ಶರಣರ ಬರವೆನಗೆ ಜೀವಾಳವಯ್ಯ... ಎಂದು ಬಾಗಿಲಲ್ಲೇ ಕಾದು, ಬರಲಿರುವ ಶರಣ ಶರಣೆಯರನ್ನ ಸ್ವಾಗತಿಸಲು ನಿಂತಿದ್ದ ಮನೆಯೊಡೆಯ ಮತ್ತು ಮನೆಯೊಡತಿ ‘ಇನ್ನೂ ಯಾಕ ಬರಲಿಲ್ಲವ್ವ ನಮ್ಮ ಮಂದಿ’ ಎಂದು ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತನೇ ಇದ್ರು.... ‘ಭಜನಾ ಮಂಡಳಿಯವರು ಬಂದ್ರೆ ನೋಡಿ ನಮ್ಮ ಕಾರ್ಯಕ್ರಮ ಚಲೂ ಆಗೋದು’ ಅಂತ ಮಾತಾಡ್ಕೋತಾ ಇದ್ರು. ೬.೩೦ರ ಆಸುಪಾಸು ಇರಬೇಕು ಒಬ್ಬೊಬ್ಬರೇ ಬರಲಿಕ್ಕೆ ಪ್ರಾರಂಭಿಸಿದ್ರು. ಮನೆಯೊಳಗಣ ಗುಡಿಯೊಳಗೆ ಕುಳಿತಿದ್ದ ಬಸವಣ್ಣನಿಗೆ ನಮಿಸಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
೧೨ನೇ ಶತಮಾನದ ಕ್ರಾಂತಿ ಇಂದಿಗೂ ಮಾದರಿಯಾಗಿದೆ, ಜಾತಿ ಭೇದ, ಮೇಲು-ಕೀಳು, ಲಿಂಗ ಭೇದ ಇಂತಹುವುಗಳು ಅಂದು-ಇಂದಿನದಲ್ಲ ತಲತಲಾಂತರಗಳಿಂದ ಬಂದಿರುವಂತಹ ಈ ಅಸ್ಪೃಶ್ಯತೆಯ ಭಾವನೆಗಳನ್ನು ತೊಳೆದು ಹಾಕಲು ಬಸವಣ್ಣ ರೂಪಿಸಿಕೊಂಡ ಮಾರ್ಗ ಮಾತ್ರ ಅದ್ವಿತೀಯ. ಬಸವಣ್ಣ ತನ್ನ ಜೀವನದ ಎಲ್ಲಾ ಆಯಾಮಗಳಲ್ಲಿ ಮಿಂದು ಬಂದವರು ಜೀವನದ ಎಲ್ಲಾ ಬೇಕು ಬೇಡಗಳನ್ನು ಸಮಾನಾಗಿ ಸ್ವೀಕರಿಸಿದಂತಹ ಅಣ್ಣ ನಮ್ಮ ಜೀವನದ ಧರ್ಮ ಗುರು, ಭಕ್ತಿ ಭಂಡಾರಿ, ದಾಸೋಹ, ಕಾಯಕಗಳ ಗುರು. “ಕಾಯಕದಲ್ಲಿ ಕೈಲಾಸವನ್ನು ಕಾಣು ದಾಸೋಹದ ಮುಖೇನ ನೀಡುವ ಕೈ ಮುಂದಾಗಲಿ” ಎನ್ನುವಂತಹ ಬಸವಣ್ಣನ ಧ್ಯೇಯ ಮಾರ್ಗವನ್ನು ಹಿರಿಯರಾದ, ತೀರ್ಥರೂಪು ಸಮಾನರಾದ ಶ್ರೀಯುತ ಅಪ್ಪಾ ರಾವ್ ಅಕ್ಕೋಣಿಯವರು “ಬಸವ ಜಯಂತಿಯ ಆಚರಣೆ ಇದೇ ವರ್ಷಕ್ಕೆ ೧೦೦ ವಸಂತಗಳನ್ನು ಕಂಡಿದೆ,... ಮನುಷ್ಯ ದೇವರಲ್ಲ.. ಆದರೆ ದೇವರಂತೆ ಪೂಜಿಸಬಹುದು.. ಅದು ಮನುಷ್ಯ ದೇವರ ಸ್ಥಾನವನ್ನು ಪಡೆದುಕೊಂಡರೆ ಎಲ್ಲವೂ ಸಾಧ್ಯ... ಆ ಸ್ಥಾನ ನಾವು-ನೀವೆಲ್ಲಾ ಗಳಿಸಬಹುದು ನಮ್ಮ ಮನಸ್ಸು ಒಳ್ಳೆಯ ಚಿತ್ತದಲ್ಲಿದ್ದರೆ” ಎಂಬಂತೆ ಅಪ್ಪಾಜಿ ತಿಳಿಸಿದಾಗ ನನಗೆ ನೆನಪಾದ ವಚನ...
