
ಧೀಕ್ಷಳ ಮದುವೆಯಾಗಿದ್ದೆ ತಂದೆ ಮಹದೇವ್ ತನ್ನ ಕೆಲಸದಲ್ಲಿ ಏನೋ ಬಲ ಕಳೆದುಕೊಂಡಂತ ಭಾವನೆ, ಜಾಣೆ ಮಗಳು ತಮ್ಮ ಕೆಲಸಕ್ಕೆ ನೆರವಾಗುತ್ತಾಳೆಂದರೆ ಯಾರಿಗೆ ತಾನೆ ಖುಷಿಯಿಲ್ಲ ಹೇಳಿ. ಹಿರಿಯರೆಲ್ಲ ಒಪ್ಪಿ ಮಾಡಿದ ಮದುವೆ, ದೀಕ್ಷಳಿಗೆ ಹೊಸ ಮನೆ, ಹೊಸ ಜನ ಹೊಂದಿಕೊಳ್ಳುವುದು ಬಹಳ ಕಷ್ಟವೇ ಆಗಿತ್ತು ಆದರೂ ವಿದ್ಯಾವಂತೆಯಾದ ದೀಕ್ಷ ಎಲ್ಲವನ್ನು ನಿಭಾಯಿಸುವಷ್ಟು ಸಾಮರ್ಥ್ಯ ಹೊಂದಿದ್ದಳು.
----*-----
ಇನ್ನು ಇಲ್ಲಿ ಅಣ್ಣ-ತಂಗಿ (ಕ್ಷಮ-ರಾಜೀವ್) ಇಬ್ಬರು ತಮ್ಮ ವಿದ್ಯೆಯಲ್ಲಿ ಮುಳುಗಿ ತಮ್ಮದೇ ಜೀವನ ಶೈಲಿಯನ್ನು ರೂಡಿಸಿಕೊಳ್ಳುತ್ತಾರೆ. ೮ನೇ ತರಗತಿ ಮುಗಿಸಿ ೯ಕ್ಕೆ ಕಾಲಿಟ್ಟ ಕ್ಷಮ ತನ್ನ ತಂದೆತಾಯಿಯೊಟ್ಟಿಗೆ ಕಾಲ ಕಳೆದು ಅವರ ಪ್ರೀತಿ ಪಾತ್ರಳಾಗಿ ವಿದ್ಯೆಯಲ್ಲಿ ಎಲ್ಲದರಲ್ಲೂ ಮುಂದಿರುತ್ತಾಳೆ. ಕ್ಷಮಳ ಗುಣ,ರೂಪ,ವಿದ್ಯೆ ಎಲ್ಲದರಲ್ಲೂ ಹೆಚ್ಚು, ಅವಳ ರೂಪವೂ ಅಷ್ಟೆ ಎಲ್ಲರ ಕಣ್ಣು ಕುಕ್ಕುವಂತಹದು.
ಒಮ್ಮೆ ಅಪ್ಪನೊಟ್ಟಿಗೆ ಕೆಲಸ ಮಾಡುತ್ತಲಿದ್ದವನೊಟ್ಟಿಗೆ ಅವನ ಸ್ನೇಹಿತ ಸಂಕೇತ್ ಇವರ ಮನೆಗೆ ಬಂದಾಗ ಕ್ಷಮಳನ್ನು ಕಂಡು ಸಂಕೇತನಲ್ಲೇನೊ ಹೊಸ ಭಾವ, ಹೊಸ ಚೈತನ್ಯದಿ ಅವಳ ರೂಪಕ್ಕೆ ಮಾರುಹೋಗುತ್ತಾನೆ. ಹಲವು ದಿನಗಳ ನಂತರ ಅವಳಿಗೊಂದು ಪತ್ರ ಬರೆದು ಸ್ನೇಹಿತನೊಟ್ಟಿಗೆ ಕಳಿಸುತ್ತಾನೆ. ಆ ಪತ್ರವನ್ನು ಕ್ಷಮಳಿಗೆ ತಲುಪಿಸಿ ನಿನ್ನ ನಿರ್ಧಾರಕ್ಕಾಗಿ ಕಾಯುತ್ತಲಿರುತ್ತಾನೆಂದೇಳಿ ಹೊರಡುತ್ತಾನೆ. ಕ್ಷಮಳಿಗೆ ಮನದಲ್ಲೇ ಗೊಂದಲ ಸಂಕೇತ್ ಆಗಲೇ ಸ್ವಂತ ಬಿಸಿನೆಸ್ ಮಾಡುತ್ತಲಿರುತ್ತಾನೆ. ಅವನು ಹಿಂದೂ, ನಾನು ಕ್ರಿಸ್ಟಿಯನ್ ಎಂದು ನೂರೆಂಟು ಪ್ರಶ್ನೆಗಳನ್ನು ತನ್ನಲ್ಲೇ ಸೃಷ್ಟಿಸಿಕೊಳ್ಳುತ್ತಾಳೆ. ಆದರೂ ಕೊನೆಗೆ ಧೈರ್ಯ ಮಾಡಿ ಸಂಕೇತನನ್ನು ಭೇಟಿ ಮಾಡಲು ತೆರಳುತ್ತಾಳೆ, ಇವಳ ಬರುವಿಕೆ ಕಂಡ ಸಂಕೇತ್ ತನ್ನ ಮನಕ್ಕೆ ಪ್ರಶ್ನೆಗಳ ಸುರಿಮಳೆಗಯ್ಯುತ್ತಾನೆ. ನನ್ನ ಮೆಚ್ಚಿ ಬರುತಿಹಳೆ, ಬಯ್ಯಲೆ, ಮಾತನಾಡಲೆ ಅಥವಾ ಮನೆಯವರಿಗೆ ಎಂಬ ಗೊಂದಲದಿ ಮೂಡಿರುವಾಗಲೆ ಅವಳು ಅವನೆದುರು ಪ್ರತ್ಯಕ್ಷಳಾಗುತ್ತಾಳೆ.
ಎದುರುಬದುರಾದ ಕಣ್ಣುಗಳಿಗೆ ಅದೇನೊ ಸಲಿಗೆ, ಮಾತಿಲ್ಲ, ಮೌನದ ಮಳೆಗರೆದಿದೆ, ತುಟಿಗಳ ಕಂಪನವಿಲ್ಲ ಕಣ್ಣುಗಳು ಸೂಕ್ಷಮದಲ್ಲೆ ಉತ್ತರ, ಇಬ್ಬರಲ್ಲೂ ಯಾರು ತುಟಿ ಎರಡುಮಾಡಲಿಲ್ಲ. ಈ ಮೌನ ಮುರಿವವರು ಯಾರಿಲ್ಲ.....!! ತಡೆಯದೆ ಸಂಕೇತನೆ ಮೌನ ಮುರಿದು ಮಾತಿಗೆಳೆಯುತ್ತಾನೆ. ಇತ್ತ ಕ್ಷಮ ಅವನ ಪ್ರೇಮ ಪತ್ರಕ್ಕೆ ಕಣ್ಣಲ್ಲೆ ಉತ್ತರಿಸಿದಳಾದರೂ ಮತ್ತೆ ಸವಿದುಟಿಯ ಓರಣದಲ್ಲಿ ಪ್ರೀತಿಯ ಊರಣವನ್ನು ಅವನ ಕಿವಿಗೆ ಮುಟ್ಟಿಸುತ್ತಾಳೆ. ಅವಳ ಪ್ರೇಮದ ಸಹಿ ಚಿನ್ಹೆ ಮೂಡಿದೊಡನೆ ಸಂಕೇತನಿಗೆಲ್ಲಿಲ್ಲದ ಸಂತಸ. ಇವಳಿನ್ನು ೯ನೇ ತರಗತಿ ಅವನಾಗಲೇ ವಿದ್ಯೆಗೆ ತಿಲಾಂಜಲಿಯನಿಟ್ಟು ಯಾವುದೊ ಕೆಲಸದಲ್ಲಿ ತೊಡಗಿರುವನು ಆದರು ಯಾವುದೆ ಹಂಗಿಲ್ಲದೆ ಪ್ರೇಮಕ್ಕೆ ಬೀಳುತ್ತಾರೆ. ಮನಸಿನ ಸಲಿಗೆ ಇವರಿಬ್ಬರ ಒಲವಿಗೆ ಮಾರುಹೋಗುತ್ತಾರೆ ಕ್ಷಮಳಿನ್ನು ಎಸ್.