Thursday, March 1, 2012

ಬಿಲ್ವಪತ್ರೆ- ಮರ, ಪತ್ರೆ, ಹಣ್ಣು-ಕಾಯಿ....ಹೂ


ತ್ರಿದಲಂ ತ್ರಿಗುಣಕಾರಂ
ತ್ರಿನೇತ್ರಂ ಚ ತ್ರಯಾಯುಧಂ 
ತ್ರಿಜನ್ಮಪಾಪ ಸಂಹಾರಮ್
ಏಕ ಬಿಲ್ವಮ್ ಶಿವಾರ್ಪಣಂ||

ಈ ಶ್ಲೋಕ ಎಲ್ಲರೂ ಕೇಳಿರಲೇ ಬೇಕಲ್ಲವೇ.. 
ಮೂರು ದಳದಂತಿರುವ ಈ ಪತ್ರೆಯನ್ನು ತ್ರಿನೇತ್ರನಾದವನು, ತ್ರಿಗುಣಗಳಂತಿರುವ ಮೂರು ನಯನಗಳುಳ್ಳವನೂ ಆದ ಹಾಗೂ ಅತಿ ಚೂಪಾದ ಮೂರು ಭಾಗಗಳಿರುವ ಆಯುಧವಾದ ತ್ರಿಶೂಲವನ್ನು ಕೈಯಲ್ಲಿ ಹಿಡಿದಿರುತ್ತಾನೋ ಅವನು ನನ್ನೇಲ್ಲಾ ಮೂರು ಜನ್ಮದ ಪಾಪಗಳನ್ನು ನಾಶ ಮಾಡೆಂದು ಬೇಡುತ್ತ ಈ ಬಿಲ್ವಪತ್ರೆಯನ್ನು ಸರ್ಪಿಸುತ್ತೇನೆ.. ಎಂಬುದೇ ಈ ಶ್ಲೋಕದ ಅರ್ಥ....

ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದೆ ಮನಃಶಾಸ್ತ್ರದ ಕಾರಣಗಳೂ ಇವೆಯೆಂದು ಹೇಳುತ್ತಾರೆ.. ಸತ್ತ್ವ,ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯ ಉತ್ಪನ್ನವಾಗುತ್ತದೆ. ಬಾಲ್ಯಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಇವುಗಳ ಪ್ರತೀಕವೆಂದು ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ.



ಬಿಲ್ವ ಪತ್ರೆಯ ತೊಟ್ಟು ಲಿಂಗದ ಕಡೆಯೂ ಮತ್ತು ಎಲೆಗಳ ತುದಿಗಳು ನಮ್ಮೆಡೆಗೂ ಮಾಡಿ ದೇವರಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕೆಂಬ ಪ್ರತೀತಿ ಇದೆ.

ಬಿಲ್ವಪತ್ರೆ ಶಿವನಿಗೆ ಹಾಗೂ ಗಣಪನಿಗೂ ಪ್ರಿಯವಾದದ್ದು ಎಂದು ಹೇಳುತ್ತಾರೆ. ಬಿಲ್ವಪತ್ರೆ ಮರ ರುಟಾಸಿಯ (Rutaceae) ಕುಟುಂಬಕ್ಕೆ  ಸೇರಿದ್ದು. ಅಜಿಲ್ ಮರ್ಮೆಲಾಸ್ (Aegle Marmelos) ಎಂದು ವೈಜ್ಞಾನಿಕ ಸಸ್ಯಶಾಸ್ರ್ರೀಯ ಹೆಸರು. ಸಂಸ್ಕೃತದಲ್ಲಿ ಮಹಾಫಲ, ಶಿವದ್ರುಮ, ಶ್ರೀಫಲ, ಬಿಲ್ವ, ಶಾಂಡಿಲ್ಯ ಎಂಬ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕನ್ನಡದಲ್ಲಿ ಬೆಲ್ಲಪತ್ರೆ, ಬಿಲ್ವ ಎಂದು ಕರೆಯುತ್ತಾರೆ.

