ಅಮ್ಮ ಹೇಳೋಕ್ಕು ಕಾರಣ ಇದೆ. ಅಣ್ಣ (ಅಪ್ಪ) ದೇವನಹಳ್ಳಿಯಿಂದ ಬೆಂಗಳೂರಿಗೆ ಬರಬೇಕೆಂದರೆ ಸಾಧನೆ, ಬಸ್ಸುಗಳ ತೊಂದರೆ ಆದ್ದರಿಂದ ಆಗೆಲ್ಲ ಅಣ್ಣ ವಾರಕ್ಕೊಮ್ಮೆ ಮನೆಗೆ ಬರೋರು, ಇದನ್ನೆಲ್ಲಾ ತಪ್ಪಿಸಲು ಅಣ್ಣ ಮಾಗಡಿ ಹತ್ತಿರದ ಊರಿಗೆ ವರ್ಗಾವಣೆ ಮಾಡಿಸಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದರು. ಅಣ್ಣನ ವರ್ಗಾವಣೆ ಏನೋ ಆಯ್ತು, ದಿನ ಅಣ್ಣನ ಜೊತೆ ಇರುವ ಹಾಗೂ ಆಯ್ತು, ಆದ್ರೆ ಅಣ್ಣನಿಗೆ ಸಂಬಳವೇ ಬರುತ್ತಿರಲಿಲ್ಲ. ಇದೇ ಸಮಯದಲ್ಲಿ ಹೊಸ ಮನೆ ಬೇರೆ ಕಟ್ಟಿಸುತ್ತಿದ್ದ್ವು. ಅಣ್ಣನ ಸಂಬಳವೇ ಜೀವನಕ್ಕೆ ಆಧಾರ, ಅಂತಹದರಲ್ಲಿ ಸುಮಾರು ೧-೨ ವರ್ಷದವರೆಗೇ ಸಂಬಳವೇ ಬರಲಿಲ್ಲವೆಂದರೆ ಜೀವನ ಹೇಗೆ..?? ಅಬ್ಬಾ ಊಹಿಸಲೂ ಸಾಧ್ಯವಿಲ್ಲ ಅಮ್ಮನ ಅಳಲು, ಅಣ್ಣನ ಮೌನ ಎರಡೂ ಅರ್ಥವಾಗ್ತಿತ್ತು ಆದರೆ ನಾವೆಲ್ಲ ಚಿಕ್ಕವರು ಏನೂ ಮಾಡಲು ಸಾಧ್ಯವಾಗಿರಲಿಲ್ಲ..
ಆಗೆಲ್ಲ ಅಣ್ಣ ವಾರಕ್ಕೆ ಒಮ್ಮೆಯಾದರೂ ಡಿಡಿ ಆಫೀಸ್, ಅಲ್ಲಿ ಇಲ್ಲಿ ಎಂದು ಅಲೆಯೋದೆ ಕೆಲಸವಾಗಿತ್ತು. ಯಾವ ಕಚೇರಿ ಮೆಟ್ಟಿಲು ಹತ್ತಿದರೂ, ಯಾರನ್ನ ಕೇಳಿದರೂ ಏನೂ ಪ್ರಯೋಜನವಾಗದೇ ಅಣ್ಣ ಬೇಸತ್ತು ಬಸವಳಿದು ಹೋಗಿದ್ದರು.. ಅಣ್ಣನಿಗೆ ಆಗ ಸಂಬಳವೂ ಇಲ್ಲ, ಇತ್ತ ಮನೆಯಲ್ಲಿನ ಪಾಡು ಹೇಳತೀರದು, ತುತ್ತಿಗೂ ಕಷ್ಟಪಡುವಂತಾಗಿದ್ದ ಕಾಲವದು... ಸರ್ಕಾರಿ ಕಚೇರಿಗೆ ಅಲೆದು ಅಲೆದು ಕೊನೆಗೆ ನಿಂತು ಹೋಗಿದ್ದ ಸಂಬಳವೇನೋ ಪ್ರಾರಂಭವಾಯ್ತು ಆದರೆ ಆ ೨ವರ್ಷದ ಸಂಬಳ ತೆಗೆದುಕೊಳ್ಳಲು ಸುಮಾರು ೭-೮ ವರ್ಷ ಸರ್ಕಾರಿ ಮೆಟ್ಟಿಲು ಸವೆಸಿದ್ದರು.
ಇಂತಹ ಸಮಯದಲ್ಲಿ ತಬರನ ಕಥೆ ಪೂರ್ಣ ಅಣ್ಣನಿಗೆ ಒಪ್ಪುತ್ತಿತ್ತು... ತಬರನ ಚಪ್ಪಲಿಯೂ ಸಹ... ಅಣ್ಣ ಲಂಚ ಕೊಡುವವನಲ್ಲ, ನ್ಯಾಯಕ್ಕೆ ತಲೆಬಾಗುವವ. ಸದಾ ನಾನು ನ್ಯಾಯವಾಗಿ ಮಕ್ಕಳಿಗೆ ವಿದ್ಯೆ ಹೇಳಿಕೊಟ್ಟಿದ್ದರೆ, ಖಂಡಿತಾ ಆ ಹಣ ಬರುತ್ತೆ ಎಂದು ವೇದಾಂತಿಯಾಗಿಬಿಡುತ್ತಿದ್ದರು.
ಅಮ್ಮಾ ಸುಮಾರು ಸರಿ ಈ ಚಿತ್ರ ನೋಡಿದಾಗೆಲ್ಲ ತೇಜಸ್ವಿಯವರನ್ನ ನೆನಪು ಮಾಡಿಸೋರು... ಅದೇ ಕಾರಣಕ್ಕೆ ತಬರನ ಕಥೆಯನ್ನು ಓದಬೇಕೆಂದು ಏಳನೇ ತರಗತಿಯಲ್ಲಿದ್ದಾಗ ದಾಸರಹಳ್ಳಿಯ ಲೈಬ್ರೆರಿಯ ಮೂಲೆಯಲ್ಲೆಲ್ಲೋ ಕುಳಿತು ದಿನವೆಲ್ಲಾ ಓದಿ ಕಣ್ಣೀರುಟ್ಟು ಬಂದಿದ್ದೆ.. ಇದೇ ಕಾರಣ ತೇಜಸ್ವಿ ಎಂದರೆ ನನ್ನ ಅಣ್ಣ ನೆನಪಾಗ್ತಾರೆ... ಮುಂದೆ ಹಲವಾರು ಓದಿದ್ದೇನೇ ಮನಸ್ಸಿಗೂ ಮುಟ್ಟಿದೆ ಆದರೆ ನನ್ನಣ್ಣನಾದ ತಬರನಷ್ಟಲ್ಲ.!!
ಚಿತ್ರ ಬಿಡಿಸೋಕ್ಕೆ ಪ್ರಯತ್ನಿಸಿದೆ ಆದರೆ ಸರಿ ಬರಲಿಲ್ಲ...
ಅಣ್ಣನಿಗೆ ಈ ಕಥೆ ನೆನಪಿಸುವುದಿಲ್ಲ ಈಗ ನಿವೃತ್ತಿ ಜೀವನದಲ್ಲಿ ಖುಷಿಯಾಗಿದ್ದಾರೆ ಅಲ್ವಾ ಅಣ್ಣಾ... :) :)