Tuesday, August 28, 2012

ಮೂಕ ಮನಸು ಪ್ರೀತಿಸುತಿದೆ.. ಪ್ರೀತಿಸುತಿದೆ...!!!


ಮರುಭೂಮಿಯ ಬಿಸಿಲು ತಾಳಲಾರದೆ ರಜೆಗೆ ಬೆಂಗಳೂರಿಗೆ ವರ್ಷಗಳ ಹಿಂದೆ ಹೋಗಿದ್ದೆ. ಊರಲ್ಲಿ ಮನೆಗೆ ಹೊಸ ಅತಿಥಿ ಬಂದಿದ್ದ. ಏನ್ ಪ್ರೀತಿ, ಅಂತೀರಾ ಇವರು ಯಾರೋ ಗೊತ್ತೇ ಇಲ್ಲ, ಯಾರು ಬೇಕು ನಿಮ್ಗೆ.? ಯಾಕೆ ಬಂದಿರಿ? ಅಂತ ಕೇಳಲೇ ಇಲ್ಲ. ಅಮ್ಮ ಬೇರೇ ಅವನಿಗೆ ರೇಗ್ತಾ ಇದಾರೆ..!! ಏನೋ? ನೀನು, ಇವಳು ಯಾರು ಅಂತ ಗೊತ್ತಾ, ಹಂಗೆ ಹೇಗೆ ಒಳಗೆ ಬಿಟ್ಟೆ..?? ಯಾರಾದ್ರು ಬಂದ್ರೆ ಹೆಂಗೆ ತರಾಟೆ ತಗೋತೀಯಾ. "ಇವತ್ತೇನು ಹೀಗೆ ಸ್ವಾಗತ ಕೋರುತ್ತಿದ್ದೀಯ" ಇದೆಲ್ಲವನ್ನು ರಾಮು ಕೇಳಿಸಿಕೊಳ್ಳುತ್ತ ನನ್ನ ಸುತ್ತ ಓಡಾಡ್ತನೇ ಇದ್ದ. "ನಾನು ಈ ಮನೆಯವಳೇ ಅಂತ ಅವನಿಗೂ ಗೊತ್ತು" ನನ್ನ ನೋಡಿಲ್ಲದಿದ್ದ್ರೇ ಏನು?, ಅಮ್ಮನಿಗೆ ಹೀಗೆ ಸಮಜಾಯಿಸಿ ಕೊಡುವುದರ ಜೊತೆಗೆ ಹೊಸ ಅತಿಥಿ ನನ್ನ ಸ್ನೇಹಿತನಾಗಿದ್ದ.

ಆ ಒಂದು ತಿಂಗಳು ರಜೆಯಲ್ಲಿ ಬೆಂಗಳೂರಿನಲ್ಲಿದ್ದಾಗ, ಸುಮಾರು ಎಂಟತ್ತು ದಿನಗಳು ಮಾತ್ರ ಆ ಸ್ನೇಹಿತನ ಜೊತೆ ಮಾತನಾಡುತ್ತ, ಅವನಿಗೆ ಬೇಕಾದ ಬಿಸ್ಕತ್ತು, ಬನ್ನು, ಬ್ರೆಡ್ ಕೊಡುಸ್ತಾ ಇದ್ದೆ. ಅವನೂ ಸಹ ಖುಷಿ ಖುಷಿಲಿ ತಿಂದು ನನ್ನ ಹಿಂದೆನೇ ಓಡಾಡ್ತಾ ಇದ್ದ. ಇನ್ನು ನನ್ನ ಮಗನಿಗೆ ರಾಮು ತುಂಬಾ ಆತ್ಮೀಯ, ಕಾರಣ ಅದನ್ನು ಮನೆಗೆ ಕರೆದುಕೊಂಡು ಬಂದಿದ್ದೇ ಅವನು ಮತ್ತು ನನ್ನ ಅಣ್ಣನ ಮಗ. ಇನ್ನು ನನ್ನ ಜೊತೆ ದೋಸ್ತಿ ಕೇಳಬೇಕ ಮಗನ ರೆಕಮೆಂಡೇಷನ್ ಬೇರೇ ಇತ್ತು, ಅದಕ್ಕೆ ತಕ್ಕಂತೆ ನಮ್ಮಿಬ್ಬರ ಆತ್ಮೀಯತೆಯೂ ಜಾಸ್ತಿ ಆಗಿತ್ತು.

