಿ ಪಟ್ಟಣ ಸೇರಿದ್ರೆ  ಹಳ್ಳಿ ಕಾಯೋರು ಯಾರು ಇರ್ತಾರೆ ಹೇಳಿ. ನಮ್ಮ ಪಕ್ಕದೂರಿನ ಬೋಜಪ್ಪನ ಮಕ್ಕಳು ಇದ್ದ ನಾಲ್ಕು ಜನರಲ್ಲಿ ಯಾವಾನಾದ್ರು ಅಪ್ಪನ ಹೆಸರು ಹೇಳೋಕೆ  ಅವ್ರಾ ಹೇಳಿ ನೀವೆ. ಎಲ್ಲಾ ಅದೇನೊ ದೊಡ್ಡ ಕೆಲಸ, ದುಡ್ಡು ಜಾಸ್ತಿ ಕೊಡ್ತಾರೆ ಅಂತಾ ವಿದೇಶದಾಗೆ ಹೋಗಿ ಕುಂತವ್ರೆ, ಇಲ್ಲಿ ಗಂಡ ಹೆಂಡ್ರು ಇಬ್ಬರೆ ಮಿಕಮಿಕ ಅಂತಾ ಒಬ್ರು ಮುಖ ಒಬ್ರು ನೋಡಕೊಂಡು ಕಾಲಾ ಹಾಕ್ತಾ ಅವರೆ, ಇನ್ನು ಅವರ ಜಮೀನು ನೋಡ ಬೇಕು ಗೌಡ್ರೆ ಪಾಳ್ ಬಿದ್ದದೇ, ಹೊಟ್ಟೆ ಉರಿತದೆ ನೋಡೋಕೆ. ಬಂಗಾರದಂತ ಭೂಮಿನ ಹಾಳು ಮಾಡಿ ಬಿಟ್ರು. ಹಂಗೆ ಮಾಡ ಬೇಕು ಅಂತೀರಾ ನೀವು, ಏನು ಹೇಳಿ.

ಅಂಗಲ್ಲ ಚಂದ್ರಪ್ಪ, ಭೂಮಿ ಕೆಲಸ ಯಾವಾಗಾದ್ರು ಮಾಡಬಹುದು ಓದು ಮಧ್ಯ ನಿಂತರೆ ಅಷ್ಟೆ ಗತಿ ಮುಂದೆ ಓದೋಕೆ ಕಷ್ಟ ಆಗುತ್ತೆ. ಒಂದು ಟೀಚರ್ ಓದು ಓದಲಿ, ಇಲ್ಲೆ ಹಳ್ಳಿನಾಗೆ ಎಲ್ಲಾರ ಸ್ಕೂಲ್ ಕೆಲಸ ಗಿಟ್ಟಿಸಿ ಊರಿಂದ ಓಡಾಡಲಿ ಹಂಗೆ ಮನೆ ಜಮೀನು ಅಂತ ಕೆಲಸನೂ ನೋಡಿ ಕೊಳ್ಳಲಿ ಬಿಡು ಏನಂತೀಯ.

ಅಯ್ಯೋ ಶಿವನೆ, ಟೀಚರ್ ಮಾಡಿಸೋದಾ, ಆಮೇಲೆ ಅಷ್ಟೆ, ನನಗೆ ಪಾಠ ಓದಕ್ಕೆ ಬರ್ತಾನೆ, ಈಗಾಗ್ಲೇ ಅವನ ಅಮ್ಮಾ ಅವಳಲ್ಲ, ಅವಳು ದಿನಾ ಪಾಠ ಓದುತಾ ಅವಳೆ, ಇನ್ನ ಜೊತೆಗೆ ಮಗ ಸೇರಿದ್ರೆ ಮುಗಿತು. ಇಲ್ಲ ಬಿಡಿ ಅವೆಲ್ಲ ಆಗದ ಕೆಲಸ.

ಗೌಡ್ರೆ, ಇಲ್ಲಿದ್ದೀರ ಮನೆ ಹತ್ರೆ ಹೋಗಿದ್ದೆ ನೀವು ಇರಲಿಲ್ಲ...!!

