ಬಿಸಿಲ ಬಿಸಿ ಮುಗಿದು ತಣ್ಣನೆ ತಂಗಾಳಿ ಬೀಸುತ್ತಿರುವ ಸಮಯ ಉಸುಕಿನ ನಗರಿಯಲ್ಲಿ..... ಇದೇ ಶುಕ್ರವಾರ 12-11-10 ರಂದು ಸಂಜೆ ಅದೇ ತಂಪು ಗಾಳಿಯನ್ನು ವಿಹರಿಸುತ್ತ ಸಂಜೆ ಸುಮಾರು 3 ಗಂಟೆಗಾಗಲೇ ಜನಗಳ ಹಿಂಡು ಸಾಲುಸಾಲಾಗಿ ರಂಗು ರಂಗಿನ ರೇಷ್ಮೆ ಸೀರೆ ತೊಟ್ಟ ಹೆಂಗಳೆಯರು ಅವರ ಜೊತೆ ಸಾಥ್ ನೀಡಿದ್ದ ಗಂಡಸರು ನಗು ಮೊಗದಿ ಲಘುಬಗೆಯಲಿ ಅಮ್ಮ ಅಪ್ಪನ ಕೈ ಹಿಡಿದು ಮುನ್ನುಗ್ಗಿತ್ತಿದ್ದ ಪುಟ್ಟ ಚೇತನಗಳು ಬರುತ್ತಲೇ ಹವಲ್ಲಿಯಲ್ಲಿನ ಅಮೇರಿಕನ್ ಇಂಟರ್ನ್ಯಾಷನಲ್ ಶಾಲೆಯ ಸಭಾಂಗಣಕ್ಕೆ ಮೆರುಗು ನೀಡಿದರು....
ಅತ್ತ ಜನಜಂಗುಳಿ ನೆರೆಯುತ್ತಲಿದ್ದಂತೆ ಇತ್ತ ಭಾರತ ದೇಶದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಲಿರುವ ಅಜಯ್ ಮಲ್ಹೋತ್ರ ಮತ್ತು ಅವರ ಪತ್ನಿಯೊಂದಿಗೆ ಬರುತ್ತಲಿದ್ದಂತೆ ಅನಿವಾಸಿ ಭಾರತೀಯರ, ಕರ್ನಾಟಕ ಉಪಾಧ್ಯಕ್ಷರಾದಂತ ಕ್ಯಾ. ಗಣೇಶ್ ಕಾರ್ಣಿಕ್ ಇವರೆಲ್ಲರೂ ವೇದಿಕೆಯನ್ನು ಅಲಂಕರಿಸುತ್ತಲಿದ್ದಂತೆ ಕೂಟದ ಪುಟ್ಟ ಮಕ್ಕಳಿಂದ ಎಲ್ಲಾದರು ಇರು ಎಂತಾದರು ಇರು ಹಾಡಿನ ರೂಪಕದಿ ಆರಂಭಿಸಿದರು. ಗಣ್ಯರು ವೇದಿಕೆಗೆ ದೀವಿಗೆಯ ಶಕ್ತಿ ನೀಡಿ, ಕೂಟದ ಪತ್ರಿಕೆಯಾದ ಮರಳಮಲ್ಲಿಗೆ ಮತ್ತು ನೆನಪಿನ ಸಂಚಿಕೆಯನ್ನು ಬಿಡುಗಡೆ ಮಾಡಿದ ನಂತರ ಕೂಟದ ಬೆಳ್ಳಿ ಹಬ್ಬದ ನೆನಪಿಗಾಗಿ ಸಂಗ್ರಹಿಸಿದ್ದ ದೇಣಿಗೆಯನ್ನು ಬೆಂಗಳೂರಿನ ಅರುಣ ಚೇತನ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು. ವೇದಿಕೆಯಲ್ಲಿ ನಿಂತು ಹಲವು ಅನಿಸಿಕಾಲಹರಿಗಳನ್ನು ನಮ್ಮೊಟ್ಟಿಗೆ ಹಂಚಿಕೊಂಡು ಮುಂದಿನ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಟ್ಟರು.....
