"ರುದ್ರಾಕ್ಷಿ" ಶಿವನ ಸಂಕೇತವೆಂದೇ ನಾವುಗಳು ನಂಬುತ್ತೇವೆ. "ರುದ್ರ್ಚ ಮತ್ತು ಅಕ್ಷ" ಎಂಬ ಎರಡು ಶಬ್ಧಗಳಿಂದಾದ ರೂಪವೇ ರುದ್ರಾಕ್ಷಿ. "ರುದ್ರ" ಎಂದರೆ ಶಿವನ ಮತ್ತೊಂದು ಹೆಸರು. "ಅಕ್ಷ" ಎಂದರೆ ಶಿವನ ಕಣ್ಣೀರು. ಇಂತಹ ರುದ್ರಾಕ್ಷಿಯನ್ನು ಶಿವನೇ ಮೊಟ್ಟ ಮೊದಲು ಧರಿಸಿದನೆಂಬ ನಂಬಿಕೆ ಇದೆ ಆನಂತರ ಶಿವನ ಭಕ್ತರು, ಮುನಿಗಳು ರುದ್ರಾಕ್ಷಿಯನ್ನು ಧರಿಸಲು ಪ್ರಾರಂಭಿಸಿದರು. ಇದು ಆ ಶಿವನಿಂದಲೇ ಪ್ರಸಾದವಾಗಿ ಬಂದಿಹುದು ಇದನ್ನು ಧರಿಸುವುದರಿಂದ ನಮ್ಮಲ್ಲಿನ ಕಷ್ಟಗಳೆಲ್ಲವನ್ನು ನಿವಾರಣೆ ಮಾಡುವಂತಹ ಶಕ್ತಿ ಹೊಂದಿದೆ ಎಂದು ನಂಬಿಕೆಯನ್ನಿಟ್ಟಿದ್ದಾರೆ.
ರುದ್ರ್ಚ ಅಕ್ಷ ಎಂಬುದಕ್ಕೆ ಬಹಳ ಅರ್ಥಗಳೇ ಇವೆ... "ರುದ್ರ ಎಂದರೆ! 'ದಂ ಸಂಸಾರ ದುಃಖಮ್ ದ್ರಾವ ಯತ್ ಇತಿ ರುದ್ರಃ' ಅಂದರೆ ಯಾರು ಜಗತ್ತಿನ ದುಃಖಗಳೆಲ್ಲವನ್ನೂ ನಿವಾರಿಸುತ್ತಾನೋ ಆತ ರುದ್ರ' ಎಂಬ ಅರ್ಥ" ಶಿವ ತನ್ನ ಮೂರನೇ ಕಣ್ಣಿನಿಂದ ಎಲ್ಲವನ್ನೂ ನೋಡಬಲ್ಲ ಆ ಕಣ್ಣು ಅಕ್ಷರೇಖೆಯ ಸುತ್ತ ಸುತ್ತುತ್ತಲಿರುತ್ತದೆ ಆದ್ದರಿಂದಲೇ "ಅಕ್ಷ" ಎಂದು ಕರೆಯುತ್ತಾರೆ. ಮತ್ತೊಂದು ಅರ್ಥವನ್ನು ಎಲ್ಲೋ ಓದಿದ ನೆನಪು ಅ- ಎಂದರೆ ತೆಗೆದುಕೊಳ್ಳುವುದು ಮತ್ತು ಕ್ಷ- ಎಂದರೆ ಕೊಡುವುದು ಎಂದರ್ಥ, "ಅಕ್ಷ" ಎಂದರೆ ತೆಗೆದುಕೊಳ್ಳುವುದು ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ನಮ್ಮ ದುಃಖವನ್ನು ತೆಗೆದುಕೊಂಡು ಸುಖವನ್ನು ಕೊಡುವ ಕ್ಷಮತೆ ಇರುವುದೆಂದು ಸಹ ಹೇಳುತ್ತಾರೆ.
