Monday, August 1, 2016

ಮಣ್ಣಿನ ಹಾದಿ -೩

ಮಣ್ಣಿನ ಹಾದಿ

ಕಥೆಯ ಭಾಗ 1 & 2 ಈ ಲಿಂಗ್ ಗೆ ಭೇಟಿ ಕೊಡಿ : 

ಮುಂದುವರಿದ 3ನೇ ಭಾಗ...
ಅಪ್ಪನ ಬದಲಾವಣೆಯಲ್ಲಿ ಶಂಕ್ರ ಹೋಳಿಗೆ ಊಟ ಮಾಡುತ್ತಿದ್ದಂತೆ ಪರೀಕ್ಷೆಗಳು ಮುಗಿದವು, ರಜೆಯಲ್ಲಿ ಅಪ್ಪನೊಂದಿಗೆ ಜಮೀನಿನ ಕೆಲಸ, ಗದ್ದೆ ಕಳೆ, ದನ-ಕರುಗಳ ಕೆಲಸ ಹೀಗೆ ಮುಂದುವರಿಯುತ್ತಿದೆ.

ಲಕ್ಷ್ಮಮ್ಮನ ಅಣ್ಣ ಬೆಂಗಳೂರಿಂದ ಬಂದಿದ್ದಾನೆ ಮನೆಯಲ್ಲಿ ಹಬ್ಬದ ಅಡುಗೆ ನಡೆಯುತ್ತಿದೆ. “ನೋಡು ಲಕ್ಷ್ಮು..!! ಶಂಕ್ರುನ ಸ್ವಲ್ಪ ದಿನ ಕಳ್ಸು ಈಗ ರಜೆ ಅಯ್ತೆ ಮನೆನಲ್ಲಿ ಮಕ್ಕಳ ಜೊತೆ ಇದ್ದು ಬರ್ಲಿಎಂದು ಬಲವಂತವಾಗಿ ಬೆಂಗಳೂರಿಗೆ ಹೊರಡಿಸಿಕೊಂಡು ನಡೆದೇ ಬಿಡುತ್ತಾನೆಚಂದ್ರಣ್ಣ ಬಾವಮೈದುನನ ಮಾತಿಗೆ ಇಲ್ಲ ಎನ್ನದೇ ಮೌನವಹಿಸಿದ್ದ, ಲಕ್ಷ್ಮಮ್ಮಳಿಗೆ ಆಶ್ಚರ್ಯ ಹೀಗೆ ದಿಡೀರನೇ ಬಂದು ಕರೆದುಕೊಂಡುಹೋಗಿದ್ದು ಏಕೆ ಎಂದು ತನ್ನೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದಳು.

ಇತ್ತ ಶಂಕ್ರ ಬೆಂಗಳೂರಿಗೆ ಬಂದವನು ಸೀದ ಯಾವುದೋ ಪಾಠ ಮಾಡುವ ಮಾಸ್ತರರ ಎದುರು ನಿಲ್ಲಿಸಿದರು, “ನೋಡಿ ಇವನೇ ನಮ್ಮ ಹುಡುಗ, ಇನ್ನು ಒಂದು ತಿಂಗಳೊಳಗೆ ಸಿ.ಯಿ.ಟಿ ಬರುತ್ತೆ ಅದಕ್ಕೆ ಉತ್ತರಿಸುವಂತೆ ತಯಾರು ಮಾಡಿ, ದಿನ-ರಾತ್ರಿ ಎನ್ನದೆ ಇವನಿಗೆ ಟ್ಯೂಷನ್ ಮಾಡಿಮಾಸ್ಟರಿಗೆ ಹೇಳಿದ.  “ಶಂಕ್ರು ಸಂಜೆ ಬರ್ತೀನಿ ನಿನ್ನ ವಾಪಸ್ ಕರ್ಕೊಂಡು ಹೋಗೋಕ್ಕೆ" ಎಂದು ಮಾವ ಶಂಕರನಿಗೆ ಹೇಳಿ ಹೊರಟೇ ಬಿಟ್ಟ.

"ಹಾ..!! ಶಂಕ್ರು ನೋಡು, ನನ್ನ ಹೆಸರು ಶೇಖರ್ ನಿನಗೆ ನಾ ಮಾಡುವ ಪಾಠವನ್ನೆಲ್ಲ ಗಮನವಿಟ್ಟು ಓದು. ನಿನ್ನ ಮೇಲೆ ನಿನ್ನ ಮಾವನಿಗೆ ಅಪಾರ ಗೌರವ, ವ್ಯವಸ್ಥೆ ಸರಿ ಇಲ್ಲ, ಹಳ್ಳಿಯಲ್ಲಿ ಓದಲು ಮುಂದೆ ಕಷ್ಟ ಎಂದು ಇಲ್ಲಿಗೆ ಕರೆತಂದಿದ್ದಾರೆ. ಸಿ.ಯಿ.ಟಿ ರೂಪುರೇಷೆ ಎಲ್ಲವನ್ನು ನಿನಗೆ ತಿಳಿಸಿ ಅದಕ್ಕೆ ತಯಾರಾಗುವ ಪರಿ ಎಲ್ಲ ವಿವರಿಸುವೆ. ನೀನು ನಿನ್ನ ಮಾವ ಹೇಳಿದಂತೆ ಕೇಳು, ನೀನು ಬಹಳ ಬುದ್ಧಿವಂತಾ ಎಂದು ನಿನ್ನ ಮಾವ ಹೇಳಿದ್ದಾರೆ" ಹೀಗೆಂದು ಟ್ಯೂಷನ್ ಮಾಸ್ಟರ್ ಹೇಳಿದರು.

ಶೇಖರ್ ಸಿ.ಯಿ.ಟಿ ಮಾಹಿತಿ ನೀಡಿ ಶಂಕ್ರನನ್ನು ತಯಾರಿ ಮಾಡಿದರು, ಜೊತೆಗೆ ಪರೀಕ್ಷೆಯೂ ಮುಗಿಸಿದ. ಚೆನ್ನಾಗಿ ಪರೀಕ್ಷೆ ಬರೆದಿರುವೆ ಎಂಬ ಖುಷಿಯೂ ಇತ್ತು, ಮಾವನಿಗೆ ಯಾಕೆ ಡಾಕ್ಟರ್ ಮಾಡಿಸುವ ಆಸೆ. ಅವರಿಗೆ ಬೇಸರ ಬೇಡವೆಂದು ಈ ಪರೀಕ್ಷೆ ಬರೆದಿದ್ದೇನೆ. ಆದರೆ ಅಪ್ಪನ ಆಸೆ ಜೊತೆಗೆ ನನ್ನ ಆಸೆಯನ್ನೂ ಸಹ ನೆರವೇರಿಸಿಕೊಳ್ಳಬೇಕಿದೆ. ಸದ್ಯಕ್ಕೆ ಫಲಿತಾಂಶದವರೆಗೂ ಕಾಯುವ... ಈಗ ಊರ ಕಡೆ ಹೋಗಿ ಬರೋಣವೆಂದು ಶಂಕ್ರ ಹೊರಟ.

