Tuesday, June 14, 2016

ಮಣ್ಣಿನ ಹಾದಿ - 01

ಬಿಸಿ ನೀರು ಕೊತ ಕೊತ ಕುದಿಯುತ್ತಿದೆ. ಅಪ್ಪ ಸ್ನಾನ ಮಾಡುವುದು ಬಿಟ್ಟು ಬೈಗುಳ ಶುರು ಹಚ್ಚಿ ಕೊಂಡಿದ್ದಾನೆ.

ಡಾಕ್ಟರರ ಮಕ್ಕಳು ಡಾಕ್ಟರ್ ಆಗುತ್ತಾರೆ, ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗುತ್ತಾರೆ, ಹಾಗೆ ನಾನು ಒಬ್ಬ ರೈತ ನನ್ನ ಮಗನೂ ರೈತನಾಗಲಿ ಎಂದು ಬಯಸುವುದು ತಪ್ಪಾ?  ಇವಳಿದ್ದಾಳಲ್ಲ ನನ್ನ ಹೆಂಡತಿ ಅನ್ನಿಸಿಕೊಂಡವಳು, ಯಾವುದೊ ಒಂದು ಚೂರು ಬೆಂಗಳೂರಿನ ಮೂಲೆ ನೋಡಿಕೊಂಡು ಬಂದು ಬಿಟ್ಟಿದ್ದಾಳೆ. ತನ್ನ ಕುಲಪುತ್ರನನ್ನು  ಆಫೀಸರ್ ಮಾಡೋಕೆ ಹೊರಟಿದ್ದಾಳೆ. ನಾನು ಬಿಡ್ತೀನಾ, ನಾ ಹೇಳಿದಂತೆ ಅವನು ಬೆಳೆಯಬೇಕು. ನನ್ನ ಮಗ ಅಂದ್ರೆ ನನಗೂ ಹಕ್ಕಿದೆ. ಏನೋ ಕೇಳಿಸ್ತೇನೋ ಶಂಕ್ರ, ನಾ ಹೇಳೋದು ಕಿವಿಗೆ ಹಾಕ್ಕೊ ಗೊತ್ತಾಯ್ತಾ ಎಂದು ಅರಚುತ್ತಾ, ಕುದಿವ ನೀರನ್ನೆ ಮೈಮೇಲೆ ಸುರಿದುಕೊಂಡು ಲಬೊಲಬೊ ಎಂದು ಕಿರುಚುತ್ತಿದ್ದ ಅಪ್ಪನ ಸದ್ದಿಗೆ ಎಲ್ಲರೂ ದೌಡಾಯಿಸಿದರು.

ಮೈಮೇಲೆ ಕೆಂಪು ಕೆಂಪಾದ ಗುಳ್ಳೆಗಳು ಎದ್ದಿವೆ ಬೈಯ್ಸಿಕೊಂಡವರೆಲ್ಲಾ ಮುಲಾಮು ಹಚ್ಚುತ್ತಿದ್ದಾರೆ. ಅಪ್ಪನ ಗೊಣಗಾಟ ಮುಗಿಯಲೇ ಇಲ್ಲ. ನೀವೆಲ್ಲ ನನ್ನ ಮಾತು ಕೇಳಿದ್ರೆ ಹಿಂಗೆ ಆಗ್ತಾ ಇರಲಿಲ್ಲ, ಇಲ್ಲೂ ಅವರುಗಳ ಮೇಲೆ ಗೂಬೆ ಕೂರಿಸಿ ಬಿಟ್ಟ.

ಶಂಕ್ರ ಬೆಳಗ್ಗೆ ಕಾಲೇಜಿಗೆ ಹೊರಟು ನಿಂತ. ಅಪ್ಪನದು ಅದೇ ಸುಪ್ರಭಾತ, ನೀನು ಪಿಯುಸಿ ಓದಿದ್ದು ಸಾಕು, ನನ್ನ ಕೈಲಿ ಆಗೋದಿಲ್ಲ ಭೂಮಿ ಕ್ಯಾಮೆ ಒಬ್ಬನೇ ಮಾಡೋಕೆ, ನೀನು ನನ್ನ ಜೊತೆಗೂಡಿದರೆ ಚಿನ್ನ ಬೆಳೀಬಹುದು ನಮ್ಮ ಭೂಮಿಲಿ... ನಮ್ಮ ಜಮೀನಿನ ಮಣ್ಣು ಬಂಗಾರ ಇದ್ದಂತೆ, ಏನ್ ಹಾಕಿದ್ರು ಬೆಳೆಯುತ್ತೆ. ಒಳ್ಳೆ ಫಸಲು ಕೊಡುತ್ತೆ. ಕೇಳಿಸ್ತೇನೋ ಶಂಕ್ರ

ಅಯ್ಯೋ ಅಪ್ಪನದು ಯಾವಾಗಲೂ ಇದಿದ್ದೇ, ಆಯ್ತು ಅಪ್ಪಾ ಆಗ್ಲಿ ನೀನು ಹೇಳಿದಂತೆ ಮಾಡ್ತೀನಿ ಎಂದು ಹೇಳಿ ಬೀಸೊ ದೊಣ್ಣೆ ತಪ್ಪಿಸಿಕೊಂಡ.

ಇತ್ತ ಮಗ ಒಪ್ಪಿಗೆ ಕೊಟ್ಟನಲ್ಲ ಎಂಬ ಖುಷಿಯಲ್ಲಿ ಹೆಂಡತಿಯನ್ನು ಛೇಡಿಸುತ್ತಿದ್ದ. ನೋಡಿದ್ಯೇನೆ ನನ್ನ ಮಗನ್ನ ನನ್ನ ಮಾತೇ ಕೇಳೋದು ಅವನು, ನೀನೇನು ಲಾಯರ್ರೋ, ಇಂಜಿನಿಯರ್ರೊ ಓದು ಅಂತಿದ್ದಲ್ಲಾ ಅದೆಲ್ಲಾ ಕನಸು ನಿನಗೆ, ಅವೆಲ್ಲಾ ಬಯಕೆ ಇಟ್ಕಂಬೇಡ ಸರಿ ಏನು? ತತ್ತಾ ಹೊಲದ ತಕ್ಕೆ ಹೋಗಿ ಬರ್ತೀನಿ ಏನಾರಾ ಬೇಯಿಸಿದ್ದೀಯೋ ಇಲ್ವೋ.. ತಾಂಬಾ ಬೇಗ... ಎಂದು ಮೂದಲಿಸುತ್ತಿದ್ದಾನೆ.

ಸೆರಗಿನಲ್ಲಿ ಕಣ್ಣು ಒರೆಸಿಕೊಂಡು ಕ್ವಾಡೊಲೆ ಮೇಲಿದ್ದ ಚಿತ್ರಾನ್ನವನ್ನು ಗಂಡನಿಗೆ ತಟ್ಟೆಯಲ್ಲಿ ತಂದಿಟ್ಟು, ನೀವು ಇಷ್ಟೆಲ್ಲಾ ಕ್ವಾಪ ಮಾಡ್ಕ ಬೇಡಿ. ನನಗೂ ಮಗ ಚೆನ್ನಾಗಿರಲಿ, ನಮ್ಮ ಮನೆ ಬೆಳಗಲಿ ಅಂತಾನೇ ಹೇಳಿದ್ದು. ನಿಮಗೆ ಅದೇನು ಇಷ್ಟನೋ ಅದೇ ಮಾಡ್ಸಿ. ಕೆಲಸವಿಲ್ಲದಂತೆ ಕಿರುಚೋದು, ಮೈಕೈ ಬಾಸುಂಡೆ ಬರುಸ್ಕೊಳ್ಳೋದು ಇವೆಲ್ಲಾ ಯಾಕೆ. ಕೋಪಕ್ಕೆ ಮಾತು ಕೊಟ್ರೆ ಆಗೋದೇ ಹೀಗೆ. ವಸಿ ಯೋಚಿಸಿ ತೀರ್ಮಾನ ಮಾಡಿ. ಊರಾಗಿನ ಗೌಡ್ರ ಮನೆಗೆ ಹೋಗಿ ವಿಚಾರ ಮಾಡಿ ಅವರು ದೊಡ್ಡೋರು ಏನಾದ್ರು ತಿಳಿದಿದ್ದು ಹೇಳ್ತಾರೆ

ನೀನು ನನಗೆ ಬುದ್ದಿ ಹೇಳಬೇಡ. ನಿನ್ನ ಕೆಲಸ ಏನದೊ ನೋಡ್ಕೊ ಹೋಗು. ಏನೋ ೭ನೇ ಕ್ಲಾಸ್ ಓದಿದ್ದೀಯಾ, ಪತ್ರಿಕೆ, ಟಿವಿನಾಗೆ ಬರೋ ಅಕ್ಷರ ಓದಕ್ಕೆ ಬತ್ತದೆ ಅಂತಾ ನನ್ನೂ ನೀನು ಓದೋಕೆ ಹೋಗ ಬೇಡ ಅರ್ಥ ಆಯ್ತಾ.... ಸುಮ್ಕೆ ಮರ್ವಾದೆ ಆಗಿ ಇದ್ದುಬಿಡು. ಎಂದು ಹೆಗಲ ಮೇಲಿದ್ದ ವಸ್ತ್ರ ಒದರಿಕೊಂಡು ದಾಪುಗಾಲು ಹಾಕುತ್ತ ಹೊರಗೆ ನಡೆದ.

ಇನ್ನು ಮುಂಗೋಪಿನ ಒಲಿಸೋದು ಕಷ್ಟವೇ ಸರಿ, ಗೌಡ್ರ ಮನೆಗೆ ಹೋಗಿ ವಸಿ ಹೇಳಿ ಇವರ ಮನಸ್ಸು ಸರಿ ಮಾಡಬೇಕಪ್ಪೋ. ಎಂದು ಸರಬರನೆ ತಯಾರಾಗುತ್ತಿದ್ದಳು ಲಕ್ಷಮ್ಮ.

ಚಂದ್ರಪ್ಪ ಹೆಂಡತಿಯ ಮೇಲೆ ಕೋಪಗೊಂಡು ಬಂದವಾ ಉಸಿರುಬಿಡುತ್ತಾ, ತೋಟದ  ಬೇಲಿ ತಟಿಕೆ ತೆಗೆದು "ನೋಡವ್ವಾ..!! ನೀನು ಇಷ್ಟು ಸಮೃದ್ಧವಾಗಿ ಬೆಳೆದಿದ್ದೀಯಾ, ತೋಟದ ಪಕ್ಕದಲ್ಲೇ ನಾಲೆ ಹರಿಯುತ್ತೆ, ಅದು ಅಲ್ಲದೇ ನಮ್ಮದೇ ಬಾವಿ ಇದೆ, ಅದೃಷ್ಟದ ಮಣ್ಣು", ಒಂದು ಎಕರೆ ತೆಂಗಿನ ಗಿಡಗಳನ್ನ ನೆಟ್ಟಿದ್ದೇನೆ, ಅದಾಗಲೇ ಫಸಲು ಬರುವಂತಾಗಿದೆ. ಈಗ ಮಾವಿನ ತೋಪು ಮಾಡೊ ಆಸೆ, ಗದ್ದೆಯಲ್ಲಿ ರಾಶಿ ರಾಶಿ ಭತ್ತ ಬೆಳೆಯುತ್ತಿದ್ದೇನೆ. ಕಣ ಮಾಡಲು ಊರಲ್ಲೇ ಯಾರ ಕಣಕ್ಕೂ ಬರದಷ್ಟು ಆಳುಗಳು ನನ್ನ ಕಣಕ್ಕೆ ಬಂದು ಕೆಲಸ ಮಾಡುತ್ತಾರೆ. ಇಷ್ಟು ಸಿರಿವಂತ ಜಮೀನನ್ನು ಎಲ್ಲಿ ಕೈ ಬಿಡುತ್ತಾರೋ ನನಗೇ ಗೊತ್ತಾಗ್ತಿಲ್ಲವ್ವ. ತನ್ನೊಳಗೇ ಬೇಸರ ಪಟ್ಟುಕೊಳ್ಳುತ್ತ ತೋಟ ಒಂದು ಸುತ್ತು ಬಂದ. ದುಗುಡ ಸ್ವಲ್ಪ ಮಟ್ಟಿಗೆ ಕಮ್ಮಿಯಾದರೂ ಕೋಪ ಯಾವುದೋ ಮೂಲೆಯಲ್ಲಿತ್ತು.

ಇತ್ತ ಲಕ್ಷಮ್ಮಗೌಡರ ಮನೆ ಬಾಗಿಲು ತಟ್ಟಿದಳು, ಗೌಡ್ರೇ ವಸಿ ನಿಮ್ಮಿಂದ ಸಹಾಯ ಆಗಬೇಕು, ನಮ್ಮ ಯಜಮಾನ್ರಿಗೆ ರವಷ್ಟು ಬುದ್ಧಿ ಹೇಳಿ, ದಿನಾ ಚೀರಾಡ್ತಾರೆ. ನನ್ನ ಮಗ ಶಂಕ್ರ ಈಗ ಪಿಯುಸಿ ಬರೀಬೇಕು, ಅವನಿಗೆ ಸಾಕು ಓದಿದ್ದು ಪಿಯುಸಿ ಮುಗ್ಸಿ ಮುಂದೆ ಭೂಮಿಲಿ ಹೊಲ ಉಳು, ರೈತನ ಮಗ ರೈತನೇ ಆಗು ಅಂತಿದ್ದಾರೆ ಬುದ್ದಿ. ನೀವಾದರೂ ವಸಿ ಅವರಿಗೆ ತಿಳಿ ಹೇಳಬಾರ್ದಾ?

