Sunday, February 19, 2012

ಹರಃ ಪಾಪಾನಿ ಹರತಾತ್ ಶಿವೋ ಧತ್ತಾಂ ಸದಾ ಶಿವಂ

ಇತ್ತೀಚೆಗೆ ಮಗನಿಗೆ ಶಿವರಾತ್ರಿ ಹಬ್ಬವಿದೆ ಉಪವಾಸ ಜಾಗರಣೆ ಎಲ್ಲಾ ಮಾಡುತ್ತಾರೆ. ಊರಲ್ಲಿ ಇದ್ದಿದ್ದರೆ ನಾವೂ ಸಹ ಆಚರಿಸಬಹುದಿತ್ತು ಆದರೆ ಕುವೈತಿನಲ್ಲಿ ಇದ್ದೀವಿ ಕೆಲಸದ ದಿನ ಬೇರೆ ಉಪವಾಸವಂತೂ ಮಾಡುತ್ತೇವೆ, ಜಾಗರಣೆ ಕಷ್ಟವೇನೋ ಎಂದು ಹೇಳಿದಾಗ ಮಗ ಶಿವನ ಬಗ್ಗೆ ಏನಾದರು ಇದ್ದರೆ ಹೇಳು ಎಂದ ಅವನಿಗಾಗಿ ಈ ಲೇಖನ ಬರೆದೆ ನಿಮ್ಮೊಂದಿಗೂ ಹಂಚಿಕೊಳ್ಳುತ್ತಲಿದ್ದೇನೆ....

ದೇವತೆಗಳ ಮತ್ತು ರಾಕ್ಷಸರ ಮಧ್ಯೆ ನಡೆದ ಸಮುದ್ರ ಮಥನದ ಸಂದರ್ಭದಲ್ಲಿ ಸಮುದ್ರದಿಂದ ಹಾಲಾಹಲ ಹೊರಬಂದು ಸೃಷ್ಟಿಯನ್ನು ಅಲ್ಲೋಲ ಕಲ್ಲೋಲ ಮಾಡುವ ಸಾಧ್ಯತೆಗಳು ಹೆಚ್ಚಾದ್ದರಿಂದ ದೇವತೆಗಳು ಈ ಸಂಕಷ್ಟದಿಂದ ಪಾರುಮಾಡಲು ಭಗವಾನ್ ವಿಷ್ಣುವಿನ ಮೊರೆ ಇಟ್ಟಾಗ, ವಿಷ್ಣು ಶಿವನನ್ನು ಭೇಟಿಯಾಗುವಂತೆ ಸಲಹೆ ನೀಡುತ್ತಾನೆ. ನಂತರ ದೇವತೆಗಳು ಶಿವನ ಬಳಿಗೆ ತೆರಳಿ ಕಷ್ಟದಿಂದ ಪಾರು ಮಾಡೆಂದು ಬೇಡಿಕೊಳ್ಳುತ್ತಾರೆ. ದೇವತೆಗಳ ಕಷ್ಟವನ್ನು ಅರಿತ ಶಿವ ಹಾಲಾಹಲ ಕುಡಿದು ಅದು ಹೊರಗೆ ಬರದಂತೆ ಹಾವಿನಿಂದ ಸುತ್ತಿಕೊಂಡನೆಂದು ಹೇಳಲಾಗುತ್ತದೆ. ಆದುದರಿಂದ ಶಿವನ ಕಂಠ ನೀಲಿಯಾಗಿರುತ್ತದೆ ಇದೇ ಕಾರಣಕ್ಕೆ ಶಿವನನ್ನು ನೀಲಕಂಠ ಎಂದೂ ಸಹ ಕರೆಯುತ್ತಾರೆ. 

