Monday, September 2, 2013

"ಬಣ್ಣ" ತವರಿನ ಬಣ್ಣ -ಕಥೆ

"ಗೌರಿ ಹಬ್ಬದ ಕಳೆ ಮನೆ ಬಾಗಿಲಲ್ಲೇ ಕಾಣ್ತಾ ಇದೆ. ಅತ್ತಿಗೆ ಎಷ್ಟ್ ಚೆಂದಾಗಿ ರಂಗೋಲಿ ಬಿಡಿಸಿದ್ದಾಳೆ." ಏನೋ ಅಣ್ಣ ಅತ್ತಿಗೆ ಅಂತ ಇದ್ದಿದ್ದಕ್ಕೆ ನನ್ಗೂ ತವರಿನ ಋಣ ಇನ್ನೂ ಉಳಿದುಕೊಂಡಿದೆ.  "ಅಮ್ಮ ಇದ್ದಿದ್ರೇ ಇನ್ನೂ ಚೆನ್ನಾಗಿ ಇರೋದು" ಮನಸ್ಸು ಒದ್ದೆಯಾಗಿತ್ತು. ತಕ್ಷಣ ಆಟೋದವ ಮೇಡಮ್ ಮನೆ ಬಂದಿದೆ ನೋಡಿ.. ಎಂದು ಎಚ್ಚರಿಸಿದಾಗಲೇ ನಾನು ವಾಸ್ತವಕ್ಕೆ ಬಂದೆ. ಆಟೋದವನಿಗೆ ಕಾಸು ಕೊಟ್ಟು ಒಳಗೆ ಹೆಜ್ಜೆ ಇಟ್ಟೆ.!!!. 

ಓಹ್..!! ಬಂದ್ಯಾ ಕುಸುಮ, "ಸಾರಿ ಕಣೋ, ಕಾರ್ ಡ್ರೈವರ್ ಲೇಟ್ ಮಾಡಿಬಿಟ್ನಾ?, ಏನು ಕಥೆ ಎಲ್ಲಿ ಅಳಿಯಂದಿರು ಬರ್ಲಿಲ್ವಾ??, ಅಲ್ಲೇ ನಿಂತಿಕೋ" ಎಂದು ಕಳೆದ ವರ್ಷ ಅಮ್ಮ ಸಡಗರದಿಂದ ಆರತಿ ಹಿಡಿಕೊಂಡು ಬರಬರ ಬರ್ತಾ ಇದ್ಲು... ಆದರೆ ಈ ಸರಿ ನಾನು ಒಳಗೆ ಹೆಜ್ಜೆ ಇಟ್ಟರೂ ಏನೂ ಎತ್ತ ಎನ್ನುವವರು ಇಲ್ಲದೆ ಯಾಕೋ ಮನೆ ಮೌನವಾಗಿತ್ತು. ಎಲ್ಲಿ ಯಾರು ಕಾಣ್ತಾನೇ ಇಲ್ಲ ಎಂದುಕೊಂಡು, ಅಲ್ಲೇ ಸೋಫಾದ ಮೇಲೆ ನನ್ನ ಮಗನನ್ನ ಮಲಗಿಸಿದೆ. ಅತ್ತ ನೋಡಿದೆ, ಡ್ಯಾಡಿ ಪೇಪರ್ ಓದುತ್ತಾ ಅದರಲ್ಲೇ ಮಗ್ನರಾಗಿಬಿಟ್ಟಿದ್ದಾರೆ.

ಡ್ಯಾಡಿ ಏನು ಯಾರದ್ರು ಕಳ್ಳರು ಮನೆಗೆ ಬಂದು ಏನು ಬೇಕಾದರೂ ಸಲೀಸಾಗಿ ಹೊತ್ತುಕೊಂಡು ಹೋಗಬಹುದು ಅಲ್ವಾ? ಎಂದಾಗಲೇ ಡ್ಯಾಡಿ ನನ್ನತ್ತ ನೋಡಿ ನಕ್ಕು, ಹೋ ಬಂದ್ಯಾ ಬಾ ಕೂತ್ಕೋ, ಎಂದು ಮಾತಿನ ಶಾಸ್ತ್ರ ಮಾಡಿದರು. ಯಾಕೋ ಡ್ಯಾಡಿ ಅಮ್ಮನಿದ್ದಾಗ ಇದ್ದ ತರಹ ಇಲ್ಲ. ಮಗು ಬಗ್ಗೆನೂ ಕೇಳಲಿಲ್ಲ, ಎನೂ ವಿಚಾರಿಸಲೇ ಇಲ್ಲ ಕೂತ್ಕೋ ಅನ್ನೋ ಮಾತು ಬಿಟ್ಟು ಬೇರೇನು ಇಲ್ಲ... 

ಏನು ಕರ್ಮ ನಾನು ಬಂದು ೧೫ ನಿಮಿಷ ಆದರೂ ಯಾರೂ ಕಾಣುತ್ತಿಲ್ಲ, ಡ್ಯಾಡಿ ಎಲ್ಲಿ ಅಣ್ಣ, ಅತ್ತಿಗೆ, ಮಕ್ಕಳು ಯಾರು ಕಾಣ್ತಾನೇ ಇಲ್ಲ..??

ಇಲ್ಲಮ್ಮ, ಅವರು ಎಲ್ಲಾ ಊರಿಗೆ ಹೋಗಿದ್ದಾರೆ.  ಗೌರಿ ಹಬ್ಬ ಅಲ್ವಾ ನಿನ್ನ ಅತ್ತಿಗೆನೂ ಅವಳ ತವರು ಮನೆಗೆ ಹೋದಳು??

ಓಹ್ ಹೌದಾ ಡ್ಯಾಡಿ, ಮತ್ತೆ ಅಣ್ಣ ಪೋನ್ ಮಾಡಿದಾಗ ಹೇಳಲೇ ಇಲ್ಲ. ನನ್ನ ಹಬ್ಬಕ್ಕೆ ಕರೆದ ಅಂತಾ ಬಂದೆ.

ಹೌದಾ, ಕುಸುಮ ನನಗೆ ಗೊತ್ತಿಲ್ಲ ಅವೆಲ್ಲಾ, ಬಂದಿದ್ದೀಯಲ್ಲ ಒಳ್ಳೆದಾಯ್ತು ಬಿಡು ಹೋಗಿ ಅಡುಗೆ ಏನಾದ್ರು ಇದೆಯಾ ನೋಡು ಊಟ ಮಾಡೋಣ ಒಟ್ಟಿಗೆ. ಡ್ಯಾಡಿ ಹೇಳಿದ ಕೂಡಲೇ ಕೈಕಾಲು ತೊಳೆದು ದೇವರ ಕೋಣೆಗೆ ಹೋದೆ ಪೂಜೆ ಮಾಡಿದ್ದರು . ಇನ್ನೂ ದೀಪ ಉರಿಯುತ್ತಲಿತ್ತು. ಅಮ್ಮನ ನಗುವ ಪೋಟೋಕ್ಕೆ ಮಲ್ಲಿಗೆ ಹಾರ ಚೆನ್ನಾಗಿ ಕಾಣ್ತಾ ಇತ್ತು. ಅಮ್ಮ ನೀನು ಇರಬೇಕಿತ್ತಮ್ಮ ಯಾಕೋ ನನ್ನ ಕತ್ತು ಹಿಡಿದು ದಬ್ಬಿದಂಗೆ ಆಗ್ತಾ ಇದೆ. ನನ್ನ ಅಣ್ಣ ಬಾ ಅಂತ ಕರೆದಾ, ನಾನು ಕೇಳಿದ್ದೇ ಕೂಡ, ಅತ್ತಿಗೆ ಊರಿಗೆ ಹೋಗೋಲ್ವಾ ಅಂದಿದ್ದಕ್ಕೆ "ಇಲ್ಲ ಹೋಗೋಲ್ಲಾ ಮಕ್ಕಳು ಎಲ್ಲರೂ ಮನೆನಲ್ಲೇ ಇರ್ತಾರೆ ಬಾ" ಎಂದು ಹೇಳಿದ್ದ...!! ಈಗ ನೋಡಿದ್ರೇ ನನಗೆ ಯಾಕೋ ಮುಜುಗರ ಅನ್ನುಸ್ತಾ ಇದೆ ಅಮ್ಮಾ... ಎಂದು, ಒಂದೆರಡು ಕಣ್ಣ ಹನಿ ಹಾಗಿದೆ. ತಕ್ಷಣವೇ ಅಮ್ಮನ ಪೋಟೋದಿಂದ ಬಲಗಡೆ ಹೂ ಬಿತ್ತು.... 

ಅಮ್ಮನಿಗೂ ಬೇಸರವಾಗಿತ್ತೇನೋ ಪಾಪ, ಈ ಹೂ ಮುಡಿದು ಕೋ ಎಂದು ಕೊಟ್ಟಳೇನೋ ಎಂದೆನಿಸಿ ಆ ಹೂವನ್ನು ನನ್ನ ತಲೆಗೆ ಮುಡಿದೆ. ನಾನು ತಂದಿದ್ದ ಮಲ್ಲಿಗೆ ದಿಂಡಿನ ಹೂವನ್ನು ಅಮ್ಮನ ಪೋಟೋಗೆ ಹಾಕಿದೆ. ಹಣ್ಣುಕಾಯಿ ಸಿಹಿತಿಂಡಿ ಎಲ್ಲಾ ಅಲ್ಲೇ ದೇವರ ಮುಂದಿಟ್ಟು ಕೈ ಮುಗಿದೆ.
----
ಅಡುಗೆ ಕೋಣೆಯೊಳಗೆ ಘಮಘಮಿಸೋ "ಹೋಳಿಗೆ ಹೂರಣ, ಮೈದಾ ಹಿಟ್ಟಿನ 'ಕನ್ನಕ' ಕಲೆಸಿದ್ದು ಹಾಗೇ ಇದೆ. ಸಾರು ತಯಾರಾಗಿದೆ ಆದರೆ ಅನ್ನ ಇರಲಿಲ್ಲ ಮತ್ತು ಹೋಳಿಗೆ ತಟ್ಟಿದ್ದು ಕಾಣುತ್ತಲೇ ಇಲ್ಲ ಸುತ್ತಲೂ ಕಣ್ಣಾಡಿಸಿ. ಅಕ್ಕಿ ಹುಡುಕಿ ಅನ್ನಕ್ಕೆ ತಯಾರಿಟ್ಟೆ. ಹೋಳಿಗೆ ಸ್ವಲ್ಪ ಅಪ್ಪನಿಗೂ, ನನಗೂ ಬೇಕಾಗುವಷ್ಟು ತಟ್ಟಿ ಬಿಸಿ ಬಿಸಿ ಊಟಕ್ಕೆ ತಯಾರಾಗುವ ಮುನ್ನ ಅಮ್ಮನಿಗೆ ಸ್ವಲ್ಪ ಎಡೆ ಇಟ್ಟು ಡ್ಯಾಡಿಯನ್ನು ಊಟಕ್ಕೆ ಕರೆದೆ. 

"ಮಲಗಿದ್ದ ಸುಮುಖನನ್ನು ಎಬ್ಬಿಸಲಿಲ್ಲ..!!" ಮೊದಲು ಊಟ ಮಾಡಿಬಿಡುವ ಎಂದೆನಿಸಿ ಇಬ್ಬರೂ ಊಟಕ್ಕೆ ಕುಳಿತುಕೊಂಡೆವು. ಡ್ಯಾಡಿ ಮಾತೇ ಕಡಿಮೆ, ಮೊದಲೇ ಮೌನಿ ಈಗ ಇನ್ನೂ ಕೇಳುವ ಹಾಗಿಲ್ಲ... ನಾನೇ ಮಾತಿಗೆಳೆದೆ. 

ಡ್ಯಾಡಿ ಬೆಳ್ಳಿಗ್ಗೆ ತಿಂಡಿ ಏನು ತಿಂದ್ರಿ..?

ಉಪ್ಪಿಟ್ಟು ತಿಂದೆ ಅಮ್ಮಿ (ಅಪ್ಪಾ ನನ್ನ ಪ್ರೀತಿಯಿಂದ ಹಾಗೆ ಕರೆಯೋದು), ಎಲ್ಲಿ ನಿಮ್ಮ ಯಜಮಾನರು ಬರಲೇ ಇಲ್ಲಾ...?
ಸದ್ಯ ನನ್ನ ಗಂಡ ಬರಲಿಲ್ಲ. ಮೊನ್ನೆ ಅಣ್ಣ ಕರೆದಾಗ ಅವರು ಹೇಳಿದ್ರು. "ಅಮ್ಮಾ, ಇಲ್ಲ ಏನಿಲ್ಲ ಅವರು ಏನೋ ಕಾಟಚಾರಕ್ಕೆ ಕರೆದಿರ್ತಾರೆ ನೀನು ಕುಣ್ ಕೊಂಡು ಹೋಗಬೇಡ. ಅಮ್ಮನಿಗೆ ಹೇಳ್ತೀನಿ ಇಲ್ಲೇ ಅಡುಗೆ ಮಾಡಿ ಊಟಮಾಡಿದ್ರೇ ಆಯ್ತು" ಎಂದು ಮೂಗು ಮುರುದು ಕೊಂಕಾಗಿ ಮಾತಾಡಿದ್ದರು.  

ಅಮ್ಮಿ... ಎಲ್ಲಿದ್ದೀಯಾ..!! ಯಾಕೆ ಮಾತಿಲ್ಲ ...ಎಂದಾಗಲೇ ಬೆಚ್ಚಿ ಮಾತಿಗಿಳಿದೆ.

ಇಲ್ಲ ಡ್ಯಾಡಿ ಅವರಿಗೆ ರಜೆ ಇಲ್ಲ ಅದಕ್ಕೆ ಬಂದಿಲ್ಲಾ.. ನಾವಿಬ್ಬರು ಬಂದೆವು ಅಷ್ಟೇ.. ಮೌನಕ್ಕೆ ಶರಣಾಗಿ ಕೈ ಮತ್ತು ಬಾಯಿಗೆ ಕೆಲಸ ಕೊಟ್ಟೆ. 

ಊಟ ಮುಗಿಯುವ ಹೊತ್ತಿಗೆ ಸುಮುಖ ಎದ್ದು "ಅಮ್ಮಾ ಮಾವ ಎಲ್ಲಿ" ಎಂದು ಕೇಳಲು ಶುರುವಿಟ್ಟ. ಡ್ಯಾಡಿ ಅವನನ್ನು ಸಮಾಧಾನ ಮಾಡುತ್ತ ಮಾಮ ಎಲ್ಲೋ ಹೋಗಿದ್ದಾನೆ. ನೀನು ಮಲಗಿದ್ದಲ್ಲಾ ಅದಕ್ಕೆ ಕಾದು ಸುಸ್ತಾಗಿ ಎಲ್ಲೋ ಆಚೆ ಹೋದ ಬರುತ್ತಾನೇ ಬಿಡು ಸುಮು ಎಂದರು...

ಅಮ್ಮೀ... ಸ್ವಲ್ಪ ಮಗುಗೆ ಊಟ ತೆಗೆದುಕೊಂಡು ಬಾ, ಎಂದು ಹೇಳಿ ಮಗುವನ್ನು ಆಚೆ ಓಡಾಡಿಸಲು ಹೊರಟರು. ನಾನು ಅವರನ್ನು ಹಿಂಬಾಲಿಸಿ ಆಚೆ ಮಗುವಿಗೆ ಊಟ ಮಾಡಿಸಿ ಮನೆ ಒಳಗೆ ಹೆಜ್ಜೆಯಿಡುವಾಗ..!!?? 

ಮನೆ ಬಿಕೋ ಎನ್ನುತ್ತಿದೆ, ಜೊತೆಗೆ ನನ್ನ ಮನಸ್ಸು ಕೂಡ, "ಅಮ್ಮನಿಲ್ಲದ ಮನೆ ಮನೆಯಲ್ಲ ಬಿಡು..." ಕಳೆದ ವರ್ಷ ಇದೇ ಸಮಯದಲ್ಲಿ ಅತ್ತಿಗೆ ಊರಿಗೆ ಹೋಗಿದ್ದಳು, ನಾನು ಬಂದಿದ್ದೆ ಮನೆಯೆಲ್ಲಾ ಗಲಗಲಾ ಅನ್ನುತ್ತಿತ್ತು. "ಅಮ್ಮನದೋ ದೊಡ್ಡ ಕೈ ಊರಲ್ಲಿ ಇರೋಬರೋರಿಗೆಲ್ಲ ಕರೆದು ಊಟಕ್ಕೆ ಹಾಕುವುದೇ ಕೆಲಸ". ಏ ಸುಮ್ಮನಿರು ಅಮ್ಮಿ, ನಮ್ಮ ಕೈನಲ್ಲಿ ನಡೆಯುವಾಗ ನಾಲ್ಕು ಜನಕ್ಕೆ ಅನ್ನ ಹಾಕಬೇಕು ಎಂದು ಹೇಳುತ್ತಿದ್ದ ಅಮ್ಮ ಇಂದು ಇಲ್ಲ. 

