Wednesday, July 13, 2016

ಮಣ್ಣಿನ ಹಾದಿ ಭಾಗ-೨

http://mrudhumanasu.blogspot.com/2016/06/01.html ಕಥೆಯ ಮೊದಲ ಭಾಗ ಈ ಲಿಂಗ್ ಗೆ ಭೇಟಿ ಕೊಡಿ 

ಸದಾ ಓದಿನಲ್ಲಿ ಮುಂದಿದ್ದ ಶಂಕರನನ್ನು ಕಂಡರೆ ಕಾಲೇಜಿನ ಪ್ರಿನ್ಸಿಪಾಲರು, ಶಿಕ್ಷಕರು ಎಲ್ಲರಿಗೂ ಅದೇನೊ ಒಂದು ರೀತಿ ಪ್ರೀತಿರಾಜ್ಯಮಟ್ಟದ ಚರ್ಚಾ ಸ್ಪರ್ಧೆ, ಕಬ್ಬಡ್ಡಿ, ಅಥ್ಲೆಟಿಕ್ಸ್ ಗಳಲ್ಲೂ ಬಹಳಷ್ಟು ಪ್ರಶಸ್ತಿಗಳ ಜೊತೆ ಸುತ್ತಮುತ್ತಲ ಹಳ್ಳಿ-ನಗರಗಳಲ್ಲಿ ಹೆಸರುವಾಸಿಯಾಗಿದ್ದ. ಇವನ ಸಾಧನೆಯಿಂದ ಕಾಲೇಜಿನಲ್ಲಿ ಮತ್ತಷ್ಟು ಹೆಸರು ಗಳಿಸುವತ್ತ ದಾಪುಗಾಲಿಡುವಂತಾಯಿತು. ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಒಂದು--- ನಮ್ಮ ಕಾಲೇಜಿಗೆ ಮೀಸಲು ಎಂಬ ವಿಶ್ವಾಸದಲ್ಲಿದ್ದರು ಕಾಲೇಜಿನ ಆಡಳಿತವರ್ಗ.

ಇನ್ನೇನು ಪರೀಕ್ಷೆ ನಾಲ್ಕು ದಿನಗಳಿವೆ ಅಪ್ಪನದು ಅದೇ ವರಸೆ, ಅಯ್ಯೋ ಶಂಕ್ರಾ ನೀನು ಮುಂದಕ್ಕೆ ಓದಲೇ ಬೇಕಾ?! ಶಂಕ್ರನಿಗೆ ಗಾಬರಿ, ಆಶ್ಚರ್ಯ ಕಣ್ಣರಳಿಸಿ ಅಪ್ಪನನ್ನೆ ದಿಟ್ಟಿಸುತ್ತಿದ್ದ. ಅಡಿಗೆ ಕೋಣೆಯಿಂದ ಗಂಗಳಗಳು ಸದ್ದು ಮಾಡುತ್ತಿದ್ದವು, ಸೌಟಿನಲ್ಲಿ ತಪ್ಪಲೆಗೆ ಹೊಡೆತ ಸಿಗುತ್ತಿತ್ತು. ಲೇ ಇವಳೇ ಅದ್ಯಾಕೆ ನನ್ನ ಸಿಟ್ಟು ಪಾತ್ರೆ ಮೇಲೆ ತೋರುಸ್ತೀಯಾ, ಬಾ ಇಲ್ಲಿ ನನ್ನ ಮಾತು ವಸಿ ಕೇಳು ಎಂದು ಚಂದ್ರಪ್ಪ  ಏರುದನಿಯಲ್ಲಿ ಹೆಂಡತಿಯನ್ನ ಕರೆಯುತ್ತಿದ್ದ. ಲಕ್ಷ್ಮಮ್ಮನಿಗೊ ಒಲೆಯೊಳಗೆ ಉರಿಯುತ್ತಿದ್ದ ಕಟ್ಟಿಗೆಗಳ ಉರಿ  ಹಚ್ಚಿದಂತಾಗುತ್ತಿತ್ತು ಮನುಷ್ಯನಿಗೆ  ಬುದ್ಧಿ ಬರೋಲ್ಲ, ಎಷ್ಟು ಜನರ ಕೈಲಿ ಹೇಳ್ಸಿದ್ದಾಯ್ತು, ಬೇಡ್ಕೊಂಡಿದ್ದಾಯ್ತು ಇನ್ನು ಏನು ಉಳಿದಿದೆ ಅಂತಾ ಮಾತಾಡಬೇಕೋ ನಿಮ್ಮಹತ್ರ ಎಂದು ಗೊಣಗುತ್ತ ಆಚೆ ಬಂದಳು.

