Monday, July 29, 2013

ಇದು ಯಾರ ಲಿಖಿತಾ..!!!???


ಸಾರ್ ನಮಸ್ಕಾರ, ಹೇಗಿದ್ದೀರಿ ನಿನ್ನೆ ರಾತ್ರಿ ಊರಿಂದ ಬಂದೆ ಸಾರ್...

ತಗೊಳ್ಳಿ ಇದು ನಮ್ಮ ಕೇರಳ ಚಿಪ್ಸ್ ಮತ್ತೆ ನಿಮಗೋಸ್ಕರ ಅಂತಾ ಒಂದು ಪೆನ್ ತಂದಿದ್ದೀನಿ.

ಓಹ್..!! ಥ್ಯಾಂಕ್ಸ್ ಶಿವ ಏನಕ್ಕೆ ಇದೆಲ್ಲಾ ತರೋಕ್ಕೆ ಹೋದೆ.. ಮತ್ತೆ ನಿನ್ನ ಹೆಂಡತಿಗೆ ಆಪರೇಷನ್ ಎಲ್ಲಾ ಆಯ್ತಾ..? ಹೇಗಿದ್ದಾರೆ ಈಗ .. ??

ಹೂ ಸರ್ ಚೆನ್ನಾಗಿದ್ದಾರೆ. ನೀವು ದೇವರಿದ್ದಂಗೆ, ನಾನು ಇದ್ದಕ್ಕಿದ್ದಂತೆ ಊರಿಗೆ ಹೋಗ್ಬೇಕಾದ್ರೆ ನನಗೆ ಹಣದ ಸಹಾಯ ಮಾಡಿದ್ರಿ ನಿಮ್ಮನ್ನ ಮರೆಯೋಕ್ಕೆ ಆಗೋಲ್ಲ. ಕ್ಷಮಿಸಿ ಈ ತಿಂಗಳ ಸಂಬಳ ಬಂದಾಗ ನಿಮಗೆ ಖಂಡಿತಾ ನಿಮ್ಮ ದುಡ್ಡು ಕೊಟ್ಟುಬಿಡ್ತೀನಿ...

ಹೇ..!! ಇರ್ಲಿ ಬಿಡು ಏನು ಅರ್ಜೆಂಟ್ ಇಲ್ಲಾ... ಸದ್ಯಕ್ಕೆ ಆರೋಗ್ಯವಾಗಿದ್ದಾರಲ್ಲ ಅದು ಮುಖ್ಯ. ಇವತ್ತೇ ಆಫೀಸಿಗೆ ಬಂದಿದ್ದೀಯಾ ಎಲ್ಲಾ ಕೆಲಸಗಳು ನಿನಗೇ ಕಾದಿದೆಯೇನೋ ಎಲ್ಲಾ ನೋಡು ಹೇಗೆ ನಡಿತಾ ಇದೆಯೆಂದು. 

ಸರಿ ಸರ್.. 

ಹೀಗೆ ಶಿವ ಸುಮಾರು ೧೧ ಗಂಟೆಯಲ್ಲಿ ತನ್ನ ಕಛೇರಿ ಬಾಸ್ ನೊಂದಿಗೆ ಮಾತನಾಡಿ ಎಲ್ಲರೊಂದಿಗೆ ಖುಷಿ ಖುಷಿಯಾಗಿ ಮಾತನಾಡಿಕೊಂಡು ರಮದಾನ್ ಆದ್ದರಿಂದ ಕುವೈತಿನಲ್ಲಿ ಕಛೇರಿ ಸಮಯ ಕೇವಲ ೬ ಗಂಟೆಗಳ ಕೆಲಸವಾದ್ದರಿಂದ ಮಧ್ಯಾಹ್ನ ೧೨ ಗಂಟೆಗೆ ಮನೆ ಕಡೆ ಹೊರಟ.

