Saturday, January 15, 2011

ಮಕರ ಸಂಕ್ರಾಂತಿ ಶುಭಾಶಯಗಳು


ಕಬ್ಬು, ಬೆಲ್ಲದ ಸಿಹಿಯೊಂದಿಗೆ
ಕಡಲೆ, ಎಳ್ಳಿನ ಎಣ್ಣೆಯೊಂದಿಗೆ
ಸವಿ ಸವಿಯಾದ ಸಿಹಿ ಮಾತು
ಜೀವಕೆ ಆಧಾರವಾದ ಯಂತ್ರದಂತೆ....

ಯಂತ್ರವನು ದೂಡಲು ಎಣ್ಣೆಯ ಎರೆದು
ಒಳ್ಳೊಳ್ಳೆ ಮಾತಿನೊಂದಿಗೆ
ದ್ವೇಷ ವೈಷಮ್ಯವ ಹೊರದೂಡಿ
ಬಾಳ ಸಾಗಿಸುವ ಬನ್ನಿ....

ಜೀವನದ ಕ್ರಾಂತಿಗೆ ಸಂಕ್ರಮಣ ನೀಡಿ
ನೇಸರ ತನ್ನ ಪಥವ ಬದಲಿಸಿದಂತೆ
ನಮ್ಮ ದುರ್ಗುಣವ ದೂರ ತಳ್ಳಿ
ಹೊಸತನವ ಸೃಷ್ಟಿಸಲಿ ಈ ಮಕರ ಸಂಕ್ರಮಣ...


Monday, January 10, 2011

ಮರುಭೂಮಿಯಲಿ ಮಳೆ ಮತ್ತು ಹೊಳೆ.......

ಮರುಭೂಮಿಯಲಿ ಮಳೆ ?? ಎಂದು ಮಾರುಹೋದಿರಾ..!!!?? ನಿಜ, ಆ ವರುಣರಾಜ ಮಳೆಯ ಸಿಂಚನವಂತೂ ಮಾಡಲಿಲ್ಲ ಅದಕ್ಕೇ ಈ ಭೂಮಿ ಬಣಗುಡುತ್ತಲಿದೆ. ಅದು ಬೇರೆ ವಿಷಯ ,ಆದರೆ ನಾನು ಹೇಳುತ್ತಿರುವ ಮಳೆಯೇ ಬೇರೆ.....!!!!





ಇದೇ ಹೊಸವರ್ಷದ ಜನವರಿ ೭ರ ಸಂಜೆ ಕುವೈತ್ ಕನ್ನಡ ಕೂಟದ ವತಿಯಿಂದ ವಾರ್ಷಿಕ ಸರ್ವ ಸದಸ್ಯರ ಸಭೆ(ಎಜಿಎಂ), ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಜಂಟಿ ಕಾರ್ಯಕ್ರಮಗಳು ಇದ್ದದ್ದರಿಂದ ಕಾರ್ಮಲ್ ಶಾಲೆಯ ಸಭಾಂಗಣದ ವೇದಿಕೆ ರಂಗು ರಂಗಾಗಿತ್ತು .... ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ ಆನಂತರ ನಮ್ಮ ಕಾರ್ಯಕಾರಿಣಿಯ ಅಧ್ಯಕ್ಷರು ೨೦೧೦ರಲ್ಲಿ ಕೂಟದ ಕೆಲಸ ಕಾರ್ಯಮಾಡಿ ಸುಸ್ತಾಗಿದ್ದವರಿಗೆ ಶಹಬಾಷ್ ಗಿರಿ ಕೊಟ್ಟು ಧನ್ಯವಾದ ಹೇಳುತ್ತಾ ಎಲ್ಲರನ್ನೂ ವೇದಿಕೆಯಡೆ ಕರೆದು ಗುಣಗಾನ ಮಾಡಿ "ಒಳ್ಳೆ ಕೆಲಸ ಮಾಡಿದ್ದೀರಿ, ನಿಮ್ಗೆ ತುಂಬಾ ತುಂಬಾ ಥ್ಯಾಂಕ್ಸ್ ಮುಂಬರೋ ಸಮಿತಿಯೊಂದಿಗೂ ಹೀಗೇ ಸಹಕರಿಸಿ ಕೆಲ್ಸ ಮಾಡಿ" ಎಂದು ಹೇಳ್ತಾ ...೨೦೧೦ರ ಕಾರ್ಯಕಾರಿ ಸಮಿತಿಯ ಕೆಲಸ ಕಾರ್ಯಗಳಲ್ಲಿ ಪಾಲುದಾರರಾದ ಎಲ್ಲರಿಗೂ ಧನ್ಯವಾದ, ನೆನಪಿನ ಕಾಣಿಕೆ ಎಲ್ಲವನ್ನು ಕೊಟ್ಟು ಮರಳ ಮಲ್ಲಿಗೆ ಮತ್ತು ಕುವೈತ್ ಕನ್ನಡ ಕೂಟದ ಟೆಲಿಫೋನ್ ಡೈರೆಕ್ಟರಿಯನ್ನು ಬಹು ಸಂತಸ ಭಾವನೆಯಲ್ಲಿ ಬಿಡುಗಡೆಗೊಳಿಸಿದರು.