ಇದು ಹೂ ಬಿಡುವ ಸಸ್ಯ ಜೊತೆಗೆ ಮಧುರ ರಸವುಳ್ಳದ್ದು, ಹೂ ಸುವಾಸನೆಯನ್ನು ಬೀರುತ್ತದೆ  ಬಿಳಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತದೆ. ಬಿಲ್ವದ ಮರದ ಕೊಂಬೆಗಳಲ್ಲಿ ಮುಳ್ಳುಗಳಿದ್ದು (ಸುಮಾರು ಒಂದು ಅಂಗುಲ), ತೊಗಟೆ ಬೂದು ಬಣ್ಣದಾಗಿದ್ದು ಬೆಂಡು ಬೆಂಡಾಗಿರುವುದು, ಬೇಸಿಗೆಯಲ್ಲಿ  ಎಲೆಗಳೆಲ್ಲಾ  ಉದುರಿ ಹೋಗುತ್ತವೆ. ಫೆಬ್ರವರಿಯಿಂದ ಎಪ್ರಿಲ್ ತಿಂಗಳವರೆಗೆ ಹೂಕಾಯಿ ಬಿಡುವ ಕಾಲವಾಗಿದೆ. ಎಲೆಗಳು ತ್ರಿಪರ್ಣಿ (trifoliate) ಹಾಗೂ ಸುವಾಸಿತವಾಗಿರುತ್ತವೆ. ಇದರಲ್ಲಿ ತಿಳಿ ಹಳದಿ ಬಣ್ಣದ ಗಡುಸಾಗಿರುವಂತ ಕಾಯಿ ಬಿಡುತ್ತದೆ. ಈ ಮರ ಸುಮಾರು ೧೦ ರಿಂದ ೧೮ ಮೀಟರಿನಷ್ಟು ಎತ್ತರ ಬೆಳೆಯುತ್ತದೆ. ಬಿಲ್ವದ ಮರಗಳನ್ನು ಬಳಸಿ ಮನೆ ಸಾಮಾನುಗಳು, ಆಟಿಕೆಗಳು, ಗಾಡಿಗಳನ್ನು ತಯಾರಿಸಿ ಬಳಸುತ್ತಾರೆ.

"ಬ್ಯಾಲದ ಹಣ್ಣು" ನೋಡಿದ್ದೀರಾ, ಹೆಚ್ಚು ಕಡಿಮೆ ಬಿಲ್ವದ ಹಣ್ಣು ಸಹ ಅದೇ ರೀತಿ ಇರುತ್ತದೆ. ಬ್ಯಾಲದ ಹಣ್ಣಿನ ಸಿಪ್ಪೆ ಒಡೆದು ಒಳಗಿರುವ ತಿರುಳಿಗೆ ಬೆಲ್ಲವನ್ನು ಮಿಶ್ರಣ ಮಾಡಿ ನಾವುಗಳು ಹೆಚ್ಚು ತಿನ್ನುತ್ತಿದ್ದೆವು. ಇದು ಒಗರಿನ ಅಂಶ ಜಾಸ್ತಿ ಹೊಂದಿರುತ್ತದೆ. ಇದೇ ರೀತಿ ಬಿಲ್ವದ ಕಾಯಿಯ ತೊಗಟೆ ತೆಗೆದು ಅದರೊಳಗಿರುವ ತಿರುಳಿಗೆ ಬೆಲ್ಲ ಮಿಶ್ರಣ ಮಾಡಿ ತಿನ್ನುತ್ತಾರೆ. ಈ ಹಣ್ಣಿನಲ್ಲಿ ಬೀಜಗಳೂ ಸಹ ಇದ್ದು ಅದರ ಸುತ್ತಲೂ ಅಂಟುದ್ರವ ಇರುತ್ತದೆ. ತಿರುಳು ಹಾಗೂ ಬೀಜ ಪಕ್ಷಿಗಳಿಗೆ ತುಂಬಾ ಇಷ್ಟ. 

