-ಕಥೆ -
ಅನಾಥ ಗುರು..
ಇದು ನಮ್ಮ-ನಿಮ್ಮ ನಡುವಿನ ಜೀವನ
ನಾನು ಅಂದ್ರೇ ನನ್ನ ಅಪ್ಪ, ಅಮ್ಮ, ಅಣ್ಣಂದಿರು ಅಕ್ಕಂದಿರಿಗೆ ಪ್ರಾಣ...!!! ಚಿಕ್ಕವಳಾಗಿ ಹುಟ್ಟಬೇಕು ಎಲ್ಲರ ಪ್ರೀತಿ ಗಳಿಸಬೇಕು.. ಇದು ನಾನು ಬೆಳೆಯುತ್ತಿರುವಾಗ ನನ್ನೊಳ ಮನಸ್ಸಿಗೇ ಹೇಳಿಕೊಂಡ ವಿಷಯ. ನಾನಿನ್ನೂ ಹತ್ತನೇ ತರಗತಿ ಅಪ್ಪ ಅಮ್ಮ ಇಬ್ಬರೂ ನನ್ನನ್ನ ಬಿಟ್ಟು ಕಾಣದ ಲೋಕಕ್ಕೆ ಹೋಗಿಯಾಗಿತ್ತು, ಅಮ್ಮ ಇಲ್ಲದಿದ್ದರೂ ಅಕ್ಕಂದಿರಿದ್ದಾರೆ, ಅಪ್ಪ ಇಲ್ಲದಿದ್ದರೂ ಅಣ್ಣಂದಿರಿದ್ದಾರೆ ಎಂಬ ಧೈರ್ಯ ನನ್ನಲ್ಲಿತ್ತು. ಎಸ್. ಎಲ್. ಸಿ ಪರೀಕ್ಷೆ ಮುಗಿಸಿದೆ ರಜೆಯ ನೆಪವೊಡ್ಡಿ ಅಕ್ಕಂದಿರ ಮನೆಯಲ್ಲೇ ತಿರುಗಾಡಿ ಬಂದಿದ್ದೆ. ಅಣ್ಣ ಮುಂದಿನ ವಿಧ್ಯಾಭ್ಯಾಸಕ್ಕೆ ಕಳುಹಿಸುತ್ತಾನೆ ಎಂದುಕೊಂಡಿದ್ದೆ, ಆದರೆ ಅಣ್ಣ ಯಾಕೋ ಮನಸೇ ಮಾಡಲಿಲ್ಲ. ಇದ್ದ ಇನ್ನಿಬ್ಬರು ಅಣ್ಣಂದಿರನ್ನ ಕೇಳಿದರೆ ಬೇಡ ಮಗಳೇ ನಿನ್ನನ್ನ ಮುದ್ದಾಗಿ ಬೆಳೆಸಿದ್ದೀವಿ ನೀನು ಕಾಲೇಜ್ ಗೆ ಎಂದು ಹೊರಗಡೆ ಹೋದರೆ ಬರುವವರೆಗೂ ನಮಗೆ ಭಯ, ನಿನಗೆ ಯಾವುದೇ ಕೊರತೆ ಇಲ್ಲದೆ ನಿನ್ನ ನಾವು ಸಾಕುತ್ತೇವೆ... ಈ ಪ್ರೀತಿ ಅಣ್ಣಂದಿರ ಮೇಲೆ ನಂಬಿಕೆ ಇಲ್ಲವೇ..!! ಕಂದ, ಮನೆಯಲ್ಲೇ ಆರಾಮಾಗಿ ಇದ್ದು ಬಿಡು ಎಂದು ಅಣ್ಣಂದಿರು ಹೇಳಿದಾಗ..ನನ್ಗೆ ಆಕಾಶ ಎರಡೇ ಗೇಣು...!! ಎಂತಹ ಪ್ರೀತಿ?? ಅಬ್ಬಾ!! ನಾನೇ ಧನ್ಯಳು ಎಂದೆನಿಸಿತು.
