Monday, October 31, 2011

ನನ್ನ ಪಾ(ಹಾ)ಡು..


ಎಲ್ಲಿದ್ದರೂ ಸರಿ ಹೇಗಿದ್ದರೂ ಸರಿ
ಕನ್ನಡಭಾಷೆ ಮಾತನಾಡಿದರೆ ಸೈ..

ನಾ ಮುಟ್ಟುವ ನೆಲ ಅದೇ ಮರುಭೂಮಿ
ನಾನಿರುವ ಸ್ಥಳ ಅದೇ ಕುವೈತ್
ನಾ ನೋಡುವ ಮರ ಅದೇ ಖರ್ಜೂರದ ಮರ
ಅರಬರ ನಾಡಲಿ ಜೀವನ ನೆಡೆಸುತಿರುವುದು ಸತ್ಯ
ಕಡಲ ತೀರದ ಮನೆಯಲಿ ನೆಲೆಸಿರುವುದು ನಿತ್ಯ
ಎಲ್ಲೇ ಇದ್ದರೂ ನಾ ಹೇಗೇ ಇದ್ದರು ನಾ
ಮಾತೃಭಾಷೆ ಕನ್ನಡವೇ ಸದಾ....

ಒಂಟೆಗಳ ನಾಡಲಿ ಕುಳಿತಿರುವಾ ಮನ
ತೈಲದ ಸಿರಿಯನು ಕಣ್ಣಲಿ ನೋಡುತಾ
ಕಡಲ ಉಪ್ಪಿನ ವಾಸನೆ ಸೇವಿಸುತಾ
ಕನ್ನಡದ ಕೂಗನು ಮನದಲೇ ಹೇಳುತಾ
ಕನ್ನಡ ನಾಡಲಿ ದೇಹವ ನೀಡಿದ
ಆ ನನ್ನ ತಾಯಿ ಹೃದಯಕೆ ವಂದನೆ...

ಕಚೇರಿಗಳಲಿ ಅರಬಿ, ಇಂಗ್ಲೀಷಿನದೇ ಸಾಮ್ರಾಜ್ಯ
ಆದರೂ ಆಗೊಮ್ಮೆ ಈಗೊಮ್ಮೆ ಸಿಗುವ
ಕನ್ನಡಿಗರೊಡನೆ ಭಾಷಾ ಭಾಂದವ್ಯ
ಸದಾ ಹಸಿರಾಗಿಸುವುದು ನಮ್ಮ ಆಂತರ್ಯ

ಎಲ್ಲಿದ್ದರೂ ಸರಿ ಹೇಗಿದ್ದರೂ ಸರಿ
ಕನ್ನಡಭಾಷೆ ಮಾತನಾಡಿದರೆ ಸೈ..

ಚಿತ್ರ:ಅಂತರ್ಜಾಲ

Monday, October 24, 2011

ಧಮ್..ಧಮ್..

ದಿನವೆಲ್ಲಾ ಸುತ್ತಿ
ಮೈಯ್ಯಿಕೈ ನೋಯಿಸ್ಕೊಂಡು
ಕೆಲಸ ಮಾಡಿದ್ದು ಸಾಕಾಯ್ತು
ಬೆಂಡಾಗಿ ಹೋಯ್ತು ಜೀವ...

ಮನಸ್ನಾಗಿನ ನೋವು
ದೇಹದಾಗಿನ ತಾಪ
ತಣಿಸೋಕೆ ಬೀಡಿ ಸೇದುತಾ
ಧಮ್ ಎಳಿದ್ರೆ ಸುಖವೋ ಸುಖ...

ಗಂಡುಸ್ರೋಬ್ಬ್ರೆ ಅಲ್ಲ
ಕುಡಿದು ಸೇದೋಕೆ
ನಾವೇನು ಕಮ್ಮಿ
ಬಾಟ್ಲಿ ಗೀಟ್ಲಿ
ಬೀಡಿ ಸಿಗರೇಟ್ ಸೇದೋಕೆ...

ಬೀಡಿಯ ಗಾಳಿ ದೇಹದಾಗೆ ಸೇರಿ
ಬೆಚ್ಚಗೇ ಮಾಡುಸ್ತಾದೆ ನೋಡಿ
ಮನಸನ್ನಾ ತಣಿಸ್ತಾದೇ ನೋಡಿ
ನಿಮ್ಗೂ ಬೇಕಾರೆ ಕೊಡ್ತೀನಿ ವಸಿ ತಗೊಳ್ಳಿ...