ಅದ್ಯಾಕವ್ವ ಹಿಂಗಾಡಿಯಾ? ಭೂಮ್ತಾಯಿ ಕೆಲಸ ಮಾಡೋದ್ರಲ್ಲೇನು ತಪ್ಪು, ನಾವು ನಮ್ಮ ಮಕ್ಕಳು ಎಲ್ಲಾ ಏನ್ ಮಾಡ್ತಿದ್ದೀವಿ ಈಗ. ನಿನ್ನ ಗಂಡ ಹೇಳೋದು ಸರಿನೇ ಅಯ್ತೆ. ಹೋಗು ಸುಮ್ಮನೆಬೆಂಗಳೂರು ಬಸ್ ಹತ್ತಬಹುದು ಬಣ್ಣಬಣ್ಣದ ಸೀರೆ ತಗೋಬಹುದು ಅಂತಾ ಆಸೆ ಇಟ್ಕಬೇಡ. ಹೋಗ್ ಹೋಗ್ ಮನೆ ಕೆಲಸ ನೋಡು. ಎಂದು ಗೌಡರು ಲಕ್ಷ್ಮಮ್ಮನ ಗದರುತ್ತಿದ್ದಾರೆ. ಕೋಣೆಯಲ್ಲೆ ಇದ್ದ ಗೌಡ್ರ ಹೆಂಡತಿ ಸ್ವಲ್ಪ ಇರ್ರಿ.. ಅವಳಿಗೆ ಯಾಕೇ ಓದು ಬೇಕು ಅನ್ನೋದು ಹೇಳಲಿ ಮೊದಲೇ ಮೂಗು ಮುರಿಬೇಡಿ ಎಂದು ಸಮಾಧಾನ ಮಾಡಿದಳು.

ಲಕ್ಷ್ಮಮ್ಮ ತಲೆ ಕೆರೆಯುತ್ತ, ಸೆರಗು ಹೊದ್ದು, ಬುದ್ದಿ ಅದು ಹಂಗಲ್ಲಾ, ಈಗ ನೀವೇ ನೋಡಿ ಪಕ್ಕದ ಮನೆ ಗೋಪಾಲಪ್ಪ ಬೋರು ಕೊರೆಸಿ, ಇದ್ದ ಬದ್ದ ದುಡ್ಡು ಕಳ್ಕೊಂಡು ಈಗ್ಲೋ ಆಗ್ಲೋ ಅನ್ನೋ ತರ ಆಗಿಲ್ವಾ? ಅವನ ಮಗನಿಗಂತೂ ನಾಲ್ಕು ಅಕ್ಷರ ಕಲಿಸಲಿಲ್ಲ, ಈಗ ಜಮೀನು ಮಾರಕ್ಕೆ ಇಟ್ಟಿದ್ದಾನೆ ಸಾಲ ತೀರಿಸ ಬೇಕಲ್ಲಾ, ಏನ್ ಮಾಡ್ತಾನೆ. ಎಲ್ಲಾ ಚೆನ್ನಾಗಿ ನಡೆಯುತ್ತಿದ್ರೆ ನಡೆಯುತ್ತೆ. ಇಲ್ಲಾ ಅಂದ್ರೆ ಎಲ್ಲಾ ಪೋಲಾಗುತ್ತೆ. ಭೂಮಿತಾಯಿ ತಾನೇ ಎಷ್ಟು ದಿನ ತನ್ನ ರಕ್ತ ಬಸಿದಾಳು, ಅವಳಿಗು ಸಾಕಾಗಿ ಯಾವಾಗ ಮುನಿಸಿಕೊತಾಳೋ ಗೊತ್ತಿಲ್ಲಈಗ ಮಗ ಓದೋದ್ರಿಂದ  ಏನೂ ತೊಂದ್ರೆ ಇಲ್ಲ, ಓದೋದು ಓದಲಿ, ಓದಿರೋರು ಭೂಮಿ ಕೆಲಸ ಮಾಡಬಾರದು ಅಂತಾ ಏನಿಲ್ಲವಲ್ಲಅವನು ಓದು ಮುಗಿಸಿದ ಕಾಲಕ್ಕೆ ನೋಡೋಣ ಪರಿಸ್ಥಿತಿ ಹೇಗಿರುತ್ತೋ ಹಾಗೆ ಬದಲಾಗೋದು. ಆದರೆ ನೀವು ವಸಿ ನಮ್ಮನೆಯವರಿಗೆ ಹೇಳಿ, ಓದು ಮುಂದುವರಿಸೋಕೆ. ಏನಂತಿರಿ ಬುದ್ದಿ.

ಆಯ್ತು ಲಕ್ಷ್ಮಮ್ಮ, ನೀ ಹೇಳೋದ್ರಲ್ಲೂ ವಿಚಾರವಿದೆ, ಮಕ್ಕಳು ವಿದ್ಯಾವಂತರಾಗಬೇಕು ದೇಶ, ವಿದೇಶಗಳ ವಿಷಯ ತಿಳ್ಕೋಬೇಕು. ಸರಿ ನಿಮ್ಮ ಯಜಮಾನನ ಹತ್ತಿರ ಮಾತಾಡ್ತೀನಿ ಬಿಡು ಎಂದಾಗಲೇ ಲಕ್ಷಮ್ಮನಿಗೆ ನಿರಾಳ.

ಮಟ ಮಟ ಮಧ್ಯಾಹ್ನ ಊಟಕ್ಕೆಂದು ಮನೆ ಕಡೆ ಹೋಗುತ್ತಿದ್ದ ಚಂದ್ರಪ್ಪನನ್ನು ಕಂಡ ಅಲ್ಲೇ ಹುಣಸೆ ಮರದಡಿ ನಿಂತಿದ್ದ ಗೌಡರು, ಚಂದ್ರಪ್ಪ ಏನ್ ಸಮಾಚಾರ ಊಟಕ್ಕೆ ಹೊರಟಾ ಏನು, ಎಂದು ಮಾತಿಗೆ ಕರೆದರು. ಹೌದು ಗೌಡ್ರೇ ಈಗಷ್ಟೇ ಗದ್ದೆಗೆ ನೀರು ಬಿಟ್ಟಿದ್ದೀನಿ ನೀರು ಹರಿಯೋಷ್ಟರಲ್ಲಿ ಮನೆಗೆ ಹೋಗಿ ಊಟ ಮಾಡೋಣ ಅಂತಾ ಬಂದೆ. ಏನ್ ವಿಷ್ಯ ಇಲ್ಲಿ ನಿಂತಿದ್ದೀರಿ ಎನ್ನುತ್ತ ಚಂದ್ರಪ್ಪ ಗೌಡರ ಹತ್ತಿರಕ್ಕೆ ಬಂದ. ಗೌಡರ ಕಿವಿಯಲ್ಲಿ ಇನ್ನೂ ಲಕ್ಷ್ಮಮ್ಮನ ಮಾತು ಗುಯ್ಯುಗುಡುತ್ತಿತ್ತು, ಏನಿಲ್ಲ ಸುಮ್ನೇ ನಿಂತೆ, ಮತ್ತೆ ಏನ್ ವಿಶೇಷ, ಮಗ ಪಿಯುಸಿ ಪರೀಕ್ಷೆ ಇನ್ನೇನು ಬಂತು, ಹೆಂಗೆ ಓದ್ತಾ ಇದ್ದಾನೆ, ಮುಂದೇನು ಮಾಡ್ತೀಯಾ ಅವನಿಗೆ, ಎಂದು ಗೌಡರು ಕೇಳಿದರು.

ಏನಿಲ್ಲ ಗೌಡ್ರೇ, ಅವನೂ ನನ್ನ ದಾರಿನೇ ಭೂಮ್ ತಾಯಿ ಕೆಲಸ ಅಷ್ಟೇ, ಕಿತ ಪರೀಕ್ಷೆ ಮುಗಿದ್ ಮೇಲೆ ಮನೆನಲ್ಲೇ ಇರ್ತಾನೆ. ನನಗೂ ಒಬ್ಬನೇ ಕೆಲಸ ಮಾಡೋಕೆ ಆಗೊಲ್ಲ, ಕೈಗಾವಲಿಗೆ ಇರಲಿ ಇವನು, ಎಂದು ಯೋಚಿಸಿದ್ದೀನಿ.

ಅಯ್ಯೋ ಕಥೆಯೇ, ಹಂಗೇನಾರಾ ಮಾಡ್ ಗೀಡಿಯೋ ಪುಣ್ಯಾತ್ಮ, ಮಕ್ಕಳು ಓದಲಿ, ನಿನಗೇ ಗೊತ್ತಲ್ಲ ಹತ್ತನೇ ಕ್ಲಾಸ್ ನಲ್ಲಿ ಇವನೇ ನಮ್ಮ ನೆಲಮಂಗಲಕ್ಕೆಲ್ಲ ಹೆಚ್ಚು ಅಂಕ ತಗೊಂಡು ಪಾಸಾಗಿದ್ದ. ಅಲ್ಲಿ ಅದ್ಯಾವುದೊ ಫಂಕ್ಸನ್ನಾಗೆ  ನನ್ನನ್ನೆ ಕರೆದಿದ್ರು, ನಿನ್ನ ಮಗನಿಗೆ ದುಡ್ಡು ಕೊಡಿಸಿದ್ರು. ನಮ್ಮೂರಿಗೂ ಒಂದು ಒಳ್ಳೆ ಹೆಸರು ಬರ್ತದೇ ಕಣೋ ಚಂದ್ರಪ್ಪ. ಓದೊ ಮಕ್ಕಳು ಓದಲಿ. ಈಗ ನೋಡು ನನ್ನ ಮಕ್ಕಳಿಗೆ ಎದೆ ಸೀಳಿದ್ರು ಒಂದು ಅಕ್ಷರ ಬರಕಿಲ್ಲ, ಏನ್ ಮಾಡ್ತೀಯಾ ಅವ್ಕೆ ಓದಿಸಿ ದುಡ್ಡು ದಂಡ ಅದಕೆ ಹೊಲದಲ್ಲಿ  ಗೇಯೋಕ್ಕೆ ಹಾಕಿದ್ದೀನಿ.

ಅಂಗಲ್ಲಾ ಗೌಡ್ರೇ, ಓದಿ ಅವನು ಉದ್ದಾರ ಆಗೋದು ಅಷ್ಟರಲ್ಲೇ ಅಯ್ತೆ ಬಿಡಿ. ಮುಂದೆ ನನಗೂ ವಯಸ್ಸು ಆಗುತ್ತೆ ಭೂಮಿ ಕೆಲಸ ಮಾಡೋಕೆ ಆಗುತ್ತಾ ಹೇಳಿ, ನನ್ನ ಕೆಲಸ ಯಾರಾದ್ರು ವಹಿಸ್ಕೊ ಬೇಕಲ್ವಾ, ಯಾರ್ ಮಾಡ್ತಾರೆ ಇನ್ನೊಬ್ಬ ಇರೋನು ಇನ್ನು ಚಿಕ್ಕೋನು ಬೇರೆ. ಎಲ್ರೂ ಓದಿ ಪಟ್ಟಣ ಸೇರಿದ್ರೆ  ಹಳ್ಳಿ ಕಾಯೋರು ಯಾರು ಇರ್ತಾರೆ ಹೇಳಿ. ನಮ್ಮ ಪಕ್ಕದೂರಿನ ಬೋಜಪ್ಪನ ಮಕ್ಕಳು ಇದ್ದ ನಾಲ್ಕು ಜನರಲ್ಲಿ ಯಾವಾನಾದ್ರು ಅಪ್ಪನ ಹೆಸರು ಹೇಳೋಕೆ  ಅವ್ರಾ ಹೇಳಿ ನೀವೆ. ಎಲ್ಲಾ ಅದೇನೊ ದೊಡ್ಡ ಕೆಲಸ, ದುಡ್ಡು ಜಾಸ್ತಿ ಕೊಡ್ತಾರೆ ಅಂತಾ ವಿದೇಶದಾಗೆ ಹೋಗಿ ಕುಂತವ್ರೆ, ಇಲ್ಲಿ ಗಂಡ ಹೆಂಡ್ರು ಇಬ್ಬರೆ ಮಿಕಮಿಕ ಅಂತಾ ಒಬ್ರು ಮುಖ ಒಬ್ರು ನೋಡಕೊಂಡು ಕಾಲಾ ಹಾಕ್ತಾ ಅವರೆ, ಇನ್ನು ಅವರ ಜಮೀನು ನೋಡ ಬೇಕು ಗೌಡ್ರೆ ಪಾಳ್ ಬಿದ್ದದೇ, ಹೊಟ್ಟೆ ಉರಿತದೆ ನೋಡೋಕೆ. ಬಂಗಾರದಂತ ಭೂಮಿನ ಹಾಳು ಮಾಡಿ ಬಿಟ್ರು. ಹಂಗೆ ಮಾಡ ಬೇಕು ಅಂತೀರಾ ನೀವು, ಏನು ಹೇಳಿ.

ಅಂಗಲ್ಲ ಚಂದ್ರಪ್ಪ, ಭೂಮಿ ಕೆಲಸ ಯಾವಾಗಾದ್ರು ಮಾಡಬಹುದು ಓದು ಮಧ್ಯ ನಿಂತರೆ ಅಷ್ಟೆ ಗತಿ ಮುಂದೆ ಓದೋಕೆ ಕಷ್ಟ ಆಗುತ್ತೆ. ಒಂದು ಟೀಚರ್ ಓದು ಓದಲಿ, ಇಲ್ಲೆ ಹಳ್ಳಿನಾಗೆ ಎಲ್ಲಾರ ಸ್ಕೂಲ್ ಕೆಲಸ ಗಿಟ್ಟಿಸಿ ಊರಿಂದ ಓಡಾಡಲಿ ಹಂಗೆ ಮನೆ ಜಮೀನು ಅಂತ ಕೆಲಸನೂ ನೋಡಿ ಕೊಳ್ಳಲಿ ಬಿಡು ಏನಂತೀಯ.