ಶೇಖರ್ ಸಿ.ಯಿ.ಟಿ ಮಾಹಿತಿ ನೀಡಿ ಶಂಕ್ರನನ್ನು ತಯಾರಿ ಮಾಡಿದರು ಜೊತೆಗೆ ಪರೀಕ್ಷೆಯೂ ಮುಗಿಸಿದ. ಚೆನ್ನಾಗಿ ಪರೀಕ್ಷೆ ಬರೆದಿರುವೆ ಎಂಬ ಖುಷಿಯೂ ಇತ್ತು, ಮಾವನಿಗೆ ಯಾಕೆ ಡಾಕ್ಟರ್ ಮಾಡಿಸುವ ಆಸೆ. ಅವರಿಗೆ ಬೇಸರ ಬೇಡವೆಂದು ಈ ಪರೀಕ್ಷೆ ಬರೆದಿದ್ದೇನೆ. ಆದರೆ ಅಪ್ಪನ ಆಸೆ ಜೊತೆಗೆ ನನ್ನ ಆಸೆಯನ್ನೂ ಸಹ ನೆರವೇರಿಸಿಕೊಳ್ಳಬೇಕಿದೆ. ಸದ್ಯಕ್ಕೆ ಫಲಿತಾಂಶದವರೆಗೂ ಕಾಯುವ... ಈಗ ಊರ ಕಡೆ ಹೋಗಿ ಬರೋಣವೆಂದು ಶಂಕ್ರ ಹೊರಟ.

ಬೆಳ್ಳಂ ಬೆಳಗ್ಗೆ ಶಾಲೆಯ ಪ್ರಿನ್ಸಿಪಾಲರು "ಶಂಕ್ರು, ಶಂಕ್ರು..." ಎಂದು ಜೋರಾಗಿ  ಕೂಗುತ್ತ ಮನೆ ಬಾಗಿಲು ತಟ್ಟುತ್ತಿದ್ದಾರೆ. ಒಳಗಡೆಯಿಂದ ಅಪ್ಪಾ, ಅಮ್ಮ ಶಂಕ್ರು ಓಡಿ ಬಂದು "ಯಾಕೆ ಏನಾಯ್ತು?" ಎಂದು ಎಲ್ಲರೂ ಗಾಬರಿಯಲ್ಲಿ ಪ್ರಿನ್ಸಿಪಾಲರ ಮುಖ ನೋಡುತ್ತಿದ್ದಾರೆ. "ಸ್ವಲ್ಪ ಕುಡಿಯೋಕ್ಕೆ ನೀರು ಕೊಡಮ್ಮ, ಈ ವಿಷಯಕ್ಕೆ ನೀನು ಪಾಯಸದೂಟ ಮಾಡಿ ಹಬ್ಬ ಮಾಡ್ಬೇಕು ಗೊತ್ತಾ..." ಎಂದು ಸಂತಸದಿಂದ "ಶಂಕ್ರು ನಮ್ಮ ತಾಲೋಕಿಗೆ ಅಲ್ಲಾ ರಾಜ್ಯಕ್ಕೆ ೪ನೇಯವನು ಗೊತ್ತಾ. ಅಷ್ಟು ಅಂಕಗಳನ್ನ ಗಳಿಸಿ ನಮಗೆ ನಮ್ಮ ಶಾಲೆಗೆ ಹೆಸರು ತಂದಿದ್ದಾನೆ". ಎಂದು ಪ್ರಿನ್ಸಿಪಾಲರು ಶಿಷ್ಯನ ಬಗ್ಗೆ ಖುಷಿಪಟ್ಟರು

ಅಪ್ಪಾ, ಅಮ್ಮನ ಮುಖ ಅರಳುತ್ತಲಿದೆ. ಮಗನನ್ನು ಬಾಚಿ ತಬ್ಬಿದ ಅಪ್ಪ ಹೆಮ್ಮೆಯ ನಗೆ ಬೀರುತ್ತಿದ್ದಾನೆ.

ಇದೇ ಖುಷಿ ಊರ ತುಂಬ ಹರಡಿತ್ತು. ಪಟೇಲರ ಜೊತೆಗೂಡಿ ಊರ ಮಂದಿಗೆ ಶಂಕ್ರನ ಗುಣಗಾನ ಮಾಡಲು ಮನೆ ಮುಂದೆ ಜಮಾಯಿಸಿದ್ದರು. ಊರ ಮಗ ಮನೆಮಗನೆಂಬಂತೆ ಹಳ್ಳಿ ಜನರು ಹಬ್ಬ ಆಚರಿಸಿದ್ದಾರೆ. ಇತ್ತ ಶಂಕ್ರನ ಸೋದರ ಮಾವ ಅಳಿಯನ ಸುದ್ದಿ ದಿನಪತ್ರಿಕೆಯಲ್ಲಿ ಕಂಡು ಊರಿಗೆ ಬಂದಿದ್ದಾನೆ. ಇಲ್ಲಿನ ಸಡಗರಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ.

ಸಂಜೆಯ ಸೂರ್ಯ ಪಕ್ಕಕ್ಕೆ ಸರಿಯುತ್ತಿದ್ದಂತೆ ಸೋದರಮಾವ ತನ್ನ ತಂಗಿಗೆ "ನೋಡವ್ವಾ..!! ಶಂಕ್ರುನ ನನ್ನ ಜೊತೆ ಕಳ್ಸು ನಾನು ಡಾಕ್ಟರ್ ಮಾಡುಸ್ತೀನಿ, ಚೆನ್ನಾಗಿ ಓದಿಸಿ ಒಳ್ಳೆ ವಿದ್ಯಾಭ್ಯಾಸ ಕೊಡುಸ್ತೀನಿ" ಎಂದು ಕರೆಯುತ್ತಾನೆ.

ಅಲ್ಲಣ್ಣ, "ಅಷ್ಟು ದೊಡ್ಡ ಓದು ನಮ್ಮ ಕೈನಲ್ಲಿ ಆಗುತ್ತಾ? ಇದೆಲ್ಲ ಕನಸು ಬಿಡಣ್ಣಾ, ಬೇಡ ಯಾವುದಾದ್ರು ಡಿಗ್ರಿ ಮಾಡಿ ಮೇಷ್ಟ್ರ ಕೆಲಸ ಮಾಡ್ಲಿ". ಎಂದು ಲಕ್ಷ್ಮಮ್ಮನ ಮಾತು.

