Sunday, April 1, 2012

ದಾಸೋಹ ಯೋಗಿ ಶ್ರೀ ಶ್ರೀಗಳು.....

"ಎಷ್ಟೋ ರಾತ್ರಿಗಳು ನಾನು ಬೀದಿ ದೀಪಗಳಿಗೆ ನನ್ನ ಪಾಠ ಒಪ್ಪಿಸಬೇಕಿತ್ತು". ಆದರೆ ಆ ದಿನಗಳು ನನ್ನ ಜೀವನದಲ್ಲಿ ಬರದಂತೆ ಮಾಡಿದ್ದು "ಶ್ರೀಮಠ" - ಹೀಗೆ ಎಷ್ಟೋ ಜನರು ತಮ್ಮ ಮನದಲ್ಲಿ ಕೃತಜ್ಞತೆಯ ಭಾವದಿಂದ ಅನ್ನ, ನಿದ್ರೆ, ವಿದ್ಯೆ, ಜಾಗ ಕೊಟ್ಟು ನಮ್ಮ ನೆಲೆಯನ್ನು ಸಾರ್ಥಕಗೊಳಿಸಿದ ಆ ದೇವರಸ್ಥಾನಕ್ಕೆ ನಮಿಸುತ್ತಲೇ ಇದ್ದಾರೆ.

ವಿದ್ಯಾದಾನ, ದಾಸೋಹ ಇಂತಹ ವಿಶಿಷ್ಟ ಕೈಂಕರ್ಯಗಳನ್ನು ಸುಮಾರು ವರುಷಗಳಿಂದ ನಡೆಸುಕೊಂಡು ಬಂದಿರುವಂತಹ  ಈ ದೇಗುಲ ತುಮಕೂರು ಸಮೀಪದ ಕ್ಯಾತಸಂದ್ರ ಎಂಬಲ್ಲಿ "ಸಿದ್ಧಗಂಗಾ ಮಠ" ಎಂದು ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದಲ್ಲಿ ಬಹಳ ಹಿಂದೆ "ಗೋಸಲಸಿದ್ಧೇಶ್ವರ" ಎಂಬ ಸಿದ್ಧಪುರುಷರು ಹಾಗೂ ಶ್ರೀ ಮಠ ಸ್ಥಾಪಕರು ತಮ್ಮ ತಪೋಬಲದಿಂದ ಗಂಗೆಯ ಉದ್ಭವ ಮಾಡಿಸಿದ್ದರಿಂದ ಈ ಸ್ಥಳಕ್ಕೆ "ಸಿದ್ದಗಂಗೆ" ಎಂದು ಹೆಸರು ಬಂದಿತು. ಮೊದಲು ಸಿದ್ಧಲಿಂಗ ಸ್ವಾಮಿಗಳಿಂದ ಪ್ರಾರಂಭಗೊಂಡ ದಾಸೋಹ ಕಾರ್ಯ ಮುಂದೆ "ಅಟವಿ ಸ್ವಾಮಿಗಳು" ದಾಸೋಹದಿಂದ ವಿದ್ಯಾರ್ಜನೆಗಾಗಿ ಸಂಸ್ಕೃತ ಪಾಠಶಾಲೆಗಳನ್ನು ಪ್ರಾರಂಭಿಸಿದರು. ಅಟವಿ ಸ್ವಾಮಿಗಳ ನಂತರ "ಉದ್ಧಾನ ಶಿವಯೋಗಿಗಳು" ಸಹ ಮತ್ತಷ್ಟು ಅಭಿವೃದ್ಧಿಗೊಳಿಸಿ ಶಿವರಾತ್ರಿ ಹಬ್ಬದ ಸಮಯದಲ್ಲಿ ಜಾತ್ರೆಯನ್ನು ಪ್ರಾರಂಭಿಸಿ ಬಂದುಹೋಗುವ ಭಕ್ತಾದಿಗಳಿಗೆ ವಸತಿ, ಊಟದ ವ್ಯವಸ್ಥೆ ನೀಡುವ ಯೋಜನೆ ಪ್ರಾರಂಭಿಸಿದರು.... ಒಬ್ಬರಾದನಂತರ ಮತ್ತೊಬ್ಬರು ತಮ್ಮದೇ ವಿಶಿಷ್ಠ ರೀತಿಯಲ್ಲಿ ಶ್ರೀ ಕ್ಷೇತ್ರವನ್ನು ಮೆರುಗುಗೊಳಿಸುತ್ತಾ ಬಂದರು. ಉದ್ಧಾನ ಶಿವಯೋಗಿಗಳು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶಿವಣ್ಣ(ಶ್ರೀ ಶ್ರೀ ಶಿವಕುಮಾರ ಸ್ವಾಮಿ) ಎಂಬ ವಿದ್ಯಾರ್ಥಿಯಯನ್ನು ಕಂಡೊಡನೆ ಮುಂದೆ ಸಿದ್ಧಗಾಂಗಾ ಕ್ಷೇತ್ರವನ್ನು ಅತ್ಯುನ್ನತ ಶಿಖರಕ್ಕೆ ಏರಿಸುವರು ಎಂದು ತಿಳಿದಿತ್ತೋ ಏನೋ ಶಿವಣ್ಣ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡರು. ನಂತರದ ದಿನಗಳೇ ಅದ್ಭುತ ವರ್ಣಿಸಲಾಗದಷ್ಟು ಹಿರಿಮೆಯಲ್ಲಿ ಶ್ರೀ ಕ್ಷೇತ್ರ ಬೆಳೆದು ನಿಂತಿತು. 

