ಎಕ್ಕದ ಹೂ (ಅರ್ಕ)
ಎಕ್ಕವನ್ನು ಅರ್ಕವೆಂದೇ ಕರೆಯುವುದು, ನಮ್ಮಗಳ ಆಡುಭಾಷೆಯಲ್ಲಿ ಎಕ್ಕ ಎಂದು ಕರೆಯುತ್ತೇವೆ. ಸಂಸ್ಕೃತದಲ್ಲಿ "ಅಲರ್ಕ" ಎಂದಿದ್ದಾರೆ. ವೈಜ್ಞಾನಿಕವಾಗಿ ಕೊಲ್ಟ್ರಾಪಿಸ್ ಪ್ರೋಸಿರ (Calotropis Procera) ಎಂದು ಗುರುತಿಸಿದ್ದಾರೆ. ಎಕ್ಕದಲ್ಲಿ ಎರಡು ತರನಾದ ವಿಧಗಳಿವೆ ಒಂದು ಬಿಳಿ ಬಣ್ಣದ (ಶ್ವೇತಾವರ್ಕ) ಎಕ್ಕ ಮತ್ತೊಂದು ತಿಳಿನೇರಳೆ ಬಣ್ಣದ ಎಕ್ಕ. ಇವೆರಡೂ ಒಂದೇ ಜಾತಿಯ ಗಿಡಗಳು ಹಾಗೂ ಇವೆರಡರಲ್ಲೂ ಔಷಧಿಯ ಗುಣಗಳಿರುತ್ತವೆ. ಈ ಎಕ್ಕದ ಗಿಡಗಳು ಹೆಚ್ಚು ಖಾಲಿ ಮತ್ತು ಪಾಳು ಜಾಗದಲ್ಲಿ ಬೆಳೆಯುವುದು.
ಈ ಗಿಡ ಒಂದು ರೀತಿ ಪೊದೆಯಂತೆ ಬೆಳೆದಿರುತ್ತದೆ. ಬುಡದಲ್ಲಿಯೇ ಕವಲುಗಳೊಡೆದು ಹಾಗೆ ಮುಂದಕ್ಕೆ ಬೆಳೆದು ಎಲೆಗಳು ಮತ್ತು ಹೂವಿನ ಗೊಂಚಲನ್ನು ಹೊಂದಿರುತ್ತದೆ. ಆಕರ್ಷಕವಾದ ಈ ಗೊಂಚಲು ದಪ್ಪನಾದ ದಳಗಳಿಂದ ಎದ್ದು ಕಾಣುತ್ತೆ, ಕೊಳವೆಯಂತಹ ಶಲಾಕೆಯನ್ನು ಹೊಂದಿರುತ್ತದೆ. ಈ ಹೂ ಗೊಂಚಲಿನ ಪ್ರತಿ ಹೂವಿನ ತಳಭಾಗದಲ್ಲಿ ಗಣಪತಿಯ ಆಕಾರವಿರುತ್ತದೆ. ಈ ಆಕಾರದಿಂದಲೇ ಗಣಪತಿಗೆ ಶ್ರೇಷ್ಟವೆಂದು ಭಾವಿಸಿದೆವೋ ಏನೋ ಗೊತ್ತಿಲ್ಲ. ಗಣಪತಿಗೆ ಎಷ್ಟು ಶ್ರೇಷ್ಟವೋ ಈಶನಿಗೂ ಅಷ್ಟೇ ಶ್ರೇಷ್ಠ ಎಂಬ ನಂಬಿಕೆಯಿದೆ.
