Tuesday, January 14, 2014

ಸಕ್ಕರೆ ಕೈಗೆ ಸಿಕ್ಕರೆ

ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನೇ ಸಂಕ್ರಾಂತಿ ಎಂದು ಕರೆಯುತ್ತಾರೆ.  ಮಕರ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವೆಂದೂ ಸಹ ಕರೆಯುತ್ತಾರೆ. ಈ ದಿನ ರೈತರು ತಾವು ಬೆಳೆದ ಬೆಳೆಯನ್ನು ಕೊಯ್ಲು ಮಾಡಿ, ಫಸಲು ಶೇಖರಿಸಿ ಆ ದವಸ ಧಾನ್ಯಗಳಿಗೆ ಪೂಜೆ ಮಾಡುವುದು ಒಂದು ವಿಶೇಷ.

ಮತ್ತೊಂದು ವಿಶೇಷವೆಂದರೆ ಎಳ್ಳು, ಹುರಿಗಡಲೆ, ಕಡಲೆಕಾಯಿ ಬೀಜ ಎಲ್ಲವನ್ನು ಬಿಸಿ ಮಾಡಿ ನಂತರ ಕೊಬ್ಬರಿ ಮತ್ತು ಬೆಲ್ಲವನ್ನು  ಸಣ್ಣ ಸಣ್ಣ ಚೂರುಗಳಂತೆ ಕತ್ತರಿಸಿಕೊಂಡು ಬಿಸಿ ಮಾಡಿದ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿಕೊಳ್ಳುತ್ತೇವೆ. ನಂತರ ಸಕ್ಕರೆ ಅಚ್ಚಿನೊಂದಿಗೆ ಎಳ್ಳು-ಬೆಲ್ಲದ ಮಿಶ್ರಣವನ್ನು ಎಲ್ಲರೊಂದಿಗೆ ಹಂಚುತ್ತ "ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತುಗಳನ್ನಾಡಿ" ಎಂದು ಎಲ್ಲರಿಗೂ ಹೇಳಿ ಶುಭಾಶಯ ಕೋರುವುದೇ ನಗರವಾಸಿಗಳ ಸಂಕ್ರಾಂತಿ.

ಸಕ್ಕರೆ ಅಚ್ಚು ಮಾಡಿ ಎಷ್ಟೋ ವರ್ಷಗಳು ಕಳೆದಿದ್ದವು. ಬೆಂಗಳೂರಿನಲ್ಲಿದ್ದಾಗ ಅಮ್ಮನ ಜೊತೆ ಮಾಡುತ್ತಿದ್ದ ಸಕ್ಕರೆ ಅಚ್ಚು ಮಾತ್ರ ನೆನಪು ಈ ನೆನಪನ್ನು ಮರುಕಳಿಸುವಂತೆ ಮಾಡಿದ್ದು ನಮ್ಮ ಸ್ನೇಹಿತೆಯರು.. 



















ಕೆಲವರು ಸ್ನೇಹಿತೆಯರು ಕೂಡಿ ಸಕ್ಕರೆ ಅಚ್ಚು ಮಾಡಿದ್ದೇವೆ ನೋಡಿ. ನಿಮಗೂ ಸಕ್ಕರೆಯಂತಾ ಸಿಹಿಯ ಅಚ್ಚು-ಮೆಚ್ಚುಗಳು ಸದಾ ನಿಮ್ಮದಾಗಲಿ

ಸಕ್ಕರೆ ಅಚ್ಚು ಮಾಡುವ ವಿಧಾನ  :
ಒಂದು ಪಾತ್ರೆಯಲ್ಲಿ ೧ ಕೇ ಜಿ ಸಕ್ಕರೆ ಮತ್ತು  ಸಕ್ಕರೆ ಮುಳುಗುವಷ್ಟು ನೀರನ್ನು ಹಾಕಿ ಕುದಿಸಿಕೊಳ್ಳಬೇಕು. 

ಕುದಿಯುತ್ತಿರುವಂತೆ ಒಂದು ಅಥವಾ ಎರಡು ಸ್ಪೂನ್ ಹಾಲು ಮಿಶ್ರಣ ಮಾಡಿ ಬಿಳಿ ಬಟ್ಟೆಯಲ್ಲಿ ಸೋಸಿಕೊಳ್ಳಬೇಕು.  

