Sunday, October 10, 2010

ನೀನಿಲ್ಲದೆ.......!!!???

ನಿನ್ನೊಟ್ಟಿಗಿನ ೬ ವರ್ಷದ ಜೀವನ ತುಂಬಾ ತುಂಬಾ ಸುಖ ಕೊಟ್ಟಿದೆ, ನಿನ್ನ ಮದುವೆಯಾಗಿ ಇಷ್ಟು ವರ್ಷದಲ್ಲಿ ಅತ್ತೆ ಮಾವ, ಅಪ್ಪ ಅಮ್ಮ, ಅತ್ತಿಗೆ ನಾದಿನಿ ಎಲ್ಲರ ಪ್ರೀತಿ ಗಳಿಸಿದೆ ನಮ್ಮ ಸಂಸಾರದಂತ ಪುಟ್ಟ ಸುಖ ಸಂಸಾರ ಎಲ್ಲೂ ಇಲ್ಲ ಅಂತ ಅನ್ಸುತ್ತೆ.... ನಮ್ಮ ಅಪ್ಪ ಅಮ್ಮ ಕೊಟ್ಟ ಸೈಟಿನಲ್ಲಿ ಮನೆಯನ್ನೂ ಕಟ್ಟಿಕೊಂಡು ನೆಮ್ಮದಿಯ ಜೀವನ ಜೊತೆಗೊಂದು ಹೆಣ್ಣು ಕೂಸು ಅಬ್ಬಾ ನನಗೆ ಇದಕ್ಕಿಂತ ಖುಷಿ, ಸುಖ ಬೇಕಾ ಹೇಳು....... ಎಲ್ಲವೂ ಚೆನ್ನಾಗಿತ್ತು, ಎಲ್ಲರೂ ಚೆನ್ನಾಗಿದ್ದರೂ ನೀನು ದುಡಿದು ನನ್ನ ಸಾಕುವುದರ ಜೊತೆಗೆ ನಿನ್ನ ಅಪ್ಪ ಅಮ್ಮ ಎಲ್ಲರನ್ನೂ ಸಂತಸದಲ್ಲಿಟ್ಟಿದ್ದೆ....... ಈ ಎಲ್ಲ ಇದ್ದವುಗಳು ಇಂದು ಇಲ್ಲ ಕಾರಣ ನೀನೇ........ ನೀನ್ನಿಂದನೇ ನನ್ನ ಜೀವನ ಸಂಪೂರ್ಣವಾಗಿತ್ತು..... ಆದರೆ ಈಗ ಸಂಪೂರ್ಣ ಎಲ್ಲಿ ಎಲ್ಲವೂ ಮುರಿದಿದೆ ಗೊತ್ತಾ....?

ಸುಖ ಸಂಸಾರಕ್ಕೆ ಸಕ್ಕರೆಯೆಂಬ ಸಿಹಿ ಸಿಹಿಯಾದ ಕಾಯಿಲೆಯೊಂದು ಬಂದು ಕಡಲ ಅಲೆಯಂತೆ ಅಪ್ಪಳಿಸಿದ್ದೇ ನೋಡು ನನ್ನ ಇಂದಿನ ಜೀವನಕ್ಕೆ ಸಾಕ್ಷಿ............ ಚಿಕ್ಕ ವಯಸ್ಸಿಗೆ ನಿನಗೆ ಸಕ್ಕರೆ ಕಾಯಿಲೆ ಬಂದು ನನ್ನಿಂದ ನಿನ್ನ ದೂರ ಮಾಡಿಬಿಟ್ಟಿತು... ನಿನ್ನೊಟ್ಟಿಗೆ ಬರೋಣವೆಂದರೆ ನಮ್ಮ ಕರುಳ ಕುಡಿಗೆ ಅನಾಥ ಪ್ರಜ್ಞೆ ಮೂಡಿಸುವುದು ಬೇಡ ಎಂದು ನಿನ್ನೊಟ್ಟಿಗಿರದೆ ಇಲ್ಲೇ ಉಳಿದೆ. ಬಾರದ ಲೋಕಕ್ಕೆ ನೀನೇನೋ ಹೋಗಿ ಬಿಟ್ಟೆ ಅದು ನನಗೆ ಕಾಣುತ್ತಲೂ ಇಲ್ಲ ಅಲ್ಲಿ ಹೇಗಿರುತ್ತೆ ಎಂಬ ಪರಿಜ್ಞಾನವೂ ಇಲ್ಲ ನಿನ್ನ ನೋವು, ಸಂಕಟ, ಏನೇ ಇದ್ದರೂ ನೀನೇ ನುಂಗಿಕೊಳ್ಳ ಬೇಕು......... ನಾನು ಅಷ್ಟೆ ನನ್ನ ನೋವು ನನಗೆ ಇದೇ......

