Wednesday, November 23, 2011

ನವರಸಗಳ ಭಾವಸಂಗಮದಿ ಕರುನಾಡ ಹಬ್ಬ

ಸಂಜೆಯ ಸೂರ್ಯ ಮನೆಗೆ ತೆರಳೋ ಸಮಯ ಬಂದಾಯ್ತು... ಸಭಾಂಗಣ ಬಿಕೋ ಎನ್ನುತಿದೆ ಜನಸಂದಣಿ ಇಲ್ಲ... ಅಲ್ಲೊಂದಿಬ್ಬರು ಏನೋ ಕಂಪ್ಯೂರ್ ನಲ್ಲಿ ಕೆಲಸ ಮಾಡ್ತಾ ಕೂತಿದ್ದಾರೆ.... ಗೆಜ್ಜೆ ಕಟ್ಟಿದ ಕೂಸುಗಳಿಗೆ ಜೊತೆಯಾಗಿ ಬಾಲ ಕೃಷ್ಣರು ಸಭಾಗಂಣದಲ್ಲಿ ಸಪ್ಪಳ ಮಾಡ್ತಾ ಓಡಾಡ್ತನೇ ಇದ್ದಾರೆ...

ಯಾವಾಗ ಕಾರ್ಯಕ್ರಮ ಪ್ರಾರಂಭವಾಗುತ್ತೋ ಎಂದು ಕಾಯ್ತಾ ಇದ್ದೆವು... ಸುಮಾರು ೪ ಗಂಟೆಯ ಹೊತ್ತಿಗೆ ಬಂದರು ಮೆಲ್ಲನೆ ಹೆಜ್ಜೆ ಇಡುತ್ತ ಗಣ್ಯರು ವೇದಿಕೆಯತ್ತ ಬಂದು ಆಸೀನರಾದರು ಸ್ವಲ್ಪ ಸಮಯದ ನಂತರದಿ ಸ್ವಾಗತ ದೇವರ ಶ್ಲೋಕ ನೃತ್ಯದೊಂದಿಗೆ ಪ್ರಾರಂಭವಾಗಿ ಮಿಕ್ಕುಳಿದ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಖ್ಯಾತ ಕನ್ನಡ ಚಲನ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತು ವಿಠಲ್ ಮೂರ್ತಿಯವರು ದೀಪ ಬೆಳಗುವ ಮೂಲಕ ವೇದಿಕೆಯನ್ನು ಬೆಳಗಿಸಿದರು.
ತದನಂತರ ಗಣ್ಯರ ಶುಭಕೋರಿಕೆ, ಅಭಿನಂದನಾರ್ಪಣೆ, ಎಲ್ಲವೂ ಸರಾಗವಾಗಿ ಜರುಗಿತು ಇನ್ನೇನು ವೇದಿಕೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಳೆ ತುಂಬುತ್ತಲಿದ್ದಂತೆ ಸಭಾಂಗಣದ ಕುರ್ಚಿಗಳು ಭರ್ತಿಯಾಗುತ್ತ ಬರುತ್ತಲಿತ್ತು...
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದುವರಿಸಲು ಮೊದಲು ಗಣಪತಿಗೆ ನೃತ್ಯ ಮುಖೇನ ನಮ್ಮೆಲ್ಲರ ಆವಾಹನೆಯನ್ನು ಸಲ್ಲಿಸಿ ನಮ್ಮ ಸಿರಿನಾಡ ವೈಭವವನ್ನು ವರ್ಣಿಸಿ ನರ್ತಿಸುತ್ತ ನಮ್ಮ ಕೂಟದ ಚಿಣ್ಣರು ಕುಣಿದಾಡಿದರು. ಸಿರಿನಾಡಿನ ವೇದಿಕೆಯಲ್ಲಿ ನಮ್ಮ ನಾಡು ಕರುನಾಡು ನಮ್ಮೆಲ್ಲರ ಪುಣ್ಯಭೂಮಿ ಎಂಬಂತೆ ಪುಟ್ಟ ಹೆಜ್ಜೆಗಳು ಕುಣಿದು ಕುಪ್ಪಳಿಸುತ್ತಲಿದ್ದಂತೆ ಇಂದು ಬಾನಿಗೆಲ್ಲ ಹಬ್ಬ ನಮ್ಮ ನಾಡ ನೆನೆಯುವ ಹಬ್ಬ ಎಂಬಂತೆ ಆ ಪುಟ್ಟ ಕಂಗಳಲ್ಲಿ ಕರುನಾಡನ್ನೇ ಬಿಂಬಿಸುತ್ತ ನೃತ್ಯ ಮಾಡಿದರು... ನಿಸರ್ಗನಾಡಿನ ಹಬ್ಬ ವರ್ಣಿಸುತ್ತಲಿದ್ದಂತೆ ಮತ್ತಷ್ಟು ಚಿಣ್ಣರು... ಕನ್ನಡ ನಾಡು ನಮ್ಮದೇವಾಲಯ ಅಲ್ಲಿ ಹುಟ್ಟಿದರೆ ಏನೆಲ್ಲಾ ಆಗಬಹುದೋ ಆದೆಲ್ಲಾ ಸ್ಥಾನಗಳನ್ನು ಗಿಟ್ಟಿಸಲು ನಾವು ಸೈ ಎಂದು ಹೆಜ್ಜೆ ಹಾಕುತ್ತಲಿದ್ದ ಮಕ್ಕಳಿಗೆ ನೆರೆದವರ ಕರಗಳು ಚಪ್ಪಾಳೆಗಳ ಶೃತಿಯಿಂದ ಪ್ರೋತ್ಸಾಹಿಸುತ್ತಲಿದ್ದರು....


