ಮತ್ತದೇ ಶುಕ್ರವಾರ... ರೇಷ್ಮೆಯ ಜರಿಸೀರೆಗಳ ಸದ್ದು....ಗದ್ದಲಗಳ ನಡುವೆ ಭಕ್ತಿಭಾವದ ನೆರಳು ಎಲ್ಲರ ಜೊತೆಯಲ್ಲೇ ಸುತ್ತಾಡುತ್ತಿತ್ತು. ಮನೆಮಂದಿಯೆಲ್ಲಾ ಮನೆಯಲ್ಲಿ ನೆಡೆವ ಸಡಗರಕ್ಕೆ ಸಾಕ್ಷಿಯಾದಂತೆ ಕಾರ್ಯಕಾರಿ ಸಮಿತಿಯವರು ಎಲ್ಲರ ಮನಗಳಿಗೆ ಕಳೆ ತುಂಬಿ ನಿಂತಿದ್ದರು. ಬೆಳಗಿನ ಪೂಜೆಗೆ ಅಣಿಯಾಗಿ ನಿಂತಿದ್ದ ಆ ವೇದಿಕೆ ನಿಜಕ್ಕೂ ದೇಗುಲದ ವಾತಾವರಣವನ್ನೇ ಸೃಷ್ಟಿಸಿತ್ತು. ಪಂಡರಪುರದ ವಿಠಲ ರುಕ್ಷ್ಮಿಣಿ ವೇದಿಕೆಯನ್ನು ಅಲಂಕರಿಸಿದ್ದು ಈ ಬಾರಿಯ ವಿಶೇಷ.... ಪಂಡರಪುರದ ಪಾಂಡುರಂಗನನ್ನಂತು ಕಣ್ಣಾರೆ ನೋಡಿಲ್ಲ ಕುವೈತಿನಲ್ಲಂತು ಅವರು ಬಂದು ನಮ್ಮ ಕಣ್ಮನ ತಣಿಸಿ ನಮ್ಮ ಜೀವನವನ್ನು ಪಾವನಮಾಡಿಬಿಟ್ಟರು.
ಪುಟ್ಟ ಚೇತನಗಳು ಈ ಕಾರ್ಯಕ್ರಮದ ನಿರೂಪಣೆಯನ್ನು ತಮ್ಮ ಹೆಗಲಿಗೇರಿಸಿಕೊಂಡು ಅತಿ ಉತ್ಸುಕತೆಯಿಂದ ನೆರೆದಿದ್ದ ಎಲ್ಲಾ ಭಕ್ತವೃಂದಕ್ಕೆ ಶುಭವನ್ನು ಕೋರಿ ಆಹ್ವಾನಿಸಿ... ಹಿಂದಿನ ದಾಸೋತ್ಸವದ ರುಚಿಯನ್ನು ಮೆಲುಕು ಹಾಕಿ, ಯಾವ ಅಡೆತಡೆಯಿಲ್ಲದೆ ವಿಘ್ನಗಳ ನಿವಾರಣೆಗಾಗಿ ಗಣಪತಿಯನ್ನು ಆರಾಧಿಸಿ ನೃತ್ಯದ ಮೂಲಕ ನಮ್ಮೆಲ್ಲರ ಆವಾಹನೆಯನ್ನು ಸಲ್ಲಿಸಲು ಅನುವು ಮಾಡಿಕೊಟ್ಟರು. ಈ ನೃತ್ಯವನ್ನು ನಮ್ಮ ಕೂಟದ ಮಕ್ಕಳು ಬಲು ಮನೋಘ್ನವಾಗಿ ಅಭಿನಯಿಸಿದ್ದಂತೂ ಕಣ್ಣ ಕಟ್ಟಿತು. ಆ ನಗು ಮೊಗದ ನೃತ್ಯ ಹಾವಭಾವ ಎಲ್ಲವೂ ಇನ್ನೂ ನನ್ನೆದುರು ಲಾಸ್ಯವಾಡುತ್ತಲಿದೆ.