ಗೌರಿ ಹಬ್ಬ ಅಳಬಾರದು. ಅಮ್ಮನ ಮನೆಗೆ ಬಂದು "ಅತ್ತು-ಕರೆದು ಅಮ್ಮನ ಮನೆ ಏಳಿಗೆ ಆಗದ ಹಾಗೆ ಮಾಡ್ತೀಯಾ" ಎಂದು ಯಾರೋ ಹಿಂದಿನಿಂದ ಹೇಳಿದಂತಾಯ್ತು...... ಹಿಂದಿರುಗಿ ನೋಡಿದೆ ಯಾರೂ ಇಲ್ಲ.

 ಓಹ್..!! ಹೋದ ವರ್ಷ ಅಮ್ಮ ನನಗೆ ಹೇಳಿದ್ಲು, "ನಾನು ಇಲ್ಲದಿದ್ದರೂ ನೀನು ಬಂದು ಹೋಗಬೇಕು, ಇದು ನೀನು ಹುಟ್ಟಿ ಬೆಳೆದ ಮನೆ, ಅತ್ತಿಗೆ ಅನ್ನಿಸಿಕೊಂಡವಳು ಮಧ್ಯದಲ್ಲಿ ಬಂದವಳು. ನಿನಗೂ ಸ್ವಾತಂತ್ರವಿದೆ ಯಾರೂ ಇಲ್ಲದಿದ್ದರೇನು ಸೀದ ಅಡಿಗೆ ಕೋಣೆಗೆ ಹೋಗು ನಿನಗೆ ಬೇಕಾದ್ದು ತಗೋ, ಕೈಲಾದ ಕೆಲಸ ಮಾಡು, ಇದ್ದದ್ದು ಉಂಡುಟ್ಟು, ಬಂದು-ಹೋಗಿ ಮಾಡು, ಅತ್ತುಕರೆದು ಹೋಗಬೇಡ" ಎಂದಿದ್ದು, ಈಗ ಹೇಳಿದಂತಿದೆ. 

ಅಡುಗೆ ಕೋಣೆ ಎಲ್ಲಾ ಸ್ವಚ್ಚ ಮಾಡಿದೆ, ಡ್ಯಾಡಿ ಸುಮುಖನನ್ನು ಕೈಗೆ ತಂದುಕೊಟ್ಟು ಹಾಸಿಗೆ ಸೇರಿದರು... ಹತ್ತೆ ನಿಮಿಷಕ್ಕೆ ಗೊರಕೆ ಹೊಡಿತಾ ಇದ್ದಾರೆ. ನನಗೋ ಬೇಸರ, ಇರು ಆಚೆ ಮಗನನ್ನು ಆಟ ಆಡಿಸೋಣ ಎಂದು ಆಚೆ ಕುಳಿತೆ ಬಾಗಿಲು ಭದ್ರ ಮಾಡಿ. 

ಸಪ್ಪಗೆ ಕುಳಿತಿದ್ದ ನನ್ನನ್ನು ಪಕ್ಕದ ಮನೆ ಸುಮಿ ಆಂಟಿ ಕರೆದರು. ಏಹ್!! ಅಮ್ಮಿ ಯಾವಾಗ ಬಂದೋ, ಬಾ ಬಾ ನಿನ್ನ ಸ್ನೇಹಿತೆಯರು ಬಂದಿದ್ದಾರೆ ಎಂದು ಮನೆಗೆ ಎಳೆದುಕೊಂಡು ಹೋದರು.

ಆಹಾ..!! ಆ ಮನೆಯ ಸಂತೋಷ ಹೇಳತೀರದು. ಸೊಸೆ ಮಗ, ಹೆಣ್ಣುಮಕ್ಕಳು ಎಲ್ಲರೂ ತುಂಬಿ ತುಳುಕುತ್ತಿತ್ತು. 
ಏಕೆ ಸೊಸೆ ಊರಿಗೆ ಹೋಗಿಲ್ವಾ ಎಂದು ಕೇಳಿದ್ರೇ,  ಅವಳು ಹೋಗಿಲ್ಲ ಹೆಣ್ಣು ಮಕ್ಕಳು ಇಲ್ಲಿ ಬರುತ್ತಾರೆ ನಾನು ಹೇಗೆ ಹೋಗಲಿ, ಹಬ್ಬ ಮುಗಿಸಿ ಶನಿವಾರ, ಭಾನುವಾರ ಹೋಗ್ತಾಳಂತೆ ಎಂದರು. 

ನನಗೆ ಒಳಗೊಳಗೆ ಸಂಕಟವಿದ್ದರೂ ತೋರಿಸಿಕೊಳ್ಳಲಿಲ್ಲ. ಆಂಟಿ ಮಾತ್ರ ಅಂದು ಹೇಗೆ ನನ್ನನ್ನೂ ಅವರ ಮಗಳಂತೆ ನೋಡುತ್ತಿದ್ದರೋ ಇಂದು ಸಹ ಅದೇ ಭಾವನೇ. ಬೇಡವೆಂದರೂ ಬಿಸಿ ಬಿಸಿ ಹೋಳಿಗೆ ಮಾಡಿಕೊಟ್ಟರು. ಹೆಣ್ಣು ಮಕ್ಕಳು ಯಾಕೆ ಬರ್ತೀರಾ ಹಾಯಾಗಿ ಒಂದೆರಡು ದಿನ ಇರಲು ಅಲ್ಲವೇ..? ಇಂತಹದರಲ್ಲಿ ನಿನ್ನ ಅತ್ತಿಗೆ ಊರಿಗೆ ಹೋಗಿದ್ದಾಳೆ ನೋಡು, ಬೆಳಿಗ್ಗೆ ತಾನೇ ಕೇಳಿದೆ ನೀನು ಬರ್ತಿದ್ದೀಯ ಅಂತಾ... ಅದಕ್ಕೆ ಅವಳು... "ಕರೆದ್ವಿ ಕುಸುಮನೇ ಬರೋಲ್ಲಾ" ಎಂದಳು ಅದಕ್ಕೆ ನಾನು ಊರಿಗೆ ಹೋಗ್ತೀನಿ ಅಂದಳು. ನೀನು ನೋಡಿದರೆ ಬಂದಿದ್ದೀಯಾ..!!?

ಆಂಟಿ, ಅವರಿಗೂ ತವರು ಮನೆ ಆಸೆ ಅಲ್ವಾ..? ಹೋಗಿಬರಲಿ ಎಂದು, ನಾನು ಬರೋಲ್ಲಾ ಎಂದು ಹೇಳಿದ್ದೆ. ನನ್ನ ಮೇಲೆ ನಾನೇ ಸುಳ್ಳು ಹೇಳುತ್ತಿದ್ದು ಆಂಟಿಗೆ ಅರಿವಿಗೆ ಬಂತು. 

ಏನು ತವರು ಮನೆ ಅವಳು ಕಳೆದವಾರ ಎಲ್ಲಾ ಅಲ್ಲೇ ಇದ್ದಳು, ಮಕ್ಕಳು ರಜೆ ಬಂದರೇ ಅಲ್ಲೇ ಇರ್ತಾಳೆ ನೀನಂತು ಕೆಲಸಕ್ಕೆ ಹೋಗುವವಳು ಏನೋ ಎಂದೋ ಬಂದು ಹೋದರೆ ಅವಳಿಗೇನು ತೊಂದರೆ. ಅವಳಿಗೂ ಅಣ್ಣನೋ ತಮ್ಮನೋ ಇರಬೇಕಿತ್ತು ಗೊತ್ತಾಗೋದು ೫ ಜನ ಹೆಣ್ಣು ಮಕ್ಕಳ ಜೊತೆ ಹುಟ್ಟಿ ಅವರದೇ ಪ್ರಪಂಚ. ನಿನ್ನ ನೋವು ಅವಳಿಗೇನು ಗೊತ್ತಾಗುತ್ತೆ. ಬರಿ ನಾಟಕದ ಮಾತುಗಳೇ ಅವಳದು. ನೀನು ಇಷ್ಟು ವಿದ್ಯಾವಂತೆ ದೇಶಗಳನ್ನು ಸುತ್ತಿ ಬಂದಿದ್ದೀಯಾ ಸ್ವಲ್ಪವೂ ಅಹಂಕಾರ ಇಲ್ಲ. ನಿನ್ನ ನಾದಿನಿಯರನ್ನು ದೀಪಾವಳಿಗೆ ಕರೆದು ಹೇಗೆ ಉಪಚಾರ ಮಾಡ್ತೀಯಾ ಆ ದೇವರು ನಿನ್ಗೆ ಯಾಕೆ ಹಿಂಗೆ ಮಾಡಿದ ಎಂದು ದೇವರನ್ನು ಶಪಿಸುತ್ತಿದ್ದವರನ್ನು ನಾನೇ ಮೊಟುಕುಗೊಳಿಸಿದೆ ಇನ್ನೊಂದು ಹೋಳಿಗೆ ಕೇಳುವ ಮೂಲಕ.