ಕನ್ನಡ ನಾಡು, ನುಡಿ, ಸಂಪತ್ತು, ಸೌಂದರ್ಯ ಎಲ್ಲವನ್ನೂ ಹೊಗಳಿ ನಾಡದೇವಿಗೆ ನಮ್ಮ ಕೂಟದ ಮಕ್ಕಳು ನಮನ ಸಲ್ಲಿಸುತ್ತಲಿದ್ದಂತೆ ಅಂದಿನ ವೇದಿಕೆಯಲ್ಲಿ ಮತ್ತೊಂದು ವೇದಿಕೆ ಅಲಂಕಾರಗೊಳ್ಳಲಾರಂಭಿಸಿತು. ಅಂದಿನ ಆ ವೇದಿಕೆ ಎಲ್ಲಾ ತರನಾದ ಭಾವನೆಗಳಿಂದ ತುಂಬಿ ತುಳುಕುತ್ತಲಿತ್ತು... ಅದುವೇ ನವರಸಗಳ ಭಾವಸಂಗಮ.
ಭರತಮುನಿ ಮತ್ತು ಅಭಿನವಗುಪ್ತರು ತಿಳಿಸಿರುವ ನವರಸಗಳು ಶ್ರಿಂಗಾರ, ಹಾಸ್ಯ, ರೌದ್ರ, ಕರುಣ, ಭೀಬತ್ಸ್ಯ, ವೀರ, ಅದ್ಭುತ, ಭಯಾನಕ, ಶಾಂತ ರಸ ಹೀಗೆ ಒಂಬತ್ತು ರಸಗಳು ಮನುಷ್ಯ ಜೀವನ, ಪ್ರಕೃತಿ ಮಡಿಲಲ್ಲಿ ಹೇಗೆಲ್ಲಾ ಬಿಂಬಿಸುತ್ತದೆ ಎಂಬುದನ್ನು ಕೂಟದ ಎಲ್ಲಾ ವಯಮಿತಿಯವರು ಕೂಡಿ ವೇದಿಕೆಗೆ ಮೆರುಗು ಕೊಟ್ಟಿದ್ದೇ ಒಂದು ವಿಭಿನ್ನತೆಯನ್ನ ಸೂಸುತ್ತಲಿತ್ತು.
ಶೃಂಗಾರ ಹೆಣ್ಣು ಗಂಡಿನ ಪ್ರೇಮಶೃಂಗಾರ, ಕಲೆಗಾರನ ಕಲಾಶೃಂಗಾರ ಹೀಗೆ ಶೃಂಗಾರ ಎಲ್ಲೆಲ್ಲೂ ಅಡಗಿದೆ ಎಂದು ನಮ್ಮ ಹೆಣ್ಣು ಮಕ್ಕಳು ರವಿವರ್ಮನ ಕುಂಚದ... ಹಾಡಿಗೆ ನೃತ್ಯ ನೀಡಿ ಹಸಿರು ಹಸಿರಾಗಿದ್ದರು... ನಧೀಮ್ ಧೀಮ್ ತನ.. ಮೊದಲ ಪ್ರೇಮ ಹೇಗೆಂದು ವರ್ಣಿಸಲು ನೀರೆಯರು ತಮ್ಮ ನಾಚಿಕೆಯ ಶೃಂಗಾರವನ್ನು ವೇದಿಕೆಯಲ್ಲಿ ನೃತ್ಯಸಿದ್ದು ವೇದಿಕೆಗೆ ಶೃಂಗಾರವನ್ನು ತಂದಿತ್ತು.