ನಂತರ ನಮ್ಮ ಸಾಂಸ್ಕೃತಿಕ ಸಮಿತಿಯ ಸಂಚಾಲಕರು ಕಾರ್ಯಕ್ರಮದ ವಿವರ ನೀಡಿದರು. ನಂತರ ಶುಭಸಮಾರಂಭಕ್ಕೆ ೨೦೧೧ರ ಸಮಿತಿಯವರು ಜ್ಯೋತಿಯನ್ನು ಬೆಳಗಿಸಿ ನೆರೆದಿದ್ದ ಜನರಿಗೆ ತಮ್ಮ ಅನಿಸಿಕೆಗಳೊಂದಿಗೆ ಪ್ರೋತ್ಸಾಹದ ಆಶಯವನ್ನು ಬಯಸಿ ಅಧ್ಯಕ್ಷರು ತಮ್ಮೆರಡು ಮಾತುಗಳನ್ನು ಹಂಚಿಕೊಂಡರು. ಇದೇ ಶುಭ ಸಂಧರ್ಭದಲ್ಲಿ ಕುವೈತ್ ದೇಶದ ೫೦ ವರ್ಷದ ಸ್ವಾತಂತ್ರೋತ್ಸವ, ೨೦ರ ಬಿಡುಗಡೆಯ ವಿಜಯೋತ್ಸವ ಹಾಗೂ ಹಾಲಿ ರಾಜನ ಆಳ್ವಿಕೆಯ ೫ ವರ್ಷ ಕಳೆದ ಸಂಭ್ರಮಾಚರಣೆ ಹಿನ್ನೆಲೆಯನ್ನು ನಮ್ಮೊಂದಿಗೆ ಮರಳ ಮಲ್ಲಿಗೆ ಸಮಿತಿ ಹಂಚಿಕೊಂಡರು.
ಮತ್ತದೇ ವೇದಿಕೆಗೆ ಮೆರುಗು ನೀಡಲು ಬಂದರು ನಿರೂಪಣೆ ಮಾಡುತ್ತಲಿದ್ದ ಮಕ್ಕಳು ಮುಂದೆ ನೆಡೆಯಬೇಕಾದ ಒಂದರಿಂದ ಮೂರುವರ್ಷದ ಮಕ್ಕಳ ವೇಷಭೂಷಣ ಸ್ಪರ್ಧೆಯ ನಿಯಮಗಳನ್ನು ತಿಳಿಸಿ ಒಬ್ಬ ಸ್ಪರ್ಧಿಯನ್ನು ವೇದಿಕೆಗೆ ಕರೆದರು ನೋಡಿ.... ಆಗಲೇ ಪ್ರಾರಂಭವಾಗಿದ್ದು ವೇದಿಕೆಯ ಮೇಲಿನ ಗದ್ದಲ, ಗುದ್ದಾಟ, ಅಳು ನಗು, ನೃತ್ಯ ಎಲ್ಲದರ ವಿಶೇಷ
ಒಂದು ಮಗು ಅಮ್ಮನ ಜೊತೆ ಹೋಗುವ ಮೊದಲೇ ಅಳು ಪ್ರಾರಂಭವಾಯ್ತು ಅದನ್ನು ಸುಮ್ಮನಿರಿಸುವುದೇ ಕೆಲಸವಾಯ್ತು ಆದರೆ ಮನೆಯಲ್ಲಿ ಅಂದುಕೊಂಡು ಬಂದಿದ್ದ ನಟನೆಗೆಲ್ಲಾ ಕಣ್ಣೀರೆರಚಿತು.
ಮತ್ತೊಬ್ಬ ಕಳ್ಳ ಕೃಷ್ಣನಿಗೆ ಬೆಣ್ಣೆಗಿಂತ ಐಸ್ ಕ್ರೀಮೇ ಇಷ್ಟ ಎಂದು ಬೆಣ್ಣೆ ಬದಲು ಐಸ್ ಇಟ್ಟಿದ್ದು ವ್ಯರ್ಥವಾಯಿತು ಕಾರಣ ಆ ಪುಟ್ಟಕೃಷ್ಣನಿಗೆ ಭಯವೇನೋ ಹಾಗಿತ್ತು ಅನ್ನಿಸುತ್ತೇ ಆ ಬೆಣ್ಣೆ ಬಟ್ಟಲನ್ನೂ ಕಣ್ಣೇತ್ತೂ ನೋಡದೇ ಒಂದೇ ಸಮನೇ ಚೀರುತ್ತಲೇ ಇದ್ದು ಬಿಟ್ಟ........
