ಸುಖ ಸಂಸಾರಕ್ಕೆ ಸಕ್ಕರೆಯೆಂಬ ಸಿಹಿ ಸಿಹಿಯಾದ ಕಾಯಿಲೆಯೊಂದು ಬಂದು ಕಡಲ ಅಲೆಯಂತೆ ಅಪ್ಪಳಿಸಿದ್ದೇ ನೋಡು ನನ್ನ ಇಂದಿನ ಜೀವನಕ್ಕೆ ಸಾಕ್ಷಿ............ ಚಿಕ್ಕ ವಯಸ್ಸಿಗೆ ನಿನಗೆ ಸಕ್ಕರೆ ಕಾಯಿಲೆ ಬಂದು ನನ್ನಿಂದ ನಿನ್ನ ದೂರ ಮಾಡಿಬಿಟ್ಟಿತು... ನಿನ್ನೊಟ್ಟಿಗೆ ಬರೋಣವೆಂದರೆ ನಮ್ಮ ಕರುಳ ಕುಡಿಗೆ ಅನಾಥ ಪ್ರಜ್ಞೆ ಮೂಡಿಸುವುದು ಬೇಡ ಎಂದು ನಿನ್ನೊಟ್ಟಿಗಿರದೆ ಇಲ್ಲೇ ಉಳಿದೆ. ಬಾರದ ಲೋಕಕ್ಕೆ ನೀನೇನೋ ಹೋಗಿ ಬಿಟ್ಟೆ ಅದು ನನಗೆ ಕಾಣುತ್ತಲೂ ಇಲ್ಲ ಅಲ್ಲಿ ಹೇಗಿರುತ್ತೆ ಎಂಬ ಪರಿಜ್ಞಾನವೂ ಇಲ್ಲ ನಿನ್ನ ನೋವು, ಸಂಕಟ, ಏನೇ ಇದ್ದರೂ ನೀನೇ ನುಂಗಿಕೊಳ್ಳ ಬೇಕು......... ನಾನು ಅಷ್ಟೆ ನನ್ನ ನೋವು ನನಗೆ ಇದೇ......
ನಿನ್ನ ಪ್ರೀತಿಯ ಹಾರೈಕೆ ಇಲ್ಲ, ನನಗಾಗಿ ಓಡೋಡಿ ಬರುವ ನನ್ನವನಿಲ್ಲ, ನೀನು ಕಾಣದ ಲೋಕಕ್ಕೆ ಹೋಗಿದ್ದೇ ತಡ ......... ಇಲ್ಲಿ ನೆಡೆದಿದ್ದೇ ಸೋಜಿಗ, ಈ ದೊಡ್ಡ ಮನೆಯಲ್ಲಿ ನಾನು ಮಗು ಇಬ್ಬರೇ ಇರಲಾಗದೆ ನಿನ್ನಮ್ಮ ಅಪ್ಪನನ್ನು ಕರೆದೆ ಬಾರದೇ ಹೋದರು, ನಾನು ಅವರೊಟ್ಟಿಗಿರಲು ಹೋದರೆ ನನ್ನ ಮಗನೇ ಇಲ್ಲದಾಗ ನೀನಿದ್ದು ಏನು ಮಾಡುವೆ. ನಿನ್ನದೆಂಬ ಮನೆಯೇ ಇದೆಯಲ್ಲ ಅಲ್ಲೇ ಇದ್ದು ಬಿಡು ಎಂದರು.......... ನಿನ್ನ ಪ್ರತಿ ಮಾತಿನ ಪ್ರತಿಧ್ವನಿ ಆ ಮನೆಯಲ್ಲಿ ಕೇಳಿ ಕೇಳಿ ಮನಸು ಕಂಬನಿಯಿಂದ ರಕ್ತ ಹೆಪ್ಪುಗಟ್ಟಿದಂತಾಗಿತ್ತು........ ನನ್ನ ಮಗುವಿಗೊಂದು ಆಸರೆ ಇರಲೆಂದು ಅಮ್ಮನ ಮನೆ ಸೇರಿಬಿಟ್ಟೆ.
