ಅದು ಯುಗಾದಿಯ ದಿನ ಎಣ್ಣೆ ಸ್ನಾನ, ಹೊಸ ಬಟ್ಟೆಯನ್ನು ತೊಟ್ಟು ಪ್ರದರ್ಶಿಸುವುದು, "ಏನೇ ಬೈರಿ ತಾರಾಟಾ ಅಂದರೆ ಗೌಡ್ರಮನೆ ದ್ಯಾವರೂಟ" ಅನ್ನುವ ರೀತಿ ಓಡಾಟ, ದಿನದ ಸಿಹಿ ಊಟ ಹೋಳಿಗೆ ಊಟ ಮಧ್ಯಾಹ್ನವೆಲ್ಲ ಚೌಕಾಬಾರದ ಆಟ... ಹೀಗೆ ಬೆಳಗಿನಿಂದ ಸಂಜೆವರೆಗೂ ಹಬ್ಬದ ಸಂಭ್ರಮದಲ್ಲಿ ಓಡಾಡಿ ಸುಸ್ತಾಗಿದ್ದ ನಾನು ರಾತ್ರಿ ೧೦ಗಂಟೆಗೆ ಮಲಗಿಬಿಟ್ಟೆ. ಸರಿಸುಮಾರು ಮಧ್ಯರಾತ್ರಿ ೧೨ಗಂಟೆ ಇರಬೇಕು. ಪಕ್ಕದ ಮನೆಯಲ್ಲಿ ಅದೇನೋ ಸದ್ದು
ಹೇ ಬಿಡೋ, ಅಲ್ಲಿಡೋ, ತಗೊಳ್ಳೋ, ಹಿಡಿಯೋ ಹಿಡಿಯೋ... ಒಂದೇ ಏಟಿಗೆ ಕತ್ತರಿಸೋ...
ಲೇ ಅದೇನ್ರೋ ಈ ಎಳೆ ನಿಂಬೆ ಕತ್ರ್ಸೋಕೆ ಇಷ್ಟು ಆಡ್ತೀರ, ಬಿಡ್ರೋ ನಾನು ಕತ್ತರಿಸ್ತೀನಿ... ಎಂಬ ಮಾತುಗಳು ... ಜೊತೆಗೆ ಅಮ್ಯಾ ಮ್ಯಾ ಸದ್ದು..
ನಾನು ಏನಾಗಿದೆ ಯಾಕೆ ಹಿಂಗೆ ಕೂಗಾಡುತ್ತಿದ್ದಾರೆ ಎಂದು ಭಯ ಮಿಶ್ರಿತ ಕುತೂಹಲದಲ್ಲಿ ಕಿಟಕಿಯನ್ನು ತೆಗೆದು ನೋಡಿದೆ ತಕ್ಷಣಕ್ಕೆ ಭಯವಾಯ್ತು, ಗಾಬರಿಯಲ್ಲಿ ಕಣ್ಣರಳಿಸಿ ನೋಡುತ್ತಲಿದ್ದೆ. ಮಬ್ಬುಗತ್ತಲಲ್ಲಿ ಅದ್ಯಾರೋ ಕುರಿಯ ಕತ್ತು ಹಿಡಿದಿದ್ದಾರೆ, ಇನ್ನ್ಯಾರೋ ಮಚ್ಚು ಹಿಡಿದಿದ್ದಾನೆ. ಪಕ್ಕದಲ್ಲೇ ಇದ್ದ ಕುರಿ-ಮೇಕೆಗಳು ಬೊಬ್ಬೆಯಿಡುತ್ತಿವೆ.
ಆ ರಾತ್ರಿ ನಿದ್ರೆ ಬರಲಿಲ್ಲ ಕುಳಿತಲ್ಲೇ ಕುಳಿತುಬಿಟ್ಟೆ ಅಮ್ಮ ಬೆಳಗಿನ ಜಾವ ಎದ್ದಾಗ ಕಿಟಕಿ ತೋರಿಸಿ ಕೇಳಿದೆ. ಅಯ್ಯೋ ಅದು ಅವರು ಹೊಸತ್ಡ್ಕು ಚೀಟಿ ಮಾಡ್ತಾರಲ್ಲ ಅದಕ್ಕೆ ಮಾಂಸ ಮಾರಾಟ ಮಾಡ್ತಾರೆ. ಅದನ್ಯಾಕೆ ನೋಡೋಕ್ಕೆ ಹೋಗಿದ್ದೆ ಎದ್ದು ಬಾ ಎಂದರು.