ಇನ್ನೊಂದು ಮಗು ಪುಟ್ಟ ಬಾಲ ಕೃಷ್ಣ ವೇದಿಕೆಗೆ ಕರೆತಂದರೆ ಆ ಗೋಪಿಲೋಲ ಏನೋ ಅಲ್ಲೋಲ ಕಲ್ಲೋಲವಾಗಿ ಹೋಗಿದೆ... ನಾನು ಈ ವೇದಿಕೆಯಲ್ಲಿರೋಲ್ಲ ಎಂದು ಚೀರಿ ಅಮ್ಮನಿಗೆ ತಂಟೆ ಮಾಡುತ್ತಿದ್ದನ್ನು ಸಮಾಧಾನಿಸಲು ಅಪ್ಪನೇ ವೇದಿಕೆಯತ್ತ ಬಂದು ಇಲ್ಲಿ ಯಾವ ಅಲ್ಲೋಲ ಕಲ್ಲೋಲವಿಲ್ಲ ಎಲ್ಲರಿಗು ಐ ಅಮ್ ಅಲ್ ರೈಟ್ ಎಂದು ಕೈ ಬೀಸು ಎಂದು ಅಪ್ಪ ಸಮಾಧಾನಿಸಿದರು......
ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಮತ್ತೊಬ್ಬ ಕೃಷ್ಣ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ.... ಎಂದು ಅಮ್ಮನ ಕರಗಳಲ್ಲಿ ಕುಣಿತಾ ಇತ್ತು.... ವಾಹ್ ನಿಜಕ್ಕೂ ಯಶೋದೆ, ಕೃಷ್ಣ ಬಹಳನೇ ಖುಷಿ ನೀಡಿದ್ರು....
ಇವರನ್ನೆಲ್ಲ ನೋಡ್ತಾ ಇದ್ದ ಹನುಮಂತ ಚಂಗನೇ ಹಾರಿ ಅಲ್ಲೇ ಸೀತೆಗೆ ನಮಸ್ಕರಿಸಿ ಅಭಿನಯಿಸಿದ ಆ ಪುಟ್ಟ ಕಂದಮ್ಮ ಜನರಿಗೆಲ್ಲರಿಗೂ ಖುಷಿ ನೀಡಿ ಕೊನೆಗೆ ಏಕೋ ಭಯವಾಯ್ತೇನೋ ಹುಸಿಹುಸಿಯಲ್ಲೇ ಅಳು ಬರಲು ಪ್ರಾರಂಭವಾಯ್ತು... ಹೀಗೆ ಹಲವು ಮಕ್ಕಳು ವಿವಿಧತೆಯನ್ನು ಬೀರಿದರು.
ಮತ್ತೊಮ್ಮೆ ವೇದಿಕೆಯಲ್ಲಿ ನಿರೂಪಕರು ಮೂರರಿಂದ ಎಂಟು ವರ್ಷದ ಮಕ್ಕಳಿಗೆ ಸ್ಪರ್ಧೆಯನ್ನು ಚಾಲನೆ ಮಾಡಿದ್ದರು ಇಲ್ಲಿ ವಿಭಿನ್ನ ತರನಾದ ಮಾಧುರ್ಯ, ದಾಸ್ಯ,ಸಖ್ಯ ವಾತ್ಸಲ್ಯಗಳನ್ನು ನೆರೆದಿದ್ದವರೆಲ್ಲರಿಗೂ ಮನ ತಣಿಸುವಂತೆ ನೀಡಿದರು ಇಲ್ಲಿ ಶಿವ ಬೇಡರ ಕಣ್ಣಪ್ಪ, ಏಕಲವ್ಯ-ದ್ರೋಣಾಚಾರ್ಯ, ಕೃಷ್ಣ-ಸುದಾಮ, ಕೃಷ್ಣ-ಬಲರಾಮ, ರಾಧೆ-ಕೃಷ್ಣ, ಯಶೋಧಮಯಿ-ಕೃಷ್ಣ, ಕೃಷ್ಣ-ಅರ್ಜುನ ಹೀಗೆ ಹಲವು ಭಾವನೆಗಳನ್ನು ಪುಟ್ಟವೇದಿಕೆಯಲ್ಲಿ ನಿರೂಪಿಸಿದರು.