ಅಣ್ಣಂದಿರ ಮುದ್ದಿಗೆ ಮನೆಯಲ್ಲೇ ಉಳಿದೆ. ಇದೆಲ್ಲದರ ನಡುವೆಯೇ ಅತ್ತಿಗೆಯಂದಿರು ಮನೆ ತುಂಬಿಕೊಂಡಿದ್ದರು, ಮೂವರು ಅಣ್ಣಂದಿರು, ಅತ್ತಿಗೆಯಂದಿರಿಗೆ ನನ್ನ ಮೇಲೆ ಪ್ರೀತಿ, ಕಾಳಜಿ ಎಲ್ಲವೂ ಇತ್ತು. ನಾನು ಸಹಾ ಅತ್ತಿಗೆಯರನ್ನೂ ಬಹಳಷ್ಟು ಹೊಂದುಕೊಂಡುಬಿಟ್ಟಿದ್ದೆ. ಅತ್ತಿಗೆಯಂದಿರೂ ತಮ್ಮ ಬಾಣಂತನಕ್ಕೊ ಹೋಗದೇ ನನ್ನ ಮೇಲಿನ ಕಾಳಜಿಗೋ ಅಥವಾ ಬಿಟ್ಟಿರಲಾರದೆಯೋ ಅವರೂ ಸಹ ತನ್ನ ತವರು ಮನೆಗಳತ್ತ ತಲೆ ಹಾಕಲಿಲ್ಲ. ಸದಾ ನನ್ನದೇ ಗುಣಗಾನ ನೀನು ನಮ್ಮ ತಾಯಿ ಇದ್ದಂಗೆ, ನಮ್ಮ ಸೇವೆ ಎಷ್ಟು ಚೆನ್ನಾಗಿ ಮಾಡ್ತೀ, ಮಕ್ಕಳನ್ನೆಲ್ಲಾ ಪ್ರೀತಿಸ್ತೀ ನಿನ್ನ ಪಡೆದದ್ದೇ ಪುಣ್ಯ ಎಂದು ಹೇಳಿದರೆ ಭೂಮಿ ಮೇಲೆ ನಿಲ್ಲಲಾಗದೇ ತೇಲಾಡುವ ಹಾಗೆ ಆಗ್ತಾ ಇದ್ದದ್ದಂತೂ ಸತ್ಯ.
ಕನಸು ಕಾಣುವ ವಯಸ್ಸು ನನ್ನದು, ವಯಸ್ಸಿಗೂ ಮೀರಿದ ಆಸೆ, ಆಕಾಂಕ್ಷೆಗಳು ನನ್ನನ್ನ ಕಾಡುತ್ತಲೇ ಇದ್ದವು, ಮದುವೆಯ ವಯಸ್ಸಾಗಿದೆ ನನಗೂ ಎನ್ನುವುದಕ್ಕಿಂತ, ನಾನೂ ಒಬ್ಬನ ಆಸರೆಯ ಬೆಚ್ಚನೆಯ ಸುಖದಲ್ಲಿ ಬಾಳಬೇಕು ಎಂಬ ತುಮುಲ ಸದಾ ಕಾಡುತ್ತಲೇ ಇತ್ತು. ಅಕ್ಕ-ಪಕ್ಕದ ಮನೆಯಲ್ಲಿದ್ದ ನನ್ನ ಸ್ನೇಹಿತೆಯರು ಮದುವೆಯಾಗಿ ಬಾಣಂತನಕ್ಕೆ ತವರಿಗೆ ಬಂದಿದ್ದಾರೆ. ನನ್ನ ಆಪ್ತ ಗೆಳತಿ ಜಾನುಗೆ (ಜಾನಕಿ) ಎಂಥಾ ಮನೆ ಸಿಕ್ಕಿದೆ ಎಂದರೆ ತಂದೆಯ ಮನೆಯಲ್ಲಿ ಎಂದೂ ಕಾಣದ ಸುಖದ ಸುಪ್ಪತ್ತಿಗೆಯ ಮನೆ, ಪ್ರೀತಿಸೋ ಗಂಡ ಸದಾ ಗಂಡನನ್ನೇ ಹೊಗಳುತ್ತಿದ್ದ ಜಾನುನ ನೋಡಿದ್ರೇ ನಾನೂ ಮದುವೆಯಾಗಬೇಕು, ನನಗೂ ಅಂತಹ ಗಂಡ ಬೇಕು ಎಂಬಂತಾಗುತ್ತಿತ್ತು. ಜಾನೂ ಬಾಣಂತನಕ್ಕೆ ಬಂದರೆ ಅವಳನ್ನು ಬಿಟ್ಟಿರಲಾರದೇ ಓಡೋಡಿ ಬರುವ ಅವಳ ಗಂಡ, ಕೈಯಲ್ಲಿ ಹಿಡಿದುತರುವ ಗುಲಾಬಿ, ಮಲ್ಲಿಗೆ ಹೂ ಹಣ್ಣು ಕಾಯಿಗಳಲ್ಲೇ ಹೆಂಡತಿಯನ್ನು ಕಾಣುವ ಅವನ ಸಂಭ್ರಮ ನೋಡಿಯೇ, ನನ್ನಲ್ಲಿ ಹೊಸ ಆಸೆ ಅಂಕುರಿಸಿತ್ತು. ಇಷ್ಟೆಲ್ಲಾ ಆಸೆಗಳನ್ನು ಹೇಳಿಕೊಳ್ಳಲು ಎಷ್ಟೇ ಆಪ್ತರು, ಪ್ರೀತಿಸುವವರು ಇದ್ದರೂ ಯಾರೊಂದಿಗೂ ನನ್ನ ಆಸೆ ಬಿಚ್ಚಿಡಲಾಗಲೇ ಇಲ್ಲ.
ಸಂಜೆಯ ಕತ್ತಲು ಕವಿಯುವ ಮುನ್ನ ನೆಂಟರು ನನ್ನ ಬಾಳಿನ ಬೆಳಕನ್ನು ಹಚ್ಚಲು ಬಂದರು, ದೂರ ಸಂಬಂಧಿಕರು ಯಾವುದೋ ಒಂದು ಗಂಡಿನ ಜಾಡು ಹಿಡಿದು ಬಂದಿದ್ದರು, ಅಣ್ಣಂದಿರು, ಅಕ್ಕಂದಿರು ಅತ್ತಿಗೆಯರೂ ಎಲ್ಲರೂ ಸೇರಿದ್ದರು. ಒಬ್ಬರ ಮುಖ ಒಬ್ಬರು ನೋಡುಕೊಳ್ಳುತ್ತ ನಮಗೆ ನನ್ನ ತಂಗಿಯನ್ನು ಬೇರೆ ಮನೆಗೆ ಕಳುಹಿಸುವ ಮನಸೇ ಇಲ್ಲ. ನನ್ನ ತಂಗಿ ಬೇರೊಂದು ಮನೆಗೆ ಹೋದರೆ ಎಲ್ಲಿ ನಲುಗುವಳೋ ಎಂಬ ನೋವು ಕಾಡುತ್ತಿದೆ. ಅಣ್ಣಂದಿರ ಮಾತಿಗೆ ಅಕ್ಕಂದಿರು ಹೀಗೆಲ್ಲ ಹೇಳಿದರೆ ಹೇಗೆ ಮನೆ ಮಗಳು ಎಷ್ಟು ದಿನವೆಂದು ಮನೆಯಲ್ಲಿರಲು ಸಾಧ್ಯ?. ಮದುವೆ ಎಂಬುದು ಹೆಣ್ಣಿನ ಜೀವನದ ಅತಿ ಮುಖ್ಯ ಘಟ್ಟ. ಅವಳನ್ನು ಧಾರೆ ಎರೆದು ಕೊಡಿ ಎಂಬ ಮಾತಿಗೋ ಏನೋ ಒಟ್ಟಲ್ಲಿ ನನ್ನ ಜೀವನದಲ್ಲೂ ಮದುವೆ ಭಾಗ್ಯ ಒಲಿದು ಬಂದಿತ್ತು.