ಬಿಲ್ವದ ಹಣ್ಣಿನಲ್ಲಿ ಮ್ಯುಸಿಲೇಜ, ಪೆಕ್ವಿನ್, ಸಕ್ಕರೆ, ಟೆನಿನ್, ತೈಲಾಂಶ ಹಾಗೂ ತಿಕ್ತಾಂಶಳಿರುತ್ತವೆ. ಈ ಹಣ್ಣು ಆಮ್ಲರಸ. ಬಿಲ್ವಪತ್ರೆಯ ಕಷಾಯ, ಬಿಲ್ವಾದಿ ಚೂರ್ಣ, ಬಿಲ್ವಾದಿ ಘೃತ, ಬಿಲ್ವ ತೈಲ, ಬಿಲ್ವ ಮೂಲಾದಿ ಗುಟಿಕಿ ಇತ್ಯಾದಿ ಔಷಧಗಳನ್ನು ತಯಾರಿಸುತ್ತಾರೆ. ಇದನ್ನು ಆಯುರ್ವೇದ, ಯುನಾನಿ ಹಾಗೂ  ಸಿದ್ಧ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಬಿಲ್ವದ ಹಣ್ಣಿನಿಂದ ಗೋಡೆಗೆ ಬಳಿಯುವ ಪಾಲಿಶ್ ತಯಾರಿಸುತ್ತಾರಂತೆ ಇದು ಗೊತ್ತೇ ನಿಮಗೆ..? ಹಾಗೂ ಕಾಯಿಯಲ್ಲಿನ ತಿರುಳನ್ನು ತೆಗೆದು ಹಳದಿ ಬಣ್ಣವನ್ನು ಕ್ಯಾಲಿಕೋ ಮುದ್ರಣಕ್ಕೆ ಬಳಸುತ್ತಾರೆಂದು ಕೇಳಿದ್ದೇನೆ.

ಬಿಲ್ವದ ಮರ ಅಥವಾ ಪತ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಹೆಚ್ಚು ಕಡಿಮೆ ದೇವಾಲಯಗಳ ಆವರಣದಲ್ಲಂತು ಇದ್ದೇ ಇರುತ್ತದೆ. ಈ ತ್ರಿಪರ್ಣಿಕೆ ಕಿರುಎಲೆಗಳ ಮೇಲೆ ಪಾರದರ್ಶಕ ಚುಕ್ಕೆಗಳಿರುತ್ತವೆ. ಮೂರು ಎಲೆಗಳ ದಳ ಹೆಚ್ಚು ನೋಡಿದ್ದೇವೆ ಆದರೆ ಒಂದರಿಂದ ಒಂಭತ್ತು  ದಳಗಳೂ (ಕಿರು ಎಲೆಗಳು) ಸಹ ಬಿಡುತ್ತವೆಂದು ಕೇಳಿದ್ದೇನೆ. ಭಾರತ, ಬರ್ಮಾ, ಬಾಂಗ್ಲಾ, ಪಾಕಿಸ್ಥಾನ, ಈಜಿಪ್ಟ್, ಫಿಲಿಪೈನ್ಸ್, ಜಾವಾ, ಸುರಿನಾವ್ ಹಾಗೂ ಟ್ರೆನಿಡಾಡ್ ದೇಶಗಳಲ್ಲಿ ಈ ಮರವನ್ನು ಹೆಚ್ಚು ಕಾಣಬಹುದು. ಉತ್ತಮ ಮರಳು ಮಿಶ್ರಿತ ಮೆತ್ತನೆ ಮಣ್ಣು ಇದರ ಬೆಳೆಗೆ ಸೂಕ್ತ. ಒಣಹವೆ ಇದಕ್ಕೆ ಮುಖ್ಯವಾಗಿ ಬೇಕು. ಹೆಚ್ಚಿನ ವೇಳೆ ಒಣಹವೆಯಿದ್ದಲ್ಲಿ ಮಾತ್ರ ಇದು ಹಣ್ಣು ಬಿಡುವುದು. ಯಾವುದೇ ಹಣ್ಣು ಬೆಳೆಯಲಾರದ ಭೂಮಿ ಹಾಗೂ ಹವೆಯಲ್ಲಿ  ಇದು ಬೆಳೆಯುತ್ತದೆ.