ಬಾ ಪೋಸ್ಟ್ ಮ್ಯಾನಪ್ಪ ಏನ್ ವಿಷಯ, ಗೌಡ್ರುನಾ ಹುಡಿಕೊಂಡು ಬಂದಿದ್ದೀಯಲ್ಲ ಏನ್ ಕಥೆ.

ಯಾವುದೊ ಹಾಲಿನ ಡೈರಿ ಪೋಸ್ಟ್ ಬಂದೈತೆ ಎಬ್ಬೆಟ್ಟು ಒತ್ತಿ ತಗಳ್ಳಿಅದು ಸರಿ ಏನೋ ಗಹನವಾದ ವಿಚಾರ ಸಾಗೈತೆ ಇಲ್ಲಿ, ಏನು ನಮಗೂ ವಸಿ ಹೇಳಿ ಗೌಡ್ರೆ..

ಏನಿಲ್ಲಪ್ಪ, ನಮ್ಮ ಚಂದ್ರಪ್ಪ ಮಗನನ್ನ ಮುಂದೆ ಓದಿಸೊಲ್ಲ ಅಂತಾವ್ನೆ, ವ್ಯವಸಾಯ ಮಾಡ್ಕೊಂಡು ಇರಲಿ ಬೇರೆ ಏನು ಬೇಡಾ ಅಂತಾವ್ನೆ, ವಸಿ ನೀನಾದ್ರು ಹೇಳಪ್ಪ..

ಯಾಕ್ ಚಂದ್ರಣ್ಣ ಅಂತಾ ಕೆಲಸ ಮಾಡ್ತೀಯಾ, ನಿನಗೇನು ಗೊತ್ತು ವಿದ್ಯೆ ಬೆಲೆ, ನಮ್ಮ ದೊಡ್ಡಣ್ಣನ ಮಗ ಬಿ.ಎಸ್ಸಿ ಅಗ್ರಿಕಲ್ಚರ್ ಅಂತ ಮಾಡವನೇ, ಅದೇ ನೀ ಮಾಡ್ತಿಯಲ್ಲ ಬೇಸಾಯ, ಅದಕ್ಕೆ ಅಂತ ಡಿಗ್ರಿನೂ ಇದೆ ಗೊತ್ತಾ, ಅದು ಮಾಡ್ ಕೊಂಡ್ರೆ ಮಳೆ, ಬೆಳೆ ಭೂಮಿ ಗುಣ, ಯಾವ ಕಾಲದಲ್ಲಿ ಏನು ಬೆಳೆಯಬಹುದು ಅಂತ ಎಲ್ಲಾ ವೈಜ್ಞಾನಿಕವಾಗಿ ತಿಳಿಸಿ ಕೊಡ್ತಾರೆ. ನನ್ನ ಅಣ್ಣನ ಮಗ ಈಗ ಸಾವಿರ ಊರಿನ ಸರದಾರ ತರಹ ಇದಾನೆ ಗೊತ್ತಾ. ವಿದೇಶಕ್ಕೂ ಅವನ ಭೂಮಿದೇ ಹೂವು, ಹಣ್ಣುಗಳು ಬೇಕು.

ಹೌದಾ, ಅದೇನು ಸಾ ಹಾಗಂದ್ರೆ ನಾವು ಹೊಲ ಊಳೋದು, ಬಿತ್ತೋದು ನಮಗೆ ಎನಾರ ಶಾಲೆನಲ್ಲಿ ಹೇಳಿ ಕೊಟ್ಟಿದ್ದಾರಾ, ಇದು ಯಾವುದೊ ಹೊಸತರ ಕಥೆ ಕೇಳ್ತಾ ಇದ್ದೀನಲ್ಲಪ್ಪ, ಮೈಮುರಿದು ಕೆಲಸ ಮಾಡಿದ್ರೆ ಭೂಮಿತಾಯಿ ತಾನೇ ಒಲಿತಾಳೆ ಅದ್ಯಾವದೋ ಪುಸ್ತಕದ ಬದನೆಕಾಯಿ ಓದಿದರೇನು ಬರುತ್ತೆ ಬಿಡಿ.

