ಚಿತ್ರ ನೋಡಿ ಎಲೆ ಅಡಿಕೆ ಕಡ್ಡಿಪುಡಿ ತಿನ್ನೋ...ಹುಚ್ಚು ಹೆಚ್ಚಾಗಿದೆ...ಎಂದುಕೋ ಬೇಡಿ..!!
ಪೋಟೋ ಡಿ.ಜಿ ಮಲ್ಲಿಕಾರ್ಜುನ್
ಹೊರಗಡೆ ಹೋದ ಮಗ ಇನ್ನು ಬಂದಿಲ್ಲ ಎಂದು ಮನೆಯಿಂದ ಆಚೆ ಹೋಗಿ ಕಾಯಲು ನಿಂತೆ, ಇದ್ದಕ್ಕಿದ್ದಂತೆ ನನ್ನ ಅಡ್ಡಗಟ್ಟಿ ಏನೋ ಮಾತನಾಡುತ್ತಲಿದ್ದಾಳೆ, ಅರ್ಥವಾಗುತ್ತಿಲ್ಲ, ಅಕ್ಷರಗಳನ್ನ ನುಂಗುತ್ತಲೇ ಇದ್ದಾಳೆ. ಇಪ್ಪತ್ತರ ಆಸುಪಾಸಿನ ಹುಡುಗಿ, ವಕ್ರ ಉಡುಗೆ, ಕೆದರಿದ ಗುಂಗುರು ಕೂದಲು, ಕೆಂಪು ಪಾಚಿ ಹಲ್ಲುಗಳು, ಕೈಕಾಲಲ್ಲಿ ನಿತ್ರಾಣವಿಲ್ಲ ಎನಿಸುತ್ತೆ... ಬಡಕಲು ದೇಹ.. ಕಣ್ಣುಗಳಲ್ಲಿನ ನಿರಾಶೆ ಎದ್ದು ಕಾಣುತ್ತಿದೆ ಅವಳ ಕೈಯಲ್ಲಿ ಏನೋ ಆಟದ ಕಡ್ಡಿ. ಹಾಗೆ ಸ್ವಲ್ಪ ಕಣ್ಣರಳಿಸಿ ಹಿಂದೆ ನೋಡಿದೆ ಅಲ್ಲೇ ಒಂದು ಪುಟ್ಟ ಮಗು ಆಟದ ಸಾಮಾನಿನೊಂದಿಗೆ ನಿಂತಿದೆ. ಮೊದಲ ಸಲ ನೋಡ್ತಾ ಇರೋ ಈ ಹುಡುಗಿ ಹತ್ತಿರ ನಾನು ಇಂಗ್ಲೀಷಿನಲ್ಲೇ ಮಾತನಾಡಿ ಏನು ಎಂದು ಕೇಳಿದೆ..!! ನೀನು(ನುವ್ವು) ಇಂಡಿಯಾ..?? ಅಂದಳು ಹೌದು, ಎಂದು ಸನ್ನೆ ಮಾಡಿದೆ. ಮತ್ತೆ ತೆಲುಗಿನವಳ ಅಂದಳು. ಇಲ್ಲ, ಏನು ಬೇಕು..? ಎಂದು ತೆಲುಗಿನಲ್ಲೇ ಮಾತನಾಡಿಸಿದೆ.
ನೀನು ಮಾಲ್ಯಾ(MALYA)(ಕುವೈತಿನ ಒಂದು ಸಿಟಿ)ಗೆ ಹೋಗ್ತಾ ಇದ್ದೀಯಾ ಅಂದಳು, ಇಲ್ಲ..!! ನಾನು ಅಲ್ಲಿಗೆ ಹೋಗೋದಿಲ್ಲ ಅಂದೆ, ಹೋಗು ಒಂದು ಸರಿ ಅಂದಳು.. ಯಾಕೆ ಎಂದು ಕೇಳಿದ್ರೇ.. ನನಗೆ ಕಡ್ಡಿಪುಡಿ ಅಥವಾ ಹನ್ಸ್ ಬೇಕು ತಂದು ಕೊಡ್ತೀಯಾ.....? ನಿನಗೆ ಯಾಕೆ ಬೇಕು ಅದೆಲ್ಲಾ ಅಚ್ಚುಕಟ್ಟಾಗಿ ಊಟ ಮಾಡಿಕೊಂಡಿರು ಎಂದೇಳ್ತಾ ಇದ್ದ ಹಾಗೇ ಏನೋ ಮುಖಭಾವ ಕೋಪಕ್ಕೆ ತಿರುಗಿದಂತಾಗಿತ್ತು.. ನನಗೇ ಅದು ತಿಂದಿಲ್ಲಾ ಅಂದ್ರೇ ಹುಚ್ಚು ಹಿಡಿಯುತ್ತೇ... ತಂದುಕೊಡು ಇಲ್ಲಾ ಅಂದ್ರೇ "ನಿಮ್ಮ ಯಜಮಾನ ಇದಾರಲ್ಲಾ ಅವರಿಗೆ ಹೇಳಿ ತರಿಸಿಕೊಡು" ಎಂದ ಕೂಡಲೇ... "ನಾನು ದಂಗಾಗಿ ಹೋದೆ......!!!". ಸಾವರುಸಿಕೊಳ್ಳುತ್ತಲೇ............ ನೀನು ಕೆಲಸ ಮಾಡ್ತೀಯಲ್ಲಾ ಆ ಮನೆಯ ಯಜಮಾನರಿಗೆ ಹೇಳು.. ತರಿಸಿಕೊಡುವರು, ಅಯ್ಯೋ.. ಅದು ಯಾವ್ ಭಾಷೆ ತೂ.. ಬರೋದೇ ಇಲ್ಲ ನನ್ಗೆ ಅಂದಳು.. ಭಾಷೆ ಬರದೆ ಅರಬೀ ಮನೆಯಲ್ಲಿ ಆ ಮಗು ಜೊತೆ ಒಡನಾಟ, ಮನೆಮಂದಿಯೊಂದಿಗೆ ಮಾತುಕತೆ ಹೇಗಿರಬೇಕು ದೇವರೇ..!! ಇವಳು, ಎಂದು ಯೋಚಿಸ್ತಾ ನಿಂತೆ..!!
