Thursday, September 6, 2012

ಮಿಥ್ಯದ ಹೂರಣ ಸತ್ಯದ ತೋರಣ...


ಬೆಂಗಳೂರಿಗೆ ಹೋಗಿದ್ದಾಗ ಒಂದಷ್ಟು ಪುಸ್ತಕಗಳನ್ನು ಗೀತಕ್ಕ ನನಗಾಗಿ ಓದಲು ಕೊಟ್ಟಿದ್ದರು. ನನಗೂ ಅವರ ಪುಸ್ತಕಗಳನ್ನು ಓದಬೇಕು ಎಂಬ ಆಸೆ ಬಹಳಷ್ಟಿತ್ತು.. ಅವರು ಸುಮಾರು ೧೦-೧೨(ಕರೆಕ್ಟ್ ಲೆಕ್ಕ ಬೇಕಂದ್ರೆ ಪೋಟೋ ನೋಡಿ) ಪುಸ್ತಕಗಳನ್ನು ಕೊಟ್ಟಿದ್ದರು ಇತ್ತೀಚೆಗೆ ಇವುಗಳಲ್ಲಿ ಯಾವುದು ಓದಲಿ ಎಂದು ಯೋಚಿಸುತ್ತಿದ್ದೆ ಆದರೂ ಅವುಗಳಲ್ಲಿ ಮಿಥ್ಯ ಕಥೆ ಯಾಕೋ ನನ್ನ ತಲೆಯಲ್ಲೇ ಗಿರಕಿ ಹೊಡೆಯುತ್ತಿತ್ತು.. ಎಲ್ಲರೂ ಈ ಪುಸ್ತಕ ಹಾಗಿದೆ ಹೀಗಿದೆ ಒಂದು ಗಂಡಿನ ಮನಸ್ಸನ್ನು ಅರಿತು ಬರೆದಿದ್ದಾರೆ ಎನ್ನುತ್ತಿದ್ದರು ನನಗೂ ಗಂಡಿನ ಮನದಾಳದ ಮಾತುಗಳನ್ನು ತಿಳಿಯುವ ಕುತೂಹಲದಲ್ಲಿ ಮಿಥ್ಯದ ಮೊದಲ ಪುಟ ತೆರೆಯುವ ಮುನ್ನ ಮುಖಪುಟದ ವಿನ್ಯಾಸದ ಹಿಂದಿನ ಅರ್ಥ ಹೆಣ್ಣು ಎತ್ತಲೋ ಮುಖ ಮಾಡಿದ್ದಾಳೆ ಗಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ... ಇಲ್ಲಿ ಗಂಡಿನ ಸಂಕಟ ಎದ್ದು ಕಾಣುತ್ತೆ ಹೆಣ್ಣು ಧೈರ್ಯದಿಂದಿದ್ದಾಳೆ ಎಂದೆನಿಸಿತು...ಮತ್ತೆ ಪುಟ ತಿರುಗಿಸುತ್ತಾ ನೆಡೆದಂತೆ ಮಿಥ್ಯದ ಬಾಗಿಲು ತೆರೆಯಿತು. 
ಚಿತ್ರ: ಮನುವಚನ್ 
ಕಾದಂಬರಿಯ ಮುಖ್ಯ ಪಾತ್ರಧಾರಿ ಪುರು (ಪುರುಷೋತ್ತಮ್) ಒಬ್ಬ ಮಧ್ಯಮ ವರ್ಗದ ಗಂಡು, ಅಪ್ಪ-ಅಮ್ಮ, ಹೆಂಡತಿ ಮಕ್ಕಳೊಂದಿಗಿನ ಸಂತೋಷದ ಜೀವನದಲ್ಲೂ ಕಾಣುವ ನೂರೆಂಟು ತುಮುಲ ಮನಸಿನ ಚಿತ್ರಣ. ವಿದ್ಯಾವಂತನಾಗಿ ನಾಲ್ಕಾರು