ಇಷ್ಟವಾಯ್ತಾ ಒಬ್ಬಟ್ಟು ತಿನ್ನು ಮಗಳೇ... ಎಂದು ಉಪಚರಿಸಿ... ನಂತರ ಗೌರಿ ಪೂಜೆ ಮಾಡಿಸಿ ನನಗೆ ಅರಿಶಿನ ಕುಂಕುಮ ಬಾಗಿನ ಕೊಟ್ಟು ಸೀರೆ, ಹಣ ಕೊಟ್ಟರು. ನನ್ನ ಕಣ್ಣುಗಳು ತಡೆಯದೆ ಬಾಗಿನದ ಮೇಲೆ ತೊಟ್ಟುಗಳನ್ನು ಚುಮುಕಿಸಿದವು. ಎಲ್ಲರು ನನ್ನನ್ನೇ ಸಮಾಧಾನ ಮಾಡಿ "ನೋಡು ಇನ್ನು ಮೇಲೆ ನಮ್ಮ ಮನೆ ಮಗಳು ನೀನು ಅವರಂತೆ ನೀನು ಬಂದು ಹೋಗಬೇಕು". ನಿನ್ನ ತಾಯಿ ನಾನೇ ಎಂದುಕೋ’, ನಿನ್ನಮ್ಮ ಬದುಕಿರುವಾಗ ಎಷ್ಟು ಜನರನ್ನು ಸಾಕಿ ಸಲಹಿದ್ದಾಳೆ. ನೀನು ಒಂದು ದಿನ ಬಂದು ಹೋದರೆ ನೋಡಿಕೊಳ್ಳುವವರಿಲ್ಲ. ನಿನ್ನ ಅತ್ತಿಗೆಯದು ಯಾವಾಗಲು ಕೋಣೆಯಲಿದ್ದು ಅದೇ ಬುದ್ದಿ. "ಮಕ್ಕಳಿಗೆ ಗಟ್ಟಿ ಮೊಸರನ್ನು ಕೊಡಲು ಅಕ್ಕಿಡಬ್ಬದಲ್ಲೋ ಪಬ್ಬದಲ್ಲೋ ಮುಚ್ಚಿಟ್ಟು ಆ ವಯಸ್ಸಾದ ಅಜ್ಜಿತಾತನಿಗೆ ನೀರು ಸುರಿಯುತ್ತಿದ್ದವಳು" ನಾನೇ ಕಣ್ಣಾರೇ ನೋಡಿದ್ದೀನಿ. ಮುಚ್ಚುಮರೆಯ ಜೀವನ ಅವಳದು. ನೀನು ತಲೆ ಕೆಡಿಸಿಕೊಳ್ಳಬೇಡ ಅವಳಿಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರಲ್ಲ ಗೊತ್ತಾಗುತ್ತದೆ ಮುಂದೆ. 

ಆಂಟಿಗೆ ನನ್ನ ಮೇಲಿನ ಪ್ರೀತಿಗೆ ಇಷ್ಟೇಲ್ಲಾ ಮಾತು, ಇರಲಿ ಆಂಟಿ ಅವರ ಜೀವನ ಅವರದು ನಾನು ಹುಟ್ಟಿದಿಂದ ಅವರೇ ಇದ್ದರೇ. ನಾನು ಹುಟ್ಟಿದ ಮನೆ ನಾನು ಬಂದು ಹೋಗ್ತೀನಿ ಬೇರೆಯವರ ಅಪ್ಪಣೆ, ಉಪಚಾರ ನನಗೇಕೆ. ನಾನು ಇಂಜಿನಿಯರ್ ಹುಡುಗಿಯಾಗಿ ಅವರಂತೆ ಮಾತನಾಡಲಾಗದು. ವಾಸ್ತವ ಬದುಕನ್ನು ಅರ್ಥೈಸಿಕೊಳ್ಳಬೇಕು. ಎಲ್ಲರಿಗೂ ಅವರದೇ ಆಸೆ-ಆಕಾಂಕ್ಷೆಗಳಿರುತ್ತವೆ. ಅವರ ತವರಿಗೆ ಅವರು ಹೋಗಲು ನಾವು ಯಾಕೆ ಅಡ್ಡವಾಗಬೇಕು. ಎಂದು ನನ್ನನ್ನೇ ನಾನು ಸಮಾಧಾನಿಸಿಕೊಂಡು ಮಗನನ್ನು ಕರೆದುಕೊಂಡು ಬಂದೆ. 
---
ಅಪ್ಪಾ ಇನ್ನೂ ಮಲಗಿದ್ದಾರೆ ಆಗಲೇ ಸಂಜೆ ೬ ಗಂಟೆ, ಅಣ್ಣನೂ ಕರೆಮಾಡಲಿಲ್ಲ, ಅತ್ತಿಗೆಯೂ ಕರೆಮಾಡಲಿಲ್ಲ ನಾನು ಬಂದಿದ್ದಕ್ಕೆ ಸರಿಹೋಯ್ತು ಇಲ್ಲದಿದ್ದರೆ ಡ್ಯಾಡಿ ಏನು ಮಾಡ್ಕೋತಾ ಇದ್ರು ಊಟಕ್ಕೆ. ಎಂದೂ ಅಪ್ಪ ಅಡುಗೆ ಮನೆಗೆ ಬಂದವರಲ್ಲಾ... ದೇವರೆ ಅಪ್ಪನನ್ನು ಅಮ್ಮನೊಟ್ಟಿಗೆ ಬೇಗ ಕರೆದುಕೊಂಡುಬಿಡಪ್ಪಾ ಎಂದು ಬೇಡಿಕೊಂಡೆ. 

ದೇವರ ದೀಪ ಹಚ್ಚುವ ಸಮಯ ಡ್ಯಾಡಿಯನ್ನು ಎಬ್ಬಿಸಿ ಕಾಫಿ ಮಾಡಿಕೊಟ್ಟು, ದೇವರ ಪೂಜೆ ಮಾಡಿದೆ. ಸುಮುಖನದು ಅದೇ ಗಲಾಟೆ ಮಾಮ ಎಲ್ಲಿ ಎಂದು. ಅವನಿಗೆ ಕರೆ ಮಾಡಿದ್ರೆ ನಾಟ್ ರೀಚಬಲ್ ಅಂತಾ ಬರ್ತಾ ಇದೇ ಅತ್ತಿಗೆ ಊರೋ ಒಂದು ರೀತಿ ಕಾಡು ಇದ್ದಹಾಗೆ ಅಲ್ಲಿ ಸುತ್ತಮುತ್ತ ಮನೆಗಳೇ ಇಲ್ಲ ದೂರದಲ್ಲೆಲ್ಲೋ ಒಂದೊಂದೆ ಮನೆಗಳು ಇರುತ್ತವೆ... ಸಿಗ್ನಲ್ ಸಿಗೋದು ಕಷ್ಟ.

ಸರಿ ಸುಮುಖ ನಾಳೆ ಮಾಮ ಬರ್ತಾನೆ ಎಂದೇಳಿ ಅವನನ್ನು ಪಕ್ಕದ ಮನೆ ಮಕ್ಕಳ ಜೊತೆ ಆಟಕ್ಕೆ ಬಿಟ್ಟೆ. ಡ್ಯಾಡಿಯ ಹತ್ತಿರ ಮಾತನಾಡಬೇಕಾಗಿತ್ತು.