ಎಸ್.ಎಲ್.ಸಿ ದಾಟಿರುವುದೆ ಇಲ್ಲ ಆ ವಯಸ್ಸಿಗಾಗಲೇ ಪ್ರೇಮ ಚಿಗುರಿ ರಾಗವಾಡುತ್ತಲಿರುತ್ತದೆ. ತಾನು ಮಾಡುವುದು ಸರಿಯೋ ತಪ್ಪೋ ಎಂಬ ಗ್ರಹಿಕೆ ಕೂಡ ಅವಳತ್ತ ಬರುವುದಿಲ್ಲ. ಒಲವಿನ ಹಸಿ ಚಿಗುರು ಪಳ ಪಳ ಹೊಳಪನ್ನೆ ನೀಡುತ್ತಲಿದೆ ಅವರಿಬ್ಬರು ಪ್ರೇಮದಲ್ಲಿ ತನ್ಮಯರಾಗಿದ್ದಾರೆ. ಕುಸುಮಕೋಮಲೆಯ ಪ್ರೇಮ ಜಗತ್ತು ಅರಿವಿಲ್ಲದೆ ಸಾಗಿದೆ.
----*----
ಅತ್ತ ಬರಬರುತ್ತ ಅಕ್ಕ ದೀಕ್ಷಳ ಅತ್ತೆ ಮನೆಯ ವಾತಾವರಣಕ್ಕೆ ಒಲಿದರೂ ಮನಸು ಏಕೋ ಕಸಿವಿಸಿಯಲ್ಲಿ ಮುಳಿಗಿತ್ತು, ಕಾರಣ ಸಾಕು ತಂದೆ ತಾಯಿಯವರ ಹೆಸರು ಬದಲಾವಣೆ ಆಚಾರ ವಿಚಾರಗಳ ನಡೆ ನುಡಿ, ಎಲ್ಲ ಹೊಸ ಸಂಬಂಧಗಳಿಗೆ ಬರೆ ಎಳೆದಂತಾಗಿತ್ತು. ಅತ್ತೆ ಮಾವ ಜೊತೆಗೆ ಗಂಡ ಕೂಡ ಮಾತು ಮಾತಿಗೂ ಮೂದಲಿಸುತ್ತಿದ್ದರು. ದೀಕ್ಷಳದು ಒಂದೇ ಮಾತು ಅವರಿಷ್ಟ ಬಂದಾಗೆ ಅವರಿರುತ್ತಾರೆ, ಅವರ್ಯಾರು ನಮ್ಮೊಟ್ಟಿಗೆ ಸಂಸಾರ ಮಾಡುತ್ತಿಲ್ಲ. ನಾನು ನಿಮ್ಮೊಟ್ಟಿಗಿರುವುದು ನನ್ನ ನಡೆ-ನುಡಿ, ಹಾವ-ಭಾವಗಳಲ್ಲೇನಾದರೂ ಕೊರತೆಯಿದ್ದರೆ ಅದನ್ನು ತಿದ್ದುಕೊಳ್ಳುವೆ. ಅನ್ಯತಾ ನನ್ನ ಅಪ್ಪ-ಅಮ್ಮ ಅವರ ಸಂಸಾರದ ಬಗ್ಗೆ ಯಾವ ತರ್ಕವೂ ಬೇಡವೆಂದು ವಾದಿಸುತ್ತಲಿದ್ದಳು. ಆದರೆ ಈ ಮಾತು