ತಾರಕಾಕ್ಷ ಮತ್ತು ಕಮಲಾಕ್ಷರೆಂಬ ತಾರಕಪುತ್ರರು ಅಧರ್ಮಗಳ ಆಚರಣೆಯಲ್ಲಿ ತೊಡಗಿಸಿಕೊಂಡಿರುವಾಗ ಅತಿ ವಿಷಾದದಿಂದ ಅಶ್ರುಗಳಿಂದ ತುಂಬಿದ್ದ ಶಿವನ ನೇತ್ರದಿಂದ ಕೆಲವು ಕಂಬನಿಗಳು ಭುವಿಯ ಮೇಲೆ ಬಿದ್ದ ಪರಿಣಾಮದಿಂದಲೇ "ರುದ್ರಾಕ್ಷಿ ವೃಕ್ಷ" ಹುಟ್ಟಿತೆಂದು ಹೇಳಲಾಗುತ್ತದೆ.
ರುದ್ರಾಕ್ಷಿ ಮರ ನಿತ್ಯ ಹರಿದ್ವರ್ಣ ವೃಕ್ಷ, ವರ್ಷ ಪೂರ್ಣ ಎಲೆಗಳು ಬಲಿತು ಉದುರುತ್ತವೆ ಹಾಗೂ ಹೊಸ ಚಿಗುರಿನಿಂದ ಕಂಗೊಳಿಸುತ್ತದೆ. ಈ ರುದ್ರಾಕ್ಷಿ ವೃಕ್ಷಗಳು ಸಮತಟ್ಟ ಪ್ರದೇಶಗಳಲ್ಲಿ ಬೆಳೆಯದೆ ಯಾವಾಗಲೂ ತಗ್ಗು ಪ್ರದೇಶದಲ್ಲೇ ಬೆಳೆಯುತ್ತವೆ. ಇದು ಹಿಮಾಲಯದ ಪರ್ವತಗಳಲ್ಲಿ, ಕಾಶ್ಮೀರ, ನೇಪಾಳ ಈ ಪ್ರದೇಶಗಳಲ್ಲೇ ಹೆಚ್ಚು ಕಾಣುತ್ತೇವೆ (ದಕ್ಷಿಣ ಏಷಿಯಗಳಲ್ಲಿ ಹೆಚ್ಚು ದೊರಕುವುದು). ಇದರ ಎಲೆಗಳು ಮಾವಿನ ಮರದ ಎಲೆಯಂತಿರುತ್ತೆ, ರುದ್ರಾಕ್ಷಿ ವೃಕ್ಷದಲ್ಲಿ ಬಿಡುವ ಹಣ್ಣುಗಳನ್ನು ಹಲವಾರು ಯತಿಗಳು ತಿನ್ನುತ್ತಾರೆ, ಇದರಿಂದ ಬಾಯಾರಿಕೆ ಆಗುವುದಿಲ್ಲವೆಂದು ಸಹ ಹೇಳುತ್ತಾರೆ. ರುದ್ರಾಕ್ಷಿ ಮರದ ಹಣ್ಣುಗಳು (ನೀಲಿ ಬಣ್ಣದಲ್ಲಿರುತ್ತದೆ) ತುಂಬಾ ಹಣ್ಣಾಗಿ ಕೆಳಗೆ ಬಿದ್ದನಂತರ ಒಳಗಿರುವ ಬೀಜಗಳು ಒಣಗುತ್ತವೆ. ಬಿದ್ದ ಹಣ್ಣುಗಳನ್ನು ಕೆಲ ದಿನ ನೀರಿನಲ್ಲಿ ನೆನೆಸಿಟ್ಟರೆ ಸಿಪ್ಪೆ ಬೀಜದಿಂದ ಬೇರ್ಪಡುತ್ತದೆ. ಒಂದೇ ಹಣ್ಣಿನಲ್ಲಿ ಸುಮಾರು ೧೦ ರಿಂದ ೧೫ ಬೀಜಗಳಿರುತ್ತವೆ (ಹಣ್ಣಿನೊಳಗೆ ಬೀಜಗಳು