ಚಿತ್ರ ಕೃಪೆ: ಗಣಪತಿ ಹೆಗಡೆ

Sunday, October 9, 2011

-ಶೂನ್ಯ- (೦)

ಮದುವೆಯಾಗಿ ಇಲ್ಲಿಗೆ ಆಗಲೇ ೨೦ ವರ್ಷಗಳು ತುಂಬಿದೆ, ತವರನ್ನು ಮುಕ್ಕಾಲು ಮರೆತಾಯ್ತು, ಗಂಡನ ಮನೆಯೇ ಎಲ್ಲಾ. ಬೇಕು ಬೇಡಗಳ ತೀರಿಸುವುದೆಲ್ಲವೂ ಇಲ್ಲಿಯೇ, ನಾನು ಪೂರ್ಣ ಗಂಡ ಮತ್ತು ಈ ಮನೆಯವಳಾಗಿ ಬಿಟ್ಟಿದ್ದೇನೆ. ಅಂದು ಬಂದಾಗ ಎಲ್ಲವೂ ಹೊಸದಾಗಿತ್ತು, ತವರಿನ ಸಿರಿಯೇ ಕಣ್ಣ ಮುಂದಿತ್ತು... ಆದರೆ ಈಗ ಈ ಮನೆಯ ಸಿರಿಯ ಮುಂದೆ ತವರಿನ ಸಿರಿ ಮಾಸಿಹೋಗಿದೆ......

ಎಲ್ಲವೂ ಚೆನ್ನಾಗಿತ್ತು ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ನನ್ನದೆಂಬ ಆಸ್ತಿ ಸಂಪಾದಿಸಲೇ ಇಲ್ಲ, ಗಂಡನ ಜೊತೆಗೆ ಅತ್ತೆ ಮಾವ ಮೈದುನಂದಿರು, ನಾದಿನಿಯರು, ತಂಗಿಯರು ಎಲ್ಲರ ಪ್ರೀತಿ ಸಂಪಾದಿಸಿದೆ, ಆದರೆ ಇಲ್ಲಿ ನನ್ನದೇ ಇದು ಎಂದು ಹಕ್ಕು ಚಲಾಯಿಸುವುದಾಗಲಿ, ಪ್ರೀತಿಯಿಂದ ಜೋರುಮಾಡುವುದಕ್ಕಾಗಲಿ ಆಗುತ್ತಿಲ್ಲವಲ್ಲ.... ಅದೇನು ಕೊರತೆಯೋ ಏನೋ ನಾನು ನನ್ನ ಕರುಳ ಕುಡಿ ಕೊಟ್ಟು ಕತ್ತರಿಸಿಕೊಳ್ಳುವಂತಹ ಯಾವುದೇ ಸಂದರ್ಭ ಬರಲೇ ಇಲ್ಲ....

ನಾನು ಸುಮಾರು ೨೦ ವರ್ಷಗಳೇ ಕಾದು ಬಿಟ್ಟೆ... ಅನಾಥ ಮಗುವಿಗಾದರೂ ಆಸರೆ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೋ ಏನೋ ಅದು ಸಹ ನಾನು ಮಾಡಲೇ ಇಲ್ಲ......... ಈಗ ಯಾಕೋ ಎಲ್ಲವೂ ನನ್ನನ್ನು ತುಂಬಾ ಕಾಡುತ್ತಲಿದೆ ಕಾರಣ ನನ್ನವನ ಇಲ್ಲದಿರುವಿಕೆ..!!!

