Indian Institute of Engineers (Kuwait)ನ ವತಿಯಿಂದ ಒಂದು ದಿನದ ಪರಿಸರ ಸಂರಕ್ಷಣೆಯತ್ತ ಎಲ್ಲರನ್ನೂ ಕೊಂಡೊಯ್ಯುವ ವಿಚಾರವಾಗಿ ಒಂದು ಮೈಲ್ ಬಂದಾಗ ಶುಕ್ರವಾರ ಬೆಳಿಗ್ಗೆ ಬೇಗ ಎದ್ದು ಹೋಗಲು ಆಗುತ್ತಾ? ಎಂದು ಯೋಚಿಸಿ ಕೊನೆಗೆ ಹೋಗೋಣ ಸದಾ ಬರ್ತ್ ಡೆ, ಮದುವೆ ಅದು ಇದು ಅಂತೇಳಿ ಪಾರ್ಟಿಗಳಿಗೆ ಹೋಗ್ತೀವಿ ಇಂತಹದಕ್ಕೆ ಹೋಗಬಾರದೆ ಎನ್ನಿಸಿ, ಕೊನೆಗೆ ಬೆಳಗ್ಗೆ ೬ಕ್ಕೆ ಎದ್ದು ತಯಾರಾಗಿ ಸಾಲ್ಮಿಯ (ಕುವೈತಿನ ಒಂದು ಸ್ಥಳ) ಅಲ್ಲಿಗೆ ಎಲ್ಲರೂ ಬರುವಂತೆ ಹೇಳಿದ್ದರು ನಮ್ಮ ಮನೆಯಿಂದ ೩೦ ಕಿ.ಮೀ ದೂರವಿದ್ದರೂ ನಮಗೇನು ಪರಿಸರದೊಡನೆ ಒಡನಾಟ ಬೇಕಿತ್ತು ಹೊರಟೇಬಿಟ್ಟೆವು.
೭.೩೦ರಷ್ಟರಲ್ಲಿ ಎಲ್ಲರೂ ಒಂದು ಬಸ್ ನಲ್ಲಿ ಮೆಸ್ಸಿಲ್ಲಾ ಮಾರ್ಗವಾಗಿ ಹೋಗುತ್ತಲೇ ಅಲ್ಲೇ ಕಾದಿದ್ದ K'S PATH (Kuwait Society for the Protection of Animals and Their Habitat) ಈ ಸಂಸ್ಥೆಯ ಮೂಲಕವೇ ಪರಿಸರ ಸಂರಕ್ಷಣೆಯ ಸ್ಥಳವೊಂದನ್ನು ಸ್ವಚ್ಚಗೊಳಿಸುವ ವ್ಯವಸ್ಥೆ ನೆಡೆದಿದ್ದು. K'S PATH ಸಂಸ್ಥೆಯ ಸ್ವಯಂಸೇವಕರು ನಮ್ಮೆಲ್ಲ ಹೆಸರುಗಳನ್ನು ನೊಂದಾಯಿಸಿಕೊಂಡು ೬ನೇ ರಿಂಗ್ ರಸ್ತೆಯ ಮೂಲಕ ಅವರನ್ನು ಹಿಂಬಾಲಿಸುವಂತೆ ಬಸ್ ಡ್ರೈವರ್ ಗೆ ಹೇಳಿದರು. ನಾವು ಏನು ಮಹಾ ಘನಂದಾರಿ ಕೆಲಸ ಮಾಡುತ್ತೇವೋ ಗೊತ್ತಿಲ್ಲ. ಅದು ಎಂತಹ ಸ್ಥಳವೋ, ಅಚ್ಚುಕಟ್ಟಾಗಿ ಮಲಗಬಹುದಿತ್ತೇನೋ ಎಂದು ಮನಸಲ್ಲೇ ಗೊಣಗಿಕೊಳ್ಳುತ್ತಿದ್ದೆ.