ಒಮ್ಮೆ, ಇಡೀ ಜಗತ್ತೇ ಪ್ರಳಯದ ಅಂಚಿನಲ್ಲಿದ್ದಾಗ ಪಾರ್ವತಿ ದೇವಿ ಈ ಜಗತ್ತನ್ನು ಉಳಿಸಲು ಶಿವನ್ನಲಿ ಮೊರೆಯಿಟ್ಟು ಬೇಡಿಕೊಳ್ಳುತ್ತಾಳೆ. ಆ ಸಂದರ್ಭದಲ್ಲಿ ಶಿವನು ಪ್ರಳಯದಿಂದ  ಜೀವಸಂಕುಲಗಳನ್ನೆಲ್ಲಾ ಪಾರು ಮಾಡಿದ ರಾತ್ರಿಯನ್ನು ಮಹಾಶಿವರಾತ್ರಿ ಎಂದು ಪಾರ್ವತಿ ದೇವಿ ಕರೆದರೆಂದು ಹೇಳಲಾಗುತ್ತದೆ. ಪ್ರಳಯದ ನಂತರ ಪಾರ್ವತಿ ಶಿವನ ಪೂಜೆ ಸಲ್ಲಿಸಲು ಇಷ್ಟವಾದ ದಿನ ಯಾವುದೆಂದು ಕೇಳಿದಾಗ, ಮಾಘ ತಿಂಗಳಿನ ೧೪ರ ರಾತ್ರಿ ನನ್ನ ಇಷ್ಟದ ರಾತ್ರಿ, ಅದನ್ನು ಶಿವರಾತ್ರಿ ಎಂದು ಹೇಳಿದ ಕೂಡಲೆ ಪಾರ್ವತಿ ಈ ಹಬ್ಬವನ್ನು ಪ್ರಚಲಿತಪಡಿಸಿದಳು ಎಂದು ಪುರಾಣಕಥೆಗಳು ಹೇಳುತ್ತವೆ.

ನನ್ನ ತಂದೆ ಚಿಕ್ಕವಳಿದ್ದಾಗ ಹೇಳಿದ ಕಥೆ: (ಅಲ್ಪಸ್ವಲ್ಪ ನೆನಪಿದೆ ಪೂರ್ಣ ತಿಳಿದಿದ್ದವರು ತಿಳಿಸಬಹುದು) : 
ಕೋಳೂರ ಕೊಡಗೂಸು

ಕೋಳೂರು ಎಂಬ ಊರಲ್ಲಿ ಒಬ್ಬ ಶಿವಭಕ್ತ ದಿನವೂ ಶಿವ ದೇವಸ್ಥಾನಕ್ಕೆ ತೆರಳಿ, ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯವನಿಟ್ಟು ನಮಸ್ಕರಿಸಿ ಬರುತ್ತಲಿದ್ದನು. ಒಮ್ಮೆ ಹೆಂಡತಿ ಜೊತೆಯಲ್ಲಿ ಎಲ್ಲೋ ಹೋಗಬೇಕಾದ ಕಾರಣ ದೇವರಿಗೆ ಪೂಜೆ ಸಲ್ಲಿಸುವುದು ಬಿಡವುದು ಬೇಡವೆಂದು ಮಗಳಿಗೆ ಆ ಕೆಲಸವನ್ನು ವಹಿಸುತ್ತಾನೆ. ಅಪ್ಪ ಹೇಳಿದಂತೆ ಪುಟ್ಟ ಬಾಲೆ ದಿನವೂ ಶಿವನಿಗೆ ನೈವೇದ್ಯವನ್ನಿತ್ತು ಪೂಜೆ ಸಲ್ಲಿಸಲು ಹೋಗುತ್ತಲಿರುತ್ತಾಳೆ. ಅಪ್ಪ ದಿನವೂ ನೇವೇದ್ಯವನ್ನು ದೇವರಿಗೆ ಅರ್ಪಿಸಿ ಬರುತ್ತಲಿದ್ದರು ಆದರೆ ಈಗ ನಾನು ನೇವೇದ್ಯ ದೇವರಿಗೆ ಕೊಡಲಿಲ್ಲವೆಂದರೆ ಅಪ್ಪ ನನ್ನನ್ನು ಸುಮ್ಮನೇ ಬಿಡುವರೇ ಎಂದು ದೇವರಲ್ಲಿ ಮೊರೆ ಇಟ್ಟು, "ನನ್ನ ಅಪ್ಪ ಬಂದಿಲ್ಲವೆಂದು ಕೋಪವೇ... ದೇವ ದಯವಿಟ್ಟು ಈ ಪ್ರಸಾದವನ್ನು ಸ್ವೀಕರಿಸಿ", ಇಲ್ಲದಿದ್ದರೆ ನಾನು ಇಲ್ಲಿಂದ ಕದಲುವುದಿಲ್ಲ ಎಂದು ಹಟ ಮಾಡಿ ಕುಳಿತುಕೊಳ್ಳುತ್ತಾಳೆ. ಈ ಪುಟ್ಟ ಬಾಲಕಿಯ ಹಟವನ್ನು ಕಂಡು ಶಿವನು ಪ್ರತ್ಯಕ್ಷನಾಗಿ ತಂದಿದ್ದ ನೇವೇದ್ಯವನ್ನು ಸ್ವೀಕರಿಸುತ್ತ ಇರುತ್ತಾನೆ. ಅಪ್ಪ ಅಮ್ಮ ಮರಳಿ ಬಂದಾಗ ಮಗಳು ನೇವೇದ್ಯ ಏನು ಮಾಡಿದಳು ಎಂದು ಕೇಳಿದಾಗ ಶಿವನಿಗೆ ಕೊಟ್ಟೆನಪ್ಪ...!! ಎಂದು ಹೇಳುತ್ತಲಿದ್ದ ಪುಟ್ಟ ಬಾಲಕಿಯ ಮೇಲೆ ಅನುಮಾನ ಮೂಡಿ ಸುಳ್ಳು ಹೇಳುತ್ತಲಿರುವೆ, ನಿಜವನ್ನೇ ಹೇಳು ಇಲ್ಲದಿದ್ದರೆ ನಿನಗೆ ಶಿಕ್ಷೆಯಾಗುತ್ತದೆ ಎಂದನು. ಅಪ್ಪ ಎಷ್ಟು ಕೇಳಿದರೂ ಶಿವನೇ ತಿಂದನೆಂದು ಹೇಳಿದಾಗ ಕೋಪಗೊಂಡ ಅಪ್ಪ ಮಗಳಿಗೆ ಪೆಟ್ಟು ನೀಡಲು ಮುಂದಾದಾಗ ಬಾಲೆ ಓಡುತ್ತ ಶಿವನ ಸನ್ನಿದಿಗೆ ಬಂದು ನನ್ನ ಕಾಪಾಡು ಶಿವನೇ....... ಎಂದು ಅಳುತ್ತ ಬರುತ್ತಿದ್ದ ಕೂಸನ್ನು ದೇವ ತನ್ನ ಶಿವಲಿಂಗ ಬಾಯಿತೆರೆದು ಲಿಂಗದೊಳಗೆ ಸೇರಿಕೊಳ್ಳುವ ಸಮಯಕ್ಕೆ ಸರಿಯಾಗಿ ಅಪ್ಪ ಆ ಮಗುವಿನ ಕೂದಲನ್ನು ಕೈಯಲ್ಲಿ ಹಿಡಿದನಂತೆ ಅದು ಹಾಗೇ  ಈಗಲೂ ಕೂದಲು ಶಿವಲಿಂಗುವಿನಿಂದಾಚೆ ಇದೆ ಎಂದು ಹೇಳುತ್ತಾರೆ. 