ನೋಡೇ ಈಗ ಇವನು ಓದೋದು ಏನು ಬೇಡ ಈಗೆಂಗು ಪಿಯುಸಿ ಮುಗಿಯುತ್ತೆ ಆಮೇಲೆ ಒಂದು ಬೋರು ಹಾಕ್ಸೋಣ, ಸ್ವಲ್ಪ ಕಬ್ಬು ಬೆಳೆಸೋಣ, ಮತ್ತೆ ಒಂದು ಆಲೆಮನೆ ಮಾಡಿ ಸುತ್ತ ಮುತ್ತ ಊರುಗಳಲ್ಲಿ ಕಬ್ಬು ಬೆಳೆಯೋರ ಹತ್ರ ಕಬ್ಬು ತರ್ಸಿ ಬೆಲ್ಲ ಮಾಡಿ, ಬೆಂಗಳೂರು ಮಾರ್ಕೆಟ್ ಗೆ ಹಾಕೋಣ, ಆಲೆಮನೆ ಮಾಡಿದ್ರೆ ತುಂಬಾ ಕೆಲ್ಸ ಇರುತ್ತೆ. ವ್ಯವಹಾರ ಎಲ್ಲಾ ನೋಡ್ಕೊಬೇಕು. ಅದೆ ರಾಮನಗರ ಹತ್ರದಿಂದ ಬರ್ತಿದ್ದನಲ್ಲಾ ಚನ್ನಿಗಪ್ಪ ಅವನು ಆಲೆಮನೆ ಮಾಡಿ ಏನು ವ್ಯವಹಾರ ಮಾಡ್ತಿದಾನೆ ಗೊತ್ತಾ? ೫೦ ಜನ ಆಳುಕಾಳು ಇಟ್ಕೊಂಡು ತಿಂಗಳಿಗೆ ಅದೆಷ್ಟೋ ಕ್ವಿಂಟಾಲ್ ಬೆಲ್ಲನ ಮಾರ್ಕೆಟ್ಗೆ ಹಾಕ್ತಾ ಇದ್ದಾನಂತೆ. ಮತ್ತೆ ಮಂಡ್ಯ ಸಕ್ಕರ ಫ್ಯಾಕ್ಟ್ರಿಯವರು ಇವನಿಗೆ ಏನೋ ಕೆಲಸ ಕೊಟ್ಟಿದ್ದಾರೆ. ನನ್ಗೂ ಕೊಡುಸ್ತೀನಿ ಅಂತಾ ಹೇಳಿದಾ. ಒಳ್ಳೇ ಆದಾಯವಿದೆಯಂತೆ ಈಗೀಗ ಸಿಟಿ ಜನ ಸಕ್ಕರೆ ಬಿಟ್ಟು ಬೆಲ್ಲ ಬಳಸೋಕೆ ಶುರು ಮಾಡಿದ್ದಾರಂತೆ. ಪ್ಯಾಟೆ ಜನ ಹಳ್ಳಿ ಜನ ಆಗೋಕ್ಕೆ ಹೊರಟಿದ್ದಾರೆ ನಮ್ಗೂ ಅನುಕೂಲ ಇದೆ ಬಿಡು. ಸ್ವಲ್ಪ ಯೋಚಿಸೆ, ಮುಖ ಯಾಕೆ ಹಂಗೆ ಮಾಡ್ಕೊಂಡಿದ್ದೀಯಾ, ಈಗಲೇ  ವ್ಯವಸಾಯದಲ್ಲಿ ಭದ್ರವಾಗಿ ನೆಲೆನಿಂತ್ರೆ ಮುಂದೆ ಏನು ಕಷ್ಟಬರೋಲ್ವೆ, ನನ್ನ ಮಾತು ಇಬ್ರು ಕೇಳ್ರಿ  ಅಮ್ಮ ಮಗಾ ಆಯ್ತಾ ಏನು? ಕೇಳಿಸ್ಕೊಂಡ್ರಾ ಇಲ್ವ ಮೂಗ್ ಬಸವಣ್ಣನ ತರ ಕೂತ್ರೆ ನಾನೇನು ತಿಳ್ಕೊಬೇಕು.

ಆಯ್ತು ರೀ ನಿಮ್ಗೆ ಏನು ಅನ್ನಿಸುತ್ತೋ ಹಂಗೆ ಮಾಡಿ, ಆಲೆಮನೆ ಮಾಡಕ್ಕೆಲ್ಲ ದುಡ್ಡು-ಗಿಡ್ಡುಸಾಮಾನು-ಸರಂಜಾಮು ಎಲ್ಲಾ ತಯಾರು ಮಾಡ್ಕೊಳ್ಳಿ, ಅಷ್ಟ್ರಲ್ಲಿ ಇವನ ಪರೀಕ್ಷೆ ಮುಗಿಸ್ಕೊಳ್ಳಿ ಆಯ್ತಾ ಎಂದು ಮಗನ ಕಡೆ ತಿರುಗಿ ನಕ್ಕಳು. ಅಯ್ಯೋ ದೇವನೇ ಇಷ್ಟು ದಿನ ಅಮ್ಮ ನನ್ನ ಪರ ಇದ್ದೋಳು? ಇದೇನು ಬೆಲ್ಲದ ಸಿಹಿ ಆಸೆಗೆ ನನ್ನ ಓದನ್ನೇ  ನಿಲ್ಸೊ ಹಂಗೆ ಕಾಣ್ತಿದೆಯಲ್ಲಪ್ಪಾ....