"ಹಂಗಲ್ಲವ್ವಾ, ಅವ್ನಾ ಅವತ್ತು ಸಿ.ಯಿ.ಟಿ ಬರೆಯಲಿ ಅಂತಾ ಯಾಕೆ ಕರ್ಕೊಂಡು ಹೋಗಿದ್ದು? ಮುಂದೆ ಸಿ.ಯಿ.ಟಿ ಯಲ್ಲಿ ಒಳ್ಳೆ ಅಂಕ ತಗೊಂಡ್ರೆ ಗೌರ್ಮೆಂಟ್ ಕಾಲೇಜಿನಲ್ಲಿ ಸೀಟ್ ಸಿಗುತ್ತೆ ಖರ್ಚು ಕೂಡ ಅಷ್ಟು ಇರೋಲ್ಲ. ಸೀಟ್ ಸಿಕ್ರೆ ಹೋಗ್ಲಿ ಬಿಡು. ನಿನಗ್ಯಾಕೆ ತಕರಾರು". ಎಂದು ಲಕ್ಷ್ಮಮ್ಮ ಅಣ್ಣನ ವಾದ

ಕೊಸರುತ್ತಾ "ಹಾಗಲ್ಲ " ಚಂದ್ರಣ್ಣ ಮೆಲ್ಲಗೆ ನಿ ಎತ್ತಿದ, "ನನ್ಗೆ ಮಗ ಇಲ್ಲೇ ಹತ್ತಿರದ ಹಳ್ಳೀಲಿ ಯಾವುದಾದ್ರು ಹೈಸ್ಕೂಲ್ ಟೀಚರ್ ಆಗಿ ಮನೆಯಿಂದನೇ ಓಡಾಡ್ಕೊಂಡು ರೈತನ ಕೆಲಸ ಮಾಡ್ಲಿ. ಅನ್ನೋ ಆಸೆ . ಅಂತಾ ದೊಡ್ಡ ದೊಡ್ಡ ಓದೆಲ್ಲ ಬೇಡ ನಮ್ಗೆ. ಬಡವ ನೀ ಮಡಗಿದಂಗೆ ಇರು ಅಂತಾ ಇರ್ತೀವಿ".

ಇಲ್ಲ ಚಂದ್ರಣ್ಣ, "ನೀನೇನು ಯೋಚಿಸ್ಬೇಡ ಜಮೀನು, ವ್ಯವಸಾಯ ನಿನ್ನ ಕಾಲಕ್ಕೆ ಮುಗಿತು, ಮುಂದೆ ಮುಂದೆ ಜೀವನದ ಶೈಲಿ ಬದಲಾಗುತ್ತೆ. ಆಗ ನೀನು ಪಶ್ಚಾತ್ತಾಪ ಪಡಬಾರ್ದು ನೋಡು ಅದಕ್ಕೇ ಹೇಳ್ತಾ ಇದ್ದೀನಿ. ಆಗ್ಲಿ ನೋಡೋಣ  ಬಿಡು ಸಿ.ಯಿ.ಟಿ ಫಲಿತಾಂಶ ಬರ್ಲಿ ತೀರ್ಮಾನಿಸೋಣ" ಎಂದು ಊರ ಕಡೆ ಮಾವ ಹೊರಟು ನಿಂತ.

ಸಂಜೆ ಟಿವಿಯ ಮುಂದೆ ಕುಳಿತ ಸೋದರಮಾವ ಸಿ.ಯಿ.ಟಿ ಫಲಿತಾಂಶ ಈ ವೆಬ್ ತಾಣದಲ್ಲಿ ನೋಡಿ ಎಂದು ಪ್ರಸಾರ ಮಾಡುತ್ತಿದ್ದಂತೆ, ಕಂಪ್ಯೂಟರ್ ತೆಗೆದು ಅಳಿಯನ ನಂಬರ್ ನೋಡುತ್ತಾ ಕುಳಿತ, ಎಷ್ಟನೇ ರ‍್ಯಾಂಕ್ ಬಂದಿದ್ದಾನೇ ಎಂದು ಹುಡುಕುತ್ತಿದ್ದಾನೆ ಶಂಕ್ರ ೩೦೦ ನೇ ರ‍್ಯಾಂಕ್ನಲ್ಲಿ ರಾರಾಜಿಸುತ್ತಿದ್ದಾನೆ. ಮಾವನ ಮೆದುಳು ಲೆಕ್ಕಾಚಾರದಲ್ಲಿ ಮುಳುಗಿದೆ ೩೦೦ರನೇ ರ‍್ಯಾಂಕ್ ಆದರೆ ಖಂಡಿತಾ ಡಾಕ್ಟರ್ ಸೀಟ್ ಸಿಗುತ್ತೆ, ಖುಷಿಯಲ್ಲಿ ತಂಗಿಯ ಊರಿನ ಕಡೆ ಹೊರಟ.

ಇತ್ತ ತಂಗಿ ಮತ್ತು ಕುಟುಂಬದವರಿಗೆಲ್ಲಾ ಶಂಕ್ರನ ಫಲಿತಾಂಶ ಮುಂದಿನ ಆಗುಹೋಗುಗಳ ಬಗ್ಗೆ ಮಾವ ವಿವರಿಸುತ್ತಿದ್ದರೆ, ಶಂಕ್ರ ಗಂಟಲು ಸರಿಪಡಿಸಿಕೊಳ್ಳುತ್ತಾ..." ಮಾವ, ನನಗೆ ಡಾಕ್ಟರ್ ಮಾಡುವ ಇಷ್ಟವಿಲ್ಲ ನಾನು ಅಗ್ರಿಕಲ್ಚರ್ ಸೈನ್ಸ್ ಮಾಡೋ ಆಸೆ ಹೊಂದಿದ್ದೇನೆ ಮಾವ. ಅಪ್ಪ-ಅಮ್ಮ ಹೇಳುವಂತೆ ಹೈಸ್ಕೂಲ್ ಟೀಚರ್ ಆಗಲಿ ನೀವು ಹೇಳುವಂತೆ ಡಾಕ್ಟರ್ ಆಗಲಿ ಇಷ್ಟವಿಲ್ಲ. ನನಗೆ ನನ್ನದೇ ಆದ ಗುರಿ ಇದೆ. ದಯವಿಟ್ಟು ನಿಮ್ಮೆಲ್ಲರ ಸಹಕಾರ ಬೇಕುಅವನ ಆ ಮಾತಿನ ಗತ್ತಿಗೆ ಎಲ್ಲರೂ ಮೌನಕ್ಕೆ ಶರಣಾದರು. ಮುಂದೆ ಯಾರೊಬ್ಬರೂ ಮಾತನಾಡಲಿಲ್ಲ.