ನಿನಗೆ ಗೊತ್ತ ಒಂದು ವಿಷಯ... ನನ್ನ ಅಮ್ಮ ಅಪ್ಪ ಮನೆಗೆಲಸಕ್ಕೆ ಒಬ್ಬ ಕೆಲಸದವಳನ್ನ ಹುಡುಕ್ತಾ ಇದ್ದ್ರು, ನಾನು ಸಿಕ್ಕೆನಲ್ಲ ಒಳ್ಳೆದಾಯಿತು.......... ಅಣ್ಣ ಅತ್ತಿಗೆಯರು ಕೆಲಸಕ್ಕೆ ಹೋಗ್ತಾರೆ ಇಬ್ಬರು ಅಣ್ಣಂದಿರ ಮಕ್ಕಳು ಪ್ರತಿಷ್ಟಿತ ಸ್ಕೂಲ್ ನಲ್ಲಿ ಓದುತ್ತಾ ಇದ್ದರೆ.......... ನಾನು ಅವರೆಲ್ಲರ ಹಾರೈಕೆ, ಸೇವೆಯಲ್ಲಿ ಇದ್ದೀನಿ.... ನನ್ನ ಮಗು ಯಾವುದೋ ಶಾಲೆನಲ್ಲಿ ಹೆಚ್ಚು ಖರ್ಚಾಗದ ಸ್ಕೂಲ್ನಲ್ಲಿ ಓದುತ್ತಿದ್ದಾನೆ.......... ನೀನು ತಪ್ಪು ಮಾಡಿಬಿಟ್ಟೆ ನಾನು ಕೆಲಸಕ್ಕೆ ಹೋದ್ರೆ ನನಗೆ ಎಲ್ಲಿ ಕಷ್ಟ ಆಗುತ್ತೋ ಎಂದು ಅಂದು ಕಳಿಸದಿದ್ದಕ್ಕೆ ನೋಡು ಎಂತಾ ಕಷ್ಟ ಪಡ್ತಾ ಇದ್ದೀನಿ...... ಮನೆ ಕಟ್ಟಿದ್ದೀನಿ ಬಾಡಿಗೆ ಬರುತ್ತೆ ಅಂತೀಯ. ಇಲ್ಲ ನಾನು ಇವರ ಮನೆಗೆ ಬಂದು ಸೇರಿದ್ದಕ್ಕೆ ನನ್ನ ಮತ್ತೆ ಮಗನ ಖರ್ಚಿಗೆ ಆ ಮನೆ ಬಾಡಿಗೆಯನ್ನೂ ಅಣ್ಣ ವಸೂಲಿ ಮಾಡ್ಕೋತಾ ಇದಾನೆ.... ನಾನು ತಪ್ಪು ಮಾಡಿದೆ ಅಲ್ವಾ..? ನನ್ನ ತವರು ನಾ ಕೆಟ್ಟು ಬಂದರೆ ನನ್ನ ಕೈ ಬಿಡೋಲ್ಲ ಎಂದು ಭಾವಿಸಿದ್ದೆ..... ನನ್ನ ಭಾವನೆ ಸುಳ್ಳಾಗಿ ಹೋಯ್ತು.....