ಹೆಚ್ಚಾದಂತೆ ಬೀಜಗಳ ಆಕಾರ ಕೂಡ ಕಡಿಮೆ ಇರುತ್ತದೆ ಅಂದರೆ ಚಿಕ್ಕ ರುದ್ರಾಕ್ಷಿ ಬೀಜಗಳು). ನಿಮಗೇ ಗೊತ್ತೆ ರುದ್ರಾಕ್ಷಿ ಬೀಜದಲ್ಲಿ ಮೊದಲೇ ರಂಧ್ರವಿರುತ್ತದೆ ಅದಕ್ಕೆ ವಾಹಿನಿ ಎನ್ನುತ್ತಾರೆ... ಆ ರಂಧ್ರ ಮೊದಲೇ ಇರುವುದರಿಂದ ಪೋಣಿಸಲು ಸುಲಭವಾಗುತ್ತದೆ ಅಲ್ಲವೇ....? ಈ ರುದ್ರಾಕ್ಷಿಗಳಲ್ಲಿ "ಎಲೆಕ್ಟ್ರೋಮ್ಯಾಗ್ನಟಿಕ್" ಗುಣಧರ್ಮ ಹೊಂದಿರುತ್ತದೆ.
ರುದ್ರಾಕ್ಷಿಯಲ್ಲಿ "೧ ರಿಂದ ೩೫" ಮುಖಗಳಿರುವ ರುದ್ರಾಕ್ಷಿ ಇರುತ್ತವೆ (ಸಾಮಾನ್ಯವಾಗಿ ೧ ರಿಂದ ೧೪ ಮುಖದ ರುದ್ರಾಕ್ಷಿಗಳೇ ಹೆಚ್ಚು ಸಿಗುತ್ತವೆ). ಆದರೆ ಏಕಮುಖ ರುದ್ರಾಕ್ಷಿ ಬಲು ಅಪರೂಪ ದೊರಕುವುದು ಅದರ ಆಕಾರವೂ ಸಹ ವಿಭಿನ್ನವಾಗಿರುತ್ತದೆ. ರುದ್ರಾಕ್ಷಿ ನಸು ಕೆಂಪಿನ ಬಣ್ಣದಾಗಿರುತ್ತದೆ, ಅದರ ಮೇಲೆ ಹಳದಿ ಬಣ್ಣದಂತಹ ಪಟ್ಟೆಗಳನ್ನು ನಾವು ಕಾಣಬಹುದು. ರುದ್ರಾಕ್ಷಿಗಳಲ್ಲಿ ಹಲವು ಬಣ್ಣಗಳೂ ಸಹ ಇವೆ ಬಿಳಿ, ಹಳದಿ, ಕೆಂಪು, ಕಪ್ಪು ಇವೆಲ್ಲವೂಗಳಲ್ಲಿ ಬಿಳಿ ಬಣ್ಣದ ರುದ್ರಾಕ್ಷಿ ಶ್ರೇಷ್ಠವೆಂದು ನಂಬಿದ್ದಾರೆ. ಈ ರುದ್ರಾಕ್ಷಿಗಳನ್ನು ಕೊರಳಿನ ಮಾಲೆ ಮತ್ತು ಜಪ ಮಾಲೆಯಾಗಿ ಧರಿಸುತ್ತಾರೆ. ಮಾಲೆಯಲ್ಲಿ ಸಾಮಾನ್ಯವಾಗಿ ೧೦೮ ರುದ್ರಾಕ್ಷಿಗಳನ್ನು ಪೋಣಿಸಿದ ಮಾಲೆಯನ್ನು ಹೆಚ್ಚು ಧರಿಸಿದ್ದನ್ನ ನಾನು ನೋಡಿದ್ದೇನೆ ಆದರೆ ೨೪೯, ೧೦೦೦ ಹಾಗೂ ೧೧೦೦ ಇರುವ ರುದ್ರಾಕ್ಷಿಮಾಲೆಯನ್ನೂ ಸಹ ಧರಿಸುತ್ತಾರೆಂದು ಕೇಳಿದ್ದೇನೆ.