ಇವರುಗಳಿಗಾರಿಗೂ ಹಿಡಿಸುತ್ತಲಿರಲಿಲ್ಲ. ತನ್ನ ಸ್ವಂತ ತಂದೆತಾಯಿ ಇಲ್ಲದ ಕಾರಣ ಸಾಕಿದ ತಂದೆ ತಾಯಿಯರೇ ನನಗೆಲ್ಲ ಎಂದು ಭಾವಿಸಿದ್ದಳು. ಅತ್ತೆ ಮನೆಯಲ್ಲಿ ನೆಡೆಯುವ ಮಾತುಕತೆ ಯಾವ ವಿಚಾರವನ್ನೂ ಯಾರ ಮುಂದಿಡುತ್ತಿರಲಿಲ್ಲ, ತಾಯಿ ಮನೆಗೆ ಹೊಸದರಲ್ಲಿ ಅದೇನೋ ಹೇಳುತ್ತಾರಲ್ಲ "ಹೊಸ ಬಿರೆದರಲ್ಲಿ ಅಗಸ ಎತ್ತಿ ಎತ್ತಿ ಸೆಣೆದ" ಎಂಬಂತೆ ಗಂಡ ಹೀಗೆಯೆ ನೋಡಿಕೊಳ್ಳುವನೇನೋ ಎಂಬಂತೆ ತಿಂಗಳಿಗೊಮ್ಮೆ ದೂರದೂರಿಂದ ತಂದೆತಾಯಿಯ ನೋಡಲು ಅವರೊಂದಿಗೆ ಬೆರೆಯಲು ಯಾವ ಕೊರೆತೆಯೂ ಬಾರದಂತೆ ಕರೆತರುತ್ತಲಿದ್ದ, ಇತ್ತ ತಂದೆತಾಯಿ ಕೂಡ ಅವರ ಭಾಂದವ್ಯ ನೋಡಿ ಖುಷಿ ಜೊತೆಗೆ ಯಾವ ಅನುಮಾನವೂ ಬಾರದಂತೆ ಮಗಳ ವರ್ತನೆ ಅವಳ ಒಳ ಮನಸಿನ ದುಗುಡ ಮೇಲ್ನೋಟಕೆ ಕಾಣಲೇ ಇಲ್ಲ. ಬರಬರುತ್ತ
ದೀಕ್ಷ ತನ್ನ ಬೇಸರವನ್ನು ಕಳೆಯಲು ಕೆಲಸಕ್ಕೆ ಸೇರಬಯಸುತ್ತಾಳೆ ಇಷ್ಟೆಲ್ಲಾ ಓದಿ ವ್ಯರ್ಥವಾಗುತ್ತದೆಂದು ಭಾವಿಸಿ ಗಂಡ,ಅತ್ತೆಮಾವನ ಅಭಿಪ್ರಾಯ ಕೇಳುತ್ತಾಳಾದರೂ ಯಾರೂಬ್ಬರೂ ಒಪ್ಪದೆ ನೀ ಹೊರಗಿಂದ ತರುವ ದುಡ್ಡಿಗಾಗಿ ನಾವಾರು ಕಾದು ಕುಳಿತಿಲ್ಲ. ನೀನು ಮನೆಯನ್ನು ನಿಭಾಯಿಸಿದರೆ ಸಾಕೆಂದು ಹೇಳುತ್ತಾರೆ.
ದೀಕ್ಷ ಅಷ್ಟೆಲ್ಲಾ ಓದಿ, ದೇಶ ಸುತ್ತಿ ಬಂದರೂ, ಹೊಸ ಮನೆಗೆ ಬಂದೊಡನೆ ತನ್ನ ಸ್ವಾತಂತ್ರವನ್ನೆ ಕಳೆದುಕೊಳ್ಳುತ್ತಾಳೆ. ಈ ಆಘಾತ ಬರಿಸಲಾಗದೆ ಮಾನಸಿಕವಾಗಿ ಕುಗ್ಗಿ ಬಿಡುತ್ತಾಳೆ.