ಕುವೈತ್ ಸಿಟಿಯಿಂದ ಸುಮಾರು ೫೦ ಕಿ.ಮೀ ದೂರವಿರುವ ಅಬ್ದಲ್ಲಿಯ (Abdelliya) ಎಂಬ ಹೊರವಲಯದಲ್ಲಿರುವ ಒಂದು ಏರಿಯಾಗೆ ಹೋಗುವ ಮಾರ್ಗ ಮಧ್ಯ ಒಂಟೆಗಳು, ಕುದುರೆ, ಕುರಿಗಳ ಹಿಂಡು ಜೊತೆಗೆ ಹೀಗೆ ಒಂದೊಂದೆ ನೋಡಿಕೊಂಡು ಹೋಗುತ್ತಾ ಇದ್ದಂತೆ ದಾರಿಯ ಮಧ್ಯದಲ್ಲಿ ಫಾತಿಮಾ ಮಹಲ್ ಎಂದು ಯಾರೋ ಕುವೈತಿ ಕುಟುಂಬದವರು ಕಟ್ಟಿಸಿರುವ ಮಾಸ್ಕ್ ಕಣ್ಣಿಗೆ ಬಿತ್ತು. ತಾಜ್ ಮಹಲ್ ಮಾದರಿಯಲ್ಲೇ ಇದೆ ಅದೇ ವಿನ್ಯಾಸವುಳ್ಳ ಈ ಮಾಸ್ಕ್ ನೋಡಿ ತಾಜ್ ಮಹಲ್ ಕಂಡಂತಾಯ್ತು...
ಮಂಜು ಮುಸುಕಿದ ಹಾದಿಯಲ್ಲಿ ಕಂಡ ಮಹಲ್
ಸ್ವಲ್ಪ ಸಮಯದ ನಂತರ ಫೇಸ್-೧ ಹೆಬ್ಬಾಗಿಲಿನಲ್ಲಿ ಸೆಕ್ಯುರಿಟಿ ಜನರೊಂದಿಗೆ K'S PATH ಸ್ವಯಂ ಸೇವಕರು ಮಾತನಾಡಿ ನಮ್ಮೆಲ್ಲರನ್ನು ಒಳಗೆ ಕರೆದುಕೊಂಡು ಹೋದರು ಒಳ ಹೋಗುತ್ತಿದ್ದಂತೆ ಅದೇನೋ ಸ್ವಚ್ಚಂದ, ಗಿಡ ಮರಗಳು ಹೂಬಿರಿದು ನಗುವ ಭಾವ ನಮ್ಮನ್ನೆಲ್ಲಾ ತುಂಬು ಹೃದಯದಿಂದ ಬರಮಾಡಿಕೊಂಡವು.
ಕುವೈತಿಗೆ ಬಂದು ಏಳು ವರ್ಷಗಳಾದರು ನಾನು ಈ ಸ್ಥಳದ ಬಗ್ಗೆ ನಿಜಕ್ಕೂ ಕೇಳಿರಲಿಲ್ಲ. ಕುವೈತಿ ದೇಶದ ಅತಿ ಪ್ರಸಿದ್ಧ ಕಂಪನಿ ಕುವೈತ್ ಆಯಿಲ್ ಕಂಪನಿಗೆ ಸೇರಿದ ಭೂಮಿಯಲ್ಲಿ ಸುಮಾರು ಒಂದು ಮಿಲಿಯನ್ ಸ್ಕೊಯರ್ ಮೀಟರಿನಷ್ಟು ಫೇಸ್-೧ಗೆ ಮೀಸಲಿಟ್ಟು ಫೇಸ್-೨ಗೆ ಸುಮಾರು ೨ ಮಿಲಿಯನ್ ಸ್ಕೊಯರ್ ಮೀಟರಿನಷ್ಟು ಸ್ಥಳವನ್ನು ಪ್ರಕೃತಿಗೆಂದೇ ಮೀಸಲಿಟ್ಟಿದ್ದಾರೆ. ಈ ಪ್ರದೇಶವನ್ನು K'S PATH (Kuwait Society for the Protection of Animals and Their Habitat)ಇವರ ಸಹಯೋಗದೊಂದಿಗೆ ಇಡೀ ಭೂಪ್ರದೇಶವನ್ನು ಸೂಕ್ಷ್ಮರೀತಿಯಲ್ಲಿ ಪರಿಶೀಲಿಸಿ ಸ್ವಚ್ಚತೆಯನ್ನು ಮಾಡುತ್ತಲೇ ಬಂದಿದ್ದಾರೆ.