ಸೋಸಿದ ಸಕ್ಕರೆ ನೀರನ್ನು ಮತ್ತೊಮ್ಮೆ ಕುದಿಸಿ ನಂತರ ಹಾಲು ಒಂದು ಅಥವಾ ಎರಡು ಸ್ಪೂನಿನಷ್ಟು ಹಾಕಿ ಸೋಸಿಕೊಳ್ಳಿ. ಇದೇ ರೀತಿ ಮತ್ತೊಮ್ಮೆ ಸೋಸುವ ಕ್ರಿಯೆಯನ್ನು ಪುನರಾವರ್ತಿಸಿ. 

ಈ ಸೋಸಿದ ಸಕ್ಕರೆ ನೀರನ್ನು ಸ್ವಲ್ಪ ಸ್ವಲ್ಪವೇ (ಒಂದು ಅಥವಾ ಎರಡು ಸ್ವೌಟು) ಚಿಕ್ಕ ಬಟ್ಟಲಿನಲ್ಲಿ ತೆಗೆದುಕೊಂಡು ಸಣ್ಣ ಉರಿಯಲ್ಲಿ ಒಲೆಯ ಮೇಲೆ ಕದಡುತ್ತಲೇ ಇರಬೇಕು. ಒಲೆಯ ಮೇಲೆ ಕುದಿಯಲು ಇಟ್ಟ ಸಕ್ಕರೆ ಪಾಕವನ್ನು ಸದಾ ಕೈಯಾಡುತ್ತಲೇ ಇರಬೇಕು.  ಸ್ವಲ್ಪ ಸಮಯದ ನಂತರ ಗಟ್ಟಿಯಾಗುತ್ತ ಬರುವ ಪಾಕವನ್ನು ಕೆಳಗಿಟ್ಟು ಚೆನ್ನಾಗಿ ಸೌಟಿನಿಂದ ನಾದುತ್ತಿರಬೇಕು. 

ನಾದಿದ ಸಕ್ಕರೆ ಪಾಕ ಬಿಳಿ ಬಣ್ಣದಲ್ಲಿ ಕಾಣುತ್ತಿದ್ದಂತೆ  ಒಂದು ಸ್ಪೂನ್ ನಿಂಬೆರಸ  ಹಾಕಿ ಮತ್ತೆ ಕೈಯ್ಯಾಡುತ್ತಲಿರಿ. ಆನಂತರ 
ನಮಗೆ ಬೇಕಾದ ವಿನ್ಯಾಸವುಳ್ಳ ಸಕ್ಕರೆ ಅಚ್ಚು(ಮೌಲ್ಡ್)ಗಳಿಗೆ ಅಚ್ಚುಗಳಿಗೆ ಹಾಕಿ ೫-೧೦ ನಿಮಿಷ ಸಕ್ಕರೆ ಗಟ್ಟಿಯಾಗಲು ಬಿಡಿ. ಆನಂತರ ಅಚ್ಚುಗಳನ್ನು ನಿಧಾನವಾಗಿ ತೆಗೆದರೆ ಸಕ್ಕರೆ ಅಚ್ಚು ತಯಾರಾಗಿರುತ್ತದೆ.

ಸೂಚನೆ: ಮರದ ಅಚ್ಚುಗಳನ್ನು ೫-೬ ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಬಿಡಿ ಆನಂತರ ಒಣ ಬಟ್ಟೆಯಿಂದ ಸ್ವಚ್ಚ ಮಾಡಿಕೊಂಡು ಬಳಸಿಕೊಳ್ಳಿ. 


