Tuesday, January 13, 2015

ನೋ ನೋ ನೋವು



ಅಯ್ಯೋ ಶಿವ್ನೇ ಇತ್ತ ಹೊರಳಿದರೆ 
ಯಾಕೋ ಚುಳ್ ಎನ್ನುತಿದೆ ಈ ಮಂಡಿ
ನಾನೇನು ಕಮ್ಮಿ ಶಕ್ತಿ ಇದೆ
ಮೊಂಡು ಮಾಡಿ ಮಂಡಿ ಮಡಚಿ ಕೂತೆ  
ಏಳುವಾಗಲೇ ಗೊತ್ತಾಗಿದ್ದು
ಅಮ್ಮಮ್ಮಾ ಅಪ್ಪಾ! ಈ ನೋವು ಯಾಕೆ ಎಂದು...

ಅಯ್ಯೋ ಇಲ್ಲಿ ಕಸ ಇಷ್ಟೊಂದು ಇದೆ
ಗುಡಿಸೋಣ ಅಂತಾ ಬಗ್ಗಿದೆ ನೋಡಿ
ಯಾಕೋ ಈ ಸೊಂಟ ಕಳ್ಕ್ ಅನ್ನುತಿದೆ
ಯಪ್ಪಾ ವಯಸ್ಸಾಯಿತಾ ಎಂದು
ಹುಟ್ಟಿದ ವರ್ಷ ಲೆಕ್ಕ ಹಾಕಿದೆ
ಇಲ್ಲಾ ಇನ್ನೂ ನಲವತ್ತು ದಾಟಿಲ್ಲ...

ಈಗ್ಲೇ ಹಿಂಗಾದ್ರೇ ಹೆಂಗೇ ದೇವ್ರು
ನಾನು ಕಾಶಿ-ರಾಮೇಶ್ವರ ಸುತ್ತೋದು ಹೇಗೆ
ವೈಷ್ಣೋದೇವಿಯನ್ನ ನಡಿಗೆಯಲಿ ಸಾಗಿ
ಮಾನಸ ಸರೋವವರನ್ನ ಮುಟ್ಟಿ
ಆ ಶಿವನ ಸಾನಿಧ್ಯದಲಿ ಮಂಜಾಗಿ ಕರಗದೆ
ಇನ್ನೊಂದಷ್ಟು ಪುಣ್ಯಕ್ಷೇತ್ರ ನೋಡುವಾಸೆ...

ಪರದೇಶ ಸುತ್ತುವ ಆಸೆಯಿಲ್ಲ ಸ್ವಾಮಿ
ನನ್ನ್ ದೇಶ ಸ್ವರ್ಗದ ಬೀಡು
ಆ ಕಲ್ಲು ಬಂಡೆಗಳಲಿ ಪ್ರಕೃತಿಯ ಮಡಿಲಲ್ಲಿ
ಒಂದಿಷ್ಟು ಹೆಜ್ಜೆ ಹಾಕುತ್ತ
ಒಂದಷ್ಟು ಇತಿಹಾಸ, ಚರಿತ್ರೆಗಳ ಮೆಲುಕು ಹಾಕಿ
ಭಾವ ಭಕ್ತಿ, ಜೀವನ ಶೈಲಿ ಅರಿಯುವಾಸೆ

ಈ ಚಳಿಗೆ ಕೈ ಕಾಲು ಹಿಡಿದು ಬಿಟ್ಟಿವೆ
ಹೆಜ್ಜೆ ಮುಂದೋಗುತ್ತಿಲ್ಲ ಅದ್ಯಾವ ದೇಹ ನಂದು
ಆಗೆಲ್ಲ ನಮ್ಮ ಹಿರಿಯರು ಮುದ್ದೆ, ಬಸ್ಸಾರು ಉಂಡು
ಗಟ್ಟಿ ಮೈಕಟ್ಟಿನಲಿ ಹೊಲಗದ್ದೆಗಳಲಿ ಮಿಂದು
ರಾಶಿ ಹಾಕುತ್ತಿರಲಿಲ್ಲವೇ..??
ಈಗ್ಯಾವ ಕೆಲಸ ಕಟ್ಟಿ ಹಾಕುತ್ತೇನೇ ಸ್ವಾಮಿ
ಈ ಸೋಮಾರಿ ಮಯ್ಯಿ ತಿರುಗಿದರೂ ನೋವು
ಕೂತರೂ ನಿಂತರೂ ನೋವೇ ನೋವು