ಜನರೊಂದಿಗೆ ಬೆರೆತು ಪ್ರಪಂಚದ ಜ್ಞಾನ ಉಳ್ಳವನೇ ಆದರೂ ಕೆಲವೊಮ್ಮೆ ತನ್ನ ಮನಸ್ಸಿನೊಳಗಿನ ಭಾವನೆಗಳಲ್ಲಿ ಕುಗ್ಗಿ ಹೋಗುತ್ತಾನೆ. ಇಲ್ಲಿ ಪುರು ತನ್ನ ಕಛೇರಿಯಲ್ಲಿ ಲೇಡಿ ಬಾಸ್ ನಿಂದ ಅನುಭವಿಸುತ್ತಿದ್ದ ಯಾತನೇ ಅನ್ನುವುದಕ್ಕಿಂತ ಒಂದು ರೀತಿ ಮುಜುಗರದ ಸಂಗತಿಗಳು ಸದಾ ಕಾಡುತ್ತಲೇ ಇದ್ದವು. "ಹೆಣ್ಣು ತಾನಾಗೇ ಬಯಸಿ ಬಂದರೆ ಯಾವ ಗಂಡು ಬಿಡುವುದಿಲ್ಲ" ಎಂಬುದು ಎಲ್ಲರ ಬಾಯಲ್ಲಿ ಬರುವ ಮಾತು... ಆದರೆ ೪೦ರ ಹರಯದ ಹೆಣ್ಣು ಗಂಡ ಎಲ್ಲೋ ದೂರದ ದೇಶದಲ್ಲಿದ್ದಾನೆ ಬೆಳೆದು ನಿಂತ ಮಗ ಅವನದೇ ಪ್ರಪಂಚದಲ್ಲಿದ್ದಾನೆ. ಇನ್ನು ಇವಳದು ಎಂಬ ಬದುಕು ಶೂನ್ಯತೆಯಲ್ಲಿ ತುಂಬಿದೆ. ದೂರದಲ್ಲಿ ನೆಲೆಸಿರೋ ಗಂಡ ಒಲ್ಲದ ಗಂಡನೂ ಸಹ ಆಗಬಹುದು...  ಎಲ್ಲೋ ಇರುವ ಗಂಡನನ್ನು ಕಾಯುತ್ತ ತನ್ನ ದಿನ ಜೀವನದಲ್ಲಿನ ಬಣ್ಣದ ಬದುಕನ್ನು ತನ್ನದೇ ನಿಟ್ಟಿನಲ್ಲಿ ಸೃಷ್ಟಿಸಿಕೊಳ್ಳ ಹೊರಡುತ್ತಾಳೆ.  ಈ ಬಣ್ಣದ ಬದುಕಿಗೆ ಬಣ್ಣ ಹಚ್ಚುವವ ಪುರುಷೋತ್ತಮನೇ ಯಾಕಾಗಬಾರದು ಸ್ಪುರದ್ರೂಪಿ, ಸಾಧುವಿದ್ದಂತೆ, ಮೊದಲೇ ಕಲೆಗಾರ ಚಿತ್ರ ಬಿಡಿಸುವವ ನನ್ನ ಬದುಕಿಗೆ ಬಣ್ಣ ಬಳಿಯಲಾರನೇ ಎಂಬ ಮನಸ್ಥಿತಿಯಲ್ಲಿರುವ ಬಾಸ್ ಪ್ರತಿಭಾ ಸದಾ ಪುರುಷೋತ್ತಮನತ್ತಲೇ ಒಲವು.. ಕಾಫೀ, ಟೀ ನೆಪವೊಡ್ಡಿ ಕರೆದೊಯ್ಯುವುದಲ್ಲದೇ ಕಛೇರಿಯಲ್ಲಿ ತಡವಾಗಿ ಹೋಗುವಂತೆ ಕೆಲಸಗಳ ಹೊರೆಯೊರಿಸುವ ಈ ಬಾಸ್ ಪ್ರತಿಭಾಳನ್ನು ಎದುರಿಸುವ ಶಕ್ತಿ ಇವನಲ್ಲಿ ಇಲ್ಲದಾಯಿತು.
ಚಿತ್ರ: ಸ್ಕಾನರ್ 7425 :)