ಇಲ್ಲೇ ನೋಡಿ ಬದಲಾವಣೆಯ ಹಾದಿ ಹಿಡಿದಿದ್ದು.... ನಾವೆಲ್ಲ ಕುವೈತಿನಲ್ಲಿದ್ದೀವಿ ಇಲ್ಲಿನ ಜನರೇ ಆಗಮಿಸಿ ಮರುಭೂಮಿಯ ವಾಸನೆಯಲ್ಲೇ ಇರುವೆವು ಎಂದುಕೊಳ್ಳುತ್ತಲಿದ್ದಂತೆ ಒಂದೇ ಭಾರಿಗೆ ಕಡಲನ್ನು ದಾಟಿ ಹಂಪಿ ನಗರಕ್ಕೆ ಇಳಿದುಬಿಟ್ಟಂತಾಯಿತು..........
ಮರುಭೂಮಿಯಿಂದ ಹಂಪಿ ವೈಭವಕ್ಕೆ ತೆರಳಲು ಪರಿಕಲ್ಪಿಸಿದ್ದು ಶ್ರೀಮತಿ ಕವನ ಹರ್ಷ ರಾವ್. ಅವರು ನಿರ್ದೇಶಿಸಿದ ರಾಜವೈಭವದಲ್ಲಿ ನಾವಂತು ಮಿಂದೆವು........
ಆ ಮುಸಂಜೆಯ ನೇಸರನೂ ನಾಚುವಂತೆ ಹಂಪಿಯ ನಗರಿ ಸಜ್ಜುಗೊಂಡಿತ್ತು..... ಕರ್ನಾಟಕದ ಇತಿಹಾಸದಲ್ಲಿ ಹಲವಾರು ರಾಜಮನೆತನಗಳು ಹೆಸರು ಮಾಡಿದ್ದಾರೆ ಅದರಲ್ಲಿ ಹಂಪಿಯನ್ನಾಳಿದ ರಾಜಮನೆತನಗಳಿಗೆ ಒಳ್ಳೆಯ ಇತಿಹಾಸವಡಗಿದೆ.... ಪಂಪಾಕ್ಷೇತ್ರ ಉದಯವಾಗುತ್ತಲಿದ್ದಂತೆ ಅಲ್ಲಿನ ಜನರ ಜೀವನ, ನಾಡು ನುಡಿಯ ಸಂಸ್ಕೃತಿ ವೈಭವವನ್ನು ಬಿಂಬಿಸಲು ಮುತ್ತು ರತ್ನದ ವ್ಯಾಪಾರಿಗಳು ಬಂದೇ ಬಿಟ್ಟರು, ಎಂತಹಾ ಪರಿ..!!! ರಾಶಿ ರಾಶಿ ಮುತ್ತುರತ್ನವನ್ನು ಸೇರಿನಲ್ಲಿ ಕೊಂಡುಕೊಳ್ಳುತ್ತಲಿರುವ ಸಾಮಾನ್ಯ ಜನ...... ಓಹ್ ಎಂತಾ ಅದೃಷ್ಟವಂತರು ಅಂದಿನ ಜನ ಎಂದೆನಿಸಿತು........