ಡ್ಯಾಡಿ ಯಾಕಿಷ್ಟು ಮೌನ, ನಾನು ಬರ್ತೀನಿ ಅಂದ್ರು ಊರಿಗೆ ಹೊರಟಿದ್ದಾರೆ ಅಣ್ಣ, ಅತ್ತಿಗೆ ಇದು ಒಂದು ರೀತಿ ಅವಮಾನ ಮಾಡಿದ ಹಾಗೆ ಅಲ್ವಾ ನನಗೆ?, ನನ್ನ ಕರೆಯದಿದ್ದರೆ ಬರುತ್ತಲೇ ಇರಲಿಲ್ಲ... ಕರೆದು ಮಂಗಳಾರತಿ ಮಾಡಿಸಿದ್ದಂತಾಯ್ತು... ಎಂದು ಅಳು ಮುಂದುಮಾಡಿದೆ.

ಡ್ಯಾಡಿಗೆ ಬೇಸರವಾಯ್ತೋ ಬಿಡ್ತೋ ಗೊತ್ತಿಲ್ಲ, ಇಂತಹವು ಜೀವನದಲ್ಲಿ ಬೇಜಾನ್ ಬರುತ್ತೆ ಅಮ್ಮಿ, ನೀನು ಎದುರಿಸಿ ನಿಲ್ಲಬೇಕು, ನೀನು ಮೊದಲೇ ಇಂಜಿನಿಯರ್ ಇಂತಹವು ಹೇಳಬೇಕ??

ಇಂಜಿನಿಯರ್ ಆದರೇನು ಮನಸ್ಸು ಇರೋಲ್ವಾ ನಮಗೆ? ಮೌನವೇ ಎಲ್ಲಕ್ಕೂ ಉತ್ತರವೆಂದು ಸುಮ್ಮನಾದೆ.

ರಾತ್ರಿ ಕಳೆದು ಬೆಳಗಾಯಿತು ಗಣೇಶನ ಹಬ್ಬ ಬಂದಿದೆ. ಅಣ್ಣ ಬಂದರು ಒಂದೇ, ಬರದಿದ್ದರೂ ಒಂದೇ ಎಂದೆನಿಸಿತು. ಸ್ನಾನ ಪೂಜೆ ಮುಗಿಸಿ ಸಿಹಿ ಕಡುಬು ಮಾಡಿ ನಾವು ಮೂವರು ತಿಂದೆವು. ನಾನು ನೆನ್ನೆಯೇ ಬೇಸರ ಮಾಡಿಕೊಂಡು ಹೊರಟು ಹೋಗಿದ್ದರೆ ಡ್ಯಾಡಿಗೆ ಇಂದಿನ ಊಟದ ವ್ಯವಸ್ಥೆ ಏನಾಗಬೇಕಿತ್ತು. ಮೊದಲೇ ಒಂದು ಮೂಲೆಯಲ್ಲಿ ಕೂತರೆ ಮುಗಿಯಿತು, ಎದ್ದು ತಿನ್ನುವ ಆಸಾಮಿಯೂ ಅಲ್ಲ.

ಮಧ್ಯಾಹ್ನದ ಊಟ ಮುಗಿಸಿ ಡ್ಯಾಡಿಗೆ ಹೇಳಿ ಹೊರಡೋಣ ಎಂದುಕೊಂಡೇ ಆದರೆ ಯಾಕೋ ಮನಸ್ಸು ಬೇಡವೆನಿಸಿತು. ಗಂಡನ ಮನೆಗೆ ಹೊರಟು ಹೋದರೆ "ಇಷ್ಟು ಬೇಗ ಬಿಟ್ಟುಬಿಟ್ಟಿತ ಅಪ್ಪನ ಮನೆ" ಎಂದಾರು, ಅಮ್ಮ ಇಲ್ಲ ಅಂತಾ ಆಗಲೇ ಅವರು ೨ನೇ  ದಿನಕ್ಕೆ ಮುಗಿಸಿ ಕಳಿಸಿದ್ರಾ ಎಂದು ಚುಚ್ಚು ಮಾತು ಆಡಿಯಾರು ಎಂದೆನಿಸಿತು. ಇಂದು ರಾತ್ರಿ ಕಳೆದರೆ ನಾಳೆ ಆಫೀಸ್ ಇರುತ್ತಲ್ಲಾ ಕಾರಣ ಕೊಡಬಹುದೆಂದು ಸುಮ್ಮನಾದೆ ಅಂದು ರಾತ್ರಿಯೂ ಬಾರದ ಅಣ್ಣನ ಬಗ್ಗೆ ಯಾವ ಭಾವವೂ ತುಂಬಿರಲಿಲ್ಲ.

ಬಂದ ಕೆಲಸ ಮುಗಿದಮೇಲೆ ನಮ್ಮದೇನು ನಮ್ಮ ನಮ್ಮ ಊರಿಗೆ ಹೊರಡಲೇ ಬೇಕಲ್ಲವೇ.'ಕೊಟ್ಟ ಹೆಣ್ಣು ಕುಲದಿಂದ ಹೊರಗೆ'. ನಾವು ಹುಟ್ಟಿ ಬೆಳೆದ ಮನೆ ನಮಗೊಂದು ದಿನ ಅನಾಥ ಪ್ರಜ್ಞೆ ಮೂಡಿಸುತ್ತದೆ ಎಂದರೆ ಇದೇನಾ..? "ಹೆಣ್ಣೇ ಏಕೆ ಬೇರೆ ಮನೆಗೆ ಹೋಗಬೇಕು, ಗಂಡು ನಾವಿರುವೆಡೆ ಇರಲು ಆಗದೆ. ನಮ್ಮ ವೇದನೆ ಅವನಿಗೂ ಗೊತ್ತಾಗಲಿ" ಏನೋ ಹುಚ್ಚು ಮನಸ್ಸು ತಡೆಯಲಾರದ ವೇದನೆ. ಅಮ್ಮ ತುಂಬಾ ನೆನಪಾಗ್ತಾಳೆ. 

ಪ್ರತಿ ಗೌರಿ ಹಬ್ಬ ಎಲ್ಲಾ ಮುಗಿಸಿ ಹೊರಡುವ ಮುನ್ನ ಅಮ್ಮ, ನಿನಗೆ ಮಲ್ಲಿಗೆ ಹೂವೆಂದರೆ ತುಂಬಾ ಇಷ್ಟ, ನಿನ್ನ ಉದ್ದನೆ ಕೂದಲಿಗೆ ೩ ಮೊಳ ಹೂ ಮುಡಿದುಕೋ ಚೆನ್ನಾಗಿ ಕಾಣುತ್ತೆ, ಅಮ್ಮಿ..!! ಅದೇನೋ ಆಫೀಸ್ ಗೆ ಫ್ಯಾಂಟ್ ಶರ್ಟ್ ಹಾಕ್ತೀಯ ಅದಕ್ಕೇನೋ ಪುಟ್ಟ ಬೊಟ್ಟು ಇಡುತ್ತಿದ್ದೆ. ಈಗೇನು ಸೀರೆ ಉಟ್ಟುಕೊಂಡಿದ್ದೀಯಾ, ಸ್ವಲ್ಪ ದೊಡ್ಡದಾದ ಬೊಟ್ಟು ಇಡಬಾರದ? ಹೋಗು ಅಲ್ಲೇ ನನ್ನ ಸ್ಟಿಕ್ಕರ್ ಇದೆ ಇಟ್ಟು ಕೋ, ಹಾ ಆಮೇಲೆ ತಗೋ ಈ ಸೀರೆ ನಿನಗೋಸ್ಕರ ಗೌರಿ ಹಬ್ಬಕ್ಕೆ ಅಂತಾ ತಂದಿದ್ದು, ರೇಷ್ಮೇ ಸೀರೆ ಹೊಸದಾಗಿ ಬಂದಿರೋ ಟೆಂಪಲ್ ಬಾರ್ಡರ್ ಕಣೆ... ಇದೇ ಸೀರೆಯಲ್ಲೇ ನಿಮ್ಮ ಅತ್ತೆ ಮನೆಗೆ ಹೋಗಬೇಕು. ಅತ್ತೆ ಮನೆಯವರು ಇವಳು ತವರು ಮನೆಯಿಂದ ಏನು ತಂದ್ಲು, ಹೆಂಗೆ ಬಂದ್ಲು ಅಂತಾ ನೋಡ್ತಾರೆ. ನಿನ್ನ "ತವರು ಏನು ನಿನಗೆ ಕೊರತೆ ಮಾಡಿಲ್ಲ" ಅನ್ನೋದು ಅವರಿಗೆ ಗೊತ್ತಾಗುತ್ತೆ. ಇದು ಬರಿ ತೋರಿಸಿಕೊಳ್ಳೋಕ್ಕಲ್ಲ ಅಮ್ಮಿ, ಇದರಲ್ಲಿ ನಿಮ್ಮ ಅಪ್ಪ ಅಮ್ಮನ ಪ್ರೀತಿನೂ ಇದೆ. ನಾನು ಸತ್ತರೂ ನಿಮ್ಮ ಅಪ್ಪ ಇರೋವರೆಗೂ ನಿನಗೆ ರೇಷ್ಮೆ ಸೀರೆನೇ ಕೊಡ್ಸಿಬೇಕು ಅಂತಾ ಹೇಳಿದ್ದೀನಿ, ಹಂಗೆ ನಿಮ್ಮ ಅಣ್ಣನಿಗೂ ಹೇಳಿದ್ದೀನಿ. ನಾನು ಇಲ್ಲಾ ಅಂದ್ರು ಏನು ಕೊರತೆ ಮಾಡೋಲ್ವೆ ನಿನ್ನ ಅಣ್ಣ ಹೆಣ್ಣುಗಳ್ಳು... ಹುಫ್..!! ಅಮ್ಮ ಏನೆಲ್ಲಾ ಬಡಬಡಾಯಿಸಿದ್ಲು ಅವತ್ತು ಈಗೇನಾಯ್ತು..? ಸದ್ಯ ನನಗೆ ಅವನೇನು ಕೊಡಿಸುವುದು ಬೇಡ ಒಂದು ಫೋನ್ ಮಾಡಿ ಮಾತಾಡಲೂ ಇಲ್ಲವೇ? 

