ಮೊನ್ನೆ...
ನೆನ್ನೆ...
ಸಂಜೆ ಸುಮಾರು ೬.೩೦ರ ಸಮಯ ಪಾರ್ಕ್ಗೆ ವಾಕ್ ಹೋಗೋಣ ಎಂದುಕೊಂಡು ಮನೆಯಿಂದ ಆಚೆ ಬಂದರೆ ನಮ್ಮ ಕಾರಿಗೆ ಅಡ್ಡವಾಗಿ ಮತ್ತೊಂದು ಕಾರ್ ನಿಲ್ಲಿಸಿದ್ದರಿಂದ ಹೊರತೆಗೆಯಲಾಗಲಿಲ್ಲ. ಸರಿ ಹಾಗೆ ಇಲ್ಲೇ ಒಂದೆರಡು ಸುತ್ತು ರಸ್ತೆಬದಿಯಲ್ಲಿಯೇ ಹೋಗಿ ಬರೋಣವೆಂದು ಹೊರಟೆವು. ಮನೆಯಿಂದ ೧೦ ಹೆಜ್ಜೆ ಮುಂದಿಡುತ್ತಿದ್ದಂತೆ, ರಪ್ಪನೆ ಒಂದು ಕಾರ್ ಬಂದು ನಿಂತಿತು. ಗಾಬರಿಯಲ್ಲಿ ನಾವು ಏನಾಯ್ತು ಏನು ಎಂದು ಪಕ್ಕ ತಿರುಗುತ್ತಿದ್ದಂತೆ ಕಾರಿನ ಕಿಟಿಕಿಯಿಂದ ಒಬ್ಬ ಹುಡುಗ ಒಂದು ನೀರಿನ ಬಾಟಲ್ ಮತ್ತು ಖರ್ಜೂರದ ಪೊಟ್ಟಣ ಕೈಗಿಡಲು ಬಂದ. ನಮಗೆ ಸ್ವಲ್ಪ ಗಾಬರಿ ಇದ್ದಕ್ಕಿದ್ದಂತೆ ಯಾರೋ ಬಂದು ನಮ್ಮ ಕೈಗೆ ಏನನ್ನೋ ಕೊಟ್ಟರೆ ಹೇಗೆ ತೆಗೆದುಕೊಳ್ಳೋದು. ಕ್ಷಣದಲ್ಲಿ ಏನು ಮಾಡಬೇಕೆಂದು ತೋರದೆ ಬೇಡ ಥಾಂಕ್ಯೂ ಎಂದೆವು, ಇರಲಿ ಪರವಾಗಿಲ್ಲ ತಗೋಳ್ಳಿ, ತಗೊಳ್ಳಿ ಎಂದು ಬಲವಂತದಿಂದ ಕೈಗಿಟ್ಟು ಬರ್‍ರನೆ ಹೊರಟ, ಸ್ವಲ್ಪ ದೂರಕ್ಕೆ ಹೋಗುತ್ತಿದ್ದಂತೆ ಮತ್ತೆ ಕಾರ್ ನಿಲ್ಲಿಸಿ ರಸ್ತೆ ಬದಿಯಲ್ಲಿ ಓಡಾಡುತ್ತಿದ್ದವರೆಲ್ಲರಿಗೂ ಹೀಗೆ ನೀರು ಮತ್ತೆ ಖರ್ಜೂರವನ್ನು ಕೊಡುತ್ತಲೇ ಹೋದರು.
ಓಡಾಡುತ್ತಿದ್ದ ಜನರೆಲ್ಲ ತಗೆದುಕೊಳ್ಳುತ್ತಿದ್ದದ್ದು ನೋಡಿ ನಮಗೂ ಸಮಾಧಾನವಾಯ್ತು (ಕೆಲವೊಮ್ಮೆ ಒಂದು ಕುರಿ ಹಳ್ಳಕ್ಕೆ ಬಿದ್ರೆ ನಾಚಿಕೆಯಾಗುತ್ತೆ, ಮತ್ತೊಂದು ಕುರಿಯೂ ಬಿದ್ದರೆ ಸ್ವಲ್ಪ ಸಮಾಧಾನವಾಗುತ್ತಲ್ಲಾ ಹಾಗೆ. ನಮಗೂ ಜೊತೆಯಾಗೋರು ಇದ್ದಾರಲ್ಲ ಪರ್ವಾಗಿಲ್ಲ ಎಂದು ನಮ್ಮನ್ನ ನಾವು ಸಮಾಧಾನ ಮಾಡ್ಕೋತೀವಿ :P ).
ಸರಿ ಅದ್ಯಾಕೆ ಅವಾ ಎಲ್ಲರಿಗೂ ಕೊಡ್ತಿದ್ದಾನಲ್ಲಾ? ಎಂದುಕೊಳ್ಳುತ್ತಿದ್ದಂತೆ, ಅಲ್ಲೇ ಮಸೀದಿಯಲ್ಲಿ ಅಲ್ಹಾ ಕೂಗುವ ಸದ್ದು ಕೇಳಿತು. ಆಗಲೇ ನಮಗೆ ಅರ್ಥವಾಗಿದ್ದು, ಓಹೋ ಇಂದಿನಿಂದ ರಮದಾನ್ ಉಪವಾಸ ಪ್ರಾರಂಭವಾಗಿದೆ. ಇನ್ನೇನು ಸಂಜೆ ಈ ದಿನದ ಉಪವಾಸ ಮುಕ್ತಾಯ ಮಾಡುವ ಸಮಯ. ಅದಕ್ಕೆ ರಸ್ತೆಯಲ್ಲಿ ಓಡಾಡುವ ಜನ ಆ ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡಲು ಅನುಕೂಲವಾಗುತ್ತೋ ಇಲ್ಲವೋ ಎಂದು ಯೋಚಿಸಿ, ನೀರು ಮತ್ತು ಖರ್ಜೂರ ಹಂಚುತ್ತಿದ್ದಾರೆ ಎಂಬುದು ಮನವರಿಕೆಯಾಯಿತು.