ಗಂಡಸು ಕಛೇರಿಯಲ್ಲಿನ ಏರುಪೇರಿನಲ್ಲೂ ಮನೆಗೆ ಬಂದಾಗ ಮನೆಯಲ್ಲೂ ಸಮಾಧಾನವಿಲ್ಲದಿದ್ದರೆ ಖಂಡಿತ ಅವನ ಜೀವನ ಅಯೋಮಯ... ಇಲ್ಲಿ ಪುರುವಿನ ಪರಿಸ್ಥಿತಿಯೂ ಹಾಗೆ ಕಲೆಗಾರನಾಗಿ ಪ್ರತಿಭಾಳ ಚಿತ್ರ ಬಿಡಿಸಿದ..!! ಇಲ್ಲಿ ಅವನ ಹೆಂಡತಿ ಇವನ ಗ್ರಹಚಾರ ಬಿಡಿಸಿದಳು. ಅಪ್ಪ, ಅಮ್ಮನ ಮನಸಿನಲ್ಲೂ ಪ್ರಶ್ನೆಗಳು ಹುಟ್ಟುವಂತಾದವು ಇಂತಹ ಸಂದರ್ಭದಲ್ಲಿ ಬಾಸ್ ಮತ್ತು ಇವನ ಏಕಾಂತದಲ್ಲಿ ನೆಡೆದ ಸಂಭಾಷಣೆ.. ಸೆಕ್ಷುಯಲ್ ಹೆರಾಸ್ ಮೆಂಟ್ ಕೇಸ್ ಜಡಿದ ಕಾರಣಕ್ಕೆ ಪುರುಷೋತ್ತಮನನ್ನೇ ಜೈಲಿಗೆ ಕಳುಹಿಸುವತ್ತ ಸಾಗಿದ ಕಥೆ ಮುಂದೇನಾಗುತ್ತೇ ಎಂಬ ಭಯ ಕುತೂಹಲ..!!??.. ಇಲ್ಲಿ ಗೀತಾರವರು ಸಮರ್ಥವಾಗಿ ಪುರೋಷತ್ತಮನ ಮನದಾಳವನ್ನು ತುಂಬಾ ಮನೋಘ್ನವಾಗಿ ಬಿಂಬಿಸಿದ್ದಾರೆ. ಹೆಣ್ಣು ಭೋಗದ ವಸ್ತು ಎಂಬುದು ಅವನ ಭಾವನೆಯಾಗಿರಲಿಲ್ಲ ಆದರೂ ಅವನ ಜೈಲಿಗೆ ಹೋಗುವ ಸಮಯದಲ್ಲಿ ಸಹಕರಿಸಿದ್ದು ಸಹೋದ್ಯೋಗಿಗಳು. ಇಲ್ಲಿ ಇವನ ಸಹಕಾರಕ್ಕೆ ನಿಂತಿದ್ದು  ಹೆಂಗಳೆಯರೇ ಹೆಚ್ಚು.

