Monday, September 28, 2009

ಬೆಳ್ಳಂಬೆಳಗಿನ ಕನಸು


ಎಲ್ಲ ನಿದ್ರಿಸುವಾಗ ನಾ ಎಚ್ಚೆತ್ತಂತ್ತಾಯ್ತು
ಬೆಳಗಿನಜಾವದ ಮಸುಕು ಮೊಗ್ಗಿನಲಿ
ಮನದಲ್ಲೆಲ್ಲೋ ಹೂ ಅರಳಿದಂತಾಯ್ತು
ತುಟಿಯ ಮೇಲೆ ಮುಗುಳುನಗೆ ಬೀರುತಿತ್ತು ....

ಹಕ್ಕಿಯ ಚಿಲಿಪಿಲಿ ಗಾನ ಕೇಳಲಿಲ್ಲ
ದನಕರುಗಳು ಅಂಬಾ ಎನುವ ಧನಿಯು ಮೂಡಲಿಲ್ಲ
ಮೈಮರೆತಂತೆ ಭಾಸವಾಗಿತ್ತಿಂದ್ದು
ಮುಂಜಾವಿನ ಕನಸಿನಲಿ ನಿನ್ನದೇ ಚಿತ್ರ ಮೂಡಿತ್ತು ...

ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ಜೊತೆಗೂಡಿ ಸಾಗಲು
ಬೆಳದಿಂಗಳ ಚೆಂದಿರನು ಕಿರುನಗೆಯ ಬೀರಿದಂತಾಯ್ತು
ಸಾಲು ಸಾಲು ಮರಗಳು ತಂಗಾಳಿ ಬೀಸಲು
ನಿನ್ನ ಅಪ್ಪುಗೆಯಡೇ ಬರಸೆಳೆದಂತಾಯ್ತು .....

ಒಲವೆಂಬ ಹಣತೆ ನೀಡಿದೆಯೆನಗೆ
ಸವಿಭಾವ ಪ್ರೀತಿ ಬರಲು ನನ್ನೆಡೆಗೆ
ನಾ ಸೋತು ನಿನಗೆ ಸೆರೆಯಾದ ಭಾವ
ಮೂಡಿತಿಂದು ಬೆಳ್ಳಂಬೆಳಗಿನ ಜಾವ .....

ಮುಂಜಾವ ಸವಿಗನಸು ನಿಜವೆಂದು ತಿಳಿದು
ಕಣ್ಣ್ಬಿಟ್ಟು ನಗಲು ಒಲವುಕ್ಕಿ ಹರಿಯಲು
ಮಂಜು ಮುಸುಕಿನಲಿ ನೀ ಬಂದು ಸೇರಲು
ಕನಸುನನಸಾದಂತೆ ಆಗಸಕೆ ಎರಡೇ ಮೆಟ್ಟಿಲೇರಿ ನಿಂತೆ ...

ಮುಂಜಾವಿನ ಕನಸಿನೊಂದಿಗೆ ಎಲ್ಲರಿಗು ದಸರಾ ಹಬ್ಬದ ಶುಭಾಶಯಗಳು..
ಒಲವೆಂಬ ಹಣತೆ, ಸಹೃದಯತೆಯೆಂಬ ನಂದಾದೀಪ ನಿಮ್ಮನೆಯೂಳಗೆ ಹಾಗು ನಿಮ್ಮೊಳಗೆ ಸದಾ ಬೆಳಗಲಿ.
ವಂದನೆಗಳು
ಶುಭದಿನ

Sunday, September 20, 2009

ಆಗಿದ್ದೇಲ್ಲಾ ಒಳ್ಳೆಯದಕ್ಕ...?


ಆರ್ಟ್ ಆಫ್ ಲೀವಿಂಗ್ ಕ್ಲಾಸ್ ಮೂಲಕ ನಾವೆಲ್ಲ ಸುಮಾರು ೬೦ಜನ ಕನಕಪುರ ಆಶ್ರಮಕ್ಕೆ ಹೋಗಿದ್ದೆವು,ನನ್ನ ಜೊತೆ ನನ್ನ ಅಪ್ಪ ಅಮ್ಮ ಕೂಡ ಆಶ್ರಮ ವೀಕ್ಷಣೆಗೆಂದು ಬಂದಿದ್ದರು.
ಎಲ್ಲರು ನಮ್ಮ ಸ್ನೇಹಿತರು ಹಾಗು ಗುರುಗಳೊಂದಿಗೆ ಆಶ್ರಮವೆಲ್ಲ ಸುತ್ತಾಡಿ ಬರುವಷ್ಟರಲ್ಲಿ ಊಟದ ಸಮಯವಾಗಿತ್ತು ಗುರುಗಳು ಒಮ್ಮೆ ಊಟ ಮುಗಿಸಿ ಬೇರೆಡೆ ಸುತ್ತಾಡಿಬರುವುದೆಂದು ತೀರ್ಮಾನಿಸಿ ಎಲ್ಲರೂ ಊಟಕ್ಕೆ ತೆರಳಿದೆವು.

ಚಪ್ಪಲಿಗೂಡಿನಲ್ಲಿ ಚಪ್ಪಲಿ ಬಿಡುವಾಗ ಸುತ್ತಮುತ್ತ ನೋಡಿದೆ ಅಲ್ಲೇ ನನಗೇನೋ ಅನುಮಾನ ಇಷ್ಟು ಚೆನ್ನಾಗಿದೆ ನನ್ನ ಚೆಪ್ಪಲಿ ಏನಾದ್ರು ಆದರೆ ಎಂಬ ಅನುಮಾನದಲ್ಲೇ ಊಟಕ್ಕೆ ಒಳ ನಡೆದೆ ಅಲ್ಲಿನ ಭರ್ಜರಿ ಊಟ ನನ್ನ ಚಪ್ಪಲಿ ಮೇಲಿದ್ದ ಕಾಳಜಿಯನ್ನೆಲ್ಲ ಮರೆಸಿತ್ತು... ಊಟ ಮುಗಿಸಿ ಬಂದೊಡೆ ನಾ ಬಿಟ್ಟಿದ್ದ ಚಪ್ಪಲಿ ಅಲ್ಲಿ ಕಾಣುತ್ತಿಲ್ಲ, ಆಗ ನಾ ತಿಂದ ಊಟವೆಲ್ಲ ಕರಗಿದಹಾಗಾಯಿತು... ಸುತ್ತಮುತ್ತ ಸುಮಾರು ೧೦ ಭಾರಿ ಸುತ್ತಾಡಿದೆ ಸುಸ್ತಾದೆ ಎಲ್ಲೂ ಕಾಣಲಿಲ್ಲ ನನ್ನ ಜೊತೆ ಇದ್ದ ಗುರುಗಳು, ಸ್ನೇಹಿತರು ಎಲ್ಲರೂ ಒಂದೆ ಮಾತು ಒಳ್ಳೆಯದು ಅದು ಆಶ್ರಮದಲ್ಲಿ ಚಪ್ಪಲಿ ಕಳೆದರೆ ಎಂದು ಇನ್ನು ಕೆಲವರು ನಿನ್ನ ಕರ್ಮವೆಲ್ಲ ಕಳೆಯಿತು ಬಿಡು ಎಂದರು, ಇನ್ನು ಕೆಲವರು ಇಲ್ಲೇ ಯಾರೋ ತೆಗೆದುಕೊಂಡಿರುತ್ತಾರೆ ಈ ಮಕ್ಕಳು ಇದ್ದಾರೆ ನೋಡಿ ಯಾರೋ ತೆಗೆದುಕೊಂಡಿರಬೇಕು ಎಂದೆಲ್ಲ ಮಾತಾಡುತ್ತಲಿದ್ದರು ನನ್ನ ಮನಸಿನಲ್ಲೇ ಅಯ್ಯೋ ಹೋಗಿದ್ದು ಹೋಯ್ತು ಮತ್ತೆ ಬರೋಲ್ಲ ಎಂದು ಸುಮ್ಮನಾದೆ.

ಆಶ್ರಮ್ಮದಲ್ಲೇ ಇದ್ದ ಶಾಪಿಂಗ್ ಮಾಲ್ನಲ್ಲಿ ಒಂದುಜೊತೆ ಚಪ್ಪಲಿ ತೆಗೆದುಕೊಂಡು ಪ್ರಾರ್ಥನಾ ಮಂದಿರಕ್ಕೆ ತೆರಳುವ ಮುನ್ನ ಚಪ್ಪಲಿ ಬಿಡುವಾಗ ಎಲ್ಲರು ಹೇಳಿದರು ಒಂದು ಚಪ್ಪಲಿ ಇಲ್ಲಿರಲಿ ಇನ್ನೊಂದು ಬೇರೆಡೆ ಇಡು ಎಂದು ಸರಿ ಎಂದೆನಿಸಿ ನಾನು ಹಾಗೆ ಇಟ್ಟು ಪ್ರಾರ್ಥನೆಗೆ ತೆರಳಿದೆ ಮತ್ತೆ ತಿರುಗಿ ಬರುವಾಗ ಮತ್ತದೇ ಕಥೆ ಕಾದಿತ್ತು ಯಾರೋ ಆ ಹೊಸ ಚಪ್ಪಲಿಯನ್ನು ತೊಟ್ಟು ಹೋಗಿದ್ದರು... ಇದು ಎಂಥಹ ಕರ್ಮವಪ್ಪ ಎಂದೆನಿಸಿತು ಆದರು ನಗುನಗುತ್ತಲೇ ಸ್ವೀಕರಿಸಿದೆ. ಸರಿ ಮತ್ತೊಮ್ಮೆ ಎಲ್ಲರಿಂದ ಗುಣಗಾನ ನಡೆಯಿತು ನಾನೇ ಹೇಳಿಬಿಟ್ಟೆ ಕೊನೆಗೆ ನೀವೆಲ್ಲ ನನ್ನ ಮರಿಬಾರದು ನೆನಪಿನಲ್ಲಿಟ್ಟು ಕೊಳ್ಳಲೆಂದು ನನ್ನ ಚಪ್ಪಲಿ ಕಳುವಾಗಿದೆ ನೀವಾರು ಮರೆಯದಿರಿ ಎಂದೇಳಿದ ಕೂಡಲೇ ಒಮ್ಮೆಲೇ ಎಲ್ಲರು ನಕ್ಕುಬಿಟ್ಟರು.