ಏನ್ ಗೌಡ್ರೇ ನಮ್ಮ ಚಂದ್ರಣ್ಣ ಹಿಂಗೆ, ಅಲ್ಲಪ್ಪ ಚಂದ್ರಣ್ಣ ನೀನು ಒಂದು ಕಿತ ನನ್ನ ಅಣ್ಣನ ಮಗನ ಜಮೀನಿಗೆ ಬಾ, ಹೂ ಹಣ್ಣು, ಬತ್ತ, ರಾಗಿ, ಜೋಳ ಎಲ್ಲ ಹೆಂಗೆ ಬೆಳೆದವನೆ ನೋಡು. ನನ್ನ ಅಣ್ಣ ಆಫೀಸರ್ ಆಗಲಿ, ಭೂಮಿ ಕೆಲಸ ಬೇಡ ಅಂತಿದ್ದೋನು ಬಾಯಿ ಮೇಲೆ ಬೆರಳು ಇಟ್ಕೊಂಡವನೆ. ಈಗೆಲ್ಲಾ ಪೇಟೆನಲ್ಲಿ ಎಲ್ಲಿ ನೋಡಿದ್ರು ಮದ್ದು ಸಿಂಪಡಿಸಿರೊ ತರಕಾರಿ, ಹೂ, ಹಣ್ಣು ಸಿಗೋದು. ಸಾವಯವ ಕೃಷಿ ಮಾಡೋರೆ ಕಮ್ಮಿ,. ಇವನು ಸಾವಯವ ಕೃಷಿ ಕೆಲಸ ಮಾಡೋಕೆ ಹಿಡಿದು ಎಂಥಾ ಹೆಸರು ಇದೆ ಗೊತ್ತ. ಮೂರು ದಿನದಿಂದ ಟಿವಿನಲ್ಲಿ ಅವನ ತೋಟ, ಗದ್ದೆ, ಹೊಲ ಅವನ ಬಗ್ಗೆನೇ ಮಾತು ನೋಡು ಇವತ್ತು ಸಂಜೆನೂ ಬರುತ್ತೆ. ಆಗ ಗೊತ್ತಾಗುತ್ತೆ.

ಈಟೋಂದೆಲ್ಲಾ ಅಯ್ತೇನಣ್ಣ, ಟಿವಿನಾಗೆ ಬಂದ್ರೆ ಸಂಜೆ ನೋಡ್ತಿನಿ, ಏನೋ ಮಗ ಪೇಟೆ ಬಿದ್ದು ಹಾಳಾಗಿ ಹೋಗ್ತಾನೆ, ನನ್ನ ಭೂಮಿ ಬರಡಾಗುತ್ತೆ ಅಂತಾ ಹಠ ಮಾಡಿದ್ದೆ. ಈಗ ನೀವು ಹೇಳಿದ ಮೇಲೆ ವಸಿ ಯೋಚಿಸಿ ತೀರ್ಮಾನ ತಗತೀನಿ.

ಅಬ್ಬಾ ಒಂದು ಹಂತಕ್ಕೆ ಚಂದ್ರಪ್ಪನ ಮನಸ್ಸು ಬದಲಿಸುವಲ್ಲಿ ಗೌಡರು ಮತ್ತು ಪೋಸ್ಟ್ ಮ್ಯಾನ್ ಸಾಹಸ ಪಟ್ಟಂತಾಯಿತು.