ಈಗ ನೋಡು ನೀನು ನನ್ನ ದಾರಿಗೆ ಬಂದಿದ್ದೀಯಾ, ಹಿಂಗೆ ದೇವ್ರು ನಿನ್ಗೆ ಒಳ್ಳೆ ಬುದ್ದಿ ಕೊಡ್ಲಿಹೆಗಲ ಮೇಲಿದ್ದ ಟವಲ್ ಕೊಡವಿಕೊಂಡು ಹಿತ್ತಲಕಡೆ ಹೊರಟ. ಮಗ ಕಣ್ಣು ಕಣ್ಣು ಬಿಡುತ್ತ, ಅಮ್ಮಾ ನಿಂಗೆ ಏನಾಗಿದೆ, ಅದ್ಯಾಕೆ ಅಪ್ಪನ ಪರ ಮಾತಾಡಿದೆ, ಇಷ್ಟು ದಿನ ನಾ ಓದ್ಲಿ ಅಂತ ಹೇಳಿದ್ದು ಸುಳ್ಳಾ ಹಾಗಿದ್ರೆ, ಕಬ್ಬು, ಬೆಲ್ಲ ಸಿಹಿ ಇರಬಹುದು ಆದ್ರೆ ನನ್ನ ಜೀವನ ಸಿಹಿ ಇರುತ್ತಾ ಯೋಚ್ಸಮ್ಮಾ.
ಶಂಕ್ರು ಸುಮ್ನಿರು ನೀನು, ನನ್ಗು ತಲೆ ಇದೆ ನಿಮ್ಮ ಅಪ್ಪ ಕುಣಿತನೆ ಅಂತ ನಾನು ಕುಣಿಯೋಕೆ ಆಗುತ್ತಾ? ಸುಮ್ನೆ ಬೀಸೊ ದೊಣ್ಣೆ ತಪ್ಪಿಸ್ಕೊಳ್ಳೋಕೆ ಹಾಗಂದೆ. ನೀನು ಪರೀಕ್ಷೆ ಚೆನ್ನಾಗಿ ಮಾಡು. ಪರೀಕ್ಷೆ ಪಾಸು-ಪೇಲು ಹೇಳೊ ಮುಂಚೇನೆ ನನ್ನ ಅಣ್ಣನ ಮನೆ, ಅದೇ ಬೆಂಗಳೂರಗೆ ಇಲ್ವಾ ನಿಮ್ಮ ಮಾವನ ಹತ್ರ ಕರ್ಕೊಂಡು ಹೋಗಿ ಬಿಟ್ಟು ಬಿಡ್ತೀನಿ. ಆಮೇಲೆ ಅಣ್ಣಾನೇ ನಿಮ್ಮ ಅಪ್ಪನಿಗೆ ದಬಾಯ್ಸತಾನೆ, ಅವನು ಜೋರು ಮಾಡಿದ್ರೆ ನಿಮ್ಮ ಅಪ್ಪ ಏನು ಮಾತಾಡಕಿಲ್ಲ. ಅರ್ಥ ಆಯ್ತಾ ಈಗ ಓದ್ಕೊ ಚೆನ್ನಾಗಿ.

ಅಮ್ಮ ಅವತ್ತೆಲ್ಲಾ ಪೋಸ್ಟ್ ಮ್ಯಾನ್ ಅಷ್ಟು ಹೇಳಿ ಒಪ್ಪಿಸಿದ್ರೂ ಈಗ ಬದಲಾಗಿಲ್ವಲ್ಲ ಅಪ್ಪಾ, ಇನ್ನು ಮಾವನ ಮಾತು ಕೇಳ್ತಾರೆ ಅಂತಿಯಾ, ಹೂಂ ಮತ್ತೆ ಕೇಳ್ಲೇ ಬೇಕು ನಿಮ್ಮ ಅಪ್ಪನಿಗೆ ಸ್ವಲ್ಪ ಬಾಮೈದುನರ ಕಂಡ್ರೆ ಭಯ ಅಯ್ತೆ, ವರದಕ್ಷಿಣೆ ಅಂತ ಗಾಡಿ, ಎರಡು ಜೋಡಿ ಎತ್ತು, ಅದೆ ಬಾವಿ ಪಕ್ಕದ ಎಕರೆ ಜಮೀನು ಇದೆಯಲ್ಲ ಅದು ನಮ್ಮ ಅಪ್ಪನ ಮನೇದು... ರವಷ್ಟು ಬಾಯಿ ಜೋರ್ ಮಾಡಿದ್ರೆ ನಿಮ್ಮ ಅಪ್ಪ ಗಪ್ಚುಪ್ ಅಂತಾನೆ ಸುಮ್ನಿರು. ನಿನ್ನ ಮಾವಂದಿರೇನು ಕಮ್ಮಿ ಇಲ್ಲ ಇಂತ ವಿಷಯದಲ್ಲಿ. ಅಮ್ಮಾ, ಹಾಗಿದ್ರೇ ಜೋಡಿ ಎತ್ತು-ಗಾಡಿ ಕೆಲಸ ಮಾಡುತ್ತೆ ಅಂತೀಯಾ ಎಂದು ಜೋರು ನಗುತ್ತಿದ್ದವನಿಗೆ ಜೊತೆಯಾದಳು ಲಕ್ಮಮ್ಮ.