ಪ್ರತಿ ಮನುಷ್ಯನಿಗೂ ಹೃದಯ ಇರಲೇಬೇಕು... ಪ್ರೀತಿಸೋಕೆ, ಮೆಚ್ಚಿ ಮಾತನಾಡೋಕೆ, ಉಸಿರು ಗಟ್ಟಿಯಾಗಿ ನಿಲ್ಲೋಕೆ, ರಕ್ತ ಹರಿದಾಡೋಕೆ ಎಲ್ಲಕ್ಕೂ ಬೇಕಾದದ್ದು ಹೃದಯ.. ಹಾ!! ಹೃದಯ ಇದೆ ನನ್ನಲ್ಲೂ, ಆದರೆ ಅದು ನಿಶಬ್ಧವಾಗಿದೆ ಏಕೋ ಏನೋ ಕೆಲಸನೇ ಮಾಡ್ತಾ ಇಲ್ಲ ಅನ್ನಿಸ್ತಾ ಇದೆ ಯಾಕೆ ಗೊತ್ತ... ಇತ್ತೀಚೆಗಷ್ಟೆ ನನ್ನವನೇ ಎಂದುಕೊಂಡಿದ್ದ ನನ್ನ ಹೃದಯ ಕಾಣದ ಊರಿಗೆ ತೆರಳಿಬಿಟ್ಟಿದೆ... ಹೃದಯ ಇಷ್ಟೆಲ್ಲಾ ಕಷ್ಟ ಕೊಡುತ್ತೆ ಅಂತ ಗೊತ್ತೇ ಇರಲಿಲ್ಲ... ನನಗೆ ನನ್ನವರು ಎಂಬುವರೇ ಇಲ್ಲದಾಗಿದೆ.

ಇನ್ನು ಪ್ರೀತ್ಸೋ ಗಂಡ ಇರುವಾಗ ಮಕ್ಕಳ ಹಂಗೇಕೆ ಎಂದು ೨೦ ವರ್ಷ ಕಾಲ ಹಾಕಿದೆ ಆದ್ರೆ ಇವತ್ತು ಏಕೋ ಅನಾಥ ಪ್ರಜ್ಞೆ ಕಾಡ್ತಾ ಇದೆ. ಪ್ರೀತ್ಸೋ ಗಂಡ ಇದ್ದಿದ್ದ್ರೆ ಈ ಯೋಚನೆ ಖಂಡಿತಾ ಬರ್ತಾ ಇರಲಿಲ್ಲ... ಆ ಹೃದಯ ಅವರಿಗೆ ಕೈಕೊಡ್ತು ಈಗ ನನ್ನ ಅನಾಥಳನ್ನಾಗಿ ಮಾಡ್ತು...

ತವರು ಮನೆಗೆ ವಾಪಸ್ಸ್ ಹೋಗೋಣ ಎಂದರೆ ಅಲ್ಲಿ ನಾನ್ನಿದ್ದಾಗ ಇದ್ದಂತ ಮನೆಯಂತಿಲ್ಲ ಎಲ್ಲವೂ ಬದಲಾಗಿದೆ. ಅಮ್ಮ ಅಪ್ಪ ತಮ್ಮ ಸ್ವಂತಿಕೆನ ಕಳೆದುಕೊಂಡಿದ್ದಾರೆ. ಅವರೇ ಸಂಪಾದಿಸಿದ ಕೋಟಿಗಟ್ಟಲೆ ಆಸ್ತಿಯಲ್ಲಿ ಮಜ ಮಾಡುವುದಕ್ಕೂ ಹಿಂದೂಮುಂದು ನೋಡ್ತಾ ಇದ್ದಾರೆ, ಕಾರಣ ಅಣ್ಣಂದಿರ ದರ್ಬಾರು ಅತ್ತಿಗೆಯರ ವ್ಯವಹಾರ, ನಮ್ಮವರೇ ಅಪರಿಚತರಂತೆ ಕಾಣ್ತಾ ಇದಾರೆ. ನಾನು ಇನ್ನು ಹೋಗಿ ಆ ಮನೆಯಲ್ಲಿ ಹೇಗೆ ಜೀವಿಸೋಕೆ ಆಗುತ್ತೆ.... ಇನ್ನು ೨೦ ವರ್ಷ ದೂಡಿದ ಗಂಡನ ಮನೆಯಲ್ಲಿ ಇರಬೇಕು. ಇವರೆಲ್ಲ ನನ್ನವರೇ ಆದರೆ ನನ್ನವನು ಇಲ್ಲದ ಮೇಲೆ ನನ್ನವರೆಲ್ಲ ಪರಕೀಯರೆಂಬ ಭಾವನೆ ಮೂಡ್ತಾ ಇದೆ. ಅತ್ತೆ ಮಾವನಿಗೆ ಕೊನೆಗಾಲದಲ್ಲಿ ಆಸರೆಯಾಗುವ ಆಸೆ ಇದೆ, ಆದರೆ ನನ್ನ ಮುಖ ನೋಡಿ ಅವರ ಮಗ ಇಲ್ಲವೇ ಎಂಬ ಕೊರಗು ದಿನವೂ ಅವರಿಗೆಲ್ಲ ಕಾಡದೆ ಇರುತ್ತಾ....

