Tuesday, September 18, 2012

ನೆನಪಾಗ್ಯಾದಾ...!!!


ಕಳೆದ ಬಾರಿ ತವರಿಗೆ ಬಂದಿದ್ದ ಗಣಪ ಮತ್ತು ಅವರಮ್ಮ 
ಪೋಟೋ - ಮನುವಚನ್
----------

ನೆನಪಾಗ್ಯಾದಾ...!!!

ನನ್ನಪ್ಪ ನನ್ನಮ್ಮ..
ಕರೆ ಮಾಡಿ ಕರೆದ್ಯಾರ 
ಹೊಸ ಸೀರೆ ತಂದೀನಿ
ಕುಂಕುಮ ಅರಿಶಿನ-ಬಾಗೀನ
ಕೊಂಡೊಯ್ಯು ಬಾ ಎಂದಾರಾ...

ನನ್ನಣ್ಣ-ಅತ್ತಿಗೆ
ಮಾತಲ್ಲೇ ಬೈದಾರ
ಪ್ರತಿ ವರುಷ ಬರುವವಳು
ಈ ವರ್ಷ ಬಲು ಬೇಗ 
ಬಂದು ಹೊರೆಟೆಬಿಟ್ಟೆಯಲ್ಲಾ ಎಂದಾರಾ...

ನನ್ನಕ್ಕ-ಬಾವ
ಪ್ರತಿ ಸಲವು ಬಂದಾಗ
ಜೊತೆ ಜೊತೆಗೆ ಇದ್ದೇವು
ಹೋಳಿಗೆ ಹೂರಣದಿ
ನಿನ್ನ ನಗುವಾ ಕಂಡೇವು...

ಎಲ್ಲ ಪ್ರೀತಿ ಬೈಗುಳದಿ
ಊರ ಹಾದಿಯ ನೋಡುತ
ಮನಸ್ಯಾಕೋ ಒದ್ದಾಡಿ
ತವರೂರ ನೆನಸ್ಯಾದಾ..

ನಾನೊಬ್ಬ ಮಗಳೆಂದು
ಬಾವ ಕೊಡಿಸುತ್ತಿದ್ದ ಬಳೇ
ಅಣ್ಣ ಕೊಡುತಿದ್ದ ರೊಕ್ಕಾ
ಅಮ್ಮ ನೀಡುವ ಬಾಗಿನ
ಅಕ್ಕ ತೋರಿಸಿಕೊಡುವ ಪೂಜೆ
ಅತ್ತಿಗೆಯ ಕೈರುಚಿ ಅಡಿಗೆ
ಎಲ್ಲ ನೆನಪಾಗಿ 
ಕಣ್ಣು ಯಾಕೋ ಜಿನಿಗ್ಯಾದಾ..!!


ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು....

13 comments:

Ittigecement said...

ಭಾಳ್ ಛಂದ ಬರದಿಯವ್ವಾ...

ಹೃದಯದ ಪ್ರೀತಿನ ಅಕ್ಷರದಾಗ ಹಾಕಿದ್ದಿಯಲ್ಲೇ ನನ್ನವ್ವಾ...

ಪ್ರೀತಿ ಹೀಗೆ ಇರಲವ್ವಾ..

Sudeepa ಸುದೀಪ said...

ತುಂಬಾ ಚಂದದ ಸಾಲುಗಳು...ಸುಗುಣ... :) ತವರುಮನೆ ನೆನಪಿಸಿಬಿಡ್ತು... :)

prashasti said...

ಚೆನ್ನಾಗಿದೆ.. ಗೌರಿ ಹಬ್ಬಕ್ಕೆ ತವರಿನ ಕಣ್ಣ ಹಸಿಯಾಗಿಸೋ ಮಧುರ ನೆನಪುಗಳು ..ನಿಮಗೂ ಹಬ್ಬದ ಶುಭಾಶಯಗಳು :-)

prashasti said...

ಚೆನ್ನಾಗಿದೆ.. ಗೌರಿ ಹಬ್ಬಕ್ಕೆ ತವರಿನ ಕಣ್ಣ ಹಸಿಯಾಗಿಸೋ ಮಧುರ ನೆನಪುಗಳು ..ನಿಮಗೂ ಹಬ್ಬದ ಶುಭಾಶಯಗಳು :-)

balasubramanya said...