ಏನ್ರೊ ಅದು, ಇಷ್ಟೊಂದು ಖುಷಿ ಎಂದು ಚಂದ್ರಪ್ಪ ಒಳಗೆ ಬರ್ತಿದ್ದಂಗೆ, ಲಕ್ಮಮ್ಮ ಏನಿಲ್ಲಾ ರೀ ಜೋಡಿ ಎತ್ತು-ಗಾಡಿ ಆಲೆಮನೆಗೆ ಬಳಸಬಹುದಲ್ವಾ ಎಂದು ಕೇಳ್ತಿದ್ದಾ ಅದಕ್ಕೆ ನಗ ಬಂತು. ಸರಿ ಸರಿ ಹೆಂಗೋ ಮಗನ್ನೂ ಒಪ್ಪಿಸಿದ್ದಂಗೆ ಕಾಣ್ತದೆ... ಒಳ್ಳೆದಾಯ್ತದೆ ಬಿಡು ಎಂದು ಆಚೆ ಹೊರಟ ಚಂದ್ರಪ್ಪನ ಬೆನ್ನ ಹಿಂದೆ ಕಿಸಿಕಿಸಿ ನಗು ತೇಲಿತು.

ಅಮ್ಮ ಮಗನ ಮಾತು ಕೇಳಿಸಿ ಕೊಳ್ಳುತ್ತಿದ್ದ ಚಿಕ್ಕಮಗ ಲೋಕೇಶ, ಓಹೋ ಅಮ್ಮಾ ನೀವಿಬ್ರು ಏನು ಮಾತಾಡಿದ್ರಿ ಅಂತಾ ಅಪ್ಪಂಗೆ ಹೇಳ್ತೀನಿ ಇರು, ಅಪ್ಪನಿಗೆ ಕಷ್ಟ ಆಗುತ್ತೆ ಅಂತಾ ತಾನೆ ಅಣ್ಣನ ಸಹಾಯ ಕೇಳಿದ್ದು. ನೀನು ನೋಡಿದ್ರೆ ಅಣ್ಣನ ಪರನಾ?

ಲೋಕಿ ಸುಮ್ನೆ ತಮಾಷೆಗೆ ಹೇಳಿದ್ನಪ್ಪ ನೀನು ಇನ್ನೊಂದು ರಾದ್ಧಾಂತ ಮಾಡ್ಬೇಡ ತಂದೆ, ಹೋಗು ಆಚೆ ಆಟಕ್ಕೆ ಪಕ್ಕದ್ಮನೆ ನಾಗೇಂದ್ರ  ಬಂದವನೇ ಹೋಗು ಹೋಗು... ಎಂದು ಚಿಕ್ಕ ಮಗನನ್ನು ಆಚೆ ಕಳುಹಿಸಿದಳು ಲಕ್ಷ್ಮಮ್ಮ. ನಿಮ್ಮ ಅಪ್ಪನಿಗೆ ತಕ್ಕ ಮಗ ಇವ್ನು ನೋಡು, ಇವನನ್ನ ಅವರಪ್ಪ ರೈತನನ್ನಾಗೇ ಮಾಡ್ಲಿ ಬಿಡು, ಓದು ನೋಡಿದ್ರೇ ಅಷ್ಟಕಷ್ಟೇ, ಒಂದು ಅರ್ಧಗಂಟೆನೂ ಪುಸ್ತಕದ ಮುಂದೆ ಕೂತಿದ್ದು ನೋಡಿಲ್ಲ. ಇರ್ಲಿ ನೀನು ಓದ್ಕೋಪ್ಪ ಪರೀಕ್ಷೆ ಚೆನ್ನಾಗಿ ಮಾಡು ನಿನ್ನ ಅಪ್ಪನ್ನ ಬಿಡ್ತೀನೇ  ಹೊರ್ತು, ನಿನ್ನ ಓದಿನಿಂದ ದೂರ ಇರೋಕ್ಕೆ ಬಿಡೊಲ್ಲ. ಅದೇನಾಗುತ್ತೋ ಶತಾಯ ಗತಾಯ ನೋಡೆ ಬಿಡ್ತೀನಿ.... ಓದ್ಕೊ ಶಂಕ್ರು ನೀನು ಎಂದು ಹೇಳಿ ಲಕ್ಷ್ಮಮ್ಮ ಅಡಿಗೆ ಕೋಣೆಗೆ ಹೋದಳು.