(ಋಷಿಗಳ ಬಗೆಗಿನ ಪುಸ್ತಕ ಓದಿದಾಗ ತಿಳಿದ ಸಂಗತಿ)
ಒಮ್ಮೆ ಅಷ್ಟಾವಕ್ರ ಋಷಿಗಳು ಜಂಬೂದ್ವೀಪವನ್ನಾಳುತ್ತಿದ್ದ  ಇಕ್ಷ್ವಾಕು ವಂಶದ ಚಿತ್ರಭಾನು ಎಂಬ ರಾಜನ ಭೇಟಿಮಾಡಿದಾಗ ಶಿವರಾತ್ರಿ ಪ್ರಯುಕ್ತ ರಾಜ ಉಪವಾಸಕ್ಕೆ ತೊಡಗಿದ್ದನ್ನು ಕಂಡು ಕಾರಣಗಳನ್ನು ಕೇಳುತ್ತಾರೆ. ಆಗ ರಾಜ ತನ್ನ ಹಿಂದಿನ ಜನ್ಮದ ಬಗ್ಗೆ ಋಷಿಗಳಿಗೆ ಹೇಳುತ್ತಾನೆ.

ಹಿಂದಿನ ಜನ್ಮದಲ್ಲಿ ಸುಸ್ವರ ಎಂಬ ಹೆಸರಿನಲ್ಲಿ ಹುಟ್ಟಿ, ವಾರಾಣಾಸಿಯಲ್ಲಿ ಬೇಟೆಗಾರನಾಗಿದ್ದ. ಪಶುಪಕ್ಷಿಗಳನ್ನು ಬೇಟೆಯಾಡಿ ಅವುಗಳನ್ನು ಮಾರುವುದೇ ಅವನ ಕಸುಬಾಗಿತ್ತು. ಒಮ್ಮೆ ಹೀಗೆ ಅರಣ್ಯದಲ್ಲಿ ಬೇಟೆಯಾಡಲು ತೆರಳಿದ ದಿನ ರಾತ್ರಿಯಾದರೂ ಯಾವುದೇ ಬೇಟೆಗೆ ಸಿಗದಿದ್ದಾಗ ಘೋರಾರಣ್ಯದೊಳಗೆ ರಾತ್ರಿಯೆಲ್ಲಾ ಕಳೆಯಬೇಕಾಯ್ತು. ಅಂದು ಜಿಂಕೆ ಎದುರುಗೆ ಬಂದರೂ ಸುಸ್ವರ ದುಃಖದಲ್ಲಿದ್ದ ಜಿಂಕೆಯ ಪರಿವಾರ ಕಂಡು ಕೊಲ್ಲಲು ಮನಸಾಗದೇ ಹಾಗೆ ಸುಮ್ಮನಾಗಿದ್ದ. ಪ್ರಾಣಿಗಳು ಬಂದು ಕೊಂದಾವು ಎಂಬ ಭಯದಿಂದ ಅಲ್ಲೇ ಇದ್ದ ಬಿಲ್ವಪತ್ರೆ ಮರವನ್ನೇರಿ ರಾತ್ರಿ ಕಳೆಯ ಬಹುದೆಂದುಕೊಂಡು ಹತ್ತಿ ಕುಳಿತ. ಬೆಳಗಿನಿಂದ ಬೇಟೆಗಾಗಿ ಓಡಾಡಿ ದಣಿದಿದ್ದ ಸುಸ್ವರ  ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಹಸಿವಿನಿಂದ ಬಳಲಿ ತನಗಾಗಿಯೇ ಕಾಯುತ್ತಿರುತ್ತಾರೆ ಜೊತೆಗೆ ದುಃಖ ಪಡುತ್ತಾರೆ ಎಂದುಕೊಂಡು, ತಾನೂ ಕಣ್ಣೀರು ಸುರಿಸುತ್ತಾ ರಾತ್ರಿಯೆಲ್ಲ ನಿದ್ರೆ ಬಾರದೆ ಮರದಲ್ಲಿದ್ದ ಬಿಲ್ವಪತ್ರೆಗಳನ್ನು ಒಂದೊಂದಾಗಿ ಗಿಡದಿಂದ ಕೆಳಗೆ ಹಾಕುತ್ತಾ ಆ ರಾತ್ರಿ ಕಳೆದಿದ್ದನು. ನಂತರ ಬೆಳಗಾದ ಕೂಡಲೆ ಪತ್ನಿ ಮತ್ತು ಮಕ್ಕಳಿಗೆ ಆಹಾರವನ್ನು ತೆಗೆದುಕೊಂಡು ಹೋಗಿ ಊಟಕ್ಕೆ ಕುಳಿತಿರುವ ಸಮಯದಲ್ಲಿ ಹಸಿವಿನಿಂದ ಬಳಲಿದ್ದ ವ್ಯಕ್ತಿ ಬಂದು ಆಹಾರ ನೀಡಲು ಬೇಡಿದಾಗ ಅವನಿಗೂ ಸ್ವಲ್ಪ ನೀಡಿ ನಂತರ ಎಲ್ಲರೂ ಕೂಡಿ ಊಟ ಮಾಡಿದರು.