ರುದ್ರಾಕ್ಷಿ ಬೀಜ ಮತ್ತು ಮರದ ಸಿಪ್ಪೆಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ವಾತ, ಪಿತ್ತ, ಕಫಾ, ಚರ್ಮರೋಗ, ರಕ್ತದ ಒತ್ತಡ ಇಂತಹ ಹಲವಾರು ತೊಂದರೆಗಳಿಗೆ ಔಷಧಿ ತಯಾರಿಸಲು ಮನೆಮದ್ದಾಗಿ ರುದ್ರಾಕ್ಷಿ ಬೀಜದ ಪುಡಿಯನ್ನು ಬಳಸುತ್ತಾರೆ. ಇನ್ನು ರುದ್ರಾಕ್ಷಿ ಮರಗಳನ್ನು ಪೀಠೋಪಕರಣ ತಯಾರಿಕೆಗಳಿಗೆ ಹಾಗೂ ಹಣ್ಣು ಪ್ಯಾಕ್ ಮಾಡಲು ಬಳಸುತ್ತಾರೆ.
ಚಿತ್ರಗಳು: ನೆಟ್ ಲೋಕ
35 comments:
I have some more info. re. Rudraksha!
But in "PAGE MAKER" Let me know your mail ID if you can open !!
ರುದ್ರಾಕ್ಷಿ ಯ ವಿವವರಣೆ ಚನ್ನಾಗಿದೆ ಸುಗುಣ,... ಅಕ್ಷಿ - ನಯನ-ಕಣ್ಣು..ಎಂದೂ ಅರ್ಥವಿದೆ..
ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ,
ರುದ್ರಾಕ್ಷಿ ಮರ ಮತ್ತು ಬೀಜದ ಮಹತ್ವ ಸಹಾ ವಿವರಿಸಿದ್ದೀರಿ..ಔಷಧೀಯ ಗುಣಗಳ ಉಲ್ಲೇಖವೂ ಇದೆ..ಒಳ್ಳೆಯ ಮಾಹಿತಿಯುಕ್ತ ಲೇಖನ.
ಸುಗುಣಾ,
ರುದ್ರಾಕ್ಷಿಯ ಬಗೆಗೆ ಉತ್ತಮ ಮಾಹಿತಿ ನೀಡಿರುವಿರಿ. ರುದ್ರಾಕ್ಷಿಯ ಕಾಯಿಯನ್ನು ಕಂಡಿರಲಿಲ್ಲ. ಧನ್ಯವಾದಗಳು.
ಹೆಬ್ಬಾರ್ ಸರ್,
ನಿಮಗೆ ಮೈಲ್ ಮಾಡಿದ ಐಡಿಗೆ ಉತ್ತರವನ್ನು ಕಳುಹಿಸಿ... ಕಾಯುತ್ತಿರುತ್ತೇನೆ ಮತ್ತಷ್ಟು ತಿಳಿದುಕೊಳ್ಳುವ ಅಭಿಲಾಷೆ ಹೊಂದಿದ್ದೇನೆ.