ಕಲ್ಲ ದೇವರು ದೇವರಲ್ಲ, ಮಣ್ಣ ದೇವರು ದೇವರು ದೇವರಲ್ಲ,
ಮರ ದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ
ಸೇತುಬಂಧ ರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ,
ಮೊದಲಾಗಿ ಅಷ್ಟಾಷಷ್ಟಿ ಕೋಟಿ ಪುಣ್ಯಕ್ಷೇತ್ರಂಗಳಲ್ಲಿಯ ದೇವರು ದೇವರಲ್ಲ
ತನ್ನ ತಾನರಿದು ತಾನಾರೆಂದು ತಿಳಿದೆಡೆ ತಾನೇ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವ ಬಾಲಸಂಗಯ್ಯ ಅಪ್ರಮಾಣ ದೇವ....
ಹೀಗೊಂದು ವಚನವಿದೆ ಕಲ್ಲ ದೇವರು ದೇವರಲ್ಲ ಮಣ್ಣ ದೇವರು ದೇವರಲ್ಲ, ಮರ ದೇವರಲ್ಲ ಹಾಗೆ ಮನುಷ್ಯನು ದೇವರಲ್ಲ ತನ್ನ ತಾನರಿತು ನಾನು ಯಾರು ಎಂದು ತಿಳಿದು ನೆಡೆದ್ರೇ ದೇವರಾಗಬಹುದು ಎಂಬಂತಿದೆ.. ಈ ವಚನದಲ್ಲಿ ಇರುವ ಆಶಯವನ್ನೇ ಅಪ್ಪಾಜಿ ನಮ್ಮೆಲ್ಲರಿಗೂ ಮನವರಿಕೆಯಾಗುವಂತೆ ತಿಳಿಸಿದರು. ಅವರ ನುಡಿ ನಮ್ಮೆಲ್ಲರ ಮನದಲ್ಲಿ ಬೆಳಕು ಮೂಡಿಸಿದ್ದಂತೂ ಸತ್ಯ. ನಾನೂ ದೇವರಾಗಲು ಸಾಧ್ಯವಾದರೆ ಪ್ರಯತ್ನಿಸು ಎಂದು ಎಲ್ಲೋ ಒಳ ಮನಸ್ಸು ಹೇಳಿದ ಹಾಗಾಯಿತು. ೧೨ನೇ ಶತಮಾನದ ವಿಚಾರ ಧಾರೆಗಳನ್ನು ವಿನಿಮಯ ಮಾಡಿಕೊಳ್ಳುವಂತಹ ಅನುಭವ ಮಂಟಪದಂತಹ ಸ್ಥಳ ಈಗಲೂ ಇದ್ದಿದ್ದರೆ ಎಲ್ಲರೂ ದೈವದೆಡೆಗೆ, ಸದ್ ಬುದ್ಧಿಯೆಡೆಗೆ ನೆಡೆಯಬಹುದಿತ್ತೇನೋ...!! ಅಲ್ಲಮ, ಸಿದ್ಧರಾಮ, ಅಕ್ಕ, ಆಯ್ದಕ್ಕಿ ದಂಪತಿಗಳು, ಚೆನ್ನಬಸವಣ್ಣ, ನೀಲಾಂಬಿಕೆ, ಮಾದಲಾಂಬಿಕೆ ಎಲ್ಲರ ಬಗೆಗೂ ಪುಟ್ಟ ವಿವರಗಳನ್ನು ನೀಡಿದ್ದು ಖುಷಿಕೊಟ್ಟಿತು. ಇನ್ನೂ ಮತ್ತಷ್ಟು ಹೇಳಿದ್ದರೆ ಚೆಂದವೆನಿಸುತ್ತಿತ್ತು ಆದರೆ ಮಾತು ಮೊಟುಕಾಗಿದ್ದು ಸಮಯದ ಅಭಾವದಿಂದಷ್ಟೇ... ಅವರೊಂದಿಗೆ ಮತ್ತಷ್ಟು ವಿಚಾರಧಾರೆ ತಿಳಿಯೋ ಆಶಯ ನನ್ನದಾಗಿದೆ.