ಏನು ಜನರೆಲ್ಲಾ ಶೃಂಗಾರ ರಸದಲ್ಲಿದ್ದಾರೆ... ಅತ್ತ ಯಾಕೋ ವೇದಿಕೆ ಕತ್ತಲಿನಲ್ಲಿದೆ ಭೂತಪ್ರೇತಗಳು ಸದ್ದಿಲ್ಲದೆ ಬಂದು ಕೂಗಾಡುತ್ತಿವೆ... ಸ್ಮಶಾನದಂತಿದ್ದ ಆ ವೇದಿಗೆ ಭೂತಗಳ ಓಡಾಟ, ಕಿರುಚಾಟ ಎಲ್ಲಾ ಕೇಳಿ ಎಷ್ಟೋ ಮಕ್ಕಳು ಅಳಲು ಪ್ರಾರಂಭಿಸಿದರು... ಭೂತ ಹೆದರಿಸಿದ್ದು ಸಾಕಾಗಾದೆ ನಾಗ ನಾಗಿಣಿ ಬೇರೆ ಬಂದ್ರು.. ಕಳ್ಳರು ನಾಗಿಣಿಯಲ್ಲಿದ್ದ ಮಣಿ ಕಿತ್ತುಕೊಂಡು ನಾಗಿಣಿ ಸಾವಿಗೆ ಕಾರಣರಾದ್ರು ಎಲ್ಲಾ ನೋಡಿದ್ದ ಜನ ಸ್ವಲ್ಪ ಬೆವರಿದ್ರು ಅಂತ ಅನ್ಸುತ್ತೆ... ಇದುವೇ ಭಯಂಕರ ರಸದ ಮೂಲ ನೃತ್ಯ ಇಲ್ಲಿ ಮಕ್ಕಳು ಮನೋಜ್ಞವಾಗಿ ಅಭಿನಯಿಸಿ ನೃತ್ಯ ಮಾಡಿದ್ದರು.
ಹೆದರಿಕೆ ಹೋಗಿಸೋಕ್ಕೆ ಅಂತ ವೀರ ಧೀರೆಯರು, ಬುದ್ಧಿವಂತರು ಬಂದರು ನೋಡಿ ವೇದಿಕೆ ಮೇಲೆ ನಮ್ಮ ನಾಡುಕಂಡ ಅದ್ಭುತ ನಾರಿಯರ ದರುಶನ ದೊರಕಿತು ತಮ್ಮದೇ ಕ್ಷೇತ್ರದಲ್ಲಿ ಅದ್ಬುತ ಸಾಧನೆ ಮಾಡಿದ ಕಿತ್ತೂರಿ ರಾಣಿ ಚೆನ್ನಮ್ಮ, ಅಕ್ಕಮಹಾದೇವಿ, ಒನಕೆ ಓಬವ್ವ, ಗಂಗೂಬಾಯಿ ಗಾನಗಲ್ , ಸಾಲುಮರ ತಿಮ್ಮಕ್ಕ, ಬಿ.ಜಯಶ್ರೀ, ಸುಧಾಮೂರ್ತಿ ಇವರೆಲ್ಲಾ ವೇದಿಕೆಯ ಮೇಲೆ ಬಂದು ಅವರನ್ನ ಸ್ವಾಗತಿಸಲು ಚಿಣ್ಣರು ನೃತ್ಯರೂಪಕದಲ್ಲಿ ವೇದಿಕೆಗೆ ಮೆರುಗು ನೀಡಿದರು.. ಈ ಅದ್ಭುತ ರಸದ ನೃತ್ಯ ನೋಟದಲ್ಲಿ ಆ ಪಾತ್ರಧಾರಿಗಳು ನಿಜಕ್ಕೂ ನಮ್ಮ ಕಣ್ಣ ಮುಂದೆ ಬಂದಂತಾಯಿತು.
