Monday, June 8, 2015

ಅವನಿಲ್ಲದಾ ಹೊತ್ತು - How Old Are You..?

ನಿನ್ನ ವಯಸ್ಸು ಎಷ್ಟು..?


 ನನ್ನವನಿಲ್ಲದ ಹೊತ್ತು, ಟಿವಿ ರಿಮೋಟ್ ಕೈನಲ್ಲಿಯೇ ಇತ್ತು, ಚಾನಲ್ ಬದಲಿಸಿ ಬದಲಿಸಿ ಸಾಕಾಯ್ತು ಬರಿ ಅದೆ ಅತ್ತೆ-ಸೊಸೆ ವೈಷಮ್ಯ, ಮಕ್ಕಳಾಗೋಲ್ಲ ಗಂಡನಿಗೆ ಡೈವರ್ಸ್ ಇದೆ ತರಹ ಸೀರಿಯಲ್ ನೋಡಿ ದೇವಾ..!! ಇನ್ನು ನಾವು ಯಾವ ಜಮಾನದಲ್ಲಿದ್ದೀವಪ್ಪ, ನಮ್ಮ ಜನರನ್ನ ನೀನೆ ಕಾಪಾಡಬೇಕಪ್ಪ ಎಂದು ಕೊಂಡು ಟಿವಿ ಸ್ವಿಚ್ ಆಫ್ ಮಾಡಿದೆ.  

ಬೆಳಗ್ಗೆಯಷ್ಟೆ ಕೇರಳದ ಗೆಳತಿಯ ಹತ್ತಿರ ಇತ್ತೀಚೆಗೆ ಮಲಯಾಳಂನ ಒಳ್ಳೊಳ್ಳೆ ಫಿಲ್ಮ್ ಗಳನ್ನು ನೋಡಿಲ್ಲ, ಸ್ವಲ್ಪ ಲಿಸ್ಟ್ ಕೊಡು ಅಂದೆ. ಅದರಲ್ಲಿ ೪-೫ ಹೆಸರುಗಳಿದ್ದರಲ್ಲಿ ನನ್ನ ಸೆಳೆದಿದ್ದು "How Old Are You" ಚಿತ್ರದ ಹೆಸರು. ಹೇಗೂ ನನ್ನವನಿಲ್ಲ ನನ್ನಷ್ಟಕ್ಕೆ ನಾನೆ How Old Are You ಎಂದುಕೊಂಡು ಯೂಟ್ಯೂಬ್ ನಲ್ಲಿ ಹುಡುಕಿ ಎರಡೂವರೆ ಗಂಟೆಗಳ ಕಾಲ ನನ್ನನ್ನು ಹಿಡಿದಿಟ್ಟಿದ್ದು ಮಾತ್ರ ಸುಳ್ಳಲ್ಲ.  

ಸುಮಾರು ೧೩-೧೪ ವರ್ಷಗಳ ನಂತರ ಮರಳಿ ನಟನೆಗೆ ಬಂದ ಮಂಜು ವಾರಿಯರ್ ಬಹಳಷ್ಟು ಇಷ್ಟವಾದಳು, ಪಾತ್ರ ಹೇಳಿ ಮಾಡಿಸಿದಂತ್ತಿತ್ತು. ಒಂದು ಹೆಣ್ಣು ತನ್ನೊಳಗಿನ ಸಾಮರ್ಥ್ಯವನ್ನೆಲ್ಲ ಹೂತಿಟ್ಟು ಗಂಡ ಮನೆ-ಮಕ್ಕಳು ಸಂಸಾರ ಇದೆ ಜೀವನ, ಇಷ್ಟೆ ಬದುಕು ಎಂದು ಬೇಲಿ ಹಾಕಿಕೊಂಡವಳ ಯಶೋಗಾಥೆ. 

