Tuesday, March 31, 2015

ನಿನ್ನ ನೋಡಿ ಕಲಿಯಬೇಕಿದೆ ಗುರುದೇವಾ..!!

ಮನಸಿನೊಡಲಾಳವ ಹಿಡಿದಿಡುತ
ಸ್ವಾರ್ಥತವ ದೂರವಿಟ್ಟು
ಬದುಕು ಸವೆಸುವುದೆಂದರೆ
ನಿನ್ನ ನೋಡಿ ಕಲಿಯಬೇಕಿದೆ 

ಬೆಂಗಾಡು ಭೂಮಿಯಲಿ ಬೆವರು ಸುರಿಸಿ  
ಪುಣ್ಯಕ್ಷೇತ್ರ ಕಟ್ಟಿದ ದೊರೆಯೇ
ನಿನ್ನ ಋಣದಲಿ ಬದುಕು ಸಾಗಿಸುತ
ನೆಮ್ಮದಿಯ ನೆಲೆ ಕಂಡವರು ಸಾವಿರಾರು

ಪ್ರತಿಫಲವೆನದೆ ಬಡವ-ಬಲ್ಲಿದನೆನದೆ
ಅಂಗಿ-ಅನ್ನಕೆ ದಾನಿಯಾಗಿ 
ವಿದ್ಯೆ-ಬುದ್ಧಿಗೆ ಗುರುವಾಗಿ  
ಆವರಿಸಿದ ಕತ್ತಲೆಗೆ ಬೆಳಕು ನೀ

ಹರಯದಲಿದ್ದ ಹುಮ್ಮಸ್ಸು ಇಂದಿಗೂ ಅದೇ ತೇಜಸ್ಸು
ಜಾವಕೇ ಎಚ್ಚರ ಬೆರೆವ ಮನಗಳಿಗೆ ಬಲು ಹತ್ತಿರ
ನಿನ್ನೊಳಗಿನ ಅರಿವು ಮೊಗೆದಷ್ಟು ಮುಗಿಯದ ಸರೋವರ  
ಅರಿತಷ್ಟೂ ನೀ ಶಿಖರದಂತೆ ಎತ್ತರ   

ನಿನ್ನ ಶ್ರಮದ ನಡಿಗೆ ಸಿದ್ದಗಂಗೆಯ ಮುಡಿಗೆ
ಅಂದು ನೀ ಹಿಡಿದ ಭರವಸೆಯ ಜೋಳಿಗೆ
ಈಗಲೂ ದಿನಂಪ್ರತಿ ತುಂಬುತ್ತಿದೆ 
ಅದು ಶ್ರೀಕ್ಷೇತ್ರಕೆ ನೀ ನೀಡಿದ ಕೊಡುಗೆ

ದೇವ ನಿನ್ನ ಈ ನೂರ ಎಂಟು 
ಬಯಲೊಳಗೆ ಆಸೆಗಳನು ಬೆತ್ತಲಾಗಿಸಿ
ನಾಡಿಗೆ ನೀ ಬೆಳೆಸಿದ ನಂಟು 
ಎಂದೂ ಕಳೆದುಕೊಳ್ಳಲಾರದಂತಾ ಗಂಟು 

ನೆಲ ನಾಡು ಜನ ಮನ ಕಾಯಕ 
ಎಲ್ಲವನು ಗೆಲುವುದೊಂದು ಧ್ಯಾನ
ಹೊಗಳಿಕೆ ಸನ್ಮಾನಗಳ ಬದಿಗಿಟ್ಟು
ಕೈಂಕರ್ಯದಲಿ ಸದಾ ತಲ್ಲೀನ 

ನಿನ್ನ ಆ ಮಿಂಚು ನೋಟ ಮಲ್ಲಿಗೆಯ ನಗು
ದಿಟ್ಟ ಹೆಜ್ಜೆ ಬಾಗಿದ ಬೆನ್ನಿನಲೂ ಹಲವು ಬಗೆ
ಕಾಣದ ದೇವರನು ಹುಡುಕಿದರೆ ಸಿಗುವ ನೀ
 ಅಲ್ಲಮನು ಕಂಡ ಗುಹೇಶ್ವರನೇ ಸೈ...!!!  

ಸದಾ ಒಳಿತನ್ನೇ ಬೆಳಸುತ್ತಾ, ಬೆಳಕಾಗಿರುವ ಶ್ರೀಗಳಿಗೆ ೧೦೮ನೇ ಹುಟ್ಟುಹಬ್ಬ ಹಾರ್ದಿಕ ಶುಭಾಶಯಗಳು... ಆಯಸ್ಸು ಅಕ್ಷಯವಾಗಲಿ... ಬಡವರಿಗೆ ನಿನ್ನೊಲುಮೆ ಸದಾ ದೊರಕಲಿ.

5 comments:

sunaath said...

ಶ್ರೀ ಗುರುಗಳ ಸೇವಾಕಾರ್ಯ ಅಪಾರವಾದದ್ದು. ನಿಮ್ಮ ಜೊತೆಗೆ, ನನ್ನ ಶುಭ ಹಾರೈಕೆಗಳನ್ನೂ ಸಮರ್ಪಿಸುತ್ತೇನೆ.

ಶಿವಪ್ರಕಾಶ್ said...

Very Nice One Akka...

ಶ್ರೀಗಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು...

Badarinath Palavalli said...

ನಡೆದಾಡುವ ದೇವರಿಗೆ ಜನುಮದಿನದ ಶುಭಾಷಯಗಳು.
ಶ್ರೀಗಳಿಗೆ ಭಾರತರತ್ನ ಸಲ್ಲಲೇಬೇಕು.
ಯಾವುದಾದರೊಂದು ಸಾಲನ್ನು ಉದ್ಧಾರಿಸೋಣವೆಂದು ಯೋಚಿಸಿದೆ, ಆದರೆ ಇಡೀ ಕವನವೇ ಶ್ರೇಷ್ಟವಾಗಿದೆಯಲ್ಲ. ತುಂಬಾ ಇಷ್ಟವಾಯಿತು.

Abhishek Umesh said...

ಸದ್ದಿಲ್ಲದೇ ಸಾಧನೆಯಿಲ್ಲಿ ಗದ್ದುಗೆಯೇರಿದೆ!
-GSS

Vinod Kumar Bangalore said...

ತುಂಬಾ ಇಷ್ಟವಾಯಿತು