ಭಕ್ತಿಭಾವದ ಹೊಳೆಯನ್ನು ನೀಡಿ ಮಕ್ಕಳು ತಮ್ಮ ಪಾತ್ರದಲ್ಲಿ ಸೈ ಎನಿಸಿಕೊಂಡರು. ನಂತರ ಕೂಟದ ಪತ್ರಿಕೆಯಾದ ಮರಳಮಲ್ಲಿಗೆಯನ್ನು ಬಿಡುಗಡೆಗೊಳಿಸುತ್ತಲಿದ್ದಂತೆ.. ಅಂದಿನ ದಾಸರುಗಳು ಇಂದು ನಮ್ಮ ವೇದಿಕೆಯಲ್ಲಿ ಹರಿದಾಡಿದರು. ಮಧ್ವಾಚಾರ್ಯರು,ಶ್ರೀಪಾದರಾಜರು, ಪುರಂದರದಾಸರು, ಕನಕದಾಸರು, ಗೋಪಾಲದಾಸರು, ವಿಜಯದಾಸರು, ಮಹಿಪತಿದಾಸರು, ಪ್ರಸನ್ನ ವೆಂಕಟದಾಸರು, ಜಗನ್ನಾತ ದಾಸರು ಹೀಗೆ ಹಲವಾರು ದಾಸರು ನಮ್ಮೆದುರೇ ನಿಂತು ಪರಿಚಯ ಮಾಡಿಕೊಂಡಂತಿತ್ತು. ಇತ್ತ ದಾಸರ ಕಂಡ ಭಕ್ತಾದಿಗಳು ನಗರಸಂಕೀರ್ತನೆ ಮೂಲಕ ಪುಟ್ಟ ಪುಟ್ಟ ಮಕ್ಕಳು ನೃತ್ಯ ಮಾಡಿ ಎಲ್ಲರ ಚಪ್ಪಾಳ ಗಿಟ್ಟಿಸಿದರು.
ಮಕ್ಕಳ ಹಲವು ಕಾರ್ಯಕ್ರಮಗಳ ನಂತರ ಹೆಂಗಳೆಯರು ದಾಸರ ಭಜನೆಗಳನ್ನು ಎಲ್ಲರಿಗೂ ವಿವಿಧ ರೀತಿಯಲ್ಲಿ ಪ್ರಸ್ತುತಿ ಪಡಿಸಿದರು. ಭಜನೆಯನ್ನು ಅಂತಾಕ್ಷರಿ ಮೂಲಕ ಹಾಡಿ ದೇವರ ಕೃಪೆಗೆ ಪಾತ್ರರಾದರು.
ಕಳೆದ ವರ್ಷದ ಕಾರ್ಯಕಾರಿ ಸಮಿತಿಯವರಿಗೆ ಸಲ್ಲಬೇಕಾದ ಅಭಿನಂದನೆಯ ಶ್ಲಾಘನೆಯನ್ನು ಪ್ರಸಕ್ತ ಸಮಿತಿಯವರು ನೆರೆವೇರಿಸಿದರು.
ದೇವರು ಎಲ್ಲೆಲ್ಲೂ ಇರುವನು ಅವನ್ನು ನೋಡುವ ಪರಿ ಮಾತ್ರ ವಿಭಿನ್ನ... ಒಬ್ಬೊಬ್ಬರು ಒಂದೊಂದು ದೇವರನ್ನು ಪೂಜಿಸುತ್ತಾರೆ ಅಂತೆಯೇ ಆರಾಧಿಸುತ್ತಾರೆ.... ಎಂದು ಜನರಲ್ಲಿ ತಿಳುವಳಿಕೆ ಮೂಡಿಸುವ ಎಂದೋ ನೆಡೆದ ಕಥೆಯನ್ನು ಆಧರಿಸಿ ನಾಟಕವನ್ನೂ ಸಹ ಆಯೋಜಿಸಿದ್ದರು. ಈ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಸಂತಸ ನೀಡಿತು.