ಇನ್ನು ಸಂಜೆಯವರೆಗೂ ಮನದಲ್ಲೇ ಲೆಕ್ಕಾಚಾರದಲ್ಲಿ ಮುಳುಗಿದ್ದ ಚಂದ್ರಪ್ಪ, ಡಿಡಿ- ಸಾವಯವ ಕೃಷಿ ಕಾರ್ಯಕ್ರಮ ನೋಡಲು ಅಣಿಯಾದ, ಎಂದೂ ಟಿವಿ ಕಡೆ ತಲೆಹಾಕದವರು ಇಂದೇನು, ಅಂತಾ ಲಕ್ಷ್ಮಮ್ಮ ಮಗನ ಮುಖ, ಮಗ ಅವ್ವನ ಮುಖ ನೋಡಿಕೊಳ್ಳುತ್ತಿದ್ದರು. "ಪೋಸ್ಟ್ ಮಾಸ್ಟರ್ ಹೇಳಿದ ವ್ಯಕ್ತಿಯ ಪರಿಚಯದ ಮೂರನೇ ಭಾಗ ಬರುತ್ತಿತ್ತು". ಆತನ ಜಮೀನು, ಹಸಿರ ಗದ್ದೆ, ರಾಶಿ ಮಾಡಿದ ರಾಗಿ ತೆನೆ ಎಲ್ಲವನ್ನು ನೋಡಿ ಕಣ್ಣರಳಿಸಿ ಕುಳಿತಿದ್ದ. ವ್ಯವಸಾಯಗಾರನ ಜಮೀನು ಸುಮಾರು ಎಕರೆ ಮಾತ್ರ. ಚಂದ್ರಪ್ಪನ ತಲೆ ಗಿರ್ ಎನ್ನುತ್ತಿತು. ಅವನ ಆದಾಯ ಲೆಕ್ಕವನ್ನು ಕೇಳಿ, ನನ್ನದು ೨೦ ಎಕರೆ ಜಮೀನಿದೆ, ನನ್ನ ಸಂಪಾದನೆ ಸೊನ್ನೆ. ಮನೆಮಂದಿಗೆ ಸಾಕಾಗುವಷ್ಟು ಬೆಳೆಯುತ್ತಿದ್ದೇನೆ. ನಾನೇ ಹೀಗೆ ಇನ್ನು ನನ್ನ ಮಗ ಹೇಗೋ. ಏನೋ ಮನದಲ್ಲೊಂದು ಆಶಾಭಾವ, ಮಗ ಓದಲಿ ಹುಡುಗನಂತೆಯೇ ಆಗಲೆಂದು. ಜೋರು ಗಟ್ಟಿ ಕಿರುಚಿ ಹೇಳಿದ. ಲೇ ಇವಳೇ ಲಕ್ಷ್ಮು ನಮ್ಮ ಶಂಕ್ರು ಮುಂದೇ ಓದಲಿ ಕಣೆ, ಅದೇನೋ ಡಿಗ್ರಿನಲ್ಲಿ ಬೇಸಾಯದ ಬಗ್ಗೆ ಇದೆಯಂತಲ್ಲಾ ಅದೇ ಮಾಡಲಿ ಕಣೆ ಏನಂತೀಯಾ...

ಲಕ್ಷ್ಮಮ್ಮನ ಮುಖ ಕಮಲದಂತೆ ಅರಳಿತು, ಹಾಅ.. ಏನಂದ್ರಿ ಇನ್ನೊಂದು ಸಾರಿ ಹೇಳಿ ಅಂತ ಗಂಡನ ಎದುರು ಹಾಜರಾದ ಲಕ್ಷ್ಮಮ್ಮ, ಸದ್ಯ ನೀವು ಒಪ್ಪಿದ್ದೇ ಹೆಚ್ಚು. ಆಗಲಿ ನೀವು ಹೇಳಿದಂತೆ ಡಿಗ್ರಿ ಮಾಡಲಿ, ಅದು ಯಾವುದರ ಬಗ್ಗೆಯೋ, ಒಟ್ಟಲ್ಲಿ ಮಗ ಓದುತ್ತಾನೆಂದು ಖುಶಿಯಲ್ಲಿ ಮಗನನ್ನು ತಬ್ಬಿ ಮುದ್ದಾಡಿದಳು.

ಅಪ್ಪ ಈಗ ಒಪ್ಪಿದ್ದಾನೆ, ಇದೇ ಒಪ್ಪಿಗೆ ಮುಂದೆಯೂ ಇರುತ್ತದಾ...ಮಗ ಓದುತ್ತಾನಾ... ಬೇಸಾಯಕ್ಕೆ ಹೋಗುತ್ತಾನಾ...??  ಮುಂದಿನ ಭಾಗದಲ್ಲಿ...