ಎಕ್ಕದ ಹೂವಿಗೆ ಪೂಜನೀಯ ಭಾವನೆಯಿದೆ. ರಥಸಪ್ತಮಿಯಂದು ಎಕ್ಕದ ಎಲೆಗಳನ್ನು ಭುಜದಮೇಲೆ ಇಟ್ಟು ಗಂಡಸರು ಮಂತ್ರ ಪಟಣೆಯ ಮೂಲಕ ಸ್ನಾನ ಮಾಡುತ್ತಾರೆ ಎಂದು ಕೇಳಿದ್ದೇನೆ. ಬಿಳಿಯ ಎಕ್ಕದ ಬುಡದಲ್ಲಿ ’ಗಣೇಶ’ ನೆಲೆಸಿರುತ್ತಾನೆ ಆದ್ದರಿಂದಲೇ ಗಿಡದಿಂದ ಬೀಳುವ ಹೂಗಳೆಲ್ಲವೂ ಅದರ ಬುಡಕ್ಕೆ ಬೀಳುತ್ತವೆ ಎಂದು ನಂಬುತ್ತಾರೆ. ಎಷ್ಟೋ ದೇಗುಲಗಳಲ್ಲಿ ಬಿಳಿ ಎಕ್ಕದ ಗಿಡಗಳನ್ನು ಕಾಣುತ್ತೇವೆ ಅಂತೆಯೇ ಅದಕ್ಕೆ ಪೂಜೆ ಸಲ್ಲಿಸಿರುವುದನ್ನೂ ನೋಡಬಹುದು. ಮನೆ ಕಟ್ಟುವ ಜಾಗಳಲ್ಲೇನಾದರೂ ಬಿಳಿ ಎಕ್ಕದ ಗಿಡವಿದ್ದರೆ ತಮ್ಮ ಅದೃಷ್ಟವೆಂದು ಭಾವಿಸುತ್ತಾರೆ ಅಂತೆಯೇ ಆ ಗಿಡ ಮನೆ ಕಟ್ಟುವ ಸ್ಥಳದ ಮಧ್ಯೆ ಭಾಗದಲ್ಲಿದ್ದರೆ ಅದನ್ನು ಕತ್ತರಿಸಿ ಹಾಕಲು ಜನರು ಹಿಂದುಮುಂದು ನೋಡುತ್ತಾರೆ ಅಂದರೆ ಅದರಲ್ಲಿ ಅಷ್ಟು ದೈವ ಭಕ್ತಿಯನಿಟ್ಟಿದ್ದಾರೆ ನಮ್ಮ ಜನರು.
ಈ ಅರ್ಕ ಹೂ ಬಿಟ್ಟಾಗ ಅದರ ಬೀಜಗಳು ಸುತ್ತ ಮುತ್ತಲೆಲ್ಲ ಗಾಳಿಯಲ್ಲಿ ಹತ್ತಿಯ ಹುಳುಗಳಂತೆ ಓಡಾಡುತ್ತಿರುತ್ತವೆ ಇದೇ ರೀತಿ ಬೀಜ ಪ್ರಸಾರದ ಪ್ರಕ್ರಿಯೆಯಿಂದ ಮತ್ತಷ್ಟು ಗಿಡಗಳು ಹುಟ್ಟಿಕೊಳ್ಳುತ್ತವೆ.
ಈ ಗಿಡದ ಬೇರು, ತೊಗಟೆ, ಎಲೆ, ಹೂ ಮತ್ತು ಅದರಲ್ಲಿರುವ ಲೇಟೆಕ್ಸ್ ಹಾಲನ್ನು ಔಷಧಿಗಳಿಗೆ ಬಳಸುತ್ತಾರೆ:
- ಕಾಲಿಗೆ ಮುಳ್ಳು ಚುಚ್ಚಿದಾಗ ಎಕ್ಕದ ಎಲೆ ಅಥವಾ ಕಾಂಡವನ್ನು ಮುರಿದರೆ ಹಾಲು ಬರುತ್ತದೆ. ಆ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ. - ಇದು ನನ್ನ ಸ್ವಂತ ಅನುಭವ.
- ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಕ ಕೊಟ್ಟರೆ ಕೆಲವೇ ದಿನದಲ್ಲಿ ಗುಣಮುಖರಾಗುತ್ತೇವೆ.
- ಎಕ್ಕದ ಬೇರಿನೊಂದಿಗೆ ನಿಂಬೆರಸ ಮಿಶ್ರಣಮಾಡಿ ಅರೆದು ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
- ಪುಡಿಮಾಡಿದ ಒಣಗಿದ ಎಕ್ಕದ ತೊಗಟೆಯನ್ನು ಜೇನುತುಪ್ಪದೊಂದಿಗೆ ತಿಂದರೆ ಕೆಮ್ಮು, ನೆಗಡಿ, ಕಫ ಕಡಿಮೆಯಾಗುತ್ತದೆ.