ಕವಿತೆಯಲ್ಲಿ ಸಂಬಂಧಗಳ ಸಿಹಿ ಹೂರಣ ಸೊಗಸಾಗಿ ಮೂಡಿಬಂದಿದೆ.ಗೌರಿ, ಗಣೇಶನ ಹಬ್ಬದ ಶುಭಾಶಯಗಳು ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

Suresh said...

ಸುಗುಣ ಗೌರಮ್ಮನವರ ತವರಿನ ನೆನಪು... ತವರನ್ನಗಲಿ ಹಬ್ಬ ಆಚರಿಸುತ್ತಿರುವ ಎಲ್ಲ ಗೌರಮ್ಮಂದಿರ ಮನದಳಲು ಕೂಡ. ಅಕ್ಕರೆಯ ಸುಮಧುರ ಭಾಂದವ್ಯಗಳ ಮನಮುಟ್ಟುವ ನಿರೂಪಣೆ.

ಗಿರೀಶ್.ಎಸ್ said...

ಬಾಳ ಬಂಡಿಯಲ್ಲಿ ಕೆಲವೊಮ್ಮೆ ಪ್ರಿಯವಾದದ್ದನ್ನ ಕಳೆದುಕೊಂಡು ನೆನಪಲ್ಲೇ ಇರಬೇಕಾಗುತ್ತದೆ ... ತವರಿನ ಸಿರಿ ಮತ್ತು ಪ್ರೀತಿ ಸದಾ ಕಾಲ ಹೀಗೆ ಇರಲಿ ಎಂದು ಆಶಿಸುತ್ತೇನೆ... ಎಲ್ಲರಿಗೂ ಅವ್ವ ಮಗ ಒಳ್ಳೇದ್ ಮಾಡ್ಲಿ...

sunaath said...

Suguna,
This is life! Wish you all happiness on the occasion of Ganesha festival.

umesh desai said...

too good madam

Badarinath Palavalli said...

ಹಬ್ಬಗಳು ನೆನಪುಗಳ ಸಂತೆ. ತವರಿನ ಹಬ್ಬದ ಉಪಚಾರಗಳನ್ನ ನೆನಸಿಕೊಂಡು ಅಮೋಘವಾಗಿ ಚಿತ್ರಿಸಿಕೊಟ್ಟಿದ್ದೀರ. ಭಾಷಾ ಬಳಕೆಯಲ್ಲೂ ಮೆರೆದಿದ್ದೀರ.

Srikanth Manjunath said...

ಹಬ್ಬದ ರುಚಿ..ಆಹಾ..ಅದು ತರುವ ನೆನಪು..ಓಹೋ..ಅದರ ಮರುನೆನಪು..ಇನ್ನು ಸೊಗಸು...ಒಮ್ಮೆ ನೋವು..ಒಮ್ಮೆ ನಲಿವು..ಇದೆ ಜೀವನ...ಸುಂದರ ಕವಿತೆ ಹಬ್ಬದ ಸಾಲಿಗೆ..

shivu.k said...

ಸುಗುಣಕ್ಕ,
ತವರಿನ ನೆನಪು ಕಾಡುವುದು ಗೌರಿಹಬ್ಬದ ದಿನ ಮಾತ್ರಾನಾ....ಎಲ್ಲವನ್ನು ನೆನಪಿಸಿಕೊಳ್ಳುವ ಕವನ ಚೆನ್ನಾಗಿದೆ..

ಕಾವ್ಯಧಾರೆ....!! said...

ಭಾಳ್ ಚೊಲೊ ಆಗ್ಯದ.

ನನ್ನ ಬ್ಲಾಗಗೂ ಒಮ್ಮೆ ಭೇಟಿ ಕೊಡಿ. ಈಗಷ್ಟೆ ಹೆಜ್ಜೆಯನ್ನಿಡುತ್ತಿದ್ದೇನೆ, ತಿದ್ದಿ ಬೆಳೆಸಿ.