ಪಂಪಾಕ್ಷೇತ್ರವನ್ನು ಆಳಿದ ಹಕ್ಕಬುಕ್ಕರಿಂದಿಡಿದು ಕೃಷ್ಣದೇವರಾಯನವರೆಗಿನ ಆಳ್ವಿಕೆಯ ಸಾರವನ್ನು ಕೆಲವು ಶಾಡೋ ಮೂಲಕ ಹಾಗೂ ಬಿತ್ತಿಚಿತ್ರಗಳ ಮೂಲಕ ನೆರೆದಿದ್ದವರೆಲ್ಲರಿಗೂ ವೈಭವೋತೀತವಾಗಿ ದೃಶ್ಯ ನಿರೂಪಣೆಯಲ್ಲಿ ನೀಡಿ. ಅತಿ ಹೆಚ್ಚು ಹೆಸರುವಾಸಿಯಾದ, ಕರ್ನಾಟಕ ಇತಿಹಾಸದಲ್ಲಿ ಅಚ್ಚಳೆಯದೆ ಸುವರ್ಣಾಕ್ಷರದಲ್ಲಿ ಬರೆದಿಡುವಂತಾ ನಮ್ಮ ಕರುನಾಡ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಏರಿಸಿದ ಶ್ರೀ ಕೃಷ್ಣದೇವರಾಯನ ಆಳ್ವಿಕೆಯ ಪಕ್ಷಿನೋಟ ವೇದಿಕೆಯಲ್ಲಿ ಅಲಂಕೃತಗೊಳ್ಳುತ್ತಲೇ ಬಂದಿತು..... ಕೃಷ್ಣದೇವರಾಯ ತನ್ನ ಆಳ್ವಿಕಾ ದಿನಗಳಲ್ಲಿ ಆತನ ದೈವ ಭಕ್ತಿ ಬಿಂಬಿಸುವ ನಿಟ್ಟಿನಲ್ಲಿ ಶರಣು ವಿರುಪಾಕ್ಷ ಶಶಿಭೂಷಣ ಹಾಡಿಗೆ ಹೆಂಗಳೆಯರು ಹೆಜ್ಜೆ ನೀಡಿದ್ದೇ ವಿಶೇಷವಾಗಿತ್ತು. ನಂತರ ಕೃಷ್ಣದೇವರಾಯನ ಆಡಳಿತಾವದಿಯಲ್ಲಿ ಜನರ ಜೀವನದೊಟ್ಟಿಗೆ ಅಂದಿನ ಆಟೋಟಗಳಿಗೆ ನೀಡುತ್ತಲಿದ್ದ ಪ್ರಾಶಿಸ್ತ್ಯವನ್ನೂ ಸಹ ಬಿಂಬಿಸಿದ್ದು ನಮ್ಮ ಕೂಟದ ಚಿಣ್ಣರು..... ಹಳ್ಳಿ ಸೊಗಡು ವೇದಿಕೆಯಲ್ಲಿದೆ ನೇಸರ ಉದಯವಾಗುತ್ತಲಿದ್ದಾನೆ ಅಲ್ಲೇ ಪಕ್ಕದಲ್ಲಿ ವ್ಯಾಯಾಮಮಾಡುತ್ತಲಿರುವ ಜನರು, ಇನ್ನು ಕೆಲವರು ಸಂಗೀತಾಭ್ಯಾಸದಲ್ಲಿ ತೊಡಗಿದ್ದಾರೆ, ಅಪ್ಪಾಳೆ ತಿಪ್ಪಳೆಯಾಟದ ಮಕ್ಕಳು, ಕುಂಟೆಬಿಲ್ಲೆ, ಜೂಟಾಟ, ಚಿನ್ನಿದಾಂಡು, ಕಣ್ಣಾಮುಚ್ಚಲೆ, ಪಗಡೆ, ಅಲಗುಣಿ ಮನೆಯಾಟ, ಕುಸ್ತಿ ಹೀಗೆ ಹಲವು ಗ್ರಾಮೀಣ ಆಟಗಳನ್ನು ಮನಸೂರೆಗೊಳ್ಳುವಂತೆ ನಮ್ಮ ಮುಂದಿಟ್ಟರು.....