ಇತ್ತ ಬಾಸ್ ತಮ್ಮ ಮನೆಕಡೆ ಹೊರಟರು ಮಧ್ಯದಲ್ಲಿ ಅಂಗಡಿಯೊಂದಕ್ಕೆ ತೆರಳಿ ಮನೆಗೆ ಬೇಕಾದ ಸಾಮಾನು ಸರಂಜಾಮುಗಳನ್ನ ತೆಗೆದುಕೊಂಡು ತನ್ನ ಹೆಂಡತಿಯನ್ನ ಕರೆದೊಯ್ಯಲು ಬಂದರೆ.. ಆತನಲ್ಲಿ ಎಂದಿನ ಲವಲವಿಕೆ ಇಲ್ಲ. ಮಾತು ಮೌನವಾಗಿತ್ತು ನಿಟ್ಟುಸಿರಿನ ಶಬ್ದ ಕೇಳುತ್ತಿತ್ತು. ಏಕೆ ಏನಾಯಿತು ಎಂದು ಕೇಳುತ್ತಿದ್ದಂತೆ.!! 

"ಊರಿಗೆ ತೆರಳಿದ್ದ ಒಬ್ಬ ಆಫೀಸಿನವ ಇವತ್ತು ಬಂದು ನನಗೆ ಪೆನ್ ಗಿಫ್ಟ್ ಕೊಟ್ಟ ಆದರೆ... ಆದರೇ..... ಈಗ ೧ ಗಂಟೆಗೆ ಕಂಪನಿಯ ಕ್ಯಾಂಪ್ ಇಂದ ಕರೆ ಬಂತು ಅವನು ಊಟ ಮುಗಿಸಿ ಹೊರಗಡೆ ಕೈ ತೊಳೆಯಲು ಬಂದವನು ಕುಸಿದು ಬಿದ್ದನಂತೆ. ತಕ್ಷಣ ಎಲ್ಲರೂ ಆಸ್ಪತ್ರೆಗೆ ಕರೆದೊಯ್ದರೆ ಇಲ್ಲ... ಸತ್ತು ಹೋಗಿದ್ದಾರೆ ಎಂದರಂತೆ..!!"

ಇಷ್ಟು ಹೇಳಿ ಮೌನವಹಿಸಿದವರ ಕಣ್ಣಲ್ಲಿ ಸ್ತಬ್ಧ ಚಿತ್ರಣ ಎದ್ದು ಕಾಣುತ್ತಿತ್ತು.... ತಡೆಯಲಾರದ ಸಂಕಟವೊಂದು ಮನಸಲ್ಲಿ ಎದ್ದು ಕಾಣುತ್ತಿತ್ತು.

- ಇದು ನಡೆದದ್ದು ನನ್ನವರ ಕಛೇರಿಯಲ್ಲಿ ನನಗೂ ಮಾತು ಹೊರಳಲಿಲ್ಲ... ನನಗೇ ಅರಿವಿಲ್ಲದೆ ನನ್ನ ಕಣ್ಣಂಚು ಒದ್ದೆಯಾಗಿತ್ತು. ಇನ್ನೂ ವಿದ್ಯಾಭ್ಯಾಸ ಮುಗಿಸದ ಇಬ್ಬರು ಮಕ್ಕಳು. ಆಪರೇಷನ್ ಆಗಿ ಹಾಸಿಗೆ ಹಿಡಿದಿರುವ ಹೆಂಡತಿ... ಇತ್ತ ಮನೆ ಯಜಮಾನನ ಸಾವು. 