ಅಯ್ಯೋ ಶಿವನೆ, ಟೀಚರ್ ಮಾಡಿಸೋದಾ, ಆಮೇಲೆ ಅಷ್ಟೆ, ನನಗೆ ಪಾಠ ಓದಕ್ಕೆ ಬರ್ತಾನೆ, ಈಗಾಗ್ಲೇ ಅವನ ಅಮ್ಮಾ ಅವಳಲ್ಲ, ಅವಳು ದಿನಾ ಪಾಠ ಓದುತಾ ಅವಳೆ, ಇನ್ನ ಜೊತೆಗೆ ಮಗ ಸೇರಿದ್ರೆ ಮುಗಿತು. ಇಲ್ಲ ಬಿಡಿ ಅವೆಲ್ಲ ಆಗದ ಕೆಲಸ.

ಗೌಡ್ರೆ, ಇಲ್ಲಿದ್ದೀರ ಮನೆ ಹತ್ರೆ ಹೋಗಿದ್ದೆ ನೀವು ಇರಲಿಲ್ಲ...!!

ಬಾ ಪೋಸ್ಟ್ ಮ್ಯಾನಪ್ಪ ಏನ್ ವಿಷಯ, ಗೌಡ್ರುನಾ ಹುಡಿಕೊಂಡು ಬಂದಿದ್ದೀಯಲ್ಲ ಏನ್ ಕಥೆ.

ಯಾವುದೊ ಹಾಲಿನ ಡೈರಿ ಪೋಸ್ಟ್ ಬಂದೈತೆ ಎಬ್ಬೆಟ್ಟು ಒತ್ತಿ ತಗಳ್ಳಿಅದು ಸರಿ ಏನೋ ಗಹನವಾದ ವಿಚಾರ ಸಾಗೈತೆ ಇಲ್ಲಿ, ಏನು ನಮಗೂ ವಸಿ ಹೇಳಿ ಗೌಡ್ರೆ..

ಏನಿಲ್ಲಪ್ಪ, ನಮ್ಮ ಚಂದ್ರಪ್ಪ ಮಗನನ್ನ ಮುಂದೆ ಓದಿಸೊಲ್ಲ ಅಂತಾವ್ನೆ, ವ್ಯವಸಾಯ ಮಾಡ್ಕೊಂಡು ಇರಲಿ ಬೇರೆ ಏನು ಬೇಡಾ ಅಂತಾವ್ನೆ, ವಸಿ ನೀನಾದ್ರು ಹೇಳಪ್ಪ..

ಯಾಕ್ ಚಂದ್ರಣ್ಣ ಅಂತಾ ಕೆಲಸ ಮಾಡ್ತೀಯಾ, ನಿನಗೇನು ಗೊತ್ತು ವಿದ್ಯೆ ಬೆಲೆ, ನಮ್ಮ ದೊಡ್ಡಣ್ಣನ ಮಗ ಬಿ.ಎಸ್ಸಿ ಅಗ್ರಿಕಲ್ಚರ್ ಅಂತ ಮಾಡವನೇ, ಅದೇ ನೀ ಮಾಡ್ತಿಯಲ್ಲ ಬೇಸಾಯ, ಅದಕ್ಕೆ ಅಂತ ಡಿಗ್ರಿನೂ ಇದೆ ಗೊತ್ತಾ, ಅದು ಮಾಡ್ ಕೊಂಡ್ರೆ ಮಳೆ, ಬೆಳೆ ಭೂಮಿ ಗುಣ, ಯಾವ ಕಾಲದಲ್ಲಿ ಏನು ಬೆಳೆಯಬಹುದು ಅಂತ ಎಲ್ಲಾ ವೈಜ್ಞಾನಿಕವಾಗಿ ತಿಳಿಸಿ ಕೊಡ್ತಾರೆ. ನನ್ನ ಅಣ್ಣನ ಮಗ ಈಗ ಸಾವಿರ ಊರಿನ ಸರದಾರ ತರಹ ಇದಾನೆ ಗೊತ್ತಾ. ವಿದೇಶಕ್ಕೂ ಅವನ ಭೂಮಿದೇ ಹೂವು, ಹಣ್ಣುಗಳು ಬೇಕು.

ಹೌದಾ, ಅದೇನು ಸಾ ಹಾಗಂದ್ರೆ ನಾವು ಹೊಲ ಊಳೋದು, ಬಿತ್ತೋದು ನಮಗೆ ಎನಾರ ಶಾಲೆನಲ್ಲಿ ಹೇಳಿ ಕೊಟ್ಟಿದ್ದಾರಾ, ಇದು ಯಾವುದೊ ಹೊಸತರ ಕಥೆ ಕೇಳ್ತಾ ಇದ್ದೀನಲ್ಲಪ್ಪ, ಮೈಮುರಿದು ಕೆಲಸ ಮಾಡಿದ್ರೆ ಭೂಮಿತಾಯಿ ತಾನೇ ಒಲಿತಾಳೆ ಅದ್ಯಾವದೋ ಪುಸ್ತಕದ ಬದನೆಕಾಯಿ ಓದಿದರೇನು ಬರುತ್ತೆ ಬಿಡಿ.

ಏನ್ ಗೌಡ್ರೇ ನಮ್ಮ ಚಂದ್ರಣ್ಣ ಹಿಂಗೆ, ಅಲ್ಲಪ್ಪ ಚಂದ್ರಣ್ಣ ನೀನು ಒಂದು ಕಿತ ನನ್ನ ಅಣ್ಣನ ಮಗನ ಜಮೀನಿಗೆ ಬಾ, ಹೂ ಹಣ್ಣು, ಬತ್ತ, ರಾಗಿ, ಜೋಳ ಎಲ್ಲ ಹೆಂಗೆ ಬೆಳೆದವನೆ ನೋಡು. ನನ್ನ ಅಣ್ಣ ಆಫೀಸರ್ ಆಗಲಿ, ಭೂಮಿ ಕೆಲಸ ಬೇಡ ಅಂತಿದ್ದೋನು ಬಾಯಿ ಮೇಲೆ ಬೆರಳು ಇಟ್ಕೊಂಡವನೆ. ಈಗೆಲ್ಲಾ ಪೇಟೆನಲ್ಲಿ ಎಲ್ಲಿ ನೋಡಿದ್ರು ಮದ್ದು ಸಿಂಪಡಿಸಿರೊ ತರಕಾರಿ, ಹೂ, ಹಣ್ಣು ಸಿಗೋದು. ಸಾವಯವ ಕೃಷಿ ಮಾಡೋರೆ ಕಮ್ಮಿ,. ಇವನು ಸಾವಯವ ಕೃಷಿ ಕೆಲಸ ಮಾಡೋಕೆ ಹಿಡಿದು ಎಂಥಾ ಹೆಸರು ಇದೆ ಗೊತ್ತ. ಮೂರು ದಿನದಿಂದ ಟಿವಿನಲ್ಲಿ ಅವನ ತೋಟ, ಗದ್ದೆ, ಹೊಲ ಅವನ ಬಗ್ಗೆನೇ ಮಾತು ನೋಡು ಇವತ್ತು ಸಂಜೆನೂ ಬರುತ್ತೆ. ಆಗ ಗೊತ್ತಾಗುತ್ತೆ.

ಈಟೋಂದೆಲ್ಲಾ ಅಯ್ತೇನಣ್ಣ, ಟಿವಿನಾಗೆ ಬಂದ್ರೆ ಸಂಜೆ ನೋಡ್ತಿನಿ, ಏನೋ ಮಗ ಪೇಟೆ ಬಿದ್ದು ಹಾಳಾಗಿ ಹೋಗ್ತಾನೆ, ನನ್ನ ಭೂಮಿ ಬರಡಾಗುತ್ತೆ ಅಂತಾ ಹಠ ಮಾಡಿದ್ದೆ. ಈಗ ನೀವು ಹೇಳಿದ ಮೇಲೆ ವಸಿ ಯೋಚಿಸಿ ತೀರ್ಮಾನ ತಗತೀನಿ.

ಅಬ್ಬಾ ಒಂದು ಹಂತಕ್ಕೆ ಚಂದ್ರಪ್ಪನ ಮನಸ್ಸು ಬದಲಿಸುವಲ್ಲಿ ಗೌಡರು ಮತ್ತು ಪೋಸ್ಟ್ ಮ್ಯಾನ್ ಸಾಹಸ ಪಟ್ಟಂತಾಯಿತು.

ಇನ್ನು ಸಂಜೆಯವರೆಗೂ ಮನದಲ್ಲೇ ಲೆಕ್ಕಾಚಾರದಲ್ಲಿ ಮುಳುಗಿದ್ದ ಚಂದ್ರಪ್ಪ, ಡಿಡಿ- ಸಾವಯವ ಕೃಷಿ ಕಾರ್ಯಕ್ರಮ ನೋಡಲು ಅಣಿಯಾದ, ಎಂದೂ ಟಿವಿ ಕಡೆ ತಲೆಹಾಕದವರು ಇಂದೇನು, ಅಂತಾ ಲಕ್ಷ್ಮಮ್ಮ ಮಗನ ಮುಖ, ಮಗ ಅವ್ವನ ಮುಖ ನೋಡಿಕೊಳ್ಳುತ್ತಿದ್ದರು. "ಪೋಸ್ಟ್ ಮಾಸ್ಟರ್ ಹೇಳಿದ ವ್ಯಕ್ತಿಯ ಪರಿಚಯದ ಮೂರನೇ ಭಾಗ ಬರುತ್ತಿತ್ತು". ಆತನ ಜಮೀನು, ಹಸಿರ ಗದ್ದೆ, ರಾಶಿ ಮಾಡಿದ ರಾಗಿ ತೆನೆ ಎಲ್ಲವನ್ನು ನೋಡಿ ಕಣ್ಣರಳಿಸಿ ಕುಳಿತಿದ್ದ. ವ್ಯವಸಾಯಗಾರನ ಜಮೀನು ಸುಮಾರು ಎಕರೆ ಮಾತ್ರ. ಚಂದ್ರಪ್ಪನ ತಲೆ ಗಿರ್ ಎನ್ನುತ್ತಿತು. ಅವನ ಆದಾಯ ಲೆಕ್ಕವನ್ನು ಕೇಳಿ, ನನ್ನದು ೨೦ ಎಕರೆ ಜಮೀನಿದೆ, ನನ್ನ ಸಂಪಾದನೆ ಸೊನ್ನೆ. ಮನೆಮಂದಿಗೆ ಸಾಕಾಗುವಷ್ಟು ಬೆಳೆಯುತ್ತಿದ್ದೇನೆ. ನಾನೇ ಹೀಗೆ ಇನ್ನು ನನ್ನ ಮಗ ಹೇಗೋ. ಏನೋ ಮನದಲ್ಲೊಂದು ಆಶಾಭಾವ, ಮಗ ಓದಲಿ ಹುಡುಗನಂತೆಯೇ ಆಗಲೆಂದು. ಜೋರು ಗಟ್ಟಿ ಕಿರುಚಿ ಹೇಳಿದ. ಲೇ ಇವಳೇ ಲಕ್ಷ್ಮು ನಮ್ಮ ಶಂಕ್ರು ಮುಂದೇ ಓದಲಿ ಕಣೆ, ಅದೇನೋ ಡಿಗ್ರಿನಲ್ಲಿ ಬೇಸಾಯದ ಬಗ್ಗೆ ಇದೆಯಂತಲ್ಲಾ ಅದೇ ಮಾಡಲಿ ಕಣೆ ಏನಂತೀಯಾ...

ಲಕ್ಷ್ಮಮ್ಮನ ಮುಖ ಕಮಲದಂತೆ ಅರಳಿತು, ಹಾಅ.. ಏನಂದ್ರಿ ಇನ್ನೊಂದು ಸಾರಿ ಹೇಳಿ ಅಂತ ಗಂಡನ ಎದುರು ಹಾಜರಾದ ಲಕ್ಷ್ಮಮ್ಮ, ಸದ್ಯ ನೀವು ಒಪ್ಪಿದ್ದೇ ಹೆಚ್ಚು. ಆಗಲಿ ನೀವು ಹೇಳಿದಂತೆ ಡಿಗ್ರಿ ಮಾಡಲಿ, ಅದು ಯಾವುದರ ಬಗ್ಗೆಯೋ, ಒಟ್ಟಲ್ಲಿ ಮಗ ಓದುತ್ತಾನೆಂದು ಖುಶಿಯಲ್ಲಿ ಮಗನನ್ನು ತಬ್ಬಿ ಮುದ್ದಾಡಿದಳು.

ಅಪ್ಪ ಈಗ ಒಪ್ಪಿದ್ದಾನೆ, ಇದೇ ಒಪ್ಪಿಗೆ ಮುಂದೆಯೂ ಇರುತ್ತದಾ...ಮಗ ಓದುತ್ತಾನಾ... ಬೇಸಾಯಕ್ಕೆ ಹೋಗುತ್ತಾನಾ...??  ಮುಂದಿನ ಭಾಗದಲ್ಲಿ...


Wednesday, June 8, 2016

ಧಣಿವಿಗೆ ನೀರು - ಹಸಿವಿಗೆ ಸಿಹಿ

ಮೊನ್ನೆ... 