ನುಡಿದರೆ ಮುತ್ತಿನ ಹಾರದಂತಿರಬೇಕು, ವಚನದಲ್ಲಿ ನಿನ್ನ ನಾಮಾಮೃತ ತುಂಬಿ, ಸಕಲಕೆಲ್ಲಾ ನೀನೇ ಅಕಳಂಕ ಗುರುವೆಂದು.... ಹೀಗೆ ಸಾಲು ಸಾಲು ವಚನಗಳು ದಿಬ್ಬಣವೇರಿ ಕಿವಿಯಲ್ಲಿ ಕೇಳುತ್ತಲಿದ್ದಂತೆ. ವಚನಕಾರರಲ್ಲಿ ಮಹಿಳೆಯರಿಗೆ ನೀಡಿದ ಪ್ರಾಶಸ್ತ್ಯ, ೧೨ನೇ ಶತಮಾನದಲ್ಲಿಯೇ ಹೆಣ್ಣು ಪ್ರಪಂಚದ ಕಣ್ಣು ತೆರೆಸ ಹೊರಟಂತಹ ಹಲವು ವಚನಗಾರ್ತಿಯರ ವಿಶೇಷತೆಯನ್ನು ಮತ್ತು ನಮ್ಮ ನಮ್ಮ ಕ್ರಿಯೆಯಲ್ಲಿ ಆಚಾರವಿರಬೇಕು ಎಂಬ ತತ್ವವಾದಿಗಳ ವಚನಕಾರ್ತಿಯರ ವಚನಗಳೊಂದಿಗೆ ಶ್ರೀಮತಿ ಸಂಧ್ಯಾಅರುಣ್ ಬಹಳಷ್ಟು ಸವಿವರವಾಗಿ ತಿಳಿಸಿದರು. ನಂತರ ಅಕ್ಕ ಮಹಾದೇವಿಯವರ ತನುಕರಗದವರಲಿ... ವಚನದೊಡನೆ ಮತ್ತಷ್ಟು ವಚನ ಗಾಯನ ಸಾಗಿತು.
ಸಾರೀ ಚೆಲ್ಲಿದ ಮುಕುತಿ... ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ... ಇವೆಲ್ಲ ವಚನಗಳೊಂದಿಗೆ ಶಿವನ ಕುರಿತ ಬೋಲೋ ಓಂ ನಮಃ ಶಿವಾಯ, ಹರ ಓಂ... ಬ್ರಹ್ಮ ಮುರಾರಿ ಹೀಗೆ ಸಾಲುಸಾಲುಗಳೇ ಇವೆ, ಇದೆಲ್ಲದರೊಟ್ಟಿಗೆ ತಂದೆ ನೀನು ತಾಯಿ ನೀನು....ಹಸಿವಾದೊಡೆ .... ಇವನಾರವ ಇವನಾರವ .... ಹೀಗೆ ಹಲವು ವಚನಗಳಿಗೆ ಧ್ವನಿಯಾಗಿದ್ದು ಪುಟಾಣಿಗಳು. ಆ ವಚನಗಳನ್ನು ಕೇಳಿದ ನಾವೇ ಪುಣ್ಯವಂತರು. ಆ ಮಕ್ಕಳಲ್ಲಿದ್ದ ಹುಮ್ಮಸ್ಸು ವಚನ ಗಾಯನ ನಮಗೆ ಪ್ರೇರಣೆ.
