ಸಂಗೀತಕೂ ಸಾಹಿತ್ಯಕೂ ಏನೋ ನಂಟು
ರಾಗಸುಧೆಯಿಂದ ಸಾಹಿತ್ಯಕೆ ಕಲಾ ಮೆರುಗುಂಟು
ಸಂಗೀತ-ಸಾಹಿತ್ಯಕೆ ಸಂಬಂಧರೂಢಿಸುವಲಿ
ಈ ಗಾನಗಾರುಡಿಗನ ಪಾತ್ರ ನೂರೆಂಟು
ನೀನಿಲ್ಲದ ಸಂಗೀತ ಸುಧೆ ಕರಾಳ ಮೌನದಿ
ಕನ್ನಡಿಗರ ಮನ-ಮನೆಗಳಲಿ ಕಾರ್ಮೋಡ ಕವಿಸಿದೆ
ಹುಟ್ಟೊಂದು ದಿನ, ಸಾವೊಂದು ದಿನವೆಂದು ಬರೆದನಾ ಬ್ರಹ್ಮ
ನಿನ್ನ ಹುಟ್ಟುಸಾವು ಎರಡೂ ಒಂದೇ ದಿನ ಏನಿದರ ಮರ್ಮ!!!!
ನಿನ್ನ ಅಗಲಿಕೆಯಿಂದ ಸಂಗೀತ ಸರಸ್ವತಿ ಕಳೆಗುಂದಿಹಳು
ಈ ನಿನ್ನ ಸ್ಥಾನವ ತುಂಬಲು ಹಾತೊರೆದು ನಿಂದಿಹಳು
ಓ ದೇವನೆ ಸಂಗೀತ-ಸಾಹಿತ್ಯ ಸರಸ್ವತಿಗೆ
ಎಂದೂ ಬೀಳದಿರಲಿ ದುಃಖದ ಕರಿನೆರಳು
ಓ ಗಾನ ಕೋಗಿಲೆಯೆ ಕೇಳಲೆಲ್ಲರು ಧ್ವನಿಸುರುಳಿಯಲಿ ನಿನ್ನ ಗಾಯನ
ನಿನ್ನ ಆ ಮಾಂತ್ರಿಕ ಧನಿಗೆ ಮನಸೂರೆಗೊಂಡು ಮಾಡಲೆಲ್ಲರು ನಿನ್ನ ಮನನ
ಓ ಸಂಗೀತ ಆರಾಧಕನೆ ನಿನಗಿದೋ ನಮ್ಮೆಲ್ಲರ ಹೃತ್ಪೂರ್ವಕ ನಮನ
ನಮ್ಮನಗಲಿದ ದೇಹ ಮತ್ತೊಮ್ಮೆ ಹುಟ್ಟಿ ಕರುನಾಡಿನಲಿ ಮೂಡಿಸಲಿ ಸಂಚಲನ
ನಾನು ಕಚೇರಿಯಿಂದ ಮನೆಗೆ ಹೋಗುವ ಹೊತ್ತಿಗೆ ಸರಿಯಾಗಿ ಟಿವಿಯಲ್ಲಿ ವಾರ್ತೆಗಳು ಬರುವ ಸಮಯ, ನನ್ನ ಮಗನ ನೆಚ್ಚಿನ ಗಾಯಕ ಸಿ. ಅಶ್ವಥ್ (ತಾತ) ಇವರ ಪಾರ್ಥೀವ ಶರೀರವನ್ನು ಟಿ.ವಿಯಲ್ಲಿ ತೋರಿಸುತ್ತಲಿದ್ದರು ತಕ್ಷಣ ಅಯ್ಯೋ ಆ ತಾತ ಸತ್ತುಹೋಗಿದ್ದಾರೆ ಅಮ್ಮ ಇವರ ಮೇಲೆ ಒಂದು ಕವನ ಬರಿ ಬ್ಲಾಗಿಗೆ ಹಾಕು ಪ್ಲೀಸ್ ಎಂದು ತುಂಬಾ ನೊಂದು ಹೇಳಿದನು. ನನ್ನ ಮಗನ ದುಃಖ ನೀಗಿಸಲು ಈ ಪುಟ್ಟ ಕವನ ಹಾಗೆಯೇ ಸಂಗೀತಗಾರುಡಿಗನಿಗೆ ನಮ್ಮ ಆಶ್ರುತರ್ಪಣ.
ಈಗಷ್ಟೆ ತಿಳಿದ ಆಘಾತಕಾರಿ ಸುದ್ದಿ ಕನ್ನಡ ಚಲಚಿತ್ರ ಕಂಡ ಮೇರು ನಟ ವಿಷ್ಣುವಿನ ಅಕಾಲಿಕ ಮರಣ ಕನ್ನಡ ಸಾಹಿತ್ಯ,ಸಂಗೀತ,ಕಲಾ ಸರಸ್ವತಿಗೆ ಮತ್ತೊಂದು ನಷ್ಟವನ್ನು ತಂದುಕೊಟ್ಟಿದೆ... ೨೦೦೯ರ ಕೊನೆದಿನಗಳು ಕನ್ನಡಿಗರಿಗೆ ದುಃಖದ ಹೊಳೆಯನ್ನರಿಸಿದೆ.
ಕನ್ನಡಿಗರನ್ನಗಲಿದ ಸಾಹಸಸಿಂಹ ವಿಷ್ಣು ಹಾಗು ಸಿ. ಅಶ್ವಥ್ ಅವರಿಗೆ ನಮ್ಮ ನಮನ