ಸಂಜೆ ಸುಮಾರು ೬.೩೦ರ ಸಮಯ ಪಾರ್ಕ್ಗೆ ವಾಕ್  ಹೋಗೋಣ ಎಂದುಕೊಂಡು ಮನೆಯಿಂದ ಆಚೆ ಬಂದರೆ ನಮ್ಮ ಕಾರಿಗೆ ಅಡ್ಡವಾಗಿ ಮತ್ತೊಂದು ಕಾರ್ ನಿಲ್ಲಿಸಿದ್ದರಿಂದ ಹೊರತೆಗೆಯಲಾಗಲಿಲ್ಲ. ಸರಿ ಹಾಗೆ ಇಲ್ಲೇ ಒಂದೆರಡು ಸುತ್ತು ರಸ್ತೆಬದಿಯಲ್ಲಿಯೇ ಹೋಗಿ ಬರೋಣವೆಂದು ಹೊರಟೆವು. ಮನೆಯಿಂದ ೧೦ ಹೆಜ್ಜೆ ಮುಂದಿಡುತ್ತಿದ್ದಂತೆ, ರಪ್ಪನೆ ಒಂದು ಕಾರ್ ಬಂದು ನಿಂತಿತು. ಗಾಬರಿಯಲ್ಲಿ ನಾವು ಏನಾಯ್ತು ಏನು ಎಂದು ಪಕ್ಕ ತಿರುಗುತ್ತಿದ್ದಂತೆ ಕಾರಿನ ಕಿಟಿಕಿಯಿಂದ ಒಬ್ಬ ಹುಡುಗ ಒಂದು ನೀರಿನ ಬಾಟಲ್ ಮತ್ತು ಖರ್ಜೂರದ ಪೊಟ್ಟಣ ಕೈಗಿಡಲು ಬಂದ. ನಮಗೆ ಸ್ವಲ್ಪ ಗಾಬರಿ ಇದ್ದಕ್ಕಿದ್ದಂತೆ ಯಾರೋ ಬಂದು ನಮ್ಮ ಕೈಗೆ ಏನನ್ನೋ ಕೊಟ್ಟರೆ ಹೇಗೆ ತೆಗೆದುಕೊಳ್ಳೋದು. ಕ್ಷಣದಲ್ಲಿ ಏನು ಮಾಡಬೇಕೆಂದು ತೋರದೆ ಬೇಡ ಥಾಂಕ್ಯೂ ಎಂದೆವು, ಇರಲಿ ಪರವಾಗಿಲ್ಲ ತಗೋಳ್ಳಿ, ತಗೊಳ್ಳಿ ಎಂದು ಬಲವಂತದಿಂದ ಕೈಗಿಟ್ಟು ಬರ್‍ರನೆ ಹೊರಟ, ಸ್ವಲ್ಪ ದೂರಕ್ಕೆ ಹೋಗುತ್ತಿದ್ದಂತೆ ಮತ್ತೆ ಕಾರ್ ನಿಲ್ಲಿಸಿ ರಸ್ತೆ ಬದಿಯಲ್ಲಿ ಓಡಾಡುತ್ತಿದ್ದವರೆಲ್ಲರಿಗೂ ಹೀಗೆ ನೀರು ಮತ್ತೆ ಖರ್ಜೂರವನ್ನು ಕೊಡುತ್ತಲೇ ಹೋದರು. 

ಓಡಾಡುತ್ತಿದ್ದ ಜನರೆಲ್ಲ ತಗೆದುಕೊಳ್ಳುತ್ತಿದ್ದದ್ದು ನೋಡಿ ನಮಗೂ ಸಮಾಧಾನವಾಯ್ತು (ಕೆಲವೊಮ್ಮೆ ಒಂದು ಕುರಿ ಹಳ್ಳಕ್ಕೆ ಬಿದ್ರೆ ನಾಚಿಕೆಯಾಗುತ್ತೆ, ಮತ್ತೊಂದು ಕುರಿಯೂ ಬಿದ್ದರೆ ಸ್ವಲ್ಪ ಸಮಾಧಾನವಾಗುತ್ತಲ್ಲಾ ಹಾಗೆ. ನಮಗೂ ಜೊತೆಯಾಗೋರು ಇದ್ದಾರಲ್ಲ ಪರ್ವಾಗಿಲ್ಲ ಎಂದು ನಮ್ಮನ್ನ ನಾವು ಸಮಾಧಾನ ಮಾಡ್ಕೋತೀವಿ :P ). 

ಸರಿ ಅದ್ಯಾಕೆ ಅವಾ ಎಲ್ಲರಿಗೂ ಕೊಡ್ತಿದ್ದಾನಲ್ಲಾ? ಎಂದುಕೊಳ್ಳುತ್ತಿದ್ದಂತೆ, ಅಲ್ಲೇ ಮಸೀದಿಯಲ್ಲಿ ಅಲ್ಹಾ ಕೂಗುವ ಸದ್ದು ಕೇಳಿತು. ಆಗಲೇ ನಮಗೆ ಅರ್ಥವಾಗಿದ್ದು, ಓಹೋ ಇಂದಿನಿಂದ ರಮದಾನ್ ಉಪವಾಸ ಪ್ರಾರಂಭವಾಗಿದೆ. ಇನ್ನೇನು ಸಂಜೆ ಈ ದಿನದ ಉಪವಾಸ ಮುಕ್ತಾಯ ಮಾಡುವ ಸಮಯ. ಅದಕ್ಕೆ ರಸ್ತೆಯಲ್ಲಿ ಓಡಾಡುವ ಜನ ಆ ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡಲು ಅನುಕೂಲವಾಗುತ್ತೋ ಇಲ್ಲವೋ ಎಂದು ಯೋಚಿಸಿ, ನೀರು ಮತ್ತು ಖರ್ಜೂರ ಹಂಚುತ್ತಿದ್ದಾರೆ ಎಂಬುದು ಮನವರಿಕೆಯಾಯಿತು.

---------------------------------


ನೆನ್ನೆ...

ನೆನ್ನೆ ಸಂಜೆ ಪಾರ್ಕ್ಗೆ ವಾಕ್ ಹೊರಟ್ವಿ, ಅಲ್ಲೇ ರಸ್ತೆ ಮಧ್ಯೆ  ರೆಡ್ ಸಿಗ್ನಲ್ ಸಿಕ್ಕ ಕಾರಣ ಹಲವಾರು ಕಾರ್ ಗಳು ನಿಂತಿದ್ದವು. ಅಲ್ಲೇ ಇಬ್ಬರು ಹುಡುಗರು ಕೈಚೀಲದಲ್ಲಿದ್ದ ನೀರಿನ ಬಾಟಲ್, ಖರ್ಜೂರದ ಪಾಕೆಟ್ ತೆಗೆದು ಎಲ್ಲರ ಕಾರ್ ಕಿಟಕಿ ತಟ್ಟುತ್ತಿದ್ದರು, ಆ ಹುಡುಗರು ಕೊಡುತ್ತಿದ್ದರೆ ಐಷಾರಾಮಿ ಕಾರಿನಲ್ಲಿ ಕುಳಿತ ಯಾರೊಬ್ಬರೂ ಬೇಡವೆನ್ನಲಿಲ್ಲ, ನಗುತ್ತಲೇ ತೆಗೆದುಕೊಂಡು ಥಾಂಕ್ಸ್ ಹೇಳುತ್ತಿದ್ದರು. ಅವರುಗಳು ತೆಗೆದುಕೊಂಡಂತೆಲ್ಲ ಈ ಹುಡುಗರ ಮುಖದಲ್ಲಿ ಮಂದಹಾಸ ಅರಳುತ್ತಿತ್ತು. 

ಹೀಗೆ ಎರಡು ದಿನ ಎಲ್ಲರಿಗೂ ನೀರು ಮತ್ತು ಖರ್ಜೂರ ಕೊಡುತ್ತಿದ್ದವರು ಸುಮಾರು ೧೫-೧೮ ವರ್ಷದ ಮಕ್ಕಳಿರಬೇಕು. ಖುಷಿಯಾಯ್ತು ಅಪ್ಪ-ಅಮ್ಮ ಹೇಳಿ ಕಳುಹಿಸಿದ್ದಾರೋ ಅಥವಾ ಅವರೇ ಸ್ವಯಂ ಪ್ರೇರಿತರಾಗಿ ಈ ಕೆಲಸ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಆ ಮಕ್ಕಳಲ್ಲಿ ಈ ರಮದಾನ್ ಸಮಯದಲ್ಲಿ ಜನರಿಗೆ ಕಷ್ಟವಾಗುತ್ತೆ, ನಮ್ಮ ಕೈಲಾದದ್ದು ಮಾಡಬೇಕು ಎಂಬ ಭಾವನೆಯಲ್ಲಿ ಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ. 




ಈ ೪೫ ಡಿಗ್ರಿ ಬಿಸಿಲ ಧಗೆಯಲ್ಲಿ ಉಪವಾಸ ಮಾಡುವವರೆಲ್ಲರಿಗೂ ಹಾಗೂ ಆ ಮಕ್ಕಳು ಧಣಿವಿಗೆ ನೀರು, ಹಸಿವಿಗೆ ಸಿಹಿ ಹಂಚಿ ಉಪವಾಸ ಮಾಡುವವರಿಗೆ ನೆರವಾಗುತ್ತಿದ್ದಾರೆ. ಅವರೆಲ್ಲರಿಗೂ ಸದಾ ಒಳಿತಿನ ಹಾದಿಯೇ ಸಿಗಲಿ  ಎಂಬುದು ನನ್ನ ಆಶಯ.  

Saturday, April 9, 2016

ಹೊಸತಡುಕು .... ಆ ದಿನಗಳು

ಅದು ಯುಗಾದಿಯ ದಿನ ಎಣ್ಣೆ ಸ್ನಾನ, ಹೊಸ ಬಟ್ಟೆಯನ್ನು ತೊಟ್ಟು ಪ್ರದರ್ಶಿಸುವುದು, "ಏನೇ ಬೈರಿ ತಾರಾಟಾ ಅಂದರೆ ಗೌಡ್ರಮನೆ ದ್ಯಾವರೂಟ" ಅನ್ನುವ ರೀತಿ ಓಡಾಟ, ದಿನದ ಸಿಹಿ ಊಟ ಹೋಳಿಗೆ ಊಟ ಮಧ್ಯಾಹ್ನವೆಲ್ಲ ಚೌಕಾಬಾರದ ಆಟ... ಹೀಗೆ ಬೆಳಗಿನಿಂದ ಸಂಜೆವರೆಗೂ ಹಬ್ಬದ ಸಂಭ್ರಮದಲ್ಲಿ ಓಡಾಡಿ ಸುಸ್ತಾಗಿದ್ದ ನಾನು ರಾತ್ರಿ ೧೦ಗಂಟೆಗೆ ಮಲಗಿಬಿಟ್ಟೆ.  ಸರಿಸುಮಾರು ಮಧ್ಯರಾತ್ರಿ ೧೨ಗಂಟೆ ಇರಬೇಕು. ಪಕ್ಕದ ಮನೆಯಲ್ಲಿ ಅದೇನೋ ಸದ್ದು 

ಹೇ ಬಿಡೋ, ಅಲ್ಲಿಡೋ, ತಗೊಳ್ಳೋ, ಹಿಡಿಯೋ ಹಿಡಿಯೋ... ಒಂದೇ ಏಟಿಗೆ ಕತ್ತರಿಸೋ...

ಲೇ ಅದೇನ್ರೋ ಈ ಎಳೆ ನಿಂಬೆ ಕತ್ರ್ಸೋಕೆ ಇಷ್ಟು ಆಡ್ತೀರ, ಬಿಡ್ರೋ ನಾನು ಕತ್ತರಿಸ್ತೀನಿ... ಎಂಬ ಮಾತುಗಳು ... ಜೊತೆಗೆ ಅಮ್ಯಾ ಮ್ಯಾ ಸದ್ದು..
ನಾನು ಏನಾಗಿದೆ ಯಾಕೆ ಹಿಂಗೆ ಕೂಗಾಡುತ್ತಿದ್ದಾರೆ ಎಂದು ಭಯ ಮಿಶ್ರಿತ ಕುತೂಹಲದಲ್ಲಿ ಕಿಟಕಿಯನ್ನು ತೆಗೆದು ನೋಡಿದೆ ತಕ್ಷಣಕ್ಕೆ ಭಯವಾಯ್ತು, ಗಾಬರಿಯಲ್ಲಿ ಕಣ್ಣರಳಿಸಿ ನೋಡುತ್ತಲಿದ್ದೆ. ಮಬ್ಬುಗತ್ತಲಲ್ಲಿ ಅದ್ಯಾರೋ ಕುರಿಯ ಕತ್ತು ಹಿಡಿದಿದ್ದಾರೆ, ಇನ್ನ್ಯಾರೋ ಮಚ್ಚು ಹಿಡಿದಿದ್ದಾನೆ. ಪಕ್ಕದಲ್ಲೇ ಇದ್ದ ಕುರಿ-ಮೇಕೆಗಳು ಬೊಬ್ಬೆಯಿಡುತ್ತಿವೆ.  

ಆ ರಾತ್ರಿ ನಿದ್ರೆ ಬರಲಿಲ್ಲ ಕುಳಿತಲ್ಲೇ ಕುಳಿತುಬಿಟ್ಟೆ ಅಮ್ಮ ಬೆಳಗಿನ ಜಾವ ಎದ್ದಾಗ ಕಿಟಕಿ ತೋರಿಸಿ ಕೇಳಿದೆ. ಅಯ್ಯೋ ಅದು ಅವರು ಹೊಸತ್ಡ್ಕು ಚೀಟಿ ಮಾಡ್ತಾರಲ್ಲ ಅದಕ್ಕೆ ಮಾಂಸ ಮಾರಾಟ ಮಾಡ್ತಾರೆ. ಅದನ್ಯಾಕೆ ನೋಡೋಕ್ಕೆ ಹೋಗಿದ್ದೆ ಎದ್ದು ಬಾ ಎಂದರು. 