ಇಷ್ಟೆಲ್ಲಾ ಮುಗಿದನಂತರ ಮನೆಗೆ ಬರಿಗಾಲಲ್ಲೇ ಹೊರಟೆ ಎಲ್ಲರು ಬಸ್ ನಲ್ಲಿ ವಿಜಯನಗರದವರೆಗೂ ಬಂದೆವು ಅಲ್ಲಿ ಎಲ್ಲರು ಇಳಿಯುತ್ತಲೇ ಗುರುಗಳು ನನ್ನ ಕರೆದು ಚಿಂತಿಸಬೇಡ ನೀನು ಸಿಂಡ್ರೆಲ ತರ ನಿನಗಾಗಿ ಯಾರೋ ಗಾಜಿನ ಚಪ್ಪಲಿ ಹೊತ್ತು ತಂದಂತೆ ನಿನಗೊ ತರುತ್ತಾರೆ ಎಂದರು ಜೊತೆಗೆ ಎಲ್ಲಾ ಒಳ್ಳೆಯದಾಗುತ್ತೆ ಎಂದು ಆಶಿರ್ವಾದವಿಟ್ಟರು ಮತ್ತೊಮ್ಮೆ ತಿರುಗಿ ಹೇಳಿದರು ನಾ ನಿನ್ನ ಮರೆಯುವುದಿಲ್ಲ ಎಂದರು...

ಬರಿಗಾಲಲ್ಲೇ ಸ್ವಲ್ಪ ದೂರ ನೆಡೆದು ಆಟೋ ಹಿಡಿದು ಮನೆಗೆ ಹತ್ತಿರ ಇಳಿದೆವು, ಅಲ್ಲೇ ಇದ್ದ ಬಾಟ ಅಂಗಡಿಗೆ ನನ್ನ ಅಪ್ಪಾಜಿ ಕರೆದುಕೊಂಡು ಹೋಗಿ ಚಪ್ಪಲಿ ಕೊಡಿಸಿದರು ಇಸ್ಟೆಲ್ಲಾ ಆಗಿದ್ದು ಒಳ್ಳೆಯದೇ ಸರಿ ಎನಿಸಿತು ಏಕೆ ಗೊತ್ತೆ ಮೊದಲ ಭಾರಿ ನನ್ನ ಅಪ್ಪ ನನಗೆ ಚಪ್ಪಲಿ ಕೊಡಿಸಲು ಅತಿ ಕಾಳಜಿವಹಿಸಿ ನೀನು ಇದೆ ತರಹದ ಚಪ್ಪಲಿತೆಗೆದುಕೋ ಎಂದು ಅವರೇ ಹಾಯ್ಕೆ ಮಾಡಿ ಚಪ್ಪಲಿ ಕೊಡಿಸಿದರು... ನನಗೇ ಆದ ಆನಂದ ಹೇಳತೀರದು ಎರಡು ಜೊತೆ ಚಪ್ಪಲಿ ಕಳೆದುಕೊಂಡೆಡೆಗೆ ಗಮನ ಇರಲೇ ಇಲ್ಲ. ಇನ್ನು ಮನೆಗೆ ತೆರೆಳಿದರೆ ನೆಡೆದ ಕಥೆ ಹೇಳುತ್ತಲಿದ್ದಂತೆ ನನ್ನ ಅಣ್ಣ ಅಕ್ಕ ಎಲ್ಲರೂ ನೀನು ಅದೃಷ್ಟವಂತೆ ಬಿಡು, ಅದು ಅಪ್ಪ ಬಂದು ನಿನಗೆ ಚಪ್ಪಲಿ ಕೊಡಿಸಿದ್ದಾರೆ ಎಂದು....!!! ನಿಜ ನಾನು ಅದೃಷ್ಟವಂತೆಯೇ ಸರಿ... ಅಪ್ಪ ಎಂದೂ ಅವರಾಗಿ ಬಂದು ಈ ರೀತಿ ಕೊಡಿಸಿರಲಿಲ್ಲ ನನ್ನ ಜೀವನದಲ್ಲೇ ಮೂದಲಬಾರಿ .... ಇದು ನನಗೆ ಸಂತಸದ ಕ್ಷಣ....

ಆಗುವುದೆಲ್ಲ ಒಳ್ಳೆಯದಕ್ಕೆ, ಅಗ್ಗಿದ್ದು,ಆಗುತ್ತಲಿರುವುದು ಎಲ್ಲವೂ ಒಳ್ಳೆಯದಕ್ಕೆ ಎಂದು ನನ್ನ ಮನಸಿಗೆ ಅರಿವಾಯಿತು...ನೀವೆಲ್ಲ ಏನೇಳುತ್ತೀರಿ ಆಗಿದ್ದೇಲ್ಲ ಒಳ್ಳೆಯದಕ್ಕ.....?
ವಂದನೆಗಳು

Sunday, September 13, 2009

ಸಮಾಗಮ

ನೀ ಬರುವುದು ಶುಕ್ರವಾರ ಸಂಜೆ ಆದರೆ ನನಗೆ ಗುರುವಾರ ರಾತ್ರಿಯೆಲ್ಲ ನಿದ್ರೆ ಬರಲೇ ಇಲ್ಲ ಬೆಳಗಾಗುವುದನ್ನೇ ಕಾಯುತ್ತಲಿದ್ದೆ... ಮಧ್ಯೆ ಊರಿಗೆ ಮೆಸೇಜ್ ಮಾಡುವುದು, ಕರೆ ಮಾಡುವುದು ಇದೆ ಕಥೆ ಸಾಗಿತ್ತು ರಾತ್ರಿಯೆಲ್ಲ, ಇನ್ನೇನು ಬೆಳಗಾಯಿತು ಇಂದು ನೀ ಬರುವೆ ಎಂದು ನಿನಗೆ ಇಷ್ಟವಾದ ಊಟ ತಯಾರು ಮಾಡುವ ತಾರತುರಿ ಜೊತೆಗೆ ಮದ್ಯೆ ಮದ್ಯೆ ದೇವರ ಕೋಣೆಗೆ ಹೋಗಿ ದೇವರೆ ನನ್ನ ಕಂದ ಈಗ ವಿಮಾನದಲ್ಲಿದ್ದಾನೆ ಅವನು ತಿನ್ನಲು ಎಲ್ಲದರ ವ್ಯವಸ್ಥೆ ಸರಿ ಆಗಲಿ, ಮತ್ತೊಮ್ಮೆ ಈಗ ದುಬೈನಲ್ಲಿ ಇದ್ದಾನೆ ಅವನು ಹೇಗಿದ್ದಾನೊ ನೀನೇ ಅವನ ಹಾರೈಕೆ ಮಾಡು ದೇವರೇ ಎಂದು ಬೇಡುತ್ತಲಿದ್ದೆ. ಸಂಜೆ ಇನ್ನು ಆಗಿರಲಿಲ್ಲ ಊರಿಂದ ಆಗಲೇ ಕರೆಗಳು ಬರುತ್ತಲಿದ್ದವು ಎಲ್ಲರಿಗು ಉತ್ತರ ಹೇಳುವುದೇ ಆಗಿತ್ತು...

