Thursday, August 11, 2016

ಮಣ್ಣಿನ ಹಾದಿ - 04


ಮಣ್ಣಿನ ಹಾದಿ - 01

ಮಣ್ಣಿನ ಹಾದಿ - 02

ಮಣ್ಣಿನ ಹಾದಿ - 03
 ಮಣ್ಣಿನ ಹಾದಿ
ಮುಂದುವರಿದ ಕಥೆ ಭಾಗ - 04
ಇಂಜಿನಿಯರಿಂಗ್ ನಂತರ ಮುಂದುವರಿದ ವಿದ್ಯಾಭ್ಯಾಸ ನೆದರ್ಲಾಂಡಿನಲ್ಲಿ, ಸುಧೀರ್ಘ ಸಂಶೋಧನೆ, ತಲ್ಲೀನತೆ, ಕೃಷಿಯ ಬದುಕನ್ನೇ ಬೆಳೆಸುವಲ್ಲಿ ಧ್ಯಾನಸ್ತನಾಗಿದ್ದ. ಇತ್ತ ಶಂಕ್ರನ ತಮ್ಮ "ರಾಜ" ಹತ್ತನೆ ತರಗತಿ ಮೆಟ್ಟಿಲನ್ನ ಬಲು ಆಯಾಸದಿಂದ ಹತ್ತಿ ಕುಳಿತಿದ್ದ, ಆದರೆ ಹತ್ತನೇ ತರಗತಿಯಲ್ಲಿ ಬರಿ ಮಣ್ಣು ಹೊತ್ತದ್ದೇ ಹೆಚ್ಚು, ಅದಾಗಲೆ ಪಡ್ಡೆ ಹುಡುಗರ ಸಂಘ, ಊರ ಮಧ್ಯೆಯ ಅರಳಿಮರದಡೆ ದಿನವೂ ಹರಟೆ, ಇಸ್ಪೀಟ್, ರಾಜಕಾರಣ ಇದೇ ಕೆಲಸದಲ್ಲಿ ಮಗ್ನನಾದ. ಅಪ್ಪ-ಅಮ್ಮ ಇಬ್ಬರಿಗೂ ತಿಳಿದುಹೋಗಿತ್ತು ಇನ್ನು ಇವನ ವಿದ್ಯೆ ನೈವೇದ್ಯ ಮುಗಿದು ಇವನನ್ನು ಒಂದು ತಹಬದಿಗೆ ತರುವುದೂ ಕಷ್ಟದ ಕೆಲಸ, ಹೋಗಲಿ ಇರುವ ಜಮೀನನ್ನೇ ನೋಡಿಕೊಂಡು ಹೋಗು ಎಂದು ಅಪ್ಪ ಮಗನಿಗೆ ಬುದ್ಧಿವಾದ ಹೇಳಿ, ನೇಗಿಲನ್ನು ಕೈಗೆ ಕೊಟ್ಟ.

ಅಪ್ಪನ ಮಾತು ಮೀರದವನಂತೆ ರಾಜ ದಿನ ಬೆಳಗೆದ್ದು ಹೊಲ, ಗದ್ದೆ ಎಂದು ಓಡಾಡುತ್ತ ಆಳು-ಕಾಳುಗಳನ್ನ ಕರೆಸಿ ಕೆಲಸ ಮಾಡುತ್ತಿದ್ದದ್ದು ಕಂಡು ಅಪ್ಪ-ಅಮ್ಮನಿಗೆ ಖುಷಿ, ಇನ್ನು ಭೂಮಿ ಕೆಲಸಕ್ಕೆ ಇವನಿದ್ದಾನೆ ಎಂದು ತೃಪ್ತಿಪಟ್ಟುಕೊಂಡರು. ರಾಜ ಸ್ವಲ್ಪ ರಾಜಾರೋಷದಿಂದ ಕೆಲಸಮಾಡುವವ, ಧೈರ್ಯ ಹೆಚ್ಚು ಮೊದಲೆ ಗುಂಪು ಕಟ್ಟಿಕೊಂಡು ಓಡಾಡುವವ ಸುತ್ತಮುತ್ತಲ ಹಳ್ಳಿಗಳಲ್ಲಿ ನಡೆಯುವುದನನ್ನೆಲ್ಲಾ ಕಲೆಹಾಕಿ ಆಗುಹೋಗುಗಳ ಲೆಕ್ಕಾಚಾರದಲ್ಲಿ ತನಗೆ ಲಾಭ ಎಷ್ಟು ಬರುತ್ತೆ ಎಂದು ಕಾದು ಕುಳಿತಿರುತ್ತಿದ್ದ. ಇತ್ತೀಚೆಗೆ ತನ್ನ ಜಮೀನಿನ ಒಂದು ಫರ್ಲಾಂಗ್  ದೂರದಲ್ಲಿ ಏನೋ ಗ್ಯಾಸ್ ಲೈನ್ ಹೋಗುತ್ತದೆ, ಕೆರೆ ಪಕ್ಕದಲ್ಲಿ ಯಾವುದೋ ಕಾರ್ಖಾನೆ ಬರುತ್ತದಂತೆ ಎಂದು ಊರಿಗೆ ಊರೇ ಪುಕಾರು ಎಬ್ಬಿಸಿದ್ದನ್ನು ಕೇಳಿದ್ದ ರಾಜ ಲೆಕ್ಕಾಚಾರಕ್ಕೆ ಗುಂಪು ಕಟ್ಟಿಕೊಂಡು ಕೂತ.