ಅಜಾದ್ ಸರ್,
ಧನ್ಯವಾದಗಳು ಪ್ರತಿಕ್ರಿಯೆಗಳಿಗೆ.. ಔಷಧಿಯ ಗುಣ ಹೊಂದಿರುತ್ತದೆ ನಮಗೆ ಗೊತ್ತಿರುವ ಒಬ್ಬರು ಅಜ್ಜಿ ಅವರಿಗೆ ಚರ್ಮದ ಕಾಯಿ ಇದ್ದಿದ್ದರಿಂದ ಅವರು ಅವರ ಚರ್ಮಕ್ಕೆ ರುದ್ರಾಕ್ಷಿ ಪುಡಿಯನ್ನು ಕಲಸಿ ಲೇಪನ ಮಾಡಿಕೊಳ್ಳುತ್ತಲಿದ್ದರು. ಅದು ಪೂರ್ಣ ಕೂಡ ಆಯ್ತು
ಕಾಕ,
ಧನ್ಯವಾದಗಳು ನನಗೂ ಪೂರ್ಣ ತಿಳಿದಿರಲಿಲ್ಲ. ಕೆಲವರನ್ನು ಕೇಳಿ ಕೇಳಿ ತಿಳಿದುಕೊಂಡಿದ್ದೆ ಏನೋ ಆಸಕ್ತಿ ಮೂಡಿ ಈ ಲೇಖನ ಬರೆದೆ
ತುಂಬಾ ಉಪಯುಕ್ತವಾದ ಲೇಖನ ಅಕ್ಕಾ.... ನೀಲಿ ಹಣ್ಣು ನೋಡ್ತಾ ಇದ್ರೆ ಹಾಗೇ ಇಟ್ಕೊಳ್ಳೊಣ ಅಂತಾ ಅನ್ನಿಸ್ತಿದೆ.....:) ಪುಟ್ಟದಾದ್ರೂ ಉತ್ತಮ ಲೇಖನ.
ತುಂಬಾ ಒಳ್ಳೇ ಮಾಹಿತಿ ನೀಡಿದ್ದೀರಿ. ನಾನೂ ಹಲವು ಸಲ ಈ ರುದ್ರಾಕ್ಷಿಗಳು ಎಲ್ಲಿಂದ ಬರುತ್ತವೆ ಎಂದು ಯೋಚಿಸಿ ತಲೆ ಕೆಡಿಸಿಕೊಂಡಿದ್ದೆ!
ಅಬ್ಬಬ್ಬ ರುದ್ರಾಕ್ಷಿ ಬಗ್ಗೆ ಎಷ್ಟೊಂದು ಮಾಹಿತಿ ತುಂಬಿದ ಲೇಖನ ಬರೆದಿದ್ದೀರ. ನಿಮ್ಮ ಲೇಖನ ಚೆನ್ನಾಗಿದೆ ಅಭಿನಂದನೆಗಳು ಸುಗುಣ ಮೇಡಂ
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಸುಗುಣಕ್ಕ,
ರುದ್ರಾಕ್ಷಿಯ ತುಂಬಾ ಮಾಹಿತಿಯನ್ನು ಕಲೆಹಾಕಿದ್ದೀರಿ. ಇದು ನಿಜಕ್ಕೂ ಮಾಹಿತಿಯುಕ್ತವಾದದ್ದು.
ಉತ್ತಮ ಮಾಹಿತಿ ಕೊಟ್ಟಿದ್ದೀರಿ. ನಾನೂ ಸಹ ಈ ರುದ್ರಾಕ್ಷಿ ಮರವನ್ನು ನೋಡಿರಲಿಲ್ಲ.
ಸ್ತ್ರೀಯರಿಗಾಗಿಯೇ ವಿಶಿಷ್ಟವಾದ,ತೀರಾ ಚಿಕ್ಕ ಗಾತ್ರದ ’ರುದ್ರಾಣಿ’ ಎಂಬ ದುದ್ರಾಕ್ಷಿಗಳಿವೆ. ನಾನದನ್ನು ಹೃಷಿಕೇಶದಿಂದ ತಂದಿದ್ದೇನೆ. ಆ ಮಾಲೆ ಸದಾ ನನ್ನ ಕುತ್ತಿಗೆಯಲ್ಲಿರುತ್ತದೆ.ನೇಪಾಳದಲ್ಲಿ ಉತ್ತಮ ಗುಣಮಟ್ಟದ ರುದ್ರಾಕ್ಷಿಗಳು ದೊರೆಯುತ್ತವೆ.