ಇಷ್ಟೆಲ್ಲಾ ವಿವಿಧತೆಯನ್ನು ಹೊಂದಿದ್ದ ಕೃಷ್ಣದೇವರಾಯನ ಹೆಸರು ಜಗಜಾಹೀರು ಆಗುತ್ತಲಿಂದಂತೆ ಮಹಾರಾಜನ ಗುಣಗಾನ ಎಲ್ಲೆಲ್ಲೂ ಮನೆಮಾಡಿತ್ತು ಪಕ್ಕದ ರಾಜ್ಯದಲ್ಲಿದ್ದ ಹೆಸರಾಂತ ತೆನಾಲಿ ರಾಮನೂ ಸಹ ಕೃಷ್ಣದೇವರಾಯನ ಬಗೆಗೆ ತಿಳಿದು ಗುಣಗಾನ ಮಾಡುವಂತೆ ಪುಟ್ಟದೊಂದು ನಗೆಹೊನಲಿನ ನಾಟಕವನ್ನು ಸಹ ನೀಡಿ ಬಹಳಷ್ಟು ಉತ್ಸುಕತೆಗೆ ಕಾರಣವಾಯಿತು. ಕೃಷ್ಣದೇವರಾಯನ ಆಳ್ವಿಕೆಯಲ್ಲೇ ಪುರಂದರದಾಸರೂ ಸಹ ಇದ್ದಿದ್ದರೆಂದು ಬಿಂಬಿಸುವ ಪರಿಯಲ್ಲಿ ಕಂಡೆನಾ ಗೋವಿಂದನಾ ಹಾಡಿಗೆ ನೃತ್ಯ ರೂಪಕ ಅಹಾ!!! ಹೆಣ್ಣು ನಾಟ್ಯಪ್ರವೀಣೆ ಎಂದು ಬಿಂಬಿಸಿಬಿಟ್ಟರು.......... ಹೀಗೆ ಸುತ್ತಮುತ್ತನ ದೇಶ, ರಾಜ್ಯ, ನಗರದ ವಿವರಣೆಯೊಂದಿಗೆ ಕೃಷ್ಣದೇವರಾಯ ತನ್ನ ಆಳ್ವಿಕೆಯಲ್ಲಿ ಕೃಷ್ಣದೇವರಾಯನ ಮೊದಲ ಆಡಳಿತ ದಿನಗಳಲ್ಲಿ ರಕ್ಷಣಾ ಕಾರ್ಯಕ್ಕೆ ಸೈನ್ಯದ ಅವಶ್ಯಕತೆ ಬಂದಾಗ ಸಾಮಂತರಿಂದ ಸೈನ್ಯದ ತುಕಡಿಗಳನ್ನು ಕ್ರೂಢೀಕರಿಸಲಾಗುತ್ತಿತ್ತು. ಇದರಿಂದಾಗುತ್ತಿದ್ದ ಮಹತ್ವದ ಸಮಯ ನಷ್ಟವನ್ನು ಪರಿಗಣನೆಗೆ ತೆಗೆದುಕೊಂಡು ತನ್ನದೇ ಆದ ಸೈನ್ಯವನ್ನು ಕಟ್ಟಿದನು, ಸ್ತ್ರೀಯರಿಗೂ ಸೈನ್ಯದಲ್ಲಿ ಪ್ರಾಧಾನ್ಯತೆ ಕೊಟ್ಟಿದ್ದು ಕೃಷ್ಣದೇವರಾಯನ ಆಡಳಿತ ವೈಖರಿಗೆ ನಿದರ್ಶನ. ಸೈನ್ಯದಲ್ಲೂ ಸೈನಿಕರ ಹುಮ್ಮಸ್ಸು ಉತ್ಸಾಹಗಳು ಪಡೆಯ ಶಕ್ತಿವರ್ಧಕಗಳಾಗಿದ್ದವು. ಈ ಹುಮ್ಮಸ್ಸಿನ ಸೈನಿಕರನ್ನು ನಿರೂಪಿಸಲು ವೇದಿಕೆಯಲ್ಲೊಂದು ಸೈನಿಕ ನೃತ್ಯ ಬಿಂಬಿತವಾಯಿತು ಕೂಟದ ಮಕ್ಕಳು ಸೈನಿಕ ವೇಷಧಾರಿಗಳಾಗಿ ಹೆಜ್ಜೆಯಾಕುತ್ತ ಕತ್ತಿವರಸೆ, ಯುದ್ಧದ ರೂಪಕದಲ್ಲಿ ನೃತ್ಯಮಾಡಿದ್ದಂತು ನಿಜಕ್ಕೂ ಎದೆ ಝಲ್ ಎಂಬಂತಿತ್ತು..........