ಸರ್ಕಾರಿ ಸ್ವಾಮ್ಯದಲಿ ನಡೆಯುವ ಈ ಕಾರ್ಖಾನೆ ಮತ್ತು ಗ್ಯಾಸ್ ಲೈನ್ ಕಾಮಗಾರಿ ಇನ್ನೇನು ಮುಂದಿನ ವರ್ಷ ಶುರುವಾಗುತ್ತದೆ ಎಂದು ಸರ್ಕಾರ ಅಕ್ಕ-ಪಕ್ಕದ ಜಮೀನಿನವರನ್ನು ಕರೆದು ಸಭೆ ನಡೆಸಿದರು, 'ನಿಮ್ಮ ಜಮೀನಿಗೆ ಇಷ್ಟು ಹಣವನ್ನು ಕೊಡುವಂತೆ ಸರ್ಕಾರ ನಿಗದಿಪಡಿಸಿದೆ ಜೊತೆಗೆ ಪ್ರತಿ ಮನೆಗೂ ಒಬ್ಬರಿಗೆ ಈ ಕಾರ್ಖಾನೆಯಲ್ಲಿ ಕೆಲಸ ಕೊಡಲಾಗುವುದು ಎಂದು ಆಮಿಷವನ್ನು ಒಡ್ಡುತ್ತಾರೆ'. ಇದೆಲ್ಲಾ ವಿಷಯಗಳನ್ನು ತಿಳಿದ ರಾಜ ತನ್ನ ಅಪ್ಪನ ಆಸ್ತಿ ಕೆರೆ ದಡದಿಂದ ಇತ್ತಕಡೆ ಇದೆ, ಈಗ ಸರ್ಕಾರಕ್ಕೆ ಈ ಜಮೀನಿನ ಅವಶ್ಯಕತೆ ಇಲ್ಲ, ನಮ್ಮ ಜಮೀನು ಕೊಳ್ಳಲು ಯಾರೂ ಬರುವುದೂ ಇಲ್ಲ, ನಮ್ಮ ಕೈನಲ್ಲಿ ದುಡ್ಡು ಆಡುವುದೂ ಇಲ್ಲ, ನನ್ನ ಜೊತೆಗಿರುವವರಿಗೆಲ್ಲ ಒಳ್ಳೆ ದುಡ್ಡು ಬಂದು ಸೇರುತ್ತೆ, ಇನ್ನು ಮುಗಿಯಿತು ಎಲ್ಲ ಕಾರು ತೆಗೆದುಕೊಂಡು ಬಂಗಲೆ ಕಟ್ಟಿಕೊಳ್ಳುತ್ತಾರೆ. ನಾವು ನಮ್ಮ ಮನೆ ಅಷ್ಟೇ ಹಳೇಕಾಲದವರಂತೆ ಇರಬೇಕು ಎಂದು ಒಳಗೊಳಗೆ ಕೊರಗುತ್ತಿದ್ದ.

ರಾಜನ ಕೊರಗಿಗೆ ತಕ್ಕಂತೆ ಮತ್ತಾವುದೋ ಒಂದು ಗಾಳಿ ಸುದ್ದಿ ಇವನತ್ತ ಬಂದಿತು, ಕೆರೆಯ ಎರಡೂ ದಡದಲ್ಲಿ ಕಾರ್ಖಾನೆಗಳು ಹುಟ್ಟುಹಾಕುತ್ತಾರಂತೆ, ಒಂದು ಕಡೆ ಸರ್ಕಾರ ಜಮೀನನ್ನು ಸೇರಿಸಿಕೊಂಡರೆ ಮತ್ತೊಂದು ಕಡೆ ಖಾಸಗಿ ಕಂಪನಿಗಳು ತಮ್ಮದಾಗಿಸಿಕೊಳ್ಳಲು ನಿಂತಿದ್ದಾರೆ. ಇದೇ ಸರಿ ಸಮಯ ಎಂಬಂತೆ ರಾಜ ತನ್ನ ಅಕ್ಕ-ಪಕ್ಕದವರನ್ನ ಸೇರಿಸಿದ ಮುಂದೆ ಖಾಸಗಿ ಕಂಪನಿಯವರು ಸಭೆ ಕರೆದರೆ ನಾವು ಸರ್ಕಾರಿ ಗೊತ್ತುಪಡಿಸಿರುವ ಹಣಕ್ಕಿಂತ ಹೆಚ್ಚು ಕೇಳಬೇಕು ನಾವೆಲ್ಲ ಒಕ್ಕೊರಲಿನಿಂದ ಒಗ್ಗಟ್ಟಿನಿಂದ ಮುನ್ನುಗ್ಗಲು ಮುನ್ಸೂಚನೆ ಕೊಡಲು ನಿಂತ. ರಾಜನ ಕನಸಿನಂತೆ ಖಾಸಗಿ ಕಂಪನಿಗಳು ಬಂದರು, ಜನರಿಗೆ ಹಣದ ಆಮಿಷವನ್ನೂ ಕೊಟ್ಟು ಅಡ್ವಾನ್ಸ್ ಸಹ ಕೊಟ್ಟು ಹೊರಟೇ ಬಿಟ್ಟರು.

ರಾಜನ  ಈ ಘನಂದಾರಿ ಕೆಲಸ ಅಪ್ಪ ಅಮ್ಮನಿಗೆ ತಿಳಿದೇ ಇಲ್ಲ, ೨ ತಿಂಗಳ ನಂತರ ಖಾಸಗಿ ಕಂಪನಿಯವ ಬಂದು ಪತ್ರಗಳನ್ನು ಮಾಡಿ ಜಮೀನ್ದಾರರಿಂದ ಸಹಿ ಪಡೆದು ದುಡ್ಡು ಕೊಟ್ಟು ಹೊರಡುವ ಕಾಲ ಹತ್ತಿರ ಬಂದಿದೆ. ಅಪ್ಪ-ಅಮ್ಮನನ್ನು ಒಪ್ಪಿಸಲು ಅಮ್ಮನಿಗೆ ಬಂಗಲೆ, ಮೈತುಂಬ ಒಡವೆ ಆಮಿಷವನಿಟ್ಟ, ಅಪ್ಪನಿಗೆ 'ಇರುವ ೫ ಎಕರೆ ತೋಟದ ಹತ್ತಿರಕ್ಕೆ ಪಕ್ಕಕ್ಕೆ ಊರ ಗೌಡರು ಮಾರುವ ಅವರ ತೋಟ ತೆಗೆದುಕೊಂಡು ದೊಡ್ಡ ಎಸ್ಟೇಟ್ ಮಾಡೋಣ, ಬೇಲಿ-ಬಂಕ ಹಾಕಿ ಅಣ್ಣ ಬರುವಷ್ಟರಲ್ಲಿ ನಾವು ರೆಡಿಯಿಟ್ಟರೆ ಅವನೂ ಕೃಷಿ ಸಂಶೋಧನೆಗೆ ಅನುಕೂಲವಾಗುತ್ತೆ, ಕೆರೆಯಲ್ಲಿ ಈಗಾಗಲೇ ನೀರೇ ಇಲ್ಲ, ಇನ್ನು ಗದ್ದೆ ಮಾಡುವುದು ಕಷ್ಟ ಅದು-ಇದು ಕಾರಣಗಳನ್ನ ಕೊಟ್ಟು' ಅಪ್ಪನನ್ನು ಒಂದು ಹಂತಕ್ಕೆ ಒಪ್ಪಿಸಿದ್ದಾಯ್ತು ಜಮೀನು ಬರೆದುಕೊಟ್ಟಿದ್ದೂ ಆಯ್ತು. ಕೈಯಲ್ಲಿ ದುಡ್ಡು ಹಿಡಿದು ಮನೆಗೆ ಬಂದಾಗ ಅಗಾದ ಕನಸು ಅಪ್ಪನದು, ತೋಟ, ಹೊಲ ಮತ್ತಷ್ಟು ಬೆಳೆ ಬೆಳೆಯುವ ಕಲ್ಪನೆಯಲ್ಲಿ ಮುಳುಗಿದ್ದ.