ಗಂಡ ಜೊತೆಯಲಿಲ್ಲದಿದ್ದರೆ ಎಷ್ಟೋ ಹೆಣ್ಣು ಮಕ್ಕಳು ಆಮಿಷ ಅಥವಾ ಮೋಹದ ಜಾಲದಲ್ಲೋ ಬಿದ್ದುಬಿಡುವ ಸಾಧ್ಯತೆಗಳು ಹೆಚ್ಚು ಎಂಬುದು ಇಲ್ಲಿ ಒತ್ತಿ ಒತ್ತಿ ಹೇಳಿದಂತಿದೆ. ಮತ್ತೊಬ್ಬ ರವಿ ಎಂಬುವವ ದುಬೈನಲ್ಲಿ ನೆಲೆಸಿರುತ್ತಾನೆ ಇತ್ತ ಅವನ ಹೆಂಡತಿ(ಸುಕನ್ಯಾ) ಯಾವುದೋ ಪ್ರೀತಿ ಆಮಿಷಕ್ಕೆ ಬಿದ್ದು ತನ್ನ ಚಿಕ್ಕ ಮಗುವನ್ನು ಬಿಟ್ಟು ಹೋಗುತ್ತಾಳೆ... ಇಲ್ಲಿ ಕರುಳ ಬಳ್ಳಿಗೂ ಬೆಲೆಯಿಲ್ಲದಂತಾಯಿತು. ಇಷ್ಟೆಲ್ಲಾ ನೆಡೆದರೂ ಆಕೆಯ ಗಂಡ ಮಾತ್ರ ಒಂದು ಪ್ರಬುದ್ಧ ಸ್ಥಾನದಲ್ಲೇ ಉಳಿಯುತ್ತಾನೆ ಮರಳಿ ಸುಕನ್ಯಾ ಬರುವುದಾದರೆ  ಸ್ವೀಕರಿಸಲೂ ಸಿದ್ಧನಾಗಿರುತ್ತಾನೆ.