ಒಂದೆಡೆ ಸಾಮ್ರಾಜ್ಯ ಸಂಘಟನೆ ಸುಸ್ಥಿರಗೊಳ್ಳುತ್ತಿದ್ದಂತೆ ಬಿಟ್ಟು ಹೋಗಿದ್ದ ಪ್ರದೇಶಗಳನ್ನು ಪುನರ್ವಶ ಮತ್ತು ವಿಸ್ತರಣೆ ಕಾರ್ಯ ಪ್ರಾರಂಭಿಸಿಕೊಳ್ಳುತ್ತಲಿದ್ದ ಸಮಯದಲ್ಲಿ ಬಿಜಾಪುರ ಮತ್ತು ಗುಲ್ಬರ್ಗಗಳನ್ನು ವಶಪಡಿಸಿಕೊಂಡು ನಂತರ ಅವರ ರಾಜ್ಯವನ್ನು ಹಿಂತಿರುಗಿಸಿದ್ದಕ್ಕೆ "ಯವನರಾಜ್ಯಸ್ಥಾಪನಾಚಾರ್ಯ" ಎಂಬ ಬಿರುದು ಗಳಿಸಿ, ರಾಜನಿಗೆ ಮುಸ್ಲಿಂದೊರೆಗಳಿಂದ ಆತಿಥ್ಯ ನೀಡುವ ಪರಿಯಲ್ಲಿ ಖವ್ವಾಲಿ ನೃತ್ಯ ರೂಪಕವನ್ನು ಪುಟ್ಟ ಕಂದಮ್ಮಗಳಾದ ಇನ್ನು ಕೇವಲ ನಾಲ್ಕೈದು ವರ್ಷದ ಮಕ್ಕಳು ನರ್ತಿಸಿದ್ದೇ ವಿಶೇಷವಾಗಿತ್ತು..
ಕೃಷ್ಣದೇವರಾಯ ತನ್ನ ವಿಜಯಯಾತ್ರೆಗಳನ್ನು ಪೂರೈಸಿ ಬಂದ ಸಾಮ್ರಾಟನಿಗೆ ಸಾಮಂತರು, ಮಾಂಡಲೀಕರಲ್ಲದೇ ಬುಡಕಟ್ಟು ಮತ್ತು ಗುಡ್ಡಗಾಡುಜನ ತಮ್ಮ ಸಂತೋಷವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಅಡವಿದೇವಿಯ ಕಾಡು ಜನಗಳ.... ಹಾಡಿಗೆ ಕಾಡು ಜನರಂತೆ ಹೆಜ್ಜೆಹಾಕಿ ವಿಜೃಂಭಿಸಿದರು.
ಕೃಷ್ಣದೇವರಾಯ ಸಾಹಿತ್ಯಾಸಕ್ತಿಯುಳ್ಳವನೆಂದು ಬಿಂಬಿಸಲು ಮತ್ತೊಮ್ಮೆ ತೆನಾಲಿರಾಮ ನಾಟಕ ನಗೆಗಡಿಗೆಯನೊತ್ತು ವೇದಿಕೆಯನ್ನು ಅಲಂಕರಿಸುವುದರೊಂದಿಗೆ ನೆರೆದ ಜನಸ್ತೋಮಕ್ಕೆ ಖುಷಿ ನೀಡಿತು...... ಆಸ್ಥಾನದ ಕವಿಗಳೊಂದಿಗೆ ರಾಜನೇನೋ ಸಂತಸದಿ ಸಾಹಿತ್ಯ ಸಂಗೀತವೆಂದು ಮುಳುಗಿರದೆ ಜನತೆಯಲ್ಲೂ ಹೊಸ ಹುಮ್ಮಸ್ಸನ್ನು ಹುಟ್ಟಿಸಲು ತಾನು ಹಲವು ದೇಶಗಳನ್ನು ಗೆದ್ದು ಬಂದಾಗ ಆಚರಿಸುವ ಮಹಾನವಮಿಯ ಉತ್ಸವದ ವೈಭವಕ್ಕೆ ಸಾಕ್ಷಿಯಾಗುವಂತೆ ಹಬ್ಬ ಹಬ್ಬ..... ಇದು ನಮ್ಮ ಕರುನಾಡ ಹಬ್ಬ ಈ ಹಾಡಿಗೆ ಹೆಜ್ಜೆಯಾಕುತ್ತ ಅಂದಿನ ನವರಾತ್ರಿಯ ಹಬ್ಬ ರಾಷ್ಟ್ರೀಯ ಹಬ್ಬವಾಗಿ ಮನೆಮಂದಿಯೆಲ್ಲ ಆಚರಿಸುವಂತಾದದ್ದನ್ನು ಸಡಗರದಿ ನಮ್ಮೆಲ್ಲರಿಗೆ ತಣಿಸಿದರು.