ಅಪ್ಪ,ಅಮ್ಮ ನನಗಾಗೇ ಮಾಡಿಸಿಟ್ಟಿದ್ದ ಒಡವೆ, ವಸ್ತುಗಳ ಜೊತೆ ಅಣ್ಣಂದಿರು ಎಲ್ಲರೂ ಕೂಡಿ ಗಂಡಿಗೆಂದು ಹಣ, ಆಸ್ತಿ ಎಲ್ಲವನ್ನೂ ನೀಡಿ ಅತಿ ಅದ್ದೂರಿಯಲ್ಲಿ ಮದುವೆ ಕಾರ್ಯ ನೆರೆವೇರಿಸಿದರು. ಗಂಡ ಎಂಬ ಕಲ್ಪನೆಯೇ ನನ್ನಲ್ಲಿ ಬೇರೆ ಇತ್ತು. ಸದಾ ಪ್ರೀತಿ, ಕಾಡುವವ ನನ್ನೆಲ್ಲ ನೋವು ನಲಿವಿಗೆ ಸ್ಪಂದಿಸುವವ ಹೀಗೆ ಹಲವು ಕನಸಿನ ಸೌಧವನ್ನೇ ಕಲ್ಪಿಸಿಕೊಂಡಿದ್ದೆ, ಅದಕ್ಕೆ ತಕ್ಕಂತ ಗಂಡನೂ ಸಿಕ್ಕಿದ್ದ. ಸದಾ ನನ್ನ ಒಳಿತನ್ನೇ ಬಯಸುವ ಗಂಡ, ಮನೆಗೆ ಎಂದೂ ತಡಮಾಡದೆ ಸಮಯಕ್ಕೆ ಸರಿಯಾಗಿ ಬರುವುದು, ಎಂದೂ ತಪ್ಪಿಸದೇ ನನ್ನ ಮುಡಿಯನ್ನು ಮಲ್ಲಿಗೆಯ ಹೂಮಾಲೆಗಳಲ್ಲಿ ಅಲಂಕರಿಸುವ ಪರಿ ಎಲ್ಲವೂ ವಿಶಿಷ್ಟವೇ ಆಗಿತ್ತು. ನನ್ನ ಮದುವೆ ತಡವಾಗಿಯಾದರೂ ಒಂದು ಅರ್ಥಪೂರ್ಣ ಮದುವೆಯಾಗಿರುವೆ ಎಂಬ ಭಾವನಾಲೋಕದಲ್ಲಿ ತೇಲುವ ಮೊದಲ ಘಟ್ಟದಲ್ಲೇ........!!! ನನ್ನವನ ತಡ ರಾತ್ರಿ ಆಗಮನ ಯಾಕೋ ಭಯ ಸೃಷ್ಟಿಸಿತ್ತು.
ದಿನಗಳೂ ಕಳೆದಂತೆ ತಡ ರಾತ್ರಿಗಳು ತಡವಾದ ದಿನಗಳಾಗಲು ಪ್ರಾರಂಭವಾಯ್ತು, ಕಾರಣ ಹುಡುಕ ಹೊರಟರೇ ಗಂಡನ ಕಣ್ಣ ಕಂಬನಿ ನನ್ನನ್ನೇ ಕರಗಿಸಿಬಿಟ್ಟಿತ್ತು. ಕೆಲಸದ ಹೆಸರಿನಲ್ಲಿ ಎಲ್ಲವೂ ಡೋಲಾಯಮಾನವಾಗಿದೆ ಹಣವಿಲ್ಲದೇ ಕೈಚೆಲ್ಲಿ ಕೂರಬೇಕಿದೆ. ಸಾಲ-ಸೋಲಗಳು ಬೆಂಬೆತ್ತಿ ಕಾಡುತ್ತಿದೆ ನಾನು ಬದುಕುವುದೇ ಕಷ್ಟ ಎಂಬ ಮಾತುಗಳು ನನ್ನ ಹೃದಯವನ್ನು ಘಾಸಿಗೊಳಿಸಿತ್ತು. ಗಂಡನಿಗಿಂತ ಹೆಚ್ಚಿನದು ಏನೆಂದು ಅಣ್ಣಂದಿರು ಕೊಟ್ಟಿದ್ದ ಹಣ,ಆಸ್ತಿ ಎಲ್ಲವನ್ನೂ ಮಾರಿ ಕೈ ತುಂಬಿ ಚೆಲ್ಲುವಷ್ಟು ಹಣವನ್ನು ನನ್ನವನ ಕೈಗೆ ನೀಡಿದ್ದೆ. ಅಂದು ಆ ರಾತ್ರಿ ಎಂದೂ ಮರೆಯದ ರಾತ್ರಿ ಗಂಡ ನನ್ನಲ್ಲಿ ತೋರಿಸಿದ ಪ್ರೀತಿ, ಗೌರವ, ಪೂಜನೀಯ ಭಾವನೆ ಯಾರಿಗೂ ಸಿಗಲಾರದೆಂದು ಭಾವಿಸಿದ್ದೆ.