ದೇಹದ ಭಾರಕ್ಕಿಂತ ಮನಸ್ಸಿನ ಭಾರವೇ ಹೆಚ್ಚು ಎನ್ನಿಸಲಿಕ್ಕೆ ಶುರುವಾಯಿತು. ಮಗನನ್ನು ತಯಾರು ಮಾಡಿದೆ ಅವನದು "ಮಾಮ ಎಲ್ಲಿ?" ಎಂಬ ಪ್ರಶ್ನೆ ಮುಗಿಯಲಿಲ್ಲ... ಇನ್ನು ಮನೆಗೆ ಹೋದರೆ ನನ್ನ ಅತ್ತೆ ಮೊಮ್ಮಗನಲ್ಲಿ ವಿಷಯ ಸಂಗ್ರಹ ಮಾಡುತ್ತಾರೆ. ಇನ್ನು ಮುಗಿದ ಕಥೆ ನಾನು ಆಟಿಕೆಯ ವಸ್ತು ಆಗುವುದೂ ಖಂಡಿತಾ..!! ಸುಮುಖನಿಗೆ ಮುದ್ದು ಮಾಡಿ ನೋಡು ಮಾಮ ಬಂದಿದ್ದಾ ನೀನು ಎದ್ದೇಳಲೇ ಇಲ್ಲ, ನಾಳೆ ಮತ್ತೆ ಬರೋಣ ಅಷ್ಟರಲ್ಲಿ ಮಾಮ ಕೆಲಸ ಮುಗ್ಸಿ ಬರ್ತಾನಂತೆ ಈಗ ನಮ್ಮ ಮನೆಗೆ ಹೋಗೋಣ ಎಂದು ಸುಳ್ಳು ಸಮಜಾಯಿಸಿ ಕೊಟ್ಟಿದ್ದು ಅವನಿಗೆ ಖುಷಿ ಕೊಟ್ಟಿತು. ಡ್ಯಾಡಿ ಮತ್ತದೇ ನ್ಯೂಸ್ ಪೇಪರ್ ಗೆ ಮೊರೆ ಹೋಗಿದ್ದಾರೆ. ಮಾಡಿಟ್ಟಿದ್ದ ಊಟವನ್ನು ಮಧ್ಯಾಹ್ನಕ್ಕೆ ತಿಂದುಬಿಡಿ ನನಗೆ ಆಫೀಸ್ ಇದೆ ಹೊರಡ್ತೀನಿ ಎಂದು  ಹೇಳಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಂಡು ಹೊರಬಂದೆ. "ಅಮ್ಮೀ, ಹೇಗೆ ಹೋಗ್ತೀಯಾ" ಎಂದು ಕೇಳಿದರು ನನ್ನ ಕಣ್ಣಾಲೆ ತುಂಬಿತ್ತು ಮಾತು ಹೊರಡಲಿಲ್ಲ... ಸಾವರಿಸಿಕೊಂಡು "ಬಸ್ ಸ್ಟಾಪ್ ಗೆ ಹೋದರೆ ಆಟೋ ಸಿಗುತ್ತೆ" ಬರ್ಲಾ ಬಾಯ್ ಎಂದೇಳಿ ಗೇಟ್ ದಾಟಿ ಹಿಂದುರಿಗಿದೆ ಬಾಗಿಲವರೆಗೂ ಬಾರದ ಅಪ್ಪನಿಗಾಗಿ ಕಣ್ಣು ಹುಡುಕುತ್ತಿತ್ತು... ದುಃಖ ದುಮ್ಮಿಕ್ಕಿ ಬರುತ್ತಿತ್ತು. 

ಸೊಂಟದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ನೋಡುತ್ತಲಿದ್ದ ಕೂಸು, ಕೈಯಲ್ಲಿ ಬ್ಯಾಗ್ ಹೊತ್ತು ನಡೆವಾಗ ಹೆಜ್ಜೆಗಳು ನಿಧಾನಗತಿಗೆ ಇಳಿದವು. ಸುತ್ತಲೂ ಕಣ್ಣಾಡಿಸಿದೆ ಯಾವುದಾದರು ಬಟ್ಟೆ ಅಂಗಡಿ ಕಾಣುವುದೇನೋ ಎಂದು, ಅಮ್ಮ ಅಂದು ಹೇಳಿದ್ದಳು "ತವರು ಮನೆಯ ಹೆಸರು ಕುಂದಿಸಬಾರದು. ಕೆಲವೊಮ್ಮೆ ನಾವು ಕೊಡುವ ವಸ್ತುಗಳು ನಿನ್ನ ಗಂಡನ ಮನೆಯಲ್ಲಿ ಹೆಸರು ತರುತ್ತವೆ. ಜೊತೆಗೆ ನಿನ್ನ ಮರ್ಯಾದೆ ಉಳಿಸುತ್ತದೆ" ಯಾಕೋ ಒಂದು ಕಡೆ ನಿಜ ಎನ್ನಿಸುತ್ತಿದೆ ಇನ್ನೊಂದು ಕಡೆ ಇವೆಲ್ಲ ಗೊಡ್ಡು ಸಂಪ್ರದಾಯ ಎನ್ನಿಸುತ್ತಿದೆ. ಆದರೂ ನನ್ನ ಅತ್ತೆ ಸ್ವಲ್ಪ ಸಂಕುಚಿತ ಮನೋಭಾವ. ನನ್ನ ಮನೆಯನ್ನು ಬೆರಳು ಮಾಡಿ ತೋರಿಸಬಾರದು ಎಂದೆನಿಸುತ್ತಿತ್ತು. ಕೈಯಲ್ಲಿ ಹಣವಿಲ್ಲ ಅಷ್ಟು ಸಂಪಾದನೆ ಮಾಡುತ್ತೇನೆ ಹಣವಿಲ್ಲ ಎಂದು ಹೇಳಿಕೊಳ್ಳೊಕ್ಕೆ ಆಗುತ್ತಾ?, ಯಾರಾದರು ಕೇಳಿದರೆ ನಕ್ಕಾರು ಎಂದು ಒಳಮನಸ್ಸು ನಗುತ್ತಿತ್ತು. ನಿಜ, "ನನ್ನ ಸಂಬಳ ಎಲ್ಲವೂ ನನ್ನವರಿಗೆ ಕೊಟ್ಟು ಬಿಡುವೆ ನನಗೆ ಏನಾದರು ಬೇಕೆಂದರೆ ಅವರೇ ಕೊಡಿಸುತ್ತಾರೆ". ನನಗೆ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಅದರ ಅರಿವೂ ಆಗಿರಲಿಲ್ಲ, ಯಾಕೆ ಅಂದರೆ ಅಮ್ಮನೇ ಕಾರಣ ಬಂದಾಗಲೆಲ್ಲಾ ಕೈಯಲ್ಲಿಷ್ಟು ದುಡ್ಡು, ಹೂ ಹಣ್ಣು ತಿಂಡಿಗಳು ಎಂದೇಳಿ ಕಳುಹಿಸೋಳು ಈಗ ಬರಿಗೈ ಹೇಗೆ ಹೋಗೋದು.... ಮೊನ್ನೆ ನನ್ನವರು ಕೊಟ್ಟಿದ್ದು ೨೦೦ ರುಪಾಯಿ ಆಟೋದಲ್ಲಿ ಹೋಗಿಬರಲು ಸಾಕೆಂದಿದ್ದರು ಅದರಲ್ಲೇ ಹೂಹಣ್ಣು ಬರುವಾಗ ತಂದಿದ್ದೆ ಇನ್ನು ೫೦ ರುಪಾಯಿ ಇದೆ ಅದು ಆಟೋಗೆ ಆಗುತ್ತೆ. ಏನು ಮಾಡಲಿ ಎಂದು ನನ್ನ ಪರ್ಸ್ ಹುಡುಕಾಡಿದೆ. ಬ್ಯಾಗ್ ಹುಡುಕಿದೆ ಎಲ್ಲಾದರು ಮರೆತು ಇಟ್ಟ ಹಣವೇನಾದರೂ ಇದೆಯೇ ಎಂದು ತಕ್ಷಣಕ್ಕೆ ೩ ಸಾವಿರ ರುಪಾಯಿ ಕಾಣಿಸಿತು. ಓಹ್..!! ಅದೇ ಆ ಪಕ್ಕದ ಮನೆ ಸುಮಿ ಆಂಟಿ ಕೊಟ್ಟಿದ್ದ ದುಡ್ಡು. ಅಬ್ಬಾ ನನ್ನ ಪುಣ್ಯಕ್ಕೆ ಈ ಹಣ ಸರಿ ಸಮಯಕ್ಕೆ ಬಂದಿದೆ. ನಿಜ ನಮಗೂ ನಮ್ಮದೂ ಎಂಬ ಆಸೆ ಇರುತ್ತೆ ಗಂಡನಿಗೂ ಹೇಳಲಾರದಂತ ಖರ್ಚುಗಳು ಇರುತ್ತವೆ ದುಡ್ಡಿನ ಅವಶ್ಯಕತೆ ಇದೆ ಎಂದೆನಿಸಿತು. 