ಹುಫ್...!! ಮುಗಿತಾ ಇದೇ ರಜೆ. ನಾಳೆ ನಮ್ಮ ಗಂಟುಮೂಟೆ ಕಟ್ಟಬೇಕು ಮನೆನಲ್ಲಿ ಎಲ್ಲಾ ನಮ್ಮ ಲಗೇಜ್ ಪ್ಯಾಕ್ ಮಾಡ್ತಾ ಇದ್ದಾರೆ. ನಮ್ಮ ಈ ಸ್ನೇಹಿತ ಯಾಕೋ ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತಾ ಇದಾನೆ, ಎಲ್ಲರನ್ನು ನೋಡ್ತಾನೇ ಸುಮ್ಮನೇ ಇದ್ದಾನೆ, ಮಾತಿಲ್ಲ ಕತೆ ಇಲ್ಲ, ಮೌನ ಸಂಭಾಷಣೆ ನೆಡೆದಿತ್ತು. ಇತ್ತ ಬೆಳ್ಳಂ ಬೆಳ್ಳಿಗ್ಗೆ ನಮ್ಮ ಗಂಟುಮೂಟೆಗಳು ಕಾರಿನಲ್ಲಿ ಕುಳಿತಿವೆ. ಇವನು ಅದೇ ನನ್ನ ಸ್ನೇಹಿತ "ರಾಮು" ಸುಮ್ಮನೆ ಇರಲಾರದೇ ಮಹಡಿ ಮೇಲಿಂದ ಚಂಗನೆ ನೆಗೆದು ಕಾರಿನ ಸುತ್ತ ಪ್ರದಕ್ಷಿಣೆ ಹಾಕಿ, ಲಗೇಜ್ ಎಲ್ಲವನ್ನು ಮೂಸಿ ನೋಡಿದ್ದೇ ತಡ ಕಾರಿನ ಒಳಗೆ ಓಡೋಗಿ ಕುಳಿತುಬಿಟ್ಟ!!. ನನ್ನ ಕಳಿಸಲು ಬಂದವರೆಲ್ಲಾ "ಬಿಟ್ಟ ಕಣ್ಣು ಬಿಟ್ಟಂತೆ " ನೋಡ್ತಾ ಇದ್ದಾರೆ... "ನೋಡಿದ ಇದನ್ನ??", "ನೆನ್ನೆ ಮೊನ್ನೆ ನೋಡಿದೋಳನ್ನ ಇಷ್ಟು ಇಷ್ಟಪಡ್ತಿದೆ". ಹೀಗೆ ಒಬ್ಬರಿಗೊಬ್ಬರು ಮಾತಾಡ್ತಾ ಇದ್ದಾರೆ. ನಾನು ಇನ್ನೇನು ಹೊರಡಬೇಕು ಅಲ್ಲೇ ಇದ್ದ ಬೇಕರಿಯಿಂದ ಬನ್ನು ತಂದು ರಾಮು ಬಾರೋ ತಗೊಳ್ಳೋ ಎಂದು ಕರೆದರೆ ಬರಲೇ ಇಲ್ಲ, ಕಾರಿಂದ ಇಳಿಯದವನನ್ನು ಬಲವಂತವಾಗಿ ಹೊರಗೆ ಕರೆದು ಬನ್ನು ಕೊಟ್ಟರೆ ಮೂಸಿ ನೋಡ್ತಾನೇ ಬಾಯಿ ಮಾತ್ರ ತೆರೆಯುತ್ತಿಲ್ಲ, ಯಾಕೋ, ತಿನ್ನೋ?? ಎಂದು ಅಲ್ಲೇ ಕಲ್ಲಿನ ಮೇಲಿಟ್ಟೆ. ತಿನ್ನದೆ ನನ್ನ ಹಿಂದೆಯೇ ಬರ್ತಾ ಇದ್ದಾನೆ!! ಬೇಡ ರಾಮು ಹೋಗು, ಬರ್ತಾ ಇರ್ತೀನಿ ವರ್ಷಕೊಮ್ಮೆ ಆಯ್ತಾ ಎಂದು ಮುಖ ನೋಡಿದ್ರೆ ಅವನ ಆ ಕಪ್ಪು-ಬಿಳುಪಿನ ಕಣ್ಣ ರೆಪ್ಪೆ ಒದ್ದೆಯಲ್ಲಿತ್ತು.... ಏನೂ ಮಾತಾಡೋಕ್ಕೇ ಆಗ್ತಿಲ್ಲ ಅವನಿಗೆ. "ಮಾತು ಬರುವ ಹಾಗಿದ್ದರೆ ಚೆನ್ನಾಗಿತ್ತು ಕಣೋ", ’ನಿನ್ನ ಭಾವನೆಯನ್ನ ನನ್ನ ಜೊತೆ ಹಂಚಿಕೊಳ್ಳಬಹುದಿತ್ತು ಎಂದುಕೊಳ್ಳುತ್ತ ನನ್ನ ಮನಸ್ಸು ಒದ್ದೆಯಾಗಿತ್ತು’. ಇವನಿಗೆ ನಾನೇನು ಅಂತ ಸೇವೆ ಮಾಡಿಲ್ಲ ಅದೇಕೋ ಅಂದು ನನ್ನ ಬೀಳ್ಕೊಡುವಾಗ ತೋರಿದ ಪ್ರೀತಿ ನನ್ನ ಮನದ ಪುಟದಲ್ಲೇ ಉಳಿದುಬಿಟ್ಟಿತು..