ಸ್ವಲ್ಪ ದಿನಗಳಾದ ಮೇಲೆ ಸುಸ್ವರ ಮರಣಹೊಂದಿ ಅವನ ಆತ್ಮವು ಶಿವನ ಬಳಿಗೆ  ಸಂದೇಶಕರು ಕೊಂಡೊಯ್ಯುಲು ಬಂದಾಗ. "ಕಾಡಿನಲ್ಲಿ ಅಂದು ಇಡಿ ರಾತ್ರಿ ನಿನಗೇ ಅರಿವಿಲ್ಲದೇ ಬಿಲ್ವಪತ್ರೆ ಮರದ ಮೇಲೆ ಹತ್ತಿ, ಕೆಳಗೆ ಹಾಕಿದ ಬಿಲ್ವಪತ್ರೆಗಳು ಮರದ ಅಡಿಯಲ್ಲಿದ್ದ ಶಿವಲಿಂಗಕ್ಕೆ ಅರ್ಚನೆ ಮಾಡಿ, ನೀನು ಹಾಕಿದ ಕಣ್ಣೀರು ಲಿಂಗವನ್ನು ಶುದ್ದಿಗೊಳಿಸಿದೆ. ಅಂದೇ ನೀನು ಉಪವಾಸ ವ್ರತ ಆಚರಿಸಿದ್ದರಿಂದ ಶಿವನು ಪ್ರಸನ್ನರಾಗಿ ತಮ್ಮನ್ನು ಕಳುಹಿಸಿದ್ದಾರೆ" ಸಂದೇಶಕರು ಈ ಎಲ್ಲಾ ಸಂಗತಿಗಳನ್ನು ಸುಸ್ವರನಲ್ಲಿ ಹೇಳುತ್ತಾರೆ. ಶಿವನ ಸ್ಮರಣೆಯಿಂದ ರಾಜನಾಗಿ ಈ ಜನ್ಮದಲ್ಲಿ ಜನ್ಮತಾಳಿದ್ದೇನೆಂದು ಚಿತ್ರಭಾನು ಋಷಿಗಳಲ್ಲಿ ವಿವರಿಸಿ ಹೇಳುತ್ತಾನೆ. ಈ ಜನ್ಮ ನೀಡಿದ ಆ ಶಿವನಿಗೆ ಉಪವಾಸಾದಿಗಳಿಂದ ಪೂಜೆಗೈಯುತ್ತ ಬರುತ್ತಾನೆ.

ಇನ್ನು ಬೇಡರ ಕಣ್ಣಪ್ಪ ಎಲ್ಲರಿಗೂ ಈ ಕಥೆ ಗೊತ್ತಿರುವಂತಹುದೇ ಒಂದು ದಿನ ಕಣ್ಣಪ್ಪನೆಂಬ ಬೇಟೆಗಾರ ಬಿಲ್ವ ಪತ್ರೆ ಮರದ ಮೇಲೆ ಕುಳಿತು, ದಿನವಿಡೀ ಉಪವಾಸವಿದ್ದು, ಅಕಸ್ಮಿಕವಾಗಿ ಶಿವರಾತ್ರಿಯಂದು ಬಿಲ್ವದ ಎಲೆಗಳನ್ನು ಕೆಳಗಿದ್ದ ಶಿವಲಿಂಗಕ್ಕೆ ಹಾಕುತ್ತಿದ್ದನು. ಈ ಮೂಲಕ ಶಿವಪೂಜೆ ನಡೆಸಿದನು. ಆತನ ಭಕ್ತಿಗೆ ಮಾರುಹೋದ ಶಿವನು ಆತನ ಎಲ್ಲ ಪಾಪ ಕರ್ಮಗಳನ್ನು ಕ್ಷಮಿಸಿ ಮುಕ್ತಿ ದೊರಕಿಸಿದನು. ಆದ್ದರಿಂದ ಶಿವನ ಪೂಜೆಯಲ್ಲಿ ಬಿಲ್ವಪತ್ರೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಿವಪುರಾಣಗಳಲ್ಲಿ ತಿಳಿಸಲಾಗಿದೆ. ಹೀಗೆ ಹಲವು ಕಥೆಗಳು ಶಿವರಾತ್ರಿಯ ಬಗ್ಗೆ ಕೇಳಿದ್ದೇವೆ

