Tuesday, April 23, 2013

ಹುಟ್ಟು ಬದುಕು


                                     ಪೋಟೋ:  ಗಿರೀಶ್
 (ಈ ಪೋಟೋ ನೋಡಿದೊಡನೆ  ನನ್ನೂಳಗೆ "ಹುಟ್ಟು" ಹುಟ್ಟಿಸಿದ ಸಾಲುಗಳು)


-ಹುಟ್ಟು  ಬದುಕು-

ನಾ ಬಯಸಿದ ಜೀವನ
ನೀರ ಗರ್ಭದಲಿ
ತೆಪ್ಪದ ತೊಟ್ಟಿಲಿನಲಿ
ಹುಟ್ಟು ಹಾಕುತ
ದಡವ ಮುಟ್ಟಿಸುವ ಬದುಕು...

ನೀರ ಆಳದಲಿ
ಬಂಡೆಗಳ ಒಡೆತ
ಪ್ರಯಾಣಿಕರ ನಡುಕ
ಎದೆ ಝಲ್ ಎನಿಸಿದರೂ
ಕೈಯೊಳಗಿನ ಹುಟ್ಟು ಜಾರದಿರುವ ಜೀವನ

ಶಾಂತ ಅಲೆಗಳು
ಅಬ್ಬರಿಸುವ ಮೊದಲು
ಭಯದ ನೆರಳ ಸರಿಸಿ
ಮರಗೋಲ ಹಿಡಿದು
ಉದಕವ ಹಿಂದಿಕ್ಕಿ ಸಾಗುವ ಬದುಕು....

Wednesday, April 10, 2013

ಆದಿ ಪರ್ವ



ಸಿಹಿಯ ಮಡಿಲು ನಗುವಿನೊಳಗೆ ಸುಖ
ಕಹಿಯ ಕಡಲು ಅಳುವಿನೊಡನೆ ದುಃಖ
ಬೇವು-ಬೆಲ್ಲದ ಬದುಕು ಕಂಡಷ್ಟು
ಕುಲುಮೆಯೊಳಗೆ ಬೆಂದ ಚಿನ್ನದಂತೆ  

ಚಿಗುರು ಮಾವು, ಮೈಯ್ಯ ಕೊಳೆ ಕಳೆವ ತೈಲ
ಕಿರಣ ರಾಶಿಯಡಿ ಮನಸು ಪಕ್ಷಿಕಾಶಿ
ಹಸಿರಿನೊಡನೆ ಒಗರು ಅಂಟಿನೊಳಗೆ ವಾಯು
ಎಲ್ಲ ಕಂಡ ಬದುಕು ಸಿಹಿ ಹೂರಣದಂತೆ  

ಹಿರಿಯರಿಗೆ ಧೂಪ, ಗೋವಿನ ಪೂಜೆ
ನೇಗಿಲ ಯೋಗಿಯದು ಭೂಮಿ ಉಳುವಿಕೆ 
ದಾನ ಧರ್ಮದೊಡನೆ ಪಂಚಾಂಗ ಶ್ರವಣ
ವಿವಿಧ ರೂಪ ಕಂಡ ಬದುಕು ಯುಗಾದಿ   

ಚಿಗುರಿನೊಡನೆ ಕನಸು ಬೆಳಗಲು
ಬಿಸಿಲ ಬೆಳಕು ಮನವ ತಣಿಸಲು
ಚೈತ್ರದ ಚಿಲುಮೆಯ ಯುಗಾದಿ
ವರುಷ ವರುಷ ತರಲಿ ಹರುಷದ ಹೋಳಿಗೆ 

 ಎಲ್ಲರಿಗೂ "ಯುಗಾದಿ" ಹಬ್ಬದ ಶುಭಾಶಯಗಳು ... 


ಚಿತ್ರ: ನೆಟ್ ಲೋಕ