ಊರಲ್ಲಿ ಇದ್ದು ನಿನ್ನೆಯ ದಿನವೇ ಬಂದವನಿಗೆ ಸಾವು ಇಂದು ಈ ಮರುಭೂಮಿಯಲ್ಲಿ ಕಾದಿತ್ತೇ... ಸಾವು ಬಂದರೂ ಇಲ್ಲಿಗೆ ಯಾಕೆ ಕರೆತಂದ... ಅಲ್ಲೇ ಇಷ್ಟು ದಿನ ಊರಲ್ಲೇ ಇದ್ದಾಗ ಏಕೆ ಏನೂ ಆಗಲಿಲ್ಲ..?? ದೇವರೇ ಇಂತಹ ಸ್ಥಿತಿ ಯಾರಿಗೂ ಬಾರದಿರಲಿ. ಸಾಯುವ ವಯಸ್ಸಲ್ಲದಾಗ ಸಾವು ಬರುವುದು ಎಷ್ಟು ನ್ಯಾಯವೋ ಅರಿವಿಲ್ಲ.!!  

ಇದು ವಿಧಿ ಲಿಖಿತವೋ... ಏನೋ..??!! ಆದರೆ ಮನಸ್ಸು ಮಾತ್ರ ಮರುಗುತ್ತದೆ. ಕಾಣದ ದೇಶದಲ್ಲಿ ಕಷ್ಟಕ್ಕೆಂದು ಬಂದು ದುಡಿಯುವಾಗ ಅವರನ್ನೇ ನಂಬಿದ ಕುಟುಂಬವನ್ನು ನೆನೆದಾಗ ಮಾತು ನಿಂತು ಹೋಗುತ್ತದೆ.

ಜೀವವಿಲ್ಲದಾಗ ಆ ಆತ್ಮಕ್ಕೆ ಶಾಂತಿ ಕೋರುವುದೊಂದೇ ದಾರಿ... ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. 


ಇನ್ನು ಆತನ ಉಸಿರಿಲ್ಲದ ದೇಹ ಊರು ಮುಟ್ಟುಲು ಎಷ್ಟು ದಿನಗಳೋ... ಈ ವಿಷಯ ತಿಳಿದ ಮನೆಮಂದಿ ಮನಸ್ಸಿನ ಪರಿಸ್ಥಿತಿ ಹೇಗೋ..?

ಎಲ್ಲಿ ಯಾವಾಗ.. ಏನು ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ... :( 


ಅವನ ಇರುವಿಕೆಯೇ ಅವನು ಕೊಟ್ಟ ಪೆನ್ನು..!!!

14 comments:

ಸಂಧ್ಯಾ ಶ್ರೀಧರ್ ಭಟ್ said...

:( :(..........

Unknown said...

Very Sad!! No one can change the destiny!!

Vijayendra said...

very sad.... :(

ಪ್ರೇಮ್ ಮೂರ್ತಿ ಅಜ್ಜೀಪುರ. said...

ಉಫ್....ಬಂದ ಮನೆಗೆ ಮರಳಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ...

ಪ್ರೇಮ್ ಮೂರ್ತಿ ಅಜ್ಜೀಪುರ. said...

ಬಂದ ಮನೆಗೆ ಮರಳಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ...

ಜಲನಯನ said...

ಬಹಳ ಬೇಸರ ತರೋ ವಿಷಯ ಆದರೂ ಜೀವನವಿದು..ಕಹಿ ನುಂಗಲೇಬೇಕು.

Badarinath Palavalli said...

ಯಾಕೋ ಮನಸ್ಸು ಮ್ಲಾನವಾಯಿತು. ನನಗೆ ಮೊದಲು ನೀನಪಾದದ್ದೇ ಶ್ರೀಯುತ. ರವಿ ಮೂರ್ನಾಡರ ಅಕಾಲಿಕ ಮರಣ ಅದೂ ದೂರದ ಆಫ್ರಿಕಾದಲ್ಲಿ! ಅಲ್ಲಿಂದ ದೇಹವನ್ನು ಮಾಡಕೇರಿ ಸಮೀಪದ ಮೂರ್ನಾಡಿದೆ ತರಲು ತಿಂಗಳೇ ಕಳೆಯಿತು. ಖರ್ಚು ತುಂಬಾ...

ಮನುಷ್ಯನ ಇರುವಿಕೆಗಿಂತಲೂ ಸಾವೇ ಈಗ ತುಟ್ಟಿ.