ಶಂಕ್ರ ಈಗ ಯಾರ ಮಾತು ಕೇಳುವವನಂತೆ ಕಾಣಲಿಲ್ಲ, ದಿಟ್ಟ ನಿರ್ಧಾರ ಅವನ ಮುಖಭಾವದಲ್ಲಿ ಎದ್ದು ಕಾಣುತ್ತಿತ್ತು. ಇತ್ತ ಮಾವ "ಸರಿ ಬಿಡು ನಿನಗೆ ಏನು ಇಷ್ಟನೋ ಅದೇ ಓದು, ಬಿಎಸ್ಸಿ ಬದಲು ಇಂಜಿನಿಯರಿಂಗ್ ನಲ್ಲಿ ಈಗ ಅಗ್ರಿಕಲ್ಚರ್ ಬಂದಿದೆ ಅದನ್ನ ಮಾಡು, ಈಗಷ್ಟೆ ಕೆಲವು ವರ್ಷಗಳಿಂದ ಪ್ರಾರಂಭವಾಗಿದೆ. ಆದರೆ ನಮ್ಮ ಜೊತೆ ಬೆಂಗಳೂರಿನಲ್ಲಿ ಇರುಈಗ ನಿನ್ಗೆ ಖುಷಿನಾ!!, ನಾಳೆನೆ ಎಲ್ಲಾ ಕಾಲೇಜುಗಳಲ್ಲಿ ವಿಚಾರಿಸಿ ನಿನಗೆ ವ್ಯವಸ್ಥೆ ಮಾಡುತ್ತೇನೆ" ಎಂದು ಊರಿಗೆ ಹೊರಟ.  
----
ಬೆಂಗಳೂರಿಗೆ ಬಂದ ಮಾವ ತಕ್ಷಣವೇ ಅಳಿಯನನ್ನು ಕಾಲೇಜಿಗೆ ಸೇರಿಸುವ ವ್ಯವಸ್ಥೆ ಮಾಡಿದ, ಕಾಲೇಜಿಗೆ ಬೇಕಾದ ದುಡ್ಡನ್ನೂ ಮಾವನೇ ಬರಿಸಿದ, ತಂಗಿಗೆ ಅಣ್ಣನ ಸಹಾಯ ಕಂಡು ಖುಷಿ, "ಯಾಕಣ್ಣ ನೀನು ಇಷ್ಟೆಲ್ಲಾ ಮಾಡುತ್ತೀಯಾ, ನಾವೇ ಕಾಲೇಜಿಗೆ ಬೇಕಾದ ದುಡ್ಡು ಹೊಂದಿಸಿಕೊಳ್ಳುವೆವು ನೀನು ತೊಂದರೆ ತೆಗೆದುಕೊಳ್ಳಬೇಡ. ಇಲ್ಲ ಲಕ್ಷ್ಮು ನಮ್ಮ ಕೈನಲ್ಲಿ ಸಾಧ್ಯವಾಗುವುದನ್ನು ಮಾಡಬೇಕು, ನಾವು ಯಾರೋ ಆ ಅನಾಥಾಶ್ರಮಕ್ಕೆ ದುಡ್ಡು, ಅಲ್ಲೆಲ್ಲೋ ದೇವಸ್ಥಾನ ಕಟ್ಟುತ್ತಾರೆ ದುಡ್ಡು ಕೊಡಿ ಎಂದಾಗ ನಾವುಗಳು ಕೈಎತ್ತಿ ಹಣ ನೀಡುತ್ತೇವೆ. ನಮ್ಮಲ್ಲೇ ನಮ್ಮ ಕುಟುಂಬದಲ್ಲೇ ಅವಶ್ಯಕತೆ ಇರುವಂತ ಮಕ್ಕಳಿಗೆ ಸಹಾಯ ಮಾಡೋಣ, ಅಲ್ಲದೇ ಓದುವ ಮಕ್ಕಳನ್ನು ಪ್ರೋತ್ಸಾಹಿಸೋಣ ಅವನು ಎಲ್ಲಿಯವರೆಗು ಓದುತ್ತಾನೋ ಅಲ್ಲಿಯವರೆಗೆ ನಾನೇ ಓದಿಸುತ್ತೇನೆ, ನೀವಿಬ್ಬರು ನಿಶ್ಚಿಂತೆಯಿಂದ ಇದ್ದು ಬಿಡಿ" ಎಂದು ತಂಗಿ ಮತ್ತು ಬಾವನಿಗೆ ಸಮಾಧಾನದ ಮಾಡಿದ.

ಕಾಲೇಜು ಇನ್ನೇನು ನಾಲ್ಕು ದಿನಗಳಿವೆ ಪ್ರಾರಂಭ, ಊರಿನಿಂದ ಅಮ್ಮ ಅಪ್ಪಾ ಶಂಕ್ರು ಬೆಂಗಳೂರಿಗೆ ಬಂದಿದ್ದಾರೆ. ಬಾವಮೈದುನನ ಮನೆ ನೋಡಿ ಕಣ್ಣು ಕಣ್ಣು ಬಿಡುತ್ತಾ "ಅಬ್ಬಾ ಎಂಥಾ ಅರಮನೆ ತಂದೆಗೃಹಪ್ರವೇಶಕ್ಕೆ ನಾನು ಬರಲಿಲ್ಲ ಹೊಲಗದ್ದೆ ಎಂದು ಅಲ್ಲಿಯೇ ಉಳಿದುಬಿಟ್ಟೆ, ಅದು ಹೆಂಗೆ ದುಡಿತಾರಪ್ಪಾ ದೇವ್ರೇ, ನಾವುಗಳೋ ಭೂಮಿ ತಾಯಿ ನಂಬ್ಕೊಂಡು ಬರಿ ಮಣ್ಣು ಕೆರೆಯೋದೆ ಕೆಲ್ಸ, ನಾನು ನಂಬಿದ ಭೂಮಿತಾಯಿ ನನಗೆ ಎಂದೂ ಮೋಸ ಮಾಡಿಲ್ಲ ಆದರೆ ಶ್ರೀಮಂತಿಕೆಯನ್ನು ಮಾತ್ರ ತೋರಿಸಿಲ್ಲ, ಹೊಟ್ಟೆಬಟ್ಟೆಗೆ ಎಂದೂ ಇಲ್ಲದಂತೆ ಜೀವಿಸುವಂತೆ ಮಾಡಲಿಲ್ಲ ಆ ನನ್ನ ಭೂಮ್ತಾಯಿ. ಇರಲಿ ಎಲ್ಲವೂ ನಾವಂದುಕೊಂಡಂತೆ ಆಗುತ್ತಾ ನನ್ನ ಬಾಮೈದಾ ವಿದ್ಯಾವಂತ, ಗುಣವಂತ ಜಾಣಕೂಡ ಅವನ ವಿದ್ಯೆಗೆ ತಕ್ಕ ಕೆಲಸ, ಸಂಬಳ ಇದ್ದೇ ಇರುತ್ತೆ. ನಮ್ಮ ಕಣ್ಣೆದುರು ಚೆಂದಾಗಿರ್ಲಿ ಹೇಗೋ ನನ್ನ ಮಗನಿಗೂ ಆಧಾರವಾಗಿ ನಿಂತುಕೊಂಡಿದ್ದಾನೆ ಅವನ ತಕ್ಕಂತೆ ಬಂಗಾರದಂತ ಹೆಂಡತಿ ಕೊಂಚವೂ ಬೇಭಾವವಿಲ್ಲದಂತೆ ನನ್ನ ಮಗನ್ನ ನೋಡಿಕೊಳ್ಳುತ್ತಾಳೆ" ಎಂದು ಮನಸಿನಲ್ಲೇ ಖುಷಿ ಪಟ್ಟುಕೊಳ್ಳುತ್ತಿದ್ದಾನೆ.