ಇನ್ನು ಗಂಡನ ಮೇಲೆ ಕೋಪ ಕಡಿಮೆಯಾಗಿರಲಿಲ್ಲ... ಒಲೆಯ ಮೇಲೆ ಕುದಿಯುತ್ತಿರುವ ನೀರು ಮನಸಲ್ಲೂ ಕುದಿಯುತ್ತಿತ್ತು. ನಮ್ಮ ಅಪ್ಪ ಮದುವೆ ಮಾಡುವಾಗ್ಲೇ ಯಾರಾದ್ರು ಸ್ಕೂಲ್ ಮೇಸ್ಟ್ರಿಗೋ, ಗುಮಾಸ್ತನಿಗೋ ಕೊಟ್ಟಿದ್ರೆ ಇಷ್ಟೆಲ್ಲಾ ಪಾಡಿತ್ತಾ..? ಊರಿಗೆ ಬಂದಾಗಿಂದ ಹೊಲ, ಗದ್ದೆ, ಕಳೆ, ಕೆಸರು ಅಂತಾ ಕೆಲಸ ಮಾಡಿದ್ದೇ ಆಯ್ತು ಅದರಿಂದ ಬಂದಿರೋ ಆದಾಯ ಅಷ್ಟ್ರಲ್ಲೇ ಐತೆ , ಕತ್ತಿಗೊಂದು ಚಿನ್ನದ ಸರ ಮಾಡ್ಸಾಕಿಲ್ಲ ಇದ್ದಿದ್ದನ್ನು ಅಡ ಇಟ್ಕೊಂಡು ನೀಲ್ಗಿರಿ, ಸರ್ವೆ ಸಸಿ ಹಾಕುಸ್ತೀನಿ ಅಂತ ಹೇಳಿ ಮಾರ್ಕೊಂಡ್ರು. ನಾನು ಏಳನೇ ಕ್ಲಾಸ್ ಓದಿದ್ದೇ ಆಗ ಅದೇ ದೊಡ್ಡ ಓದು, ಮುಂದಕ್ಕೆ ಇನ್ನೂ ಓದಿದ್ರೇ ಟೀಚರಾಗುತ್ತಿದ್ದ್ನೇನೋ... ಈಗ್ಲಾದ್ರೂ ಮಗನ್ನ ಓದ್ಸೋಣ ಅಂದ್ರೆ ಅದಕ್ಕೂ ಏನೇನೊ ವಿಘ್ನ
ಪರೀಕ್ಷೆ ಇನ್ನೇನು ಎರಡು ದಿನ, ಸರಿ ರಾತ್ರಿ ಮಗ ಓದುತ್ತಿದ್ದಾನೆ ಅಮ್ಮಾ ಬಿಸಿ ಬಿಸಿ ಹಾಲು ಕಾಯಿಸಿ ಮಗನಿಗೆ ಕೊಡುತ್ತಿದ್ದಂತೆ ಅಪ್ಪನದು ಅದೇ ಮಾತು ಜಾಸ್ತಿ ಯಾಕೆ ತೊಂದ್ರೆ ಮಗ, ಸುಮ್ನೆ ಎಷ್ಟಾಗುತ್ತೋ ಅಷ್ಟು ಬರ್ದು ಬಾ, ಹೆಂಗಿದ್ರು ವ್ಯವಸಾಯ ಮಾಡೋನು ಕಷ್ಟ ಪಟ್ಟು ಓದೋಂತ್ತದ್ದೇನು ಆಗಿಲ್ಲ.
ಅಮ್ಮನದು ಅದೇ ಅಯ್ಯೋ ಅವೆಲ್ಲ ಕಿವಿಮೇಲೆ ಹಾಕ್ಕೋ ಬೇಡ ಮೊದಲು ಓದು, ಮುಂದಿದೆ ಮಾರಿ ಹಬ್ಬ ನಿಮ್ಮ ಅಪ್ಪನಿಗೆ ಎಂದು ಕೋಪದಲ್ಲೆ ಒಳ ನಡೆದಳು.

ಪರೀಕ್ಷೆ  ಬರೆಯಲು ಕಿ.ಮೀ ದೂರದ ಊರಿಗೆ ಹೋಗಬೇಕಿತ್ತು, ಅಪ್ಪ ಸೈಕಲ್ ನಲ್ಲಿ ಕರೆದುಕೊಂಡು ಹೋಗು ಎಂದರೆ ಮತ್ತೆ ನೂರೆಂಟು ಮಾತನಾಡಬಹುದು ಎಂದು ಶಂಕ್ರ ಸದ್ದು ಬಿಡಲಿಲ್ಲ, ನಮ್ಮ ಸ್ಕೂಲ್ ಹೆಡ್ ಮಾಸ್ಟರ್ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಬೆಳಿಗ್ಗೆ ಗಂಟೆಗೆ ಹೋದ್ರೆ ಆಯ್ತು ಎಂದು ಹೇಳಿ ಬೆಳ್ಳಂಬೆಳಗ್ಗೆ ಎದ್ದು ಪರೀಕ್ಷೆ ಬರೆಯಲು ೭ಕಿಮೀ ನಡೆದುಕೊಂಡೇ ಹೊರಟ. ಮೊದಲ ಎರಡು ದಿನಗಳು ನಡೆದುಕೊಂಡು ಹೋಗಿದ್ದು ಶಾಲೆಯ ಮಾಸ್ತರರಿಗೆ ಹೇಗೊ ಗೊತ್ತಾಗಿ ಹೋಯಿತು. ಶಂಕ್ರನ ಅಪ್ಪನನ್ನು ಬರಲು ಹೇಳು ಎಂದು ಶಾಲೆಯ ಪೀವನ್ ಗೆ ಹೇಳಿ ಕಳುಹಿಸಿದ.