"ರಾಮು"  ನಮ್ಮ ಮನೆಯ ನಾಯಿಮಹರಾಜ ಏನೋ ಒಂದು ತರ ಪ್ರೀತಿ ಈಗಲೂ ಮನೆಗೇನಾದರು ಫೋನ್ ಮಾಡಿದರೆ  ಒಮ್ಮೊಮ್ಮೆ ಅಪ್ಪನೋ ಅಮ್ಮನೋ ಯಾರಾದರು ಬೇರೆಯವರಿಗೆ ನೋಡು ಸುಗುಣ ಫೋನ್ ಮಾಡಿದ್ದಾಳೆ ಎಂದಾಗ ನನ್ನ ರಾಮು ಬೊಗಳಿದ್ದು ಕೇಳಿಸಿಕೊಂಡಿದ್ದೀನಿ.. ಆ ಬೊಗಳುವಿಕೆಯಿಂದಲೇ ಹೇಗಿದ್ದೀರಾ ಎಂದು ಕೇಳುವ ಹಾಗಿರುತ್ತೆ.. ಇದು ನನ್ನ ಬ್ರಾಂತೋ ಅಥವಾ ನಿಜವಾಗಿಯೂ ನನ್ನ ರಾಮು ನಮ್ಮ ನೆನಪಿಟ್ಟಿದ್ದಾನೋ ಗೊತ್ತಿಲ್ಲ.... ಆದರೆ ಫೋನ್ ಮಾಡಿದಾಗ ಈ ಅನುಭವ ಎಷ್ಟೋ ಬಾರಿ ನನಗಾಗಿದೆ......  ಪ್ರತಿದಿನ ಮನೆಮಂದಿ ನೆನಪಾಗ್ತಾರೋ ಇಲ್ಲವೋ ಆದರೆ ಈ ರಾಮು ಮಾತ್ರ ಪ್ರತಿಕ್ಷಣ ನೆನಪಾಗ್ತಾನೆ... 