ಅಣ್ಣ ಅತ್ತಿಗೆ ಎದುರು ಕೂತ ಲಕ್ಷ್ಮಮ್ಮ-ಚಂದ್ರಣ್ಣ "ಕೈಮುಗಿಯುತ್ತಾ ಇವನು ನನ್ನ ಮಗನಲ್ಲ, ನಿಮ್ಮ ಮಗನೆಂದುಕೊಳ್ಳಿ, ಅವನೇನೇ ತಪ್ಪು ಮಾಡಿದರೂ ತಿದ್ದಿ ಬುದ್ಧಿ ಹೇಳಿ ನಾವಿನ್ನು ಇವತ್ತು ಸಂಜೆ ಬಸ್ಸಿಗೆ ಹೊರ್ಡ್ತೀವಿ" ಎಂದು ಚಂದ್ರಣ್ಣ ಹೇಳ್ತಾ ಇದ್ದಹಾಗೇ ಬಾವಮೈದುನ  "ಹೇ ಸುಮ್ಮನಿರಿ ಬಾವ, ನಾಳೆ ಹೋದರೆ ಆಯ್ತು, ಯಾವಾಗಲೂ ಹಳ್ಳಿ-ಹೊಲಗದ್ದೆ ಇದೇ ಆಯ್ತು ಬೆಂಗಳೂರನ್ನು ಒಮ್ಮೆ ನೋಡಿ, ನೀವುಗಳು ಸ್ವಲ್ಪ ಹಳ್ಳಿ ಬಿಟ್ಟು ಹೊರಗೆ ಬಂದು ನೋಡಿ ಜನ ಹೇಗಿದ್ದಾರೆ ಎಂದು, ನೀವೆಲ್ಲ ಇನ್ನು ಓಬಿರಾಯನ ಕಾಲದಲ್ಲೇ ಇದ್ದೀರಲ್ಲಾ!?" ಎಂದು ಸುಮ್ಮನಿರಿಸಿದ

ಸಂಜೆ ಊರು ಸುತ್ತುವ ಕಾರ್ಯಕ್ರಮ ಅಣ್ಣ ಅತ್ತಿಗೆ ಮಕ್ಕಳು ಎಲ್ಲರೂಟ್ಟಿಗೆ ಇವರೂ ಓರಿಯನ್ ಮಾಲ್ ನೋಡಲು ಹೋದರು, ಅಣ್ಣ ಅಲ್ಲೇ ಇದ್ದ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ "ಶಂಕ್ರು, ನಿನಗೆ ಯಾವ ಬಟ್ಟೆ ಬೇಕೋ, ಎಷ್ಟು ಬೇಕೋ ತಗೋ", ಎಂದು ಹೇಳಿ ಮಕ್ಕಳಾದ ದಿಶಂತ್ ಮತ್ತು ಪಲ್ಲವಿಯನ್ನ ಜೊತೆಮಾಡಿ ಕಳುಹಿಸಿದ. ದಿಶಂತ್ ಮತ್ತು ಶಂಕ್ರು ಒಂದೇ ವಾರಗೆಯವರು ದಿಶಂತನಿಗೆ ಇಷ್ಟವಾದ ಬಟ್ಟೆಯನ್ನೇ ಶಂಕ್ರುವಿಗೆ ಕೊಟ್ಟು "ಹೋಗಿ ಟ್ರಯಲ್ ರೂಮಿನಲ್ಲಿ ಚೆಕ್ ಮಾಡು ಒಮ್ಮೆ" ಎಂದು ಬಲವಂತವಾಗಿ ದಬ್ಬಿದ. ಟ್ರಯಲ್ ರೂಮಿಗೆ ಹೋದವನೇ ಕೊಂಚ ಕಣ್ಣ್ ಅರಳಿಸಿದ, ಅಬ್ಬಾ ಏನಿದು ಸುತ್ತ ಕನ್ನಡಿ ಇದೆ ಎಂದುಕೊಳ್ಳುತ್ತ ಹೊಸ ಬಟ್ಟೆ ಧರಿಸಿ "ಅಬ್ಬಾ ಇದೆಲ್ಲಾ ನಮ್ಮಂತವರು ಹಾಕುವ ಬಟ್ಟೆಯಲ್ಲ ತಂದೆ, ನಮಗ್ಯಾಕೆ ಬಡವ ನೀ ಮಡಗಿದಂತೆ ಇರು ಎಂದು ಇರುವುದು ವಾಸಿ, ಸೋದರ ಮಾವ ಏನೋ ಪ್ರೀತಿಗೆ ಇಷ್ಟೆಲ್ಲಾ ಮಾಡುತ್ತಿದ್ದಾರೆ ಅದನ್ನ ದುರುಪಯೋಗ ಪಡಿಸಿಕೊಳ್ಳುವುದು ಬೇಡ" ಎಂದುಕೊಂಡು ಬಟ್ಟೆ ಬದಲಿಸಿ ಹೊರಬಂದ. "ದಿಶಂತ್ ಇವೆಲ್ಲ ನನಗೆ ಬೇಡ ಕಣೋ ಇವೆಲ್ಲ ನಿಮ್ಮಗಳಿಗೇ ಸರಿ, ನನ್ನ ಹತ್ತಿರ ಈಗಾಗಲೇ ಇದಾವೆ, ಸದ್ಯಕ್ಕೆ ನೀನು ತಗೋ ಮುಂದೆ ಯಾವಾಗಲಾದರು ನೋಡೋಣ" ಎಂದು ಸಂಕೋಚದಿಂದ ಹೇಳಿದ  

ಮಾವ ಶಂಕ್ರನನ್ನು ಗದರಿದ, "ನೀನು ಬೇರೆ ನಾವು ಬೇರೆ ಎಂದುಕೊಂಡಿಲ್ಲ ಹಳ್ಳಿಯವ, ಬಡವ ಎಂದಾದ ಕೂಡಲೆ ಇಂತಹದೇ ಅಂಗಡಿಯಲ್ಲಿ ಬಟ್ಟೆ ತಗೋಬೇಕು, ಇಂತಹವೇ ಬಟ್ಟೆ ಧರಿಸಬೇಕು ಎಂದು ಶಾಸನ ಬರೆದಿದೆಯಾ, ನೀನು ಇಂತಹ ಕೀಳರಿಮೆಗಳಿಂದ ಹೊರಬರಬೇಕು, ನಿನ್ನ ನೋಡಿ ನಾಲ್ಕು ಜನ ಕಲಿಯುವಂತಾಗಬೇಕು. ನನಗೆ ಶಕ್ತಿ ಇದೆ ಕೊಡಿಸುತ್ತೇನೆ ಮುಂದೆ ನನಗೆ ಶಕ್ತಿ ಇಲ್ಲದಂತಾಗಿ ನೀನು ಒಳ್ಳೆಯ ಸ್ಥಾನಕ್ಕೆ ಹೋದರೆ ನಾನು ನೀ ಹೇಳಿದಂತೆ ಇದ್ದು ಬಿಡಲಾ..!! ಹೇಳು? ಸದ್ದಿಲ್ಲದೆ ಹೋಗಿ ಬಟ್ಟೆ ತಗೋ, ನೀನು ಏನೇ ಹೇಳಬೇಕೆಂದಿದ್ದರೆ ಓದಿನಲ್ಲಿ ತೋರಿಸು ಬೇರೇನು ತಲೆ ಕೆಡಿಸಿಕೊಳ್ಳಬೇಡ". ಇತ್ತ ಅತ್ತೆ ಸಾಕ್ಷಿ ಕೂಡ "ಅಯ್ಯೋ ಶಂಕ್ರು, ನನ್ನ ಯಾರು ಬಟ್ಟೇ ತಗೋ ಅಂತಾ ಕೇಳೋದೆ ಇಲ್ಲ ನೋಡು, ಚಾನ್ಸ್ ಸಿಕ್ಕಾಗ ಬಳಸಿಕೊಳ್ಳಪ್ಪಾ" ಎಂದು ನಗೆ ತರಿಸಿದರು.