ಸುಗುಣ ಮೇಡಂ,
ರುದ್ರಾಕ್ಷಿಯ ಸವಿವರ ಲೇಖನ ತುಂಬಾ ಇಷ್ಟವಾಯಿತು.
ತೇಜು ಬಹಳ ಧನ್ಯವಾದಗಳು... ನನಗೂ ತುಂಬಾ ಮಾಹಿತಿ ಗೊತ್ತಿರಲಿಲ್ಲ ಅದಕ್ಕೆ ಚಿಕ್ಕದಾಗಿದೆ ಲೇಖನ, ನಿಜ ಆ ಹಣ್ಣು ನೋಡಿದ್ರೆ ತಗೊಂಡು ಇಟ್ಕೊಳ್ಳೋಣ ಅನ್ನಿಸುತ್ತೆ..
ಪ್ರದೀಪ್,
ಎಷ್ಟೋ ವಿಷಯಗಳು ನಮಗೆ ಗೊತ್ತೇ ಇರೋಲ್ಲ ಅಲ್ಲವೇ..? ತಿಳಿದುಕೊಳ್ಳಲೊಂದು ಪ್ರಯತ್ನ ಅಷ್ಟೆ ಥಾಂಕ್ಯೂ
ಬಾಲು ಸರ್,
ನನ್ನ ಮಗ ರುದ್ರಾಕ್ಷಿ ಬಗ್ಗೆ ಕೇಳಿದ್ದಕ್ಕೆ ನಾನು ಸ್ವಲ್ಪ ತಿಳಿದುಕೊಂಡು ಇಲ್ಲಿ ಲೇಖನ ಕೂಡ ಬರೆದೆ.. ಥ್ಯಾಂಕ್ಯೂ
ಶಿವು
ಹೌದು, ನನ್ಗೂ ಸ್ವಲ್ಪನೇ ಗೊತ್ತಿದ್ದು, ನನ್ನ ಸ್ನೇಹಿತನೊಬ್ಬನ ಮಗಳ ಹೆಸರು ರುದ್ರಾಕ್ಷಿ ಎಂದು ಅದನ್ನು ಮನುಗೆ ಹೇಳಿದ್ದಕ್ಕೆ ನೋಡಿ ಇಷ್ಟೆಲ್ಲಾ ಲೇಖನ ಬಂತು ಹಹಹಹ.
ಸುಬ್ರಮಣ್ಯ ಸರ್
ಧನ್ಯವಾದಗಳು, ರುದ್ರಾಕ್ಷಿ ಮರ ಕೊಪ್ಪಳದ ಹತ್ತಿರ ಒಬ್ಬರು ಬೆಳೆಸಿದ್ದಾರೆ ಎಂದು ನನ್ನ ಸ್ನೇಹಿತೆಯೊಬ್ಬರು ಹೇಳಿದರು. ದಕ್ಷಿಣ ಭಾರತದಲ್ಲಿ ರುದ್ರಾಕ್ಷಿ ಕಾಣುವುದು ಬಲು ವಿರಳ.
ಉಷಾಜಿ
ಧನ್ಯವಾದಗಳು ನನಗೆ ರುದ್ರಾಕ್ಷಿ ಎಂದರೆ ತುಂಬಾ ಇಷ್ಟ ಮುಂದಿನ ಸಾರಿ ಬೆಂಗಳೂರಿಗೆ ಹೋದಾಗ ಕೊಳ್ಳುವ ಯೋಜನೆ ಇದೆ.
ಬದರಿ ಸರ್,
ಥಾಂಕ್ಯೂ ಸರ್, ಈ ಲೇಖನ ಇಷ್ಟಪ್ಪಟ್ಟಿದ್ದು ಖುಷಿ ನೀಡಿದೆ.