ಪ್ರತಿ ವರ್ಷದ ಕಥೆಯಂತೆ ಕಳೆದ ತಿಂಗಳು ರಜೆಗೆ ಹೋದಾಗಲೂ ಅದೇ ಪ್ರೀತಿ ಅದೇ ಸ್ನೇಹ... ಬದಲಾವಣೆಯೇ ಇಲ್ಲದಂತ ನೋಟ-ಒಡನಾಟ. ಈ ಬಾರಿ ಬೆಂಗಳೂರನ್ನು ಬಿಡುವಾಗ ಬೆಳಗಿನ ಜಾವ ೩.೩೦ಕ್ಕೆ ಮನೆಯಿಂದ ಹೊರಟೆವು ಅಷ್ಟೊತ್ತಿನಲ್ಲಿ ಮಹಡಿಯ ಮೇಲೆ ಎಲ್ಲೋ ಮಲಗಿದ್ದವ ಜಂಗನೇ ಬಂದು ಬಿಟ್ಟ... ರಾಮನನ್ನು ಕಂಡ ಮನೆಯವರೆಲ್ಲಾ "ಎಲ್ಲರಿಗೂ ಹೇಳಿ ಹೊರಟೆ ರಾಮುಗೆ ಹೇಳಿದ್ದಾ..??" ನೋಡು ಆದರೂ ಅವನೇ ಎದ್ದು ಬಂದಿದ್ದಾನೇ ನಿಮ್ಮನ್ನ ಕಳುಹಿಸಿಕೊಡಲು ಎಂದು ಹೇಳಿದಾಗ ಮನಸ್ಸು ಏಕೋ ..ಏನೋ..ಎಂತದೋ ಭಾವನೆಯಲ್ಲಿತ್ತು ಹೇಳೋಕ್ಕೆ ಆಗ್ತಿಲ್ಲ..!!  ಹಾಗೇ ಅದೇ ಭಾವನೆಯಲ್ಲಿ ಹೊರಟ ನಮ್ಮನ್ನು ಬಹುದೂರ ಕಾರನ್ನು ಹಿಂಬಾಲಿಸಿ ಓಡಿ ಬರುತ್ತಿದ್ದವನನ್ನು... ಕಣ್ಣು ಮಬ್ಬಾಗುವರೆಗೂ ಅವನನ್ನೇ ದಿಟ್ಟಿಸಿ ನೋಡಿದೆ.....  


ರಾಮು.. ನನ್ನ ಪ್ರೀತಿಯ ರಾಮು... 

13 comments:

ಸಂಧ್ಯಾ ಶ್ರೀಧರ್ ಭಟ್ said...

ಮುದ್ದಿನ ನಾಯಿ ಬಗ್ಗೆ ಓದುತ್ತಿದ್ದರೆ ನನಗೂ ನನ್ನ "ಚಂಗುವಿನ" ನೆನಪು ಬಂತು. ಅಮ್ಮ ಟೀ ಮಾಡುವ ಹೊತ್ತು. ಸಂಡಿಗೆಯ ಆಸೆಗಾಗಿ ಅಮ್ಮನ ನೋಡುತ್ತಾ ಅಡುಗೆ ಮನೆ ಬಾಗಿಲಲ್ಲಿ ಕಾಯುತ್ತಿರಬೇಕು ಈ ಹೊತ್ತಲ್ಲಿ... ಚಂದ ಚಂದ ಬರಹ .. ನನ್ನದೊಂಚೂರು ಪ್ರೀತಿಯನ್ನೂ ನಿಮ್ಮ ರಾಮುವಿಗೆ ತಲುಪಿಸಿ

ಅರವಿಂದ್ said...

ರಾಮು ನಿಜಕ್ಕೂ ಅಭಿನಂನಾರ್ಹ, ಮೂಕ ಪ್ರಾಣಿಗಳಿಗಿರುವ ವಾತ್ಸಲ್ಯ ನಮಗಿರುವುದಿಲ್ಲ, ಸುಗುಣ ಟೀಚರ್ :-)

Shashi jois said...