ರಾಜ ಮನೆಯಲ್ಲಿ ಬಂದ ದುಡ್ಡಿನಿಂದ ಅಪ್ಪಾ!! 'ಅಮ್ಮ ಇಷ್ಟುದಿನ ಕಷ್ಟಪಟ್ಟಿದ್ದಾಳೆ ಅವಳಿಗೊಂದು ಕತ್ತಿಗೆ ಸರಿ ಮಾಡಿಸಿಕೊಡು ಎಂದಾ', ಆಯ್ತು ಎಂದು ಅಪ್ಪ ಚಿನ್ನದ ಸರ ತಂದ. ಮಗ ಅಪ್ಪಾ ತೋಟ ದೂರ ಇದೆ, ಮನೆಗೆ ತೋಟಕ್ಕೂ ಓಡಾಡೋಕ್ಕೆ ಕಷ್ಟ ಒಂದು ಬೈಕ್ ಕೊಡ್ಸು ಅಂದಾ, ಸರಿ ಬೈಕ್ ಬಂತು. ಅಮ್ಮ-ಮಗ ಇಬ್ಬರೂ ಹಿತ್ತಲ ಕಡೆ ಇರೋ ಗೋಡೆ ಬಿದ್ದು ಹೋಗ್ತಾ ಇದೆ ಸರಿಮಾಡ್ಸಿ, ಮಗ ಫಾರಿನ್ ಇಂದ ಬರೋಸ್ಟರಲ್ಲಿ ಹೊಸ ಮನೆ ಇದ್ದಂತೆ ಇರಲಿ ಅಂದಾ, ಆಯ್ತು ಅಂತಾ ಒಂದು ಮೂಲೆಯ ಗೋಡೆ ಹೋಗಿ ಪೂರ ಹೊಸ ಬಂಗಲೆಯೇ ಕಟ್ಟುವಂತಾಯ್ತು. ಇಷ್ಟೆಲ್ಲಾ ಮುಗಿಸಿ ಪುಣ್ಯೋಜನೆ ಮಾಡಿಸುವಷ್ಟರಲ್ಲಿ ಫಾರಿನ್ ಮಗನಿಗೆ ವಿಷಯವೂ ಮುಟ್ಟಲಿಲ್ಲ. ಇತ್ತ ಬರಿಗೈ ಮಾಡಿಕೊಂಡ ಅಪ್ಪ ಕಾಸು ಖಾಲಿ ಮಾಡಿ ತಲೆಯ ಮೇಲೆ ಕೈಹೊತ್ತು ಕುಳಿತ.
 ---------
ಅಪ್ಪ-ಅಮ್ಮನನ್ನು ಪುಸಲಾಯಿಸಿ ಜಮೀನು ಮಾರುವುದರಲ್ಲಿ ರಾಜನಿಗೂ ಲಾಭವಿತ್ತು, ಒಂದಕ್ಕೆ ಎರಡು ಹೇಳಿ ಹಣದ ಗಂಟು ಮಾಡಿಕೊಂಡಿದ್ದ, ಗದ್ದೆ ಕೆಲಸದಿಂದಲೂ ತಪ್ಪಿಸಿಕೊಂಡ, ಇನ್ನು ಹೊಸ ಜಮೀನು ಕೊಳ್ಳಲು ಕೈನಲ್ಲಿ ಕಾಸಿಲ್ಲದ ಅಪ್ಪನನ್ನು ಮತ್ತಾವ ದಾರಿ ತೋರಿಸುತ್ತಾನೆ? ಯಾವುದೂ ಇಲ್ಲ ಆರಾಮಾಗಿ ಉಂಡು-ತಿಂದು ಊರ ಮುಂದೆ ಬಡಾಯಿ ಮಾತುಗಳಲ್ಲೇ ಸಮಯ ಕಳೆಯುತ್ತಾನೆ.

ಚಂದ್ರಣ್ಣ ಈಗ ಊರು ಹೋದ ಮೇಲೆ ಬಾಗಿಲು ಹಾಕಿಕೊಂಡರಂತೆ ಹಾಗೆ ಆಗಿದೆ, ಮಗ ಬಣ್ಣ ಕಟ್ಟಿ ಕನಸು ತೋರಿಸಿದ್ದ ಈಗ ಎಲ್ಲ ಅರ್ಥವಾಗಿದೆ ಮಿಕ್ಕ ೧ಎಕರೆ ಜಮೀನಿಗೂ ಏನಾದರು ಸಂಚಕಾರ ಬರುವುದೇನೋ ಎಂದು ಹೆದರಿದ್ದಾನೆ. ಮಗನ ಪುಂಡಾಟಿಕೆ ಸಹಿ ಹಾಕಿದೆ, ಇನ್ನಾದರು ಎಚ್ಚರ ವಹಿಸಬೇಕೆಂದು ಬಾವಮೈದುನನ ಮನೆಗೆ ಓಡುತ್ತಾನೆ. ಬಾವಮೈದುನನಿಗೆ ಇದ್ದಬದ್ದ ವಿಷಯಗಳನ್ನೆಲ್ಲಾ ತಿಳಿಸಿ, ದುಡ್ಡು ಹೀಗಾಗಿದೆ ಮನೆ ಗೃಹಪ್ರವೇಶ ಮಾಡಬೇಕಿದೆ ಅಷ್ಟೇ, ಮಗ ಹೀಗಾದ ಹೇಗೆ ಹೇಳಿಕೊಳ್ಳುವುದೋ ತಿಳಿದಿಲ್ಲ. ಬಾವಮೈದುನನಿಗೆ ಸ್ವಲ್ಪ ಅತಿಯಾದ ಕೋಪವೇ ಬಂದಿತ್ತು..! ಇಷ್ಟೆಲ್ಲಾ ಆದರೂ ನೀವು ತಿಳಿದವರ ಹತ್ತಿರ ಹಂಚಿಕೊಂಡಿಲ್ಲ, ಇರುವ ಆಸ್ತಿ ಮಾರಿ ಏನು ಮಾಡಬೇಕೆಂದು ಯೋಚಿಸಿಲ್ಲ, ಅತ್ತ ಶಂಕ್ರ ನೋಡಿದರೆ ಏನೋ ದೊಡ್ಡ ಆಸೆಯಿಟ್ಟುಕೊಂಡು, ಸಂಶೋಧನೆ ಮಾಡಲು ಹೊರಟಿದ್ದಾನೆ. ಮೈಮೇಲೆ ಪ್ರಜ್ಞೆ ಇಲ್ಲದೆ ಇಂತಹ ಕೆಲಸ ಮಾಡುತ್ತೀರಿ ನೀವುಗಳು, ಬೆಂಗಳೂರಿಗೆ ಹತ್ತಿರವಿರುವ ಸುತ್ತಮುತ್ತಲ ಜನ ಇದೇ ಸ್ಥಿತಿ, ಅಪ್ಪಂದಿರ ಆಸ್ತಿ ಮಾರಿ ಜೀವನ ಮಾಡುವ ಗಂಡುಮಕ್ಕಳು, ಆಸ್ತಿ ಬರಲಿಲ್ಲವೆಂದು ಕೋರ್ಟು, ಕೇಸ್ ಹಾಕುವ ಹೆಣ್ಣುಮಕ್ಕಳು. ಎಲ್ಲರೂ ಗುದ್ದಾಡಿ ಸಾಯುವಂತ ಪರಿಸ್ಥಿತಿಗೆ ಬಂದಿದ್ದಾರೆ. ಇನ್ನೆಲ್ಲಿ ನಮ್ಮ ಶಂಕ್ರನ ಸಾವಯವ ಕೃಷಿಯ ಕನಸು ಎಲ್ಲ ಅಲ್ಲೇ ನೀರುಪಾಲು. ಶಂಕ್ರನ ಸೋದರ ಮಾವನಿಗೆ ಎಲ್ಲಿಲ್ಲದ ಸಂಕಟ, ಕೆರೆ ಪಕ್ಕದ ಜಮೀನು ಹೋಯ್ತು ಮುಂದೇನು ಎಂಬ ಯೋಚನೆ ಕಾಡುತ್ತಿದೆ.