"ಗಂಡನನ್ನು ಕಳೆದುಕೊಂಡ ನಾನು ಅತ್ತೆಮಾವರಿಗೆ ಇತ್ತ ಮಗಳೂ ಆಗಲಾರೆ ಸೊಸೆಯೂ ಆಗಲಾರೇನೋ... ಎಂದೆನಿಸಿದೆ..."

ಮನೆಯಲ್ಲಿ ಮನೆಯೊಡಯನು ಇರಬೇಕು... ಕುಂಟನೋ ಕುರುಡನೋ ಏನಾಗಿದ್ದರೂ ಪರವಾಗಿ ಮನೆಯ ಮೂಲೆಯಲ್ಲಿ ಕುಳಿತಿದ್ದರೆ ಸಾಕಿತ್ತು.... ನನಗೂ ಧೈರ್ಯವಿತ್ತು, ೪೦ ದಾಟಿದ ವಯಸ್ಸು, ಆಸರೆಯೇ ಇಲ್ಲದ ಮನಸ್ಸು , ಸ್ವಂತಂತ್ರ ನಿರ್ಧಾರಗಳು ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟ, ಗಂಡನಿದ್ದರೆ ನನಗೆ ಅವನು ಅವನಿಗೆ ನಾನು ಎಂದು ಇದ್ದುಬಿಡುತ್ತಿದ್ದೆವು.... ಇನ್ನೂ ನಾನು ಸುಮಾರು ೨೦ ವರ್ಷಗಳಷ್ಟೇನಾದರೂ ಬದುಕಿದ್ದರೆ ಅಥವಾ ನನ್ನ ಕೈಕಾಲಾಡದಂತ ಕಾಲದಲ್ಲಿ ಯಾರ ಆಸರೆ ಬಯಸಲಿ, ಅಮ್ಮ ಅನ್ನೋ ಸ್ವರವಿಲ್ಲ, ಪ್ರೀತಿಯಿಂದ ಅಮ್ಮಿ ಎಂದು ಕರೆಯೋ ಗಂಡನಿಲ್ಲ....... "ಬದುಕೇ ಶೂನ್ಯ"ವಾಗಿದೆ ಮುಂದೇನು ಗತಿ...ಎಂಬ ಭಯ ಕಾಡ್ತಾ ಇದೆ...????
ಮಗನೋ, ಮಗಳೊ ಇದ್ದಿದ್ದರೆ ಸ್ವಲ್ಪವಾದರೂ ಮರೆಯುತ್ತಲಿದ್ದೆನೋ ಏನೋ.... ಮುಂದಿನ ಜೀವನದ ಭಯವನ್ನಾದರೂ ಆ ಕೂಸು ಮರೆಮಾಚಿಸುತ್ತಿತ್ತೇನೋ ಗೊತ್ತಿಲ್ಲ... ಎಲ್ಲರೂ ಹೇಳಿದಂತೆ ಮಕ್ಕಳು ಬೆಳದ ಮೇಲೆ ಕೈಗೆ ಸಿಗುವುದಿಲ್ಲ ಅಂತಾರೆ... ಆದರೆ ಕೈಗೆ ಸಿಗದಿದ್ದರೂ ಎಲ್ಲೋ ನನ್ನವರು ಅನ್ನೋರು ಇದ್ದಾರೆ ಸತ್ತಾಗ ಮಣ್ಣಾಕುವ ಜೀವವೊಂದಿದೆ ಎಂದೆನಿಸುತ್ತೆ..!!! ಆದರೆ ಈಗ ಇದಾವುದೂ ನನಗಿಲ್ಲ.. ಯಾವ ಭಾಗ್ಯವೂ ನನಗಿಲ್ಲವೇ ಹೇ!! ದೇವರೆ... ಮುಂದಿನ ಶೂನ್ಯ ಬದುಕು ದೂಡುವುದು ಹೇಗೆ...???????? ಎಲ್ಲವೂ ಪ್ರಶ್ನಾರ್ಥಕ..??? ಕಂಬನಿಯೇ ನನ್ನ ಸಮಾದಾನಕ್ಕೆ ನಿಂತಿದೆ ಬೇರಾವ ಸಾಂತ್ವಾನ ನನ್ನೊಳಗಿಲ್ಲದಾಗಿದೆ..