ಶ್ರೀ ಶಿವಕುಮಾರಸ್ವಾಮಿಗಳು ಮಾಗಡಿಗೆ ಹತ್ತಿರವೇ ಇರುವ ವೀರಾಪುರ ಎಂಬ ಪುಟ್ಟ ಗ್ರಾಮದಲ್ಲಿ ೧೯೦೮ ಏಪ್ರಿಲ್ ೧ರಂದು ಜನಿಸಿದರು. ಪಾಟೀಲ್ ಹೊನ್ನಪ್ಪ ಮತ್ತು ಗಂಗಮ್ಮ ಶಿವಕುಮಾರಸ್ವಾಮಿಗಳ ತಂದೆ ತಾಯಿ. ಇವರು ಪ್ರೇಮರಿ ಶಿಕ್ಷಣವನ್ನು ವೀರಾಪುರ ಮತ್ತು ನಾಗವಲ್ಲಿ ಎಂಬ ಗ್ರಾಮದಲ್ಲಿ ಮುಗಿಸಿ ನಂತರ ಸೆಕೆಂಡರಿ ವಿದ್ಯಾಭ್ಯಾಸವನ್ನು ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವೀಧರರಾದರು.

ಬಸವ ತತ್ವವನ್ನು ಬರಿ ಮಾತಿನಲ್ಲಿ ಹೇಳದೆ ಅದನ್ನೇ ತಮ್ಮ ರೂಢಿಗತವಾಗಿ ಮಾಡಿಕೊಂಡು ಬಂದಿರುವಂತ ಶ್ರೀಗಳು ಮಠದ ಉದ್ಧಾರಕ್ಕಾಗಿ ಹಗಲು ರಾತ್ರಿ ಶ್ರಮಿಸಿದ್ದಾರೆ. ಕಟ್ಟಡ ನಿರ್ಮಾಣದ ಸಮಯದಲ್ಲಿ ತಾವೇ ಇಟ್ಟಿಗೆ, ಕಲ್ಲು ಮಣ್ಣು ಹೊತ್ತು ನೆಡೆಯುತ್ತಿದ್ದು, ತಾವೇ ಎಲ್ಲಾ ಕೆಲಸಗಳಲ್ಲಿ ಕೆಲಸಗಾರರಂತೆ ಕಾರ್ಯ ನಿರ್ವಹಿಸುತ್ತಿದ್ದದ್ದು, ಗದ್ದೆ, ಹೊಲಗಳಲ್ಲಿ ಭತ್ತ ನಾಟಿ ಮಾಡುವುದು ಕಳೆ ಕೀಳುವುದು ಇಂತಹ ಎಷ್ಟೋ ಕೆಲಸಗಳನ್ನು ಸ್ವಆಸಕ್ತಿಯಿಂದ ಮಾಡುತ್ತಿದ್ದನ್ನು ಕಣ್ಣಾರೆ ಕಂಡ ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ ನಮ್ಮ ಕುಟುಂಬದ ಹಲವಾರು ಮಂದಿ ಈಗಲೂ ಹೇಳುತ್ತಾರೆ.  ಶ್ರೀಗಳು ಸುತ್ತಮುತ್ತಲ ಹಳ್ಳಿಗಳಿಗೆ ತೆರಳಿ ದವಸ ದಾನ್ಯ ಎಲ್ಲವನ್ನೂ ವರ್ಷದ ದಾಸೋಹಕ್ಕೆ ದಾನಿಗಳ ಮೂಲಕ ಪಡೆದು ಬಂದದ್ದೂ ಇದೆ. ಈಗಲೂ ಸಹ ಸುತ್ತಮುತ್ತಲ ಹಳ್ಳಿಗಳು ದವಸದಾನ್ಯಗಳನ್ನು ಊರಿನ ಜನರೆಲ್ಲ ಕೂಡಿ ತಂದು ಮಠದಲ್ಲಿ ಕೊಡುವ ವಾಡಿಕೆಯನ್ನೂ ರೂಢಿಸಿಕೊಂಡಿದ್ದಾರೆ.