ಅಪ್ಪ-ಅಮ್ಮ ಮಗನ ದರ್ಬಾರಿನಲ್ಲಿ ಜಮೀನಿನ ಹಂಗು ಕಳೆದುಕೊಳ್ಳುತ್ತಲಿದ್ದರೆ ಸುಮ್ಮನೆ ಕೂರುವುದು ಹೇಗೆ ಎಂದು ಸೋದರಮಾವ ಊರಿಗೆ ಹೊರಟು ನಿಂತ, ಶಂಕ್ರುನ ತಮ್ಮನಿಗೆ ಬುದ್ಧಿವಾದ ಹೇಳಿದ್ದೇ ತಡ ರಂಗಾಗಿ ಕುಳಿತುಬಿಟ್ಟ. ರಾಜನಿಗೆ ಹಣ ಐಷಾರಾಮಿ ಜೀವನ ಹೆಚ್ಚು ಆಪ್ತ, ಯಾರ ಬುದ್ಧಿಮಾತಿಗೂ ಕಿವಿಕೊಡುವವನಂತಲ್ಲ. ಮಾವ ನನಗೂ ಗೊತ್ತಿದೆ ವ್ಯವಹಾರ ಜ್ಞಾನವಿದೆ, "ಅಕ್ಕಪಕ್ಕ ಜಮೀನು ಮಾರಿದರೆ ನಾವೇನು ಹಂಗೆ ಇರೋಕ್ಕೆ ಆಗುತ್ತಾ? ನಾವು ಇವತ್ತಲ್ಲಾ ನಾಳೆ ಮಾರೋರೆ ಆದ್ರೆ ಸ್ವಲ್ಪ ಬೇಗ ಮಾರಿದ್ದೀವಿ ಅಷ್ಟೇ?" ಎಂದು ಮಾವನ ಎದುರು ಜೋರು ಮಾಡಿದ.

ಮಾವ ಏರು ಧ್ವನಿಯಲ್ಲಿ ನೀವುಗಳು 'ನಿಮ್ಮ ಆಸೆಯಂತೆ ಏನು ಬೇಕೋ ಹಾಗೆ ಮಾಡುವಂತಿಲ್ಲ, ಮನೆಯಲ್ಲಿ ಹಿರಿಯ ಮಗನಿದ್ದಾನೆ ಅವನಿಗೂ ಮಾತು ತಿಳಿಸಿಯೇ ನೀವುಗಳು ಮುಂದುವರಿಯಬೇಕು ಇಲ್ಲವಾದರೆ ತಪ್ಪಾಗುತ್ತದೆ ಎಂದು ಗದರಿದ'. ಈಗ ಶಂಕ್ರು ವಿದ್ಯಾಭ್ಯಾಸ ಮುಗಿಸಿದ ಮೇಲೆ ಅವನ ಯೋಜನೆಗಳನ್ನು ಎಲ್ಲಿ ಮಾಡುತ್ತಾನೆ. ಅಷ್ಟು ಆಸ್ತಿಯನ್ನು ಮಾರಿದ್ದೀರಲ್ಲ ಎಂದು ಬಡಬಡಿಸುತ್ತಾ ತಂಗಿಯನ್ನೂ ಬೈಯ್ಯುತ್ತಿದ್ದಾನೆ, 'ನಿನಗೆ ಒಡವೆ ಹೆಚ್ಚಾಯಿತೆ?  ಮಕ್ಕಳ ಮುಂದಿನ ಜೀವನಕ್ಕೆ ದಾರಿ ಬೇಡವ' ಎಂದು.

ಅಣ್ಣ 'ಈಗ ಇರುವ ಒಂದು ಎಕರೆ ಜಮೀನಿನಲ್ಲೇ ಏನು ಬೇಕೋ ಮಾಡಲಿ ಬಿಡಣ್ಣಾ, ಕಷ್ಟವೇನಿಲ್ಲ ಉದ್ಧಾರ ಆಗುವವರು ಎಲ್ಲಿದ್ದರೂ ಆಗುತ್ತಾರೆ 'ಎಂದು ತಂಗಿ ಅಣ್ಣನಿಗೆ ಹೇಳುತ್ತಾಳೆ. 

ಅಣ್ಣನಿಗೆ ಸಮಾಧಾನವಿಲ್ಲ ಬೇಸರದಲ್ಲೇ ಇರುವ ಒಂದು ಎಕರೆ ಜಮೀನು ಹುಷಾರಾಗಿ ಕಾಪಾಡುವಂತೆ ಹೇಳಿ ಹೊರಟ.

-------

ಇತ್ತ ನೆದರ್ಲಾಂಡ್ ನಲ್ಲಿ ಶಂಕ್ರು "ಎರೆಹುಳು ಮತ್ತು ಭೂಮಿ ಫಲವತ್ತತೆ" ಈ ವಿಷಯವಾಗಿ ವಿಚಾರ ಮಂಡನೆ ಮತ್ತು ಹಲವಾರು ರೂಪುರೇಷೆಗಳನ್ನು ಮಂಡಿಸುತ್ತಾನೆ. ನೆದರ್ಲ್ಯಾಂಡ್ ಸರ್ಕಾರ ಈತನ ವಿಚಾರ ಮಂಡನೆಗೆ ಮನಸೋತು ಇದೇ ಪ್ರಾಜೆಕ್ಟ್ ನ್ನು ಮುಂದುವರಿಸುವಂತೆ ಮತ್ತೆ  ಪ್ರಾಜೆಕ್ಟ್ ಹೆಡ್ ಆಗಿ ಆಯ್ಕೆ ಮಾಡುತ್ತಾರೆ. ಆದರೆ ಶಂಕ್ರನಿಗೆ ವಿದೇಶದಲ್ಲಿರುವ ಯಾವುದೇ ಆಸಕ್ತಿ ಅವನಲ್ಲಿರಲಿಲ್ಲ, ಕೆರೆಯ ಪಕ್ಕದ ಜಮೀನು ಅತಿ ಹೆಚ್ಚು ಫಲವತ್ತತೆ ಹೊಂದಿದೆ ಅದನ್ನೇ ನಾನು ಸರಿದಾರಿಯಲ್ಲಿ ಬಳಸಿಕೊಳ್ಳಬೇಕು ಎಂದು ಮಹದಾಸೆ ಹೊಂದಿದ್ದನು.