ಮನೆ, ಆಸ್ತಿ, ಒಡವೆ ಎಲ್ಲವನ್ನು ಮಾರಿದ ಹಣದಿಂದ ಸಾಲಗಳನ್ನು ತೀರಿಸುತ್ತಿರುವೆ. ಈಗಿರುವ ಮನೆ ಇನ್ನೇನು ಕೆಲ ದಿನಗಳಲ್ಲಿ ಖಾಲಿ ಮಾಡಬೇಕು, ನಾವು ಬಾಡಿಗೆ ಮನೆಗೆ ಹೋಗೋಣ ಎಂದು ಪುಟ್ಟ ಮನೆಯಲ್ಲಿ ಅರಸಿಯಾಗಿ ಕೂರಿಸಿದರು. ಇತ್ತ ದೂರದ ಊರಲ್ಲಿ ಯಾರಿಗೋ ಸಾಲ ನೀಡುವ ನೆಪ ಒಡ್ಡಿ ಅಂದು ನನ್ನ ಬಿಟ್ಟು ಹೋದವ ಹಿಂದಿರುಗಿ ಬರಲೇ ಇಲ್ಲ, ಬಾಡಿಗೆ ಹಣ ಕಟ್ಟಲು ನನ್ನಲ್ಲಿ ಏನೂ ಇಲ್ಲ, ಇದ್ದ ಅಡ್ವಾನ್ಸ್ ಹಣದಲ್ಲಿ ಜಮಾ ಆಗುತ್ತಲೇ ಬರುತ್ತಿದೆ. ಇತ್ತ ೬ ತಿಂಗಳು ಕಳೆಯುತ್ತೆ ಅಡ್ವಾನ್ಸ್ ಕೂಡ ಖಾಲಿಯಾಗುತ್ತೆ ಮನೆಯೊಡತಿ ಇನ್ನೇನು ಕತ್ತು ಹಿಡಿದು ದಬ್ಬಬೇಕಾಗಿತ್ತು... ತಕ್ಷಣ ಅಣ್ಣಂದಿರ ನೆನಪು...