ಕೃಷ್ಣನ ಪೂಜೆಯೊಂದಿಗೆ ನೈವೇದ್ಯವ ಸಲ್ಲಿಸಿ ಘಂಟಾನಾದ ಮೊಳಗುತ್ತಲಿದ್ದಂತೆ ಮಂಗಳಾರತಿಯ ಹಾಡು ಎಲ್ಲರನ್ನು ತಲ್ಲೀನಗೊಳಿಸಿತು. ಊರುಗಳ ದೇವಸ್ಥಾನಗಳಲ್ಲಿ ಜರುಗುವಂತೆ ಘಂಟಾನಾದ ಅಲೆ ಕಾರ್ಮಲ್ ಶಾಲೆಯ ಸಭಾಂಗಣವನ್ನೆಲ್ಲ ಸುತ್ತುವರಿದಿತ್ತು. ಪೂಜೆಯ ವಿಜೃಂಭಣೆಯ ಸವಿ ಮನದಲ್ಲೆಲ್ಲರಲ್ಲೂ ನೆಲೆಸುವಂತಾಯಿತು.
ಪೂಜೆಯ ನಂತರ ಊಟದೆಡೆಗೆ ಸಾಗುತ್ತಿದ್ದಂತೆ ನನ್ನೂರಿನ ಮದುವೆ ಮನೆ ನೆನಪಾಯಿತು. ಎಲ್ಲರೂ ಊಟಕ್ಕೆ ಬಾಳೆ ಎಲೆಗಳನ್ನು ಮೇಜಿನ ಮೇಲಿಟ್ಟು ಉಪ್ಪು, ಉಪ್ಪಿನಕಾಯಿ, ಹೆಸರುಬೇಳೆ, ಹಪ್ಪಳಸೊಂಡಿಗೆ, ವಡೆ, ಪುಳಿಯೋಗರೆ, ಸಿಹಿಯೋಳಿಗೆ, ತುಪ್ಪ, ಸಜ್ಜಿಗೆ, ಅನ್ನ ಸಾರು, ತಿಳಿಸಾರು, ಮೊಸರನ್ನ, ಮಜ್ಜಿಗೆ ಹೀಗೆ ಪಟ್ಟಿಗಳನ್ನೇ ಪೇರಿಸಿದ್ದಂತೆ ಒಂದರಿಂದೊಂದು ತರಾವರಿ ಊಟದ ತಿಂಡಿ ತಿನಿಸುಗಳು ಎಲ್ಲರ ಎಲೆಯ ಮೇಲೆ ರಾರಾಜಿಸಿಬಿಟ್ಟಿವು..... ನನಗಂತೂ ಯಾವುದು ತಿನ್ನಲಿ ಬಿಡಲಿ ಎಲ್ಲವೂ ತಿನ್ನೋ ಆಸೆ ಆದರೆ ಹೊಟ್ಟೆಗೆ ಆಸೆ ಅನ್ನೋದು ಗೊತ್ತೇ ಇಲ್ಲ..... ಒಂದೆಡೆ ಆಸೆ ಮನಸಿಗೆ ಮಾತ್ರ ಮೀಸಲು ಎಂದು ಮೆದುಳು ತಿರುಚಿಹೇಳುತ್ತಲಿತ್ತು... ವಿಧಿಯಿಲ್ಲದೆ ಎಷ್ಟು ಸಾಧ್ಯವೋ ಅಷ್ಟನ್ನು ತಿಂದು ಇನ್ನೇನು ಎದ್ದೇಳಬೇಕು ಹಿರಿಯರು ಹೇಳಿದಂತೆ ಬೂರಿಭೋಜನ ಮಾಡಿ ಎಲೆಅಡಿಕೆಯನ್ನು ಸವಿ ಎಂದಿದ್ದಾರೆ ಅದರಂತೆ ಅಹಾ!! ಪುಣ್ಯಾತ್ಮರು ಯಾರೋ ಪಾನ್ ಬೀಡವನ್ನು ಕೈಗಿತ್ತರು... ವಾಹ್..!!! ಅದೂ ಸಹ ಒಳ್ಳೆಯ ರುಚಿಯನ್ನೇ ಕೊಟ್ಟಿತು ಕೊನೆಗೆ ನಾಲಿಗೆ ಮತ್ತು ತುಟಿಯಲಿ ಬಣ್ಣದ ಚಿತ್ರಣವನ್ನೂ ಮೂಡಿಸಿತು..........