- ಚೇಳುಕಡಿತಕ್ಕೂ ಎಕ್ಕದ ಬೇರನ್ನು ಔಷಧಿಯಾಗಿ ಬಳಸುತ್ತಾರೆಂದು ಕೇಳಿದ್ದೇನೆ.
- ಮುಖದಲ್ಲಿ ಬಂಗು, ಅಜೀರ್ಣ, ಮಹಿಳೆಯ ಋತುಚಕ್ರ ತೊಂದರೆಗಳಿಗೆ, ಗಾಯ, ಮೂಲವ್ಯಾದಿ, ಹಲ್ಲು ನೋವಿಗೆ ಹೀಗೆ ಅನೇಕ ತೊಂದರೆಗಳಿಗೆ ಎಕ್ಕದ ಹಲವು ಭಾಗಗಳನ್ನು ಔಷಧಿಯಾಗಿ ಬಳಸುತ್ತಾರೆ.
ಎಕ್ಕದ ಗಿಡದಲ್ಲಿರುವ ಹಾಲಿನಂತಹ ದ್ರವ ಕಣ್ಣಿಗೇನಾದರು ಬಿದ್ದರೆ ಕಣ್ಣು ಹೋಗುತ್ತೆ ಎಂದು ನಾವು ಚಿಕ್ಕವರಿದ್ದಾಗ ಹೇಳಿ ಹೆದರಿಸುತ್ತಿದ್ದರು... ಆದರೆ ನಿಜವೋ ಸುಳ್ಳೋ ಇದುವರೆಗು ತಿಳಿದಿಲ್ಲ. ಯಾರಿಗಾದರೂ ತಿಳಿದಿದ್ದರೆ ತಿಳಿಸಿ.
---
ಪೋಟೋ: ಅಂತರ್ಜಾಲ
13 comments:
ಎಕ್ಕದ ಕುಡಿ ಒಂದು ಒಳ್ಳೆಯ ವಾಹಕವೂ ಹೌದು. ಇದನ್ನ ದೀಪದ ಬತ್ತಿಯ ಬದಲಿಗೆ ಉಪಯೋಗಿಸಬಹುದಂತೆ. ಎಕ್ಕದ ಎಲೆಯಲ್ಲಿ ಪೆಟ್ರೋಲ್ ಗುಣವಿದೆ, ಯಾರಾದ್ರೂ ಸಂಶೋಧನೆ ಮಾಡಿ ಏನಾದ್ರೂ ಕಂಡುಹಿಡೀಬಹುದಿತ್ತು ಅಂತ ಯಾವಾಗ್ಲೂ ಹೇಳ್ತಿರ್ತಾರೆ ನಮ್ಮಪ್ಪ.
ಒಹ್... ದೀಪದ ಬತ್ತಿಯಾಗಿ ಬಳಸಬಹುದೇ ಖಂಡಿತಾ ಯಾವಾಗಲಾದರು ಬಳಸಿ ನೋಡಬೇಕು. ನೀವು ಹೇಳಿದ ಹಾಗೆ ಯಾರಾದರು ಸಂಶೋಧನೆ ಮಾಡಿದರೆ ನಿಜಕ್ಕೂ ಉಪಯೋಗವಾಗುತ್ತದೆ. ಈ ವಿಷಯ ನಿಜ ಗೊತ್ತಿರಲಿಲ್ಲ ಬಹಳ ಧನ್ಯವಾದಗಳು.
ಸುಗುಣಕ್ಕ,
ಎಕ್ಕದ ಪಕ್ಕಾ ವಿವರ. ಇದಕ್ಕೆ ನನ್ನ ಅನುಭವಕ್ಕೆ ದಕ್ಕಿದ ವಿವರಣೆಯೊಂದನ್ನು ಸೇರಿಸಲೇ?