ನನ್ನ ಅಣ್ಣಂದಿರು ಎಂದೂ ಕೈ ಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿ ಅಣ್ಣಂದಿರ ಮನೆ ಹೊಕ್ಕೆ, ಮೂರು ದಿನಗಳು ಅಲ್ಲಿಯೇ ಇದ್ದೆ ಅಣ್ಣಂದಿರು ಗಂಡ ಎಲ್ಲಿ ಏನು ಬಂದಿದ್ದು, ಯಾವ ವಿಷಯವಿಚಾರ ವಿನಿಮಯವಿಲ್ಲದೇ, ಸಂಬಂಧಿಕಳಾಗಿ ೪ ದಿನ ಕಳೆದೆ, ಕೊನೆಗೆ ನಾನೇ ಬಾಯಿಬಿಟ್ಟೆ.. ಅಣ್ಣ..!! ನನ್ನ ಗಂಡ ಹೀಗೆ ಮಾಡಿದ್ದಾನೆ ಎಲ್ಲಿ ಹೋದರೋ ಗೊತ್ತಿಲ್ಲ, ನನ್ನ ಬಾಡಿಗೆ ಮನೆಗೆ ಬಿಟ್ಟು ಹೋದವರು ಬರಲೇ ಇಲ್ಲ..!! ಎಂದು ಬಿಕ್ಕಳಿಸುವಾಗ ಸಾಂತ್ವಾನಿಸುವ ಕೈ ಚಾಚುತ್ತ ಯಾರು ಬರಲೇ ಇಲ್ಲ. ಮತ್ತೂ ದುಃಖ ತಡೆಯಲಾರದೆ ಮನಸ್ಸು ಕುಗ್ಗಿ ಹೋಗಿತ್ತು. ಅತ್ತಿಗೆಯಲ್ಲೂ ಮೊದಲಿದ್ದ ಪ್ರೀತಿಯಿಲ್ಲಾ, ಎಲ್ಲವೂ ಅಯೋಮಯವೆನಿಸಿತು...ಇಷ್ಟೆಲ್ಲಾ ನೆಡೆದರೂ ನಾನು ಇಲ್ಲಿರುವುದು ಒಳಿತಲ್ಲವೆಂದು ಮನೆಬಿಡುವ ಸಮಯ ಅಣ್ಣಂದಿರಲ್ಲೊಬ್ಬ ನೋಡು..!! ನೀನು ಹಣ,ಆಸ್ತಿ,ಮನೆ ಇವನ್ನೆಲ್ಲಾ ಮಾರುವಾಗ ನಾವು ಇರಲಿಲ್ಲವೇ..? ನಿನಗಾಗಿ ಅಷ್ಟೆಲ್ಲಾ ಮಾಡಿದರೆ, ನೆನ್ನೆ ಮೊನ್ನೆ ಪರಿಚಿತನಾದವನೇ ನಿನಗೆ ಹೆಚ್ಚಾಯಿತಾ..!! ಅವನು ಗಂಡನೇ ಇರಬಹುದು, ಆದರೂ ಅಪ್ಪನ ಮನೆಯ ಆಸ್ತಿ ಒಮ್ಮೆಯಾದರೂ ಒಪ್ಪಿಗೆ ಬೇಡವೇ..? ಎಂದು ಮುಖಕ್ಕೆ ಮಂಗಳಾರತಿ ಮಾಡಿ ಮನೆಯತ್ತ ಎಂದೂ ಯಾವ ಕಾರಣಕ್ಕೂ ಬರಬೇಡ, ದೈನೇ ಎಂದು ಬೇಡುವ ಸ್ಥಿತಿಗೆ ನಾವು ಕಳುಹಿಸಿರಲಿಲ್ಲಾ...!! ಎಂದು ಹೇಳಿ ಕಳುಹಿಸಿಬಿಟ್ಟರು.