ನಾ ಸುಮ್ಮನಿರಲಾರದೆ ಮತ್ತೆ ಕಿಟಕಿಯತ್ತ ಕಣ್ಣಾಡಿಸಿದೆ ಅಲ್ಲಿ ಸಾಲು ಸಾಲು ಗುಡ್ಡೆಗಳು, ಅದಕ್ಕೊಂದಷ್ಟು ಬಾಯಿ ಬಡುಕ ಜನರು, ಕಿತ್ತಾಟಕ್ಕೆ ನಿಂತಿದ್ದಾರೆ ನಾನು ಎರಡು ಚೀಟಿ ಹಾಕಿದ್ದೆ ನನಗೆ ಎರಡು ಗುಡ್ಡೆ ಬರಬೇಕು, ಎಲ್ಲಿ ಚೀಟಿ ಪುಸ್ತಕ ತೆಗಿ ಎಂದು ತೆಗೆದರೆ ಬಿಳುಪಿನ ಪುಸ್ತಕವೆಲ್ಲ ರಕ್ತಸಿಕ್ತ, ಮೂಲೆಯಲ್ಲಿ ನೀರಿನಂತೆ ಹರಿಯುವ ರಕ್ತ ಕಣ್ಣಿಗೆ ರಾಚುತ್ತಿತ್ತು.  ರಾತ್ರಿಯ ಕುರಿ ಮೇಕೆಗಳು ಉಂಡೆ ಉಂಡೆಯಾಗಿ ಗುಡ್ಡೆಯಾಗಿಬಿಟ್ಟಿದ್ದರು. ಅದನ್ನು ಬಾಚುವ ಕೈಗಳು, ಒಂದೆಡೆ, ಈ ಗುಡ್ಡೆ ಜಾಸ್ತಿ, ಆ ಗುಡ್ಡೆ ಕಡಿಮೆ ಎಲ್ಲಿ ತೂಕ ಹಾಕಿ ಎಂದು ಅರಚುವ ಬಾಯಿಗಳು... ನನಗೆ ಆ ರಕ್ತದ ಓಕುಳಿ ನೋಡಿದ್ದು ಮೊದಲಬಾರಿ ಅದೇನೋ ಭಯ ಹುಟ್ಟಿಸಿತ್ತು.

ಅಮ್ಮನಿಗೆ ಮತ್ತೆ ಪ್ರಶ್ನೇ... ಯಾಕೆ ಅವುಗಳನ್ನ ಸಾಯುಸ್ತಾರೆ? ಎಂದೆ.
"ಈ ಗೋಡೆ ಮೇಲಿರೋ ಹಲ್ಲಿ ಹುಳ ತಿನ್ನುತ್ತೆ, ಹಾವು ಕಪ್ಪೆಯನ್ನು, ಹುಲಿ ಜಿಂಕೆಯನ್ನೋ ಮತ್ತಾವುದೋ ಪ್ರಾಣಿಯನ್ನೋ..." ಹಂಗೆ ಇದು ಎಂದು ಅಮ್ಮ ಹೇಳಿ ಸುಮ್ಮನಿರಿಸಿದ್ದಳು. 

ಆಮೇಲೆ ಅಮ್ಮ ಬಂದು ಮನೆಯಲ್ಲಿ ವಡೆ, ಬೋಂಡಾ, ಬಜ್ಜಿ ಮಾಡಿ... ತಗೋ ಇದು ನಮ್ಮ ಹೊಸತಡುಕು ಕುರಿ,ಕೋಳಿ ಬದಲು ಈರೇಕಾಯಿ, ಈರುಳ್ಳಿ, ಮೆಣಸಿನಕಾಯಿ ಕತ್ತರಿಸಿದ್ದೇನೆ ಎನ್ನುತ್ತಿದ್ದರು. 

ಮನುಷ್ಯನ ಆಹಾರ ಕ್ರಮವೇ ಹಾಗೆ ಏನು ಮಾಡಲಾಗದು ಎಂದುಕೊಂಡು ಸುಮ್ಮನಾಗಿದ್ದೆ. ಸಸ್ಯಹಾರಿಗಳು ಮತ್ತೊಂದು ಉಸಿರು ಕತ್ತರಿಸಿ ತಿಂದರೆ, ಮಾಂಸಾಹಾರಿಗಳು ಈ ರೀತಿ ಕತ್ತರಿಸಿ ತಿನ್ನುವ ಅಭ್ಯಾಸ ಅಷ್ಟೇ ಎಂದುಕೊಂಡಿದ್ದೆ. ಆದರೆ ಮನುಷ್ಯ ಮನುಷ್ಯನನ್ನೇ ತಿಂದರೆ ಏನು ಹೇಳ್ಬೇಕೋ ಗೊತ್ತಾಗುತ್ತಿಲ್ಲ. 

ಆಹಾ.. ಅಂದಹಾಗೆ ಈಗ್ಗೆ ಸುಮಾರು ೧೦ ವರ್ಷಗಳ ಹಿಂದೆ ಬಹರೈನ್ ದೇಶದಲ್ಲಿದ್ದಾಗ ಯಾರೋ ಫಿಲಿಪಿನೋ ತನ್ನ ರೂಮ್ ನಲಿದ್ದ ಜೊತೆಗಾರಳನ್ನೇ ಕತ್ತರಿಸಿ ಬೇಯಿಸಿ ತಿಂದಿದ್ದಳು ಎಂದು ಯಾರೋ ಹೇಳುತ್ತಿದ್ದರು. ಇದಕ್ಕೆ ಏನು ಹೇಳೋದು, ಇದೂ ಮನುಷ್ಯನ ಆಹಾರ ಕ್ರಮವೇ?. ಇದು ಹೊಸ ತನದ ತಡುಕು ಅಂದುಕೊಳ್ಳಬೇಕಾ ಗೊತ್ತಿಲ್ಲ.  

Thursday, April 7, 2016

ಹಸಿರ.... ಉಸಿರು

ಕೆಂಪು ಲಂಗತೊಟ್ಟು ಮಹಡಿಯ ಮೇಲೇರಿ
ಕೈಗೆ ಸಿಗುವ ಬೇವು-ಮಾವುಗಳ ಕಿತ್ತು ಅಣಿಗೊಳಿಸುತಿದ್ದೆ
ಅಯ್ಯೋ ಎಲ್ಲಿದ್ದೀಯಾ, ಈಗಿಲ್ಲಿ ಮರವಿಲ್ಲ 
ಕಡಿದು ಯಾವ ಕಾಲವಾಯ್ತು 
ಭ್ರಮೆಯಲ್ಲಿ ಬದುಕದಿರು ಕಣ್ಬಿಡು ಎಂದರು...
ಮನೆ ಮುಂದಿನ ಹಸಿರೆಲ್ಲ ಉಸಿರು ಕಳೆದುಕೊಂಡಿತ್ತು
ಅಲ್ಲಾ, ಉಸಿರನ್ನು ನಾವೇ ಚಿವುಟಿದ್ದೆವು...
ಹಸಿರನ್ನು ಹುಡುಕುತ್ತ ಮಾರುಕಟ್ಟೆಗೆ ಹೋದೆ
ಹಸಿರಿನ ಹೆಸರಲ್ಲಿ ನಿತ್ರಾಣದ ಮಾವು-ಬೇವು
ಹೇಳುತಿತ್ತು... ಇನ್ನ್ಮುಂದೆ ನಾವೂ ಸಿಗಲಾರೆವು
ಎಚ್ಚರ...!! ಉಸಿರು ಕೊಳ್ಳಲಾಗದು ಹಸಿರನ್ನು ಬೆಳಸದ ಹೊರತು...
ಯಾಕೋ ಉಸಿರುಗಟ್ಟಿತ್ತು ಕಣ್ಬಿಟ್ಟೆ ಬೆಳಗಿನ ಜಾವ ಐದಾಗಿತ್ತು...
ಹುಫ್... ಸದ್ಯ ಇನ್ನು ಉಸಿರಿದೆ ಎಂದುಕೊಂಡೆ...!!! 




Thursday, March 31, 2016

ಗುರುವೆಂದರೆ... ನೀವೇ ❤❤



ಗುರುವೆಂದರೆ ಅನ್ನಬ್ರಹ್ಮ
ಬೆಳೆಯುವ ಕೂಸುಗಳಿಗೆ
ತಂದೆಯಂತೆ ಬೆನ್ನೆಲುಬು
ತಾಯಿಯಾ ಕೈತುತ್ತು

ಗುರುವೆಂದರೆ ಬದುಕು
ಅಕ್ಷರ ದಾಹದಲಿ
ಕಲ್ಲುಮುಳ್ಳು ಸರಿಸಿ 
ಸಾಧನೆಯ ಹಾದಿಗೆ ತೋರ್ಬೆರಳು  

ಗುರುವೆಂದರೆ ಜೀವನ
ಕಾಯಕದ ಶ್ರದ್ಧೆ ಕಲಿಸಿ
ಅರಿವಿನ ಕಣ್ಣು ತೆರೆಸುವ
ಬಾಳ್ವೆಗೊಬ್ಬ ಮಾರ್ಗದರ್ಶಿ 

ಗುರುವೆಂದರೆ ನೀನೇ
ನಿಸ್ವಾರ್ಥದ ನೆಲೆಕಟ್ಟಿ
ಸಹಸ್ರರಿಗೆ ಆಶ್ರಯವಾಗಿ
ನಮ್ಮೊಳಗಿನ ದಾರಿದೀಪವೇ
ಈ ನಮ್ಮ ನಡೆದಾಡುವ ದೇವರು....

ನಾಳೆ ಅಂದರೆ ಏಪ್ರಿಲ್ ೧ ರಂದು ಶ್ರೀಗಳ ೧೦೯ನೇ ಹುಟ್ಟುಹಬ್ಬದ ಸಂಭ್ರಮ. 
ತ್ರಿವಿದ ದಾಸೋಹಿ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಿಗೆ  ಹುಟ್ಟುಹಬ್ಬದ ಶುಭಾಶಯಗಳು    


Tomorrow is 109th Birthday of Our living legend his Holiness 
 "Shri Shri Shri Dr. Shivakumar Swamiji".     

ಚಿತ್ರ ಮತ್ತು ಕವನ: ನನ್ನದೇ

Sunday, February 28, 2016

ಮಿತಿಗೂ ಸಡ್ಡುಹೊಡೆದ ಪ್ರತಿಭೆಗಳು...


ಇದೇ ಶುಕ್ರವಾರ ನಡೆದ ತಮಿಳುನಾಡು ಇಂಜಿನಿರ್ಯರ್ಸ್ ಪೋರ್ಮ್ ಕಾರ್ಯಕ್ರಮದಲ್ಲಿ "Proud of Being an Indian" ಎಂಬ ಶೀರ್ಷಿಕೆಯಲ್ಲಿ ಒಂದು ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮ ಹೆಮ್ಮೆಯ ಸೈನಿಕರಿಗೆ ಗೌರವ ಸಲ್ಲಿಸುವ ಒಂದು ಕಾರ್ಯಕ್ರಮ ಜೊತೆಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮನಸೆಳೆದದ್ದು ನನಗೆ ಮಾರ್ಷಲ್ ಅವರ ಮಾತು ಹಾಗೂ "Ability Unlimited" ತಂಡದ ಮನಮೋಹಕ ನೃತ್ಯಪ್ರದರ್ಶನ. 

ಮಾರ್ಷಲ್ ಕೃಷ್ಣಸ್ವಾಮಿ ಅವರು ತಮ್ಮ ವೃತ್ತಿ ಬದುಕಿನಲ್ಲಿ ಕಂಡ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು ಅಲ್ಲದೇ ನೆರೆದಿದ್ದ ಮಕ್ಕಳಿಗೆ ಸ್ಪೂರ್ತಿದಾಯಕವಾದರು. "ನಾವೆಲ್ಲ ಸೈನಿಕರು ಅಷ್ಟೇ..!! ಅಲ್ಲಿ ಯಾವುದೇ ಜಾತಿ, ಧರ್ಮ ಸಂಸ್ಕೃತಿ ಎಂಬ ಭಾವನೆಗಳು ಎಂದಿಗೂ ಬರುವುದೇ ಇಲ್ಲ"  ನಮ್ಮೊಳಗೆ ದೇಶಭಕ್ತಿ, ದೇಶ ಇಷ್ಟೇ ಬೇರಾವುದೂ ಸುಳಿಯಲು ಸಾಧ್ಯವೇ ಇಲ್ಲ". 


ಯುದ್ಧ ನಡೆಯುತ್ತಲಿದ್ದರೆ ನಮ್ಮೊಡನಿರುವ ಸ್ನೇಹಿತ ಸತ್ತು ಮಲಗಿರುತ್ತಾನೆ, ಅವನನ್ನು ಕಂಡು ನಾವು ದುಃಖಿಸುವುದಕ್ಕೆ ಜಾಗವೇ ಇಲ್ಲ, ನಮ್ಮೊಳಗೂ ಭಾವುಕತೆಯಿದೆ ಹಾಗೆಂದ ಮಾತ್ರಕ್ಕೆ ಸತ್ತವನ ಎದುರು ನಾವು ಅಳುತ್ತ ಕೂತರೆ, ವೀರಮರಣ ಹೊಂದಿದ ನಮ್ಮ ಸ್ನೇಹಿತನಿಗೆ ನಾವು ಮಾಡಿದ ದ್ರೋಹ, ಆ ವ್ಯಕ್ತಿಗೆ ನಾವು ಸಲ್ಲಿಸಬೇಕಾದ ನಮನವೆಂದರೆ ಶತ್ರುಗಳೊಂದಿಗೆ ಸೆಣಸಾಡುವುದು. ಆತನ ಆತ್ಮಕ್ಕೆ ಶಾಂತಿ ಕೋರುವುದೇ ನಮ್ಮೆಲ್ಲರ ಗುರಿ. ನಮ್ಮ ಮನಸ್ಸುಗಳು ಎಲ್ಲವನ್ನೂ ಹತೋಟಿಯಲ್ಲಿಡುವಷ್ಟರ ಮಟ್ಟಕ್ಕೆ ಬೆಳೆದಿರುತ್ತದೆ. ಹೀಗೆ ಒಂದೇ ಸಮನೆ ಸೈನಿಕರ ಮನದಾಳವನ್ನು ತೆರೆದಿಟ್ಟವರು ಮಾರ್ಷಲ್ ಶ್ರೀನಿವಾಸಪುರಂ ಕೃಷ್ಣಸ್ವಾಮಿ.("Honor, Pride and Need of Serving Our Nation with True Patriotism” - Mr. Srinivasapuram Krishnaswamy  PVSM, AVSM, VM and Bar, 19th Chief of Air Staff of India - INDIAN ARMED FORCES).