ನಿನ್ನ ಪ್ರೀತಿಯ ಹಾರೈಕೆ ಇಲ್ಲ, ನನಗಾಗಿ ಓಡೋಡಿ ಬರುವ ನನ್ನವನಿಲ್ಲ, ನೀನು ಕಾಣದ ಲೋಕಕ್ಕೆ ಹೋಗಿದ್ದೇ ತಡ ......... ಇಲ್ಲಿ ನೆಡೆದಿದ್ದೇ ಸೋಜಿಗ, ಈ ದೊಡ್ಡ ಮನೆಯಲ್ಲಿ ನಾನು ಮಗು ಇಬ್ಬರೇ ಇರಲಾಗದೆ ನಿನ್ನಮ್ಮ ಅಪ್ಪನನ್ನು ಕರೆದೆ ಬಾರದೇ ಹೋದರು, ನಾನು ಅವರೊಟ್ಟಿಗಿರಲು ಹೋದರೆ ನನ್ನ ಮಗನೇ ಇಲ್ಲದಾಗ ನೀನಿದ್ದು ಏನು ಮಾಡುವೆ. ನಿನ್ನದೆಂಬ ಮನೆಯೇ ಇದೆಯಲ್ಲ ಅಲ್ಲೇ ಇದ್ದು ಬಿಡು ಎಂದರು.......... ನಿನ್ನ ಪ್ರತಿ ಮಾತಿನ ಪ್ರತಿಧ್ವನಿ ಆ ಮನೆಯಲ್ಲಿ ಕೇಳಿ ಕೇಳಿ ಮನಸು ಕಂಬನಿಯಿಂದ ರಕ್ತ ಹೆಪ್ಪುಗಟ್ಟಿದಂತಾಗಿತ್ತು........ ನನ್ನ ಮಗುವಿಗೊಂದು ಆಸರೆ ಇರಲೆಂದು ಅಮ್ಮನ ಮನೆ ಸೇರಿಬಿಟ್ಟೆ.

ನಿನಗೆ ಗೊತ್ತ ಒಂದು ವಿಷಯ... ನನ್ನ ಅಮ್ಮ ಅಪ್ಪ ಮನೆಗೆಲಸಕ್ಕೆ ಒಬ್ಬ ಕೆಲಸದವಳನ್ನ ಹುಡುಕ್ತಾ ಇದ್ದ್ರು, ನಾನು ಸಿಕ್ಕೆನಲ್ಲ ಒಳ್ಳೆದಾಯಿತು.......... ಅಣ್ಣ ಅತ್ತಿಗೆಯರು ಕೆಲಸಕ್ಕೆ ಹೋಗ್ತಾರೆ ಇಬ್ಬರು ಅಣ್ಣಂದಿರ ಮಕ್ಕಳು ಪ್ರತಿಷ್ಟಿತ ಸ್ಕೂಲ್ ನಲ್ಲಿ ಓದುತ್ತಾ ಇದ್ದರೆ.......... ನಾನು ಅವರೆಲ್ಲರ ಹಾರೈಕೆ, ಸೇವೆಯಲ್ಲಿ ಇದ್ದೀನಿ.... ನನ್ನ ಮಗು ಯಾವುದೋ ಶಾಲೆನಲ್ಲಿ ಹೆಚ್ಚು ಖರ್ಚಾಗದ ಸ್ಕೂಲ್ನಲ್ಲಿ ಓದುತ್ತಿದ್ದಾನೆ.......... ನೀನು ತಪ್ಪು ಮಾಡಿಬಿಟ್ಟೆ ನಾನು ಕೆಲಸಕ್ಕೆ ಹೋದ್ರೆ ನನಗೆ ಎಲ್ಲಿ ಕಷ್ಟ ಆಗುತ್ತೋ ಎಂದು ಅಂದು ಕಳಿಸದಿದ್ದಕ್ಕೆ ನೋಡು ಎಂತಾ ಕಷ್ಟ ಪಡ್ತಾ ಇದ್ದೀನಿ...... ಮನೆ ಕಟ್ಟಿದ್ದೀನಿ ಬಾಡಿಗೆ ಬರುತ್ತೆ ಅಂತೀಯ. ಇಲ್ಲ ನಾನು ಇವರ ಮನೆಗೆ ಬಂದು ಸೇರಿದ್ದಕ್ಕೆ ನನ್ನ ಮತ್ತೆ ಮಗನ ಖರ್ಚಿಗೆ ಆ ಮನೆ ಬಾಡಿಗೆಯನ್ನೂ ಅಣ್ಣ ವಸೂಲಿ ಮಾಡ್ಕೋತಾ ಇದಾನೆ.... ನಾನು ತಪ್ಪು ಮಾಡಿದೆ ಅಲ್ವಾ..? ನನ್ನ ತವರು ನಾ ಕೆಟ್ಟು ಬಂದರೆ ನನ್ನ ಕೈ ಬಿಡೋಲ್ಲ ಎಂದು ಭಾವಿಸಿದ್ದೆ..... ನನ್ನ ಭಾವನೆ ಸುಳ್ಳಾಗಿ ಹೋಯ್ತು.....

ದಿನ ಬೆಳಗಾದರೆ ಮನೆಗೆಲಸ, ಮಕ್ಕಳ ಸ್ಕೂಲಿಗೆ ಬಿಡೋದು, ನಗು ಇಲ್ಲ, ಸುಖ ಇಲ್ಲ ಜೀವ ಇರಬೇಕು ಮಗುವಿಗಾಗಿ ಅನ್ನೋ ಹಾಗೆ ಇದ್ದೀನಿ........ ನನಗಾಗಿ ಮರುಗೋ ಜೀವ ಇಲ್ಲ, ಪ್ರೀತಿ ನೀಡೋ ಕೈಗಳಿಲ್ಲ..... ಒಂದು ಸಮಾರಂಭಕ್ಕೆ ಹೋಗೋ ಹಾಗಿಲ್ಲ, ಗಂಡ ಇಲ್ಲದೆ ಸುತ್ತೋದ ಬೇಡವೇ ಬೇಡ ಅನ್ನೋ ಅಮ್ಮ ಅಪ್ಪ, ಮಗನ ಶಾಲೆಗೆ ಬಿಟ್ಟು ಬರುವುದು ತಡವಾದರೆ ಯಾರಿಗಾಗಿ ಕಾಯುತ್ತಲಿದ್ದೆ.... ಯಾರ ಹತ್ತಿರ ಮಾತಾಡ್ತಾ ಇದ್ದೆ ವ್ಯಗ್ಯ ಪ್ರಶ್ನೆ ಸುರಿಸೋ ಎಲ್ಲಾ ಅಮ್ಮ..... ನನ್ನಮ್ಮ ಮೊದಲಿನಂತಿಲ್ಲ ಯಾಕೆ ಗೊತ್ತ ನೀನಿಲ್ಲವಲ್ಲ ಅದಕ್ಕೆ..... ಗಂಡ ಇಲ್ಲ ದಾರಿ ತಪ್ಪಿ ನೆಡೆದ್ರೆ ಎಂಬ ಭಯವೋ ಏನೋ ಅವರಿಗೆ......