ನಿರುಪಮ ರಾಜೀವ್ ಆಗಷ್ಟೆ ೩೬ನೇ ವಯಸ್ಸಿಗೆ ಕಾಲಿಟ್ಟಿರುವಳು. ಅವಳ ವಯಸ್ಸೆ ಅವಳ ಬೆಳವಣಿಗೆಗೆ ಅಡಚಣೆಯಾದಂತೆ ಕಾಣುತ್ತದೆ. ಸಾಮಾನ್ಯ ಸರ್ಕಾರಿ ಕೆಲಸದಲ್ಲಿ ಕ್ಲರ್ಕ್ ಆಗಿರುವವಳ ಗಂಡ ತನ್ನ ಮುಂದಿನ ಭವಿಷ್ಯವನ್ನು ಐರ್ಲ್ಯಾಂಡ್ ನಲ್ಲಿ ಸೃಷ್ಟಿಸಿಕೊಳ್ಳಲು ಹೊರಡು ವ ತಯಾರಿಯಲ್ಲಿದ್ದವ. ಅವನ ಜೊತೆ ತಾನು ಕೆಲಸ ಹುಡುಕಿ ಅವನೊಟ್ಟಿಗೆ ಹೋಗಬೇಕೆಂಬ ಆಸೆಯಲಿ ಐರಿಷ್ ಕಂಪನಿಯ ಕೆಲಸಕ್ಕೆ ಇಂಟರ್ವ್ಯೂಗೆ ಹೋದವಳಿಗೆ ವಯಸ್ಸಿನ ಅಡ್ಡಿ. ಐರ್ಲ್ಯಾಂಡ್ ಗೆ ಹೋಗುವ ಗಂಡನಿಗೆ ತೊಂದರೆಯಾಗುತ್ತೆಂದು, ಗಂಡ ಮಾಡಿದ ಆಕ್ಸಿಡೆಂಟ್ ನಲ್ಲಿ ತನ್ನ ಹೆಸರು ತೂರಿಸಿಕೊಳ್ಳುವಳು. 

ಒಂದು ಬೆಳಗ್ಗೆ ನಿರುಪಮಾಗೆ ಐಜಿ ಕಚೇರಿಯಿಂದ ಕರೆ ಮಾಡಿ ಭಾರತದ ರಾಷ್ಟ್ರಪತಿ ನಿಮ್ಮನ್ನು ಭೇಟಿ ಮಾಡಬೇಕೆಂದು ಬಯಸಿದ್ದಾರೆ. ಕಾರಣ ಮಗಳು ತನ್ನ ಶಾಲೆಯಲ್ಲಿ ರಾಷ್ಟ್ರಪತಿಗಳನ್ನ ಕೇಳಿದ ಪ್ರಶ್ನೆ. ಭೇಟಿಗೂ ಮುನ್ನ ಅವಳನ್ನ ಗುರುತಿಸಿದ ಜನರೆ ಹೆಚ್ಚು. ಅದೇ ಖುಷಿಯಲ್ಲಿ ಪ್ರಧಾನಮಂತ್ರಿಗಳನ್ನ ಭೇಟಿ ಮಾಡಿದ್ದೇ ಒಂದು ದೊಡ್ಡ ದುರಂತ. ಅದಾದ ಮೇಲೆ ಎಲ್ಲೆಡೆ ನಗೆಪಾಟಲಿಗೆ ಈಡಾಗುತ್ತಾಳೆ. ಸಾಮಾಜಿಕ ತಾಣಗಳಲ್ಲಿ ಕಾರ್ಟೂನ್ ಆಗುವಳು. ಇದೇ ಕಾರಣಕ್ಕೆ ಅವಮಾನಗಳನ್ನ ಎದುರಿಸಿದ ಮಗಳು ಅಮ್ಮನನ್ನ ಕೀಳಾಗಿ ನೋಡುವುದು, ಗಂಡನ ಸ್ವಾರ್ಥ, ನಿರ್ಲಕ್ಷ್ಯತನ ಇದೆಲ್ಲವನ್ನು ಅನುಭವಿಸುತ್ತಿದ್ದ ನಿರುಪಮ ಇದ್ದಕ್ಕಿದ್ದಂತೆ ಗಂಡ-ಮಗಳು ಐರ್ಲ್ಯಾಂಡ್ ಗೆ ಹೊರಟು ನಿಂತಾಗ ಕುಗ್ಗಿ ಹೋಗುತ್ತಾಳೆ. 

ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಂಡು, ಅದೇ ಸರ್ಕಾರಿ ಕೆಲಸ,  ಜೊತೆಗೆ ಆಗೊಮ್ಮೆ ಈಗೊಮ್ಮೆ ಸ್ಕೈಪ್ ನಲ್ಲಿ ಮಗಳ ಜೊತೆ ಒಡಾನಾಟ, ಅಷ್ಟೇ ಜೀವನ. ಇವೆಲ್ಲದರ ಮಧ್ಯೆ ತನ್ನ ಹಳೆಯ ಗೆಳತಿ ಸೂಸನ್ ಭೇಟಿ. ಅವಳು ನೀಡಿದ ಧೈರ್ಯ ಕಾಲೇಜಿನಲ್ಲಿ ನಿನ್ನಲ್ಲಿದ್ದ ಹೋರಾಟದ ಕಿಚ್ಚು ಈಗಲೂ ಇರಲಿ, ಆಗಿನ ಧೈರ್ಯ ಹುಮ್ಮಸ್ಸು ಈಗೆಲ್ಲಿ ಹೋಯಿತು, ಅದನ್ನ ಅಲ್ಲೇ ಸುಟ್ಟುಹಾಕಿದ್ದೀಯಾ? ಈಗಲೂ ಕಾಲ ಮಿಂಚಿಲ್ಲ ಬದುಕಿನಲ್ಲಿ ಯಾವ ವಯಸ್ಸಿನಲ್ಲಾದರೂ ಆಸೆಗಳಿಗೆ ರೆಕ್ಕೆ ಕಟ್ಟಬಹುದು. ಜೀವನ ಎಂದಿಗೂ ಹೊಸತನವನ್ನ ಸೃಷ್ಟಿಸುತ್ತದೆ. ವಯಸ್ಸು ಯಾವುದಾದರೇನು ನಮ್ಮ ಕನಸಿಗೆ ನಾವೇ ಸಹಿ ಹಾಕಬೇಕು 'Your dream is your Signature' ಇದೊಂದು ಮಾತು ನಿರುಪಮಳಲ್ಲಿ ಮನಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇದಾದ ನಂತರ ಎಲ್ಲವೂ ಬದಲಾವಣೆಯ ಹಾದಿ.

ಮನೆಯ ಮಹಡಿಯ ಪುಟ್ಟ ಕೈತೋಟ ಮುಂದೊಂದು ದಿನ ದೇಶವೇ ಗುರುತಿಸುವಂತೆ ಮಾಡುವ ಕಥೆ. ಗಂಡ ಮತ್ತು ಮಗಳು ಅವಳ ಸಾಮರ್ಥ್ಯವನ್ನು ಗುರುತಿಸುವ ದಿನ ಹತ್ತಿರವಾದಾಗ ಹೆಂಡತಿಯಲ್ಲಿನ ಸಂತಸ. ನನ್ನಿಂದ ಏನೂ ಸಾಧ್ಯವಿಲ್ಲ ಎಂದುಕೊಂಡವಳಲ್ಲಿ ಸಾಧಿಸುವ ಛಲ ಕಾಣುವ ಚಿತ್ರ.  

ಎಷ್ಟೋ ಜನ ಗಂಡಂದಿರು ಹೆಂಡತಿಯರನ್ನ ಕೀಳಾಗೆ ಕಾಣುತ್ತಾರೆ. ಅವಳಿಂದ ಏನು ಸಾಧ್ಯ, ಅಯ್ಯೋ ನಿನ್ನ ಕೈಲಿ ಏನಾಗುತ್ತೆ.. ನೀನಿನ್ನು ಹಳೆ ಕಾಲದವಳು ಎಂದು ಹೀಯಾಳಿಸಿ ಆ ಹೆಣ್ಣಿನಲ್ಲಿರುವ ಸಾಮರ್ಥ್ಯವನ್ನೆ ಮೂಲೆಗುಂಪು ಮಾಡುತ್ತಾರೆ. ಅಂತವರು ನೋಡಲೆ ಬೇಕಾದ ಚಿತ್ರ.
ವಯಸ್ಸು ಎಷ್ಟಾದರೇನು ಸಾಧನೆಯ ಹಾದಿ ಸದಾ ಹಸಿರಾಗಿರುತ್ತದೆ. ಹೆಣ್ಣಿನ ಸಬಲೀಕರಣ,  Organic farming ಮತ್ತು ಅದರ ಅನುಕೂಲ ಇವೆಲ್ಲವನ್ನು ಬಿಚ್ಚಿಡುತ್ತಾ ಹೆಣ್ಣಿನ ಭಾವುಕತೆಯ ತುಮುಲಗಳ ಚಿತ್ರ ಎಲ್ಲರಿಗೂ ಸ್ಪೂರ್ತಿದಾಯಕ.