ಬನ್ನಿ ಚಂದ್ರಪ್ಪನವರೇ, ಏನ್ ಸಮಾಚಾರ ಹೇಗಿದ್ದೀರಿ..? ಎಂದು ಮಾಸ್ತರರು ಬರುತ್ತಲಿದ್ದ ಚಂದ್ರಪ್ಪನವರನ್ನು ಮಾತಿಗೆ ಎಳೆದರು, ಏನಿಲ್ಲ ಸರ್ ಏನ್ ವಿಷ್ಯ ಬರೇಳಿದ್ರಂತೆ, ಏನಿಲ್ಲ ಚಂದ್ರಪ್ಪ, ಮಗ ಪರೀಕ್ಷೆ ಬರೆಯಕ್ಕೆ ೭ಕಿಮೀ ನಡ್ಕೊಂಡು ಹೋಗ್ತಾವ್ನೆ, ಸ್ವಲ್ಪನಾದ್ರೂ ಬೇಜಾರಗೋಲ್ವ ನಿಮ್ಗೆ, ಪ್ರಪಂಚದಲ್ಲಿ ಎಲ್ಲಾ ತಂದೆ ತಾಯಿ ನನ್ನ ಮಕ್ಕಳು ಚೆನ್ನಾಗಿ ಓದಲಿ, ಒಳ್ಳೆ ಕೆಲಸ ಗಿಟ್ಟಿಸಲಿ ಅಂತ ಅಸೆ ಪಡ್ತಾರೆ ನೀವು ನೋಡಿದ್ರೆ ಮಗ ಓದದೇ ಇದ್ರೆ ಸಾಕು ಅನ್ನೊ ಹಾಗೆ ಇದ್ದೀರಲ್ಲ. ಮಕ್ಕಳು ಓದಿದರೆ ಕೆಲಸಕ್ಕೆ ಸೇರಬಹುದು ಜೊತೆಗೆ ವ್ಯವಸಾಯ ಕೂಡ ಮಾಡಬಹುದು, ಆದರೆ ಓದದೇ ಇದ್ದರೆ ವ್ಯವಸಾಯ ಒಂದೇ ಮಾಡೋಕ್ಕೆ ಆಗೋದು. ಅದರಲ್ಲೂ ಮಳೆ, ಬೆಳೆ ಕೈಕೊಟ್ಟರೆ ಜೀವನ ಹೇಳತೀರದ ಮಟ್ಟಕ್ಕೆ ಮುಟ್ಟುತ್ತದೆ. ಮಗ ಏನು ಓದುತ್ತಾನೋ ಓದಲಿ, ರಜಾದಿನಗಳಲ್ಲಿ ನಿಮ್ಮ ತೋಟ, ಗದ್ದೆ, ಹೊಲದ ಕೆಲಸಗಳನ್ನೂ ಮಾಡುವಂತೆ  ಪ್ರೇರೇಪಿಸಿ. ನೀವು ಅವನಿಗಾದರೆ ನಿಮಗೂ ಅವನಾಗುತ್ತಾನೆ. ಸುಮ್ಮನೆ ಈಗ ಮಾಡುವ ತಪ್ಪು ನಿರ್ಧಾರದಿಂದ ಅವನ ಜೀವನ ಹಾಳು ಮಾಡಬೇಡಿ.

"ನೀವು ಅವನಿಗಾದರೆ ನಿಮಗೂ ಅವನಾಗುತ್ತಾನೆ" ಯಾಕೋ ಮೇಸ್ಟ್ರ ಮಾತು ತಟ್ಟನೆ ಮನಸ್ಸಿಗೆ ನಾಟಿತು ಅನ್ನಿಸುತ್ತೆ ಏನೋ ಚಡಪಡಿಸುತ್ತಾ ಹಂಗಲ್ಲಾ ಮೇಷ್ಟ್ರೇ ಭೂಮ್ ತಾಯಿ ಯಾವತ್ತು ಮೋಸ ಮಾಡಕಿಲ್ಲ ತಿಳ್ಕಳಿ. ನಾನು ನನ್ನ ಜಮೀನು ನೋಡಿಕೊಳ್ಳೋಕೆ ಅಂತಾನೇ ಅವನ ಓದು ಸಾಕು ಅನ್ನೋದು ಎಂದು ಹೇಳುತ್ತಿದ್ದಂತೆ, ಮೇಷ್ಟ್ರಿಗೆ ಕೋಪ ಅದೆಲ್ಲಿತ್ತೋ ಎದ್ದೇಳ್ರಿ ನಿಮ್ಗೆ ಮಕ್ಕಳನ್ನ ಸಾಕೋಕೆ ಆಗದಿದ್ರೆ ನಮ್ಗೆ ಕೊಟ್ಟುಬಿಡ್ರಿ, ಓದೊ ಮಕ್ಕಳನ್ನ ಹಿಂಗೆಲ್ಲಾ ಹದ್ಗೆಡುಸ್ತೀರಾ? ಛೇ ನೀನೊಬ್ಬ ತಂದೆನಾ? ನಿನ್ನ ಚಿಕ್ಕಮಗ ಇದ್ದಾನಲ್ಲ ಎದೆ ಸೀಳಿದ್ರೂ ಒಂದು ಅಕ್ಷರ ಬರಲ್ಲ, ಅವನ್ನ ಹೊಲ ಗದ್ದೆ ಕಳೆ ಅಂತ ಮನೆನಲ್ಲೇ ಇರ್ಲಿ ಅವ್ನು ಸ್ಕೂಲ್ಗೆ ಬರೋದೇ ಬೇಡ. ಹೋಗ್ರಿ ಸಾಕು ನಾನೇ ಹುಡುಗನನ್ನ ಸೈಕಲ್ಲಿನಲ್ಲಿ ಪರೀಕ್ಷೆ ಬರೆಯೋಕೆ ಕರ್ಕೊಂಡು ಹೋಗ್ತೀನಿ ಎಂದು ತಟ್ಟನೆ ಮೇಷ್ಟ್ರು ಹೊರ ನಡೆದರು.