ರುದ್ರಾಕ್ಷಿಯ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಿರಿ... ನಮ್ಮ ಊರಿನ ಹತ್ತಿರ ಪುಷ್ಪಗಿರಿ ಅಂತ ಬೆಟ್ಟ ಇದೆ..ಅಲ್ಲಿ ದೇವಸ್ಥಾನದ ಹತ್ತಿರ ನೇಪಾಳದಿಂದ ತರಿಸಿ ರುದ್ರಾಕ್ಷಿ ಗಿಡವನ್ನು ನಟ್ತಿದ್ದೇವೆ.. ಸುಮಾರು ೫ ವರ್ಷದ ಹಿಂದೆ.. ಈಗ ಅದು ಕಾಯಿಗಳನ್ನು ಬಿಡುತ್ತಿದೆ..
Suguna,
Olle information!! Blue fruit sakattagide..Amma 25 yrs back haridwara, hrishikesha kke hogiddaga alli rudrakshi maravannu nodiddevu anta aaga heltidru..Sorry for kanglish!
ರುದ್ರಾಕ್ಷಿಯ ಸಸ್ಯದ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ. ರುದ್ರಾಕ್ಷಿ ಕಾಯಿ ನೀಲಿ ಬಣ್ಣದ್ದಾಗಿರುತ್ತದೆ ಎ೦ದು ತಿಳಿದು ಅಚ್ಚರಿಯಾಯ್ತು! ಉತ್ತಮ ಲೇಖನಕ್ಕಾಗಿ ಅಭಿನ೦ದನೆಗಳು ಸುಗುಣ, ನನ್ನ ಬ್ಲಾಗ್ ಗೆ ಬನ್ನಿ.
ಸುಂದರ ಸಚಿತ್ರ ವಿವರಣೆ ಬಹಳಷ್ಟು ಮಾಹಿತಿಗಳನ್ನು ಒದಗಿಸಿತು ಸುಗುಣ.ರುದ್ರಾಕ್ಷಿ ಹಣ್ಣುಗಳನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು.
ರುದ್ರಾಕ್ಷಿ ಧರಿಸಿದರೆ ರಕ್ತದೊತ್ತಡ ಏರಿಳಿತವಾಗಲ್ಲ ಅಂತ ಮಾತ್ರ ಕೇಳಿದ್ದೆ,
ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ಗಿರೀಶ್,
ಧನ್ಯವಾದಗಳು ಗಿರೀಶ್, ರುದ್ರಾಕ್ಷಿ ಮರ ೩ ಅಥವಾ ೪ ವರ್ಷಗಳ ನಂತರ ಫಲ ಕೊಡುತ್ತದೆ ಎಂದು ಕೇಳಿದ್ದೆ... ನೀವು ಈಗ ಆ ಮರ ನೋಡ್ತಾ ಇದ್ದೀರಿ.
ವನಿತಾ,
ಧನ್ಯವಾದಗಳು, ಹಾ ಹೌದು ಹರಿದ್ವಾರದಲ್ಲಿ ರುದ್ರಾಕ್ಷಿ ಮರಗಳು ಕಾಣುತ್ತವೆ... ತೊಂದರೆ ಇಲ್ಲ ಕಂಗ್ಲೀಷ್ಗೆ ಕಾರಣ ಗೊತ್ತು...
ಪ್ರಭ,
ಧನ್ಯವಾದಗಳು ನಿಮ್ಮ ಬ್ಲಾಗ್ ಗೆ ಆಗಾಗ ಬರುತ್ತಲಿರುತ್ತೇನೆ...
ಚೇತು,
ಥಾಂಕ್ಸ್, ರುದ್ರಾಕ್ಷಿ ಹಣ್ಣು ನೋಡಿದರೇ ಖುಷಿಯಾಗುತ್ತೆ ಅಲ್ವಾ.. ಹಣ್ಣಿನ ಬಣ್ಣವೇ ಆಕರ್ಷೀಣಿಯವಾಗಿದೆ
ವಿಚಲಿತ,
ಧನ್ಯವಾದಗಳು ಪ್ರತಿಕ್ರಿಯೆಗೆ...