ಇವೆಲ್ಲರ ಮಧ್ಯೆ ದೀಕ್ಷ ಅಮ್ಮನ ಮನೆಗೆ ಬರುವುದೇ ಕಡಿಮೆಯಾಗಿ ಬಿಡುತ್ತದೆ. ದೀಕ್ಷ ಏಕೋ ಇತ್ತೀಚೆಗೆ ಬೆಂಗಳೂರಿಗೆ ಬರುತ್ತಿಲ್ಲ, ಒಂದು ಫೋನ್ ಕರೆಯು ಇಲ್ಲ ಎಂಬ ತಳಮಳ ಮಹದೇವ್ ಅವರ ಮನದಲ್ಲಿ, ಒಮ್ಮೆ ನೋಡಿ ಬರೋಣವೆಂದು ಯಾರಿಗೂ ಹೇಳದೆ ಮಗಳ ಮನೆಯತ್ತ ಹೊರಡುತ್ತಾರೆ. ಅಂದು ಮುಸಂಜೆ ಮನೆಯಲ್ಲಿ ಎಲ್ಲರು ಇರುತ್ತಾರೆ ಇನ್ನೇನು ತಂದೆ ಮನೆಯ ಗೇಟ್ ತೆರೆಯಬೇಕು ಅಷ್ಟರಲ್ಲಿ ಏನೋ ಅಸ್ಪಸ್ಟ ಮಾತುಗಳು ಕೇಳುತ್ತದೆ. ಆ ಮಾತಲ್ಲಿ ಮಹದೇವರ ಹೆಸರೆ ಹೆಚ್ಚು ಕೇಳುತ್ತಲಿರುತ್ತದೆ. ಅದ ತಿಳಿದು ಮರೆಯಲ್ಲೆ ನಿಂತು ಅಲ್ಲಿ ನೆಡೆವ ಮಾತುಕತೆಗಳತ್ತ ಕಿವಿಮಾಡುತ್ತಾರೆ. ಒಳಗೆ ದೀಕ್ಷಳ ಮೂರ್ತಭಾವ ಒಂದೆಡೆ ಗಂಡ, ಮತ್ತೊಂದೆಡೆ ಅತ್ತೆ ಮಾವ ಮೂದಲಿಸುತ್ತಲಿರುತ್ತಾರೆ, ನಿನ್ನ ಸೊಸೆಯಾಗಿ ಮಾಡಿಕೊಳ್ಳ ಬಾರದಿತ್ತು. ಇರುವ ಜಾತಿ ಬಿಟ್ಟು ಬೇರೊಂದು ಜಾತಿಯ ಹೆಸರಿಟ್ಟುಕೊಂಡು ಬಾಳುವ ನಿಮ್ಮಪ್ಪನ ಮನೆಯಿಂದ ನಮಗೆ ಅಕ್ಕಪಕ್ಕದವರಿಂದ ಅವಮಾನ, ನೆಂಟರಿಷ್ಟರೆಲ್ಲರೂ ಕೇಳುತ್ತಾರೆ, ಎಂದಾಗ ನಿಮಗೇನು ನಾ ಮೊದಲೇ ಹೇಳಿದ್ದೇನೆ, ಅವರು ನಿಮ್ಮೊಟ್ಟಿಗಿಲ್ಲ ನಾನಿಮ್ಮವಳು ನನ್ನದೇನೆ ತಪ್ಪಿದ್ದರು ನನಗೇಳಿ ಅದು ಸರಿಪಡಿಸುವೆ ಬೇರೇನು ಹುಡುಕುವುದು ಬೇಡ ಮದುವೆ ಮುಂಚೆ ನಿಮ್ಮೆಲ್ಲರಿಗು ನನ್ನ ಅಪ್ಪ ಹೇಳೆ ಮದುವೆ ಮಾಡಿದ್ದು. ಈಗ ಇಲ್ಲದಿರುವ ತಪ್ಪನ್ನುಡುಕದೆ ಸಂಸಾರದಲ್ಲಿ ಕಹಿಯನ್ನು ಹಿಂಡಬೇಡಿ. ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. ಅಲ್ಲೇ ಇದ್ದ ಅಪ್ಪನಿಗೆ ಮಗಳ ಮೇಲೆ ಅತಿ ಗೌರವ, ಪ್ರೀತಿ ಹೆಚ್ಚಾಗುತ್ತದೆ. ಒಳಗೆ ಇದೇ ವಿಷಯಕ್ಕೆ ಗಂಡ, ಅಮ್ಮ-ಅಪ್ಪನಿಗೆ ತಿರುಗಿ ಮಾತನಾಡುತ್ತಾಳೆಂಬ ಕೋಪಕ್ಕೆ ಕಪ್ಪಾಳ ಮೋಕ್ಷವೂ ಆಗುತ್ತೆ, ಅದು ಸಹಿಸದ ಅಪ್ಪ ಒಳ ಹೋಗದೆ ಸದ್ದಿಲ್ಲದೆ ಮನೆಕಡೆ ಹೊರಡುತ್ತಾರೆ. ಅಲ್ಲಿ ನೆಡೆದ ಘಟನೆ ಯಾರಲ್ಲೂ ಬಾಯಿಬಿಡದೆ ಅಪ್ಪನ ಮನದಲ್ಲೇನೋ ತಳಮಳ ಮಗಳ ಬಾಳು ಸಣ್ಣ ಪುಟ್ಟ ವಿಷಯಕ್ಕಾಗಿ ಎಲ್ಲಿ ಎಲ್ಲೇ ಮೀರಿ ಸಾಗುವುದೋ ಎಂಬ ಭಯ ಕಾತ್ರಿಯಾಗಿ ಬಿಡುತ್ತದೆ.