ವಿಮಾನವು ೪.೪೫ ಕ್ಕಾಗಲೇ ಬಂದು ಇಳಿದಿತ್ತು ನಾವು ಪ್ರಯಾಣಿಕರು ಹೊರ ಬರುವ ಬಾಗಿಲಿನತ್ತಲೇ ಇಣುಕಿ ಇಣುಕಿ ನೋಡುತ್ತಲಿದ್ದೆವು... ನೋಡ ನೋಡುತ್ತಿದ್ದಂತೆ ೫.೨೦ ಸಮಯ ದಾಟಿತ್ತು ಜೊತೆಗೆ ನನ್ನ ಸಂಯಮವೂ ದಾಟಿತ್ತು... ಇತ್ತ ನನ್ನ ಪತಿರಾಯರು ಮದ್ಯೆ ಮದ್ಯೆ ತಮಾಷೆಯ ಚಟಾಕಿ ಹಾರಿಸುತ್ತಿದ್ದರು ನನ್ನ ಹುಸಿಕೋಪ ಅವರೆಡೆಗೆ ಹಾರಿತ್ತು... ಸದ್ಯ ಮೊದಲು ಮಗ ಬಂದರೆ ಸಾಕು ಅಂದರೆ ನಿಮಗೆ ತಮಾಷೆನ ಸುಮ್ಮನಿರೋಕೆ ಏನು ಕೊಡಬೇಕು ಎಂದು ಮೆಲ್ಲನೆ ಗದರಿ ನಾ ಮತ್ತದೆ ಬಾಗಿಲಿನೆಡೆ ಕಣ್ಣು ಹಾಯಿಸಿದೆ... ಇನ್ನು ಬರಲಿಲ್ಲವಲ್ಲ ಎಷ್ಟೊತ್ತುಬೇಕು ಹೊರಬರಲು ಬೇಗ ಬರಲಿ ಎಂದು ನೂರೆಂಟು ಸಾರಿ ಬಡಬಡಿಸಿದೆ. ಅತ್ತೊಮ್ಮೆ ಇತ್ತೊಮ್ಮೆ ತಿರುಗಾಡುತ್ತಲಿದ್ದೆ ಮನೆಯವರು ಬಂದ ಬಾ ಎಂದು ಕರೆದೊಡೆ ಅತ್ತಕಡೆ ಓಡಿದೆ...
ಆ ಪುಟ್ಟ ಕಣ್ಣುಗಳು ಅತ್ತಲಿತ್ತ ಸುತ್ತುಗಟ್ಟಿ ನೋಡುತ್ತಲಿತ್ತು ಎಲ್ಲಿರುವರು ನಮ್ಮ ಅಪ್ಪ ಅಮ್ಮ ಎಂದು ಕಣ್ಣು ಹುಡುಕುತ್ತಿತ್ತು ಮುಖದಲ್ಲಿ ಮೌನಮನೆಮಾಡಿತ್ತು... ಎರ್ ಲೈನ್ಸ್ ಕಚೇರಿಯವರು ಕರೆತರುವಾಗ ನಿಮ್ಮವರು ಬಂದಿದ್ದಾರೇ ಎಂದು ಕೇಳುವ ಹಾಗಿತ್ತು ಈ ಪುಟ್ಟ ಕಂದ ಸುತ್ತಮುತ್ತ ನೋಡಿ ಕಾಣುತ್ತಲಿಲ್ಲ ಎನ್ನುವಾಗೆ ಭಾಸವಾಯಿತು... ಒಮ್ಮೆ ನಮ್ಮಿಬ್ಬರ ಮುಖಕಂಡ ಕೂಡಲೇ ಮಂದಹಾಸ ಮೂಡಿತ್ತು.... ಮಗನನ್ನು ನಮಗೆ ಒಪ್ಪಿಸಿದರು ಹಾಗೆ ನಮ್ಮ ಸಹಿ ಕೂಡ ತೆಗೆದುಕೊಂಡರು ನಾವು ಅವರಿಗೆ ಧನ್ಯವಾದ ತಿಳಿಸಿ ಹೊರಟೆವು.....