ತನ್ನೆಲ್ಲಾ ಸಂಶೋಧನೆಯ ಜವಾಬ್ದಾರಿಯನ್ನು ಮುಗಿಸಿಕೊಂಡು ಭಾರತಕ್ಕೆ ವಾಪಾಸಾದ ಶಂಕ್ರು, ನೇರ ಮಾವನ ಮನೆಗೆ ಬಂದು ಇಳಿಯುತ್ತಾನೆ. ಮಾವನಿಗೆ ಒಳಗೊಳಗೆ ಊರಿನ ಸಂಗತಿಯೇ ಕಾಡುತ್ತಿದೆ, ಜಮೀನಿಲ್ಲ ನೀನು ವಾಪಸ್ ನೆದರ್ಲ್ಯಾಂಡಿಗೆ ಹೋಗು ಅಲ್ಲೇ ಕೆಲಸ ಮಾಡು ಎಂದು ಹೇಳಲೇ? ಅಥವಾ ನಾನೇ ಸ್ವಲ್ಪ ಜಮೀನು ಖರೀದಿಸಿಕೊಡಲೇ ಎಂದು ಗೊಂದಲದಲ್ಲೇ ಮೌನವಾಗಿದ್ದ. ಇತ್ತ ಮಾವನ ಮೌನದಲ್ಲಿ ಏನೋ ಅಡಗಿದೆ ಎಂದು ಶಂಕ್ರು ಬಾಯಿ ಬಿಡಿಸಿದ.

"ಊರಲ್ಲಿ ಇದ್ದ ೫ ಎಕರೆ ಜಮೀನಿನ ಕನಸು ಇನ್ನು ಕನಸು ಅಷ್ಟೇ ಶಂಕ್ರು" ಈಗ ನಾನೊಂದು ಯೋಜನೆಗೆ ಬಂದಿದ್ದೇನೆ. ನಿನ್ನ ಊರಿನಲ್ಲೇ ೪ ಎಕರೆ ಜಮೀನು ನೋಡಿಕೊಂಡು ಬಂದಿರುವೆ, ಅದು ನಿನಗೆ ಕೊಡುವೆ ನಿನ್ನ ಆಸೆಯನ್ನೆಲ್ಲಾ ಆ ಮಣ್ಣಿಗೆ ಮೀಸಲಿಡು. ನಿನ್ನ ಕೈಕೂಡಿಬಂದ ನಂತರ ನನಗೆ ಹಣ ಹಿಂದಿರುಗಿಸು. ಹೀಗೆ ಮಾವ ಹೇಳುತ್ತಿದ್ದರೆ ಏಕೆ ಹೀಗೆ ಮಾವ ಹೇಳ್ತಾರಲ್ಲಾ ಎಂದು ಗಾಬರಿಯಾದ. ಒತ್ತಾಯದ ನಂತರ ಇದ್ದ ೫ ಎಕರೆ ಜಮೀನಿನ ವಿಷಯ ಹೊರಬಂತು, ಶಂಕ್ರು ಕೂತಲ್ಲೇ ಕುಸಿದುಹೋದ. ಬಹಳಷ್ಟು ಆಸೆಗಳನ್ನು ಹೊತ್ತು ಬಂದವನಿಗೆ ನಿರಾಸೆ ಮೂಡಿಸಿತ್ತು. ತಮ್ಮನ ಮೇಲಿನ ಅಭಿಮಾನ ಒಮ್ಮೆಲೆ ಕುಗ್ಗಿಹೋಯಿತು.

ಸಂಜೆ ೬ಗಂಟೆ ಊರಿಗೆ ಮಾವನ ಜೊತೆ ಬಂದು ಕಾರ್ ಇಳಿಯುತ್ತಿದ್ದಂತೆ ಅಮ್ಮ ಆರತಿ ಹಿಡಿದು ಬಂದಳು ಮಗನಿಗೆ ನಾಯಿನರಿ ಎಲ್ಲರ ಕಣ್ಣುಗಳ ದೃಷ್ಟಿ ತೆಗೆದು ಒಳಹೋಗಲು ಹೇಳುತ್ತಾಳೆ. ಅಮ್ಮನಿಗೆ ಮಗನಿಗೆ ಯಾರ ಕಣ್ಣು ಬೀಳದಿರಲಿ ಎಂಬ ಆಸೆ ಆದರೆ ವೃತ್ತಿಬದುಕನ್ನು ಬೆಳೆಸಲು ಇಡಬೇಕಿದ್ದ ಕಣ್ಣು ಮಾತ್ರ ಇಲ್ಲ. ಅಮ್ಮ ಇನ್ನೂ ಮಗುವಾಗೆ ನೋಡುತ್ತಿದ್ದಾಳೆ, ಅವಳಿಗೂ ಇಷ್ಟವಿರಲಿಲ್ಲ ವ್ಯವಸಾಯ, ಹೊಲ ಗದ್ದೆ ಎಲ್ಲಾ! ಮಗ ಆಫೀಸರ್ ಆಗಿ ಎಸಿ ರೂಮಿನಲ್ಲಿ ಕೂತು ಕೆಲಸಮಾಡುವ ಕನಸಿತ್ತು. ಈಗ ಬೇಸಾಯ ಕನಸು ಆಗುವುದಿದೆ ಎಂದು ಮನದಲ್ಲೇ ಬೇಸರಪಟ್ಟುಕೊಂಡು ಒಳನಡೆದ. ನಡುಮನೆಯಲ್ಲಿ ಅಪ್ಪ ಮುಖ ತಗ್ಗಿಸಿ ಕುಳಿತಿದ್ದಾರೆ. ಹಿಂದಿನ ಲವಲವಿಕೆಯಿಲ್ಲ, ಮುಖ ಕೊಟ್ಟು ಮಾತನಾಡುವ ಮನಸಿಲ್ಲ, ತನ್ನೊಳಗೆ ಯಾವುದೋ ನೋವು ಅಡಗಿದೆ ಎಂಬುದು ಎದ್ದು ಕಾಣುತ್ತಿದೆ.