ಈ ಕಾರ್ಯಕ್ರಮದ ಎಲ್ಲಾ ಸವಿಯನ್ನು ನಮಗೆ ಉಣಬಡಿಸಿದ ಕಾರ್ಯಕಾರಿ ಸಮಿತಿ ಹಾಗೂ ಕಾರ್ಯಕರ್ತರಿಗೆ ನಮ್ಮ ಧನ್ಯವಾದಗಳು ಮತ್ತಷ್ಟು ಕಾರ್ಯಕ್ರಮಗಳು ಹೀಗೆ ಮೂಡಿಬರಲೆಂದು ಆಶಿಸುತ್ತೇನೆ.
ಇಷ್ಟೆಲ್ಲಾ ಸಂತಸ ತಂದಿರುವ ನಮ್ಮ ಈ ಕಾರ್ಯಕ್ರಮಕ್ಕೆ ಹಲವಾರು ಕೈಗಳ ಪ್ರೋತ್ಸಾಹ ಖಂಡಿತಾವಾಗಿಯೂ ಇದೆ ಅವರೆಲ್ಲರಿಗೂ ಧನ್ಯವಾದಗಳ ಜೊತೆ ಮತ್ತೊಬ್ಬ ಅತಿ ಉತ್ಸುಕ, ಸ್ನೇಹಜೀವಿ ಗಣೇಶ್ ನಮ್ಮ ಅಧ್ಯಕ್ಷರ ಮನೆಯ ಹುಡುಗ ಈಗಾಗಲೇ ೨೦ ದಿನಗಳ ಮುಂಚಿನಿಂದಲೂ ಕನ್ನಡ ಕೂಟದ ಕೆಲಸಕ್ಕೆಂದು ತನ್ನ ಅಮೂಲ್ಯ ಸಮಯವನ್ನು ನಮ್ಮ ಸಮಾರಂಭ ಯಶಸ್ವಿಯಾಗಲು ಬಹಳಷ್ಟು ಕೆಲಸ ಮಾಡಿರುವುದಲ್ಲದೆ ಬೆಂಗಳೂರಿನಿಂದ ಕುವೈತಿಗೆ ಬಂದು ನಮ್ಮ ಕೆಲಸ ಕಾರ್ಯಗಳಲ್ಲಿ ತಾನೂ ಭಾಗಿಯಾಗಿ ಹಲವಾರು ಕೆಲಸಗಳನ್ನು ನಿರ್ವಹಿಸಿದ್ದಾನೆ. ಪ್ರೀತಿಯ ಗಣೇಶ್ ಗೆ ನಮ್ಮೆಲ್ಲರ ತುಂಬುಹೃದಯದ ಧನ್ಯವಾದಗಳು.
ಮತ್ತಷ್ಟು ಫೋಟೋಗಳಿಗಾಗಿ ಈ ಲಿಂಕ್ ಗೆ ಭೇಟಿ ನೀಡಿ: https://picasaweb.google.com/yogee.tumkur/Dasothsava2011?feat=email#
14 comments:
ಪಂಢರಪುರದ ವಿಠ್ಠಲ ರುಕ್ಮಿಣಿಯನ್ನು ಕುವೈತಿನಲ್ಲಿ ಸಾಕ್ಷಾತ್ಕಾರಗೊಳಿಸಿದ ನಮ್ಮ ಕೂಟದ ಜಕಣಾಚಾರಿ ಶ್ರೀ ಮಹೇಶರಿಗೆ ಅನಂತ ಅಭಿನಂದನೆಗಳು ಹಾಗು ಧನ್ಯವಾದಗಳು.