ಸರ್ವಶಕ್ತ ಶಿವನ ನಾಮ ಜಪಿಸಿ ಭವಭಾರ ಹಗುರಮಾಡಿಕೊಳ್ಳಲು ಆಸ್ಪದ ನೀಡುವ ದೈವಶ್ರದ್ಧೆಯ ಮಹತ್ವದ ದಿನವೇ ಶಿವರಾತ್ರಿ. ಮಹಾಶಿವರಾತ್ರಿ "ಮಾಘ ಮಾಸ""ಬಹುಳ ಚತುರ್ದಶಿ"ಯಂದು ಆಚರಿಸುತ್ತಾರೆ, ಚತುರ್ದಶಿ ತಿಥಿಯು ರಾತ್ರಿಯಲ್ಲಿ ಇರತ್ತದೆಂದು ಹೇಳಿದ್ದಾರೆ. ಉತ್ತರ ಭಾರತಗಳಲ್ಲಿ ಶಿವರಾತ್ರಿಯಂದು ಭಂಗಿ ಮತ್ತು ಲಸ್ಸಿ ಕುಡಿದು ಹಬ್ಬ ಆಚರಿಸುತ್ತಾರೆಂದು ಕೇಳಿದ್ದೇನೆ.  ನನ್ನ ಸ್ನೇಹಿತ ದೆಹಲಿಯಲ್ಲಿದ್ದಾಗ ಅಲ್ಲಿನ ಭೈರವ ದೇವರಿಗೆ ಸಾರಾಯಿ ಅಭಿಷೇಕ ಮಾಡುತ್ತಲಿದ್ದದ್ದನ್ನು ಕಂಡಿದ್ದಾನೆ, ಆತ ಹೇಳುವ ಪ್ರಕಾರ ಅಲ್ಲಿನ ಶಿವನ ದೇವಸ್ಥಾನಗಳಲ್ಲಿ ಹೆಚ್ಚು ಕಡಿಮೆ, ಮಧ್ಯಪಾನಾಭಿಷೇಕವೇ ಹೆಚ್ಚು... ಜೊತೆಗೆ ತೀರ್ಥವಾಗಿ ಸಾರಾಯಿಯನ್ನೇ ನೀಡುತ್ತಾರಂತೆ.... ಈ ರೀತಿ ಮಾಡುವುದರಿಂದ ಶಿವನಿಗೆ ಪ್ರಿಯವೆಂದೂ ಸಹ ಹೇಳುತ್ತಾರೆ.  ಇದು ಎಷ್ಟರ ಮಟ್ಟಿಗೆ ಸರಿ ತಪ್ಪು ಗೊತ್ತಿಲ್ಲ.. ಆದರೆ ಆಚರಣೆಗಳು ಮಾತ್ರ ವಿಭಿನ್ನವಾಗಿ ನೆಡೆಯುತ್ತವೆ. 

ನಾವುಗಳು ಅಂದರೆ ಕರ್ನಾಟಕದಲ್ಲಿ ಈ ದಿನ ಬೆಳಿಗ್ಗೆ ಮಂಗಳ ಸ್ನಾನ ಮಾಡಿ, ಈಶ್ವರನಿಗೆ ಷೋಡಶೋಪಚಾರದಿಂದ ಪೂಜೆಮಾಡುತ್ತೇವೆ. ಈ ದಿನದ ವಿಶೇಷ ಪೂಜಾ ಸಾಮಾಗ್ರಿ ಬಿಲ್ವ ಪತ್ರೆ. ಬಿಲ್ವ ಪತ್ರೆ ಈಶ್ವರನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಾಗುತ್ತೇವೆ ಎಂದು ನಂಬಿಕೆ ಇಟ್ಟಿದ್ದೇವೆ. ಶಿವಲಿಂಗಕ್ಕೆ ಪಂಚಾಮೃತ ಮತ್ತು ಬಿಲ್ವ ಪತ್ರೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡುತ್ತೇವೆ. ಉಪವಾಸ ಮಾಡಲು ಆಗದಿದ್ದವರು ಫಲಹಾರಗಳನ್ನು ಸೇವಿಸುತ್ತಾರೆ. ಶಿವ ರಾತ್ರಿ ಎಂಬ ಹೆಸರಿಗೆ ತಕ್ಕಂತೆ ಹಗಲಿನ ಜೊತೆಗೆ ರಾತ್ರಿಯೂ ಶಿವನ ಪೂಜೆ, ಆರಾಧನೆಮಾಡುತ್ತಾರೆ. (ಬೆಳಗಿನ ಜಾವ) ಜಾವ (ಯಾಮ) ದಿವಸದ ಎಂಟನೆಯ ಒಂದು ಭಾಗದಷ್ಟು ಕಾಲ, ಮೂರು ಗಂಟೆ ಕಾಲ ಎಂದರ್ಥ. ರಾತ್ರಿಯ 4 ಜಾವಗಳಲ್ಲೂ ಈಶ್ವರನಿಗೆ ಅಭಿಷೇಕ ಪೂಜೆ ಮಾಡುತ್ತಾರೆ. ಈಶ್ವರನ ಭಜನೆ, ಹಾಡು, ಸ್ತೋತ್ರಗಳನ್ನು ಹೇಳುತ್ತಾ ಜಾಗರಣೆ ಮಾಡುತ್ತಾರೆ. ಹೀಗೆ ದಿನವಿಡೀ ಶಿವನ ಧ್ಯಾನದಲ್ಲಿ ಕಳೆಯಬೇಕೆಂದು ಹಿರಿಯರು ಹೇಳಿದ್ದಾರೆ.  