ರೋಷನ್ ಆಡ್ರೀವ್ಸ್ ಅವರ ಅತ್ಯುತ್ತಮ ನಿರ್ದೇಶನ ಈ ಚಿತ್ರವನ್ನು ನೋಡಿ ನೀವು? ನಿಮ್ಮೊಳಗಿನ ಸಾಮರ್ಥ್ಯವನ್ನ ಗುರುತಿಸಿಕೊಳ್ಳಿ. ಭಾಷೆಯಾವುದಾದರೇನು ಒಳ್ಳೆಯದು ಎಂದಾದರೆ ಖಂಡಿತಾ ಆಹ್ವಾನಿಸಿ ಆಹ್ಲಾದಿಸಿ. 

 https://www.youtube.com/watch?v=sbNAvwI4w8w  

7 comments:

ಚಿನ್ಮಯ ಭಟ್ said...

Khandita :-)

Anonymous said...

Very good movie, recently watched the tamil version of this movie. Jyotika in lead role, loved it.

ಶಿವಪ್ರಕಾಶ್ said...

ಹಾಯ್ ಅಕ್ಕ,
How old are you ?.... ಹ್ಹ ಹ್ಹ ಹ್ಹ... :)

Nice Review. Will try to watch :)

Thanks,
Shivaprakash HM

sunaath said...

ಒಂದು ಉತ್ತಮ ಚಿತ್ರವನ್ನು ಪರಿಚಯಿಸಿದ್ದಕ್ಕಾಗಿ ಅನೇಕ ಧನ್ಯವಾದಗಳು.

ಮೌನರಾಗ said...

ನಿಜಕ್ಕೂ ಮಳಯಾಳಂ ಸಿನೆಮಾಗಳು ಚಂದವಿರುತ್ತದೆ. ಕಡಿಮೆ ಬಜೆಟ್ಟಿನಲ್ಲಿ ಅತ್ಯುತ್ತಮವೆನಿಸುವ ಚಿತ್ರಗಳನ್ನು ಅವರು ನೀಡುತ್ತಾರೆ.. ನನಗೂ ಈ ಸಿನೆಮಾ ಬಹಳ ಇಷ್ಟವಾಗಿದೆ.. ನೈಸ್ ರಿವ್ಯೂ...

Fastag Service said...

ಮನಸು ಮೇಡಮ್ ,,,
ನಿಮ್ಮ ಬ್ಲಾಗ್ Theme ಬದಲಾಯಿಸಿದರೆ , ನಿಮ್ಮ ಬರುವಣಿಗೆಗೆ ತಕ್ಕಂತೆ ತುಂಬಾ ಆಕರ್ಷಣೀಯವಾಗಿ ಕಾಣುವುದು. ನಿಮ್ಮ ಬ್ಲಾಗ್ ಗೊಂದು ಖಳೆ ಬರುತ್ತೆ.

ಇಂತಿ ನಿಮ್ಮ ತಮ್ಮ "ವಿಘ್ನೇಶ್ವರ "

ಜಲನಯನ said...

ಮಲೆಯಾಳಂ ಅರಯಿಲ್ಲಾ... ನ್ಯಾನಿ ಕನ್ನಡ ಕುಟ್ಟಿ ಅಲ್ಲೋ...
ನೀವೇ ಕಥೆ ಹೇಳಿದ್ದು ಒಳ್ಳೆದಾಯ್ತು...
ಮತ್ತೆ ಯಾರಾದ್ರೂ ಹೌ ಓಲ್ಡ್ ಆರ್ ಯು ಅಂದ್ರೆ...ಕಷ್ಟ...ಹಿಹಿಹಿ