ದಿನ ಬೆಳಗಾದರೆ ಮನೆಗೆಲಸ, ಮಕ್ಕಳ ಸ್ಕೂಲಿಗೆ ಬಿಡೋದು, ನಗು ಇಲ್ಲ, ಸುಖ ಇಲ್ಲ ಜೀವ ಇರಬೇಕು ಮಗುವಿಗಾಗಿ ಅನ್ನೋ ಹಾಗೆ ಇದ್ದೀನಿ........ ನನಗಾಗಿ ಮರುಗೋ ಜೀವ ಇಲ್ಲ, ಪ್ರೀತಿ ನೀಡೋ ಕೈಗಳಿಲ್ಲ..... ಒಂದು ಸಮಾರಂಭಕ್ಕೆ ಹೋಗೋ ಹಾಗಿಲ್ಲ, ಗಂಡ ಇಲ್ಲದೆ ಸುತ್ತೋದ ಬೇಡವೇ ಬೇಡ ಅನ್ನೋ ಅಮ್ಮ ಅಪ್ಪ, ಮಗನ ಶಾಲೆಗೆ ಬಿಟ್ಟು ಬರುವುದು ತಡವಾದರೆ ಯಾರಿಗಾಗಿ ಕಾಯುತ್ತಲಿದ್ದೆ.... ಯಾರ ಹತ್ತಿರ ಮಾತಾಡ್ತಾ ಇದ್ದೆ ವ್ಯಗ್ಯ ಪ್ರಶ್ನೆ ಸುರಿಸೋ ಎಲ್ಲಾ ಅಮ್ಮ..... ನನ್ನಮ್ಮ ಮೊದಲಿನಂತಿಲ್ಲ ಯಾಕೆ ಗೊತ್ತ ನೀನಿಲ್ಲವಲ್ಲ ಅದಕ್ಕೆ..... ಗಂಡ ಇಲ್ಲ ದಾರಿ ತಪ್ಪಿ ನೆಡೆದ್ರೆ ಎಂಬ ಭಯವೋ ಏನೋ ಅವರಿಗೆ......
ನನಗೇ ಯಾಕೋ ಅನಾಥ ಪ್ರಜ್ಞೆ ಮೂಡಿದೆ...... ಅಪ್ಪ ಅಮ್ಮನಿಗಾಗಿ ಪ್ರೀತಿ ತೋರೋ ಘಳಿಗೆ, ಅತ್ತಿಗೆಯಂದಿರು ಅವರವರ ಗಂಡಂದಿರ ಜೊತೆ ಸುಖವಾಗಿ ಸಂತಸದಿ ಇರುವಾಗ ನನಗೆ ನೀನಿರ್ಬೇಕಿತ್ತು, ನಿನ್ನ ಪ್ರೀತಿಲಿ ನಲಿಯಬೇಕಿತ್ತು ಅನ್ನ್ಸುತ್ತೆ......... ಅವರಿಗೆಲ್ಲಾ ಕಾಯಿಲೆ ಬಂದರೆ ನನ್ನವರು ಎಂದು ಸಲಹಿ ಹಾರೈಕೆ ಮಾಡಲು ಅವರ ಗಂಡಂದಿರಿದ್ದಾರೆ ಆದರೆ ನನ್ಗೆ ಕಾಯಿಲೆ, ಬೇಸರ, ನೋವು ಎಲ್ಲಾ ನಾನೇ ಸಹಿಸಿ ನುಂಗಬೇಕಾಗಿದೆ......... ಯಾರ ಎದುರೂ ದುಃಖವನ್ನೇಳುವ ಹಾಗೆ ಇಲ್ಲ. ಅಲ್ಲಿ ಒಂಟಿ ದೆವ್ವ ತರ ಭೂತಬಂಗಲೆಯಲ್ಲಿರುತ್ತಿದ್ದೆ ಈಗ ಜನಗಳ ಜೊತೆ ಇರೋಕ್ಕೆ ಕರೆತಂದರೆ ನಿನ್ಗೆ ದುಃಖ ದುಮ್ಮಾನ ಬರುತ್ತಾ ಅಂತಾರೆ ಏನು ಮಾಡಲಿ ಹೇಳು, ನನ್ನ ನೋವಿಗೆ ಒತ್ತಾಸರೆಯಾಗಿದ್ದ ಆ ನಿನ್ನ ಹೃದಯ, ನನ್ನ ದುಃಖವನ್ನು ಒರೆಸುವ ಆ ನಿನ್ನ ಅಸ್ತಗಳು, ಮಲಗುವಾಗ ದಿಂಬಾಗಿದ್ದ ಆ ನಿನ್ನ ಕೈಗಳು