ಊರೆಲ್ಲ ಸುತ್ತಾಡಿ, ಲಕ್ಷ್ಮಮ್ಮ-ಚಂದ್ರಣ್ಣನಿಗೂ ಬಟ್ಟೆಬರೆ, ಮನೆಗೆ ಬೇಕಾದ ಕೆಲವು ವಸ್ತುಗಳನ್ನ ಕೊಡಿಸಿಕೊಂಡು ಬಂದರು. ಎಷ್ಟೋ ವರುಷಗಳ ನಂತರ ಎಲ್ಲರೂ ಸೇರಿದ್ದು ಮನೆಯಲ್ಲಿ ಒಂದು ಹೊಸ ಕಳೆಯನ್ನು ತಂದಿತ್ತು. ಖುಷಿ ಮನೆ ಮಾಡಿತ್ತು. "ಅಣ್ಣ-ಅತ್ತಿಗೆ ಕಷ್ಟದಿಂದ ಮೇಲೆ ಬಂದವರು ಎಲ್ಲದರ ಅರಿವು ಅವರಿಗಿದೆ  ಶಂಕ್ರು, ನೀನು ಚೆನ್ನಾಗಿ ಓದಿ ಒಳ್ಳೆ ಹೆಸರು ತಗೊಂಡು ಬಾ, ಅವರು ಹೇಳಿದಂತೆ ಕೇಳು ಆಯ್ತಾ" ಎಂದು ಮರುದಿನ ಊರಿನ ಕಡೆ ಹೊರಟರು.
----
ಮನೆಗೆ ಹತ್ತಿರವೇ ಇರುವ ಕಾಲೇಜ್, ಊಟಕ್ಕೂ ಬಂದು ಹೋಗುವಷ್ಟು ಹತ್ತಿರ, ಬೆಳಿಗ್ಗೆ ೮ರಿಂದ ಸಂಜೆ ೫ರವರೆಗಿನ ಕಾಲೇಜು, ಮೊದಲ ದಿನ ಹೊಸ ಅನುಭವ, ಬೆಂಗಳೂರು ನಗರ ಹೊಸತು, ಇಲ್ಲಿನ ವಾತಾವರಣ, ಜನಾ ಎಲ್ಲವೂ ಹೊಸತು. ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಈ ಕಾಲೇಜಿನಲ್ಲಿ ಪ್ರಾರಂಭವಾಗಿ ಸುಮಾರು ೩ ವರ್ಷಗಳಾಗಿರಬೇಕು, ಇತ್ತೀಚೆಗೆ ವ್ಯವಸಾಯ, ಭೂಮಿ, ಮಣ್ಣು ಎಂಬ ಮಾತನ್ನೇ ಬಿಟ್ಟು ಎಲ್ಲರೂ ಸಾಫ್ಟ್ ವೇರ್ ಕೆಲಸಕ್ಕೆ ಮುಗಿಬೀಳುತ್ತಿರುವವರೇ ಹೆಚ್ಚು, ಬೇಸಾಯ ಮಾಡಿ ಸಾಧಿಸುವುದೇನು ಕೈನಲ್ಲಿ ಹಣವಿಲ್ಲದ್ದು ಜೀವನ ಕಷ್ಟ ಎಂದು ನಂಬಿಕೊಂಡು ಹಲವು ಬದಲಾವಣೆಗಳನ್ನು ಎಲ್ಲರೂ ಮಾಡುತ್ತಲೇ ಬಂದಿದ್ದಾರೆ. ಶಂಕ್ರ ಅದಾವುದೋ ಹೊಸ ಹುರುಪಿನಲ್ಲಿ ಬೇಸಾಯದತ್ತ ಒಲವು ಹರಿಸುವ ಸಲುವಾಗಿ ಈ ಕಾಲೇಜಿಗೆ ಸೇರಿಕೊಂಡ. ವಿಜ್ಞಾನವನ್ನು ತಿಳಿಯುವುದು ಅಷ್ಟು ಸುಲಭವಲ್ಲ, ವಿಜ್ಞಾನ ಈಗ ಹೆಚ್ಚು ಬೆಳೆದಿದೆ ಅದಕ್ಕೆ ತಕ್ಕಂತೆ ತಾಂತ್ರಿಕತೆಯೂ ಕೂಡ ಬೆಳೆದಿದೆ. ಈ ತಾಂತ್ರಿಕತೆಯನ್ನು ಉಳಿಸಿಕೊಂಡು ಅದೇ ಒಂದು ಅಸ್ತ್ರವಾಗಿ ಮುಂದುವರಿಯಬೇಕೆಂದು ಶಂಕ್ರ ತನ್ನ ಲೆಕ್ಕಾಚಾರದಲ್ಲೇ ಮುಳುಗಿದ್ದಾನೆನಾನು ಅಂದುಕೊಂಡಂತೆ ಇಲ್ಲಿ ಬೇಸಾಯಕ್ಕೆ ಒತ್ತು ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೂ ಮೊದಲ ವರ್ಷದಲ್ಲಿ  ಭೂಮಿ ಫಲವತ್ತತೆ, ವ್ಯವಸಾಯದ ಆಗುಹೋಗುಗಳು, ನೆಲ-ಜಲ ಎಲ್ಲದರ ಅಲ್ಪಸ್ವಲ್ಪ ಮಟ್ಟಿಗೆ ಅರಿವಿಗೆ ಬರಬಹುದು.