---------------------------------
ನೆನ್ನೆ...
ನೆನ್ನೆ ಸಂಜೆ ಪಾರ್ಕ್ಗೆ ವಾಕ್ ಹೊರಟ್ವಿ, ಅಲ್ಲೇ ರಸ್ತೆ ಮಧ್ಯೆ ರೆಡ್ ಸಿಗ್ನಲ್ ಸಿಕ್ಕ ಕಾರಣ ಹಲವಾರು ಕಾರ್ ಗಳು ನಿಂತಿದ್ದವು. ಅಲ್ಲೇ ಇಬ್ಬರು ಹುಡುಗರು ಕೈಚೀಲದಲ್ಲಿದ್ದ ನೀರಿನ ಬಾಟಲ್, ಖರ್ಜೂರದ ಪಾಕೆಟ್ ತೆಗೆದು ಎಲ್ಲರ ಕಾರ್ ಕಿಟಕಿ ತಟ್ಟುತ್ತಿದ್ದರು, ಆ ಹುಡುಗರು ಕೊಡುತ್ತಿದ್ದರೆ ಐಷಾರಾಮಿ ಕಾರಿನಲ್ಲಿ ಕುಳಿತ ಯಾರೊಬ್ಬರೂ ಬೇಡವೆನ್ನಲಿಲ್ಲ, ನಗುತ್ತಲೇ ತೆಗೆದುಕೊಂಡು ಥಾಂಕ್ಸ್ ಹೇಳುತ್ತಿದ್ದರು. ಅವರುಗಳು ತೆಗೆದುಕೊಂಡಂತೆಲ್ಲ ಈ ಹುಡುಗರ ಮುಖದಲ್ಲಿ ಮಂದಹಾಸ ಅರಳುತ್ತಿತ್ತು.
ಹೀಗೆ ಎರಡು ದಿನ ಎಲ್ಲರಿಗೂ ನೀರು ಮತ್ತು ಖರ್ಜೂರ ಕೊಡುತ್ತಿದ್ದವರು ಸುಮಾರು ೧೫-೧೮ ವರ್ಷದ ಮಕ್ಕಳಿರಬೇಕು. ಖುಷಿಯಾಯ್ತು ಅಪ್ಪ-ಅಮ್ಮ ಹೇಳಿ ಕಳುಹಿಸಿದ್ದಾರೋ ಅಥವಾ ಅವರೇ ಸ್ವಯಂ ಪ್ರೇರಿತರಾಗಿ ಈ ಕೆಲಸ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಆ ಮಕ್ಕಳಲ್ಲಿ ಈ ರಮದಾನ್ ಸಮಯದಲ್ಲಿ ಜನರಿಗೆ ಕಷ್ಟವಾಗುತ್ತೆ, ನಮ್ಮ ಕೈಲಾದದ್ದು ಮಾಡಬೇಕು ಎಂಬ ಭಾವನೆಯಲ್ಲಿ ಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಈ ೪೫ ಡಿಗ್ರಿ ಬಿಸಿಲ ಧಗೆಯಲ್ಲಿ ಉಪವಾಸ ಮಾಡುವವರೆಲ್ಲರಿಗೂ ಹಾಗೂ ಆ ಮಕ್ಕಳು ಧಣಿವಿಗೆ ನೀರು, ಹಸಿವಿಗೆ ಸಿಹಿ ಹಂಚಿ ಉಪವಾಸ ಮಾಡುವವರಿಗೆ ನೆರವಾಗುತ್ತಿದ್ದಾರೆ. ಅವರೆಲ್ಲರಿಗೂ ಸದಾ ಒಳಿತಿನ ಹಾದಿಯೇ ಸಿಗಲಿ ಎಂಬುದು ನನ್ನ ಆಶಯ.
2 comments:
ಓದಿ ಖುಶಿಯಾಯಿತು. ಈ ಪುಟ್ಟ ಮಕ್ಕಳಲ್ಲಿ ಇಂತಹ ಸಂವೇದನಾಶೀಲ ಮನಸ್ಸು ಇರುವದು ಅಚ್ಚರಿ ಹಾಗು ಸಂತೋಷವನ್ನು ತರುತ್ತಿದೆ.
ನಿಜಕ್ಕೂ ಇಂತಹ ಕಾರ್ಯಗಳು ಖುಷಿಯಾಗುತ್ತವೆ. ಧರ್ಮ ಯಾವುದಾದರೇನು ಕೆಲವು ಒಳ್ಳೆಯ ಹೃದಯಗಳು ಮಾಡುವ ಇಂತಹ ಕಾರ್ಯಗಳು ನಿಜವಾದ ಧರ್ಮದ ಅರ್ಥವನ್ನು ಸಾರಿಬಿಡುತ್ತದೆ. ಒಳ್ಳೆಯ ಕಾರ್ಯ ಮಾಡಿದ ಆ ಮಕ್ಕಳಿಗೆ ಶುಭವಾಗಲಿ
Post a Comment