ಸಿದ್ಧಗಂಗಾ ಮಠದಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿದ್ದಾರೆ. ಉದ್ದಾನ ಶಿವಯೋಗಿಗಳು ಅಂದು ಪ್ರಾರಂಭಿಸಿದಾಗ ಕೇವಲ ೨೦೦ ವಿದ್ಯಾರ್ಥಿಗಳಿದ್ದರು ಈಗ ಸುಮಾರು ೧೦,೦೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಲಿದ್ದಾರೆ. ಸುಮಾರು ೧೨೮ ವಿದ್ಯಾಸಂಸ್ಥೆಗಳನ್ನೊಳಗೊಂಡಿದೆ. ಈ ಸಂಸ್ಥೆಗಳು ನರ್ಸರಿಯಿಂದಿಡಿದು ತಾಂತ್ರಿಕ ವಿದ್ಯಾಲಯದವರೆಗೂ ಹಬ್ಬಿವೆ. 

ಅಂದಿನ ಪ್ರಯಾಣದಿಂದ ಇಂದಿನ ಪ್ರಯಾಣದವರೆಗೂ ಬಲು ಸಿಹಿಹೊನಲನ್ನೇ ಸೃಷ್ಟಿಸಿ ಬಂದಿರುವ ಶ್ರೀ ಮಠದ ದೇಗುಲಕ್ಕೆ ಶ್ರೀ ಶಿವಕುಮಾರ ಸ್ವಾಮಿಗಳೇ ದೇವರು ಅವರಲ್ಲಿರುವ ಗುರುಭಕ್ತಿ, ನಿಸ್ವಾರ್ಥತತೆ, ದೇವರ ಶಕ್ತಿ ಎಲ್ಲವೂ ಹಲವು ಕೆಲಸಗಳಿಗೆ ಸಕಾರಗೊಳಿಸಿದೆ. ಮಠದಲ್ಲಿ ಅಷ್ಟೇ ಶಿಸ್ತುಬದ್ಧತೆಯನ್ನು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಲ್ಲೂ ಕಲಿಸುತ್ತಾ ಬಂದಿದ್ದಾರೆ. ಬೆಳಗ್ಗೆ ಸುಮಾರು ೫ ಗಂಟೆ ಬೆಳಗಿನ ಜಾವ ತಣ್ಣೀರು ಸ್ನಾನಮುಗಿಸಿ ೬ಗಂಟೆಗೆ ನೆಡೆಯುವ ಸಾಮೂಹಿಕ ಪ್ರಾರ್ಥನೆ ನಂತರ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಸಂಸ್ಕೃತ ಪಾಠ, ಆನಂತರ ಶಾಲೆಗೆ ಹೋಗುವ ಪರಿಪಾಠವನ್ನೆಲ್ಲ ಕಲಿಸಿದ್ದಾರೆ. ಅದೇ ರೀತಿ ಸಂಜೆ ೬ಗಂಟೆ ಸಾಮೂಹಿಕ ಪ್ರಾರ್ಥನೆಯೂ ಸಹ ಜರುಗುತ್ತದೆ. ಬೆಳ್ಳಗ್ಗೆ ಮತ್ತು ಸಂಜೆ ಜರುಗುವ ಪ್ರಾರ್ಥನೆಯಲ್ಲಿ ಶಿವಕುಮಾರ ಸ್ವಾಮಿಗಳು ಭಾಗಿಗಳಾಗಿ ಮಕ್ಕಳಿಗೆ ದಿನವೂ ಒಂದೂಂದು ನೀತಿಕಥೆಯನ್ನು ಹೇಳುತ್ತಲೇ ಬಂದಿದ್ದಾರೆ. ಮಕ್ಕಳಿಗೆ ವಸತಿ, ಊಟ, ವಿದ್ಯೆ ಕಲ್ಪಿಸಿದರೆ ಸಾಲದು ಉತ್ತಮ ಮಾನವೀಯ ಪ್ರಜೆಗಳನ್ನಾಗಿ ಬೆಳೆಸಬೇಕು ಎಂಬುದು ಶ್ರೀಗಳ ಧ್ಯೇಯ.