ಬಿಲ್ವದ ಔಷಧೀಯ ಗುಣಗಳು:
ಬಿಲ್ವ ಮರದಲ್ಲಿನ ಬೇರು, ತೊಗಟೆ, ಪತ್ರೆ, ಹೂ, ಕಾಯಿ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿರುತ್ತದೆ. ಇದು ವಾತಹರ, ಅತಿಸಾರ, ಜ್ವರ, ಮೂತ್ರ ಸಂಬಂಧಿತ ರೋಗಗಳಿಗೆ ಸಿದ್ಧೌಷಧಿ. ಉಷ್ಣಗುಣ ಹೊಂದಿದ ಈ ಹಣ್ಣು ಜೀರ್ಣಕ್ರಿಯೆ ಮತ್ತು ಹಸಿವು ಹೆಚ್ಚು ಮಾಡುತ್ತದೆ.... ರಕ್ತಭೇದಿ, ಹೊಟ್ಟೆ ನೋವು ಉಪಶಮನ -  ಹೀಗೆ ದೇಹದ ಒಳ ಮತ್ತು ಬಾಹ್ಯ ರೋಗಕ್ಕೆ ಮದ್ದಾಗಿ ಬಳಸುತ್ತಾರೆ. ಒಸಡಿನಲ್ಲಿನ ರಕ್ತಶ್ರಾವ. ಕೆಮ್ಮು, ನೆಗಡಿ, ಹೊಟ್ಟೆಯ ತೊಂದರೆಗಳು, ಗರ್ಭಿಣಿಯರಲ್ಲಾಗುವ ವಾಕರಿಕೆಗಳಿಗೆ ಬಿಲ್ವ ಹಣ್ಣು ಬಹಳಷ್ಟು ಔಷಧಿಯ ಗುಣವನ್ನು ಹೊಂದಿದೆ. ಬಿಲ್ವದ ಹಣ್ಣಿನಿಂದ ಪಾನಕವನ್ನು ಮಾಡಿ ಕುಡಿಯುತ್ತಾರೆ, ಇದು ಬೊಜ್ಜು ಕರೆಗಿಸುತ್ತದೆ, ಕಿವುಡುತನ, ಕಣ್ಣಿನ ಕಾಯಿಲೆಗಳು, ಹೀಗೆ ಎಲ್ಲಾ ರೋಗಕ್ಕೂ ಔಷಧಿಯ ರೀತಿ ಬಳಸುತ್ತಾರೆ.

ಸಕ್ಕರೆ ರೋಗಕ್ಕೆ ರಾಮ ಬಾಣವಿದ್ದಂತೆ. ರಕ್ತದಲ್ಲಿ ಸಕ್ಕರೆ ಕಾಯಿಲೆ ಇದ್ದು ಬಿಲ್ವದ ಎಲೆ ದಿನಕ್ಕೊಂದು ಸೇವಿಸುವುದು ಅಥವಾ  ಬಿಲ್ವದ ಹಣ್ಣಿನ ಪಾನಕ (ಸಕ್ಕರೆ ಹಾಕದೇ) ಕುಡಿಯುತ್ತ ಬಂದರೆ ಖಂಡಿತಾ ಸಕ್ಕರೆ ರೋಗ ಉಪಶಮನವಾಗುತ್ತದೆ.

ಬಿಲ್ವದ ಎಲೆ, ಕಾಯಿ, ಬೇರು ಈ ಮೂರು ಅಂಗಗಳನ್ನು ಔಷಧಕ್ಕಾಗಿ ಹೆಚ್ಚು ಬಳಸುತ್ತಾರೆ. ಎಲೆಗಳನ್ನು ಅರೆದು ಮುದ್ದೆ ಮಾಡಿ, ಇಲ್ಲವೆ ರಸ ತೆಗೆದು, ಅಥವಾ ಒಣಗಿಸಿ ಪುಡಿ ಮಾಡಿ ಉಪಯೋಗಿಸುತ್ತಾರೆ. ಬೇರನ್ನು ಪುಡಿ ಮಾಡಿ ಅಥವಾ ತೇಯ್ದು ಉಪಯೋಗಿಸುತ್ತಾರೆ. ಕಾಯಿಯ ಒಳಗಿನ ತಿರುಳನ್ನು ಒಣಗಿಸಿ ಪುಡಿ ಮಾಡಿ, ಇಲ್ಲವೆ ಕಷಾಯ ಮಾಡಿ ಉಪಯೋಗಿಸಲಾಗುತ್ತದೆ. ಬಿಲ್ವವವು ಹೃದಯಕ್ಕೆ ಬಲ ನೀಡುತ್ತೆಂದೂ ಸಹ ಹೇಳುತ್ತಾರೆ. 