ಮೇಷ್ಟ್ರನ್ನು ಹಿಂಬಾಲಿಸುತ್ತಾ ಹೋದ ಚಂದ್ರಪ್ಪ ಕ್ಷಮ್ಸಿ ಸಾಮಿ ನಮ್ಮ ಶಂಕ್ರನ್ನಾ ನಾಳೆಯಿಂದ ನಾನೆ ಸೈಕಲ್ ನಲ್ಲಿ ಪರೀಕ್ಷೆ ಬರ್ಸೋಕ್ಕೆ ಕರ್ಕೊಂಡು ಹೋಗ್ತೀನಿ ಎಂದು ಹೇಳಿ ಚಂದ್ರಪ್ಪ ತಲೆ ತಗ್ಗಿಸಿ ಮನಸಲ್ಲೇ ಗುಣಾಕಾರ ಭಾಗಾಕಾರ ಹಾಕುತ್ತ ಸಾಗಿದ.
ಮನೆ ಹತ್ತಿರ ಬರುತ್ತಿದ್ದಂತೆ ಶಂಕ್ರ ಪರೀಕ್ಷೆಗೆ ಹೋಗವ್ನಾ ಎಷ್ಟೊತ್ತಿಗೆ ಬಿಡೋದು ಪರೀಕ್ಷೆ ಎಂದು ಹೆಂಡತಿಯ ಹತ್ತಿರ ಕೇಳಿದವ ಮುಂಭಾಗದಲ್ಲಿ ನಿಲ್ಲಿಸಿದ್ದ ಸೈಕಲ್ ತೆಗೆದುಕೊಂಡು ಹೊರಟೇ ಬಿಟ್ಟನು. ಅಯ್ಯೋ ಇವತ್ತೇನಾಯ್ತು ಇವರಿಗೆ ಮಂಕ್ ಬಡ್ದಂಗಿದಾರೆ, ಏನೋ ಶಂಕ್ರನ ಬೇರೆ ಕೇಳುತ್ತಿದ್ದರು ದೇವ್ರೇ ಏನ್ ಕಾದಿದೆಯೋ ತಂದೆ ಇನ್ನ.

ಚಂದ್ರಪ್ಪನಿಗೆ ಮನದೊಳಗೆ ಏನೋ ತುಮುಲ ನನ್ನ ಸ್ವಾರ್ಥಕ್ಕೆ ಮಗನನ್ನು ಬಳಸ್ಕೋತಾ ಇದ್ದೀನಾ? ಚಿಕ್ಕೋನು ನೋಡಿದ್ರೆ ಎದೆ ಸೀಳಿದ್ರು ಅಕ್ಷರ ಬರೋಲ್ಲ ಅಂತಾರೆ. ನಾನು ಇಷ್ಟು ದಿನ ಶಂಕ್ರ ವ್ಯವಸಾಯ ಮಾಡ್ಲಿ, ಚಿಕ್ಕವನ್ನ ಓದಿಸೋಣ ಅನ್ನೊ ಕಲ್ಪನೆಯಲ್ಲಿದ್ದೆ. ಚಿಕ್ಕಮಗ ಅನ್ನೊ ವ್ಯಾಮೋಹವಾ? ನಾ ಎಲ್ಲೋ ತಪ್ಪು ಮಾಡುತ್ತಿದ್ದೀನಿ ಅನ್ಸತ್ತೆ. ಈಗ ಇವನ ಓದು ನಾನೇ ನಿಲ್ಲಿಸಿ. ಚಿಕ್ಕೋನು ತಾನೇ ಓದು ನಿಲ್ಲಿಸಿದರೆ ಗತಿ ಏನು. ಬೇಡ ನನ್ನ ಮನಸ್ಸು ಸ್ಥಿರವಾಗಿರಲಿ ಓದುವ ಮಗನನ್ನ ಓದಿಸೋಣ. ಚಿಕ್ಕೋನು ಓದಿದರೆ ಓದಲಿ ಇಲ್ಲವೇ ಇರಲಿ. ಹೀಗೆ ಮನಸಲ್ಲೇ ಮಾತನಾಡುತ್ತ ಬರುತ್ತಿದ್ದಂತೆ ಅಲ್ಲೆ ಕಾಲುದಾರಿಯಲ್ಲಿ ಮಗ ಶಂಕ್ರ ನಡೆದುಕೊಂಡು ಬರ್ತಿದ್ದಾನೆ. ಅಪ್ಪಾ ಎಂದು ಜೋರು ಕೂಗಿದಾಗಲೇ ಚಂದ್ರಪ್ಪ ವಾಸ್ತವದತ್ತ ಬಂದಿದ್ದು.