ಅಕಾಲ ಮರಣಕ್ಕೆ ಈಡಾದ ಅವರ ಆತ್ಮಕ್ಕೆ ಶಾಂತಿ ಸಿಗಲಿ. :(

Prashanth Arasikere said...

very sad..

Srikanth Manjunath said...

ಸಾವು ನಿಜಕ್ಕೂ ಅನಪೇಕ್ಷಿತ ಅತಿಥಿ. ಬಂದ ಕಡೆಯಲ್ಲಿ ತನ್ನ ಇರುವಿಕೆಯನ್ನು ತೋರಿಸಿ ಅದರ ಮುಂದೆ ಬೃಹತ್ ಪ್ರಗತಿ ಸಾಧಿಸಿದೆ ಎಂಬ ಭಾವದಲ್ಲಿ ಇರುವ ಮಾನವನನ್ನು ಕುಬ್ಜನನ್ನಾಗಿ ಮಾಡಿಬಿಡುತ್ತದೆ. ಅವರ ಕುಟುಂಬಕ್ಕೆ ಸಂಕಷ್ಟಗಳು ಬರದಿರಲಿ ಎಂದು ಪ್ರಾರ್ಥಿಸುವ.

ಸತೀಶ್ ನಾಯ್ಕ್ said...

ಸಾವಿನ ಕುರಿತಾಗಿ ಅದ್ಯಾವಾಗಲೂ ಒಂದು ಭಯ.. ಸಾವು ನಮ್ಮನ್ನ ಇಹದಿಂದ ಕೊಂಡೊಯ್ದು ಬಿಡತ್ತೆ ಅನ್ನೋದಲ್ಲ.. ನಮ್ಮನ್ನೇ ನಂಬಿಕೊಂಡವರ ಬದುಕು ಹಳಿ ತಪ್ಪುತ್ತದಲ್ಲಾ ಅಂತ..!! ನಿರ್ದಿಷ್ಟವಾಗಿ ಇಂಥಾ ಸಮಯಕ್ಕೆ ಬರ್ತೀನಿ ಅಂತ ಹೇಳಿದ್ರೆ ನಮ್ಮನ್ನ ನಂಬಿದವರ ಸುಸ್ಥಿತಿಗೆ ಏನೇನು ಸಾಧ್ಯವೋ ಅದೆಲ್ಲವನ್ನೂ ಮಾಡಿ ಬಿಡಬಹುದು.. ಆದರೆ ಸಾವು ಕರೆಯದೆ ಬರುವ ಅತಿಥಿ.. ಹೇಳದೆ ಕೊಲ್ಲುವ ಕ್ರೂರಿ.. ಮತ್ತೊಂದು ಅವಕಾಶವನ್ನ ನೀಡದ ವೈರಿ. ಬಹುಪಾಲು ಜನ ಸಾವಿಗೆ ಹೆದರಿ ಬದುಕೋಕೆ ಹಪಿಸೋದು ಅದೇ ಕಾರಣಕ್ಕೆ..

ದೇವರು ಅವರಾತ್ಮಕ್ಕೆ ಸದ್ಗತಿ ದೊರಕಿಸಲಿ. ಅವರ ಕುಟುಂಬಕ್ಕೆ ಸಶಕ್ತಿ.. ಸನ್ಮಾರ್ಗವನ್ನ ಕರುಣಿಸಲಿ..

Unknown said...

ಸಾವಿನಿಂದಾದ ನಿರ್ವಾತ ಎಣಿಸಿದರೇ ಮನಸ್ಸು ಮ್ಲಾನವಾಂತಿ ಮೌನವಾಗುತ್ತೆ,

balasubramanya said...

ಘಟನೆಯ ನಿರೂಪಣೆ ಚೆನ್ನಾಗಿದೆ , ಮನಕರಗಿದ ಲೇಖನ .

ushodaya said...

very sad....

ಈಶ್ವರ said...

bEsaravaytu..