ದಾರಿಯಲ್ಲಿ ಬರುತ್ತಿದ್ದಂತೆ ಕಂದ ನಿನಗೆ ತೊಂದರೆ ಆಯ್ತ... ಭಯ ಆಯ್ತ ಎಂದು ಕೇಳಿದರೆ ಏನು ಇಲ್ಲ ಏನು ತೊಂದರೆನೂ ಆಗಲಿಲ್ಲ, ನಾನು ...ಬೆಂಗಳೂರಿನಲ್ಲಿ ವಿಮಾನ ಹತ್ತಿದ ಕೂಡಲೇ ಗಜನಿ ಹಿಂದಿ ಚಲನಚಿತ್ರ ಬರುತ್ತಿತ್ತು ನೋಡಿ ಮುಗಿಸುವಸ್ಟರಲ್ಲಿ ದುಬೈ ಬಂತು, ಇನ್ನು ದುಬೈನಲ್ಲಿದ್ದಾಗ ವಿಡಿಯೋ ಗೇಮ್ಸ್ ಆಟವಾಡುತ್ತಲಿದ್ದೆ... ಮತ್ತೆ ದುಬೈನಲ್ಲಿ ವಿಮಾನ ಹತ್ತಿದಾಗ ಎಫ್ ಎಂ ಕೇಳುತ್ತಲಿದ್ದೇ ಬೇಗ ಕುವೈಟ್ ಬಂತು ನನಗೇನು ಬೇಜಾರಾಗಲೇ ಇಲ್ಲ.... ಕಂದ ನಾ ಬಹಳ ಭಯ ಪಟ್ಟಿದ್ದೇ ಎಂದಾಗ ನಗು ಅವನಿಗೆ ನಗುತ್ತ ಹೇಳಿದ ತಾತ ಕೂಡ ಹಾಗೆ ರಾತ್ರಿ ಎಲ್ಲ ಅಳುತ್ತ ಕೂತಿತ್ತು ಎಂದು ಜೋರು ನಗು ಪ್ರಾರಂಭಿಸಿದ ಹ ಹ ಹ ಅಹ.. ಇಷ್ಟು ಮಾತಾಡುತ್ತಲಿದ್ದ ಹಾಗೆ ಮನೆ ತಲುಪಿದೆವು..ಅಪ್ಪನಿಗೆ ಕಾಣದಂತೆ ಕಂದ ನಾನು ನಿನ್ನ ಜೊತೆ ಇರಲಿಲ್ಲವೆಂದು ಏನಾದರು ಬೇಸರ ಕೋಪ ಬಂದಿತ್ತೆ ಎಂದು ಕೇಳಿದಕ್ಕೆ ಇಲ್ಲಮ್ಮ ಎಂದಾಗ ನನ್ನ ಮನದಲ್ಲೇನೋ ಸಮಾದಾನದ ನಿಟ್ಟುಸಿರು ಬಿಟ್ಟಂತಾಯಿತು..

ಸ್ವಾಗತ ಬೋರ್ಡ್ ಕಂದಮ್ಮನಿಗೆ ..
ಮನೆಗೆ ಬರುತ್ತಲಿದ್ದಂತೆ ಊರೆಗೆ ಕರೆಮಾಡಿ ಎಲ್ಲರಿಗು ಹೇಳಿ ನಾ ಬಂದು ತಲುಪಿದೆ ಆರಾಮಾಗಿ ಏನು ತೊಂದರೆ ಇಲ್ಲವೆಂದು ಹೇಳಿ ಎಂದು ಎಲ್ಲರೊಟ್ಟಿಗೆ ಮಾತಾಡಿ ಖುಷಿ ಪಟ್ಟನು.... ನಾವು ಅವನ ಕಂಡು ಖುಷಿ ಪಟ್ಟೆವು ಜೊತೆಗೆ ಊರಿಂದ ಬಂದಿದ್ದ ಸಿಹಿಹೋಳಿಗೆ ಕಹಿ ಎಲ್ಲವನ್ನು ಮರೆಸಿತು.

ನನ್ನ ಕಂದಮ್ಮನ ಸುಖ ಪ್ರಯಾಣಕ್ಕೆ ಸಹಕರಿಸಿದ ನನ್ನ ಮನೆ ಮಂದಿ, ವಿಮಾನದಲ್ಲಿ ನನ್ನ ಕಂದ ಊಟ ಮಾಡಲು ಸಹಕರಿಸಿದ ಪಕ್ಕದಲ್ಲೇ ಕುಳಿತಿದ್ದ ಮಹಿಳೆ, ಗಗನ ಸಖಿಯರು, ವಿಮಾನ ಕಚೇರಿಯಾ ನಿರ್ವಾಹಕರು, ಕಾಣದೆ ಸಹರಿಸಿದ ಹಲವು ಕೈಗಳಿಗೂ ಹಾಗು ನಮ್ಮನ್ನು ಸಾಂತ್ವಾನಿಸಿದ ಸ್ನೇಹ ವೃಂದಕ್ಕೆ ನಮ್ಮ ನಮ್ರ ನಮನಗಳು..

ನಿಮ್ಮ,
ಮೃದು ಮನಸು
ಸವಿಗನಸು
ಇವರಿಬ್ಬರ ಜೊತೆಗೆ ನನ್ನ ಕಂದಮ್ಮ ...

Wednesday, September 9, 2009

ಶುಭಪ್ರಯಾಣ

ಪ್ರಿಯ ಬ್ಲಾಗ್ ಸ್ನೇಹಿತರೇ... ನಿಮ್ಮೆಲ್ಲರ ಶುಭಾಶಿರ್ವಾದದಿಂದ ನಮ್ಮ ಮಗ ಇಂದು ಸಂಜೆ ಯಾವುದೇ ತೊಂದರೆ ಇಲ್ಲದೆ ಕುವೈಟ್ ಬಂದು ತಲುಪಿದ!!!!!!

ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ಸದಾ ನಮ್ಮಮೇಲಿರಲಿ

ಬೇಸಿಗೆ ರಜೆ ಎಂದು ನಿನಗೋ ಮೂರು ತಿಂಗಳ ರಜೆ, ಈ ಬೇಸಿಗೆಯ ಬಿಸಿಯಲಿ ನೀ ಏನು ಮಾಡಲು ಸಾಧ್ಯ ಇರುವಷ್ಟು ರಜೆಯನ್ನು ಊರಿನಲ್ಲಿ ಕಳೆಯಲು ಇಬ್ಬರು ಹೊರಟೆವು, ಆದರೆ ನಾ ನಿನ್ನೊಟ್ಟಿಗೆ ೩ ತಿಂಗಳು ರಜೆ ಕಳೆಯಲಾಗದೆ ಕೆಲಸದ ನಿಮಿತ್ತ ಮರಳಿ ಮರುಭೂಮಿಗೆ ಬರಬೇಕಾಯಿತು... ನೀ ಬರಲು ಸ್ನೇಹಿತರೊಟ್ಟಿಗೆ ಬರುವಾಗೆ ತಯಾರಿ ನಡೆಸಿದ್ದೆವು... ನಿನ್ನ ಬರುವಿಕೆಗೆ ಯಾವ ಕೊರತೆಬರದಂತೆ ಎಲ್ಲ ವ್ಯವಸ್ಥೆಯೂ ನೆಡೆದಿತ್ತು...

ಇನ್ನೇನೂ ನನ್ನ ಕಂದಮ್ಮ ತಾಯ ಮಡಿಲ ಸೇರುವ ದಿನ ಬಹಳ ಹತ್ತಿರವಿತ್ತೆನ್ನುವಾಗಲೇ ಕಾರಣಾಂತರದಿಂದ ಸ್ನೇಹಿತರ ಜೊತೆಗೂಡಿ ಬರಲಾಗದೆ ಪ್ರಯಾಣ ರದ್ದಾಯಿತು ಮತ್ತೆ ನಿನ್ನ ಕರೆತರುವುದೆಂತು ಚಿನ್ನ ನನ್ನ ಮುದ್ದು ನೀ ಒಬ್ಬೊಂಟಿಯಾದೆಯಲ್ಲಾ ನಿನ್ನ ಕರೆತರಲು ನಾವೇ ಬರೋಣವೆಂದರೆ ಕೆಲಸಗಳ ಒತ್ತಡದೊಂದಿಗೆ ಹಲವಾರು ಇರುಸುಮುರುಸುಗಳು, ನನ್ನ ಮನದಲ್ಲಿ ನೀ ಬರಲಾಗದೆಂದು ತಿಳಿದೊಡೆ ನನಗೇನೋ ದುಗುಡ, ಆಘಾತ, ದುಃಖ ಎಲ್ಲವೂ ಒಮ್ಮೆಲೆ ಹೊಮ್ಮಿ ಬಂತು... ನಿನ್ನನ್ನು ಕರೆತರಲು ನಾವೇ ಹೋಗುವುದೊ ಬೇರೆ ವ್ಯವಸ್ಥೆ ಮಾಡುವುದೋ ಎಂಬ ದ್ವಂದ್ವ ಮನಸಿನಲಿದ್ದಾಗ ಸ್ನೇಹಿತರಿಂದ ತಿಳಿಯಿತು "ಜೊತೆಯಿಲ್ಲದ ಮಗುವಿನ ಪ್ರಯಾಣ(ಅನ್ಅಕಂಪನೀಡ್ ಚೈಲ್ಡ್ ಟ್ರಾವೆಲ್)" ಎಂದು ಪ್ರಯಾಣದ ಚೀಟಿ ಕಾಯ್ದಿರಿಸಿದ್ದರೆ (ಟಿಕೆಟ್ ಬುಕ್) ಯಾವುದೇ ತೊಂದರೆ ಇಲ್ಲದೆ ಕರೆದುಕೊಂಡು ಬರುತ್ತಾರೆಂದಾಗ ಮತ್ತದೇ ದುಃಖ ಚಿನ್ನ... ನಮ್ಮ ನಿಲುವನ್ನು ನಿನ್ನಪ್ಪ ಕರೆಮಾಡಿ ಹೇಳಿದಾಗ ಕಂದ ನೀನು ವಿಮಾನದಲ್ಲಿ ಒಬ್ಬನೇ ಪ್ರಯಾಣ ಮಾಡಬೇಕು, ಗಗನಸಖಿಯರು ನಿನಗೆ ಸಹಾಯ ಮಾಡುತ್ತಾರೆಂದಾಗ ನಿಜವಾಗಿಯೂ ನಾ ನಂಬದಂತಷ್ಟು ಮಟ್ಟಕ್ಕೆ ನಿನ್ನ ಉತ್ತರ ಕೇಳಿತು... "ಓಹೋ!! ಅದಕ್ಕೇನು ಬರುತ್ತೇನೆ, ನನಗೇನು ಭಯವಿಲ್ಲ" ಎಂದು ಧೈರ್ಯವಾಗಿ ನಗುವಿನಲ್ಲೇ ಒಪ್ಪಿದ್ದೇ..!! ಈ ಮಾತು ಕೇಳುತ್ತಿದ್ದಂತೆ ನನಗೆ ಒಮ್ಮೆಲೇ ದುಃಖ ತಡೆಯದೆ ಕಣ್ಣೀರ ಧಾರೆ ಹರಿದುಬಿಟ್ಟಿತ್ತು ಇದ ಕಂಡ ನಿನ್ನಪ್ಪ ನನ್ನೊಮ್ಮೆ ಮೆದುವಾಗಿ ರೇಗಿದರು ನಿನ್ನದು ಭಾವಾತಿರೇಕ. ನೀ ವಿದ್ಯಾವಂತೆ, ಬುದ್ದಿವಂತೆ, ಎಲ್ಲ ತಿಳಿದಿದ್ದು ನೀನೇ ಹೀಗೆ ಮಾಡಿದರೆ ಹೇಗೆ? ನಮ್ಮಲ್ಲಿ ವ್ಯವಸ್ಥೆ ಇದೆ ಅದನ್ನ ಉಪಯೋಗಿಸಿಕೊಳ್ಳಲು ಇದು ಒಂದು ಒಳ್ಳೆ ಸಮಯ ಎಂದೆಲ್ಲಾ ಹಲವು ಸಮಜಾಯಿಷಿ ಕೊಟ್ಟರು ಆದರೇನು ಮಾಡುವುದು ಕಂದ? ನಾ ಎಲ್ಲಿ ಏನೇ ಆಗಿರಲಿ, ಎಷ್ಟೆ ಬುದ್ದಿ ಇದ್ದರೇನು ಮಗುವಿನ ಅಮ್ಮನಲ್ಲವೇ? ನನ್ನ ಕರುಳಬಳ್ಳಿ ಇನ್ನು ಪುಟ್ಟದ್ದು ಅದಕ್ಕಿಗಾಗಲೇ ಜವಾಬ್ದಾರಿ ಕೊಟ್ಟುಬಿಟ್ಟಿರುವೇ. ಅಮ್ಮನಿಲ್ಲದಾಗ ಊಟಮಾಡುವುದು....ತಣ್ಣಗಿದ್ದ ಊಟವನ್ನು ಬಿಸಿಮಾಡುವುದು...ಶಾಲೆಯಿಂದ ಬಂದು ಮನೆ ಬಾಗಿಲು ತೆರೆದು ಅದನ್ನ ಭದ್ರಪಡಿಸಿ ಮನೆಯನ್ನ ಜೋಪಾನಿಸುವುದು ಇವಲ್ಲದೆ ಹತ್ತು ಹಲವು ನಿನ್ನ ಹೆಗಲೇರಿದೆ ನಿನ್ನ ವಯಸ್ಸಿನ ಮಕ್ಕಳನ್ನು ಇನ್ನು ಪುಟ್ಟ ಕಂದಮ್ಮರಂತೆ ನೋಡಿಕೊಳ್ಳುವ ತಾಯಂದಿರ ಕಂಡರೆ ನನಗೇನೋ ಒಂದು ರೀತಿ ನಾ ತಪ್ಪು ಮಾಡಿದೆ ನನ್ನಿಂದ ನಿನಗೆ ಸಲ್ಲಬೇಕಾದ ಪ್ರೀತಿ ಹಾರೈಕೆ ಸಲ್ಲಲಿಲ್ಲವೇನೋ ಎಂಬ ಭಾವನೆ ಮನದಾಳದಲ್ಲಿ ಆಗಾಗ ಮೂಡುತ್ತೆ, ಅಲ್ಲದೆ ಈ ಮನಸಿನಲ್ಲಿ ಕಾಡುತ್ತೆ ನಾ ಏನು ಮಾಡಲಿ ಕಂದ ನಮ್ಮ ವ್ಯವಸ್ಥೆಗಳು ಬದಲಾಗಿವೆ, ನಿನ್ನ ಭವಿಷ್ಯದ ನೆಲೆ ಹಚ್ಚ ಹಸಿರಾಗಿರಲೆಂಬುದು ನನ್ನ ಇಚ್ಚೆ...