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಪಕ್ಕದ ಮನೆಯವರು ಕುಂಕುಮಕ್ಕೆ ದುಡ್ಡು ಕೊಟ್ಟಿದ್ದರಲ್ಲಿ ಹೂ ಹಣ್ಣು, ಮಗನಿಗೆ ಒಂದು ಜೊತೆ ಬಟ್ಟೆ, ಸಾವಿರ ರುಪಾಯಿಯ ಒಂದು ಕಾಟನ್ ಸೀರೆ ನನಗಾಗಿ ತೆಗೆದುಕೊಂಡು ಹೊರ ಬಂದಾಗ ಏನೋ ನಿರಾಳ ಮನಸ್ಸು. ಅಲ್ಲೇ ಇದ್ದ ಆಟೋದವರನ್ನು ಕರೆದು ಬನಶಂಕರಿಗೆ ಬರುವಿರೆಂದು ಕೇಳಿ ಮನೆಕಡೆಗೆ ಬಂದೆ. ಮುಖ ಬಾಡಿರಲಿಲ್ಲ ನಗುವನ್ನು ತುಂಬಿಕೊಂಡಿದ್ದೆ ಅತ್ತೆಗೆ ನಗುವಿಂದಲೇ ಬ್ಯಾಗ್ ನಲ್ಲಿದ್ದ ಹಣ್ಣು ಹೂ ಅವರ ಕೈಗಿತ್ತು ಒಳ ನಡೆಯುವಷ್ಟರಲ್ಲಿ ಮೊಮ್ಮಗನ ಯೋಗಕ್ಷೇಮದತ್ತ ಹೊರಟ ಅತ್ತೆ, "ಮಾಮ ಅತ್ತೆ ಏನಂದರೋ, ಏನು ಹಬ್ಬ ಜೋರಾಯಿತಾ" ಎನ್ನುವಷ್ಟರಲ್ಲಿ ನನ್ನ ಕೂಸು ಹೂ..ನಜ್ಜಿ ಸಕ್ಕತ್ತಾಗಿತ್ತು ಗಣೇಶ, ಗೌರಿ ಎಲ್ಲಾ ಇದ್ರು ಸ್ವೀಟುಗಳು ಎಷ್ಟೋಂದು ಇತ್ತು, ಹುಡುಗರು ಎಷ್ಟೋಂದು ಜನ ಇದ್ರು ಆಟ ಆಡಿದೆ ಚೆನ್ನಾಗಿ ಎಂದು ಹುಮ್ಮಸ್ಸಿನಿಂದ ಹೇಳುತ್ತಿದ್ದ. ಅವನು ಆಟವಾಡಿ ಕುಣಿದಿದ್ದು ಪಕ್ಕದ ಮನೆಯವರೊಂದಿಗೆ. ಆ ಕೂಸಿನ ಮಾತು ನನ್ನ ತವರನ್ನೂ ಉಳಿಸಿತ್ತು ಒಂದೆಡೆ ಅತ್ತೆಗೂ ಖುಷಿ ತರಿಸಿತ್ತು ಮಗುವಿನ ಮಾತಲ್ಲಿ.

'ಮನೆಗೆ ಬಂದರೂ ಅಣ್ಣನದು ಒಂದು ಕರೆ ಇಲ್ಲ, ಡ್ಯಾಡಿಯೋ ದೇಹವೊಂದು ಇದೆ ಆತ್ಮವೆಲ್ಲಾ ಅಮ್ಮನಲ್ಲಿಗೆ ಹೊರಟು ಬಿಟ್ಟಿದೆ'. ಏನೇ ಆಗಲಿ, ಅಮ್ಮನ ಕರುಳು ಬಾದಿಸುವುದು ಮಕ್ಕಳಿಗೆ ಮಾತ್ರ ತಂದೆಯ ಭಾವನೆಗಳೆಲ್ಲವೂ ಅವರಲ್ಲೇ ಹುದುಗಿಬಿಡುತ್ತವೆ  "ಭಾವುಕತೆ  ಇರಬೇಕು ಸಂಬಂಧಗಳನ್ನ ಹಿಡಿದಿಡಲು" ಎಂದೆನಿಸುತ್ತದೆ. ತವರಿನಲ್ಲಿ ತಾಯಿ ಇರುವವರೆಗೂ ಬಣ್ಣ ತುಂಬಿ ನಗುತ್ತಿರುತಿತ್ತು. ತಾಯಿಯ ನಂತರದ ದಿನಗಳು ತುಂಬಿದ ಬಣ್ಣಗಳು ಮಾಸುತ್ತಾ ಹೋಗುತ್ತದೆ. ಎಲ್ಲ ಬೇಸರಗಳ ಬದಿಗಿತ್ತು ತೋರಿಕೆಯ ನಗುವಿದ್ದರೂ ಒಳಗೆಲ್ಲೋ ಅಮ್ಮನ ಇಲ್ಲದಿರುವಿಕೆ ಸಹಿಸಿಕೊಳ್ಳಲಾಗುತ್ತಿಲ್ಲ. "ಅಣ್ಣನ ಮನೆಗೆ ತಿಲಾಂಜಲಿ ಇಡಲೂ ಆಗುತ್ತಿಲ್ಲ, ಅದು ನನ್ನ ತವರು" ಎಂದು ಮನಸ್ಸು ಕೂಗಿ ಹೇಳುತ್ತಿದೆ. ಇತ್ತ ಎಫ್ ಎಂ ನಲ್ಲಿ ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ ... ಎಂಬ ಹಾಡು ನನಗೋಸ್ಕರ ಹಾಕಿರುವ ಹಾಗಿದೆ ಎಂದೆನಿಸ್ತಾ ಇದೆ. 