ಪ್ಲೇನ್ ಟೈಗರ್ ಎನ್ನುವ ಚಿಟ್ಟೆ ಇದೇ ಎಕ್ಕದ ಗಿಡದ ಮೇಲೆ ಸಾವಿರಾರು ಮೊಟ್ಟೆಗಳನ್ನಿಡುತ್ತದೆ. ಆ ಮೊಟ್ಟೆಗಳು ಸಾಸುವೆ ಕಾಳಿಗಿಂತ ಚಿಕ್ಕದಿದ್ದು ಆರೆಂಜ್ ಬಣ್ಣದಲ್ಲಿರುತ್ತವೆ. ಅಷ್ಟರಲ್ಲಿ 99% ಪಕ್ಷಿಗಳು ಇತರೆ ಹುಳುಗಳ ಆಹಾರವಾಗುತ್ತವೆ. ಉಳಿದ 1% ಮಾತ್ರ ಕ್ಯಾಟರ್ ಪಿಲ್ಲರುಗಳಾಗಿ ಹೊರಬಂದು ಇದೇ ಎಕ್ಕದ ಎಲೆಗಳನ್ನು ತಿಂದು ಬೆಳೆಯುತ್ತವೆ. ಒಂದುವರೆ ಇಂಚಿನಷ್ಟು ಮೂರು ನಾಲ್ಕು ದಿನಗಳಲ್ಲೇ ಬೆಳೆದುಬಿಡುತ್ತವೆ. ಆನಂತರ ಅವು ಅದೇ ಗಿಡದ ಎಲೆಗಳ ಕೆಳಗೆ ಪ್ಯೂಪಗಳಾಗಿಬಿಡುತ್ತವೆ. ಸುಮಾರು ಹತ್ತರಿಂದ ಹನ್ನೆರಡು ದಿನಗಳ ನಂತರ ಸುಂದರ ಚಿಟ್ಟೆಯಾಗಿ ಹೊರಬರುತ್ತವೆ. ಇದೆಲ್ಲವನ್ನು ಒಂದು ತಿಂಗಳ ಅದ್ಯಾಯನ ಮತ್ತು ಫೋಟೋ ಮಾಡಿರುವುದರಿಂದ ಗೊತ್ತಾಯಿತು. ಅಂದ ಮೇಲೆ ಎಕ್ಕದ ಗಿಡ ಮತ್ತು ಎಲೆಗಳು ಪ್ಲೇನ್ ಟೈಗರ್ ಚಿಟ್ಟೆಗಳಿಗೆ ಬಾಡಿಗೆ ಮನೆ ಆಯ್ತಲ್ಲವೇ...
olleya maahiti suguna..Nanu kelidde kannige ekkada haalu bilabaradu anta......
ಎಕ್ಕದ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ಸುಗುಣ , ಧನ್ಯವಾದಗಳು.ಸ೦ಸ್ಕ್ರುತದಲ್ಲಿ ನಮಗೊ೦ದು ಶ್ಲೋಕವಿತ್ತು, ಅದರ ಅರ್ಥ ಹೀಗಿದೆ: `ಮೋಡವೇ, ನೀನು ಮಳೆಗರೆದಾಗ ಎಲ್ಲಾ ಮರಗಳೂ ಚಿಗುರಿ ಪಲ್ಲೈಸುತ್ತವೆ, ನಾವಾದರೋ(ಎಕ್ಕ) ಮೊದಲಿದ್ದ ಎಲೆಗಳನ್ನೂ ಕಳೆದುಕೊಳ್ಳುತ್ತೇವೆ! ನನ್ನ ಬ್ಲಾಗ್ ಗೆ ಬನ್ನಿ.
ಊರಿನಲ್ಲಿ ನಮ್ಮ ಅಣ್ಣ ನಮ್ಮ ಬಟ್ಟೆ ಅಂಗಡಿ ಗಲ್ಲಾ ಪೆಟ್ಟಿಗೆಯಲ್ಲಿ ದಿನಾ ಎಕ್ಕದ ಹೂಗಳನ್ನು ಇಟ್ಟು ಪೂಜೆ ಮಾಡುತ್ತಿದ್ದದ್ದು. ನೆನಪಾಯಿತು.
ಒಳ್ಳೆ ವೈಜ್ಞಾನಿಕ ಮತ್ತು ದೈವಿಕ ವಿಚಾರಗಳ ಬಗ್ಗೆ ಬರಹಗಳನ್ನು ಕೊಡುತ್ತಿದ್ದೀರಿ ಧನ್ಯವಾದಗಳು.
ಮನಸು...