ಕೂಟದ ಮಿಕ್ಕೆಲ್ಲಾ ಕಾರ್ಯಕ್ರಮಗಳೂ ಮುಗಿಯುತಿದ್ದಂತೆ, ವೇದಿಕೆಯಲ್ಲಿ ನಾದ ಲೀಲೆಯ ನಿನಾದಿಸುವ ಕರಗಳಿಗಾಗಿ ವಾದ್ಯಗಳು ಕಾದು ಕುಳಿತಂತಿದ್ದವು. ಅರುಣ್, ಮಧುಸೂದನ್ ಹಾಗೂ ಕೃಷ್ಣ ಉಡುಪ ಅವರು ವಾದ್ಯಗಳಿಗೆ ಮೆರುಗು ನೀಡುತ್ತಲಿದ್ದಂತೆ ಪಲ್ಲವಿ ಅವರು ಗಜಮುಖನ ಸ್ತುತಿಗಾಯನದೊಂದಿಗೆ ಸಂಗೀತ ಸಂಜೆಯನ್ನು ಪ್ರಾರಂಭಿಸಿದರು. ಈ ಹಾಡು ಮುಂಬರುವ ಧಾರಾಕಾರ ಮಳೆಯ ಮೊದಲ ಹನಿಯಂತೆ ಭಾಸವಾಯಿತು....... ಹನಿ ಹನಿಗೂಡಿದರೆ ಹಳ್ಳ ಅನ್ನೋಹಾಗೆ ಒಂದಾದ ಮೇಲೊಂದರಂತೆ ಗಾನಕೋಗಿಲೆ ಸಂಗೀತದ ಮಳೆಯನ್ನೇ ಸುರಿಸಿದರು..... ಎಷ್ಟು ಹಿತವೆನಿಸಿತೆಂದರೆ, ಬರಡು ಬರಡಾದ ಭೊರಮೆಗೆ ಮಳೆಹನಿ ಸಿಂಚನ ಅಹ್ಲಾದಿಸುವ ರೀತಿ ನಾವೆಲ್ಲ ಸಂಗೀತ ಸುಧೆಯಲ್ಲಿ ಮಿಂದೆವು........ ಸುಮಾರು ಮೂರುಗಂಟೆ ಒಂದಾದ ನಂತರ ಒಂದು ಅವಿಶ್ರಾಂತ ಗಜಲ್, ವಚನ, ಭಾವಗೀತೆ, ದೇಶಭಕ್ತಿಗೀತೆ, ಜಾನಪದ ಗೀತೆ...ಅಬ್ಬಬ್ಬಾ... ಹೇಗೆ ಅಂತೀರಾ??!! ಗಾಯನ -ಸಂಗೀತಗಳ ಸುರಿಮಳೆಯೋ ಸುರಿಮಳೆ.........