ಅಕ್ಕಾ,
ಉತ್ತಮ ಮಾಹಿತಿ,
ಇಷ್ಟೆಲ್ಲಾ ಮಾಹಿತಿ ಗೊತ್ತೇ ಇರಲಿಲ್ಲ.
ಧನ್ಯವಾದಗಳು.
upayukta maahiuti sangrahane nimmadu...
ರುದ್ರಾಕ್ಷಿ ಬಗ್ಗೆ ವಿವರವಾದ ಮಾಹಿತಿ ಕೊಟ್ಟಿದ್ದೀರಿ, ಧನ್ಯವಾದಗಳು...
ಮಾಹಿತಿ-ಚಿತ್ರಗಳು-ಚಿತ್ರಣ ಎಲ್ಲವೂ ಸ೦ಗ್ರಹಯೋಗ್ಯ ಮನಸು ಅವರೆ. ತಮಗೆ ಶಿವರಾತ್ರಿಯ ಶುಭಾಶಯಗಳು.
ಅನ೦ತ್
ಶಿವರಾತ್ರಿ ದಿನ ಒಳ್ಳೆ ಲೇಖನ ಓದಿದೆ.... ತುಂಬಾ ಖುಷಿ ಆಯ್ತು.... ಒಳ್ಳೆಯ ಮಾಹಿತಿ ...
ಪ್ರವೀಣ್
ಥಾಂಕ್ಯೂ.. ಎಷ್ಟೋ ವಿಷಯಗಳು ಗೊತ್ತೇ ಇರೋಲ್ಲ ಸುಮ್ಮನೇ ದೊಡ್ಡವರು ಹೇಳಿದ್ರು ಅಂತ ಉಪಯೋಗಿಸುತ್ತೇವೆ.
ಸೀತಾರಾಮ್ ಸರ್,
ಎಷ್ಟೋ ದಿನಗಳಿಂದ ಇದು ಮನಸಲ್ಲಿತ್ತು ಇದರ ಬಗ್ಗೆ ತಿಳಿಬೇಕು ಅಂತ ಹೇಗೋ ತಿಳಿದುಕೊಂಡೆ
ಅಶೋಕ್,
ಧನ್ಯವಾದಗಳು ಇಂತಹವೆಲ್ಲಾ ತಿಳಿದುಕೊಳ್ಳಲೇ ಬೇಕು.
ಮಂಜು,
ಧನ್ಯವಾದಗಳು...
ಉತ್ತಮ ಲೇಖನ... ನೀವು ಹೇಳಿದಂತೆ ೧೦೮ ರುದ್ರಾಕ್ಷಿಯ ಮಾಲೆಗಳೇ ಹೆಚ್ಚು.. ಆದರೆ ೫೪, ೨೫೬, ೧೧೦೮ ಹೀಗೆ ವಿವಿಧ ಮಾಲೆಗಳನ್ನು ನೋಡಿದ್ದೇನೆ.. ಪಂಚ ಮುಖಿ ರುದ್ರಾಕ್ಷಿಯು ತುಂಬಾ ಉತ್ತಮ ಮತ್ತು ವಿರಳ ಅಂತ ಕೇಳಿದ್ದೇನೆ.. ಇಂಥದೊಂದು ಪಂಚಮುಖಿ ರುದ್ರಾಕ್ಷಿ ನಮ್ಮ ಮನೆಯಲ್ಲಿದೆ..
ನಮಸ್ಕಾರ ಸರ್..ರುದ್ರಾಕ್ಷಿ ಧಾರಣೆ ಯ...ಅಹಾರ ಪದ್ದತಿಯ ಬಗ್ಗೆ ತಿಳಿಸಿ
Post a Comment