ಬಿಲ್ವವೃಕ್ಷದ "ಬೇರಿನ ಮತ್ತು ಮರದ ನಡುವಿನ ತಿರುಳಿನ ಭಸ್ಮದಲ್ಲಿ ಸೋಡಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಲೋಹ, ರಂಜಕ, ಸಿಲಿಕಾಗಳು" ಇರುತ್ತವೆ.

ಬಿಲ್ವ ಎಷ್ಟು ಉಪಯೋಗ ಅಲ್ವಾ:
೧. ಬಿಲ್ವದ ತೈಲ ಇದನ್ನು ೪ ಅಥವಾ ಐದು ಡ್ರಾಪ್ ಕಿವಿಗೆ ಬಿಡುವುದರಿಂದ ಕಿವುಡುತನ ಉಪಶಮನವಾಗುತ್ತದೆ.
೨. ಸುಮಾರು ೧೦ ಗ್ರಾಂ ಬಿಲ್ವದ ಲೇಹ ಸೇವಿಸುವುದರಿಂದ ಗ್ಯಾಸ್ಟ್ರಿಕ್ ತೊಂದರೆ ನಿವಾರಣೆಯಾಗುತ್ತದೆ.
೩. ೫ ಚಮಚ ಕಷಾಯ ಕುಡಿದರೆ ಜ್ವರ, ಗಂಟಲು ನೋವು ನಿವಾರಣೆಯಾಗುತ್ತದೆ.
೪. ೧೦ ಗ್ರಾಂ ಬಿಲ್ವದ ಚೂರ್ಣ ಸೇವಿಸಿದರೆ ಭೇದಿ ಮತ್ತು ಹೊಟ್ಟೆ ನೋವು ಶಮನವಾಗುತ್ತದೆ.
೫. ಬಿಲ್ವದ ಎಲೆಗಳನ್ನು ನೀರು ಮಿಶ್ರಿತದಿಂದ ಅರೆದು ಕಣ್ಣುಗಳ ರೆಪ್ಪೆಯ ಮೇಲೆ ಲೇಪನ ಮಾಡಿದರೆ ಒಳ್ಳೆಯ ಪರಿಣಾಮ  ನೀಡುತ್ತದೆ.
೬. ಬೇವಿನ ಮರದ ಚಕ್ಕೆ ಮತ್ತು ಬಿಲ್ವದ ಮರದ ಚಕ್ಕೆ ಎರಡೂ ಸಮಪ್ರಮಾಣದಲ್ಲಿ ಜಜ್ಜಿ ನೀರಿಗೆ ಹಾಕಿ ಕಷಾಯ ಮಾಡಿ ಹಾಲಿನ ಜೊತೆ ಕುಡಿದರೆ ಪಿತ್ತ, ಹುಳಿತೇಗು, ಹೊಟ್ಟೆನೋವು, ಹೊಟ್ಟೆ ಉಬ್ಬರ ಇವೆಲ್ಲವೂ ಕಡಿಮೆಯಾಗುತ್ತವೆ.

  - ಬಿಲ್ವ ಮರದ ತೈಲ, ಬೇರಿನ ಪುಡಿ, ಲೇಹ ಇವುಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಕಷ್ಟ ಆದರೆ ಇಂತಹವು ಹೆಚ್ಚು ಗ್ರಂಧಿಗೆ ಅಂಗಡಿಗಳಲ್ಲಿ ಹೆಚ್ಚು ದೊರೆಯುತ್ತವೆ.