ನನ್ನವನ ಜೊತೆ ನಾನು ಹೋಗುವ ಹಾಗೆ ಆ ದೇವರು ಕರುಣಿಸಿದ್ದರೆ ಎಲ್ಲವೂ ಚೆನ್ನಾಗಿತ್ತು...ಈಗ ನನ್ನಲ್ಲಿ "ಸಾಯುವ ಧೈರ್ಯ" ಕೂಡಾ ಇಲ್ಲ...

ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆಯ
ಶೂನ್ಯ ಸಿಂಹಾಸನದ
ನನ್ನ ಬದುಕು ಜೋತಾಡುತಿದೆ.....
-----
ಚಿತ್ರಗಳು: ಅಂತರ್ಜಾಲ

Tuesday, October 4, 2011

ರೀತಿ...ನೀತಿ..ಪ್ರೀತಿ..

http://ittigecement.blogspot.com/2011/09/blog-post.html - ಇದು ಪ್ರಕಾಶಣ್ಣ ಬರೆದ ಕಥೆ...

ನೀತಿ..ಪ್ರೀತಿ..
ಅದೇ ಕಥೆಯನ್ನು ಮುಂದುವರಿಸಿ ಬರೆದಿದ್ದೇನೆ...

ನಾನು ಪ್ರಶ್ನೆ ಕೇಳುವುದು ಸಹಜ......!!!

ಯಾಕೆ ಅಂದರೆ.... ನಾನು ಜೀವನದಲ್ಲಿ ಎಂದೂ ಇವರನ್ನ ನೋಡೇ ಇಲ್ಲ, ಇವರ ಬಗ್ಗೆ ಕೇಳಿಲ್ಲ, ಬಹಳ ದಿನಗಳ ಪರಿಚಯವಿಲ್ಲ ಅಥವಾ ನಮ್ಮ ನೆಂಟರೂ ಅಲ್ಲ... ದಿಢೀರ್ ಎಂದು ೨ ತಿಂಗಳಲ್ಲಿ ನೋಡಿದ್ದು ಆಯ್ತು ಮದುವೆನೂ ಆಯ್ತು ಈ ಎರಡು ತಿಂಗಳಲ್ಲಿ ಗಂಡನಾಗುವನನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ......


ಆ ಹುಡುಗಿಯನ್ನು ಇಷ್ಟ ಪಟ್ಟಿದ್ದರೆ ಹೂ ಎನ್ನಲಿ.... ಇಲ್ಲವಾ ಖಡಾಖಂಡಿತವಾಗಿ ಇಲ್ಲ ಎಂದು ವಾದಿಸಿ ನನ್ನನ್ನ ಗೆಲ್ಲ ಬೇಕಿತ್ತು ಅದು ಬಿಟ್ಟು.... ಕೆಟ್ಟ ಕೋಪ ತೋರಿಸಿ ಮುಖ ತಿರುಗಿಸಿ ಮಲಗುವುದೇನು...?????

ಇವರೊಬ್ಬರಿಗೇ ಕೋಪ ಬರುವುದ.... ನನಗೂ ಬರುತ್ತೆ..... ನನ್ನಲ್ಲೂ ಸ್ವಾಭಿಮಾನವೆನ್ನುವುದು ಇದೆ......