ನನಗೇ ಯಾಕೋ ಅನಾಥ ಪ್ರಜ್ಞೆ ಮೂಡಿದೆ...... ಅಪ್ಪ ಅಮ್ಮನಿಗಾಗಿ ಪ್ರೀತಿ ತೋರೋ ಘಳಿಗೆ, ಅತ್ತಿಗೆಯಂದಿರು ಅವರವರ ಗಂಡಂದಿರ ಜೊತೆ ಸುಖವಾಗಿ ಸಂತಸದಿ ಇರುವಾಗ ನನಗೆ ನೀನಿರ್ಬೇಕಿತ್ತು, ನಿನ್ನ ಪ್ರೀತಿಲಿ ನಲಿಯಬೇಕಿತ್ತು ಅನ್ನ್ಸುತ್ತೆ......... ಅವರಿಗೆಲ್ಲಾ ಕಾಯಿಲೆ ಬಂದರೆ ನನ್ನವರು ಎಂದು ಸಲಹಿ ಹಾರೈಕೆ ಮಾಡಲು ಅವರ ಗಂಡಂದಿರಿದ್ದಾರೆ ಆದರೆ ನನ್ಗೆ ಕಾಯಿಲೆ, ಬೇಸರ, ನೋವು ಎಲ್ಲಾ ನಾನೇ ಸಹಿಸಿ ನುಂಗಬೇಕಾಗಿದೆ......... ಯಾರ ಎದುರೂ ದುಃಖವನ್ನೇಳುವ ಹಾಗೆ ಇಲ್ಲ. ಅಲ್ಲಿ ಒಂಟಿ ದೆವ್ವ ತರ ಭೂತಬಂಗಲೆಯಲ್ಲಿರುತ್ತಿದ್ದೆ ಈಗ ಜನಗಳ ಜೊತೆ ಇರೋಕ್ಕೆ ಕರೆತಂದರೆ ನಿನ್ಗೆ ದುಃಖ ದುಮ್ಮಾನ ಬರುತ್ತಾ ಅಂತಾರೆ ಏನು ಮಾಡಲಿ ಹೇಳು, ನನ್ನ ನೋವಿಗೆ ಒತ್ತಾಸರೆಯಾಗಿದ್ದ ಆ ನಿನ್ನ ಹೃದಯ, ನನ್ನ ದುಃಖವನ್ನು ಒರೆಸುವ ಆ ನಿನ್ನ ಅಸ್ತಗಳು, ಮಲಗುವಾಗ ದಿಂಬಾಗಿದ್ದ ಆ ನಿನ್ನ ಕೈಗಳು ಸದಾ ನೆನಪಾಗುತ್ತೆ...... ಈಗಲೂ ಬೇಕೆನಿಸುತ್ತೆ.......... ನೀ ಹೋದ ಮೇಲೆ ನನ್ನ ದುಃಖವನ್ನು ಸ್ನಾನದ ಕೋಣೆಯ ಗೋಡೆಗಳು ಕೇಳಿವೆ, ಅಡುಗೆ ಒಲೆ, ಪಾತ್ರೆಗಳು ಆಲಿಸಿವೆ...... "ಎಷ್ಟೋ ಕತ್ತಲೆಯ ರಾತ್ರಿಗಳು ನೀನಿಲ್ಲದೆ ನನ್ನ ಕಣ್ಣ ಕಂಬನಿಯನ್ನು ನುಂಗಿದ್ದು ಆ ನಿನ್ನ ತಲೆದಿಂಬು" ಆ ಮನೆಯಿಂದ ಬರುವಾಗ ನಾನು ನಿನ್ನ ತಲೆದಿಂಬು ನಿನ್ನ ನೆನಪಿಗಾಗಿ ತಂದಿದ್ದೆ ನೋಡು ಎಷ್ಟು ಸಲಹುತ್ತೆ ನನ್ನ.... ನಿನ್ನ ಆಲಿಂಗನ ಇಲ್ಲದೇ ರಾತ್ರಿಗಳನ್ನ ದೂಡ್ತಾ ಇದ್ದೀನಿ ನಿನ್ನ ಕೂಸಿಗಾಗಿ ನೀನಿಟ್ಟ ಪ್ರೀತಿಗಾಗಿ.......... ನಾನು ನನ್ನ ಪ್ರೀತಿಸುವುದಕ್ಕಿಂತ ನೀನು ನನ್ನ ಪ್ರೀತಿಸಿದ್ದ ನೆನಪೇ ನನ್ನ ಜೀವಂತಕ್ಕೆ ಸಾಕ್ಷಿ....