ಅಪ್ಪ ವಿದ್ಯಾವಂತನಲ್ಲ ಸದಾ ಭೂಮಿಯನ್ನು ನಂಬಿದ್ದವನು, ಬೇರೆಯವರ ಮಾತಿಗೆ ಮರುಳಾಗಿ ಮೋಸಹೋದತಿಳಿವಳಿಕೆಯಿಲ್ಲ ಈಗ ಹೋದದ್ದು ಹೋಗಿದೆ ಮುಂದೇನು ಎಂದು ಯೋಚಿಸೋಣ ಎಂದು ಅಪ್ಪನಿಗೆ ಸಾಂತ್ವಾನಿಸಲು ಶಂಕ್ರು ಮುಂದಾಗುತ್ತಾನೆ. ತನ್ನೊಳಗಿನ ಬೇಸರವನ್ನು ಮರೆತು ಶಂಕ್ರು ಅಪ್ಪನಿಗೆ ಹೇಳುತ್ತಾನೆ "ಅಪ್ಪಾ ಆಗಿದ್ದು ಆಗಿದೆ, ಈಗ ಹಳೆಯದನ್ನೆ ಮಾತನಾಡಿದ್ರೆ ಏನು ಪ್ರಯೋಜನವಿಲ್ಲ, ನನ್ನಲ್ಲಿ ವಿದ್ಯೆಯಿದೆ ಅದನ್ನು ಉಪಯೋಗಿಸಿಕೊಂಡು ಮುಂದುವರೆಯೋಣ" ಎಂದು ಅಪ್ಪನನ್ನು ಸಮಾಧಾನಿಸುತ್ತಿದ್ದ. ಅಪ್ಪ ಅದಕ್ಕೆ ಮಗನ ಕೈಹಿಡಿದು "ನನ್ನ ಕ್ಷಮಿಸಿಬಿಡು ಶಂಕ್ರು, ನಿನ್ನ ತಮ್ಮ ನನಗೆ ಹೇಳಿದಾಗ ನನಗೆ ಬೇರೆ ಏನೋ ಯೋಜನೆಯಿತ್ತು, ಹೊಸದಾದ ಹೊಲ ಕೊಂಡುಕೊಳ್ಳುವ ಆಶಯದ ಮೇಲೆ ಮಾರಿದ್ದೆ, ಆದರೆ ಹೀಗೆ ಖರ್ಚಾಗುತ್ತದೆ ಎಂದು ಗೊತ್ತಿರಲಿಲ್ಲ, ಈಗ ಇರುವ ೧ ಎಕರೆ ಜಮೀನು ಇದೆಯಲ್ಲ ಅದನ್ನ ನೀನೇ ಇಟ್ಟುಕೊಂಡು ಅದು ಏನು ಮಾಡಬೇಕೋ ಮಾಡು" ಎಂದು ಹೇಳುತ್ತಾನೆ.

ಅಪ್ಪ ಮತ್ತು ಅಣ್ಣನ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದ ರಾಜ ಎಲ್ಲಿದ್ದನೋ ಎದುರು ಪ್ರತ್ಯಕ್ಷನಾದ. ಅಪ್ಪಾ ನನಗೆ ಆ ಜಮೀನಿನಲ್ಲಿ ಭಾಗ ಬರಬೇಕು ನಾನು ಎಲ್ಲಿ ಜೀವನ ಮಾಡಲಿ, ಅವನನ್ನು ಓದಿಸಿದ್ದೀರಿ, ನಾನು ಏನು ಮಾಡಲು ಸಾಧ್ಯ, ನನಗೆ ಜಮೀನು ಕೆಲಸ ಬಿಟ್ಟರೆ ಬೇರೆ ಏನೂ ಬರುವುದಿಲ್ಲ. ಎನ್ನುತ್ತಿದ್ದಂತೆ ಅಪ್ಪನಿಗೆ ಎಲ್ಲಿಲ್ಲದ ಕೋಪ, ರಪ್ಪನೆ ಎದ್ದು ಮಗನ ಕಪಾಳಕ್ಕೆ  ಬಾರಿಸುತ್ತಾನೆ. "ಎಲ್ಲಾ ನಿನ್ನಿಂದಲೇ ಆಗಿದ್ದು ಇಲ್ಲಸಲ್ಲದ್ದು ಹೇಳಿ ಆಸ್ತಿ ಮಾರಿಸಿದೆ. ಈಗ ಎಲ್ಲಿದೆ ನನ್ನಲ್ಲಿ ಆಸ್ತಿ ಇರುವುದನ್ನೆಲ್ಲ ಕಳೆದುಹೋಯ್ತಲ್ಲಾ? ಇತ್ತ ದುಡ್ಡು ಇಲ್ಲ ನಮ್ಮ ಭೂಮಿಯೂ ಇಲ್ಲ. ಕೈ ಕೈ ಹಿಸುಕಿಕೊಳ್ಳುತ್ತ ಮತ್ತೆ ಮೂಲೆಯಲ್ಲೇ ಕುಳಿತ ಅಪ್ಪಾ, ಇತ್ತ ಶಂಕ್ರು ಅಪ್ಪ, ತಮ್ಮ ಅಮ್ಮ ಎಲ್ಲರನ್ನು ನೋಡಿ ಒಂದೇ ಮಾತು ಹೇಳಿದ ನನಗೆ ಈ ಆಸ್ತಿ ಬೇಡ "ಒಳಗೊಳಗೆ ನೊಂದುಕೊಳ್ಳುತ್ತಿದ್ದಾನೆ, ದುಡಿಯುವ ಮನಸ್ಸುಗಳಿಗೆ ಪ್ರೋತ್ಸಾಹಿಸೋ ಜನರಿಲ್ಲ ಎಂದು, ನಾನು ಮಾವನ ಸಹಾಯದಿಂದ ಒಂದು ಜಮೀನು ತೆಗೆದುಕೊಂಡು ಮುಂದಿನ ಬದುಕು ಸಾಗಿಸುವೆ ಎಂದು."