ಮದುವೆಯಾದರೆ ಈ ತರಹ ಕದನ, ಕೋಪ ಎಲ್ಲಾ ಇರುತ್ತಾ...ಅಬ್ಬಾ!!! ಭಯವಾಗುತ್ತೆ... ಅಪ್ಪ ಅಮ್ಮನಿಗೆ ಹೇಳಿದ್ದೆ, ಪ್ರೀತಿಸಿ ಮದುವೆವಾಗತೀನಿ ಎಂದು ಆದರೆ ಅಪ್ಪ,ಅಮ್ಮ ಅದೇ ಓಭಿರಾಯನ ಕಾಲದಲ್ಲೇ ಇದ್ದಾರೆ.... ಜಾತಿ,ಮತ, ಹಣ, ಅಂತಸ್ತು ಎಂದು ಏನೋ ಮನೆಯವರೆಲ್ಲಾ ನೋಡಿ ಮಾಡಿದ ಮದುವೆ ಸಂಬಂಧ ಭದ್ರವಾಗಿರುತ್ತೆ ಎನ್ನೋ ಇರಾದೆ ಇವರದು...... ಏನೋ ನನಗೆ ನನ್ನ ಜೀವನವೇ ಗೊಂದಲದಲ್ಲಿದೆ... ಈಗಲೇ ನನ್ನ ಗಂಡನಿಗೆ ಇಷ್ಟು ಕೋಪ... ಮುಂದೆ ಹೇಗೋ ದೇವರೇ ಬಲ್ಲ..!!!!!!!! ಈ ರೀತಿ ಯೋಚನೆ ಆ ಹೆಣ್ಣು ಮಗಳದು...

ಮೌನ ಆವರಿಸಿದೆ ಆ ಬದಿ ಅವನು ಈ ಬದಿ ಇವಳು...... ನೀರವ ಮೌನ .... ಇಲ್ಲಿ ತಪ್ಪುನೆಪ್ಪುಗಳ ಪ್ರಶ್ನೆ ಇಲ್ಲ...... ಹುಸಿಮುನಿಸು ಮನೆ ಮಾಡಿದೆ.... ಆ ಮುನಿಸಲ್ಲೇ ಕಣ್ಣ ಕಂಬನಿಗಳು ತಲೆದಿಂಬನ್ನ ಒದ್ದೆಗೊಳಿಸುತ್ತಿತ್ತು ಇದು "ಮೌನದಿ ಕಣ್ಣೀರ ರಾಗ".........

--
ತನ್ನೆಲ್ಲಾ ಆಸೆ, ಪ್ರೀತಿ, ಬದುಕು, ನಂಬಿಕೆ, ನನ್ನವನೇ ಇವನು.. ಇವಳು ನನ್ನವಳು ಎಂದು ಒಬರಿಗೊಬ್ಬರಿದ್ದೇವೆ..... ಒಲವಿನ ಆಸರೆಯಾಗಿ ಹೊಸ ಬದುಕು ಪ್ರಾರಂಭಿಸುವ ದಿನ ಈ ಮೊದಲ ರಾತ್ರಿ ಇಂತಹದರಲ್ಲಿ ಎಲ್ಲವೂ ಅನುಮಾನದಲ್ಲಿ ದೂಡಿಬಿಡುತ್ತಾಳಲ್ಲ ಇವಳು... ಕನಸು ಕಟ್ಟಿದ್ದ ಮೊದಲ ರಾತ್ರಿ ಕನಸಾಗೇ ಉಳಿದು ಬಿಟ್ಟಂತಾಯ್ತು............ -ಈ ರೀತಿ ಇರಾದೆ ಗಂಡನದು

ಮತ್ತದೇ ನೀರವ ಮೌನ ಮಗ್ಗುಲು ಬದಲಿಸದೇ ಯೋಚಿಸಿದ್ದವನಿಗೆ ನಿದ್ರೆ ಆವರಿಸಿತ್ತು....

ಮಧ್ಯರಾತ್ರಿ....

ಏಕೋ ಗಂಟಲು ಒಣಗಿದೆ.... ಗಂಡನ ಮೇಲಿನ ಕೋಪ...ಕಣ್ಣಲ್ಲಿ ನೀರನ್ನು ತರಿಸಿತ್ತು... ಕಣ್ಣಲ್ಲಿ ಹೋದ ನೀರು ಬಾಯಾರಿಕೆಯನ್ನ ಎಳೆತಂದಿತು.. ಅಯ್ಯೋ ದೇವರೆ.. ಈಗಲೇ ಗಂಟಲು ಒಣಗಬೇಕೆ.... ಅತ್ತು ಅತ್ತು... ಗಂಟಲ್ಲಿಂದ ಕೆಮ್ಮು ಪಕ್ಕದಲ್ಲಿದ್ದ ಗಂಡನನ್ನ ಎಬ್ಬಿಸಿತು.....