ಅಂದಿನಿಂದ ಇಂದಿಗೂ ಕೊಪ್ಪರಿಗೆಗಳಲ್ಲಿ ಅಡಿಗೆ ತಯಾರಿ ಸಾಂಘವಾಗಿ ಜರುಗುತ್ತಲೇ ಇರುತ್ತದೆ. ಪ್ರತಿನಿತ್ಯ ಶ್ರೀಗಳು ಭೇಟಿ ನೀಡಿ ಪ್ರತಿಯೊಂದನ್ನೂ ಪರಿಶೀಲಿಸಿ ಬಂದಿರುವ ಭಕ್ತಾದಿಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಅಡುಗೆ ಒಲೆ ಎಂದು ಉರಿಯಲು ಪ್ರಾರಂಭಿಸಿತೋ ಈಗಲೂ ಅದೇ ಮಂದಹಾಸದಲ್ಲಿ ಸಾವಿರಾರು ಜನರಿಗೆ ಪ್ರಸಾದವನ್ನು ನೀಡುತ್ತಲೇ ಬಂದಿದೆ. ಕಾಯಕವೇ ಕೈಲಾಸ ಎಂದು ನಂಬಿರುವ ಶ್ರೀಗಳು ತಮ್ಮ ದಿನನಿತ್ಯ ನಿದ್ರೆಮಾಡುವುದು ರಾತ್ರಿ ೧೧ರಿಂದ ಬೆಳಗಿನ ಜಾವ ೨ರವರೆಗೆ ಮಾತ್ರ. ಅವರು ಬೆಳ್ಳಗಿನ ಜಾವ ೨ರಿಂದ ೩ಗಂಟೆಯವರೆಗೆ ಓದುತ್ತಾರೆ. ೩ರಿಂದ ೩.೩೦ರವರೆಗೆ ಸ್ನಾನ, ೩.೩೦ರಿಂದ ೫.೩೦ರವರೆಗೆ ಧ್ಯಾನ,ಪೂಜೆ,ಭಜನೆ ಇತ್ಯಾದಿಗಳನ್ನು ಮುಗಿಸಿ ಬೆಳಗಿನ ಉಪಹಾರ ನಂತರ ಮಕ್ಕಳ ಪ್ರಾರ್ಥನೆಯಲ್ಲಿ ಭಾಗಿಯಾಗುತ್ತಾರೆ. ನಂತರ ಶ್ರೀಗಳ ದರುಶನಕ್ಕೆ ಬಂದಿರುವ ಭಕ್ತಾದಿಗಳ ಭೇಟಿ, ಮನೆಗಳಲ್ಲಿ ಪೂಜಾವಿಧಿವಿಧಾನಗಳಿಗೆ ತೆರಳುತ್ತಾರೆ ಸಂಜೆ ೮ರಿಂದ ರಾತ್ರಿ ೧೧ರವರೆಗೆ ತತ್ವಜ್ಞಾನಿಗಳ ಭಂಡಾರಗಳ ಓದುವುದು ಅವರ ಹವ್ಯಾಸ. ಕಲಿಯುಗ ತಪಸ್ವಿಗೆ ಭಕ್ತವೃಂದ ಎಲ್ಲೆಲ್ಲೂ ಹರಡಿದೆ ಅಂತೆಯೇ ಭಕ್ತಿ ಮನೆಮಾಡಿಸಿದ ಶ್ರೀಗಳಿಗೆ ಭಕ್ತವೃಂದ ನೆಡೆದಾಡುವ ದೇವರು, ಕಾಯಕ ಯೋಗಿ, ಕಲಿಯುಗ ದೇವರು ಎಂದು ಪೂಜಿಸುತ್ತಲೇ ಬಂದಿದ್ದಾರೆ. ಮಹಾಸ್ವಾಮಿಗಳನ್ನು ಭಕ್ತರು "ಬುದ್ದಿ" ಎಂದೇ ಕರೆಯುವ ವಾಡಿಕೆ. ಮಹಾಸ್ವಾಮಿಗಳ ಕಾಯಕ, ದಾಸೋಹ ಸೇವೆಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದಾರೆ. ಇಂತಹ ಮಹಾನ್ ಶಿವಯೋಗಿಗಳ ಪೂಜಾಕೈಂಕರ್ಯಗಳನ್ನು ನಾವು ಸದಾ ನೋಡುತ್ತಲೇ ಬಂದಿದ್ದೇವೆ ಅವರ ಚಟುವಟಿಕೆ ನಿಜಕ್ಕೊ ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುವುದಂತೂ ಸತ್ಯ. ಶ್ರೀಗಳಿಗೆ ಮೌನವೇ ಆಭರಣ, ಕೆಲಸ-ಕಾರ್ಯಗಳೇ ಭೂಷಣ ಎಂಬಂತೆ ಅಂದಿನಿಂದ ಇಂದಿಗೂ ಶ್ರೀಮಠವನ್ನು ಬೆಳಗುತ್ತಲೇ ಬಂದಿದ್ದಾರೆ.... ಬೆಳಕಿನ ಜ್ಯೋತಿ ಸದಾ ಎಲ್ಲರ ಬಾಳನ್ನು ಬೆಳಗುತ್ತಲಿರಲಿ ಎಂದು ಆಶಿಸುತ್ತೇವೆ.  