ಕಡ್ಡಿ ಎರಡು ತುಂಡಾಗುವಂತೆ ಮಾತನಾಡಿದ ಶಂಕ್ರುವಿನ ನಿರ್ಧಾರ ಕೇಳಿ ಮಾವನಿಗೆ ಖುಷಿ, ಮನೆಯಲ್ಲಿ ಹೇಳಿದಾಗ ಏನೂ ಮಾತನಾಡದವ ಈಗ ಇದ್ದಕ್ಕಿದ್ದಂತೆ ಒಪ್ಪಿಕೊಂಡನಲ್ಲ ಸದ್ಯ ಎಂದುಕೊಂಡು, ಸರಿ ಶಂಕ್ರು "ನಿನಗೆ ಇದೇ ಊರಲ್ಲಿ ನೋಡಿರುವ ಜಮೀನು ಕೊಡಿಸುವೆ, ನಿನ್ನಲ್ಲಿ ಇದ್ದಷ್ಟು ಹಣ ಕೊಡು" ಎಂದು ಹೇಳಿ ಎಲ್ಲ ಜಮೀನು ನೋಡಿ ಬಂದರು, ೪ ಎಕರೆ ಜಮೀನಿಗೆ ಹಣ ಹೂಡಿದ್ದು ಸೋದರಮಾವ. ಶಂಕ್ರು ನೆದರ್ಲ್ಯಾಂಡ್ ನಲ್ಲಿ ಗಳಿಸಿದ ಹಣವನ್ನು ಕೊಟ್ಟು ಉಳಿದ ಹಣವನ್ನು ಸಾಲವಾಗಿ ಪಡೆದ. ಜಮೀನಿನಲ್ಲೇ ಪುಟ್ಟ ಮನೆ, ನೀರಿಗಾಗಿ ಬೋರ್ ವೆಲ್ ಕೂಡ ಬಂತು, ಇತ್ತ ತಂದೆ-ತಾಯಿಗೆ ನಿಮಗೆ ಬೇಕೆನಿಸಿದಾಗ ಬರಬಹುದು ನನ್ನೊಂದಿಗೆ ಇರಬಹುದು. ನಾನು ಇನ್ನು ಜಮೀನಿನಲ್ಲೇ ಉಳಿದುಕೊಳ್ಳುವೆ ಎಂದು ಅಪ್ಪ-ಅಮ್ಮ, ಅತ್ತೆ-ಮಾವ ಎಲ್ಲರಿಗೊ ನಮಸ್ಕರಿಸಿ ಹೊಸಮನೆ ಪ್ರವೇಶ ಮಾಡಿದ. ಮನಸ್ಸಲ್ಲೇ ಬೇಸರವಿತ್ತು, ನನ್ನನ್ನು ಕೇಳದೆಯೇ ಆಸ್ತಿ ಮಾರಿದ್ದರು, ಮನೆಯಲ್ಲಿ ನನಗೂ ಒಂದು ಸ್ಥಾನವಿದೆ ಎಂಬ ಭಾವವೂ ಇಲ್ಲದೆ ವಿದೇಶದಿಂದ ಬರುವ ಮೊದಲೇ ಮನೆಗೊಂದಿಷ್ಟು ಹೂರಣ ಮಾಡಿ, ಆಸ್ತಿ ಮಾರಿದ ದುಡ್ಡೆಲ್ಲ ಕಳೆದುಬಿಟ್ಟರು. ನಾ ಓದುವಾಗ ಬೇಸಾಯಕ್ಕೆಂದೇ ಜೀವವಿಟ್ಟುಕೊಂಡು ಬಂದೆ ಆದರೆ ಈಗ ಹೀಗಾಗಿದೆ ಎಂದುಕೊಂಡು ಶಂಕ್ರು ತನ್ನ ಹೊಸ ಜೀವನಕ್ಕೆ ಮುಂದಾದ. ಇಲ್ಲಿ ಮನೆಯವರ ಮೇಲಿನ ಕೋಪ ಏನಾದರೂ ಸಾಧಿಸಿ ತೋರಿಸಬೇಕು ಎಂಬ ಹಠವೂ ಹೆಚ್ಚಿತ್ತು.

೪ ಎಕರೆಗೆ ಸುತ್ತಲೂ ಬೇಲಿ ಕಟ್ಟುವ ಕೆಲಸ, ಬೇಲಿಯ ಮಗ್ಗುಲಿನಲ್ಲೇ ಹೊನ್ನೆ, ಟೀಕ್ ಮರಗಳನ್ನು ನೆಡುತ್ತ ಬಂದ. ಜೇಬಿನಲಿದ್ದ ಹಣ ಕೈಗೆಟುಕದಷ್ಟಿತ್ತು, ಕೆಲಸದವರಿಗೆ ಕಾಸು ಕೊಡುವಷ್ಟು ಶಕ್ತನಾಗಿರಲಿಲ್ಲ. ಮಾವನನ್ನು ಮತ್ತೆ ಹಣ ಕೇಳುವ ಆಸೆಯೂ ಇರಲಿಲ್ಲ. ಇತ್ತ ಮಗನ ಕಷ್ಟ ನೋಡಿ ಅಪ್ಪನೂ ಕೈಜೋಡಿಸಿದ, ಅಮ್ಮನಿಗೆ ಬೇಸಾಯ ಸ್ವಲ್ಪ ಅಷ್ಟಕ್ಕೆ ಅಷ್ಟೇ ಆದರೂ ಮಗನ ಕೆಲಸಕ್ಕೆ ಮನಸೋತು ತಾನೂ ಕೈಜೋಡಿಸಿದಳು. ಎರಡು ಕೈ ಸೇರಿ ಚಪ್ಪಾಳೆ ಎಂಬಂತೆ ನೋಡ ನೋಡುತ್ತ ಬರಡು ಭೂಮಿ ಹಸಿರಾಯಿತು. ಮನೆ ಪಕ್ಕದಲ್ಲಿ ಕೊಟ್ಟಿಗೆ ಅಲ್ಲೊಂದೆರಡು ನಾಟಿ ಹಸು, ಅದರಿಂದ ಬಂದ ಹಾಲು, ಮೊಸರು ಬೆಣ್ಣೆ ಮನೆಗೆ ಆಗಿ ಮಿಕ್ಕಿದ್ದು ಮಾರಾಟವಾಗುತ್ತಿತ್ತು. ಸಾವಯವ ಕೃಷಿಗಾಗಿಯೇ ಒತ್ತು ಕೊಡುತ್ತ ಮನೆಯಲ್ಲಿ ಹಸು-ಕರು, ಕೋಳಿ, ಮೊಲ, ನಾಯಿ, ಬೆಕ್ಕು ಎಲ್ಲಾ ತರಹನಾದ ಸಾಕುಪ್ರಾಣಿಗಳನ್ನು ಸಾಕಲು ಶುರುವಾದ,

ಹಸುವಿನಿಂದ ಬಂದ ಸಗಣಿ ಗೊಬ್ಬರವಾಯಿತು, ಭೂಮಿಯಲ್ಲಿ  ಎರೆಹುಳುವಿನಿಂದ ಗೊಬ್ಬರ ತಯಾರಿಸುತ್ತ ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಟ್ಟನು. ಒಂದೆಡೆ ಗದ್ದೆಯಲ್ಲಿ ಅಕ್ಕಿ ಬೆಳೆದ, ಮತ್ತೊಂದೆಡೆ ರಾಗಿ, ೨ ಎಕರೆಯಲ್ಲಿ ಸಪೋಟ, ದಾಳಿಂಬೆ, ಹಲಸು, ಮಾವು, ತರಕಾರಿ ಹೀಗೆ ಬೆಳೆಸಿದ ಗಿಡಗಳು ಮರವಾಗಿ ಹೆಚ್ಚು ಫಲವನ್ನು ನೀಡಲು ಆರಂಭವಾಯಿತು.