ಕಾಲೇಜಿಗೇನು ಸೇರಿಯಾಗಿತ್ತು, ಮುಂದಿಟ್ಟ ಹೆಜ್ಜೆ ಹಿಂದಿಡುವ ಮಾತೇ ಇಲ್ಲ, ಆದರೆ ಕಾಲೇಜಿನಲ್ಲಿ ಈ ಕೋರ್ಸಿಗೆ ಕೇವಲ ೧೦ ಜನರಿದ್ದರು ಅದರಲ್ಲಿ ಕೆಲವರು "ಈ ಬ್ರಾಂಚ್ ಹೊಸದು ಕೆಲಸ ಸಿಗುತ್ತೆ ಕಂಪನಿಗಳಲ್ಲಿ" ಎಂದರೆ  ಇನ್ನು ಕೆಲವರು "ಈ ಬ್ರಾಂಚ್ ಗೆ ಕಡಿಮೆ ಫೀಸ್ ಅದಕ್ಕೆ ಸೇರಿದೆ" ಎಂದರು. ಇನ್ನೊಂದಿಬ್ಬರು ಹೇಳ್ತಾರೆ "ಅಯ್ಯೋ ನಮ್ಗೆ ಓದೇನು ಬೇಕಿಲ್ಲ ನಮ್ಮ ಅಪ್ಪಾ ದುಡಿದಿಟ್ಟಿರೋದನ್ನ ಖರ್ಚು ಮಾಡ್ಕೊಂಡಿದ್ರೆ ಸಾಕು ಆದ್ರೇ ಮುಂದೆ ಮದುವೆ ಆಗ್ಬೇಕಾದ್ರೆ ಹುಡುಗ ಏನ್ ಓದಿದ್ದಾನೆ ಎಂದು ಕೇಳ್ತಾರೆ ಅದಕ್ಕೆ ಇದು ಸುಲಭದ ಸಬ್ಜಕ್ ಎಂದು ಸೇರಿಕೊಂಡ್ವಿ" ಎಂದು ಅವರವರದೇ ಲೋಕದಲ್ಲಿ ಉತ್ತರಿಸಿದ್ದರು. ಶಂಕ್ರನ ಯೋಜನೆಯೇ ಬೇರೆ ಇವರೆಲ್ಲರಿಗಿಂತ ವಿಭಿನ್ನ ದಿಕ್ಕಿನದು, ತನ್ನ ಊರು ನೆಲ ಜಲ ಇವೆಲ್ಲವನ್ನು ಉಳಿಸಿಕೊಂಡು ಅದರಲ್ಲೇ ಸಾಧನೆ ಮಾಡಬೇಕೆಂದು ಛಲ ತೊಟ್ಟವನು.

ಕಾಲೇಜಿನ ಮೊದಲ ದಿನ ಲೆಕ್ಚರರ್ ಅಗ್ರಿಕಲ್ಚರಲ್ ಬಗ್ಗೆ ವಿವರ ನೀಡುತ್ತಿದ್ದಾರೆ. "ಈ ಕೋರ್ಸ್ ಗೆ ಸೇರುವವರು ಬಹಳ ಕಮ್ಮಿ ಅಂತಹದರಲ್ಲಿ ನೀವುಗಳು ಸೇರಿದ್ದೀರಿ, ಇತ್ತೀಚೆಗೆ ತಂತ್ರಜ್ಞಾನ ಬೆಳೆದಂತೆ ಜನ ಕಷ್ಟದ ಕೆಲಸಕ್ಕೆ ಕೈಹಾಕುತ್ತಿಲ್ಲ, ನೀವುಗಳು ಧೈರ್ಯಮಾಡಿದ್ದೀರಿ ಇದೇ ಹುಮ್ಮಸ್ಸು ಮುಂದೆಯೂ ಇರಲಿ"

"ಕೃಷಿ ಎಂದರೆ ಬರೀ ಬೇಸಾಯಕ್ಕೆ ಮೀಸಲಿಡದೆ ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಆಹಾರ ಸಂಸ್ಕರಣೆ ಎಲ್ಲಾ ಮೂಲಭೂತ ಸೌಕರ್ಯ ಮತ್ತು ಕೈಗಾರಿಕಾ ಸಂಬಂಧವಾಗಿ ಪ್ರತಿ ವರ್ಷವೂ ತಿಳಿಸಲ್ಪಡುತ್ತದೆ. ನಿಮ್ಮಲ್ಲಿ ಕೃಷಿ ಮೂಲದಿಂದ ಬಂದವರಾದರೆ ನಿಮಗೆ ಕೃಷಿಯ ಹಿನ್ನೆಲೆ ತಿಳಿದಿರುತ್ತದೆ ಮತ್ತು ಆಸಕ್ತಿಯೂ ಹೆಚ್ಚಿರುತ್ತದೆ" ಎಂದು ಲೆಕ್ಚರರ್ ಹೇಳುವಾಗ ಶಂಕ್ರನಿಗೆ ನಿಜಕ್ಕೂ ಕೃಷಿ ಹಿನ್ನೆಲೆ ನನ್ನಲ್ಲಿರುವುದು ಒಳಿತೇ ಆಯಿತೆಂದುಕೊಳ್ಳುತ್ತಿದ್ದಾನೆ.

ಮೊದಲ ದಿನ ಕಾಲೇಜಿನಲ್ಲಿನ ಕೃಷಿ ವಾತಾವರಣವೇ ಅವನಲ್ಲಿ ಊರಿನ ಜಮೀನು ಬಾವಿ, ಕೊಳ, ಗದ್ದೆ ಕೆರೆ ಕಟ್ಟೆಯ ಎಲ್ಲವನ್ನೂ ನಿರ್ವಹಿಸಿ ಅದನ್ನು ಬೆಳೆಸಬೇಕು ಹೆಚ್ಚು ಉತ್ಪನ್ನಗಳನ್ನ ಉಳಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿರುತ್ತಾನೆ.
------
ವರ್ಷಗಳು ಉರುಳುತ್ತಿವೆ, ಕೃಷಿಯಲ್ಲಿನ ಒಳಅರಿವು, ಆಗುಹೋಗುಗಳ ಬಗ್ಗೆ ಶಂಕ್ರ ಮನನ ಮಾಡಿಕೊಂಡಿದ್ದಾನೆ ಇನ್ನೇನು ಕಾಲೇಜಿನ ಮುಕ್ತಾಯದ ವರ್ಷ, ದೂರದ ದೇಶವಾದ ನೆದರ್ಲ್ಯಾಂಡಿನಲ್ಲಿ ಕೃಷಿಗೆ ಹೆಚ್ಚು ಒತ್ತುಕೊಡುತ್ತಾರೆ ಅದೇ ದೇಶದಲ್ಲಿ ಪ್ರತಿ ದೇಶದ ೩ ವಿದ್ಯಾರ್ಥಿಗಳಿಗೆ ಕೃಷಿ ಕುರಿತಾಗಿ ಸಮ್ಮೇಳವನನ್ನು ಏರ್ಪಡಿಸಿದ್ದಾರೆ ಅಲ್ಲಿ ಭಾಗವಹಿಸಲು ಶಂಕ್ರನಿಗೆ ಅವಕಾಶ ಒದಗಿ ಬಂದಿದೆ. ಕಾಲೇಜಿನಲ್ಲಿ ಎಲ್ಲಾ ವಿಷಯದಲ್ಲೂ ಶಂಕ್ರನೇ ಅಗ್ರ ಶ್ರೇಯಾಂಕಿತನಾದ್ದರಿಂದ ಈ ಸದಾವಕಾಶ ಒಲಿದು ಬಂದಿತ್ತು, ಅಂತೆಯೇ ನೆದರ್ಲಾಂಡ್ ದೇಶದಲ್ಲಿ ವ್ಯವಸಾಯವನ್ನು ಅರಿಯಲು ಮಾವನ ಸಹಾಯ ಪಡೆದುಕೊಂಡ, ಮನೆಯಲ್ಲಿ ದಿನವೂ ಕುಳಿತು ಅಂತರ್ಜಾಲ ಮುಖೇನ ನೆದರ್ಲಾಂಡ್ ನ ಕೃಷಿ ಮತ್ತು ಭಾರತ ಕೃಷಿ ಎರಡನ್ನೂ ಅವಲೋಕಿಸಿ ಕಾಲೇಜಿನಲ್ಲಿ ಲೆಕ್ಟರರ್ಸ್ ಗಳ ಜೊತೆ ಸುಧೀರ್ಘ ಚರ್ಚೆ, ಕೃಷಿವಿಜ್ಞಾನಿಗಳೊಂದಿಗೆ ಚರ್ಚೆ ಎಲ್ಲರೊಂದಿಗೆ ಹಲವು ಮಾಹಿತಿ ಕಲೆಹಾಕಿ ನೆದರ್ಲಾಂಡ್ ಗೆ ಹೋಗುತ್ತಾನೆ.