ಬಿಲ್ವ ಮರ ಬೆಳೆಸ ಬಯಸುವವರಿಗೆ ಸೂಕ್ತ ಮಾಹಿತಿ: (ನಮ್ಮ ಪರಿಚಿತರೊಬ್ಬರು ಸುಮಾರು ೨೦ ಮರಗಳನ್ನು ಬೆಳೆಸಿದ್ದಾರೆ ಅವರಿಂದ ಈ ಮಾಹಿತಿ ಪಡೆದೆ) :
೧. ಮರದ ಅಭಿವೃದ್ಧಿ  ಬೇರು ಹಾಗೂ ಬೀಜ ಎರಡರಿಂದಲೂ ಸಾಧ್ಯ. 
೨. ಜೂನ್, ಜುಲೈ ತಿಂಗಳಲ್ಲಿ ಬೀಜ ಬಿತ್ತಬೇಕು. ಬಿತ್ತಿದ ಬೀಜ ನಾಟಿ ಮಾಡಲು ಒಂದು ವರ್ಷದ ಸಮಯ ಬೇಕಾಗುತ್ತದೆ. 
೩. ಬಿಲ್ವದ ಗಿಡವನ್ನು ಮಳೆಗಾಲದಲ್ಲಿ  ನಾಟಿ ಮಾಡಬೇಕು. ನಾಟಿ ಮಾಡುವಾಗ ೧೦ರಿಂದ ೧೩ ಮೀಟರ್‌ಗಳ ಅಂತರ ಇಡಬೇಕಾಗುತ್ತದೆ. ಕಸಿ ವಿಧಾನವಾದ ಗಿಡವಾದರೆ ೫ ವರ್ಷಗಳಲ್ಲಿ  ಹಣ್ಣನ್ನು ನೀಡುತ್ತದೆ. ಬೀಜದ ಮೂಲಕ ಕನಿಷ್ಟ ೮ ವರ್ಷಗಳು ಬೇಕಾಗುತ್ತದೆ.
೪. ಆರಂಭದಲ್ಲೇ ಗೊಬ್ಬರ ಹಾಕಬೇಕು. ವಾರಕ್ಕೊಮ್ಮೆ ನೀರನ್ನು ಹಾಕಿದರೂ ತೊಂದರೆ ಇಲ್ಲ. ಗಿಡ ಬಲಿತ ಮೇಲೆ ಗೊಬ್ಬರವನ್ನು ಹಾಕಿ ಸ್ವಲ್ಪ ನೀರು ಹಾಕಬೇಕಾಗುತ್ತದೆ.
೫. ಮರದ ಎಲೆಗಳನ್ನು ಆಗಸ್ತ್ ತಿಂಗಳಲ್ಲಿ ಕೂಯ್ಲು ಮಾಡುತ್ತರೆ.
೬. ಇದರಲ್ಲಿ ಕಾಯಿ ಹಣ್ಣಾಗಲು ಸುಮಾರು ೮ ರಿಂದ ೧೦ ತಿಂಗಳು ಬೇಕಾಗುತ್ತದೆ.
೭. ಕಾಯಿ ಹಳದಿ ಬಣ್ಣಕ್ಕೆ ಬಂದಾಗ ಕತ್ತರಿಸಿ ಗೋಣಿಚೀಲದಲ್ಲಿಟ್ಟರೆ ಹಣ್ಣಾಗುತ್ತವೆ.  


ಮಾಹಿತಿ: ನನ್ನಿಂದ ಮತ್ತು ಹಲವಾರು ಜನರಿಂದ...  (ಮಾಹಿತಿಯಲ್ಲಿ ತಪ್ಪಿದ್ದಲ್ಲಿ ತಿದ್ದಿ ಮತ್ತಷ್ಟು ತಿಳಿದಿದ್ದರೆ ತಿಳಿಸಿ)

ಚಿತ್ರಗಳು: ಅಂತರ್ಜಾಲ

ಧನ್ಯವಾದಗಳು
ಮನಸು

13 comments:

Ittigecement said...

ಮನಸು....

ಬಹಳ ಉಪಯುಕ್ತ ಮಾಹಿತಿ...