ಇಲ್ಲಿ ಪುರುಷೋತ್ತಮ ತಂದೆ ತನ್ನ ಏಕಮಾತ್ರ ಆಸ್ಥಿಯನ್ನು ಮಗಳಿಗೆ ಅಫಿಡವಿಟ್ ಮಾಡಿರುವಾಗಲೇ ಇದ್ದ ಇಬ್ಬರು ಹೆಣ್ಣು ಮಕ್ಕಳು ಮನೆಯ ಬೆಲೆ ಕಟ್ಟುವುದು ನೋಡಿ.. ನಾನೆಲ್ಲಿ ನನ್ನ ಆಸ್ತಿಯಲ್ಲಿ ಮೂರು ಮಕ್ಕಳಿಗೂ ಭಾಗ ನೀಡಿ ಅದರಂತೆ ಅಮ್ಮ ಅಪ್ಪನೂ ಮೂರು ಭಾಗಗಳಂತೆ ವಿಗಂಡಿಸಿ ಬಿಡುವರೋ ಎಂದು ಮನಸಿನಲ್ಲೇ ತೋಯ್ದಾಡುತ್ತಿದ್ದರೆ.. ಇಲ್ಲಿ ಮಗ ಮತ್ತು ವಯಸ್ಸಾದ ತಂದೆಯ ನಡುವಿನ ಸಂಭಾಷಣೆ  ಒಂದು ರೀತಿ ಪ್ರೀತಿಯ ಬೆಸುಗೆ ಅದು ಎಂದೂ ಬಿಡಿಸಲಾರದ ಸಂಬಂಧವನ್ನು ಕಲ್ಪಿಸಿಕೊಂಡರೇ ಸುಖವೆನಿಸುತ್ತೆ... ಅಪ್ಪ ಮಗನ ಬಾಂಧವ್ಯಕ್ಕೆ ಆಸ್ತಿ ಮತ್ತು ಹೆಣ್ಣು ಮಕ್ಕಳೊಡನೆ ನೆಡೆಯುವ ಜಟಾಪಟಿ ಎನ್ನುವುದಕ್ಕಿಂತ ತೋಳಲಾಟವನ್ನು ಮಗ ಎಷ್ಟು ಚೆನ್ನಾಗಿ ನಿಭಾಯಿಸುತ್ತಾನೇ ಎಂಬುದನ್ನು ಓದುವ ಆತುರ ಅಷ್ಟರಲ್ಲಿ ಇದ್ದಕ್ಕಿದ್ದಂತೆ ಎಂದೂ ಹೋಗದ ಈ ಕರೆಂಟ್ ತಟ್ಟ್ ಎಂದು ಕತ್ತಲನ್ನು ಕವಿಸಿಬಿಟ್ಟಿತ್ತು... ನಾನು ಓದುವ ಪುಸ್ತಕಕ್ಕೆ ಕತ್ತಲು ಕವಿದಂತೆ ಮಾಡಿದ ಹಾಗೆ ಪುರುಷೋತ್ತಮನ ಜೀವನದಲ್ಲೂ ಕತ್ತಲು ಬರುವುದೇನೋ ಹೆಣ್ಣು ಮಕ್ಕಳು ಅಪ್ಪನ ವಿರುದ್ಧ ನಿಲ್ಲುವರೇನೋ, ಸೊಸೆಯಾದ ಜಾನಕಿ ಮನಸ್ಸು ಕೆಡಿಸಿಕೊಂಡು ಸಂಸಾರ ಇಬ್ಬಾಗವಾಗುವುದೇನೋ ಎಂಬ ದ್ವಂದ್ವದಲ್ಲಿದ್ದೆ ಆದರೂ ಮೊಬೈಲ್ ನಲ್ಲಿದ್ದ ಲೈಟ್ ಆನ್ ಮಾಡಿ ಪೂರ್ಣ ಕಥೆಯನ್ನು ಒಂದೇ ಉಸಿರಿಗೆ ಓದಿಬಿಟ್ಟೆ..
ಕಥೆಯ ಮುಕ್ತಾಯ ಬಹಳ  ಇಷ್ಟವಾಯಿತು. ಈ ಕಥೆ ಓದುವವ ಅವನ ಮನೋಭಾವನೆ ಕೆಟ್ಟದ್ದಾಗಿದ್ದರೂ ಹೌದು..!! ನಾನು ಹೀಗಿರಬಾರದು ನನ್ನಲ್ಲೂ ಬದಲಾವಣೆ ಬೇಕು ಎಂದು ಬಯಸುತ್ತಾನೆ. ನಾನು ಅಲ್ಲಿನ ಪಾತ್ರಗಳಲ್ಲಿ ಒಬ್ಬಳಾಗಿ ತಲ್ಲೀನಳಾಗಿದ್ದೆ... ಹಾಗೇ ಪುರುಷೋತ್ತಮನಂತೆಯೇ ನನ್ನ ಅಣ್ಣ, ಗಂಡ, ಅಪ್ಪ, ಭಾವ ಎಲ್ಲರೂ ಇರಬಹುದು ಅಂತೆಯೇ ಇಲ್ಲಿನ ಹೆಣ್ಣನ ಪಾತ್ರಧಾರಿಗಳೂ ನಮ್ಮ ಸುತ್ತಲೇ ಇರಬಹುದು ಎಂಬಂತೆ ಭಾಸವಾಯಿತು.  ಹೆಣ್ಣಾಗಿ ನಾವು ಧೋರಣೆಗಳನ್ನು ಮಾಡುವವರ ವಿರುದ್ಧ ಹೋರಾಡಬೇಕು, ಹೆಣ್ಣು ಎಂದ ಕೂಡಲೇ ಸರ್ಕಾರ ಸವಲತ್ತು, ಅಥವಾ ಕೋರ್ಟ್-ಕಚೇರಿಗಳಲ್ಲಿ ಹೆಣ್ಣಿನ ಪರವಾಗೇ ಕಾನೂನುಕಟ್ಟಳೆಗಳು ಇರಬಹುದು ಆದರೆ ಅದನ್ನು ಸದುಪಯೋಗ  ಪಡಿಸಿಕೊಳ್ಳಬೇಕೆ ವಿನಃ ದುರುಪಯೋಗ ಪಡಿಸಿಕೊಳ್ಳಬಾರದು.