ಇಷ್ಟು ವಿಜೃಂಭಣೆಯಲ್ಲಿ ವಚನ ಸಾಹಿತ್ಯದ ಒಂದು ಬೆಳವಣಿಗೆಗೆ ೧೨ನೇ ಶತಮಾನ ಹೇಗೆ ಪೂರಕವಾಗಿತ್ತು ಎಂಬುದನ್ನು ತಿಳಿಸಲು ಗೋಕುಲಾಷ್ಟಮಿಯ ಇಮಾಮ್ ಸಾಬ್ ರನ್ನು ನೆನಪುಮಾಡಿಕೊಳ್ಳುತ್ತ ಡಾ. ಅಜಾದ್ ಮೈಕ್ ಹಿಡಿದು ನಿಂತರು.. ಅದೇಕೋ ತಂಪು ಹವಾ ಗಾಳಿ ಇದ್ದರೂ ಬೆವರುತ್ತಲೇ (ಗೋಕುಲಾಷ್ಟಮಿಗೆ ಇಮಾಮ್ ಸಾಹೇಬರನ್ನ ಕರೆಸಿ, ತಾನು ತಯಾರಿ ಮಾಡಿ ಬಂದಿದ್ದೆಲ್ಲವನ್ನ ಹಿರಿಯರು ಹೇಳಿ ಮುಗಿಸಿದ್ದರು.. ಇನ್ನೇನಪ್ಪಾ ಹೇಳಲಿ ಅನ್ನೋ ಟೆನ್ಶನ್ ಆಗಿತ್ತಂತೆ...ಪಾಪ....!!) ಸರ್ವಜ್ಞರ ವಚನಗಳನ್ನೇ ಉದಾಹರಣೆಯನಿಟ್ಟು ವಚನ ಸಾಹಿತ್ಯ ಜನ ಸಾಮಾನ್ಯರಿಗೂ ಅರ್ಥವಾಗುವಂತೆ, ಲೋಕದ ಆಗುಹೋಗುಗಳ ಜೊತೆ ಚಿಂತನೆಗಳನ್ನು ಸೃಷ್ಟಿಸಿದ್ದು ವಚನಗಾರರುಗಳ ಸಾಹಿತ್ಯ. ಅದು ಬಹುಬೇಗ ಜನರತ್ತ ತಲುಪಿ ಸ್ಪಂದಿಸಿದ್ದೂ ಇದೆ. ೧೨ನೇ ಶತಮಾನಕ್ಕೂ ಮುಂಚೆ ವಿದ್ವಾಂಸರು, ಆಸ್ಥಾನ ಕವಿಗಳು ರಚಿಸುವ ಸಾಲುಗಳು ಹಳೆಗನ್ನಡ, ಸಂಸ್ಕೃತ ಇವುಗಳಿಂದಲೇ ಕೂಡಿದ್ದವು, ಇವು ಅಷ್ಟು ಬೇಗ ಜನರನ್ನ ಒಲಿಸುವಂತಹವುಗಳಾಗಿರಲಿಲ್ಲ ಇಂತಹ ಸಮಯದಲ್ಲಿ ಹೊಸ ರೂಪವನ್ನು ಕೊಟ್ಟಿದ್ದು ವಚನ ಸಾಹಿತ್ಯ ಜೊತೆಗೆ ಕನ್ನಡ ಬೆಳವಣಿಗೆಗೂ ಒಂದು ವೇದಿಕೆ ನಿರ್ಮಾಣವಾಗಿದೆ ಎಂದು ಡಾ. ಅಜಾದ್ ಸವಿಸ್ತಾರವಾಗಿ ತಿಳಿಸಿದರು....
ಮುಕ್ತಾಯದ ಹಂತಕ್ಕೆ ಬಂದಾಗ ಬಸವ ಚಿತ್ರ ಪಟಕ್ಕೆ ವಂದಿಸುತ್ತಾ ಶರಣ ಶರಣೆಯರು ಬಿಲ್ವಾಕ್ಷತೆಯನ್ನು ಪೇರಿಸಿ ಕೈಮುಗಿದು ಹೊರನೆಡೆದಾಗ ಕಣ್ ಕೋರೈಸಿದ್ದು ಉತ್ತರ ಕರ್ನಾಟಕ ಶೈಲಿಯ ದಾಸೋಹ ಸಂಭ್ರಮ... ಬಸವಣ್ಣನ ಮನನ ಮಾಡಿ ಮರುದಿನದ ಕಾಯಕ ನೆನೆದು ಬಂದಿದ್ದ ಶರಣರೆಲ್ಲರೂ ದಾಸೋಹದಲ್ಲಿ ಪಾಲ್ಗೊಂಡರು ... ಹೋಳಿಗೆ ಮಾವಿನ ಹಣ್ಣಿನ ಸೀಕರಣೆ, ಬಕ್ರಿ ಭಾಳ್ ತಿಂದ್ವಿ ನೋಡ್ರಿ (ಜೋಳದ ರೊಟ್ಟಿ )ಎಣ್ಣೆಗಾಯಿ ಪಲ್ಯ, ಶೇಂಗಾ ಚಟ್ನಿ ಪುಡಿಗಳು... ಅದು ಇದು ಪುಡಿಗಳೆಲ್ಲಾ ಇದ್ದವೂ ನನ್ಗೆ ಮರೆತು ಹೋಗಿದೆ ಹಹಹಹ... ಖರೆ ಉತ್ತರ ಕರ್ನಾಟಕದವ್ರನ್ನೇ ಕೇಳ್ಬೇಕ್ರಿ... ಭಾಳ್ ಛಲೋ ಅಡಿಗೆ ಮಾಡಿದ್ರಿರೀ.. ಹೊಟ್ಟೆ ತುಂಬ ತಿಂದು ಮನಸ್ಸು ದೇಹ ಸಂತುಷ್ಟಿಯಾಯಿತು.