ಸದಾ ನೆನಪಾಗುತ್ತೆ...... ಈಗಲೂ ಬೇಕೆನಿಸುತ್ತೆ.......... ನೀ ಹೋದ ಮೇಲೆ ನನ್ನ ದುಃಖವನ್ನು ಸ್ನಾನದ ಕೋಣೆಯ ಗೋಡೆಗಳು ಕೇಳಿವೆ, ಅಡುಗೆ ಒಲೆ, ಪಾತ್ರೆಗಳು ಆಲಿಸಿವೆ...... "ಎಷ್ಟೋ ಕತ್ತಲೆಯ ರಾತ್ರಿಗಳು ನೀನಿಲ್ಲದೆ ನನ್ನ ಕಣ್ಣ ಕಂಬನಿಯನ್ನು ನುಂಗಿದ್ದು ಆ ನಿನ್ನ ತಲೆದಿಂಬು" ಆ ಮನೆಯಿಂದ ಬರುವಾಗ ನಾನು ನಿನ್ನ ತಲೆದಿಂಬು ನಿನ್ನ ನೆನಪಿಗಾಗಿ ತಂದಿದ್ದೆ ನೋಡು ಎಷ್ಟು ಸಲಹುತ್ತೆ ನನ್ನ.... ನಿನ್ನ ಆಲಿಂಗನ ಇಲ್ಲದೇ ರಾತ್ರಿಗಳನ್ನ ದೂಡ್ತಾ ಇದ್ದೀನಿ ನಿನ್ನ ಕೂಸಿಗಾಗಿ ನೀನಿಟ್ಟ ಪ್ರೀತಿಗಾಗಿ.......... ನಾನು ನನ್ನ ಪ್ರೀತಿಸುವುದಕ್ಕಿಂತ ನೀನು ನನ್ನ ಪ್ರೀತಿಸಿದ್ದ ನೆನಪೇ ನನ್ನ ಜೀವಂತಕ್ಕೆ ಸಾಕ್ಷಿ....
ನೀನಿಲ್ಲದಿರುವ ಮನೆ ಬಿಟ್ಟು ಬರಬಾರದಿತ್ತು ಅಲ್ಲವಾ...? ಕಷ್ಟವೋ ಸುಖವೋ ನಿನ್ನ ಪ್ರೀತಿಯ ನೆನಪಲ್ಲಿ, ಹಳೆಯ ದಿನಗಳನ್ನ ಮೆಲುಕು ಹಾಕುತ್ತ ಅಲ್ಲೇ ಇದಿದ್ದರೆ ಚೆನ್ನಾಗಿತ್ತು..... ನೆನಪಿನ ಪುಟಗಳನ್ನ ದಿನಾ ಒಂದೊಂದೇ ತೆಗೆದು ನೋಡ್ತಾ ಇದಿದ್ದರೆ ನನ್ನ ಸಾವು ಸಹ ಸಮೀಪಿಸಿ ನಿನ್ನ ಸೇರಿಬಿಡ್ತಾ ಇದ್ದೇ ಅಂತ ಅನ್ನುಸ್ತಾ ಇದೆ......
ನಾನು ಬರುವೆ ನೀನಿರುವಲ್ಲಿಗೆ
ಸ್ವಲ್ಪ ಕಾದುಬಿಡು ....
ನಿನ್ನ ಮಗುವನ್ನು ಸಲಹಿ
ಜವಾಬ್ದಾರಿವಂತಳಾಗಿ ಮಾಡುವವರೆಗೆ.........
ನೀನಿಲ್ಲದೆ ನನಗೆ ಅರಿವಾಗಿದ್ದು ......... "ಗಂಡನಿರುವವರೆಗೆ ಎಲ್ಲಾ... ಅವನಿಲ್ಲದಾಗ ಏನಿಲ್ಲ...ತುಸು ಪ್ರೀತಿಗೂ ಬರಸಿಡಿಲು ಬಂದು ತಟ್ಟಿಬಿಡುವುದು" ಇದೇ ನೀನಿಲ್ಲದಾಗ ಕಲಿಸಿದ್ದು ನನಗೆ....
ನಿನ್ನ ಕಾಣುವ ನಿರೀಕ್ಷೆಯಲ್ಲಿ
ನಿನ್ನವಳು (ಸ್ನೇಹಿತೆಯ ನೋವು ಈ ಲೇಖನದಲ್ಲಿ)....