ನೀ ಇನ್ನು ಮರುಭೂಮಿಯ ಮುಟ್ಟುವವರೆಗೂ ನನ್ನ ಹೃದಯಬಡಿತ ಅತಿರಭಸವಾಗಿರುತ್ತೆ. ಮನದ ಮೈದಾನದಲ್ಲಿ ಹಲವಾರು ಯಕ್ಷಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ನಿನ್ನ ನೋಡುವವರೆಗೂ ನಿದ್ರಾಹಾರ ಸೇರದು. ಕಣ್ಣಂಚಿನ ಕಂಬನಿ ಅಲ್ಲೇ ಮೂಡಿಬಿಟ್ಟಿದೆ ನೀ ಬರುವವರೆಗೂ ಅದು ಮಾಸುವ ಸೂಚನೆ ಕಾಣುತ್ತಿಲ್ಲ.

ನೀ ಬೆಂಗಳೂರಿಂದ ಕುವೈಟ್ಗೆ ನೇರ ಒಂದೇ ವಿಮಾನದಲ್ಲಿ ಬರುವಂತಿದ್ದರೆ ನನಗಷ್ಟು ಭಯ, ದುಃಖವೇನಿರುತ್ತಿರಲಿಲ್ಲವೇನೋ ಈಗ ದುಬೈ ವಿಮಾನ ನಿಲ್ದಾಣದಲ್ಲಿ ಸುಮಾರು ೩ ಗಂಟೆಗಳ ಕಾಲ ತಂಗಿದ್ದು ಮತ್ತೊಂದು ವಿಮಾನದಲ್ಲಿ ಬರಬೇಕು ನನಗೆ ಇಲ್ಲೇ ಹೆಚ್ಚಿನ ಆಂತಕ ನಿನಗೆಲ್ಲಿ ಬೇಸರವಾಗುತ್ತೊ, ಎಲ್ಲಿ ನೊಂದುಕೊಂಡು ಬೀಡುತ್ತೀಯೋ, ದುಃಖದಿ ನನ್ನ ಶಪಿಸಿಬಿಡುತ್ತೀಯೇನೋ...ನನ್ನಮ್ಮ ನನ್ನ ಜೊತೆಗಿದ್ದರೆ ಈ ರೀತಿ ತೊಂದರೆ ಇರುತ್ತಿತ್ತೆ ಎಂಬ ಭಾವನೆ ಬರುವಾಗೆ ಪರಿಸ್ಥಿತಿ ಎಲ್ಲಿ ಒದಗಿಬರುತ್ತೋ ಎಂಬ ಭೀತಿ ಕಾಡುತ್ತಿದೆ ನನ್ನ ಕಂದಮ್ಮ.... ನಿನಗೆ ಧೈರ್ಯ ತುಂಬುವ ಶಕ್ತಿ ಆ ಕಾಣದ ದೇವರೇ ನೀಡಬೇಕು. ಊರಲ್ಲೂ ಅಜ್ಜಿ, ತಾತ, ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಮಾವ, ಎಲ್ಲರಿಗೊ ತಡೆಯಲಾಗದ ಆತಂಕ ಅವರಿಗೊ ನಾನು ಕ್ಷಮೆಯಾಚಿಸುತ್ತೇನೆ.

ನಿನ್ನ ಬರುವಿಕೆಗಾಗಿ ಕಾದು ಕುಳಿತಿರುವೆ... ಮನದ ದುಗುಡ ಸಾವಕಾಶದಿ ತಹಬದಿಗೆ ತರಲು ಪ್ರಯತ್ನಿಸುತ್ತಲಿರುವೆ ಕಂದ.... ಈ ಎಲ್ಲಾ ಪರಿಸ್ಥಿತಿಗೆ ಕಾರಣ ಯಾರೆಂದು ತಿಳಿಯದು? ನೀನೋ, ನಾನೋ, ಅಪ್ಪನೋ, ಸಮಯವೋ, ಅಥವಾ ದಿನವೋ ತಿಳಿಯದು ಏನಾದರು ಸರಿ ನನ್ನ ಕಂದ ನೀ ಬರುವ ಹಾದಿಯಲಿ ಲೋಹದ ಹಕ್ಕಿಯು ನಿನ್ನ ಕರೆತರಲು ಆ ದೇವವೃಂದಗಳು ನಗೆಯ ಹೂವ ಚೆಲ್ಲಲೆಂದು ಆಶಿಸುತ್ತೇನೆ. ನಿನ್ನ ಪ್ರಯಾಣ ಯಾವ ಕೊರತೆಬಾರದೆ ನಿನಗೂ ಸಂತಸವಾಗುವ ಹಾಗೆ ಪ್ರಯಾಣ ಸುಖವಾಗಿ ಸಾಗಲೆಂದು ಹೃದಯಪೂರ್ವಕವಾಗಿ ಹರಸುವೆವು.
ನನ್ನದೇನೇ ತಪ್ಪಿದ್ದರೂ ಕ್ಷಮಿಸಿಬಿಡು ಕಂದ ಪೂರ್ಣಪ್ರಮಾಣದ ತಾಯಾಗಲಿಲ್ಲ.... ನಿನ್ನ ಹಾರೈಕೆ ಮಾಡುವುದರಲಿ ಎಲ್ಲೋ ಸೋತಿರುವೆನು...

ಇಷ್ಟೆಲ್ಲ ಅನುಭವದಿ ಒಂದಂತು ನಿಜ, ನಿನ್ನ ಹಾದಿಯಲಿ ಕಷ್ಟ ಸುಖ ಏನೇ ಬಂದರೂ ಎದುರಿಸಿ ನೀ ಬಾಳುವೆ ಎಂಬ ನಂಬಿಕೆ ನನಗಿದೆ ಅಂತೆಯೇ ಜೀವನಪೂರ್ತಿ ಯಾರನ್ನು ಆಶ್ರಯಿಸದೆ ನಿನ್ನ ಕಾಲಮೇಲೆ ನೀ ನಿಲ್ಲುವೆ... ನೀ ನಮ್ಮ ಹೆಮ್ಮೆಯ ಪುತ್ರನಾಗಿ ಬಾಳು. ನಿನ್ನ ಅಮ್ಮ ಅಪ್ಪನ ಸಾಕಬೇಕೆಂಬ ಬೇಡಿಕೆ ಏನಿಲ್ಲ.... ದೈನೆ ಎಂದು ಬಂದ ಜನರಿಗೆ ನೆಲೆಯಾಗು, ಹತ್ತಾರು ಜನಸಮೂಹಕ್ಕೆ ಮಾದರಿಯಾಗಿ ಬಾಳು ಆಶ್ರಯ ಬೇಡಿ ಬಂದವರಿಗೆ ಆಶ್ರಯನೀಡಿ ಅವರ ದುಃಖ ಮರೆಸುವ ಶಕ್ತಿ ನಿನ್ನಲ್ಲಿ ಮೂಡಲಿ.

ಒಲವಿನ ಕುಡಿಗೆ ಪ್ರಯಾಣದ ಬಿಸಿ ಮುಟ್ಟದಿರಲಿ ಎಂದು ಆಶಿಸುತ್ತ ಶುಭಪ್ರಯಾಣ....ನನ್ನ ಕಂದಮ್ಮಗೆ....


ಪ್ರೀತಿಯಿಂದ
ಮೃದುಮನಸಿನ ಅಮ್ಮ...
ಸವಿಗನಸಿನ ಅಪ್ಪ..



ತಾಯಿ ಮಗನ ಸಮಾಗಮ ಮುಂದಿನ ಭಾಗದಲ್ಲಿ....