ಹಿಂದೆ ಹಲವು ಬಾರಿ ಕುವೈತ್ ಮತ್ತು ಇರಾಕ್ ಯುದ್ಧದ ಸಂದರ್ಭದಲ್ಲಿ ಬಿದ್ದಿದ್ದ ಗುಂಡು ಮದ್ದುಗಳನ್ನು ಸಹ ಹೊರತೆಗೆದು, ಕಸಕಡ್ಡಿಗಳನ್ನನ್ನೆಲ್ಲಾ ಬೇರ್ಪಡಿಸಿ ಒಂದು ಸ್ವಚ್ಚಂದ ನೆಲೆಯನ್ನಾಗಿ ಸೃಷ್ಟಿಸಿದ್ದಾರೆ. ಈ ಪ್ರದೇಶದಲ್ಲಿ (ಫೇಸ್-೧) ಇಲ್ಲಿ ಎರಡು ಕೃತಕ ಕೊಳಗಳನ್ನು ನಿರ್ಮಿಸಿದ್ದಾರೆ. ಈ ಕೊಳದಲ್ಲಿ ಲೀಲಾಜಾಲವಾಗಿ ನಗುವ ಆ ನೀರೆಯನ್ನು ಕಂಡರೆ ಈ ಕೊಳ ಕೃತಕವಾದದ್ದಲ್ಲ ನೈಸರ್ಗಿಕವಾಗೇ ಈ ಮರುಭೂಮಿಯಲ್ಲಿ ಹುಟ್ಟಿದವಳೇನೋ ಎಂದೆನಿಸುತ್ತದೆ. ಇದೇ ಕೊಳಕ್ಕೆ ಹಲವಾರು ಪಕ್ಷಿಗಳು ವಲಸೆ ಬಂದು ಹೋಗುತ್ತಿರುತ್ತವೆ. ಈ ಕೊಳದ ಈ ಕೊಳದ ಸುತ್ತಲೆಲ್ಲ ಹಸಿರು ಜಿನುಗುಡುತ್ತಲಿವೆ ಜೊತೆಗೆ ದುಂಬಿಗಳ ಕಲರವ ಎಲ್ಲರ ಕಿವಿಯನ್ನು ಇಂಪುಗೊಳಿಸುತ್ತದೆ.
ಮೊಟ್ಟ ಮೊದಲಿಗೆ ಕಂಡ ಕೊಳ ಮನಸ್ಸಿಗೆ ಮುದ ನೀಡಿತ್ತು ಸ್ವಲ್ಪ ಸಮಯದ ನಂತರ ಎಲ್ಲರಿಗೂ ಕೈ ಚೀಲಗಳು, ಕಸವನ್ನು ತುಂಬುವ ಚೀಲಗಳನ್ನು ಸಹ ಕೊಟ್ಟರು. ಇಲ್ಲಿ ಈಗಾಗಲೇ ಸ್ವಚ್ಚಂದವಾಗಿರುವ ಸ್ಥಳ. ಅದನ್ನು ಏಕೆ ಸ್ವಚ್ಚಗೊಳಿಸಬೇಕು ಎಂದುಕೊಳ್ಳುತ್ತಿರಬಹುದು. ಈ ಮರುಭೂಮಿಯಲ್ಲಿ ಗಾಳಿ ಹೆಚ್ಚು ಒಮ್ಮೊಮ್ಮೆ ಬಿರುಗಾಳಿ ಎಲ್ಲಿಯೋ ಇರುವ ಕಸಕಡ್ಡಿಗಳನ್ನು ಹೊತ್ತು ಇನ್ನೊಂದೆಡೆ ಸರಾಗವಾಗಿ ತಂದು ಬಿಸುಡುವಂತ ಕೆಲಸ ಈ ವಾಯುದೇವ ಮಾಡಿಮುಗಿಸುತ್ತಾನೆ. ಈ ಗಾಳಿಯ ಜೊತೆಗೆ ನೇಸರನ ತೊಟ್ಟಿಲನ್ನಾಗಿಸಲು ಹೊರಟಿರುವ ಈ ಸ್ಥಳದಲ್ಲಿ ಮನುಷ್ಯನೂ ಕೆಲಸ ಮಾಡಬೇಕಾಗುತ್ತದೆ ಅಲ್ಲವೇ? ಅಲ್ಲಿ ಹಲವು ಗಿಡ ಮರಗಳನ್ನು ನೆಟ್ಟು, ಅದಕ್ಕೆಂದೇ ಹನಿ ನಿರಾವರಿಯ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ ಇವೆಲ್ಲಾ ಕೆಲಸಗಳನ್ನು ಮಾಡುವಾಗ ಈ ಮೂಢ ಮಾನವ ತಾನು ತಂದಿದ್ದ ಹೂಗಿಡಗಳ ಪಾಟ್, ಪ್ಲಾಸ್ಟಿಕ್ ಚೀಲಾ ಎಲ್ಲವನ್ನೂ ತನ್ನ ಕೆಲಸ ಮುಗಿದ ಮೇಲೆ ಅಲ್ಲೇ ಬಿಟ್ಟು ಹೋಗಿದ್ದ, ಜೊತೆಗೆ ಟೈಂ ಪಾಸ್ಗೆ ಸಿಗರೇಟ್, ಪೆಪ್ಸಿ ಎಂದು ಇವೆಲ್ಲವನ್ನು ತಿಂದು ಕುಡಿದು ಅಲ್ಲಿಯೇ ಬಿಸಾಕಿದ್ದರು. ಇಂತಹವನ್ನೆಲ್ಲಾ ನಾವುಗಳು ಸ್ವಚ್ಚಗೊಳಿಸುವ ಸಣ್ಣ ಪ್ರಯತ್ನ ಮಾಡಿದೆವು.
ಹಾಗೆ ನಾವು ಸುಮಾರು ೩೦ ಜನರಲ್ಲಿ ೩ ಗುಂಪು ಮಾಡಿ ಸುತ್ತುವರೆದೆವು. ಮುಂದೆ ಸಾಗಿದಂತೆ ನೆಲದಲ್ಲಿ ಹೆಜ್ಜೆ ಇಡಲೂ ಭಯ ಪಾಪ ಈ ಹುಳಹುಪ್ಪಟಗಳು ತಮಗಾಗೇ ಗೂಡುಕಟ್ಟಿಕೊಂಡಿರುವವನ್ನು ಎಲ್ಲಿ ತುಳಿದು ಬಿಡುತ್ತೇವೋ ಎಂಬ ಭಯ. ಹಾವುಗಳು, ಹಲ್ಲಿಗಳು, ಇರುವೆ, ಇಲಿ, ಹೆಗ್ಗಣ ಹೀಗೆ ಹಲವಾರು ಪ್ರಾಣಿಗಳು ತಮ್ಮ ತಮ್ಮ ಮನೆಗಳನ್ನು ಸ್ವತಂತ್ರದಿಂದ ಸುಂದರವಾಗಿ ಕಟ್ಟಿ ಕೊಂಡಿದ್ದವು. ಸುತ್ತಲಿನ ಭೂಪ್ರದೇಶವನ್ನು ಸುತ್ತುವರಿದು ಕೈಗೆ ಸಿಕ್ಕಿದ ಗಾಜು,ಚೀಲಗಳು, ಕಬ್ಬಿಣ ಸಲಾಕೆಗಳು, ಟೈಯರ್,ಪ್ಲಾಸ್ಟಿಕ್ ಸಾಮಾನುಗಳು ಹೀಗೆ ಸುಮಾರು ಕಸವನ್ನು ಶೇಖರಿಸಿದೆವು.
ಸಿಗರೇಟ್ ಸೇದಿ ಉಳಿದ ತುಂಡು ಮಣ್ಣಿನೊಳಗೆ ಬೆರೆತುಹೋಗಲು ಸುಮಾರು ೪೦೦ ವರ್ಷಗಳು ಬೇಕಾಗುತ್ತದೆ ಎಂದರೆ ಊಹಿಸಿಕೊಳ್ಳಿ. ಅಂತಹ ವಸ್ತುಗಳು ಮಣ್ಣಿನಲ್ಲಿ ಸೇರಿಕೊಂಡು ಮಣ್ಣಿನಲ್ಲಿರುವ ಸತ್ವವನ್ನೇ ನುಂಗಿಬಿಡುತ್ತವೆ. ಇಷ್ಟೆಲ್ಲಾ ಕೆಡಕಿನಲ್ಲೂ ಪ್ರಕೃತಿಗೆ ಮೀಸಲಿಟ್ಟ ಸ್ಥಳವನ್ನು ಬಿಡಲಾರರು. ಸದಾ ಅಲ್ಲಿ ಬರುವ ಪಕ್ಷಿಗಳನ್ನು ಬೇಟೆಯಾಡಲು ಬೇಲಿ ನುಸುಳಿ ಬರುವಂತ ಬೇಟೆಗಾರರೂ ಹೆಚ್ಚೆಂದು ಅಲ್ಲಿನ ನಿರ್ವಾಹಕರು ಹೇಳುತ್ತಿದ್ದು ಕೇಳಿ ಬೇಸರವೆನಿಸಿತು.