ವಚನಗಳು ಸರ್ವಕಾಲಿಕ ವಚನಗಳಲ್ಲಿನ ಆಶಯ ನಿಜಕ್ಕೂ ಹಲವು ಅರ್ಥಗಳನ್ನು ನೀಡುತ್ತೆ ಇಂತಹ ವಚನಗಳ ನೆನಪಿಗೆ ಮತ್ತು ವಚನ ಸಾಹಿತ್ಯದ ವಿಚಾರ ಧಾರೆಗೆ ಬಸವ ಜಯಂತಿ ಒಂದು ವೇದಿಕೆಯಾಗಿದ್ದಂತೂ ಸತ್ಯ. ಹಿತವಚನಗಳು ನಂತರ ವಚನ ಗಾಯನ ಗಂಡಸರು ಮತ್ತು ಹೆಂಗಸರ ತಂಡ ಮತ್ತು ಪುಟಾಣಿಗಳ ಮನೋಜ್ಞವಾಗಿ ಇಂಪಾದ ವಚನಗಳು ಎಲ್ಲವನ್ನೂ ನಮಗೆ ಉಣಬಡಿಸಿ ತಮ್ಮ ಮನೆಯಲ್ಲಿ ಇಷ್ಟೆಲ್ಲಾ ಸಂತೃಪ್ತಿ ನೀಡಿ ಕಾರ್ಯಕ್ರಮ ಏರ್ಪಡಿಸಿದ ಕಾಯಕ ದಾಸೋಹಿಗಳಾದ ಸಂಗೀತ ಮತ್ತು ಅಮೃತ್ ರಾಜ್ ಕುಟುಂಬಕ್ಕೆ ಧನ್ಯವಾದ ತಿಳಿಸುತ್ತೇನೆ. ಸದಾ ಕಾಯಕದ ಕೈಲಾಸ ನಿಮ್ಮದಾಗಲಿ ವಿಚಾರ ವಿನಿಮಯಗಳಿಗೆ ನಿಮ್ಮ ಮನೆ ಮನಸ್ಸು ವೇದಿಕೆಯಾಗಲಿ. ಒಂದು ಸವಿನೆನಪಿನ ವೇದಿಕೆಯಾಗಲೂ ಈ ಕುಟುಂಬಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು...
ಹಿರಿಯರ ಮಾರ್ಗದರ್ಶನ ನಮ್ಮಂತ ಕಿರಿಯರಿಗೆ ದಾರಿದೀಪ ಎಂಬಂತೆ ಅಮೃತ್ ರಾಜ್ ರವರ ಅಪ್ಪ ಅಮ್ಮರಾದ ಶ್ರೀಮತಿ ಸುಲೋಚನ ಮತ್ತು ಶ್ರೀಯುತ ಅಪ್ಪಾ ರಾವ್ ಅವರಿಗೆ ನಮ್ಮ ಅಭಿನಂದನಾ ಪೂರ್ವಕ ಧನ್ಯವಾದಗಳು ಅವರ ಮಾರ್ಗದರ್ಶನವೇ ಈ ಕಾರ್ಯಕ್ರಮದ ಯಶಸ್ಸು...
ಶರಣು ಶರಣಾರ್ಥಿ...