ಓಂ ಶಿವಾಯ ನಮಃ
----
ಶಿವ ಸ್ತೋತ್ರ

ಹರಃ ಪಾಪಾನಿ ಹರತಾತ್ ಶಿವೋ ಧತ್ತಾಂ ಸದಾ ಶಿವಂ |
ನ ಜಾನಾಮೀತಿ ನೋ ಬ್ರೂಯಾತ್ ಸರ್ವಜ್ಞಪದಭಾಗ್ ಯತಃ ||


ವಂದೇ ಶಂಭುಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗಭೂಷಣಂ ಮೃಗಧರಂ ವಂದೇ ಪಶೂನಾಂ ಪತಿಂ ||


ವಂದೇ ಸೂರ್ಯಶಶಾಂಕವಹ್ನಿ ನಯನಂ ವಂದೇ ಮುಕುಂದಪ್ರಿಯಂ |
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ ||

15 comments:

Ashok.V.Shetty, Kodlady said...

ಸುಗುಣ ಮೇಡಂ...

ಶಿವರಾತ್ರಿಯ ಬಗೆಗಿನ ಲೇಖನ ಚೆನ್ನಾಗಿದೆ...ಕಥೆಗಳೂ ಚೆನ್ನಾಗಿವೆ....ಶಿವರಾತ್ರಿ ಹಬ್ಬದ ಶುಭಾಶಯಗಳು...

ಜಲನಯನ said...

ಶಿವ ಸಿವ ಎಂದರೆ ಭಯವಿಲ್ಲ ಶಿವನಾಮಕೆ ಸಾಟಿ ಬೇರಿಲ್ಲ... ಹಾಡು ನೆನಪಾಯ್ತು..ಚನ್ನಾಗಿದೆ ಲೇಖನ..ಶಿವರಾತ್ರಿ ಶುಭಾಶಯಗಳು

ಚುಕ್ಕಿಚಿತ್ತಾರ said...

ಸುಗುಣ..
ಉತ್ತಮ ಬರವಣಿಗೆ. ನಾನು ಎರಡನೆ ತರಗತಿಯಲ್ಲಿದ್ದಾಗ ನಮ್ಮ ಶಾಲೆಯಲ್ಲಿ ಕೋಳೂರ ಚನ್ನಕ್ಕ ನಾಟಕವಾಡಿಸಿದ್ದರು. ಅದರಲ್ಲಿ ನಾನು ಶಿವ ಆಗಿದ್ದೆ.. ಒಮ್ಮೆ ಎಲ್ಲಾ ನೆನಪಾಯಿತು.
ವ೦ದನೆಗಳು.

Badarinath Palavalli said...

ಶಿವರಾತ್ರಿ ಪ್ರಯುಕ್ತ ನೀವು ಬರೆದು ಕೊಟ್ಟಿರುವ ಈ ಲೇಖನ ಅಮೋಘವಾಗಿದೆ.

ಹಲವಾರು ಪೌರಾಣಿಕ ಕಥೆಗಳ ಮುಖೇನ, ಉತ್ತಮ ಚಿತ್ರಗಳ ಮೂಲಕ ಒಳ್ಳೆಯ ನಿರೂಪಣೆ ಕೊಟ್ಟಿದ್ದೀರಿ.

ನಿಮ್ಮ ಮನೆ ಮಂದಿಗೆಲ್ಲ ಶಿವರಾತ್ರಿ ಶುಭಾಶಯಗಳು.

sunaath said...

ಸುಗುಣಾ ಮೇಡಮ್,
ಶಿವರಾತ್ರಿಯ ಬಗೆಗೆ ತುಂಬ ಉಪಯುಕ್ತವಾದ ಮಾಹಿತಿಯನ್ನು ಹಾಗು ಕತೆಗಳನ್ನು ಕೊಟ್ಟಿದ್ದೀರಿ. ತುಂಬಾ ಧನ್ಯವಾದಗಳು.

ಮನಸು said...