ಅಮ್ಮನಿಲ್ಲದ ಮನೆಯು
ಮಬ್ಬು ಕವಿದಿದೆ

ಬೆಳಕು ಹರಿಸುವ
ದೀಪಕೆ ಕಾದು ಕುಳಿತಿದೆ

ಹಗಲೋ ಇರುಳೋ
ಎರಡು ಒಂದೇ ಎನಿಸಿದೆ
ಅವಳಿಲ್ಲದ ಮನೆಯು 
ಬಿಕೋ ಎನುತಿದೆ...!!!

ಪೋಟೋ ಕೃಪೆ : ಮನು ವಚನ್

ಇದು ನಾ ಕಂಡ ಪರಿಚಿತಳ ಕಥೆ... 

8 comments:

ದಿನಕರ ಮೊಗೇರ said...

ಅಬ್ಭಾ...ಸಣ್ಣದೊಂದು ಫಿಲ್ಮ್ ನೋಡಿದ ಹಾಗಾಯಿತು..... ಮನ ಮುಟ್ಟಿದ ಕಥೆ... ನನಗೂ ಇಬ್ಬರು ಅಕ್ಕಂದಿರು... ಅವರ ಸ್ಥಾನದಲ್ಲಿ ನಿಂತು ಓದಿದೆ.... ನನ್ನ ಹೆಂಡತಿಯ ಸ್ಥಾನದಲ್ಲೂ ನಿಂತು ಯೊಚಿಸಿದೆ.... ಅಸಾಧಾರಣ ಸಂದೇಶ ಇರುವ ಕಥೆ..... ತುಂಬಾ ಸೊಗಸಾಗಿದೆ....

ಭಾವಲಹರಿ said...

ಅಣ್ಣ ನಮ್ಮವನಾದರೆ ಅತ್ತಿಗೆ ನಮ್ಮವಳೇ, ಜನಪದ ಹಾಡ ನೆನಪಿಸಿತು ಹೆಣ್ಣಿಗೆ ಹೆಣ್ಣೆ ಶತೃವಾದರೆ ಹೇಗೆ ? ಗೌರಿ ಗಣೇಶನ ಹಬ್ಬಕ್ಕೆ ಒಂದೊಳ್ಳೆಯ ಮನ ಮಿಡಿಯುವ ಕಥಾ ಲಹರಿಯ ಬರೆದು; ಓದುಗರು ಓದಿ ತವರಿಗೆ ಬರುವ ಅಕ್ಕ ತಂಗಿಯರ ಮನ ಸಂತೋಷ ಪಡಿಸಿದರೆ ಎಷ್ಟು ಚೆನ್ನ.

Unknown said...

ತುಂಬಾ ಸುಂದರವಾದ ಕಥೆ.ನಿಮ್ಮ ಕಥೆಯಲ್ಲಿ ನಾನೂ ಪಾತ್ರಧಾರಿಯಾಗಿ ಕಲ್ಪಿಸಿಕೊಂಡೆ. ಒಂದು ಹೃದಯಸ್ಪರ್ಶಿ ಕತೆ.
ನನ್ನ ಬ್ಲಾಗಿಗೂ ಭೇಟಿ ಕೊಡಿ.

sunaath said...

ತಾಯಿ ಇದ್ದರೆ ಮಾತ್ರ ತವರು ಮನೆ ಎನ್ನುವ ಸತ್ಯವನ್ನು ಭಾವಪೂರ್ಣವಾಗಿ ನಿರೂಪಿಸಿದ್ದೀರಿ. ಆದರೆ ಇಂತಹ ಸ್ಥಿತಿ ಯಾವ ಹೆಣ್ಣುಮಗುವಿಗೂ ಬಾರದಿರಲಿ ಎನ್ನುತ್ತದೆ ಮನಸ್ಸು.

Badarinath Palavalli said...

ಅಮ್ಮನಿಲ್ಲದ ತವರ ಚಿತ್ರಣ ಮನ ಕಲುಕಿ ಹಾಕಿತು.
ಸುಮಿ ಅವರ ಹೃದಯವಂತಿಕೆ ಮನಸ್ಸು ಗೆದ್ದಿತು.

ಅತ್ತಿಗೆ ಆಕೆಯ ತವರು ಮನೆಗೆ ಹೋಗುವ ವಿಚಾರ ತಿಳಿಸಿದ್ದಾರೆ ಆಗುವ ಘಾಸಿ ತುಸು ಕಡಿಮೆ ಪ್ರಮಾಣದಲ್ಲಿರುತ್ತಿತ್ತೇನೋ?

"ಭಾವುಕತೆ ಇರಬೇಕು ಸಂಬಂಧಗಳನ್ನ ಹಿಡಿದಿಡಲು"
ಎನ್ನುವುದು ನಿಜ, ಈಗ ನನ್ನ ಹಳ್ಳಿ ಮನೆಯನ್ನೂ ಅಣ್ಣ ಮಾರಿಬಿಟ್ಟು ನಗರ ಸೇರಿದ್ದಾನೆ. ನನಗೆ ಹಳ್ಳಿಗೆ ಹೋಗಲೂ ಒಂದು ನೆಲೆಯಿಲ್ಲ! ನಿಮ್ಮ ಸಾಲುಗಳು ನನಗೂ ಅನ್ವಯ... :(

bilimugilu said...

hi Suguna....
ಕಥೆ ವಾಸ್ತವಕ್ಕಿ೦ತ ದೂರವೇನಿಲ್ಲ.
ಸೊಗಸಾಗಿ ಎಣೆದಿದ್ದೀರಿ....
ನಿಮ್ಮ ಕಥೆ ಓದಿ, ಎಲ್ಲೋ ಕೇಳಿದ ನೆನಪಾಯಿತು, "ಹೆಣ್ಣುಮಕ್ಕಳು ವಯಸ್ಸಿಗೆ ಬ೦ದ ಮೇಲೆ ಒ೦ದು ಪಕ್ಷ ಅಪ್ಪನಿಲ್ಲದಿದ್ದರೂ ಆದೀತು, ಅಮ್ಮನಿರಲೇ ಬೇಕು" ಅ೦ತ
ರೂಪ

Ittigecement said...

ಎಷ್ಟು ಚಂದ ಬರದ್ದೀಯಮ್ಮಾ..
ಕಣ್ಣಲ್ಲಿ ನೀರು ಜಿನುಗಿತು... ಭಾವುಕನಾಗಿಬಿಟ್ಟೆ....

ಅಮ್ಮ.. ಅಪ್ಪನೇ ಬೇರೆ..
ಒಡ ಹುಟ್ಟಿದವರೇ ಬೇರೆ...

ಮದುವೆಯಾದ ಮೇಲೆ ಒಡ ಹುಟ್ಟಿದವರು ಬದಲಾಗುತ್ತಾರೆ.. ಇದು ಕಹಿ ಸತ್ಯ..

Srikanth Manjunath said...

ಅಕ್ಕಯ್ಯ.... ಮನಸ್ಸು ತುಂಬಾ ಭಾರವಾಯಿತು. ಆದರೆ ಸಮಯೋಚಿತ ಪ್ರಜ್ಞೆ, ಅರಿಶಿನ ಕುಂಕುಮದ ದಕ್ಷಿಣೆ, ಮಗು ಉಲಿದ ಮುದ್ದಾದ ಮಾತುಗಳು ಭಾರವಾಗಬಹುದಿದ್ದ ಮನವನ್ನು ತಣ್ಣಗೆ ಹಗುರ ಮಾಡಿದ್ದು ಸುಳ್ಳಲ್ಲ. ಹೌದು ಇಂದಿನ ಯಾತ್ರಿಕ ಯುಗದಲ್ಲಿ ಸಂಬಂಧಗಳು ಮೂಲೆ ಗುಂಪಾಗುತ್ತಿರುವುದು ನಿಜ. ತಾನು ಮಾಡಿದ ತಪ್ಪು ತನಗಾದಾಗಲೇ ಅರಿವಾಗುವುದು ಎನ್ನುವ ಮಾತು ನಿಜಕ್ಕೂ ನಿಜವೇ. ಭಾರವಾದ ಕಥಾನಕ ಹಾಗೆಯೇ ನಿರೂಪಣೆ ಸೂಪರ್. ಅಮ್ಮ ಯಾವಗಲು ಅಪ್ಪನಿಗಿಂತ ಭಾವಕ್ಕೆ ಹತ್ತಿರ ಎನ್ನುವುದು ಸೂರ್ಯ ಚಂದ್ರರಷ್ಟೇ ನಿಜ (ಕೆಲವು exceptions ಇರುತ್ತೆ.. )