ನೀನಿಲ್ಲದಿರುವ ಮನೆ ಬಿಟ್ಟು ಬರಬಾರದಿತ್ತು ಅಲ್ಲವಾ...? ಕಷ್ಟವೋ ಸುಖವೋ ನಿನ್ನ ಪ್ರೀತಿಯ ನೆನಪಲ್ಲಿ, ಹಳೆಯ ದಿನಗಳನ್ನ ಮೆಲುಕು ಹಾಕುತ್ತ ಅಲ್ಲೇ ಇದಿದ್ದರೆ ಚೆನ್ನಾಗಿತ್ತು..... ನೆನಪಿನ ಪುಟಗಳನ್ನ ದಿನಾ ಒಂದೊಂದೇ ತೆಗೆದು ನೋಡ್ತಾ ಇದಿದ್ದರೆ ನನ್ನ ಸಾವು ಸಹ ಸಮೀಪಿಸಿ ನಿನ್ನ ಸೇರಿಬಿಡ್ತಾ ಇದ್ದೇ ಅಂತ ಅನ್ನುಸ್ತಾ ಇದೆ......

ನಾನು ಬರುವೆ ನೀನಿರುವಲ್ಲಿಗೆ

ಸ್ವಲ್ಪ ಕಾದುಬಿಡು ....

ನಿನ್ನ ಮಗುವನ್ನು ಸಲಹಿ

ಜವಾಬ್ದಾರಿವಂತಳಾಗಿ ಮಾಡುವವರೆಗೆ.........

ನೀನಿಲ್ಲದೆ ನನಗೆ ಅರಿವಾಗಿದ್ದು ......... "ಗಂಡನಿರುವವರೆಗೆ ಎಲ್ಲಾ... ಅವನಿಲ್ಲದಾಗ ಏನಿಲ್ಲ...ತುಸು ಪ್ರೀತಿಗೂ ಬರಸಿಡಿಲು ಬಂದು ತಟ್ಟಿಬಿಡುವುದು" ಇದೇ ನೀನಿಲ್ಲದಾಗ ಕಲಿಸಿದ್ದು ನನಗೆ....

ನಿನ್ನ ಕಾಣುವ ನಿರೀಕ್ಷೆಯಲ್ಲಿ

ನಿನ್ನವಳು (ಸ್ನೇಹಿತೆಯ ನೋವು ಈ ಲೇಖನದಲ್ಲಿ)....

26 comments:

ಸತೀಶ್ ಗೌಡ said...

ಲೇಖನದ ತುಂಬಾ ಬರೀ ಕಷ್ಟಗಳೇ ತುಂಬಿವೆ . ಲೇಖನ ಓದಲು ಸ್ವಲ್ಪ ಕಷ್ಟ ವೆನಿಸಿದರೂ ಅರ್ಥ ಮಾತ್ರ ಸೊಗಸಾಗಿದೆ . ದೇವರು ಒಳ್ಳೆಅವರನ್ನ ಬೇಗನೆ ಕರೆದು ಕೊಂಡು ಬಿಡುತ್ತಾನೆ . ನೋವು ತುಂಬಿದ ಮನಸ್ಸಿಗೆ ಆ ದೇವರು ಒಂದಿಷ್ಟು ಶಾಂತ್ವನ ನೀಡಲಿ .....sATISH N GOWDA
http://nannavalaloka.blogspot.com/2010/10/blog-post_09.html

Doddamanimanju said...

ಮನ ಕರಗುವ ಲೇಖನ ಅಷ್ಟೇ ಸರಳ ನಿರೂಪಣೆ
ನಿಮ್ಮ ಸ್ನೇಹಿತೆಯ ನೋವು ಈ ಲೇಖನದಲ್ಲಿ ಇದ್ದ ಹಾಗೆ ವಿವರಿಸಿದ್ದಿರ
"ಒಂಟಿತನ ಅನ್ನೋದು ಕಡಿಯಲಾರದ ಕಡಲೆ" ಆ ಭಗವಂತ ನಿಮ್ಮ ಗೆಳತಿಗೆ ದುಃಖ ನುಂಗೋ ಶಕ್ತಿ ಕೊಡ್ಲಿ. ಅವರಿಗಾಗಿ ಒಂದೆರಡು ಮಾತುಗಳನ್ನ ಹೇಳೋಕೆ ಇಷ್ಟ ಪಡ್ತೀನಿ "ಹೆಣ್ಣು ಅಂದ್ರೆ ಕಷ್ಟ ಕಣ್ಣಿರು ತುಂಬಿರೋ ಸಮುದ್ರ" ಅಂತ ತಿಳ್ಕೊಲ್ದೆ ಆಳಾಗಿ ತವರಮನೆಲಿ ಇರೋದ್ರಿಂದ ಏನು ಪ್ರಯೋಜನ ಇಲ್ಲಾ ಸಾಧ್ಯವಾದಲ್ಲಿ ಒಂದು ಸ್ವಂತ ಉದ್ಯೋಗ ಮಾಡಿಕೊಂಡು ಬೇರೆ ಮನೆಯಲ್ಲಿ ಸುಖವಾಗಿ ಇರಬಹುದು ಅಲ್ವ..! ಯೋಚನೆ ಮಾಡೋಕೆ ಹೇಳಿ ಸಹಾಯಕ್ಕೆ ಸಲಹೆಗೆ ಸ್ನೇಹಿತರು ಯಾರಾದ್ರೂ ಇದ್ದೆ ಇರ್ತಾರೆ"