ಒಮ್ಮೆ ಮಗಳಲ್ಲಿ ಫೋನಾಯಿಸಿ ಮಾತನಾಡಬೇಕೆಂದು ಅಪ್ಪ ಕರೆಯ ಮಾಡುತ್ತಾರೆ. ಅತ್ತ ಮಗಳು ದೀಕ್ಷಗಳ ಧನಿ ಹಲೋ ಎಂದ ಕೂಡಲೆ ಅದೇನೊ ಭಾವನೆ, ದುಗುಡ, ಮುದ್ದು ಮೊಗದ ಮಗಳ ನೆನಪು ಮಾತನಾಡಲಾಗದೆ, ಹಾಗೆ ಧನಿಯನ್ನೇ ಆಲಿಸುತ್ತಲಿರುತ್ತಾರೆ. ಆಕಡೆಯಿಂದ ಜೋರಾಗಿ ಯಾರೆಂದು ಕೂಗಿದಕೂಡಲೆ ಎಚ್ಚೆತ್ತ ಅಪ್ಪ. ಮಗಳೆ ದೀಕ್ಷು ನಾನು ನಿನ್ನಪ್ಪ, ಎಂದಾಗ ದೀಕ್ಷಳಿಗೆ ಅಪ್ಪಾಜಿ ನೀವಾ ಯಾಕೆ ಮಾತನಾಡಲು ಇಷ್ಟು ತಡಮಾಡಿದಿರಿ, ಇಲ್ಲ ಮಗಳೆ ಲೈನ್ ನಲ್ಲೇನೋ ತೊಂದರೆ ಇರಬೇಕು ನಾನು ಹಲೋ ಎನ್ನುತ್ತಲಿದ್ದೆ ನಿನಗೆ ಕೇಳಲಿಲ್ಲವೆನಿಸುತ್ತೆಂದು ಸುಳ್ಳು ಹೇಳಿದ. ಮಗಳೆ ಹೇಗಿದ್ದಿ ಯಾಕೆ ಬರಲಿಲ್ಲ, ಈ ಬಡಪಾಯಿ ಅಪ್ಪನ ನೆನಪಾಗಲಿಲ್ಲವೇ, ಎಂದದ್ದೇ ತಡ ಯಾಕಪ್ಪ ಹೀಗೇಳುತ್ತಿ ನಿನ್ನ ನೆನಪು ಸದಾ ನನ್ನಲಿಯೇ ಇರುತ್ತಪ್ಪ. ನನ್ನನ್ನು ಅಷ್ಟು ಕುಸುಮ ಕೋಮಲವಾಗಿ ಸಾಕಿ ಬೆಳೆಸಿದ ನಿನ್ನನ್ನು ನಾ ಮರೆಯಲು ಸಾಧ್ಯವಿಲ್ಲ, ಹೀಗೆ ಮನೆಯಲ್ಲಿ ಕೆಲಸದೊತ್ತಡದಲ್ಲಿ ಬರಲಾಗಲಿಲ್ಲ ಖಂಡಿತ ಬರುವೆನಪ್ಪ. ಮಗಳ ಈ ಮಾತು ಅಪ್ಪನ ಮನಸಿಗೆ ಕ್ಷಣ ಮಾತ್ರದಲ್ಲಿ ಸಂತಸ ತಂದಿತಾದರೂ ಒಳಗೊಳಗೆ ನೋವು ಇತ್ತು. ಕೇಳಬೇಕು ಅಂದು ನೆಡೆದ ವಿಚಾರವೆಂದುಕೊಂಡವರು ಧೈರ್ಯಮಾಡಲಿಲ್ಲ. ಮಗಳೇ ನಿನ್ನೊಟ್ಟಿಗೆ ಒಂದೆರಡು ದಿನ ಕಳೆಯುವಾಸೆ ಬರುವೆಯಾ ನಾನು ನಿಮ್ಮ ಮನೆಯಲ್ಲಿ ಮಾತನಾಡುವೆಯೆಂದು ಕೇಳುತ್ತಾರೆ. ಆಗಲಿ ಅಪ್ಪ ಬರುವೆ ನಾನೇ ಮನೆಯವರಿಗೇಳಿ ಬರುವೆ ನೀನೇನು ಕೇಳುವುದು ಬೇಡವೆಂದಳು.