ಅದ್ಭುತತೆಯೊಂದಿಗೆ ವೀರತ್ವದ ಹೆಸರು ರಾರಾಜಿಸುವಂತೆ ಮಾಡಿದ ವೀರ ಸಂಗೊಳ್ಳಿ ರಾಯಣ್ಣ ಮತ್ತು ನಮ್ಮ ಸುರಕ್ಷತೆಗೆ ಸೇವೆ ಸಲ್ಲಿಸುತ್ತಲಿರುವ ನಾಡಿನ ಯೋಧರನ್ನು ನೆನಪಿಸುತ್ತ ಯೋಧರಿಗೊಂದು ನೃತ್ಯ ನಮನ ನೀಡುದ್ದು ಬಹಳ ವಿಶೇಷವಾಗಿತ್ತು ಇಲ್ಲೂ ಸಹ ಮಕ್ಕಳು ದೊಡ್ಡವರು ಬಹಳ ಹುಮ್ಮಸ್ಸಿನಿಂದ ವೀರತ್ವವನ್ನೇ ಪಡೆದಂತೆ ನೃತ್ಯ ಮಾಡಿದರು.
ಇನ್ನು ರೌದ್ರಕ್ಕೆ ವಿರುದ್ಧವಾದದ್ದು ಹಾಸ್ಯ ... ಭಾವ ಸಂಗಮದ ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಕಚೇರಿ ಬಂದಿತ್ತು ಗೊತ್ರಾ... ಸರ್ಕಾರಿ ಕೆಲಸಗಾರರು ಹೇಗೆ ಕೆಲಸಮಾಡ್ತಾರೆ ಅದರಲ್ಲೂ ಕಿವುಡರಿದ್ದರೆ ಹೇಗೆ ನೆಡೆಯುತ್ತೆ ಕೆಲಸ ಎಂದು ಹಾಸ್ಯರೂಪಕದಲ್ಲಿ ಮೂಡಿಬಂದಿತು ಇದಾದ ನಂತರ ಟಿವಿ೯೦ ಎಂಬ ಶೀರ್ಷಿಕೆಯಡಿ ಹೊಸತನದ ಹಾಸ್ಯ ಟಿವಿ ಪರದೆಯ ಮೇಲೆ ಮೂಡಿಬಂದಿತು... ಈ ಹಾಸ್ಯ ಟಿವಿಯಲ್ಲಿ ಕರ್ಮಕಾಂಡ, ಡಾಕ್ಟರ್ ಆರ್ಡರ್, ಸಮ್ ರುಚಿ, ಕ್ರೈಂ ಡೈರಿ ಹೀಗೆ ಹಲವು ಕಾರ್ಯಕ್ರಮ ಮೂಡಿಬಂದಿತು...ಇದನ್ನ ನೋಡಿ ನಗು ಬರೋರೆಲ್ಲ ನಕ್ಕಿದ್ದಾರೆ... ತೀರಾ ಗಡುಸು ಮನಸ್ಸಿನವರು ನಕ್ಕದೇ ಕಕ್ಕಾಬಿಕ್ಕಿಗಳಾಗಿ ನೋಡಿರಲೂ ಬಹುದು ... ಎಲ್ಲರೂ ನಕ್ಕಿದ್ದಾರೆ ಅಂತ ಹೇಳೋಕೆ ಆಗೋಲ್ಲ ಅಲ್ವ..?