ವಾವ್..ಕೆಲವು ರಸಕ್ಷಣಗಳು ಮಿಸ್ ಆಗಿದ್ದನ್ನ ನೀವು ಇಲ್ಲಿ ತಂದು ನನ್ನ ಹೊಟ್ಟೆ ಉರಿ ಹೆಚ್ಚು ಮಾಡಿದ್ರಿ...ಆದ್ರೂ...ನಮ್ಮ ಜಕಣರ ಅಂಕಣದ ರಿಂಗಣ ವಾವ್ ವಾವ್...ಅಂದಹಾಗೆ ನಮ್ಮ ಜಕ್ಕಣರು ಯಾರು ಗೊತ್ತೇ? ನಮ್ಮ ಬ್ಲಾಗ್ ಚುಟುಕವೀರ - ಸವಿಗನಸು -ಮಹೇಶ್,,,,ಹೌದು ರೀ...
ಮರಳುಗಾಡಿನ ಮಲ್ಲಿಗೆಯು ಭಕ್ತಿಲತೆಯಾಗಿ, ಸಾಂಸ್ಕೃತಿಕ ಲತೆಯಾಗಿ ಕಂಗೊಳಿಸುತ್ತಿರುವದು ಖುಶಿಯ ವಿಷಯ. ಇದಕ್ಕೆ ಕಾರಣರಾದ ನಿಮಗೆಲ್ಲರಿಗೂ ಅಭಿನಂದನೆಗಳು.
ಅಭಿಮಾನಿ ದೇವರಿಗೆ ವಂದನೆಗಳು, ಎಲ್ಲರ ಸಹಕಾರ ಮತ್ತು ಆಶಯದಿಂದ ಜಕಣಾಚಾರಿ ಕೆಲಸಮಾಡಿದ್ದಾರೆ ಅದು ಯಶಸ್ವಿಯಾಗಿದ್ದು ಸಂತಸದ ವಿಷಯ.... ಜಕಣಾಚಾರಿ ಪರವಾಗಿ ನಿಮಗೆ ಧನ್ಯವಾದಗಳು. ಸದಾ ನಿಮ್ಮೆಲ್ಲರ ಪ್ರೀತಿ ನಮ್ಮ ಮೇಲಿರಲಿ....
ಅಜಾದ್ ಸರ್,
ರಸಕ್ಷಣ, ರಸದೂತ ಎಲ್ಲವನ್ನೂ ನೀವು ಮಿಸ್ ಮಾಡಿಕೊಂಡಿರಿ..... ಹೊಟ್ಟೆ ಉರಿಯಾಗಿದ್ದರೆ ದಯವಿಟ್ಟು ತಂಪಾದ ಪಾನೀಯ ಸೇವಿಸಿ ಹಹಹ.... ನಿಮ್ಮೆಲ್ಲರ ಪ್ರೀತಿಗೆ ಜಕಣರು ಪಾತ್ರರಾಗಿರುವುದು ನಿಜಕ್ಕೂ ಸಂತಸ ತಂದಿದೆ.
ಸುನಾಥ್ ಕಾಕ,
ನೀವು ಹೇಳಿದಂತೆ ಎಲ್ಲಾ ತರನಾದ ಲತೆಗಳು ಅರಳಿ ನಿಂತಿದ್ದವು. ನಮ್ಮ ಕೂಟದ ಮಕ್ಕಳು ಅತ್ಯುತ್ಸಾಹದಿಂದ ಜನಮನ ಸೆಳೆದಿದ್ದು ವಿಶೇಷ. ನಿಮ್ಮ ಪ್ರೀತಿಪೂರ್ವಕ ಹಾರೈಕೆ ಸದಾ ಮರುಭೂಮಿಯಲ್ಲಿರುವ ನಮ್ಮೆಲ್ಲರಿಗಿರಲಿ
ಧನ್ಯವಾದಗಳು
ಅಬ್ಬಾ! ಎಂಥ ಸಂಭ್ರಮ! ನೋಡಿ ಬಹಳ ಸಂತೋಷವಾಯಿತು! ಛಾಯಾಚಿತ್ರಗಳಂತೂ ದೃಶ್ಯಗಳನ್ನು ಜೀವಂತವಾಗಿ ಕಂಡಂತೆ ಭಾಸವಾಯಿತು. ಮುದ್ದು ಬಾಲಕೃಷ್ಣರ ಹುಡುಗಾಟ ಚೆನ್ನಾಗಿತ್ತು. ಈ ವಿಶಿಷ್ಠ ಕಾರ್ಯಕ್ರಮದ ಬಗ್ಗೆ ತಿಳಿಸಿ ಪುಣ್ಯ ಪಡೆದಿರಿ.. ಧನ್ಯವಾದಗಳು!