ಚೆನ್ನಾಗಿದೆ ರಾಮು ಕತೆ...ನಂಗೂ ಕಣ್ಣಲ್ಲಿ ನೀರು ಬಂತು ಸುಗುಣ......
ಮೂಕ ಪ್ರಾಣಿಗಳೇ ಹಾಗೆ ಬೇಗ ಹಚ್ಚಿ ಕೊಳ್ಳುತ್ತವೆ.ಅಷ್ಟೇ ಪ್ರೀತಿ ಮಾಡ್ತಾವೆ ಅಲ್ವ.......
ನನ್ನ ಮೈದುನನ ಮನೆ ನಾಯಿ ಫೋನ್ ನಲ್ಲಿ ನನ್ನ ಸ್ವರ ಕೇಳಿದ್ರೆ ಕೂಗುತ್ತೆ ......

ದಿನಕರ ಮೊಗೇರ said...

super...nimma pritiya raamu kathe chennaagide....

Guru Prasada said...

ಕೆಲವು ವರ್ಷಗಳ ಹಿಂದೆ ಆಡು ಸಾಕಿದ್ದಾಗ ನಾನು ಇಂತದೇ ಆಳವಾದ ಬಂಧನದಲ್ಲಿದ್ದು ಒಮ್ಮೊಮ್ಮೆ ಅವುಗಳೆದುರು ನನ್ನ ನೋವುತೋಡಿಕೊಳ್ಳುತ್ತಿದ್ದುದು ನೆನಪಾಯ್ತು

ನಂದಿನಿ ಶಿವಪ್ರಕಾಶ್ said...

ಹಾಯ್ ಅಕ್ಕ , ನಿಮ್ಮ ಲೇಖನವನ್ನು ಮೊದಲ ಬಾರಿ ಓದಿದೆ ತುಂಬಾನೇ ಇಷ್ಟ ಆಯಿತು, ನಿಮ್ಮ ಲೇಖನದಲ್ಲಿ ಮೂಕ ಪ್ರಾಣಿಯ ಅಂತರಾಳದ ಭಾವನೆಯನ್ನು ಬಹಳ ಹೃದಯಸ್ಪ್ರಶಿಯಾಗಿ ವ್ಯಕ್ತ ಪಡಿಸಿದ್ದೀರ .ಅಲ್ಲದೆ ನಿಮ್ಮ ಲೇಖನದಲ್ಲಿ ತುಂಬಾನೇ ಇಷ್ಟ ಆಗಿದ್ದು ಅಂದ್ರೆ ರಾಜು ನೀವು ಊರಿಗೆ ಹೋಗುವಾಗ ಅವನು ನಿಮ್ಮನು ಬಿಡದೆ ಹಿಂಬಾಲಿಸಿದ್ದು ,ನಿಜಕ್ಕೂ ಸುಂದರವಾಗಿ ವರ್ಣಿಸಿದ್ಧೀರಿ .

Badarinath Palavalli said...

ನಾಯ್ಯೇ ಹಾಗೆ ಅದು ಮನುಜನ ಸಾಕು ಪ್ರಾಣಿ. ಅದರ ಪ್ರೀತಿಯ ಅನನ್ಯತೆ ನಾನೂ ಅನುಭವಿಸಿದ್ದೇನೆ.

ನನ್ನ ಮೊದಲ ನಾಯಿ ಚಿನ್ನು, ನಂತರ ಕರಿಯ ಅಲೆಕ್ಸ್ ಎರಡನ್ನೂ ನಾನಿನ್ನೂ ಮರೆತಿಲ್ಲ.

ಒಳ್ಳೆಯ ಬರಹ ಕೊಟ್ಟಿರಿ, ಆದರೂ ಈ ನಡುವೆ ಕಡಿಮೆ

Ittigecement said...