ಟಿವಿ೯೦ ಯೂಟ್ಯೂಬ್ ಲಿಂಕ್ ಗೆ ಭೇಟಿ ನೀಡಿ:http://www.youtube.com/watch?v=LzRBYEo3rAU

ನಕ್ಕಿಲ್ಲದೇ ಇಲ್ಲದವರು ನನ್ನ ಮೇಲೆ ರೌದ್ರರಾಗದಿದ್ದರೆ ಸಾಕು ಏನು ಇವಳು ನಮ್ಮನ್ನ ಹೀಗೆ ಆಡಿಕೋತಾ ಇದಾಳೆ ಅಂತ .... ಈಗ ನೋಡಿ ಶಿವ ಯಾಕೋ ರೌದ್ರನಾಗಿಬಿಟ್ಟಿದ್ದ ಅವನ ಅವತಾರಗಳನ್ನೆಲ್ಲಾ ನೋಡಿ ಭಯವಾಗ್ತಾ ಇತ್ತು... ರುದ್ರನ ವೇಷಧಾರಿಗಳು ಎಲ್ಲರನ್ನು ಬೆಚ್ಚಿಬೀಳಿಸಿದ್ದರು... ಪಾರ್ವತಿ ನಾನೇನು ಕಮ್ಮಿ ಎಂಬಂತೆ ದುರ್ಗೆ ಅವತಾರ ಧರಿಸಿ ಮಹಿಸಾಸುರನ ಮರ್ಧನ ಮಾಡಿದ್ದು ವಿಶೇಷವಾಗಿತ್ತು... ಇಲ್ಲಿ ರೌದ್ರರಸ ಸೂಚಿಸಲು ಶಿವ ತನ್ನ ರೌದ್ರತೆಯ ರುದ್ರ ನರ್ತನ, ದುರ್ಗೆ ಮಹಿಸಾಸುರನ ಸಂಹಾರದ ದೃಷ್ಯ ವಿಭಿನ್ನವಾಗಿತ್ತು.
ರೌದ್ರತೆಯಿಂದ ಕರುಣೆಯತ್ತ ನೆಡೆದರೆ ಅಲ್ಲಿ ಕಂಡಿದ್ದೇ ಒಂದು ವಿಚಿತ್ರ ... ಅದೇ ಈ ಪ್ರಕೃತಿಯ ಮಾತೆಯ ವಿಕೋಪತೆ ಸಾಮಾನ್ಯರ ಮೇಲೆ ಏರಗಿದ ರೀತಿ... ಜಪಾನ್ ಜನತೆ ಸುನಾಮಿಯಲ್ಲಿ ಸಿಲುಕಿ ನರಳಿದ ಪ್ರಸಂಗವನ್ನು ವೇದಿಕೆಯಲ್ಲಿ ಬಿಂಬಿಸಿದ್ದು ಎಲ್ಲರ ಮನ ಕಲಕುವಂತಿತ್ತು... ಇಲ್ಲಿ ನೋವಿನಿಂದ ಬಳಲಿದವರು, ಮಕ್ಕಳನ್ನ ಕಳೆದುಕೊಂಡವರ ಹೃದಯವಿದ್ರಾವಕ ಸನ್ನಿವೇಶ ನೋಡಿದರೆ ಎಂತವರಿಗೂ ಕರುಣೆ ಹುಟ್ಟುತ್ತದೆ ಇಂತಹ ದೃಶ್ಯವನ್ನು ಎಲ್ಲಾ ವರ್ಗದವರು ಅಭಿನಯಿಸಿದ್ದು ವಿಶೇಷ...

ಭೀಭತ್ಸ್ಯ ಇದರ ಅರ್ಥವೇ ವಿಭಿನ್ನ.... ಜಿಗುಪ್ಸೆ ಮತ್ತು ಅತಿ ರೋಸಿಹೋಗಿರುವಂತ ಪರಿಸ್ಥಿತಿಗಳು ಮಹಾಭಾರತದಲ್ಲಿ ಪಾಂಡವರು ಕೌರವರ ಯುದ್ಧದಲ್ಲಿ ಪಾಂಡವರು ಕೌರವರ ಕಡೆಯವರನ್ನೆಲ್ಲಾ ಸಂಹರಿಸಿ... ದುರ್ಯೋಧನನಿಗಾಗಿ ಹುಡುಕುವ ವೇಳೆ ಜಲಮಂತ್ರ ಸಿದ್ಧಿಯಿಂದ ಅವಿತು ಕುಳಿತಿದ್ದ ದುರ್ಯೋಧನನಿಗಾಗಿ ಭೀಮ ತೋರುವ ಭೀಬತ್ಸ್ಯ ರೀತಿಯ ದೃಶ್ಯವೇ ಅಂದಿನ ವೇದಿಕೆಯ ಯಕ್ಷಗಾನ ನೃತ್ಯ ಈ ಯಕ್ಷಗಾನ ನೃತ್ಯದ ವಿಶೇಷವೇ ಹೆಣ್ಣು... ಆ ಭೀಮ ಪಾತ್ರಧಾರಿಯಾಗಿ ನರ್ತಿಸಿದ್ದು ಅದ್ಭುತವಾಗಿತ್ತು...