ಅಪ್ಪನ ಕರೆ ಬಂದೊಡನೆ ಅತ್ತ ಮನಸು ಸದಾ ಎಳೆಯುತ್ತಲಿತ್ತು ಈ ವಿಷಯವೆತ್ತಿದರೆ ಮನೆಯಲ್ಲಿ ಮತ್ತಾವ ರಾಧಾಂತವಾಗುತ್ತೋ ಎಂಬ ಯೋಚನೆ, ಅವರು ಕರೆದಿಲ್ಲ ನಿನಗೇನು ಅಲ್ಲಿ ಹೋಗುವ ಹುಚ್ಚು ಎಂದರೆ, ಅವರೇನು ಕರೆಯುವುದು ಅದು ನಾ ಆಡಿಬೆಳೆದದ್ದು ನನಗೂ ನನ್ನದೆಂಬ ಆಸೆ ಇರುವುದಿಲ್ಲವೇ ಎಂಬ ಒಣ ಧೈರ್ಯ ಮಾಡಿ ಗಂಡನಲ್ಲಿ ಕೇಳಿಯೆ ಬಿಡುತ್ತಾಳೆ, ನಾನು ಬರುವ ಶನಿವಾರ ನಮ್ಮ ಅಪ್ಪನ ಮನೆಗೆ ಹೋಗಿ ಬರುವೆ ಎಂದ ಕೂಡಲೆ, ಅವಳ ಗಂಡ, ನಿಮ್ಮಪ್ಪನ ಮನೆಯಾವುದು ಇಲ್ಲ. ಇದೆ ಎಲ್ಲ ನಿನಗೆ ಅಲ್ಲಿ ಹೋಗುವುದು ಬೇಡ. ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಾನೆ, ಅತ್ತೆಯಲ್ಲೊಮ್ಮೆ ಕೇಳಿದರೇನಾದರು ಉಪಯೋಗವೆಂದು ಅಲ್ಲಿಯೂ ಅದೇ ಉತ್ತರ ಬರುತ್ತದೆ ಮನಸು ತಾಳಲಾರದೆ ಇಲ್ಲ ನಾನು ಹೋಗಲೇ ಬೇಕೆಂದು ಹಟವಿಡಿಯುತ್ತಾಳೆ. ಜೊತೆಗೆ ಶನಿವಾರದಂದು ತಯಾರಾಗಿ ಕುಳಿತುಬಿಡುತ್ತಾಳೆ. ಇಷ್ಟು ಹಟವಾಗಿ ಹೊರಟಿರುವ ನೀನು ಹೋದರೆ ಅತ್ತಲೇ ಹೋಗು ಬರಕೂಡದೆಂದು ಕಟ್ಟುನಿಟ್ಟಾಗಿ ಹೇಳಿ ಕಳಿಸುತ್ತಾರೆ. ಏನೋ ಹೇಳಿದ್ದಾರೆ ಬಂದಮೇಲೆ ಸರಿಹೋಗುವುದೆಂದು ಮನಸಿನಲ್ಲೇ ಒಣ ಧೈರ್ಯ ಮಾಡಿ ಅಪ್ಪನ ಮನೆಗೆ ಹೊರಡುತ್ತಾಳೆ.
ಮುಂದುವರಿವುದು.....