ಎಲ್ಲಿಗಪ್ಪಾ ಹೋಗ್ತಿದ್ದೀಯಾ? ಏನು ಇಲ್ಲ ಕಣೋ ಶಂಕ್ರ ನಿನ್ನನ್ನೆ ಕರ್ಕೊಂಡು ಹೋಗೋಕೆ ಬಂದೆ, ಅಲ್ಲ ನೀನು ಹೇಳೋದಲ್ವೇನೊ ದಿನ ಇಷ್ಟು ದೂರ ಆಗುತ್ತಪ್ಪ, ಕರ್ಕೊಂಡು ಹೋಗು ಅಂತ ಒಂದು ಮಾತು ಹೇಳ್ಬಾರ್ದಿತ್ತಾ. ಅಯ್ಯೋ ಅಪ್ಪ ನೀನು ಹೊಲದ ಹತ್ರ ಇರ್ತೀಯಾ ನಾನು ಹೊರಡೊ ಟೈಂಗೆಲ್ಲಾ ಎಲ್ಲಿಂದ ಕೇಳಲಿ ಹೇಳು. ಸರಿ ಬಾ ಕೂತ್ಕೊ ಇನ್ನೆಷ್ಟು ದಿನ ಅಯ್ತೆ ಪರೀಕ್ಷೆ ಹೇಳು ನಾನು ದಿನ ಬಿಟ್ಟು ಕರ್ಕೊಂಡು ಬರ್ತೀನಿ. ನೀನು ಚೆನ್ನಾಗಿ ಓದು ಮಗ, ಒಳ್ಳೆ ಹೆಸರು ತಗೊಂಡು ಬಾ ಆಯ್ತಾ. ಹಂಗೆ ಒಂದು ವಿಷ್ಯ ಕಣೋ ನನ್ನ ಜಮೀನು ವಸಿ ನೋಡ್ಕೊಂತಾ ಇರ್ತೀಯಾ. ಮುಂದೆ ನಿನ್ನ ತಮ್ಮ ಬೇಸಾಯ ಮಾಡ್ತಾನೋ ಇಲ್ವೋ ಗೊತ್ತಿಲ್ಲ ನೀನು ಏನೇ ಆದ್ರು ಭೂಮಿತಾಯಿನಾ ಮರಿಬೇಡ. ಇರ್ಲಿ ನಮ್ಗೆ ಕಷ್ಟಕಾಲದಲ್ಲಿ ಕೆಲಸಕ್ಕೆ ಬಂದಿದೆ. ಬದುಕು ಸಾಗಿಸೋ ಹಾಗೆ ಮಾಡಿದೆ ಆಯ್ತಾ.

ಅಪ್ಪನ ಬದಲಾವಣೆ ಹೇಗಾಯಿತೋ ಏನೊ ಒಂದು ಅರ್ಥೈಸಿಕೊಳ್ಳಲಾಗದೆ ಅಪ್ಪ ಹೇಳಿದ ಮಾತಿಗೆಲ್ಲ ತಲೆದೂಗಿದ. ರಸ್ತೆಯುದ್ದಕ್ಕೂ ಅಪ್ಪನ ಹಿತವಚನ ಕೇಳಿದ್ದೇ ಆಯ್ತು, ಒಂದು ಕಡೆ ಸಂತೋಷ ಅಪ್ಪನ ಮಾತಿನಲ್ಲಿ ಬದಲಾವಣೆ ಇದೆ ನನ್ನ ಓದು ಮುಂದುವರಿಸಿದ್ರೆ ಮುಂದೆ ನನಗೂ ಅನುಕೂಲ, ಅಪ್ಪನಿಗೂ ಸಹಾಯ ಮಾಡೋಣ ಎಂದುಕೊಂಡು ಖುಷಿಯಲ್ಲಿ ಮನೆಗೆ ಬಂದವನು ಅಮ್ಮಾ ಇವತ್ತೇನೊ ಹಬ್ಬವಿದ್ದಂತಿದೆ ಗೊತ್ತಾ??? ಎಂದು ಜೋರು ಕಿರುಚುತಿದ್ದ.

ಮುಂದುವರಿಯುವುದು .........

2 comments:

sunaath said...

ಕುತೂಹಲವನ್ನು ಹೆಚ್ಚಿಸುತ್ತಾ ಇದ್ದೀರಾ! ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.

Guruprasad said...

ಚೆನ್ನಾಗಿ ಮೂಡಿ ಬರ್ತಾ ಇದೆ... ಮುಂದಿನ ಭಾಗಕ್ಕಾಗಿ waiting....