ಮನಸು....

ನನಗೂ ನಮ್ಮ ಮುದ್ದಿನ "ಸೋನು" ನೆನಪಾಗಿ ಕಣ್ಣೆಲ್ಲ ಒದ್ದೆಯಾಯಿತು...
ಅದು ಈಗಿಲ್ಲ...

ಮೂಕಪ್ರಾಣಿಗಳ ಪ್ರೀತಿಯೇ ಹೀಗೆ...

ತುಂಬಾ ಸುಂದರ ಬರಹ....

Srikanth Manjunath said...

ಭಾಷೆಯ ಬಂಧನ ಮೂಕಜೀವಿಗಳಿಗೆ ಬೇಕಿಲ್ಲ..ಅವಕ್ಕೆ ಬೇಕಾಗಿರುವುದು ಪ್ರೀತಿ ವಿಶ್ವಾಸ..ಒಂದು ಗ್ರಾಂ ಪ್ರೀತಿಗೆ...ಟನ್ಗಟ್ಟಲೆ ಕೊಡುವ ತಾಕತ್ ಆ ಜೀವಿಗಳಿಗೆ ಇದೆ..ನಿಮ್ಮ ಲೇಖನ ಒಮ್ಮೆ ಹಾಗೆ ಭಾವನಾತ್ಮಕವಾದ ಆ ಕಲ್ಮಶ ಇರದ ಜೀವಿಗಳ ಲೋಕದಲ್ಲಿ ಸುತ್ತು ಬಂದ ಅನುಭವ ಕೊಡುತ್ತದೆ...ಸುಂದರ..

sunaath said...

ಮೂಕಪ್ರಾಣಿಗಳಿಗೂ ಮನುಜರಿಗೂ ಅದೇನು ಅನುಬಂಧವೋ ಎಂದು ಅಚ್ಚರಿಯಾಗುತ್ತದೆ.

Ashok.V.Shetty, Kodlady said...

ನಾಯಿ ಪ್ರೀತಿಯನ್ನು ನಾನು ಅನುಭವಿಸಿದ್ದೇನೆ. ನಿಮ್ಮ ರಾಮುವಿನ ಬಗ್ಗೆ ಓದಿದಾಗ ನಮ್ಮ ಮನೆಯ 'ರಾಮು' (ಅವನ ಹೆಸರು ರಾಮು ಇತ್ತು) ನೆನಪಿಗೆ ಬಂದ. ಚೆನ್ನಾಗಿದೆ ಬರಹ....

Unknown said...

ಮೂಕ ಹಕ್ಕಿಯ ಮೌನದ ವೇದನೆಯ ಕಂಡು
ಕಂಗಳ ಅಂಗಳದಿ ಹನಿಯೊಂದು ಮೂಡಿದೆ
ಮನದ ಅಂಕಣದಿ ಮೌನವೇ ತುಂಬಿದೆ
ಅಂತಃಕರಣವದು ನೀನಾರಿಗಾದೆಯೋ ಎಂದು ಚೀರಿದೆ

ನಿಮ್ಮ ಲೇಖನದಿಂದ ನನ್ನ ಮನದ ಆಲದಲೆಲ್ಲೋ ಒಂದು ರೀತಿಯ ಭಾವುಕತೆಯ ಹೊಸ ಸ್ಪರ್ಶ ಹುಟ್ಟಿಕೊಂಡಿದೆ, ನನ್ನ ಮನಗೆದ್ದ ರಾಮುವಿಗೊಂದು ಸಲಾಂ

Sudeepa ಸುದೀಪ said...

ಕಣ್ಣು ಒದ್ದೆಯಾಗುವ ಬರಹ... ನಿಜ...ಮಾತಾಡ್ಲಿಕ್ಕೆ ಬರದಿದ್ದರೂ ಈ ಪ್ರಾಣಿಗಳ...ಪ್ರೀತಿ ತುಂಬಾ ಕಾಡುತ್ತವೆ...