ನಿಜ ನಾನು ಒಪ್ಪುತ್ತೇನೆ ತಪ್ಪು ಮಾಡಿದ್ದೀನಿ, ಅದೇನೋ "ಕೊಟ್ಟ ಹೆಣ್ಣು ಕುಲದಿಂದ ಹೊರಗೆ" ಎಂಬಂತೆ ನಾನು ಹೊರಗಿನವಳಾಗಿದ್ದೆ. ಮದುವೆಯಾದರೆ ಗಂಡನೇ ಎಲ್ಲಾ ಎಂದು ಭಾವಿಸಿ ಅವನನ್ನು ನಂಬಿ ನನ್ನದೆಲ್ಲದು ಅವನದಲ್ಲವೂ ಎಂದು ಭಾವಿಸಿ ಕೊಟ್ಟಿದ್ದೆ ಈಗ ಮೋಸಹೋದೆ. ಇತ್ತ ಅಣ್ಣಂದಿರೂ ಕೈ ಹಿಡಿಯಲಿಲ್ಲ, ಬಾಡಿಗೆ ಮನೆಯೇ ಗಟ್ಟಿ ಎಂದು ಮತ್ತದೇ ಮನೆಗೆ ಬಂದಾಗ ನನ್ನ ಮನೆಯ ಪಾತ್ರೆ-ಸಾಮಾನುಗಳೆಲ್ಲಾ ಮನೆಯ ಬಾಗಿಲಲ್ಲಿದ್ದವು, ಆಶ್ಚರ್ಯದಿಂದ ಏನಾಗಿದೆ ಎಂದು ತೋಚದಾಯ್ತು, ಮನೆಯೊಡತಿಯಲ್ಲಿ ಕೇಳಿದೊಡನೆ ನೋಡಮ್ಮ ಮನೆ ಬಾಡಿಗೆ ಇಲ್ಲಿಗೆ ಅಡ್ವಾನ್ಸ್ ವಜಾ ಆಗಿದೆ. ಮುಂದೆ ನಿನ್ನಿಷ್ಟ ಎಲ್ಲಾದರು ಬೇರೆ ಮನೆ ಮಾಡಿಕೊಂಡು ಹೋಗು ಎಂದು ಹೇಳಿಬಿಟ್ಟರು. ನನ್ನೊಳಗಿನ ಆತಂಕ ಇಮ್ಮಡಿಸಿತು, ಕಣ್ಣುಗಳು ಮಾತನಾಡಲು ಪ್ರಾರಂಭಿಸಿದವು, ಕರಗಳು ಬೇಡಿಕೆಗೆ ಮುಂದಾದವು.... ನನಗೆ ಯಾರೂ ಇಲ್ಲ ದಯವಿಟ್ಟು ಸಹಕರಿಸಮ್ಮ, ನಿಮ್ಮ ಮನೆಕೆಲಸ ಮಾಡಿಕೊಂಡು ಇರುತ್ತೇನೆ ನನಗೆ ಇರಲು ಜಾಗ, ಊಟ ಬಟ್ಟೆ ಕೊಟ್ಟರೆ ಸಾಕು ಎಂದು ಗೋಗರೆದು ಬೇಡಿದೆ. ಮನೆಯೊಡತಿ ಕೂಡ ಒಬ್ಬಳೇ ಇದ್ದಳು ಅವಳಿಗೆ ಇದ್ದ ಹೆಣ್ಣು ಮಕ್ಕಳೆಲ್ಲಾ ಬೇರಾವುದೋ ದೇಶದಲ್ಲಿ ನೆಲೆಸಿದ್ದರಿಂದ. ಕೈಗಾಸರೆಯಾಗುವಳೆಂದು ಮನಸ್ಸು ಒಪ್ಪಿ ನನ್ನನ್ನು ಅಲ್ಲಿಯೇ ಅವರ ಮನೆಯಲ್ಲೇ ಇರುವ ಹಾಗೆ ವ್ಯವಸ್ಥೆ ಮಾಡಿದರು.