ನೊಂದ ಮನಸ್ಸಿಗೊಂದು ಸಾಂತ್ವಾನದೊಂದಿಗೆ
ಮಂಜು.ದೊಡ್ಡಮನಿ

ದಿವ್ಯಾ said...

:-) Nice Sugunakka, Ishta aaytu... :-)

nimmolagobba said...

ಸ್ನೇಹಿತೆಯ ನೋವು ಮನ ಕರಗುವಂತೆ ಬಿಂಬಿತವಾಗಿದೆ

sunaath said...

ಹೆಣ್ಣುಮಗಳು ಹೊರಗಡೆಗೂ ದುಡಿಯುವದನ್ನು ರೂಢಿಸಿಕೊಂಡು ಆರ್ಥಿಕವಾಗಿ ಸಬಲಳಾಗಿರುವ ಅವಶ್ಯಕತೆಯನ್ನು ಈ ನೈಜ ಕತೆ
ಸಮರ್ಪಕವಾಗಿ ನಿರೂಪಿಸಿದೆ.

ವಿ.ಆರ್.ಭಟ್ said...

sunaatharu heliddanne innome heluttiddene!thanks

ashokkodlady said...

ಸುಗುಣ ಅವ್ರೆ,

ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ, ಓದಿ ಮನ ಭಾರವಾಯಿತು, ಇದೆ ರೀತಿ ಬದುಕುತ್ತಿರುವ ನನ್ನ ಕಸಿನ್ ಸಿಸ್ಟರ್ ಒಬ್ರ ನೆನಪಾಗಿ ತುಂಬಾ ಬೇಸರವಾಯಿತು.

prabhamani nagaraja said...

ಸುಗುಣರವರೆ,
ನಿಮ್ಮ ಗೆಳತಿಯ ಸ್ಥಿತಿ ತು೦ಬಾ ಕರುಣಾ ಜನಕವಾಗಿದೆ. ಅವರು ಆರ್ಥಿಕವಾಗಿ ಸ್ವಾವಲ೦ಬಿಯಾಗಿ ಆತ್ಮವಿಶ್ವಾಸದಿ೦ದ ಜೀವನ ನಡೆಸುವ೦ತಾಗಲಿ ಎ೦ದು ಆಶಿಸುತ್ತೇನೆ.

Subrahmanya said...

ಒಡಲಾಳದ ಪಡಿನೆಳಲು ಮನಮುಟ್ಟುವಂತಿದೆ. ಎಲ್ಲರೂ ಒಂದು ಅಲ್ಲಿಗೆ ಹೋಗಲೇಬೇಕು..ಹಾಗಾಗಿ ಇರುವಾಗ ಬಂದುದನ್ನಿ ಜಯಿಸಬೇಕು. ’ಈಸಬೇಕು ಇದ್ದು ಜೈಸಬೇಕು’ - ದಾಸರು.

ಮನಮುಕ್ತಾ said...

ಓದಿ ಗ೦ಟಲು ಕಟ್ಟಿತು.ನೋವಿನಲ್ಲಿರುವ ಗೆಳತಿಯ ಮನಕ್ಕೆ ದೇವರು ಶಕ್ತಿ ಕೊಡಲಿ.

Kirti said...

nijavaagalu aval dukh kanniranne harisuttade.. ee kaaladallu hennige ee paristithi iruvudeMdu tiLidiralilla.. manad aalad maatu tumba dukhdaayakvaagide.

ಸಾಗರದಾಚೆಯ ಇಂಚರ said...