ನಮ್ಮ ಹಿರಿಯರು ಇದರ ಔಷಧಿಯ ಗುಣಗಳ ಜೊತೆಗೆ..
ಆಧ್ಯಾತ್ಮವನ್ನೂ ಬೆರೆಸಿರುವದು ಅವರ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ...

ಇದರ ತಂಬುಳಿ....
ಕಾಯಿ ಚಟ್ನಿ ತುಂಬಾ ಸೊಗಸಾಗಿರುತ್ತದೆ...

ಧನ್ಯವಾದಗಳು ಉಪಯುಕ್ತ ಮಾಹಿತಿಗಾಗಿ... ಜೈ ಹೋ !!

ತೇಜಸ್ವಿನಿ ಹೆಗಡೆ said...

Very Informative article... Thank you..:)

ತೇಜಸ್ವಿನಿ ಹೆಗಡೆ said...

Very Informative article.. Thank you :) As Prakashanna said... We use Bilva leaves for TambuLi.. and Chatni.. :)

ಗಿರೀಶ್.ಎಸ್ said...

ಬಿಲ್ವ ಪತ್ರೆಯನ್ನು ಪೂಜೆಗಷ್ಟೇ ಬಳಸಿ ಗೊತ್ತಿತ್ತು... ಔಷಧಿ ಗುಣಗಳು ಮತ್ತು ಇನ್ನಿತರ ವಿಷಯಗಳ ಬಗ್ಗೆ ತುಂಬ ಒಳ್ಳೆಯ ಮಾಹಿತಿ ಕೊಟ್ಟಿದ್ದಿರಿ... ಮಾಹಿತಿ ಪೂರ್ವಕ ಲೇಖನಕ್ಕೆ ಧನ್ಯವಾದಗಳು ...

Badarinath Palavalli said...

ಬಿಲ್ವಪತ್ರೆ ಬಗ್ಗೆ ಸವಿವರ ಲೇಖನಕ್ಕಾಗಿ ಧನ್ಯವಾದಗಳು.
ನನ್ನಾಕೆ ಬಿಲ್ವಪತ್ರೆ ತಂಬುಳಿ ಮಾಡಿಕೊಡ್ತೀನಿ ಅಂತಿದ್ದಾಳೆ. ತಿಂದು ನೋಡಿ, ಮತ್ತೆ ಕಾಮೆಂಟಿಸುತ್ತೇನೆ.

ದಿನಕರ ಮೊಗೇರ said...

thank you very much for the info.....

nice info...

sunaath said...

ಮನಸು,
ಉಪಯುಕ್ತ ಮಾಹಿತಿಗಾಗಿ ಅನೇಕ ಧನ್ಯವಾದಗಳು.

ಅನಂತ್ ರಾಜ್ said...

ಕಳದೆರಡು ಲೇಖನಗಳೂ ನಿಮ್ಮ ತಾಣದಲ್ಲಿ ತು೦ಬಾ ಉಪಯುಕ್ತ ಮಾಹಿತಿಯನ್ನು ನೀಡಿದೆ. ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು.

ಅನ೦ತ್

ಚುಕ್ಕಿಚಿತ್ತಾರ said...

ಉಪಯುಕ್ತ ಮಾಹಿತಿ.

Pradeep Rao said...

ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಮೇಡಮ್.. ತುಂಬಾ ಚೆನ್ನಾಗಿದೆ!

Subrahmanya said...

ತುಂಬ ಚೆನ್ನಾಗಿ ಬರೆದಿದ್ದೀರಿ. ಮಾಹಿತಿಯನ್ನು ಹಂಚಿಕೊಳ್ಳುವ ನಿಮ್ಮ ಈ ಪರಿ ಇಷ್ಟವಾಯ್ತು.

Anonymous said...

Nice information :)
- Vanitha.

ಜಲನಯನ said...

ಬಿಲ್ ಪತ್ತಾ..ಎನ್ನುವುದಿತ್ತು ನಾವು ಹಳ್ಳಿಲಿ... ಮಾಹಿತಿಯುಕ್ತ ಲೇಖನ ಸುಗುಣ...