ಹಾಗೆ ಪ್ರಶ್ನೆಗಳಿಗೆ ಉತ್ತರಿಸುತ್ತಿವವರಿಗೆ ಮತ್ತೊಂದು ಪ್ರಶ್ನೆ, ದೇಶದಲ್ಲಿ ನಡೆವ ರಾಜಕೀಯಕ್ಕೆ ಬೇಸತ್ತೋ ಏನೋ ಶಾಲಾ ಹೆಣ್ಣು ಮಗು ಕೇಳಿದ್ದು "ನಮ್ಮ ದೇಶದಲ್ಲಿ ಏಕೆ ಮಿಲಿಟರಿ ಅಧಿಕಾರ ತರಬಾರದು...?" ಎಂಬ ಪ್ರಶ್ನೆಗೆ ಮಾರ್ಷಲ್ ರವರ ತಟ್ಟನೆ ಉತ್ತರ "ಹಾಗೇನಾದ್ರು ಆದರೆ ಅದೊಂದು ದುರ್ದೈವವೇ ಸರಿ".  "ಯಾರು ಯಾವ ಕೆಲಸ ಮಾಡಬೇಕೋ ಅದನ್ನು ಮಾಡಬೇಕು ಅದು ಬಿಟ್ಟು ಬೇರೆ ಮಾಡಬಾರದು. ನಾನು ಸೈನಿಕ ನನ್ನ ಕೆಲಸವನಷ್ಟೇ ನಾನು ಮಾಡಬೇಕು ಅದು ಬಿಟ್ಟು ರಾಜಕೀಯ ಮಾಡುತ್ತ ಕುಳಿತರೆ ದೇಶಕಾಯುವ ಕೆಲಸ ಯಾರು ಮಾಡುತ್ತಾರೆ". 
ಸೈನಿಕರ ಮನಸ್ಸು ಮತ್ತು ಮನೋಭಾವ ಹೇಗಿರುತ್ತದೆ ಎಂಬುದಕ್ಕೆ ಮಾರ್ಷಲ್ ಅವರೇ ಸಾಕ್ಷಿಯಾದರು, ತಮ್ಮ ವೃತ್ತಿ ಬದುಕಿನ ಬಹಳಷ್ಟು ಅನುಭವವಗಳನ್ನು ಹಂಚಿಕೊಂಡರು. ಅವರು ೧೬ರನೇ ವರ್ಯಸ್ಸಿಗೆ ವಿಮಾನ ಚಾಲನೆ, ೨೨ನೇ ವರ್ಷಕ್ಕೆ ಕಾರ್ಗಿಲ್ ಯುದ್ಧ, ಸೈನ್ಯದಲ್ಲಿ ಹೆಣ್ಣುಮಕ್ಕಳೂ ಯಾರಿಗೇನು ಕಡಿಮೆಯಿಲ್ಲ ಎಂಬಂತೆ ತಮ್ಮ ಸಾಹಸ ಪ್ರದರ್ಶನ ಮಾಡುವವರ ಬಗೆಗಿನ ಮಾಹಿತಿ - ಹೀಗೆ ಹತ್ತು ಹಲವಾರು ಅನುಭವವಗಳನ್ನು ಹಂಚಿಕೊಂಡರು.

ಯೋಧರಿಗೆ ನಮನ ಸಲ್ಲಿಸಲು ಹೀಗೂ ನಾವು ಮಾಡಬಹುದು ಅವರೊಂದಿಗೆ ಮಾತುಕತೆ, ಸಂವಾದಗಳು ನಡೆದರೆ ಇಲ್ಲಿರುವ ಮಕ್ಕಳಿಗೂ ಸ್ಪೂರ್ತಿದಾಯಕ ಎಂದೆನಿಸಿತು.

---------------

ಇದೇ ವೇದಿಕೆಯಲ್ಲಿ ಮತ್ತೊಂದು ಕಣ್ಮನ ಸೆಳೆದದ್ದು Ability Unlimited ತಂಡದ ಮನೋಜ್ಞ ನೃತ್ಯ. ನಾನು ಇಲ್ಲಿ ಈ ಮಕ್ಕಳು ಅಂಗ ವಿಕಲರು ಎಂದರೆ ನನ್ನೊಳಗಿನ ಅಂಗ ವೈಕಲ್ಯತೆ ಎದ್ದು ಕಾಣುತ್ತದೆ ಅಥವಾ ಅಯ್ಯೋ ಪಾಪ ಎಂಬ ಕರುಣೆ ತೋರಿಸದರೆ ನನ್ನ ಮನಸ್ಸಿನ ನ್ಯೂನತೆ ಎದ್ದು ಕಾಣುತ್ತದೆ. ಇಲ್ಲ ನಾನು ಇದಾವುದನ್ನು ಸಂಭೋದಿಸಲು ಇಷ್ಟಪಡುವುದಿಲ್ಲ ಈ ಶುಕ್ರವಾರ ನಾ ಕಂಡಿದ್ದು ಒಂದು ದೈವೀ ಕಳೆಯ ನೃತ್ಯರೂಪಕ, ಅದು ವಿಭಿನ್ನ ಶೈಲಿಯಲ್ಲಿ. ಸಾಧನೆ ಎಂಬುದು ಎಲ್ಲರ ಸ್ವತ್ತು, 'ನಾನು ಯಾವಾಗಲು ನಂಬಿರುವುದು ಎಲ್ಲರಲ್ಲೂ ಒಂದೊಂದು ರೀತಿಯ ಕಲೆ ಇದ್ದೇ ಇರುತ್ತದೆ ಆದರೆ ಅದನ್ನು ಹೊರತರುವುದು ಮಾತ್ರ ನಮ್ಮಗಳ ಕರ್ತವ್ಯ ಜೊತೆಗೆ ಮತ್ತೊಬ್ಬರೊಂದಿಗೆ ಹಂಚಿಕೊಂಡರೆ ಅದು ಬೆಳಕಿಗೆ ಬರುವುದಷ್ಟೇ ಅಲ್ಲಾ ಹೊಸತನವನ್ನು ಕಲಿಯಲು ಪ್ರೋತ್ಸಾಹಿಸುತ್ತದೆ’. 

ಡಾ. ಸೈಯದ್ ಸಲ್ಲುದ್ದೀನ್ ಪಾಷ  ಈ ವ್ಯಕ್ತಿಯ ಬಗ್ಗೆ ಕೇಳಿರುವವರು ಕೆಲವೇ ಮಂದಿ ಇರಬಹುದು ಆದರೆ ಅದ್ಭುತ ಸಾಧಕ ಸುಮಾರು ೩೦ ವರ್ಷಗಳಿಂದ ವಿಶಿಷ್ಟ ಮಕ್ಕಳಿಗೆ ತಮ್ಮೆಲ್ಲಾ ಜ್ಞಾನದ ಬೆಳಕನ್ನು ಹಂಚುತ್ತಿರುವ ಪ್ರಬುದ್ಧ ವ್ಯಕ್ತಿ. Ability Unlimited ತಂಡದ ಮೂಲಕ ಹಲವಾರು ಮಕ್ಕಳು ನೃತ್ಯಪ್ರದರ್ಶನ ನೀಡಿದರು, ಅದರಲ್ಲಿ ತಮಗೆ ಕಾಲಿಲ್ಲ, ಕಿವಿ ಕೇಳುವುದಿಲ್ಲ ನನಗೆ ಆ ತೊಂದರೆ ಈ ತೊಂದರೆ ಎಂದು ಎಲ್ಲಿಯೂ ಕಿಂಚಿತ್ತು ಕಾಣದಂತೆ ನಮ್ಮೆಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದರು. ಹೇಗಿದ್ದರೂ ಸರಿ ನಾವು ಮುಂಜಾವಿನ ಯೋಗವನ್ನು ತಮ್ಮ ಗಾಲಿ ಕುರ್ಚಿಯ ಮೇಲೂ ಮಾಡಬಹುದು, ಭರತನಾಟ್ಯ, ಕಥಕ್ ನೃತ್ಯ, ಯಾವುದಾದರೂ ಸರಿ ಎಲ್ಲವನ್ನೂ ಸೈ ಎನಿಸಿಕೊಳ್ಳುವಂತೆ ನರ್ತಿಸಬಲ್ಲೆವು ಎಲ್ಲದಕ್ಕಿಂತಲೂ ವಿಭಿನ್ನವಾಗಿರುತ್ತದೆ ಎಂದು ತೋರಿಸಿಕೊಟ್ಟವರು ಈ ಮಕ್ಕಳು.  
ಆಯ್ದ ಕೆಲವು ವಿಡಿಯೋಗಳನ್ನು ಇಲ್ಲಿ ಹಂಚಿಕೊಂಡಿರುವೆ.....

ಗಾಲಿ ಕುರ್ಚಿ ರಥವಾದಾಗ 

 ಕತ್ತಿವರಸೆ

 ಬಾಲಿವುಡ್ ಹಾಡಿಗೆ ನೃತ್ಯ 

- ಈ ವಿಡಿಯೋಗಳನ್ನೊಮ್ಮೆ ನೋಡಿ, ನಮಗೆ ಅರಿವಿಲ್ಲದೆ ಸಂತಸ ಹುಟ್ಟುತ್ತದೆ.

ಭಗವದ್ಗೀತೆ ಗಾಲಿ ಕುರ್ಚಿಯ ಮೇಲೆ ಎಂದಾಗ ನಾನು ಬೆರಗು ಕಣ್ಣಿಂದ ನೋಡುತ್ತಿದ್ದವಳಿಗೆ ಕಣ್ಣಾಲೆಗಳು ಕೆಂಪಾಗಿದ್ದವು. ಕತ್ತಿ ವರಸೆ ಗಾಲಿ ಕುರ್ಚಿಯಲಿ ಸಾಗುತ್ತಿದ್ದರೆ ಮೈ ಝುಮ್ ಎನಿಸುತ್ತಿತ್ತು. ಬಾಲಿವುಡ್ ನಾಟ್ಯ ಗಾಲಿಯಲಿ ತಿರುಗುತ್ತಿದ್ದರೆ ನನಗೆ ಅರಿವಿಲ್ಲದೆ ದುಃಖ ಉಮ್ಮಳಿಸಿತ್ತು... ನಿಜ ನಾವು ಎಲ್ಲ ಸರಿಯಿದೆ ನಮಗೆ ಯಾವ ನ್ಯೂನತೆಯಿಲ್ಲ ಎಂದು ಬೀಗುತ್ತಿದ್ದರೆ ನಮ್ಮೊಳ ಮನಸ್ಸು ನ್ಯೂನತೆಯಲ್ಲಿದೆ ಹೊರಗಿನ ಪ್ರಪಂಚವನ್ನು ನೋಡುವುದರಲ್ಲಿ ನಾವು ಸೋತಿದ್ದೇವೆ ಪ್ರತಿಭೆಯನ್ನು ಗುರುತಿಸುವುದರಲ್ಲಿ ಹಿಂದುಳಿದಿದ್ದೇವೆ ಎಂದೆನಿಸುತ್ತದೆ. ಆದರೆ ಇದೆಲ್ಲವನ್ನು ಹಿಂದಿಟ್ಟು ಡಾ. ಸೈಯದ್  ತೆರೆದ ಮನಸ್ಸಿನಿಂದ ಮಾಡುತ್ತಿರುವ ಸೇವೆ ಅಪಾರ. ಅವರಿಗೊಂದು ನನ್ನ ಸಲಾಮ್. 

ಡಾ. ಸೈಯದ್ ಹೇಳುತ್ತಾರೆ ಈ ಮಕ್ಕಳು ದೇಶವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಲೇ ಬಂದಿದ್ದಾರೆ. ಈ ಮಕ್ಕಳು ಎಲ್ಲಿಯೇ ಹೋದರೂ ಮೇಕಪ್ ಮಾಡಿಕೊಳ್ಳಲು ಯಾರೊಬ್ಬರ ಸಹಾಯ ಪಡೆಯುವುದಿಲ್ಲ ತಮ್ಮಷ್ಟಕೆ ತಾವೇ ತಯಾರಾಗಿ ಬರುತ್ತಾರೆ, ಅವರವರ ಸಾಮಗ್ರಿಗಳು ಅವರದೇ ಜವಾಬ್ದಾರಿಯಲಿರುತ್ತದೆ, ನೃತ್ಯ ಮಾಡುತ್ತಿದ್ದರೆ ಮಕ್ಕಳು ತಮ್ಮ ಗಾಲಿಯನ್ನು ಯಾವ ಬೈಕ್ ಸವಾರ ೧೫೦ ಕಿ ಮಿ ವೇಗಕ್ಕೆ ಓಡಿಸುತ್ತಾನೋ ಅದೇ ವೇಗದಲ್ಲಿ ಈ ಗಾಲಿಚಕ್ರವೂ ಓಡುತ್ತದೆ. ವಿಶಿಷ್ಟ  ಗಾಲಿ ಕುರ್ಚಿಯ ವಿನ್ಯಾಸದ ಹಿಂದೆಯೂ ಡಾ.ಸೈಯದ್ ಕೈವಾಡವಿದೆ ಆ ವ್ಯಕ್ತಿ ದೈವೀಸಂಭೂತನೆಂದರೆ ತಪ್ಪಾಗಲಾರದು.  ಹೀಗೆ ಹೇಳುತ್ತ ಹೋದರೆ ಆ ತಂಡದ ವಿಶಿಷ್ಟತೆ ಹೆಚ್ಚುತ್ತಲೇ ಹೋಗುತ್ತದೆ. 