ಶ್ರೀಕೃಷ್ಣದೇವರಾಯ ತನ್ನ ಆಳ್ವಿಕೆಯಲ್ಲಿ ಪೋರ್ಚುಗೀಸರೊಂದಿಗಿನ ಸಂಬಂಧ, ಅವರೊಟ್ಟಿಗಿನ ಆತ್ಮೀಯತೆಯನ್ನು ಪ್ರತಿಬಿಂಬಿಸಲು ಪೋರ್ಚುಗೀಸ್ ನೃತ್ಯವನ್ನು ನಮ್ಮ ಕೂಟದ ಮಕ್ಕಳು ವಾಹ್..!!! ಸೊಗಸಾಗಿ ನೃತ್ಯದ ಝಲಕ್ ನೀಡಿ ನಮಗೆಲ್ಲರಿಗೂ ಕಣ್ಣ ತಣಿಸಿದರು.
ಕೃಷ್ಣದೇವರಾಯನ ನಗರ ವೈಭವಕ್ಕೆ ಸಾಕ್ಷಿಯಾಗಿ ಹಳ್ಳಿಯ ಸೊಗಡನ್ನು ಬಿಂಬಿಸಲು ನಮ್ಮ ಕೂಟದ ಚಿನ್ನಾರಿಗಳು ಹಳ್ಳಿ ವೇಷಭೂಷಣದಿ ಜಾನಪದ ನವ್ವಾಲೆ ಬಂತಪ್ಪ ನವ್ವಾಲೆ ಮತ್ತು ಮಾತನಾಡಣ್ಣಯ್ಯ ಮಾತನಾಡು... ಹಾಡಿಗೆ ನೃತ್ಯಮಾಡಿ ಚಪ್ಪಾಳೆ ಗಿಟ್ಟಿಸಿದರು....... ಹಳ್ಳಿಯ ಸೊಗಡನ್ನೇನೋ ಕಂಡೆವು ಅಂತೆಯೆ ರಾಜ ತನ್ನ ಎಲ್ಲಾ ಕಾರ್ಯಗಳಲ್ಲಿ ಪೂಜೆ, ಪುನಸ್ಕಾರ, ದಾನ ದತ್ತಿಗಳಲ್ಲೂ ಮೇಲುಗೈ ತನ್ನ ಆರಾಧ್ಯದೈವದಂತೆ ಪೂಜಿಸುವ ತಿರುಪತಿ ವೆಂಕಟೇಶನಿಗೆ ದತ್ತಿಯನ್ನು ನೀಡುತ್ತಲಿದ್ದನೆಂಬುದರ ಪರಿಗೆ ಮನಮೋಹಕ ನೃತ್ಯದ ರೂಪಕವಾಗಿ ತಿರುಪತಿ ಡೋಲೋತ್ಸವ ವೇದಿಕೆಯಲ್ಲಿ ಜರುಗಿತು..... ಈ ಮನಮೋಹಕ ನೃತ್ಯ ನಿಜಕ್ಕೂ ನೆರೆದಿದ್ದವರೆಲ್ಲರ ಕಣ್ ಮನ ತಣಿಸಿದ್ದಂತೂ ಸತ್ಯ.......
ಕೃಷ್ಣದೇವರಾಯ ತನ್ನದೇ ಜಗತ್ತಿನಲ್ಲಿ ಏನೆಲ್ಲಾ ಸಾಧಿಸಿ, ಜನರ ಹೊಗಳಿಕೆಗೆ ಪೂರಕವಾಗಿ ರಾಜ್ಯವನ್ನಾಳಿ ತನ್ನ ಆಳ್ವಿಕೆಯನ್ನು ಸುವರ್ಣಾಕ್ಷರದಲ್ಲಿ ಬರೆದು ಅಚ್ಚಳಿಯದೆ ಹೆಸರುಳಿಸಿದಂತ ರಾಜನಿಗೂ ಕಂಟಕವೊಂದಿದ್ದರಿಂದ ರಾಜಗುರುಗಳಾದ ವ್ಯಾಸತೀರ್ಥರು ಆ ಕಂಟಕ ಗಳಿಗೆ ಕುಹುಯೋಗದ ಸಮಯದಲ್ಲಿ ಮಹಾರಾಜರ ಪಟ್ಟವನ್ನು ಸ್ವೀಕರಿಸಿ, ರಾಜನಿಗೆ ಬಂದೊದಗಿದ ವಿಪತ್ತು ಪರಿಹಾರಮಾಡಿ ನಂತರ ಮಹಾರಾಜನಿಗೆ ಪಟ್ಟಾಭಿಷೇಕ ನೆರೆವೇರಿಸುವ ಚಿತ್ರಣವಂತೂ ವೇದಿಕೆಯಲ್ಲಿ ಸಂಭ್ರಮಿಸಿತ್ತು...