ಅಶೋಕ್,
ಇನ್ನೂ ಬಹಳಷ್ಟು ಕಥೆಗಳಿವೆ ಕೆಲವು ಗೊತ್ತಿಲ್ಲದೆಯವು ಇದಾವೆ ಅದನ್ನು ತಿಳಿದುಕೊಳ್ಳಬೇಕಿದೆ ಅಷ್ಟೆ... ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ

ಅಜಾದ್ ಸರ್,
ನಿಜ ಶಿವ ಶಿವ ಎಂದರೆ ಭಯವಿಲ್ಲ..... ಧನ್ಯವಾದಗಳು ಸರ್...

ಮನಸು said...

ಚಿಕ್ಕಿಚಿತ್ತಾರ,
ಧನ್ಯವಾದಗಳು ಶಿವಭಕ್ತೆ ಚೆನ್ನಕ್ಕ ಎಂಬ ಹೆಸರು ಮರೆತುಹೋಗಿತ್ತು... ತುಂಬಾ ಚೆನ್ನಾಗಿದೆ ಅಲ್ಲವೇ... ಈ ಕಥೆ ನನ್ನ ಅಪ್ಪ ನಾನು ದೇವರ ಫೋಟೋಗಳಿಗೆ ಪೂಜೆ ಮಾಡುವಾಗ ಸದಾ ಆ ಹಾಡು ಹೇಳೋರು. ಮತ್ತೆ ಕಥೆಯನ್ನೂ ಸಹ ಹೇಳೋರು.

ಬದರಿ ಸರ್,
ಎಷ್ಟೋ ಕಥೆಗಳು ಗೊತ್ತಿರುವುದಿಲ್ಲ ಅಲ್ಲವೇ... ನನ್ನ ಮಗ ಕೇಳಿದ್ದಕ್ಕೆ ಈ ಲೇಖನ ಬರೆದೆ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ

ಮನಸು said...

ಸುನಾಥ್ ಕಾಕ
ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು... ಶಿವರಾತ್ರಿ ಹಬ್ಬದ ಶುಭಾಶಯಗಳು

ವನಿತಾ / Vanitha said...

Nice compilation :)
Namge 2nd std nalli koloora kodagoosu paata ittu. Happy shivaratri to anna, attige & aliyange :)
(uff,, comment moderation is horrible !!)

Anonymous said...

nice

Swarna said...

ಚೆನ್ನಾಗಿದೆ.
ಆ ಶರಣೆಯ ಹೆಸರು ನಿಂಬೆವ್ವ ಅಂತ ಕೆಲ ಕಡೆ ಹೇಳೋದು ಕೇಳಿದ್ದೇನೆ.'ಕೋಳೂರಿನ ಕೊಡಗೂಸು' ಹರಿಕಥಾ ಸಾಮ್ರಾಟ್ ಗುರುರಾಜ ನಾಯ್ಡು ಧ್ವನಿಯಲ್ಲಿ
ತುಂಬಾ ಚೆನ್ನಾಗಿದೆ. ಕೇಳಿಲ್ಲದಿದ್ದರೆ Music India Online ನಲ್ಲಿ ಕೇಳಬಹುದು
ಸ್ವರ್ಣಾ

shivu.k said...

ಸುಗುಣಕ್ಕ,
ಶಿವರಾತ್ರಿಯ ದಿನದಂದೂ ಇಂಥ ಕತೆಗಳನ್ನು ಓದಬೇಕು...ಎಲ್ಲವೂ ಚೆನ್ನಾಗಿವೆ...ಶಿವರಾತ್ರಿ ಹಬ್ಬದ ಶುಭಾಶಯಗಳು.

ಮನಸು said...

ವನಿತಾ,
ಧನ್ಯವಾದಗಳು, ಕಾಮೆಂಟಿಸಲು ಏನು ತೊಂದರೆ ಎಂದು ನೋಡಿದೆ ಆದರೆ ಗೊತ್ತಾಗುತ್ತಿಲ್ಲ

ಮನಸು said...

ಸ್ವರ್ಣಾ,
ನಿಂಬೆವ್ವನ ಆಕೆಯ ಹೆಸರು ಧನ್ಯವಾದಗಳು, ಖಂಡಿತಾ ನೋಡುತ್ತೇನೆ ಆ ಹರಿಕಥೆ ಕೇಳುತ್ತೇನೆ.

ಅನಾಮಿಕಾ
ಧನ್ಯವಾದಗಳು

ಮನಸು said...

ಶಿವು,
ನಿಜ ಓದಬೇಕು.. ನಮಗೆ ಎಷ್ಟೋ ಕಥೆಗಳು ಗೊತ್ತಿಲ್ಲ ಅಲ್ಲವೇ