ಭೀಭತ್ಸ್ಯದಲ್ಲಿರುವ ಭೀಮನನ್ನು ಸಮಾಧಾನದಿ ಶಾಂತ ಚಿತ್ತರನ್ನಾಗಿಸಲು ಬುದ್ಧ ವೇದಿಕೆಯ ಮೇಲೆ ಬಂದಿದ್ದಾನೆ... ಕಟುಕ ಅಂಗುಲಿಮಾಲನಿಗೆ ಶಾಂತಿ ಬೀಜವ ಬಿತ್ತಿ ಅವನ ಮನ ಒಲಿಸಿ ಶಾಂತಿಯುತ ಬಾಳನ್ನು ಬಾಳಲು ಬೆಳಕು ಚೆಲ್ಲಿದ ಪುಟ್ಟ ನಾಟಕ ಮಕ್ಕಳು ಬಹಳಷ್ಟು ಶಾಂತದಿಂದ ನಿಭಾಯಿಸಿದರು.
ಭೋದಿಸತ್ವರಾಗಿ ಅವತರಿಸಿದ ಬುದ್ಧ ತನ್ನ ಸಹಸ್ರಭುಜಗಳಿಂದ ಹೋರಾಡಿದರ ಸಂಕೇತವಾಗಿ ಮಕ್ಕಳ ನೃತ್ಯ ವಿಭಿನ್ನವೆನಿಸಿತು ಅಂತೆಯೇ ಮನುಷ್ಯನ ಮನಸ್ಸನ್ನು ಶಾಂತಿ ಮತ್ತು ತಾಳ್ಮೆಯಿಂದಿಡಲು ಯೋಗಾಭ್ಯಾಸ ಬಹು ಮುಖ್ಯದ ಸಂಗತಿ.

ಎಲ್ಲರನ್ನು ಶಾಂತಚಿತ್ತದತ್ತ ಎಳೆಯಲು ಮಕ್ಕಳು ಯೋಗಾ ಮತ್ತು ಧ್ಯಾನದ ಮೂಲಕ ನೃತ್ಯ ನೀಡಿದರು. ಇದು ಬಹಳ ಸುಂದರವಾಗಿತ್ತು... ಇಲ್ಲಿ ಕೆಲವರು ಯೋಗಾಭ್ಯಾಸವನ್ನು ಕಲಿತು ಸಹ ಹೋಗಿರಬೇಕು ಎಂದೆನಿಸುತ್ತೆ...

ನವರಸಗಳ ೯ ರಸಗಳು ಎಲ್ಲಾ ವಿವಿಧ ರೀತಿಯಲ್ಲಿ ಮೂಡಿ ಬರುತ್ತಲಿದ್ದಂತೆ ಮತ್ತೊಂದು ಅದ್ಧೂರಿ ಮುಕ್ತಾಯ ಸಮಾರಂಭಕ್ಕೆ ಒಬ್ಬನೇ ವ್ಯಕ್ತಿಯಲ್ಲಿ ಎಷ್ಟೆಲ್ಲಾ ರಸಗಳು ಕೆಲಸಮಾಡಿವೆ ಎಂಬ ಉದಾಹರಣೆಗೆ ಕರುನಾಡನ್ನು ಸುವರ್ಣಭೂಮಿ ಎಂದು ಕರೆದ ಮಹಾನ್ ಚೇತನ ಅಶೋಕ ಚಕ್ರವರ್ತಿ ಜೀವನವನ್ನಾಧರಿಸಿ ಪುಟ್ಟ ನೃತ್ಯ ರೂಪಕ ಎಲ್ಲರ ಮನಸ್ಸನ್ನು ಸೆಳೆದಿತ್ತು.