ನಾ ಸುಮ್ಮನಿರಲಾರದೆ ಮತ್ತೆ ಕಿಟಕಿಯತ್ತ ಕಣ್ಣಾಡಿಸಿದೆ ಅಲ್ಲಿ ಸಾಲು ಸಾಲು ಗುಡ್ಡೆಗಳು, ಅದಕ್ಕೊಂದಷ್ಟು ಬಾಯಿ ಬಡುಕ ಜನರು, ಕಿತ್ತಾಟಕ್ಕೆ ನಿಂತಿದ್ದಾರೆ ನಾನು ಎರಡು ಚೀಟಿ ಹಾಕಿದ್ದೆ ನನಗೆ ಎರಡು ಗುಡ್ಡೆ ಬರಬೇಕು, ಎಲ್ಲಿ ಚೀಟಿ ಪುಸ್ತಕ ತೆಗಿ ಎಂದು ತೆಗೆದರೆ ಬಿಳುಪಿನ ಪುಸ್ತಕವೆಲ್ಲ ರಕ್ತಸಿಕ್ತ, ಮೂಲೆಯಲ್ಲಿ ನೀರಿನಂತೆ ಹರಿಯುವ ರಕ್ತ ಕಣ್ಣಿಗೆ ರಾಚುತ್ತಿತ್ತು. ರಾತ್ರಿಯ ಕುರಿ ಮೇಕೆಗಳು ಉಂಡೆ ಉಂಡೆಯಾಗಿ ಗುಡ್ಡೆಯಾಗಿಬಿಟ್ಟಿದ್ದರು. ಅದನ್ನು ಬಾಚುವ ಕೈಗಳು, ಒಂದೆಡೆ, ಈ ಗುಡ್ಡೆ ಜಾಸ್ತಿ, ಆ ಗುಡ್ಡೆ ಕಡಿಮೆ ಎಲ್ಲಿ ತೂಕ ಹಾಕಿ ಎಂದು ಅರಚುವ ಬಾಯಿಗಳು... ನನಗೆ ಆ ರಕ್ತದ ಓಕುಳಿ ನೋಡಿದ್ದು ಮೊದಲಬಾರಿ ಅದೇನೋ ಭಯ ಹುಟ್ಟಿಸಿತ್ತು.
ಅಮ್ಮನಿಗೆ ಮತ್ತೆ ಪ್ರಶ್ನೇ... ಯಾಕೆ ಅವುಗಳನ್ನ ಸಾಯುಸ್ತಾರೆ? ಎಂದೆ.
"ಈ ಗೋಡೆ ಮೇಲಿರೋ ಹಲ್ಲಿ ಹುಳ ತಿನ್ನುತ್ತೆ, ಹಾವು ಕಪ್ಪೆಯನ್ನು, ಹುಲಿ ಜಿಂಕೆಯನ್ನೋ ಮತ್ತಾವುದೋ ಪ್ರಾಣಿಯನ್ನೋ..." ಹಂಗೆ ಇದು ಎಂದು ಅಮ್ಮ ಹೇಳಿ ಸುಮ್ಮನಿರಿಸಿದ್ದಳು.
ಆಮೇಲೆ ಅಮ್ಮ ಬಂದು ಮನೆಯಲ್ಲಿ ವಡೆ, ಬೋಂಡಾ, ಬಜ್ಜಿ ಮಾಡಿ... ತಗೋ ಇದು ನಮ್ಮ ಹೊಸತಡುಕು ಕುರಿ,ಕೋಳಿ ಬದಲು ಈರೇಕಾಯಿ, ಈರುಳ್ಳಿ, ಮೆಣಸಿನಕಾಯಿ ಕತ್ತರಿಸಿದ್ದೇನೆ ಎನ್ನುತ್ತಿದ್ದರು.
ಮನುಷ್ಯನ ಆಹಾರ ಕ್ರಮವೇ ಹಾಗೆ ಏನು ಮಾಡಲಾಗದು ಎಂದುಕೊಂಡು ಸುಮ್ಮನಾಗಿದ್ದೆ. ಸಸ್ಯಹಾರಿಗಳು ಮತ್ತೊಂದು ಉಸಿರು ಕತ್ತರಿಸಿ ತಿಂದರೆ, ಮಾಂಸಾಹಾರಿಗಳು ಈ ರೀತಿ ಕತ್ತರಿಸಿ ತಿನ್ನುವ ಅಭ್ಯಾಸ ಅಷ್ಟೇ ಎಂದುಕೊಂಡಿದ್ದೆ. ಆದರೆ ಮನುಷ್ಯ ಮನುಷ್ಯನನ್ನೇ ತಿಂದರೆ ಏನು ಹೇಳ್ಬೇಕೋ ಗೊತ್ತಾಗುತ್ತಿಲ್ಲ.
ಆಹಾ.. ಅಂದಹಾಗೆ ಈಗ್ಗೆ ಸುಮಾರು ೧೦ ವರ್ಷಗಳ ಹಿಂದೆ ಬಹರೈನ್ ದೇಶದಲ್ಲಿದ್ದಾಗ ಯಾರೋ ಫಿಲಿಪಿನೋ ತನ್ನ ರೂಮ್ ನಲಿದ್ದ ಜೊತೆಗಾರಳನ್ನೇ ಕತ್ತರಿಸಿ ಬೇಯಿಸಿ ತಿಂದಿದ್ದಳು ಎಂದು ಯಾರೋ ಹೇಳುತ್ತಿದ್ದರು. ಇದಕ್ಕೆ ಏನು ಹೇಳೋದು, ಇದೂ ಮನುಷ್ಯನ ಆಹಾರ ಕ್ರಮವೇ?. ಇದು ಹೊಸ ತನದ ತಡುಕು ಅಂದುಕೊಳ್ಳಬೇಕಾ ಗೊತ್ತಿಲ್ಲ.