ಇದು ನಾಯಕ ಪ್ರಧಾನ ಕಾದಂಬರಿ. ಹೆಣ್ಣು ಗಂಡಿನ ಮನದಾಳದಲ್ಲಿಳಿದು ಹೀಗೂ ನೆಡೆಯುತ್ತದೆ ಎಂದು ತೋರಿಸಿರುವ ಕಥೆ. ಅಂತೆಯೆ.... Feminist  ಆಗುವ ಬದಲು Humanist ಆದರೆ ಒಳ್ಳೆಯದು ಎಂಬುದನ್ನ ಹೇಗೆ ಬಿಂಬಿಸಿದ್ದಾರೆ ಎಂದು ಮಿಥ್ಯಾ ಕಾದಂಬರಿಯನ್ನು ಓದಿದರೆ ನಿಮಗೇ ತಿಳಿಯುತ್ತದೆ...

ಮಿಥ್ಯ.. ಮಿಥ್ಯ...ಮಿಥ್ಯ.. ಕಾದಂಬರಿಯ ಪಾತ್ರಗಳೆಲ್ಲವೂ ನಮ್ಮ ನಿಮ್ಮ ನಡುವೆ ಬಂದುಹೋಗುವುದಂತೂ ಸತ್ಯ.. ಸತ್ಯ.. ಸತ್ಯ...

ಧನ್ಯವಾದಗಳು ಗೀತಕ್ಕ ನನಗೆ ಒಳ್ಳೊಳ್ಳೆ ಪುಸ್ತಕಗಳನ್ನು ಕೊಟ್ಟಿರಿ.. ಆದಷ್ಟು ಬೇಗ ಮಿಕ್ಕುಳಿದ ಪುಸ್ತಕಗಳನ್ನು  ಓದಿ ಮುಗಿಸುವೆ. 

18 comments:

minchulli said...

ಥೂ.. ಏನ್ ಚಂದ ಬರೀತಾಳಪ್ಪ ಈ ಸುಗುಣಿ ಅಂತ ಅಂಜಲಿ ಮತ್ತು ಶ್ರೀದೇವಿ ಇಬ್ಬರ ಶೈಲಿಯನ್ನೂ ಮಿಶ್ರ ಮಾಡಿ ಬೈಯುವುದೋ ಹೊಗಳುವುದೋ ತಿಳಿಯದ ರೀತಿಯಲ್ಲಿ...

ಸುಗುಣೀ... Tight Huggggggg

ಮಂಜುಳಾ said...

ನೀವು ಕೊಟ್ಟ ಟೈಟಲ್ ಓದಿ ತಡೆಯಲಾಗಲಿಲ್ಲ.. ಅಷ್ಟೇ ಚೆನ್ನಾಗಿ ವಿಮರ್ಶೆಯನ್ನೂ ಕೊಟ್ಟಿದೀರ... ನಾನೂ ಮಿಥ್ಯ ಕಂ(ಕೊಂ)ಡುಕೊಳ್ತೀನಿ :-)

ಪುಷ್ಪರಾಜ್ ಚೌಟ said...

ಮಿಥ್ಯದ ಹೂರಣವನ್ನು ಮನಸೆಳೆಯುವ ಶೀರ್ಷಿಕೆ ಕೊಟ್ಟು ನಮಗೆ ಉಣಬಡಿಸಿದ್ದಕ್ಕೆ ಧನ್ಯವಾದಗಳು.

Srikanth Manjunath said...