ತಟ್ಟನೆ ಎದ್ದವನು ಒಂದು ಲೋಟದಲ್ಲಿ ನೀರನ್ನಿಡಿದು ಕೈಚಾಚಿದನು... ಕುಳಿತು ಕೆಮ್ಮುತ್ತಿದ್ದವಳು ಮಾತನಾಡಲಿಲ್ಲ... ಬೇಡವೆಂಬಂತೆ ಮುಖ ತಿರುಗಿಸಿದಳು... ಆದರು ಅವಳ ಮುಖ ತಿರುಗಿಸಿ ನೀರನ್ನ ಇವನೇ ಕುಡಿಸಿದ.... ಅವನ ಆ ಸೇವೆ ಇಷ್ಟವಾಯ್ತು.. ನನ್ನ ಮೇಲೂ ಕಾಳಜಿ ಇದೆ ಎನಿಸಿತು... ಆದರು ಯಾಕೋ ಆ ಕೋಪವಿಡಿಸಲಿಲ್ಲ....ಎಂದೆಲ್ಲಾ ಮನಸಿನಲ್ಲಂದುಕೊಂಡಳು

ಲೋಟದಿಂದ ನೀರು ಕುಡಿಸುತ್ತ ಅವಳ ಸೌಂದರ್ಯವನ್ನೇ ಸವಿಯಬೇಕೆನಿಸಿತು..... ಆದರೂ ಅವಳು ನನ್ನನೇ ಪ್ರಶ್ನಿಸಿದಳು... ನನ್ಗೆ ಕೋಪ ಬಂದಿದೆ ಈ ರೀತಿ ಅನುಮಾನ ಪಡುತ್ತಾಳಲ್ಲ ನನ್ನ ಮೇಲೆ... ಛೇ..!! ಬಿಡು ಮಾತ್ಯಾಕೆ ಈಗ..ಮಾತನಾಡೋದು ಎಂದುಕೊಂಡು ಮಲಗಿದನು....

ಗಂಟಲಿಗೆ ಧಣಿವಾರಿತು.... ಆದರೆ ಕೋಪ ಶಮನವಾಗಲಿಲ್ಲ..... ಮಬ್ಬು ಬೆಳಕಲ್ಲಿ ಒಬ್ಬರ ಮುಖ ಒಬ್ಬರು ನೋಡಿದರು ಮೌನ ಕರಗಿಲ್ಲ.... ಅವನ ಕಣ್ಣ ಭಾಷೆ ಅರ್ಥ ಮಾಡಿಕೊಳ್ಳಲಾಗಿಲ್ಲ ಇವಳಿಗೆ...... ಪ್ರೀತಿ ಇದೆ... ಅದನ್ನ ಕೋಪದಲ್ಲಿ ಕಳೆಯೋ ಮನಸ್ಸಿಲ್ಲ ಇಬ್ಬರಿಗೂ....... ಆದರೂ ಏನೋ ಸ್ವಾಭಿಮಾನ....

ಮುಖ ತಿರುವಿ ಮಲಗಿದ್ದ ಅವಳೀಗ ಗಂಡನತ್ತ ಮುಖ ಮಾಡಿ ಮಲಗಿದ್ದಳು ಆದರೆ ಅಂತರ ಮಾತ್ರ ಮುಂದುವರಿಸಿದ್ದಳು......

ಇತ್ತ ಇವನೂ ಅವಳ ಮೌನ ಮುರಿಯಲು ಸಾಧ್ಯವಾಗಲಿಲ್ಲ ತನ್ನಲಿದ್ದ ಕೋಪ ಸಹ ಕಡಿಮೆಯಾಗಿರಲಿಲ್ಲ..... ಮುಖ ತಿರುಗಿಸಿ ಮಲಗಿಬಿಟ್ಟಿದ್ದ...... ಒಂದೇ ಮಗ್ಗುಲಲಿ ಮಲಗಿದ್ದವಗೆ ಕೈ ಹಿಡಿದಂತೆ ನೋವಾಗಿದೆ......... ಇತ್ತ ಒರಳುತ್ತಾನೆ.... ಒಮ್ಮೆಲೇ ಬದಲಿಸಿದ ಕೈ ಪಕ್ಕದಲ್ಲೇ ಇದ್ದ ಮೃದು ತೋಳು ಅವನನ್ನ ಆಕರ್ಷಿಸಿದೆ........ ಮೆಲ್ಲಗೆ ನೇವರಿಸಿ.....ತಲೆದಡವಿದೊಡೆ....... ಅದೇನೋ ಮೋಹಕ ಭಾವ ಮನದಲ್ಲೇ ಅರಳುತ್ತದೆ.....