ಇತ್ತ ನನ್ನ ಕಥೆಗೆ ಬೇರಾರೋ ಮರುಗಿದರೂ ನನ್ನವರೇ ಆದ ಅಣ್ಣ, ಅಕ್ಕಂದಿರು ಕರಗದೇ ಹೋದರು, ಇತ್ತ ಕಟ್ಟಿಕೊಂಡ ಗಂಡ ಹೆಂಡತಿಯ ನೆನಪೇ ಇಲ್ಲದಂತಾದ. ಅಂದು ಅಣ್ಣಂದಿರು ತೋರಿಸಿದ್ದ ಪ್ರೀತಿ, ಗಂಡ ತೋರಿಸಿದ ಪ್ರೀತಿ ಎಲ್ಲವೂ ನಾಟಕವೇ..?? ಎಂಬ ಭ್ರಮೆಯಲ್ಲಿ ಮುಳುಗಿ ಹೋಗಿದ್ದೆ. ಕಾರಣ ಹುಡುಕ ಹೊರಟರೆ ಉತ್ತರ ಸಿಗಲೇ ಇಲ್ಲ. ಮತ್ತೊಮ್ಮೆ ಅಣ್ಣಂದಿರ ನೋಡೋ ಆಸೆ, ಗೊತ್ತಿಲ್ಲದವರ ಮನೆಯಲ್ಲಿ ಎಷ್ಟು ದಿನ ಹೊರೆಯಾಗಿ ಇರುವುದು ಎಂದು ಅಣ್ಣಂದಿರ ಆಶ್ರಯಕ್ಕೆ ಮತ್ತೆ ಹೊರಟೆ, ಅತ್ತಿಗೆಯಂದಿರ ಒಡಲಾಳದ ಪ್ರೀತಿ ಅಂದೇ ಅರ್ಥವಾಗಿದ್ದು, ಅತ್ತಿಗೆಯಂದಿರ ಮಕ್ಕಳ ಸಾಕುವಾಗ ನನ್ನ ನೆರವು ಬೇಕಿತ್ತು, ಮನೆಯಲ್ಲಿ ಕಸ ಮುಸುರೆ ತೊಳೆಯಲು ಹೆಣ್ಣು ಬೇಕಿತ್ತು ಇದೇ ಕಾರಣಕ್ಕೆ ಮದುವೆ ಮಾಡದೆ ಪ್ರೀತಿಯ ನೆಪವೊಡ್ಡಿದ್ದರು.... ಇನ್ನು ಗೆಂಡನೆಂಬವ ಪ್ರೀತಿಯ ಬಲೆ ಬೀಸಿ ನನ್ನನ್ನೇ ಬರಿದು ಮಾಡಿದ್ದ. ಅವನ ಪ್ರೀತಿ ಅರಿವಾಗಿದ್ದು ನನ್ನ ಹಳೆಯ ಮನೆ ನೋಡುವ ಮನಸಾಗಿ ಹೋದಾಗ, ಅಲ್ಲೂ ಆಘಾತವೇ ಕಾದಿತ್ತು ನನ್ನ ಗಂಡನೇ ಆ ಮನೆಯ ಒಡಯನಾಗಿದ್ದ ಕಾರಣ ಇಷ್ಟೇ ತಾನು ಪ್ರೀತಿಸಿದವಳನ್ನ ಮದುವೆಯಾಗಿ ನನ್ನ ಹೆಸರಲ್ಲಿದ್ದ ಆಸ್ತಿ ಅವಳದಾಗಿದ್ದು ತಿಳಿದಿದ್ದು ಇಂದೇ. ನಾನೊಬ್ಬಳು ಮೂಢಳು ಪ್ರೀತಿಯ ಅರ್ಥವೇ ಅರಿವಾಗಿಲ್ಲ, ಅರಿವಾಗುವಷ್ಟರಲ್ಲಿ ಜೀವನವೇ ಮುಗಿದಿತ್ತು. ತನ್ನೆಲ್ಲಾ ಕಷ್ಟಗಳ ಬರವಣಿಗೆಯಲ್ಲಿ ಅಳಿಸಿ, ತಿದ್ದಿ-ತೀಡಿ ಬರೆಯಲು ಸಾಧ್ಯವಾಗದಂತಹ ಆಘಾತಕರ ಸ್ಥಿತಿಯನ್ನು ಮುಟ್ಟಿದ್ದೇನೆ. ಇನ್ನೇನಿದ್ದರೂ ಅಪರಿಚಿತರ ಆಶ್ರಯವೇ ಲೇಸು. ಒಂಟಿ ಬಾಳಿಗೆ ಅನಾಥ ಪ್ರಜ್ಞೆ ಬೆಂಬಿಡದೆ ಕಾಡುವುದನ್ನು ಮರೆಮಾಚಲು ನನ್ನ ಜೀವನ ಸೃಷ್ಟಿಸಿಕೊಳ್ಳಲು ಅನಾಥಾಶ್ರಮದ ಶಾಲೆಯಲ್ಲಿ ಅನಾಥ ಮಕ್ಕಳಿಗೆ ಗುರುವಾಗಿ ಕೆಲಸ ಮಾಡುತ್ತಿದ್ದೇನೆ. ಈಗ ನಾನು ಅನಾಥ ಗುರು..!!