ನಿಮ್ಮ ಬರವಣಿಗೆ ಖುಷಿ ಕೊಡುತ್ತೆ..ಕಳೆದ ಲೇಖನ ಓದುವಾಗ ಆಮ್ಲಜನಕದ ಅವಶ್ಯಕತೆಯ ಬಗ್ಗೆ ಹೇಳಿದ್ದೆ..ಈ ಲೇಖನ ಓದುವಾಗ..ಬೆಟ್ಟದ ಮೇಲೆ ಹುಟ್ಟುವ ಒಂದು ಝರಿ, ತೊರೆಯಾಗಿ, ಬೆಟ್ಟದಿಂದ ಧುಮುಕಿ ಸಾಗರ ಸೇರುವ ಪರಿಯಲ್ಲಿ ಇದೆ ಅನ್ನಿಸಿತು..ಸುಲಲಿತ ಬರವಣಿಗೆ..ಇಷ್ಟವಾಯಿತು..ಸಮಯ ಮಾಡಿಕೊಂಡು ಆ ಪುಸ್ತಕದ ಸಾರಾಂಶವನ್ನು ಮಸ್ತಕಕ್ಕೆ ಏರಿಸುವ ಪ್ರಯತ್ನ ಮಾಡುತ್ತೇನೆ...ಅಭಿನಂದನೆಗಳು ಒಳ್ಳೆಯ ಲೇಖನ ನೀಡಿದ್ದಕ್ಕೆ..

sunaath said...

ಉತ್ತಮವಾದ ಪರಿಚಯವನ್ನು ಮಾಡಿದ್ದೀರಿ. ಹೊಸ ಮಾದರಿಯ ಕಥಾವಸ್ತುವಿರುವ ಈ ಕಾದಂಬರಿಯನ್ನು ಓದಲು ಮನಸ್ಸು ಹಾತೊರೆಯುವಂತೆ ಬರೆದಿದ್ದೀರಿ.ಧನ್ಯವಾದಗಳು.

Sudeepa ಸುದೀಪ said...

ಆ ಪುಸ್ತಕ ನಾನು ಓದಬೇಕೆಂದು ಆಸೆಯಾಗುತ್ತಿದೆ...ಸಿಕ್ಕಾಗ ಖಂಡಿತಾ ಓದದೇ ಬಿಡೋದಿಲ್ಲ....

ದಿನಕರ ಮೊಗೇರ said...

nijavaada vimarshe idda haage ide...

namagU odabekenisuva haage barediddiri madam...
tumbaa sogasaagide bareda riti....

thank you....

ಮಂಜಿನ ಹನಿ said...

ಭಾಷೆ ಮತ್ತು ಬರಹವನ್ನು ನೀವು ವಿಸ್ತರಿಸುವಲ್ಲಿ ತೋರಿಸುವ ಜಾಣ್ಮೆ ಮನಸ್ಸಿಗೆ ಮೆಚ್ಚುಗೆಯಾಗುವಂತದ್ದು.. ’ಮಿಥ್ಯ’ ಕಾದಂಬರಿಯ ಪಾತ್ರಗಳನ್ನು ತುಂಬಾ ಅಚ್ಚುಕಟ್ಟಾಗಿ ತೆರೆದಿಟ್ಟಿದ್ದೀರಿ.. ಈ ನಿಮ್ಮ ವಿಮರ್ಷೆಯನ್ನು ಲೇಖಕಿ ಗೀತಾರವರು ಓದಿದರೂ ಥ್ರಿಲ್ ಆಗುತ್ತಾರೆ.. ಬಹಳ ಸೊಗಸಾದ, ವಸ್ತು ನಿಷ್ಠವಾದ ವಿಮರ್ಷೆ ಚೆನ್ನಾಗಿದೆ..:)

Badarinath Palavalli said...

ಗೀತಾ. ಬಿ.ಯು ಮೇಡಂ ಅವರನ್ನು ನಾನು ತರಂಗದಿಂದ ಓದುತ್ತಾ ಬಂದಿದ್ದೇನೆ. ತರಂಗದಲ್ಲಿ ಅವರೊಂದು ಶ್ರೀಲಂಕಾ ಪ್ರವಾಸ ಬರೆದಿದ್ದರು ಎಂದು ನೆನಪು. ಉತ್ತಮ ಕಾದಂಬರಿಗಾರ್ತಿ ಅವರು.