KOC ಎಂಬ ಕಂಪನಿ K’S Path ಸಹಯೋಗದೊಂದಿಗೆ ಪ್ರಾಣಿಗಳ ಸಹಜ ವಾಸಸ್ಥಾನ ಮಾಡಬೇಕೆಂದು ಈ ಭೂ ಪ್ರದೇಶವನ್ನು ಅಚ್ಚುಕಟ್ಟಾದ ಸ್ಥಳವನ್ನಾಗಿಸಿ ಪ್ರಾಣಿ, ಪಕ್ಷಿ, ಜೀವಜಂತುಗಳಿಗೆ ಅನುವು ಮಾಡಿಕೊಟ್ಟಿದೆ. ಇಂತಹ ಯೋಜನೆಯನ್ನು ಹಮ್ಮಿಕೊಂಡಿರುವು ಪ್ರಪಂಚದಲ್ಲೇ ಇದೇ ಮೊದಲ ಕಂಪನಿ ಎಂದು ಹೇಳುತ್ತಾರೆ. KOC ನೈಸರ್ಗಿಕವಾಗಿ ದೊರೆಯುವ ತೈಲ ಸಿರಿಯನ್ನು ತೆಗೆದು ಬಳಸುತ್ತಿರುವುದರಿಂದ ಈ ಭೂಮಿಯ ಫಲವತ್ತತೆ ನಶಿಸಿ ಹೋಗುವುದನ್ನು ಮತ್ತೊಂದೆಡೆ ನೈಸರ್ಗಿಕ ಸವಲತ್ತುಗಳನ್ನು ಸೃಷ್ಟಿಸುತ್ತಿವೆ ಇದು ಶ್ಲಾಘನೀಯ. ಎಲ್ಲರೂ ಹೇಳಬಹುದು ಆಯಿಲ್ (ತೈಲ) ದುಡ್ಡು ಇನ್ನೇನು ಮಾಡುತ್ತಾರೆ ಮಾಡಲಿ ಬಿಡಿ ಎಂದು, ನಿಜ ಒಪ್ಪಬೇಕಾದ್ದೆ ಆದ್ರೆ ದುಡ್ಡು ಇದ್ದು ಎಷ್ಟು ಜನ ಯಾರು ಯಾರು ಏನು ಮಾಡುತ್ತಾರೆ ಹೇಳಿ. ಇಲ್ಲಿ ಕೆಲಸಗಳಿಗೆಂದೆ ಹಲವಾರು ವಿಜ್ಞಾನಿಗಳು, ಪರಿಸರ ತಜ್ಞರು, ಇಂಜಿನಿಯರುಗಳು ಬಹಳಷ್ಟು ಕೆಲಸ ಮಾಡುತ್ತಿದ್ದಾರೆ ಮುಂದೊಂದು ದಿನ ಈ ಪ್ರದೇಶ ಮರುಭೂಮಿಯ ಮಲೆನಾಡಾಗುವುದಂತೂ ಸತ್ಯ.