ಮಳೆಯೊಂದೇನಾ ?? ಮಳೆಯೊಟ್ಟಿಗೆ ಗುಡುಗು ಸಿಡಿಲು ಮಿಂಚು ಬರಲಿಲ್ವಾ.. ಅಂತೀರಾ....?? ಖಂಡಿತಾ ಅಷ್ಟು ಧಾರಾಕಾರ ಮಳೆ ಬೀಳ್ತಾ ಇದ್ರೆ ಗುಡುಗು ಸಿಡಿಲು ಮಿಂಚು ಬರದೇ ಇರುತ್ತಾ..??!!. ಅರುಣ್ ಡ್ರಮ್ ಬಾರಿಸುತ್ತಾ ಗುಡುಗಿನ ಶಬ್ದದಂತೆ ಎದೆ ಝಲ್ ಎನಿಸಿಬಿಟ್ಟರು...... ಇನ್ನು ಅರುಣ್ ನೀವು ಗುಡುಗ್ತಾ ಇದ್ದೀರಾ ನಾನೇನು ಕಡಿಮೆ ಎಂದು ಮಧುಸೂದನ್ ಸಿಡಿಲನ್ನು ತಬಲ ನುಡಿಸುವುದರ ಮುಖೇನ ಚಿಟಪಟನೆಂಬಂತೆ ಕೇಳಿಸಿಯೇಬಿಟ್ಟರು.... ಗುಡುಗು ಸಿಡಿಲು ಇಬ್ಬರೂ ಇರುವಾಗ ಕೃಷ್ಣ ಉಡುಪ ಅವರು ನಾನು ನೋಡಲು ಮಾತ್ರ ಸಾಧ್ವಿ ಕೀ ಬೋರ್ಡ್ ನುಡಿಸುವುದರಲಲ್ಲಾ ಎಂದು ಸಂಜೆಯ ಕತ್ತಲಲಿ ಮಿಂಚನ್ನೇ ಹರಿಸಿಬಿಟ್ಟರು..... ಇಲ್ಲಿ ಯಾರೂ ಯಾರಿಗೂ ಕಡಿಮೆಯಿಲ್ಲ ಎಂಬಂತೆ ತಮ್ಮದೇ ಕ್ಷೇತ್ರದ ನೈಪುಣ್ಯತೆಯಲಿ ಸಂಗೀತ ಸುಧೆಯನ್ನು ನಮಗೆಲ್ಲರಿಗೂ ಉಣಬಡಿಸಿದರು....

ಪಲ್ಲವಿಯವರ ಗಾಯನದಲ್ಲಿ ಚಲನ ಚಿತ್ರಗಳ ಹಾಡುಗಳೂ ಸಹ ಕೇಳುಗರ ಕಿವಿಗೆ ಇಪು-ತಂಪನ್ನೆರೆದುದಲ್ಲದೇ ಕಾಲು ಕೈಗಳಿಗೂ ಚೈತನ್ಯ ನೀಡಿತ್ತು........ ತಮ್ಮ ವಯಸ್ಸನ್ನೇ ಮರೆತು ಚೇತೋಹಾರಿಗಳಾಗಿ ನರ್ತಿಸಿ, ಕುಣಿದು ಕುಪ್ಪಳಿಸಿ ಎಲ್ಲರ ಕಣ್ಣನ್ನು ತಣಿಸಿದರು..... ಪಲ್ಲವಿ ಒಂದು ರೀತಿಯ ಸೆಳೆತ ನೀಡಿದರೆ... ಅರುಣ್ ಶಬ್ದ ಸುಧೆಯಲಿ ಮಕ್ಕಳೂ ಮೊದಲುಗೊಂಡು ಎಲ್ಲ ಹಿರಿಯರಿಗೂ ಮನ ಸಂತೃಪ್ತಿಗೊಂಡು ಮೂಕವಿಸ್ಮಿತರನ್ನಾಗಿ ಮಾಡಿದರು.

ಇನ್ನೇನು ಕೊನೆಯ ಹಾಡು ಮುಕ್ತಾಯ ಮಾಡುತ್ತೇನೆ ಎಂದಾಗ ನಿಜಕ್ಕೂ ಬೇಸರವಾಗಿತ್ತು ಇಡೀ ರಾತ್ರಿ ಅವರ ಗಾಯನ ಕೇಳುವಷ್ಟು ಸಂಯಮ ನಮಗಿತ್ತು ಆದರೆ ಸಮಯಕ್ಕೆ ಸಂಮಯವಿರಲಿಲ್ಲ..... ಒಟ್ಟಲ್ಲಿ ಪಲ್ಲವಿ ಅರುಣ್ ಮತ್ತು ವೃಂದದವರ ಗಾನ ಸುಧೆ ನಮ್ಮನ್ನೆಲ್ಲಾ ಮಂತ್ರಮುಗ್ಧರನ್ನಾಗಿ ಮಾಡಿದ್ದಂತೂ ಸತ್ಯ.