ಮಬ್ಬುಗತ್ತಲಲಿ ಕಣ್ಣು ಬಿಟ್ಟವಗೆ ಆ ಕೆಂಬಣ್ಣದ ತುಟಿಗಳು ಆಹ್ವಾನಿಸಿವೆ...... ಅವಳ ಮುಗ್ಧ ಮೊಗ ಅವಳತ್ತ ಸೆಳೆದಿದೆ......ಇತ್ತ ನಿದ್ರೆಯಲ್ಲಿರುವಂತೆ ನಟಿಸುತ್ತಿದ್ದವಳಿಗೆ... ಅವನ ಘಾಡ ಚುಂಬನ ಅವನನ್ನೇ ಬಾಚಿ ತಬ್ಬುವಂತೆ ಮಾಡಿದೆ...... ಆ ಕತ್ತಲ ರಾತ್ರಿ... ಇಬ್ಬರೂ ಮಾತಿಲ್ಲ ಕಥೆ ಇಲ್ಲ.... ನೀರವ ಮೌನದಲ್ಲೇ ಒಬ್ಬರಿಗೊಬ್ಬರು ಕ್ಷಮಾಪಣೆ ಸಲ್ಲಿಸಿ.........ಮಿಲನ ಮಹೋತ್ಸವದಲ್ಲಿ ತೇಲಿಬಿಡುತ್ತಾರೆ.... ಈ ಸಮ್ಮಿಲನ ಅವರಿಬ್ಬರಿಗೂ ಅರಿವೇ ಇಲ್ಲದೇ ಒಂದು ಮಾಡಿಸಿಬಿಟ್ಟಿದೆ...

ಒಬ್ಬರಿಗೊಬ್ಬರ ಪ್ರಶ್ನೆ ಅದು ಘಾಡವಾದ ವಿಷಯವೇನಲ್ಲ....... ಮಾತು ಸಹಜ... ಪ್ರೀತಿಯ ಬಂಧನ ಎಲ್ಲ ತಪ್ಪು ಮಾತುಗಳನ್ನ ಮುಚ್ಚಾಕಿ ಬಿಡುವಂತೆ ಎರಡು ಜೀವಗಳು ಪ್ರೀತಿಯಲ್ಲಿ ಇಬ್ಬರೂ ಬಂಧಿಯಾಗಿದ್ದರು......

ಆ ಕೋಪದ ರಾತ್ರಿ ಇಬ್ಬರಿಗೂ ಅರಿವಿಲ್ಲದೇ ಒಂದು ಮಾಡಿಸಿತ್ತು.........ಕೋಪ, ಮುನಿಸು.... ಮುಖ ತಿರುಗಿಸಿ ಮಲಗಿದ್ದೂ ಯಾವೊಂದು ವ್ಯತ್ಯಾಸ ಅರಿಯದೇ ಬೆಳಗಿನ ಸೂರ್ಯ ಕಿಟಕಿಯಲ್ಲಿ ನಾಚುತ್ತ ಇವರಿಬ್ಬರ ಮುಖಕ್ಕೆ ಬೆಳಕು ಚೆಲ್ಲಿದ್ದ......


ರೀತಿ: ಈ ರೀತಿನು ಇರುತ್ತಾರೆ ಜನ ಎಂಬುದು ಪ್ರಕಾಶಣ್ಣನ ಕಥೆ

ನೀತಿ: ಗಂಡ ಹೆಂಡಿರು ಜಗಳ ತಿಂದು ಮಲಗೋವರೆಗಷ್ಟೇ

ಪ್ರೀತಿ: ಗಂಡು ಹೆಣ್ಣು ಪ್ರೀತಿಯಲ್ಲಿ ಎಲ್ಲವನ್ನೂ ಮರೆಮಾಚಬಹುದು...

ತಪ್ಪುಗಳಿದ್ದರೆ ಕ್ಷಮೆ ಇರಲಿ...