ಸ್ನೇಹಿತೆಯ ನೋವು ಮನ ಕಳಕುವನ್ತದ್ದೆ ಮೇಡಂ

ತುಂಬಾ ಹ್ರದಯಸ್ಪರ್ಶೀ ಬರಹ

ಜಲನಯನ said...

ಮನಸು ಮೃದು ಅನ್ನೋದು ಇದಕ್ಕೆ..ನೋಡಿ..ಒಬ್ಬರ ನೋವಿಗೆ ನಮ್ಮ ಮನ ಚೀರುವುದು..ಮಿಡಿಯುವುದು ಇವುಗಳಲ್ಲೆ ಸಂಬಂಧಗಳ ಅರ್ಥ ಸಿಗುವುದು...ಇದ್ದಾಗ ಕಾಣದ ಮನ ಇಲ್ಲದಾಗ ಹಂಬಲಿಸುತ್ತೆ ಅದು ಅಲ್ಪ ವಿರಾಮದಿಂದಾಗಲಿ ಅಥವಾ ನಿಮ್ಮ ಸ್ನೇಹಿತೆಯ ತರಹದ ಪೂರ್ಣ ವಿರಾಮದ ಕಾರಣವಾಗಲಿ.....
ಸ್ವಲ್ಪ...ಟಚಿಂಗ್ ಟಚಿಂಗ್ ಆಗೋಯ್ತು....ಹಹಹ ಆದ್ರೂ ಬೇಕು ಎಲ್ಲಾ ರಸಗಳು ಜೀವನದಲ್ಲಿ....ಅಭಿನಂದನೆ ಒಳ್ಲೆ ಲೇಖನಕ್ಕೆ

ಪ್ರಗತಿ ಹೆಗಡೆ said...

ಮನ ಕಲಕುವಂತಿದೆ ಮೇಡಂ ನಿಮ್ಮ ಲೇಖನ( ನಿಮ್ಮ ಗೆಳತಿಯ ಜೀವನ)... ಹೌದು, ಹೆಣ್ಣು ಸ್ವಾವಲಂಬಿ ಆಗಿದ್ದರೆ(ಆಗುವ ಧೈರ್ಯವಿದ್ದರೆ) ಮಾತ್ರ ಈ ಸಮಾಜದಲ್ಲಿ ಬದುಕಲು ಸಾಧ್ಯ...

- ಕತ್ತಲೆ ಮನೆ... said...

ತುಂಬಾ ಭಾವುಕವಾಗಿದೆ.. ಶೋಚನೀಯ.....//

..ನನ್ನ ಮನಸಿನಮನೆ'ಗೆ ಬನ್ನಿ..

ಚುಕ್ಕಿಚಿತ್ತಾರ said...

ಮನಮುಟ್ಟುವ೦ತಹಾ ಕಥೆ...ಓದಿ ಹನಿಗಣ್ಣಾದೆ...

ಸುಧೇಶ್ ಶೆಟ್ಟಿ said...

Mrudhu Manasu avarE...

sambandhagaLendhare ishEna antha anisibittithu.... :(

a nimma snehitheya kashtagaLella dhooravaagali...

shivu.k said...

ಸುಗುಣಕ್ಕ,

ಓದುತ್ತಾ ಮನಸು ಕಲಕಿದಂತಾಯಿತು. ವಿಧವೆ ಪಟ್ಟದ ಎಲ್ಲಾ ಮಜಲುಗಳನ್ನು ಆಳವಾಗಿ ಭಾವನಾತ್ಮಕವಾಗಿ ಬರೆದಿದ್ದೀರಿ..ಕೊನೆಯಲ್ಲಿ ಅನ್ನಿಸುವುದು ಈ ಬದುಕು ಕೆಲವರಿಗೆ ಎಷ್ಟು ಕಷ್ಟ ಅಲ್ವಾ..ಅಂತ.
ಅಪ್ತತೆಯಿಂದ ಕೂಡಿದ ಬರಹ.

ಮನದಾಳದಿಂದ............ said...