ಸಕ್ಕರೆ ಕೈಗೆ ಸಿಕ್ಕರೆ
ನೀರಲ್ಲಿ ಕದಡಿ
ಬೆಂಕಿ ಬಾಯಿ ಹೊಕ್ಕರೆ
ಅಚ್ಚಿನೊಳಗೆ ಕುಳಿತು
ಚಿತ್ತಾಕಾರದಲಿ ಹೊಳೆದು
ಬಾಯೊಳು ಕರಗಿ ಕರಗಿ
ನೀರಾಗುವಂತೆ ಸವಿಯ 
ಕೊಡುವ ಈ ಸಕ್ಕರೆ 
ಹಿಗ್ಗಿನ ಹಬ್ಬಕೆ ಬಲು ಅಕ್ಕರೆ 


ಪೊಂಗಲ್ ಮಾಡಿ, ಎಳ್ಳು ಬೆಲ್ಲ ಹಂಚಿ, ಅವರೆ,ಗೆಣಸು, ಕಡಲೆಕಾಯಿ, ಕಬ್ಬು ತಿಂದು ಸದಾ ಸಿಹಿಯಾದ ಜೀವನ ನಡೆಸಿ... ಎಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯಗಳು

10 comments:

ಸುಮ said...

ಸಂಕ್ರಾಂತಿಯ ಶುಭಾಶಯಗಳು ...ಸಕ್ಕರೆ ಅಚ್ಚು ಮಾಡುವ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು :)

ಚುಕ್ಕಿಚಿತ್ತಾರ said...

channaagide suguna.. namma amma idannu maaduttiddaranthe.. naanu kalitu kollalilla.. ee sala maaduttene.. happy sankaranti..:)

Swarna said...

Sakttaagi bandide Suguna. beLLage hoLitaa ive...nice...nimaguu Sankraanti ShubhaashayagaLu

sunaath said...

ಸಕ್ಕರೆ ಅಚ್ಚು ತುಂಬ ಸುಂದರವಾಗಿ ಕಾಣುತ್ತಿವೆ. ಸಂಕ್ರಾಂತಿಯ ಶುಭಾಶಯಗಳು.

Unknown said...

ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಸಕಲವನ್ನು ಹಾರೈಸಲಿ ಎಂದು ಆಶಿಸುವೆ

bilimugilu said...

hEy Suguns,
chennagide sakkare acchu :)
recipe saha :)
sakkare acchu maaDida hengeLeyarigella habbada shubhaashayagaLu :)

Guruprasad said...

ಸಂಕ್ರಾಂತಿ ಹಬ್ಬದ ಶುಭಶಯಗಳು .... ನಾನು ನಮ್ಮ ಅಮ್ಮನ ಜೊತೆ ಸೇರಿ ಸಕ್ಕರೆ ಹಚ್ಚು ಮಾಡುವ ಹಳೆ ದಿನಗಳು ನೆನಪಾಯಿತು

balasubramanya said...

ಶುಭ ಸಂಕ್ರಾಂತಿಯ ಸಿಹಿಯ ಸವಿದ ನೆನಪು ಸದಾ ನಿಮ್ಮದಾಗಲಿ ಸಕ್ಕರೆ ಅಚ್ಚು ಮಾಡುವ ಬಾಗೆ ಬರೆಯುತ್ತಾ ಒಂದು ಒಳ್ಳೆಯ ನೆನಪನ್ನು ಹಂಚಿಕೊಂಡಿರಿ , ಧನ್ಯವಾದಗಳು ಶುಭವಾಗಲಿ ನಿಮಗೆ

balasubramanya said...

ಶುಭ ಸಂಕ್ರಾಂತಿಯ ಸಿಹಿಯ ಸವಿದ ನೆನಪು ಸದಾ ನಿಮ್ಮದಾಗಲಿ ಸಕ್ಕರೆ ಅಚ್ಚು ಮಾಡುವ ಬಾಗೆ ಬರೆಯುತ್ತಾ ಒಂದು ಒಳ್ಳೆಯ ನೆನಪನ್ನು ಹಂಚಿಕೊಂಡಿರಿ , ಧನ್ಯವಾದಗಳು ಶುಭವಾಗಲಿ ನಿಮಗೆ

ಶ್ರೀವತ್ಸ ಕಂಚೀಮನೆ. said...

ನಗೆಯ ಸಿಹಿ ಫಲಗಳು ಬದುಕ ಬಳ್ಳವ ತುಂಬುತಿರಲಿ ಸದಾ...
ಬದುಕು ಪೂರ್ತಿ ನಲಿವಿನ ಸುಗ್ಗಿಯಾಗಲಿ...
ಸ್ವಲ್ಪ ತಡವಾಗಿ ಸಂಕ್ರಮಣದ ಸವಿ ಶುಭಾಶಯಗಳು...:)