ಇಂದಿಗೂ ಚುರುಕು ಕಣ್ಣೋಟ, ಸ್ವಚ್ಚಮಾತು, ದಿಟ್ಟ ನೆಡೆ.... ಹೊಂದಿರುವ ಕಾಯಕ ಯೋಗಿ ಈಗಷ್ಟೆ ೧೦೫ ರ ಹರಯದಲ್ಲಿದ್ದಾರೆ ಇಂತಹ  ಮಹಾನ್ ಯೋಗಿ ಸದಾ ನಮ್ಮೊಂದಿಗಿರಲಿ....ಶ್ರೀಗಳ ಬಗ್ಗೆ ಬರವಣಿಗೆ ಅಥವಾ ಮಾತಿನಲ್ಲಿ ಹೇಳಲಾರದಷ್ಟು ಅತಿ ಎತ್ತರಕ್ಕೆ ಬೆಳೆದಿರುವುದಕ್ಕೆ ಉದಾಹರಣೆ ಸಿದ್ಧಗಂಗೆ ಕ್ಷೇತ್ರ ಬೆಳೆದು ನಿಂತಿರುವುದೇ ಸಾಕ್ಷಿ.  


ಮಾಹಿತಿ: ನನ್ನ ತಂದೆ ಶ್ರೀಮಠದ ವಿದ್ಯಾರ್ಥಿ, ಅವರೇ ಹೆಚ್ಚು ನನಗೆ ಶ್ರೀಮಠದ ಬಗ್ಗೆ ಹೇಳಿದ್ದರು... 

ಪೋಟೋ: ಮನಸು

9 comments:

sunaath said...