ಈ ನೃತ್ಯ ಕೇವಲ ೫,೬ ದಿನಗಳಲ್ಲಿ ನಮ್ಮ ಮಕ್ಕಳಲ್ಲಿನ ಕಲೆಯನ್ನು ಹೊರಹಾಕಲು ಕರುನಾಡ ಮಿತ್ರರಾದ ಸಾಧನಾ ಅಕಾಡೆಮಿ, ಹುಬ್ಬಳ್ಳಿಯಿಂದ ಸುಧೀರ್ ಯಾದವ್ ಮತ್ತು ಮೃತ್ಯುಂಜಯ್ ಮರುಭೂಮಿಗೆ ಬಂದು ನೃತ್ಯ ನಿರ್ದೇಶಿಸಿ ಮಕ್ಕಳ ಅಭಿನಯ ಕೌಶಲತೆಯನ್ನು ಮೆರೆದರು....

ಅದ್ಧೂರಿ ಸಮಾರಂಭ ಮುಕ್ತಾಯ ಎಲ್ಲಾ ಸಭಿಕರಿಗೆ ವಂದಿಸುತ್ತ ಮುಕ್ತಾಯವಾಯಿತು..ಭಾವಸಂಗಮದಲ್ಲಿ ಎಲ್ಲಾ ರೀತಿಯ ಹೊಸ ಹೊಸ ಪ್ರಯತ್ನಗಳೊಂದಿಗೆ ವೇದಿಕೆ ನವರಸಗಳಂತೆ ಹಲವು ಬಣ್ಣಗಳಾಗಿ ಬಿಂಬಿತವಾಗಿವೆ. ಇಲ್ಲಿ ಕೂಟದ ಮಕ್ಕಳು, ಸದಸ್ಯರು ಎಲ್ಲರ ಒಗ್ಗಟ್ಟಿನ ಪ್ರಯತ್ನವೇ ಕಳೆದ ಶುಕ್ರವಾರ (೧೮-೧೧-೧೧) ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅದ್ಧೂರಿ ಕಾರ್ಯಕ್ರಮ.


ಚಿತ್ರಗಳು : ಕ್ಯಾಮರಾ ಕೊಡುಗೆ

12 comments:

sunaath said...

ಕರುನಾಡಿನ ಕಲೆಯನ್ನು ಮರುನಾಡಿನಲ್ಲಿ ಅರಳಿಸುತ್ತಿರುವ ನಿಮಗೆ ಅಭಿನಂದನೆಗಳು!

ಚೇತನಾ ಭಟ್ said...

ಸುಂದರ ಚಿತ್ರಗಳೊಂದಿಗೆ ನಯವಾದ ವಿವರಣೆ ಸುಗುಣ. ರಾಜ್ಯೋತ್ಸವದ ಕಾರ್ಯಕ್ರಮವನ್ನು ಎದುರಿನಿಂದ ನೋಡಿದಷ್ಟೇ ಸಂತೋಷವಾಯ್ತು. ಟಿ‌ವಿ90 ಚಾನಲ್ ಅಂತೂ ನನ್ನ ನೆಚ್ಚಿನ ಚಾನಲ್ ಈಗ..ಹ ಹ್ಹ ಹ್ಹ..ತುಂಬಾ ಚೆನ್ನಾಗಿ ಮೂಡಿಬಂದಿವೆ.

Ittigecement said...

ಪ್ರೀತಿಯ ಕುವೈತ್ ಕನ್ನಡಿಗರೆ...

ನಿಮಗೆಲ್ಲರಿಗೂ ಅಭಿನಂದನೆಗಳು... ನಿಮ್ಮ ಕನ್ನಡ ಅಭಿಮಾನಕ್ಕೆ.. ಸಂಘಟನೆಗೆ... !!

ಕಾರ್ಯಕ್ರಮದ ಸವಿವರ ತುಂಬಾ ಚೆನ್ನಾಗಿ ಬಂದಿದೆ... ಸುಂದರ ಫೋಟೊಗಳಿಂದ..

ಮತ್ತೊಮ್ಮೆ.. ಹೃದಯ ಪೂರ್ವಕ ಅಭಿನಂದನೆಗಳು...