ಮುಂದೆ ಕೂತಲ್ಲೇ ಕೈಲಾಸ ಸ್ವಾಮಿ
ಯಾವ ಪುಣ್ಯಕ್ಷೇತ್ರಗಳೂ ನನ್ನತ್ತ ಸರಿಯೋಲ್ಲ
ನಾನೇ ಕೂತಲ್ಲಿ ಕೈಮುಗಿದು
ಯೂಟೂಬ್ ನಲ್ಲೇ ಕೈಲಾಸ ಕಂಡು
ಆ ಮಾದೇಸ್ವರನಿಗೆ ದೀರ್ಘದಂಡವೇನೋ ಗೊತ್ತಿಲ್ಲ
ಅದ್ದುಪದ್ದು ಇಲ್ಲದ ಈ ನೋವಿಗೆ
ರುದ್ರನ ಮಂತ್ರ ಜಪಿಸಲು ರುದ್ರಾಕ್ಷಿ ತರಿಸಿಕೊಳ್ಳುವೆ
ಆಗಲಾದರೂ ಮುಕ್ತಿ ಸಿಗುವುದೇನೋ ಕಾಣೇ
ಈ ಬೆಂಬಿಡದ ನೋ..ನೋ ನೋವಿಗೆ..!! :) :)


3 comments:

ಚಿನ್ಮಯ ಭಟ್ said...

ಸುಗುಣಕ್ಕಾ..ಚಂದದ ಕವಿತೆ.. "ಅದ್ದುಪದ್ದು ಇಲ್ಲದೆ " ನನಗೆ ಹೊಸದು...ಧನ್ಯವಾದ ಅರ್ಥ ತಿಳಿಸಿಕೊಟ್ಟದ್ದಕ್ಕೆ... ಹಾಂ ..."ಯೂಟೂಬ್ ನಲ್ಲೇ ಕೈಲಾಸ ಕಂಡು " ...ಇಂದಿನ ಕವಿತೆ ಎಂಬುದರ ಪುರಾವೆ ಇದು ಅನ್ನಿಸ್ತಾ ಇದೆ :)...ಇಷ್ಟವಾಯಿತು :)...ಬರೆಯುತ್ತಿರಿ :) :)





ಮತ್ತೆ,
ಯಾವ್ದಕ್ಕೂ ಇರ್ಲಿ ಅಂತಾ ಒಂದು ಝಂಡೂ ಬಾಮ್ ಅಥವಾ ಮುವ್ ಇಟ್ಕಂಡಿರಿ ನೋ..ನೋ ನೋವಿಗೆ..!! :) :)!!!.

sunaath said...

ನೋವು ಇದೆ ಅಂತ ಅನ್ಕೊಂಡ್ರೆ ನೋವು ಯಸ್ ಅನ್ನತ್ತೆ. ನೋವು ಇಲ್ಲಾ ಅಂತ ಅನ್ಕೊಂಡ್ರೆ, ನೋವು ನೋ ನೋ ನೋ! ಕೈಲಾಸ, ಮಾನಸ ಸರೋವರ ಎಲ್ಲಾನೂ ನೋಡ್ತೀರಾ, ಚಿಂತೆ ಬಿಡಿ. ಒಂದ್ಮಾತು: ನೋವಿನ ಬಗೆಗೆ ಉಲ್ಲಾಸಮಯ ಕವನ ರಚಿಸಿದ್ದೀರಾ! ಅಭಿನಂದನೆಗಳು.

Badarinath Palavalli said...

ಕವನ ನೋವಿನಲ್ಲೇ ಅಸಲೀ ಭಾವ ವ್ಯಕ್ತಪಡಿಸುತ್ತದೆ ಕಣ್ರೀ.
ಈ ಮೈಕೈ ನೋವುಗಳು ನಮ್ಮನ್ನು ಯಮಾ ಹಿಂಡುತ್ತವರೀ.
ಇದ್ದಲ್ಲೇ ಜಗವ ಸುತ್ತಿಸೋ ಅಂತರಜಾಲಕ್ಕೂ ಶರಣು ಹೇಳೋಣ್ರೀ!