ಪೂಜ್ಯ ಸ್ವಾಮಿಗಳ ಅನ್ನದಾಸೋಹ ಹಾಗು ಜ್ಞಾನದಾಸೋಹ ಅನೇಕರ ಕೈಹಿಡಿದು ನಡೆಸಿವೆ. ತಮ್ಮ ಲೇಖನಕ್ಕಾಗಿ ಧನ್ಯವಾದಗಳು.

Badarinath Palavalli said...

ಶ್ರೀ ಶ್ರೀಗಳ ಕುರಿತಾದ ಅತ್ಯುತ್ತಮ ಲೇಖನವಿದು.

ನೂರ ಐದರಲ್ಲೂ ಬಳಲದ ಅವರ ದುಡಿಮೆ ಮತ್ತು ಧೀಶಕ್ತಿ ನಮಗೆಲ್ಲ ಆಗಲಿ ಸ್ಫೂರ್ತಿ.

ನನ್ನ ಬ್ಲಾಗಿಗೂ ಸ್ವಾಗತ.

ಜಲನಯನ said...

ಸುಗುಣ, ಅನ್ನದಾನ-ಜ್ಞಾನದಾನ ಎರಡೂ ಎಂತಹ ಉನ್ನತ ಕಾರ್ಯಗಳು... ಇದನ್ನ ನಿರಂತರ ಮಾಡಿಕೊಂಡು ಬರುತ್ತಾ ಜಾತಿಭೇದವಿಲ್ಲದೇ ಮುನ್ನಡೆಸಿರುವುದು ನಿಜಕ್ಕೂ ಇವರಿಗೆ ನಡೆದಾಡುವ ದೇವರು ಎನ್ನುವುದು ಸಾರ್ಥನಾಮ....ಲೇಖನ ಚನ್ನಾಗಿದೆ.

ಪ್ರವರ ಕೆ ವಿ said...

ಆ ಮಹಾತ್ಮರ ಬಗೆಗಿನ ಲೇಖನ, ಇನ್ನಷ್ಟು ತಿಳಿಯಲು ಸಹಕಾರಿಯಾಗಿತು...... ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು....

ಪ್ರವರ ಕೆ ವಿ said...

ಆ ಮಹಾತ್ಮರ ಬಗೆಗಿನ ಲೇಖನ, ಇನ್ನಷ್ಟು ತಿಳಿಯಲು ಸಹಕಾರಿಯಾಗಿತು...... ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು....

Swarna said...

ನಡೆದಾಡುವ ದೇವರಬಗ್ಗೆ ಚೆನ್ನಾಗಿ ಬರೆದಿದ್ದೀರಿ ಮೇಡಂ.
ಸ್ವರ್ಣಾ

Mohan Kumar Gowda said...

ನಾನು ಓದಿ ಬೆಳೆದ ಮಠ ಮತ್ತು ಗುರುಗಳ ಬಗ್ಗೆ ಕೇಳಿ ಮನಸ್ಸಿಗೆ ಹಿತವೆನಿಸಿತು. ನನ್ನ ಶಾಲೆಯ ದಿನಗಳನ್ನು ಜ್ಞಾಪಿಸಿದ್ದಕ್ಕಾಗಿ ನಾ ನಿಮಗೆ ಚಿರಋಣಿ. ಧನ್ಯವಾದಗಳು..

Mohan Kumar Gowda said...

ನಾನು ಓದಿ ಬೆಳೆದ ಮಠ ಮತ್ತು ಗುರುಗಳ ಬಗ್ಗೆ ಕೇಳಿ ಮನಸ್ಸಿಗೆ ಹಿತವೆನಿಸಿತು. ನನ್ನ ಶಾಲೆಯ ದಿನಗಳನ್ನು ಜ್ಞಾಪಿಸಿದ್ದಕ್ಕಾಗಿ ನಾ ನಿಮಗೆ ಚಿರಋಣಿ. ಧನ್ಯವಾದಗಳು.

Badarinath Palavalli said...

ಒಳ್ಳೆಯ ಬ್ಲಾಗ್ ಪೋಸ್ಟ್ ಮತ್ತೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.