ಏನು.... ಏನು ತಂದು ಕೊಡ್ತೀಯಾ..!!? ಎಂದು ಕೈ ಅಲ್ಲಾಡಿಸಿ ಕೇಳಿದರೆ ನನಗೆ ಉತ್ತರಿಸಲು ತೋಚಲೇ ಇಲ್ಲ..!! ಮನಸಲ್ಲೇ ನೂರಾರು ದ್ವಂದ್ವಗಳು.. ಅವಳ ನೋಡಿದರೆ ಪಾಪ ಎನಿಸುತ್ತೇ ಆದರೆ ಛೇ..!! ಈ ಕೆಟ್ಟ ಅಭ್ಯಾಸ ಎಲ್ಲಾ ಯಾಕೆ ಈ ಹುಡುಗೀಗೇ ಅಚ್ಚುಕಟ್ಟಾಗಿ ತಿಂದುಕೊಂಡಿರಬಾರದ ಅಥವಾ ಆ ಮನೆಯಲ್ಲಿ ಅವಳ ಹುಚ್ಚು ಹೆಚ್ಚಿಸುವಂತಾ ಘಟನೆಗಳು ನೆಡೆಯುತ್ತಾ ?. ಹೀಗೇ ಏನೇನೋ ಪ್ರಶ್ನೆಗಳು ನನ್ನೊಳಗೆ. ಒಬ್ಬ ಮನುಷ್ಯನನ್ನು ನೋಡಿ ಅವರು ಹೇಗೆ, ಏನೂ, ಎಂತವರು ಎಂದು ತೀರ್ಮಾನಿಸುವುದು ಬಹಳ ಕಷ್ಟದ ಕೆಲಸ. ಆದರೂ ನಾನು ಕೊನೆಗೂ ಅವಳ ಪ್ರಶ್ನೆಗೆ ಉತ್ತರಿಸಲೇ ಇಲ್ಲ ಮೌನವಾಗೇ ನಿಂತು ಬಿಟ್ಟೆ....!!!
ನಾನು ಈ ಹುಡುಗಿ ನೋಡಿದ್ದು ಆಗಷ್ಟೇ..?? ಯಾವುದೋ ಅರಬೀ ಮಗುವನ್ನು ಅಪಾರ್ಟ್ಮೆಂಟ್ ಮುಂದೆ ಆಟವಾಡಿಸುತ್ತಾ ಇದ್ದಳು. ನಾವಿರುವ ಅಪಾರ್ಟ್ಮೆಂಟ್ ನಲ್ಲಿ ಯಾರೂ ಪರಿಚಯ ಇಲ್ಲ, ಪಕ್ಕದ ಮನೆಯಲ್ಲಿ ಯಾರಿದ್ದಾರೋ ಎಂಬುದು ೬ ವರ್ಷ ಕಳೆದರೂ ಇನ್ನೂ ಗೊತ್ತಾಗಿಲ್ಲ. ಅಂತಹದರಲ್ಲಿ ಮಹಡಿ ಮೇಲೆ ಯಾವುದೋ ಮನೆ ಕೆಲಸದ ಹುಡುಗಿ ಇಷ್ಟು ಜೋರು ಮಾಡಿ ನಿನ್ನ ಗಂಡನಿಗೆ ಹೇಳಿ ತರಿಸಿಕೊಡು ಎಂದು ಹೇಳಬೇಕಾದರೆ "ಈ ಕಡ್ಡಿಪುಡಿಯೋ ಅಥವಾ ಆ ಮನೆಮಂದಿಯೋ ಎಷ್ಟು ಹುಚ್ಚು ಹಿಡಿಸಿರಬೇಡ....!!!???"
ನಿತ್ರಾಣದ ಆ ಕಣ್ಣುಗಳು ಹಂಬಲಿಸುತ್ತಿರುವುದು ಕಾಣುತ್ತಿದೆ...ಆದರೆ ತಂದುಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ..!!
ನಿತ್ರಾಣದ ಆ ಕಣ್ಣುಗಳು ಹಂಬಲಿಸುತ್ತಿರುವುದು ಕಾಣುತ್ತಿದೆ...ಆದರೆ ತಂದುಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ..!!