ಬದಲಾವಣೆ ಜಗದ ನಿಯಮ ಎಂಬಂತೆ ತಾಂತ್ರಿಕ ಜಗತ್ತಿನಲ್ಲೂ ದಿನಕ್ಕೊಂದು ಹೊಸ ಆಯಾಮಗಳು ಸೃಷ್ಟಿಯಾಗುತ್ತಲಿವೆ. ಅದರಂತೆ ಜನರು ಸಹಾ ಹೊಸ ಹೊಸ ತಂತ್ರಶಾಸ್ತ್ರಗಳನ್ನು ಉಪಯೋಗಿಸುತ್ತಲೇ ಬಂದಿದ್ದೇವೆ.
ಬೆಂಗಳೂರಿನ ಹೃದಯಭಾಗವಾದ ಕಾರ್ಪೋರೇಷನ್ ಬಳಿ ಇತ್ತೀಚೆಗೆ ನಡೆದ ಘಟನೆ:
ಮಹಿಳೆಯೊಬ್ಬರು ಎ.ಟಿ. ಎಂ ಹಣ ತೆಗೆಯುವಾಗ ಏಕಾಏಕಿ ಒಬ್ಬ ವ್ಯಕ್ತಿ ದೌರ್ಜನ್ಯವೆಸಗಿ, ಆಕೆಯನ್ನು ಹೀನಾಯವಾಗಿ ಥಳಿಸಿದ. ಆಕೆಯನ್ನು ಅಂಗವೈಕಲ್ಯತೆಗೆ ತಳ್ಳಿಬಿಟ್ಟ. ಇದು ಕೇವಲ ಹಣಕ್ಕಾಗಿ. ಸಿಸಿಟಿವಿಯಲ್ಲಿ ಕಂಡ ದೃಶ್ಯಾವಳಿ ಎಲ್ಲರ ಮನಸ್ಸಿನಲ್ಲಿ ಆಘಾತವನ್ನು ಸೃಷ್ಟಿಸಿದೆ. ಈ ವಿಷಯವಾಗಿ ಫೇಸ್ ಬುಕ್, ಮಾಧ್ಯಮ, ಪತ್ರಿಕೆಗಳು ಎಲ್ಲೆಡೆ ಎಷ್ಟೋ ಚರ್ಚೆಗಳು ಸಾಗುತ್ತಲೇ ಬಂದಿವೆ.
- ಹೀಗೆ ಆತ್ಮೀಯರೊಬ್ಬರು ಫೇಸ್ ಬುಕ್ ನಲ್ಲಿ ಸ್ವರಕ್ಷಣೆ ಬಗ್ಗೆ ತಮ್ಮ ವಿಚಾರವನ್ನು ಹಂಚಿಕೊಂಡಾಗ ಒಬ್ಬರು "ಮಹಿಳೆಯರು ಸಮಾನತೆಯೆಂಬ ಪೊಳ್ಳು ಜಿದ್ದಿಗೆ ಬಿದ್ದು ಸಬಲರು ಎಂಬ ಹೆಗ್ಗಳಿಕೆಯ ತೋರಿಕೆ ಬಿಟ್ಟು ....ಸ್ವಾಭಿಮಾನ ಮತ್ತು ಸ್ವರಕ್ಷಣೆಯತ್ತ ಹೆಚ್ಚು ಗಮನಕೊಟ್ಟರೆ ಸಮಾನತೆ ತಾನೇ ತಾನಾಗಿ ಒದಗಿ ಬರುತ್ತದೆ. ಸಮಾನತೆ ಒಂದು ಗೌರವವಾಗಿರಲಿ, ಅದು ಹಕ್ಕಾಗಿ ಅಲ್ಲ." - ಹೀಗೆಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. ಇದು ಅವರ ವೈಯಕ್ತಿಕ ಅಭಿಪ್ರಾಯವೇ ಆದರೂ ಸಮಾನತೆ ಬೇಕು ಎಂಬುದು ಸತ್ಯ. ಹಾಗಂತ ಇಂತಹ ಪರಿಸ್ಥಿತಿ ಒಬ್ಬ ಗಂಡಸಿಗೆ ಬರುವುದೇ ಇಲ್ಲ ಎಂದೇನಿಲ್ಲ. ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಆ ಹೆಣ್ಣಿನ ಬದಲು ಗಂಡೇ ಅಲ್ಲಿದ್ದರೂ, ಅವನೂ ಸಹ ಎಷ್ಟರ ಮಟ್ಟಿಗೆ ಸ್ವರಕ್ಷಣೆ ಮಾಡಿಕೊಳ್ಳುತ್ತಿದ್ದನೋ ಗೊತ್ತಿಲ್ಲ. ಅಲ್ಲಿ ರೋಲಿಂಗ್ ಶಟರ್ ಹಾಕಿ ಬಂದೂಕು ಮತ್ತು ಮಚ್ಚನ್ನು ತನ್ನ ಕೈಯಲ್ಲಿ ಹಿಡಿದು ಬೆದರಿಸಿದರೆ ಯಾವುದೇ ಗಂಡಸು ಕೂಡ ಹೆದರುವ ಸಾಧ್ಯತೆಗಳಿವೆ. ತಕ್ಷಣಕ್ಕೆ ಕಿರುಚಿ, ಬೊಬ್ಬೆಯಿಟ್ಟರೂ ಕೊಲ್ಲುವ ಸಾಧ್ಯತೆಗಳೇ ಹೆಚ್ಚು. ಇಂತಹುದರಲ್ಲಿ ಆ ಹೆಣ್ಣು ಭಯಪೂರಿತಳಾಗಿ ಕೈಕಾಲು ಆಡದಿದ್ದರೆ ಏನು ಮಾಡಲೂ ಸಾಧ್ಯವಿಲ್ಲ. ಹೆಣ್ಣಿನ ಸಮಾನತೆಯೇ ಬೇರೆ ಈ ಘಟನೆಯೇ ಬೇರೆ. ಇಂತಹ ಘಟನೆ ಗಂಡು ಮತ್ತು ಹೆಣ್ಣು ಯಾರಿಗಾದರೂ ಆಗಬಹುದು.
ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ??. ಎಲ್ಲ ತೊಂದರೆಗಳಿಗೂ ಪರಿಹಾರವೆಂಬುದು ಇದ್ದೇ ಇರುತ್ತೆ ಆದರೆ ಅದಕ್ಕೆ ಸಹಕಾರಿಯಾಗಿ ನಮ್ಮಂತಹ ಸಾಮಾನ್ಯ ಜನ, ಪೋಲೀಸ್, ಮಾಧ್ಯಮ, ಸರ್ಕಾರ ಹಾಗು ತಾಂತ್ರಿಕ ವ್ಯವಸ್ಥೆಗಳೂ ಹೊಂದಿಕೊಳ್ಳಬೇಕು. ಸುಮ್ಮನೆ ಸಾರಾಸಗಟಾಗಿ ಒಂದು ಬೃಹತ್ ಮಹಾನಗರಿಯನ್ನೇ ಗುರಿ ಮಾಡಿ ದೂಷಿಸಲೂ ಸಾಧ್ಯವಿಲ್ಲ. ಬೆಂಗಳೂರೆಂಬ ಮಾಂತ್ರಿಕ ನಗರ ಎಷ್ಟೋ ಜನರಿಗೆ ಅನ್ನ, ಬಟ್ಟೆಯನ್ನು ನೀಡುತ್ತಿದೆ. ಹೊರಗಿನಿಂದ ಬಂದ ಜನರು ಬೆಂಗಳೂರಿನಲ್ಲಿ ನೆಲೆಯೂರಿ ತಮ್ಮ ಬದುಕು ಸೃಷ್ಟಿಸಿಕೊಂಡಿದ್ದಾರೆ. ಈ ಹೊರಗಿನಿಂದ ಬಂದವರಲ್ಲಿ ಒಳ್ಳೆಯವರೂ, ಕೆಟ್ಟವರೂ ಇರುತ್ತಾರೆ ಹಾಗೆ ಬೆಂಗಳೂರಿಗರಲ್ಲೂ ಒಳ್ಳೆಯ ಮತ್ತು ಕೆಟ್ಟ ಜನರೂ ಇರುತ್ತಾರೆ. ಊರಿದ್ದ ಕಡೆ ಹೊಲಗೇರಿ ಎಂಬಂತೆ ಎಲ್ಲಾ ಸಾಧ್ಯಾನುಸಾಧ್ಯತೆಗಳು ಇದ್ದೇ ಇರುತ್ತವೆ.
ಸಿಸಿಟಿವಿ ಯನ್ನು ಅಳವಡಿಸಿರುವುದೇಕೆ ಬರಿ ಅಲ್ಲಿ ನಡೆದ ಘಟನೆಗಳನ್ನು ಚಿತ್ರಿಸಿ, ಜನಕ್ಕೆ ಬಿತ್ತರಿಸುವುದು, ಮಾಧ್ಯಮಗಳು ಆಹಾರವಾಗಿಸಿಕೊಳ್ಳುವುದು, ಬೆಂಗಳೂರಿನಿಂದ ಬಿಬಿಸಿವರೆಗೂ ಚರ್ಚೆ ಹರಡುವುದಕ್ಕಾಗಿ ಅಲ್ಲ ಅಥವಾ ಇಂತಹ ಘಟನೆಯನ್ನು ನೋಡಿದ ಒಬ್ಬ ಯೂರೋಪಿನಾಕೆ ತನ್ನ ಟ್ವಿಟರ್ ನಲ್ಲಿ "ಓಹ್..!! ಬೆಂಗಳೂರು ಸುರಕ್ಷಿತವಲ್ಲ" ಎಂದಷ್ಟೇ ಬರೆದುಕೊಳ್ಳಲೂ ಅಲ್ಲ. ಪೋಲೀಸ್ ಕಾರ್ಯಾಚರಣೆಗೆ ಸಹಕಾರಿಯಾಗುವ ಈ ಚಿತ್ರ ತುಣುಕುಗಳನ್ನು ಮತ್ತಷ್ಟು ತಾಂತ್ರಿಕತೆಗೊಳಿಸಿದ್ದರೆ ಆ ಮಹಿಳೆಗೆ ಅಷ್ಟು ಬರ್ಬರತೆ ಗೋಚರವಾಗುತ್ತಿರಲಿಲ್ಲವೇನೋ. "ಸಿಸಿಟಿವಿ ಯಲ್ಲಿ ಇಂತಹ ಘಟನೆಗಳು ಚಿತ್ರೀಕರಣವಾಗುವಾಗ ಬೇರೆಲ್ಲಿಂದಲೋ ಈ ದೃಶ್ಯಗಳನ್ನು ನೋಡುವಂತೆಯೋ ಅಥವಾ ಇಂತಹ ಘಟನೆ ನಡೆಯುವಾಗ ಯಾವುದಾದರು ತುರ್ತು ಪರಿಸ್ಥಿತಿ ಸೂಚನೆಯೋ ಅಥವಾ ಕರೆ ಗಂಟೆಗಳ ಸದ್ದು ಬರುವಂತಿದ್ದರೆ ಸೂಕ್ತವೆನಿಸುತ್ತದೆ. ಅಂತೆಯೇ ಪ್ರತಿ ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ವ್ಯವಸ್ಥೆಗಳೂ ಇರಬೇಕಿತ್ತು" ಅಲ್ಲದೆ "ರೋಲಿಂಗ್ ಶಟರ್ ಇದು ತೀರಾ ಅಪಾಯಕಾರಿ. ಒಮ್ಮೆ ಆ ಬಾಗಿಲು ತೆರೆದಿಟ್ಟರೆ ಅದನ್ನು ಮತ್ತೆ ಯಾರೋ ಬಂದು ಸಲೀಸಾಗಿ ಮುಚ್ಚುವಂತೆ ಇರಬಾರದಿತ್ತು". ಶಟರ್ ಗಳಿಗಿಂತ ಸುರಕ್ಷಿತವಾದ ಬಾಗಿಲುಗಳನ್ನೂ ಸಹ ಮಾಡಬಹುದಿತ್ತೇನೋ..?".
ಎಲ್ಲ ಮುನ್ನೆಚ್ಚರಿಕೆಗಳಿಗೂ ಮುನ್ನ ಬೆಂಗಳೂರಿಗರು ಅತಿ ಹೆಚ್ಚು ಕಾಳಜಿ ವಹಿಸಬೇಕಿದೆ. ಮನೆ ಬಾಡಿಗೆಗೆ ಬರುವ ವ್ಯಕ್ತಿ ಹೆಚ್ಚು ಹಣ ಕೊಡುತ್ತಾನೆಂಬ ಕಾರಣಕ್ಕೆ, ದಿಕ್ಕುದೆಸೆಯಿಲ್ಲದವರಿಗೆ ಮನೆ ಬಾಡಿಗೆ ಕೊಡುವುದು, ಆ ಮನೆಯಲ್ಲಿ ನೆಲೆಸಿರುವ ವ್ಯಕ್ತಿಯ ಪೂರ್ವಪರ ಎಲ್ಲವನ್ನು ತಿಳಿಯಬೇಕು. ಅಂತೆಯೇ ಹತ್ತಿರದ ಪೋಲೀಸ್ ಠಾಣೆಗಳಿಗೆ ನಿಮ್ಮ ಮನೆ ಬಾಡಿಗೆಯಲ್ಲಿರುವವರ ಮಾಹಿತಿಯನ್ನು ನೀಡಬೇಕು (ಹಲವು ಪೋಲೀಸ್ ಠಾಣೆಗಳು ಈ ವಿಷಯವನ್ನು ಎಲ್ಲೆಡೆ ಬಿತ್ತರಿಸಿವೆ). ಹಣದ ಆಮಿಷಕ್ಕೆ ಒಳಗಾಗಿ ಬೆಂಗಳೂರಿನ ಆಸ್ತಿಪಾಸ್ತಿ ಹೊರ ರಾಜ್ಯದವರ ಪಾಲಾಗುತ್ತಲೇ ಬಂದಿದೆ ಇದನ್ನು ತಡೆಗಟ್ಟಲು ಸರ್ಕಾರವೂ ಮುನ್ನೆಚ್ಚರಿಕೆ ವಹಿಸಬೇಕಿದೆ.
ಎಲ್ಲ ವ್ಯವಸ್ಥೆಗಳೊಂದಿಗೆ ಮುನ್ನೆಚ್ಚರಿಕೆಯನ್ನೂ ನಾವುಗಳು ಕಲಿಯೋಣ. ಮಹಾನಗರಗಳಿಗೆ ಅಪವಾದಗಳು ಬೆಂಬಿಡದ ಭೂತಗಳಾಗದೆ ಮನುಷ್ಯತ್ವದ ನೆಲೆಕಾಣುವಂತಾಗಲಿ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲಿರುವ ಜ್ಯೋತಿ ಉದಯ್ ಆದಷ್ಟು ಬೇಕ ಗುಣಮುಖರಾಗಲೆಂದು ಆಶಿಸುತ್ತೇನೆ.