ಡಾ.ಸೈಯದ್ ಕೊನೆಗೊಂದು ಮಾತು ಹೇಳುತ್ತಾರೆ "ನಿಜವಾಗಿಯೂ ಏಳು ಜನ್ಮ ಎಂಬುದೊಂದಿದ್ದರೆ ನಾನು ಖಂಡಿತವಾಗಿಯೂ ಈ ಭರತ ಭೂಮಿಯಲ್ಲಿಯೇ ಜನಿಸಬೇಕು" ಎಂದು, ಈ ಮಾತನ್ನು ಕೇಳಿದಮೇಲೆ ನಿಜ ಅದು ಸತ್ಯವೇ ಆದರೆ ಇಂತಹ ಮಹಾನ್ ವ್ಯಕ್ತಿಗಳು ಭರತ ಭೂಮಿಯಲ್ಲೇ ಜನ್ಮತಾಳಲೆಂದು  ಆಶಿಸುತ್ತೇನೆ.


ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ್ದ  TEF ಕಾರ್ಯಕಾರಿ ಸಮಿತಿಯವರಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕು.



Monday, June 8, 2015

ಅವನಿಲ್ಲದಾ ಹೊತ್ತು - How Old Are You..?

ನಿನ್ನ ವಯಸ್ಸು ಎಷ್ಟು..?


 ನನ್ನವನಿಲ್ಲದ ಹೊತ್ತು, ಟಿವಿ ರಿಮೋಟ್ ಕೈನಲ್ಲಿಯೇ ಇತ್ತು, ಚಾನಲ್ ಬದಲಿಸಿ ಬದಲಿಸಿ ಸಾಕಾಯ್ತು ಬರಿ ಅದೆ ಅತ್ತೆ-ಸೊಸೆ ವೈಷಮ್ಯ, ಮಕ್ಕಳಾಗೋಲ್ಲ ಗಂಡನಿಗೆ ಡೈವರ್ಸ್ ಇದೆ ತರಹ ಸೀರಿಯಲ್ ನೋಡಿ ದೇವಾ..!! ಇನ್ನು ನಾವು ಯಾವ ಜಮಾನದಲ್ಲಿದ್ದೀವಪ್ಪ, ನಮ್ಮ ಜನರನ್ನ ನೀನೆ ಕಾಪಾಡಬೇಕಪ್ಪ ಎಂದು ಕೊಂಡು ಟಿವಿ ಸ್ವಿಚ್ ಆಫ್ ಮಾಡಿದೆ.  

ಬೆಳಗ್ಗೆಯಷ್ಟೆ ಕೇರಳದ ಗೆಳತಿಯ ಹತ್ತಿರ ಇತ್ತೀಚೆಗೆ ಮಲಯಾಳಂನ ಒಳ್ಳೊಳ್ಳೆ ಫಿಲ್ಮ್ ಗಳನ್ನು ನೋಡಿಲ್ಲ, ಸ್ವಲ್ಪ ಲಿಸ್ಟ್ ಕೊಡು ಅಂದೆ. ಅದರಲ್ಲಿ ೪-೫ ಹೆಸರುಗಳಿದ್ದರಲ್ಲಿ ನನ್ನ ಸೆಳೆದಿದ್ದು "How Old Are You" ಚಿತ್ರದ ಹೆಸರು. ಹೇಗೂ ನನ್ನವನಿಲ್ಲ ನನ್ನಷ್ಟಕ್ಕೆ ನಾನೆ How Old Are You ಎಂದುಕೊಂಡು ಯೂಟ್ಯೂಬ್ ನಲ್ಲಿ ಹುಡುಕಿ ಎರಡೂವರೆ ಗಂಟೆಗಳ ಕಾಲ ನನ್ನನ್ನು ಹಿಡಿದಿಟ್ಟಿದ್ದು ಮಾತ್ರ ಸುಳ್ಳಲ್ಲ.  

ಸುಮಾರು ೧೩-೧೪ ವರ್ಷಗಳ ನಂತರ ಮರಳಿ ನಟನೆಗೆ ಬಂದ ಮಂಜು ವಾರಿಯರ್ ಬಹಳಷ್ಟು ಇಷ್ಟವಾದಳು, ಪಾತ್ರ ಹೇಳಿ ಮಾಡಿಸಿದಂತ್ತಿತ್ತು. ಒಂದು ಹೆಣ್ಣು ತನ್ನೊಳಗಿನ ಸಾಮರ್ಥ್ಯವನ್ನೆಲ್ಲ ಹೂತಿಟ್ಟು ಗಂಡ ಮನೆ-ಮಕ್ಕಳು ಸಂಸಾರ ಇದೆ ಜೀವನ, ಇಷ್ಟೆ ಬದುಕು ಎಂದು ಬೇಲಿ ಹಾಕಿಕೊಂಡವಳ ಯಶೋಗಾಥೆ. 

ನಿರುಪಮ ರಾಜೀವ್ ಆಗಷ್ಟೆ ೩೬ನೇ ವಯಸ್ಸಿಗೆ ಕಾಲಿಟ್ಟಿರುವಳು. ಅವಳ ವಯಸ್ಸೆ ಅವಳ ಬೆಳವಣಿಗೆಗೆ ಅಡಚಣೆಯಾದಂತೆ ಕಾಣುತ್ತದೆ. ಸಾಮಾನ್ಯ ಸರ್ಕಾರಿ ಕೆಲಸದಲ್ಲಿ ಕ್ಲರ್ಕ್ ಆಗಿರುವವಳ ಗಂಡ ತನ್ನ ಮುಂದಿನ ಭವಿಷ್ಯವನ್ನು ಐರ್ಲ್ಯಾಂಡ್ ನಲ್ಲಿ ಸೃಷ್ಟಿಸಿಕೊಳ್ಳಲು ಹೊರಡು ವ ತಯಾರಿಯಲ್ಲಿದ್ದವ. ಅವನ ಜೊತೆ ತಾನು ಕೆಲಸ ಹುಡುಕಿ ಅವನೊಟ್ಟಿಗೆ ಹೋಗಬೇಕೆಂಬ ಆಸೆಯಲಿ ಐರಿಷ್ ಕಂಪನಿಯ ಕೆಲಸಕ್ಕೆ ಇಂಟರ್ವ್ಯೂಗೆ ಹೋದವಳಿಗೆ ವಯಸ್ಸಿನ ಅಡ್ಡಿ. ಐರ್ಲ್ಯಾಂಡ್ ಗೆ ಹೋಗುವ ಗಂಡನಿಗೆ ತೊಂದರೆಯಾಗುತ್ತೆಂದು, ಗಂಡ ಮಾಡಿದ ಆಕ್ಸಿಡೆಂಟ್ ನಲ್ಲಿ ತನ್ನ ಹೆಸರು ತೂರಿಸಿಕೊಳ್ಳುವಳು. 

ಒಂದು ಬೆಳಗ್ಗೆ ನಿರುಪಮಾಗೆ ಐಜಿ ಕಚೇರಿಯಿಂದ ಕರೆ ಮಾಡಿ ಭಾರತದ ರಾಷ್ಟ್ರಪತಿ ನಿಮ್ಮನ್ನು ಭೇಟಿ ಮಾಡಬೇಕೆಂದು ಬಯಸಿದ್ದಾರೆ. ಕಾರಣ ಮಗಳು ತನ್ನ ಶಾಲೆಯಲ್ಲಿ ರಾಷ್ಟ್ರಪತಿಗಳನ್ನ ಕೇಳಿದ ಪ್ರಶ್ನೆ. ಭೇಟಿಗೂ ಮುನ್ನ ಅವಳನ್ನ ಗುರುತಿಸಿದ ಜನರೆ ಹೆಚ್ಚು. ಅದೇ ಖುಷಿಯಲ್ಲಿ ಪ್ರಧಾನಮಂತ್ರಿಗಳನ್ನ ಭೇಟಿ ಮಾಡಿದ್ದೇ ಒಂದು ದೊಡ್ಡ ದುರಂತ. ಅದಾದ ಮೇಲೆ ಎಲ್ಲೆಡೆ ನಗೆಪಾಟಲಿಗೆ ಈಡಾಗುತ್ತಾಳೆ. ಸಾಮಾಜಿಕ ತಾಣಗಳಲ್ಲಿ ಕಾರ್ಟೂನ್ ಆಗುವಳು. ಇದೇ ಕಾರಣಕ್ಕೆ ಅವಮಾನಗಳನ್ನ ಎದುರಿಸಿದ ಮಗಳು ಅಮ್ಮನನ್ನ ಕೀಳಾಗಿ ನೋಡುವುದು, ಗಂಡನ ಸ್ವಾರ್ಥ, ನಿರ್ಲಕ್ಷ್ಯತನ ಇದೆಲ್ಲವನ್ನು ಅನುಭವಿಸುತ್ತಿದ್ದ ನಿರುಪಮ ಇದ್ದಕ್ಕಿದ್ದಂತೆ ಗಂಡ-ಮಗಳು ಐರ್ಲ್ಯಾಂಡ್ ಗೆ ಹೊರಟು ನಿಂತಾಗ ಕುಗ್ಗಿ ಹೋಗುತ್ತಾಳೆ. 

ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಂಡು, ಅದೇ ಸರ್ಕಾರಿ ಕೆಲಸ,  ಜೊತೆಗೆ ಆಗೊಮ್ಮೆ ಈಗೊಮ್ಮೆ ಸ್ಕೈಪ್ ನಲ್ಲಿ ಮಗಳ ಜೊತೆ ಒಡಾನಾಟ, ಅಷ್ಟೇ ಜೀವನ. ಇವೆಲ್ಲದರ ಮಧ್ಯೆ ತನ್ನ ಹಳೆಯ ಗೆಳತಿ ಸೂಸನ್ ಭೇಟಿ. ಅವಳು ನೀಡಿದ ಧೈರ್ಯ ಕಾಲೇಜಿನಲ್ಲಿ ನಿನ್ನಲ್ಲಿದ್ದ ಹೋರಾಟದ ಕಿಚ್ಚು ಈಗಲೂ ಇರಲಿ, ಆಗಿನ ಧೈರ್ಯ ಹುಮ್ಮಸ್ಸು ಈಗೆಲ್ಲಿ ಹೋಯಿತು, ಅದನ್ನ ಅಲ್ಲೇ ಸುಟ್ಟುಹಾಕಿದ್ದೀಯಾ? ಈಗಲೂ ಕಾಲ ಮಿಂಚಿಲ್ಲ ಬದುಕಿನಲ್ಲಿ ಯಾವ ವಯಸ್ಸಿನಲ್ಲಾದರೂ ಆಸೆಗಳಿಗೆ ರೆಕ್ಕೆ ಕಟ್ಟಬಹುದು. ಜೀವನ ಎಂದಿಗೂ ಹೊಸತನವನ್ನ ಸೃಷ್ಟಿಸುತ್ತದೆ. ವಯಸ್ಸು ಯಾವುದಾದರೇನು ನಮ್ಮ ಕನಸಿಗೆ ನಾವೇ ಸಹಿ ಹಾಕಬೇಕು 'Your dream is your Signature' ಇದೊಂದು ಮಾತು ನಿರುಪಮಳಲ್ಲಿ ಮನಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇದಾದ ನಂತರ ಎಲ್ಲವೂ ಬದಲಾವಣೆಯ ಹಾದಿ.

ಮನೆಯ ಮಹಡಿಯ ಪುಟ್ಟ ಕೈತೋಟ ಮುಂದೊಂದು ದಿನ ದೇಶವೇ ಗುರುತಿಸುವಂತೆ ಮಾಡುವ ಕಥೆ. ಗಂಡ ಮತ್ತು ಮಗಳು ಅವಳ ಸಾಮರ್ಥ್ಯವನ್ನು ಗುರುತಿಸುವ ದಿನ ಹತ್ತಿರವಾದಾಗ ಹೆಂಡತಿಯಲ್ಲಿನ ಸಂತಸ. ನನ್ನಿಂದ ಏನೂ ಸಾಧ್ಯವಿಲ್ಲ ಎಂದುಕೊಂಡವಳಲ್ಲಿ ಸಾಧಿಸುವ ಛಲ ಕಾಣುವ ಚಿತ್ರ.  

ಎಷ್ಟೋ ಜನ ಗಂಡಂದಿರು ಹೆಂಡತಿಯರನ್ನ ಕೀಳಾಗೆ ಕಾಣುತ್ತಾರೆ. ಅವಳಿಂದ ಏನು ಸಾಧ್ಯ, ಅಯ್ಯೋ ನಿನ್ನ ಕೈಲಿ ಏನಾಗುತ್ತೆ.. ನೀನಿನ್ನು ಹಳೆ ಕಾಲದವಳು ಎಂದು ಹೀಯಾಳಿಸಿ ಆ ಹೆಣ್ಣಿನಲ್ಲಿರುವ ಸಾಮರ್ಥ್ಯವನ್ನೆ ಮೂಲೆಗುಂಪು ಮಾಡುತ್ತಾರೆ. ಅಂತವರು ನೋಡಲೆ ಬೇಕಾದ ಚಿತ್ರ.
ವಯಸ್ಸು ಎಷ್ಟಾದರೇನು ಸಾಧನೆಯ ಹಾದಿ ಸದಾ ಹಸಿರಾಗಿರುತ್ತದೆ. ಹೆಣ್ಣಿನ ಸಬಲೀಕರಣ,  Organic farming ಮತ್ತು ಅದರ ಅನುಕೂಲ ಇವೆಲ್ಲವನ್ನು ಬಿಚ್ಚಿಡುತ್ತಾ ಹೆಣ್ಣಿನ ಭಾವುಕತೆಯ ತುಮುಲಗಳ ಚಿತ್ರ ಎಲ್ಲರಿಗೂ ಸ್ಪೂರ್ತಿದಾಯಕ.

