ಚಿತ್ರ @ ಅಂತರ್ಜಾಲ
ಮೋಟಾರುಗಳ ಸದ್ದಿಲ್ಲ, ತಣ್ಣನೆ ಮಲಗಿರುವ ನಗರ
ದಿನಪತ್ರಿಕೆ, ಹಾಲು, ಹೂ ಮಾರುವವರ ಧ್ವನಿಯಿಲ್ಲ
ಮನೆಗಳ ಮುಂದೆ ರಂಗೋಲಿ ಇರಲಿ, ಬೀದಿ ನಾಯಿಗಳ ಓಡಾಟವಿಲ್ಲ
ಸಾಲು ಸಾಲು ಮರಗಳು ತಮ್ಮ್ ತಮ್ಮ ನೆರಳ ಮೇಳದಲಿವೆ
ಬಾಯ್ತೆರೆದು ನಿಂತಿರುವ ಆಗಸದಲಿ ಪ್ರಶಾಂತ ಮೋಡಗಳು
ಆಗಸನ ಪ್ರತಿಬಿಂಬ, ಕನ್ನಡಿಯಲಿ ಮುಖ ತೋರುವಂತಾ ಕೊಳ
ಹಸಿರ ಹಾಸಿಗೆಯಲ್ಲಿ ಇಬ್ಬನಿಗಳ ಹನಿ ಮಿಣುಕು ಬೆಳಕಂತೆ
ಯಾರ ಕಾಲ್ತುಳಿತಕೂ ಸಿಗದೆ ಬೀರುತಿವೆ ಮಂದಹಾಸ...!!
ತುಂಬು ರಸ್ತೆಯಲಿ ಶಬ್ದವಿಲ್ಲದ ಏಕಾಂತ
ಸ್ವರ್ಗ ಸೃಷ್ಟಿಸಿದೆ ಆ ಸಾಲು ಮರಗಳಿಗೆ
ತೊಟ್ಟು ಕಳಚಿ ಬಿದ್ದ ಬಿನ್ನಾಣದ ತರಗೆಲೆಗಳು
ಮಾತ್ರ ಸಂತೃಪ್ತಿಯಲಿ ಸರಿದಾಡುವುದೇ ಸದ್ದು!!