ಮಿಥ್ಯಕ್ಕೆ ಅವರು ಆರಿಸಿಕೊಂಡಿರುನ ನಾಯಕನ ಹೆಸರಲ್ಲೇ ಅವರ ಚಾಣಾಕ್ಷತೆ ಅರಿವಿಗೆ ಬರುತ್ತದೆ. ಪುರುಷೋತ್ತಮ, ಹೆಸರಿನ ಅರ್ಥವ್ಯಾಪ್ತಿಯೂ ದೊಡ್ಡದು.

ಮೊದಲು ಈ ಕಾದಂಬರಿಯನ್ನು ನಾನು ಕೊಂಡು ಓದುತ್ತೇನೆ. ನಿಮ್ಮ ಬರಹವು ನನ್ನ ಓದಿಗೆ ಪ್ರೇರಣೆಯಾಗಲಿ.

ಚುಕ್ಕಿಚಿತ್ತಾರ said...

ತು೦ಬಾ ಚನ್ನಾಗಿ ವಿಶ್ಲೇಷಿಸಿದ್ದೀರಿ, ಸುಗುಣ.. ಸುಧಾದಲ್ಲಿ ಧಾರಾವಾಹಿಯಾಗಿ ಬರುತ್ತಿರುವಾಗ ಮಿಥ್ಯ ಕಾದ೦ಬರಿಯನ್ನು ನಾನೂ ಓದಿದ್ದೆ,ಇಷ್ಟ ಆಗಿತ್ತು.

shivu.k said...

ಸುಗುಣಕ್ಕ,
ನಿಮ್ಮ ವಿಶ್ಲೇಷಣೆಯನ್ನು ಓದಿದ ಮೇಲೆ ಆ ಮಿಥ್ಯ ಕಾದಂಬರಿಯನ್ನು ಓದಲೇಬೇಕೆನಿಸುತ್ತದೆ...ಇಂಥ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

jithendra hindumane said...

ಶುಗುಣ, ನಿಮ್ಮ ಬರಹ ಇಷ್ಟವಾಯ್ತು. ಪ್ರೀತಿ ಮತ್ತು ಕಾಮ ಒಂದೇ ನಾಣ್ಯದ ಎರಡು ಮುಖ ಎನ್ನುತ್ತಾರೆ.....

ಹಾಂ ಮಿಥ್ಯ ಓದಬೇಕು....!

bilimugilu said...

Very Nice Suguna...
Pustakavannu odalebeku endu preprepiside nimma baravanige...
ishtavaaytu...

Roopa Satish

bilimugilu said...

Very Nice Suguna...
Pustaka odale beku ennuvante prerepiside nimma baravanige....
ishtavaaytu :)

Roopa Satish

bharathi said...

nim baraha odi buk odabeku ansthu ... bharathi

Ashok.V.Shetty, Kodlady said...

ಒಂದು ಉತ್ತಮ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು...ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ....ಪುಸ್ತಕ ಕೊಂಡು ಓದುವ ಆಸೆ ಹುಟ್ಟಿಸಿದಿರಿ...

balasubramanya said...

ನಿಮ್ಮ ವಿಮರ್ಶೆ ಓದಿ ನಾನೂ ಆ ಪುಸ್ತಕ ಓದುವ ಮನಸಾಗಿದೆ. ಥ್ಯಾಂಕ್ಸ್ ಸುಗುಣ ಮೇಡಂ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

Mohan Kumar said...

Nanu E blog ge hosaba. Odiddu ide modala lekhana. Maari hode nimma sarala katheya introduction ge. Nanu kondu oduva manasagide "Mithya" thiliyabekide adarolagina "Sathya". Dhanyavadagalu :)