ರೋಷನ್ ಆಡ್ರೀವ್ಸ್ ಅವರ ಅತ್ಯುತ್ತಮ ನಿರ್ದೇಶನ ಈ ಚಿತ್ರವನ್ನು ನೋಡಿ ನೀವು? ನಿಮ್ಮೊಳಗಿನ ಸಾಮರ್ಥ್ಯವನ್ನ ಗುರುತಿಸಿಕೊಳ್ಳಿ. ಭಾಷೆಯಾವುದಾದರೇನು ಒಳ್ಳೆಯದು ಎಂದಾದರೆ ಖಂಡಿತಾ ಆಹ್ವಾನಿಸಿ ಆಹ್ಲಾದಿಸಿ. 

 https://www.youtube.com/watch?v=sbNAvwI4w8w  

Saturday, May 2, 2015

ಹುಟ್ಟು ಹಬ್ಬಕ್ಕೊಂದು ಆಶಯ

Every step, innovative
with chain of desires
as you step in with,
no dearth of dreams

Let  peak the worthy dreams
Like a store of grains
Lets  you know its price
Build a living and its efforts

Foul surrounds you
a pure soul faces it
to possess  the power
a lightening can lit

As you climb the steps of age
World of energy you have
and be aligned with dreams
and goodness to side with love
                 
-----

ಹೆಜ್ಜೆ ಹೆಜ್ಜೆಗೂ ಹೊಸತನದ
ಆಸೆಗಳ ಸರಮಾಲೆಯಲಿ
ನಡೆವ ನಿನ್ನೊಳು
ಕನಸುಗಳಿಗೇನು ಬರವಿಲ್ಲ

ಯೋಗ್ಯ ಕನಸುಗಳು ಶಿಖರವಾಗಲಿ
ಕಟ್ಟಿದ ಬುತ್ತಿಯಂತೆ
ಅದರ ಬೆಲೆ ಅರಿವಿರಲಿ
ಬದುಕು ಕಟ್ಟುವ ಶ್ರಮ ತಿಳಿದಿರಲಿ

ಹೊಲಸು ನಮ್ಮ ಸುತ್ತಲಿದೆ
ಅದನು ಎದುರಿಸುವ
ಶುದ್ಧ ಮನಸಿಗೆ
ಕತ್ತಲಲೂ ಮಿಂಚಿನ ಬಲವಿದೆ

ವಯಸ್ಸಿನ ಮೆಟ್ಟಿಲು ಹತ್ತುತಾ
ಪ್ರಪಂಚದ ಶಕ್ತಿ
ಅದರೊಡನೆ ಬೆರೆವ ಕನಸು
ಶ್ರೇಷ್ಟವಾಗಿರಲಿ, ಒಲುಮೆಯ ಪರವಿರಲಿ
                    
ಮಗನ ಹುಟ್ಟು ಹಬ್ಬಕ್ಕೊಂದು ಆಶಯ....

Done in Pixlr

Tuesday, March 31, 2015

ನಿನ್ನ ನೋಡಿ ಕಲಿಯಬೇಕಿದೆ ಗುರುದೇವಾ..!!

ಮನಸಿನೊಡಲಾಳವ ಹಿಡಿದಿಡುತ
ಸ್ವಾರ್ಥತವ ದೂರವಿಟ್ಟು
ಬದುಕು ಸವೆಸುವುದೆಂದರೆ
ನಿನ್ನ ನೋಡಿ ಕಲಿಯಬೇಕಿದೆ 

ಬೆಂಗಾಡು ಭೂಮಿಯಲಿ ಬೆವರು ಸುರಿಸಿ  
ಪುಣ್ಯಕ್ಷೇತ್ರ ಕಟ್ಟಿದ ದೊರೆಯೇ
ನಿನ್ನ ಋಣದಲಿ ಬದುಕು ಸಾಗಿಸುತ
ನೆಮ್ಮದಿಯ ನೆಲೆ ಕಂಡವರು ಸಾವಿರಾರು

ಪ್ರತಿಫಲವೆನದೆ ಬಡವ-ಬಲ್ಲಿದನೆನದೆ
ಅಂಗಿ-ಅನ್ನಕೆ ದಾನಿಯಾಗಿ 
ವಿದ್ಯೆ-ಬುದ್ಧಿಗೆ ಗುರುವಾಗಿ  
ಆವರಿಸಿದ ಕತ್ತಲೆಗೆ ಬೆಳಕು ನೀ

ಹರಯದಲಿದ್ದ ಹುಮ್ಮಸ್ಸು ಇಂದಿಗೂ ಅದೇ ತೇಜಸ್ಸು
ಜಾವಕೇ ಎಚ್ಚರ ಬೆರೆವ ಮನಗಳಿಗೆ ಬಲು ಹತ್ತಿರ
ನಿನ್ನೊಳಗಿನ ಅರಿವು ಮೊಗೆದಷ್ಟು ಮುಗಿಯದ ಸರೋವರ  
ಅರಿತಷ್ಟೂ ನೀ ಶಿಖರದಂತೆ ಎತ್ತರ   

ನಿನ್ನ ಶ್ರಮದ ನಡಿಗೆ ಸಿದ್ದಗಂಗೆಯ ಮುಡಿಗೆ
ಅಂದು ನೀ ಹಿಡಿದ ಭರವಸೆಯ ಜೋಳಿಗೆ
ಈಗಲೂ ದಿನಂಪ್ರತಿ ತುಂಬುತ್ತಿದೆ 
ಅದು ಶ್ರೀಕ್ಷೇತ್ರಕೆ ನೀ ನೀಡಿದ ಕೊಡುಗೆ

ದೇವ ನಿನ್ನ ಈ ನೂರ ಎಂಟು 
ಬಯಲೊಳಗೆ ಆಸೆಗಳನು ಬೆತ್ತಲಾಗಿಸಿ
ನಾಡಿಗೆ ನೀ ಬೆಳೆಸಿದ ನಂಟು 
ಎಂದೂ ಕಳೆದುಕೊಳ್ಳಲಾರದಂತಾ ಗಂಟು 

ನೆಲ ನಾಡು ಜನ ಮನ ಕಾಯಕ 
ಎಲ್ಲವನು ಗೆಲುವುದೊಂದು ಧ್ಯಾನ
ಹೊಗಳಿಕೆ ಸನ್ಮಾನಗಳ ಬದಿಗಿಟ್ಟು
ಕೈಂಕರ್ಯದಲಿ ಸದಾ ತಲ್ಲೀನ 

ನಿನ್ನ ಆ ಮಿಂಚು ನೋಟ ಮಲ್ಲಿಗೆಯ ನಗು
ದಿಟ್ಟ ಹೆಜ್ಜೆ ಬಾಗಿದ ಬೆನ್ನಿನಲೂ ಹಲವು ಬಗೆ
ಕಾಣದ ದೇವರನು ಹುಡುಕಿದರೆ ಸಿಗುವ ನೀ
 ಅಲ್ಲಮನು ಕಂಡ ಗುಹೇಶ್ವರನೇ ಸೈ...!!!  

ಸದಾ ಒಳಿತನ್ನೇ ಬೆಳಸುತ್ತಾ, ಬೆಳಕಾಗಿರುವ ಶ್ರೀಗಳಿಗೆ ೧೦೮ನೇ ಹುಟ್ಟುಹಬ್ಬ ಹಾರ್ದಿಕ ಶುಭಾಶಯಗಳು... ಆಯಸ್ಸು ಅಕ್ಷಯವಾಗಲಿ... ಬಡವರಿಗೆ ನಿನ್ನೊಲುಮೆ ಸದಾ ದೊರಕಲಿ.

Tuesday, January 13, 2015

ನೋ ನೋ ನೋವು



ಅಯ್ಯೋ ಶಿವ್ನೇ ಇತ್ತ ಹೊರಳಿದರೆ 
ಯಾಕೋ ಚುಳ್ ಎನ್ನುತಿದೆ ಈ ಮಂಡಿ
ನಾನೇನು ಕಮ್ಮಿ ಶಕ್ತಿ ಇದೆ
ಮೊಂಡು ಮಾಡಿ ಮಂಡಿ ಮಡಚಿ ಕೂತೆ  
ಏಳುವಾಗಲೇ ಗೊತ್ತಾಗಿದ್ದು
ಅಮ್ಮಮ್ಮಾ ಅಪ್ಪಾ! ಈ ನೋವು ಯಾಕೆ ಎಂದು...

ಅಯ್ಯೋ ಇಲ್ಲಿ ಕಸ ಇಷ್ಟೊಂದು ಇದೆ
ಗುಡಿಸೋಣ ಅಂತಾ ಬಗ್ಗಿದೆ ನೋಡಿ
ಯಾಕೋ ಈ ಸೊಂಟ ಕಳ್ಕ್ ಅನ್ನುತಿದೆ
ಯಪ್ಪಾ ವಯಸ್ಸಾಯಿತಾ ಎಂದು
ಹುಟ್ಟಿದ ವರ್ಷ ಲೆಕ್ಕ ಹಾಕಿದೆ
ಇಲ್ಲಾ ಇನ್ನೂ ನಲವತ್ತು ದಾಟಿಲ್ಲ...

ಈಗ್ಲೇ ಹಿಂಗಾದ್ರೇ ಹೆಂಗೇ ದೇವ್ರು
ನಾನು ಕಾಶಿ-ರಾಮೇಶ್ವರ ಸುತ್ತೋದು ಹೇಗೆ
ವೈಷ್ಣೋದೇವಿಯನ್ನ ನಡಿಗೆಯಲಿ ಸಾಗಿ
ಮಾನಸ ಸರೋವವರನ್ನ ಮುಟ್ಟಿ
ಆ ಶಿವನ ಸಾನಿಧ್ಯದಲಿ ಮಂಜಾಗಿ ಕರಗದೆ
ಇನ್ನೊಂದಷ್ಟು ಪುಣ್ಯಕ್ಷೇತ್ರ ನೋಡುವಾಸೆ...

ಪರದೇಶ ಸುತ್ತುವ ಆಸೆಯಿಲ್ಲ ಸ್ವಾಮಿ
ನನ್ನ್ ದೇಶ ಸ್ವರ್ಗದ ಬೀಡು
ಆ ಕಲ್ಲು ಬಂಡೆಗಳಲಿ ಪ್ರಕೃತಿಯ ಮಡಿಲಲ್ಲಿ
ಒಂದಿಷ್ಟು ಹೆಜ್ಜೆ ಹಾಕುತ್ತ
ಒಂದಷ್ಟು ಇತಿಹಾಸ, ಚರಿತ್ರೆಗಳ ಮೆಲುಕು ಹಾಕಿ
ಭಾವ ಭಕ್ತಿ, ಜೀವನ ಶೈಲಿ ಅರಿಯುವಾಸೆ

ಈ ಚಳಿಗೆ ಕೈ ಕಾಲು ಹಿಡಿದು ಬಿಟ್ಟಿವೆ
ಹೆಜ್ಜೆ ಮುಂದೋಗುತ್ತಿಲ್ಲ ಅದ್ಯಾವ ದೇಹ ನಂದು
ಆಗೆಲ್ಲ ನಮ್ಮ ಹಿರಿಯರು ಮುದ್ದೆ, ಬಸ್ಸಾರು ಉಂಡು
ಗಟ್ಟಿ ಮೈಕಟ್ಟಿನಲಿ ಹೊಲಗದ್ದೆಗಳಲಿ ಮಿಂದು
ರಾಶಿ ಹಾಕುತ್ತಿರಲಿಲ್ಲವೇ..??
ಈಗ್ಯಾವ ಕೆಲಸ ಕಟ್ಟಿ ಹಾಕುತ್ತೇನೇ ಸ್ವಾಮಿ
ಈ ಸೋಮಾರಿ ಮಯ್ಯಿ ತಿರುಗಿದರೂ ನೋವು
ಕೂತರೂ ನಿಂತರೂ ನೋವೇ ನೋವು

ಮುಂದೆ ಕೂತಲ್ಲೇ ಕೈಲಾಸ ಸ್ವಾಮಿ
ಯಾವ ಪುಣ್ಯಕ್ಷೇತ್ರಗಳೂ ನನ್ನತ್ತ ಸರಿಯೋಲ್ಲ
ನಾನೇ ಕೂತಲ್ಲಿ ಕೈಮುಗಿದು
ಯೂಟೂಬ್ ನಲ್ಲೇ ಕೈಲಾಸ ಕಂಡು
ಆ ಮಾದೇಸ್ವರನಿಗೆ ದೀರ್ಘದಂಡವೇನೋ ಗೊತ್ತಿಲ್ಲ
ಅದ್ದುಪದ್ದು ಇಲ್ಲದ ಈ ನೋವಿಗೆ
ರುದ್ರನ ಮಂತ್ರ ಜಪಿಸಲು ರುದ್ರಾಕ್ಷಿ ತರಿಸಿಕೊಳ್ಳುವೆ
ಆಗಲಾದರೂ ಮುಕ್ತಿ ಸಿಗುವುದೇನೋ ಕಾಣೇ
ಈ ಬೆಂಬಿಡದ ನೋ..ನೋ ನೋವಿಗೆ..!! :) :)