Badarinath Palavalli said...

ಕಾರ್ಯಕ್ರಮದ ಸಚಿತ್ರ ವರದಿಗೆ ನಿಮ್ಮ ಸಾದೃಷ್ಯ ನಿರೂಪಣೆ ಒಳ್ಳೆ ಸಾಥ್ ಕೊಟ್ಟಿದೆ.

ಹೊರ ನಾಡಿನಲ್ಲಿ ಕನ್ನಡ ತನವನ್ನು ಬಿಂಬಿಸುತ್ತಿರುವ ನಿಮ್ಮ ಧೀ ಶಕ್ತಿಗೆ ಶರಣು.

ಚುಕ್ಕಿಚಿತ್ತಾರ said...

ಸುಂದರ ಫೋಟೊಗಳು...ಸವಿವರ ಚೆನ್ನಾಗಿ ಮೂಡಿಬಂದಿವೆ
ಅಭಿನಂದನೆಗಳು...

Guruprasad said...

ವೌ , ಅದ್ಬುತ,, ತುಂಬಾ ಚೆನ್ನಾಗಿ ಆಯೋಜಿಸಿದ್ರಿ ಅಂತ ಕಾಣುತ್ತೆ..... ನವಿರಾದ ವಿವರಣೆ....
ಕುವೈತ್ ಕನ್ನಡ ಬಂದುಗಳಿಗೆ ಕನ್ನಡ ರಾಜ್ಯೋತ್ಸವದ ಶುಬಾಶಯಗಳು .... ನಿಮ್ಮೆಲ್ಲರ ಒಗ್ಗಟ್ಟು... ಹೀಗೆ ಇರಲಿ...

ದಿನಕರ ಮೊಗೇರ said...

nijavaada kannaDada habba...
nijavaada kannaDada seve....

khushiyaayitu........

V.R.BHAT said...

ಕುವೈತ್ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು, ಕಾರ್ಯಕ್ರಮ ಸುಂದರವಾಗಿ, ಚೆನ್ನಾಗಿ ನಡೆಯಿತು ಎಂದು ಚಿತ್ರಗಳಲ್ಲಿ ನೋಡಿ, ಸುದ್ದಿ ಓದಿ ತಿಳಿದು ಸಂತಸವಾಯ್ತು.

ಗಿರೀಶ್.ಎಸ್ said...

ಕುವೈತ್ ನಲ್ಲಿ ಕನ್ನಡಿಗರೆಲ್ಲ ಸೇರಿ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಮೆಚ್ಹ ಬೇಕಾದ ಸಂಗತಿ... ನಿಮಗೆಲ್ಲರಿಗೂ ಅಭಿನಂದನೆಗಳು... ಅಂದ ಹಾಗೆ ನಿಮ್ಮ ಟಿವಿ ೯೦ ಕರ್ಮಕಾಂಡ ವಿಡಿಯೋ ತುಂಬ ಚೆನ್ನಾಗಿದೆ.. ತುಂಬ ನಗಿಸಿತು...

prabhamani nagaraja said...

ಕುವೈತ್ ಕನ್ನಡಿಗರ `ಕನ್ನಡ ರಾಜ್ಯೋತ್ಸವ'ದ ಸ೦ಭ್ರಮದಲ್ಲಿ ನಮ್ಮನ್ನೂ ಭಾಗಿಯಾಗಿಸಿದ್ದಕ್ಕಾಗಿ ಧನ್ಯವಾದಗಳು ಸುಗುಣ, ಫೋಟೋಗಳು ಹಾಗೂ ನಿರೂಪಣೆ ಬಹಳ ಚೆನ್ನಾಗಿದೆ.
ನನ್ನ ಬ್ಲಾಗ್ ಗೆ ಭೇಟಿ ಕೊಡಿ.

ಜಲನಯನ said...

ಸುಗುಣ ನಿಮ್ಮ ಸಚಿತ್ರ ವರದಿ ಸೂಪರ್ರು....

ಸೀತಾರಾಮ. ಕೆ. / SITARAM.K said...

ತಮ್ಮೆಲ್ಲರ ಭಾಷೆ ಮತ್ತು ನಾಡ ಅಭಿಮಾನ ಮಾದರಿಯದ್ದು...