ಸುಗುಣಕ್ಕ,
ಕಣ್ಣು ತುಂಬಿ ಬಂತು. ಇಂತಹ ಕಷ್ಟಗಳು ಯಾವ ಮನುಷ್ಯನಿಗೂ ಬರಬಾರದು.
ಮನಮುಟ್ಟುವಂತೆ ನಿರೂಪಿಸಿದ್ದೀರಾ.....
"ಎಷ್ಟೋ ಕತ್ತಲೆಯ ರಾತ್ರಿಗಳು ನೀನಿಲ್ಲದೆ ನನ್ನ ಕಣ್ಣ ಕಂಬನಿಯನ್ನು ನುಂಗಿದ್ದು ಆ ನಿನ್ನ ತಲೆದಿಂಬು"
ಎಷ್ಟೊಂದು ಅರ್ಥಗರ್ಭಿತ ಸಾಲು.....

ಮನಸು said...

ಎಲ್ಲರಿಗೂ ಧನ್ಯವಾದಗಳು...... ನಿಮ್ಮೆಲ್ಲರ ಆಶಯದ ಮಾತುಗಳು ಮುದುಡಿದ ಮನಸಿಗೆ ಮುದ ನೀಡುವಂತಿದೆ.... ಸದಾ ಅವಳ ಮನಸ್ಸು ನೆಮ್ಮದಿಯಿಂದಿರಲೆಂದು ನಾನು ಸಹ ನಿಮ್ಮೊಟ್ಟಿಗೆ ಆಶಿಸುತ್ತೇನೆ.

ಶಿವಪ್ರಕಾಶ್ said...

olle baraha ennalE athava idarralli adagiruva novige bejar pattukoLLalE ?? :(

nijakku aa jeevana tumba sankata kodutte akkayya.. :(

veda said...

Sugunaravare Idhe sankatavanne nanu saha anubhavisuthiruve. Nimma lekhana odhi dukka jasthi aythu.

Venkatakrishna.K.K. said...

ಸಂವೇದನಾಶೀಲರೆಲ್ಲರ ಮನ ಮುಟ್ಟುವ/ತಟ್ಟುವ ಆಪ್ತ ಬರೆಹ.

ಸಿಮೆಂಟು ಮರಳಿನ ಮಧ್ಯೆ said...

ಮನಸು...

ಒಂದು ಹೆಣ್ಣಿನ ಮನದಾಳವನ್ನು ಇದಕ್ಕಿಂತ ಭಾವಯುಕ್ತವಾಗಿ ಹೇಳಲು ಸಾಧ್ಯವೇ ಇಲ್ಲ..
ಒದುತ್ತ ಹೋದಂತೆ ಬಹಳ ನೋವಾಯಿತು..
ಒಂದೆರಡುಕಡೆ ಕಣ್ಣು ತೇವವಾಯಿತು..

ಮನಸ್ಸೆಲ್ಲ ಭಾರವಾಯಿತು..

ತುಂಬಾ ಸುಂದರವಾಗಿದೆ ಎಂದರೆ ಆ ಹೆಣ್ಣುಮಗಳಿಗೆ ಬೇಸರವಾಗಬಾರದು..

ಸೀತಾರಾಮ. ಕೆ. / SITARAM.K said...

ಗೆಳತಿಯ ಮನದಾಳದ ಮಾತನ್ನು ನಮ್ಮೆಲ್ಲರ ಮನ ಕಲಕುವಂತೆ ಚಿತ್ರಿಸಿದ್ದಿರಾ...
ಹೆಣ್ಣಿಗೆ ಆರ್ಥಿಕ ಸ್ವಾವಲಂಬನೆ ಎಷ್ಟು ಅವಶ್ಯ ಎನ್ನುವದು ಮನವರಿಕೆ ಮಾಡಿಕೊಟ್ಟಿದ್ದಿರಾ...
ಚೆಂದದ ಕಥೆಗೆ ಧನ್ಯವಾದಗಳು.

Anonymous said...

Tumba chennagiddu... manamuttuvanthidhe..... kutumbada varasudara illavaadare yavudo ondu vishagaligeyalli dooravaagibittare...baduku muttuva mattavannu manojnavaagi vivarisiddeera...

Thanks for good article

Naanu, parishuddha preetigaagi meesaliruva 'SAVI SAVI PREETHI' maasika patrike nadesutthiddene. February 2011 sanchikeli ee nimma lekhana prakatisabahude ?? manikya.satish@gmail.com ge ondu mail maadibidi.