ಮತ್ತೊಂದು ವಿಷಯ ಇಲ್ಲಿ ಹೇಳಲೇ ಬೇಕು - ವೇದಿಕೆಯಲ್ಲಿ ಸಂಗೀತ ಮಳೆ ಸುರಿದರೆ ಮನೆಯತ್ತ ನೆಡೆವಾಗ ವರುಣ ಮಳೆಹನಿಯನ್ನು ಚುಮುಕಿಸಿಯೇ ಬಿಟ್ಟ.... ಇದು ಪಲ್ಲವಿಯವರ ಸಂಗೀತದ ವರದಾನವೇ ಸರಿ.........

ನೆಚ್ಚಿನ ಹಾಡುಗಳನ್ನೆಲ್ಲಾ ಹಾಡಿ ನಮ್ಮೆಲರ ಮನ ತಣಿಸಿ ಬಿಟ್ಟ ಸಂಗೀತ ಸರಸ್ವತಿ - ಪಲ್ಲವಿ ನಿಮಗಿದೋ ನನ್ನ ನಮನ... ಸುಮಧುರ ಕಂಠಕೆ ಸಾಥ್ ನೀಡಿದ ಅರುಣ್, ಮಧುಸೂದನ್, ಕೃಷ್ಣ ಉಡುಪ ಅವರಿಗೂ ನಮ್ಮ ಅನಂತಾನಂತ ಧನ್ಯವಾದಗಳು.

ಸೃಶ್ರಾವ್ಯ ಸಂಗೀತದ ನಂತರ ಖಜಾಂಚಿಯವರು ವರ್ಷದ ಹಣಕಾಸು ವಹಿವಾಟಿನ ವರದಿಯನ್ನು ಒಪ್ಪಿಸಿ, ಕ್ರಿಸ್ಮಸ್ ಹಾಗೂ ಹೊಸವರ್ಷದ ಆಚರಣೆಗೆ ಅನುವು ಮಾಡಿಕೊಟ್ಟರು. ವೇದಿಕೆಯಲ್ಲಿ ಮೌನ... ಸಭಿಕರೆಲ್ಲಾ ಸುತ್ತ ಮುತ್ತಲೂ ಕಣ್ಣಾಡಿಸುತ್ತಲಿದ್ದಾರೆ.... ಸ್ಯಾಂಟಾಕ್ಲಾಸ್ ಬರುತ್ತಾನೆ ಸಿಹಿ ತಿಂಡಿ ತರ್ತಾನೆ... ಎಂದು ಪುಟ್ಟಾಣಿ ಮಕ್ಕಳಿರಲಿ ದೊಡ್ಡವರೂ ಸಹ ಚಿಕ್ಕ ಮಕ್ಕಳಂತೆ ಹಾತೊರೆದು ಕಾಯುತ್ತಲಿದ್ದರು......... ಕಾಯುವವರಿಗೆ ಬೇಸರ ತರಿಸದೇ ಸ್ಯಾಂಟಾಕ್ಲಾಸ್ ಬಂದ್ದೇ ಬಿಟ್ಟರು .... ಜಿಂಗಲ್ ಬೆಲ್ ಜಿಂಗಲ್ ಬೆಲ್....... ಮ್ಯೂಸಿಕ್ ಕೇಳಿದ್ದೇ ತಡ ಎಲ್ಲ ಮಕ್ಕಳು ಕುಣಿದು ಕುಪ್ಪಳಿಸಿ ಸ್ಯಾಂಟಾಕ್ಲಾಸ್ ನಿಂದ ಚಾಕಲೇಟ್ ತೆಗೆದುಕೊಳ್ಳಲು ಒಬ್ಬರಮೇಲೆ ಒಬ್ಬರು ಬಿದ್ದು ತುಂಬ ಖುಷಿಯಿಂದ ವೇದಿಕೆಯ ಮೇಲೆ ಸ್ಯಾಂಟಾನೊಂದಿಗೆ ಸರಸವಾಡುತ್ತಾ ವಿಜೃಂಭಿಸಿಬಿಟ್ಟರು.