ನಮ್ಮ ಸುತ್ತ ಮುತ್ತ ಇರುವ ಈ ಗಿಡದ ಮಹತ್ವ ನಮಗೆ ಗೊತ್ತಿರುವದಿಲ್ಲ...
ಈ ಗಿಡದ ಇನ್ನೊಂದು ಮಹತ್ವ ಏನು ಗೊತ್ತಾ?
ನಮ್ಮ ಹಿರಿಯರು "ಈ ಗಿಡ ಇದ್ದಲ್ಲಿ ನೀರು ಧಾರಾಳವಾಗಿರುತ್ತದೆ."...ಎಂದು ನಂಬುತ್ತಾರೆ..
ಅಲ್ಲಿ ಬಾವಿ, ಬೋರವೆಲ್ ತೆಗೆಸಬಹುದು..
ನನ್ನ ಅನುಭವದಲ್ಲೂ ನಿಜವಾಗಿದೆ...
ಯಾವುದೇ ಜಮೀನು/ ಜಾಗ ನೋಡುವಾಗ ಅಲ್ಲಿ ಈ ಗಿಡ ಇದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು...
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು..
ಶಿವು,
ಎಷ್ಟೋಂದು ವಿಷಯ ಇದೆ ... ಧನ್ಯವಾದಗಳು ಇಂತಹ ಮಾಹಿತಿ ನೀಡಿದ್ದಕ್ಕೆ..
ಶಶಿ ಅಕ್ಕ,
ಹೌದು ಆದರೆ ನನಗೂ ಗೊತ್ತಾಗಿಲ್ಲ ಸರಿಯಾದ ಕಾರಣ.. ಥಾಂಕ್ಯೂ
ಪ್ರಭಾ,
ಎಷ್ಟು ನಿಜ ಅಲ್ಲವೇ.. ಆ ಶ್ಲೋಕ.ಧನ್ಯವಾದಗಳು
ಬದರಿ ಸರ್,
ನಿಜ ಎಷ್ಟೋ ಅಂಗಡಿಗಳಲ್ಲಿ ಇಟ್ಟಿರುತ್ತಾರೆ. ನೆನಪಿಗೆ ಬಂತು ನೀವು ಹೇಳಿದ ಮೇಲೆ..ಧನ್ಯವಾದಗಳು
ಪ್ರಕಾಶಣ್ಣ,
ಹೂ... ಈ ವಿಷಯ ಮರೆತು ಬಿಟ್ಟೆ ನೋಡಿ ಲೇಖನದಲ್ಲಿ ಸೇರಿಸುವುದನ್ನು... ನಮ್ಮ ಮನೆಗಳಲ್ಲಿ ಹೇಳೋರು ಈ ವಿಷಯವನ್ನ. ಧನ್ಯವಾದಗಳು
ಉತ್ತಮ ಮಾಹಿತಿ.. ರುದ್ರಾಕ್ಷಿ, ಬೇಲದ ಹಣ್ಣು, ಈಗ ಎಕ್ಕದ ಗಿಡ.. ಒಳ್ಳೆಯ ಙ್ಞಾನಭಂಡರವೇ ಇದೆ ನಿಮ್ಮ ಬಳಿ. ಹೀಗೇ ಹಂಚಿಕೊಳ್ಳುತಿರಿ. ಧನ್ಯವಾದಗಳು!
ಸುಗುಣಾ,
ಎಕ್ಕದ ಬಗೆಗಿನ ನಿಮ್ಮ ಲೇಖನ ಬಹಳ ಚೆನ್ನಾಗಿದೆ. ಚಿತ್ರಗಳೂ ಸಹ ಸೊಗಸಾಗಿವೆ. ಎಕ್ಕದ ರಸದಿಂದ ಕಣ್ಣುಗಳಿಗೆ ಹಾನಿ ಎಂದು ನಾನೂ ಕೇಳಿದ್ದೇನೆ. ಬಹುಶಃ ಇದು ತುಂಬ ಸಾಂದ್ರವಾದ ದ್ರವವಿರುವದರಿಂದ ಇದನ್ನು ತೆಗೆಯಲು ಯಾವುದೇ ದ್ರಾವಕವು ಲಭ್ಯವಾಗಲಾರದು. ಇದೇ ಕಾರಣವಿರಬಹುದು.
GOOD SUGUNA
Post a Comment