ಆ ರಾಜ ನೆಡಿಗೆ, ಗಾಂಭೀರ್ಯ, ಪಟ್ಟದರಾಣಿಯ ಆತ್ಮಗೌರವ, ಸಂತಸ ಜೊತೆಗೆ ಆಸ್ಥಾನದಲ್ಲಿ ನೆರೆದಿದ್ದ ಅಷ್ಟದಿಗ್ಗಜರು, ಸಾಮಂತರು, ಸೇನಾದಿಪತಿಗಳು, ಊರ ಜನರು ರಾಜನ ಪಟ್ಟಾಭಿಷೇಕದ ಸವಿಯನ್ನು ಸವಿಯಲು ರಾಜನ ಆಸ್ಥಾನವನ್ನು ಸುತ್ತುವರಿದಿದ್ದ ದೃಶ್ಯವಂತು ಅಂದಿನ ಕೃಷ್ಣದೇವರಾಯನ ಪಟ್ಟಭಿಷೇಕವೇ ಮರುಭೂಮಿಯಲ್ಲಿ ಜರುಗುತ್ತಲಿದೆ ಎಂಬ ರೀತಿಯಲ್ಲಿ ಆಗಮಿಸಿದ್ದ ಗಣ್ಯರೆಲ್ಲರೂ ಮಹಾರಾಜನಿಗೆ ಜಯಘೋಷ ಕೂಗುತ್ತಲಿದ್ದರು......... ರಾಜನ ಪಟ್ಟಾಭಿಷೇಕದೊಂದಿಗೆ ಮುಕ್ತಾಯವಾದ ವಿಜಯನಗರದ ವೈಭವದ ಕೊಡುಗೆ ಮನೋಘ್ನವಾಗಿ ಸುಮಾರು ಎರಡು ಗಂಟೆಗಳ ಕಾಲ ಮನ ತಣಿಸಿತು.
ಕೂಟದ ಕಾರ್ಯಕ್ರಮಗಳ ನಂತರ ಮ್ಯಾಜಿಕ್ ಮಾಂತ್ರಿಕರ ಸರದಿ ಚಿಣ್ಣರಿಗೆ ಮನತಣಿಸಿದ್ದಲ್ಲದೇ ದೊಡ್ಡವರಿಗೂ ಮನೋಲ್ಲಾಸವಾಯಿತು. ಸದಾ ಕೆಲಸ ಕಾರ್ಯಗಳ ಜಂಜಾಟದಲ್ಲಿದ್ದ ನಮ್ಮೆಲ್ಲರಿಗೂ, ತಮ್ಮ ಚಾಣಾಕ್ಯ ಶಕ್ತಿಯಿಂದ ಎಲ್ಲರನ್ನು ಮಂತ್ರಮುಗ್ಧ ಮಾಡಿದರು...... ಉದಯ್ ಜಾದೂಗರ್ ಬರಿ ಮ್ಯಾಜಿಕ್ ಮಾಂತ್ರಿಕರೇ ಅಲ್ಲ ಮಾತಿನ ಮಾಂತ್ರಿಕರೂ ಕೂಡ.......... ಸದಾ ನಗುತ್ತಾ ಸುತ್ತಲಿದ್ದವರನ್ನೇಲ್ಲಾ ನಗಿಸುತ್ತಾ..... ಹಾಸ್ಯ ಚಟಾಕಿಗಳನ್ನೂ ಹಾರಿಸುತ್ತಲಿದ್ದರು........ ಮ್ಯಾಜಿಕ್ ನ ನಂತರ ಮಾತನಾಡುವ ಗೊಂಬೆಯೊಂದಿಗೂ ಸರಸ ಸಲ್ಲಾಪದಿ ವಿಶೇಷತೆಯನ್ನು ಮೂಡಿಸಿ ನೆರೆದಿದ್ದವರಿಗೆ ಖುಷಿ ನೀಡಿ ಶ್ಯಾಡೋ ಪ್ಲೇ... ಮೂಲಕ ಹಲವು ಆಕೃತಿಯನ್ನು ಮಕ್ಕಳು, ದೊಡ್ಡವರೊಂದಿಗೆ ಹಂಚಿಕೊಂಡಿದ್ದೇ ವಿಶೇಷ..... ಚಿರಮನಸ್ಸಿಗೆ ನಿಲ್ಲುವಂತೆ ಮಾಡಿಹೋಗಿದ್ದಾರೆ ಮಾಯಾ ಮಾಂತ್ರಿಕರು....... ಉದಯ್ ಜಾದೂಗಾರರೊಂದಿಗೆ ಅರುಣ್ ಕುಮಾರ್ ದತ್ತರು ಸಹ ಹಲವು ಮ್ಯಾಜಿಕ್ ಮಂತ್ರವನ್ನು ನಮ್ಮೆಲ್ಲರಿಗೂ ಉಣಬಡಿಸಿದರು. ಮಕ್ಕಳಂತೂ ಈ ಮ್ಯಾಜಿಕ್ ನೋಡಿದ ಮೇಲಂತೂ ಮನೆಯಲ್ಲಿ ಯಾವ ವಸ್ತುವಿನ ಮೇಲಾಗಲಿ ಮ್ಯಾಜಿಕ್ ಲೆಕ್ಕಾಚಾರದಲ್ಲೇ ಮುಳುಗಿಹೋಗಿದ್ದಾರೆ......... ಅಂದರೆ ಮ್ಯಾಜಿಕ್ ಮಕ್ಕಳ ಮನಸಿನಲ್ಲಿ ಮನೆ ಮಾಡಿದೆ.
ಒಟ್ಟಿನಲ್ಲಿ ಆರು ತಿಂಗಳ ಪರಿಶ್ರಮ... ಆರು ಗಂಟೆಗಳ ಕಾಲ ವೇದಿಕೆಯನ್ನು ಮೆರುಗುಗೊಳಿಸಿದ್ದಂತು ಸತ್ಯ....... ನಮ್ಮ ಮನಸ್ಸಿಗೆ ಮುದನೀಡುವುದರೊಟ್ಟಿಗೆ ಮೂಕವಿಸ್ಮಿತವಾಗಿದ್ದೇವೆ ಇಂತಹ ಅದ್ಭುತ ಕಾರ್ಯಕ್ರಮದಲ್ಲಿ ನಾವೂ ಭಾಗಿಗಳಾಗಿರುವುದೇ ಒಂದು ಸಂತಸದ ವಿಷಯ.
ಈ ಮನಮೋಹಕ ದಿನದ ಕೊಡುಗೆಗೆ ೨೦೧೦ರ ಕಾರ್ಯಕಾರಿ ಸಮಿತಿ ಮತ್ತು ಅವರ ಕುಟುಂಬ ವರ್ಗ, ಇವರಿಗೆ ಸಾಥ್ ನೀಡಿದ ಹಲವು ಸಮಿತಿಗಳು, ನೃತ್ಯ ನಿರ್ದೇಶಕರು, ಮತ್ತು ಕಾಣದ ಹಸ್ತಗಳು.... ಇಂತಹ ಸೊಬಗನ್ನು ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು...
ಕನ್ನಡ ಕೂಟ ಒಂದು ಮನೆಯಂತಿದೆ, ಸದಾ ಎಲ್ಲರ ಮನದ ಮನೆಗೆ ಸಿಂಗರಿಸುವ ಶಕ್ತಿ ಮತ್ತಷ್ಟು ಬರಲೆಂದು ಆಶಿಸುತ್ತೇವೆ.
ಮತ್ತಷ್ಟು ಫೋಟೋ ಗಳಿಗೆ ಈ ಕೆಳಕಂಡ ಲಿಂಕ್ ಗಳಿಗೆ ಭೇಟಿ ನೀಡಿ:
http://picasaweb.google.com/yogee.tumkur/Rajyothsava2010?feat=email#
http://picasaweb.google.com/yogee.tumkur/UdayJadugar13112010?feat=email#
ವಂದನೆಗಳು...