ಧನ್ಯವಾದಗಳು ಪ್ರದೀಪ್,
ನಾವು ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಮಗೆ ಸಂತಸ ತಂದಿದೆ ನಿಜಕ್ಕೂ ಸಮಾರಂಭದಲ್ಲಿ ಪಂಡರಪುರವೇ ಬಂದಂತೆ ಇತ್ತು. ಮಕ್ಕಳಾಟ ವೇದಿಕೆಯ ಮೇಲೆ ಹೇಳತೀರದು ಎಲ್ಲವೂ ವಿಶಿಷ್ಟವಾಗಿತ್ತು.
ಕಾರ್ಯಕ್ರಮದ ಬಗ್ಗೆ ತಿಳಿದು ಸಂತಸವಾಯಿತು. ತಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು ಮತ್ತು ಅಭಿನಂದನೆಗಳು. ಹೊರನಾಡಲ್ಲಿ ಕನ್ನಡದ ಮತ್ತು ಭಾರತೀಯ ಮೌಲ್ಯಗಳ ಮೆರವಣಿಗೆಯ ತೇರು ಎಳೆದದ್ದಕ್ಕೆ.
ಕಾರ್ಯಕ್ರಮದ ಬಗ್ಗೆ ಓದಿ ಆನಂದವಾಯಿತು, ಹೊರದೇಶದಲ್ಲೂ ನಮ್ಮ ದೇಶದ, ರಾಜ್ಯದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿರುವ ನಿಮ್ಮೆಲ್ಲರ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ...ಧನ್ಯವಾದಗಳು...
ಸೀತಾರಾಮರು ಹೇಳಿದಂತೆ ನನ್ನ ಮಾತು ಕೂಡ.../
ಸೀತಾರಾಮ್ ಸರ್,
ಧನ್ಯವಾದಗಳು, ನಮ್ಮಲ್ಲಿ ಏನು ಸಾಧ್ಯವೋ ಅದು ನೆಡೆಯುತ್ತಲಿದೆ ನಿಮ್ಮೆಲ್ಲ ಹಾರೈಕೆಯಿಂದ
ಅಶೋಕ್,
ಧನ್ಯವಾದಗಳು, ನಿಮ್ಮ ಸಂತಸದ ಮಾತಿಗೆ ನಿಮ್ಮ ಆಶಯ ಸದಾ ನಮ್ಮೊಂದಿಗಿರಲಿ ಹೀಗೆ ಬರುತ್ತಲಿರಿ.
ವಿಚಲಿತ,
ಧನ್ಯವಾದಗಳು ನೀವು ಸೀತಾರಾಮ್ ಸರ್ ಅವರ ಮಾತಿಗೆ ಧನಿಗೂಡಿಸಿದ್ದಕ್ಕೆ
ಸುಗುಣಕ್ಕ,
ಪಂಡರಪುರವನ್ನೇ ಕುವೈಟಿಗಿಳಿಸಿದ ವಿಚಾರವನ್ನು ಚಿತ್ರಸಹಿತ ವಿವರಿಸಿದ್ದೀರಿ.. ದೂರದ ಅಲ್ಲಿ ನೀವು ನಮ್ಮ ಸಂಸ್ಕೃತಿಯನ್ನು ಬೆಳೆಸುತ್ತಿರುವುದು ಅಭಿನಂದನಾರ್ಹ. ಇದರಿಂದ ನಾವು ಕಲಿಯುವಂತದ್ದು ತುಂಬಾ ಇದೆ...
ನಿಮ್ಮ ಸಂಘಕ್ಕೆ ನನ್ನ ಕಡೆಯಿಂದ ಅಭಿನಂದನೆಗಳು.
Post a Comment