ಸಂತಸದ ಕ್ಷಣಗಳೆಲ್ಲವೂ ಮುಗಿದನಂತರ ೨೦೧೧ ರ ಕಾರ್ಯಕಾರಿ ಸಮಿತಿಯ ಆಯ್ಕೆಯ ಕ್ಷಣಗಣನೆ ಪ್ರಾರಂಭವಾಯಿತು. ಹಿರಿಯರ ಸಮ್ಮುಖದಲ್ಲಿ ಅವಿರೋಧ ಆಯ್ಕೆಯೊಂದಿಗೆ ಅಧ್ಯಕ್ಷರಾಗಿ ನಾಗರಾಜ್ ಸುಬ್ಬರಾವ್ ಉಪಾಧ್ಯಕ್ಷರಾಗಿ ನಾಗರಾಜ್ ಶಾನ್ ಬಾಗ್, ಕಾರ್ಯದರ್ಶಿಗಳಾಗಿ ರಾಜೀವ್ ಕುಲಕರ್ಣಿ, ಮತ್ತು ಖಜಾಂಚಿಗಳಾಗಿ ಪ್ರವೀಣ್ ಅವರು ಅಧಿಕಾರ ಸ್ವೀಕರಿಸಿದರು.

ಹೊಸ ಸಮಿತಿಗೆ ಆಹ್ವಾನಿಸಿ ಹಳೆ ಕಾರ್ಯಕಾರಿ ಸಮಿತಿಯವರು ಸದ್ಯ ನಮ್ಮ ತಲೆಮೇಲಿದ್ದ ಭಾರವನ್ನು ನಿಮಗೆ ನಿರ್ವಹಿಸಲು ಕೊಟ್ಟಿದ್ದೇವೆ ಸುಸೂತ್ರವಾಗಿ ನೆಡೆಸಿರೆಂದು ಸವಿ ಆಶಯ ನೀಡುತ್ತಲಿದ್ದಂತೆ ಶುಕ್ರವಾರದ ಸಂಜೆ ರಾತ್ರಿ ೧೦ ಗಂಟೆಯಾಗಿ ಬೊಂಬಾಟ್ ಬೋಜನದತ್ತ ಮನ ಸೆಳೆದಿತ್ತು....


೨೦೧೦ದ ವರ್ಷ ವಿಭಿನ್ನ ಶೈಲಿಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ನೀಡಿ. ಕುವೈತ್ ಕನ್ನಡ ಕೂಟದ ಸದಸ್ಯರೆಲ್ಲರ ಮನ ತಣಿಸಿದ್ದಾರೆ. ಅವರಿಗೆ ಬೀಳ್ಕೊಡುಗೆ ಧನ್ಯವಾದಗಳನ್ನು ನೀಡುತ್ತೇವೆ. ಅಂತೆಯೇ ನಾಗರಾಜ್ ಸುಬ್ಬರಾವ್ ಅವರ ಸಾರಥ್ಯದಲ್ಲಿ ೨೦೧೧ ರ ವರ್ಷ ಪ್ರಾರಂಭವಾಗಿದೆ ಅವರೂ ಸಹ ಕನ್ನಡ ಸಂಸ್ಕೃತಿ, ಕಲೆ ಎಲ್ಲದರ ಪ್ರತೀಕವಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುತ್ತಾರೆಂಬ ಆಶಯದಿ ಶುಭಾಶಯಗಳನ್ನು ಕೋರುತ್ತೇವೆ.


ಸಂಜೆಯ ಸಂಗೀತ, ಪ್ರೀತಿಯ ಕಾಣಿಕೆ, ಹೊಸತನ, ಸಮಿತಿ ನೇಮಕಾತಿ ಎಲ್ಲವನ್ನು ಆನಂದಿಸಿದೆವು. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ನಿಮಗೆಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.

http://picasaweb.google.com/kushal19800/KannadaKootaAGM2011?authkey=Gv1sRgCOjzzeHuzpG6xAE&feat=email# - ಮತ್ತಷ್ಟು ಫೋಟೋಗಳು