ಶಂಕ್ರ "ತಾನು ಅಂದುಕೊಂಡಂತೆ ಇಲ್ಲ, ಹೊಸ ದೇಶ ಹಳ್ಳಿಯಿಂದ ಬಂದವನಿಗೆ ಈ ದೇಶದ ಬೇಸಾಯದ ಬಗ್ಗೆ ತಿಳಿದುಕೊಳ್ಳಬೇಕು". ಎಂಬ ಹುಮ್ಮಸ್ಸು ಅವನಲ್ಲಿ ಹೆಚ್ಚಾಯಿತು. ನಮ್ಮಲ್ಲಿನ ಕೃಷಿಗೂ ಇಲ್ಲಿಗೂ ಇರುವ ವ್ಯತ್ಯಾಸ ತಿಳಿದು ನನ್ನ ದೇಶಕ್ಕಾಗಿ ಏನಾದರು ಮಾಡಬೇಕೆಂದು ಶಂಕ್ರನ ಮನಸ್ಸು ಧೃಡವಾಯಿತು. ಅದಕ್ಕೆ ತಕ್ಕಂತೆ ಸಮಾವೇಶದಲ್ಲಿ ಭಾರತೀಯ ಕೃಷಿಯಲ್ಲಿ ಹೈಟೆಕ್ ಮತ್ತು ಜೈವಿಕ ತಂತ್ರಜ್ಞಾನ ಈ ವಿಷಯವಾಗಿ ತನ್ನ ನಿರೂಪಣೆ ಮತ್ತು ಅದಕ್ಕೆ ಉದಾಹರಣೆಗಳನ್ನು ನೀಡುತ್ತ ನೆರೆದಿದ್ದವರ ಮನಗೆದ್ದಿದ್ದ ಜೊತೆಗೆ ನೆದರ್ಲಾಂಡ್ ಸರ್ಕಾರ ಎರಡು ವರ್ಷಗಳ ಅಧ್ಯಾಯನ ಮತ್ತು ಸಂಶೋಧನೆಗಾಗಿ ಉಚಿತ ವ್ಯವಸ್ಥೆ ನೆರೆವೇರಿಸಿತ್ತು. ಇದು ಶಂಕ್ರನಿಗೆ ಸಂತಸವೇ ಸರಿ ಆದರೆ ಎರಡು ವರ್ಷ ಇಲ್ಲೇ ಇದ್ದರೆ ನಮ್ಮೂರು, ನನ್ನಪ್ಪನ ಆಸೆ ಎಲ್ಲವನ್ನು ಮರೆತುಬಿಡುತ್ತೇನೋ ಎಂಬ ಭಯ ಹುಟ್ಟಿತು. ಜೊತೆಗೆ ನೆದರ್ಲಾಂಡ್ ಹೋಗಬಾರದು ನನ್ನೂರಲ್ಲೇ ಇದ್ದು ಬಿಡುವುದೇ ವಾಸಿ ಎಂದು ತೀರ್ಮಾನಿಸಿದ.

ನೆದರ್ಲಾಂಡ್ ಭೇಟಿ, ಅಲ್ಲಿನ ಸಮಾವೇಶ, ಹೆಚ್ಚಿನ ಅಧ್ಯಯನಕ್ಕೆ ನೆದರ್ಲಾಂಡ್ ಸರ್ಕಾರದ ನೆರವು ಎಲ್ಲವನ್ನೂ ತಿಳಿದ ಶಂಕರನ ಮಾವ ಅಳಿಯನಿಗೆ ಪ್ರೋತ್ಸಾಹಕ್ಕೆ ನಿಂತನು, ತಡಮಾಡದೆ ಇಂಜಿನಿಯರಿಂಗ್ ಮುಗಿದ ಕೂಡಲೆ ನೆದರ್ಲಾಂಡಿನತ್ತ ಹೊರಡಲು ತಯಾರಿ ಮಾಡಿದ. ಒಲ್ಲದ ಮನಸಿನಲ್ಲೇ ನೆದರ್ಲಾಂಡಿನತ್ತ ಹೊರಟ ಕೂಡ. ಇತ್ತ ಶಂಕ್ರನ  ಅಪ್ಪ, ಅಮ್ಮನಿಗೆ  "ಇವನು ದೇಶ ಬಿಟ್ಟು ಹೋದ ಇನ್ನು ನಮ್ಮ ಕೈಗೆ ಸಿಗುವವನಲ್ಲ, ನನ್ನ ಆಸೆ ಎಲ್ಲ ಮಣ್ಣಾಯ್ತು ಲಕ್ಮು, ಮಗ ಇನ್ನು ಬೇಸಾಯ ಯಾವುದೋ ದೇಶದಲ್ಲಿ ಮಾಡೋಕ್ಕೆ ಹೊರಟ ಇನ್ನು ನಮ್ಮೂರು ಯಾಕೆ ಬೇಕು ಹೇಳು". ಎಂದು ತಲೆಮೇಲೆ ಕೈಹೊತ್ತು ಕುಳಿತ.


ಶಂಕ್ರು ಫಾರಿನ್ ಪಾಲಾದನೇ?? ವ್ಯವಸಾಯದ ಕನಸು ಮಣ್ಣಾಯಿತೇ?? ಕಥೆಯ ಅಂತ್ಯ ಮುಂದಿನಭಾಗದಲ್ಲಿ.....

1 comment:

sunaath said...

ತುಂಬಾ ಸ್ವಾರಸ್ಯಕರವಾದ ಕಥಾನಕ. ಮುಂದಿನ ಕಂತುಗಳಿಗಾಗಿ ಕಾಯುತ್ತಿದ್ದೇನೆ.