ಪ್ರಾಣಿ,ಪಕ್ಷಿ, ಗಿಡಮರಗಳ ನೆಲೆವೀಡಾಗಲೆಂದು ಮಾಡಹೊರಟಿರುವ ಈ ಸ್ಥಳವನ್ನು ಒಂದೆರಡು ಘಂಟೆಗಳ ಕಾಲ ಸ್ವಚ್ಚಗೊಳಿಸಿ ಬಂದಿದ್ದಕ್ಕೇನು ನಮ್ಮಗಳಿಗೆ ತೊಂದರೆಯಾಗಿಲ್ಲ ಅಲ್ಲಿರುವ ಗಿಡ ಮರ, ಜೀವಜಂತುಗಳು, ಎಲ್ಲ ವಾಸಸ್ಥಾನ ಹೇಗಿದೆ ಯಾವರೀತಿ ಬೆಳೆಯುತ್ತಿವೆ. ಪ್ರಕೃತಿ ಒಂದು ಪಾಠವಿದ್ದಂತೆ ನಮಗೆ ಗೊತ್ತಿಲ್ಲದನ್ನು ಕಲಿಸುತ್ತದೆ. ಅಂದು ನಮ್ಮ ಜೊತೆಯಲ್ಲಿ ಹಲವು ಕುವೈತಿ ಜನರೂ ಕೂಡಾ ಬಂದಿದ್ದರು ಅವರೊಂದಿಗಿನ ಒಡನಾಟ ಒಂದೊಳ್ಳೆ ಅನುಭವವನ್ನು ಕೊಟ್ಟಿತು.
ಗೂಡುಗಳು...
ಕೊನೆಯಲ್ಲಿ ಎಲ್ಲರೂ ಹೊರಡುವ ಮುನ್ನ ನಮ್ಮ ಜೊತೆಗೆ ಇದ್ದ ಕುವೈತಿ ಇಂಜಿನಿಯರ್ ಒಂದು ಮಾತು ಹೇಳಿದರು "ಮನುಷ್ಯ ಈ ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ ಅವನು ಒಂದಿಲ್ಲೊಂದು ದಿನ ಭೂಮಿಯ ಒಳಗೆ ಹೂತುಹೋಗುತ್ತಾನೆ ಅಂತಹದರಲ್ಲಿ ಎಲ್ಲಿದ್ದರೂ ನಮ್ಮ ಜೊತೆ ಇರುವ ಪ್ರಕೃತಿಗೆ ನಮ್ಮ ಕೈಲಾದ ಕೆಲಸ ಮಾಡಲೇಬೇಕು" ಎಷ್ಟು ನಿಜ ಅನ್ನಿಸಿತು. ಇದು ನಮ್ಮ ಊರಲ್ಲ ಆದರೂ ನಮಗೆ ಅನ್ನ ಕೊಡುತ್ತಿರುವ ಊರು ಗೌರವಿಸಲೇಬೇಕು ನಮ್ಮ ಕೈಲಾದದ್ದನ್ನು ಮಾಡಲೇಬೇಕು ಎಂದೆನಿಸಿತು.
ಕಡಿಮೆ ಸಿಹಿಯುಳ್ಳಂತಹ ಖರ್ಜೂರದ ಮರಗಳು
ನಾವು ಎಲ್ಲಿದ್ದರೇನು, ಹೇಗಿದ್ದರೇನು ಪ್ರಕೃತಿ ಎಂಬವಳ ಮಡಿಲಲ್ಲೇ ಬದುಕಬೇಕು. ಆ ಪ್ರಕೃತಿಗೆ ಹಾರೈಕೆ ಮಾಡುತ್ತಲೇ ಇರಬೇಕು ಇಲ್ಲವಾದರೆ ಒಮ್ಮೆ ಮುನಿಸ್ಯಾಳು ಸುನಾಮಿ, ಭೂಕಂಪ ತಂದ್ಯಾಳು.
KOCಗೆ ಒಳಪಟ್ಟ ಭೂಪ್ರದೇಶದಲ್ಲಿ ಸುಮಾರು ೧೨% ಭೂಭಾಗವನ್ನು ಪರಿಸರಕ್ಕೆ ಮೀಸಲಿಟ್ಟಿರುವುದು ಖುಷಿಯ ವಿಷಯ. ಇಂತಹುದೇ ಕೆಲಸಗಳನ್ನು ಸರ್ಕಾರ ಮತ್ತು ಕಂಪನಿಗಳು ಮಾಡುತ್ತ ಬಂದರೆ ನಿಜಕ್ಕೂ ಸಂತಸ ಮತ್ತು ಪ್ರಕೃತಿ ಮಾತೆಗೆ ಕೊರತೆ ಎಂಬುದು ಬರುವುದಿಲ್ಲ ಎಂದೆನಿಸುತ್ತದೆ.