ಬೆಳಗೆದ್ದರೆ ಜಮೀನಿನಲ್ಲಿ ಹಣ್ಣಾಗಿ ಉದುರಿದ ಎಲೆಗಳು, ಕೊಳೆತ ಹಣ್ಣು ತರಕಾರಿ, ಸಗಣಿ ಎಲ್ಲವನ್ನು ಶೇಕರಿಸಿ, ಮಿಶ್ರಣ ಮಾಡಿ ಗೊಬ್ಬರ ತಯಾರಿಸುವುದು, ಇದೇ ಒಂದು ಕಾಯಕವನ್ನು ದಿನವೂ ತಪ್ಪದೇ ಮಾಡುತ್ತಿದ್ದ ಶಂಕರನಿಗೆ ಅದೇ ಒಂದು ದೊಡ್ಡ ವ್ಯವಹಾರವಾಗುತ್ತದೆಂದು ತಿಳಿದಿರಲಿಲ್ಲ. ಶೇಕರಿಸಿಟ್ಟ ಗೊಬ್ಬರವನ್ನು ಅಕ್ಕ-ಪಕ್ಕದ ಜಮೀನಿನವರು ಕೊಂಡುಕೊಳ್ಳುತ್ತಿದ್ದರು. ದಿನಕ್ರಮೇಣ ಗೊಬ್ಬರ ಕಾರ್ಖಾನೆಯಾಗಿಯೇ ತಿರುಗಿಕೊಂಡಿತು. ಅತ್ಯಂತ ಸರಳಜೀವಿಯಾದ ಶಂಕ್ರನಿಗೆ ಜೀವನೋಪಾಯಕ್ಕೆ ಯಾವುದೇ ತೊಂದರೆಯಾಗಲಿಲ್ಲ. 

ಶಂಕ್ರನ ಸಾವಯವ ಕೃಷಿಯ ಕೆಲಸ ಅಷ್ಟರಲ್ಲಾಗಲೇ ಊರು ದಾಟಿ ಬೆಂಗಳೂರಿನ ಸುತ್ತಮುತ್ತಲು ತಲುಪಿತ್ತು. ವ್ಯವಸಾಯ ತಂತ್ರಜ್ಞನ ಹೆಸರಿನಲ್ಲಿ ಸರ್ಕಾರಿಸ್ವಾಮ್ಯದಲ್ಲಿ ನಡೆಯುವ ಕಂಪನಿಗಳಿಗೆ ಆಹ್ವಾನ, ಅಲ್ಲಿ ವಿಚಾರ ವಿನಿಮಯ, ಕಾಲೇಜುಗಳಲ್ಲಿ ಪ್ರವಚನ, ಟಿವಿ ವಾಹಿನಿಗಳಲ್ಲಿ ಸಂದರ್ಶನ ಹೀಗೆ ದಿನವಿಡಿ ಬ್ಯುಸಿಯಾಗಿರುತ್ತಿದ್ದ ಶಂಕ್ರ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ. ಭಾರತ ಸರ್ಕಾರ ಇವನ ಕೆಲಸಕ್ಕೆ ಪ್ರಶಂಶಿಸಿ "ಅತ್ಯುತ್ತಮ ಬೇಸಾಯಗಾರ ಪ್ರಶಸ್ತಿ" ನೀಡಿತು, ರಾಜ್ಯ ಸರ್ಕಾರಕ್ಕೆ ಸಲಹೆಗಾರನಾಗಿಯೂ ಆಯ್ಕೆಯಾದ. ಇತ್ತ ಮಾವನಲ್ಲಿ ಇದ್ದ ಸಾಲಗಳನ್ನೂ ತೀರಿಸಿ ಋಣಮುಕ್ತನಾದ. ನೋಡ ನೋಡುತ್ತ ಪ್ರಪಂಚವೇ ಗುರುತಿಸುವಂತಾದನು.

ಶಂಕ್ರನ ಅಪ್ಪ-ಅಮ್ಮ ಚಿಕ್ಕ ಮಗನೊಂದಿಗಿನ ಸಂಬಂಧವನ್ನು ಪೂರ್ಣ ಬಿಡಿಸಿಕೊಂಡು ಬಂದಿದ್ದರು, ಅತ್ತ ಅವನ ಯಾವ ವಿಷಯಗಳೂ ಇವರುಗಳನ್ನ ಮುಟ್ಟುತ್ತಲೇ ಇರಲಿಲ್ಲ. 

ವಿದ್ಯೆ ನೈವೇದ್ಯ, ನಡೆ-ನುಡಿಯಲ್ಲೂ ಸಭ್ಯತೆಯನ್ನು ಕಳೆದುಕೊಂಡು, ಊರ ತುಂಬಾ ಪೋಲಿ ಹುಡುಗರ ಸಂ ಕಟ್ಟಿಕೊಂಡು ಓಡಾಡುತ್ತಲಿದ್ದನು. ಸಂಬಂಧಗಳು ಮೌನವಾಗಿವೆ ತಾವೇ ಮಾಡಿಕೊಂಡ ಬೇಲಿಗಳಿಂದ.  
-------

ಶಂಕ್ರನ ಅಮ್ಮ ತೋಟದ ಬೇಲಿ ನುಗ್ಗಿ  ಬಂದಿದ್ದ ಹಸುಗಳನ್ನು ಓಡಿಸಲು ಹೋಗುತ್ತಾ, ಅಲ್ಲೇ ಪಕ್ಕದ ಜಮೀನಿನಲ್ಲಿ ಎದ್ದಿದ್ದ ಕಂಪನಿಯ ಬಾಗಿಲು ಕಾಯುವವನ್ನು ಗದರುತ್ತಾಳೆ. "ಏನಯ್ಯಾ ಕಣ್ಣು ಕಾಣ್ಸೋಲ್ವಾ  ಈ ಹಸುಗಳು ಬೇಲಿ ನುಗ್ಗಿ ಬರುವಾಗ ಸ್ವಲ್ಪ  ಗದರಿ ಕಳ್ಸೋದಲ್ವಾ , ನಾವು ಕಷ್ಟಪಟ್ಟು ಬೆಳೆದಿರುವುದನ್ನೆಲ್ಲ  ನಾಶ ಮಾಡಿಬಿಟ್ಟವು. ನಿಮಗೇನು ಗೊತ್ತಾಗುತ್ತೆ ತಿಂಗಳ ತಿಂಗಳ ಸಂಬಳ ಎಣಿಸಿಕೊಳ್ಳೋ ಜನ, ಬಡ ರೈತರ ಕಷ್ಟ ಎಲ್ಲಿ ಗೊತ್ತಾಗ್ಬೇಕು ಹೇಳು ಮತ್ತೆ...! ನಾವು ಅಚ್ಚುಕಟ್ಟಾಗಿ ಎಲ್ಲರೂ ಭೂಮ್ ತಾಯಿ ಕೆಲಸ ಮಾಡೋ ಜನರಿಂದ ನಿಮ್ಮ ಕಂಪನಿಯವರು ನಮ್ಮ ಆಸ್ತಿಯನ್ನೆಲ್ಲಾ ಕಿತ್ತುಕೊಂಡರು, ಈಗ ಇರೋ ಭೂಮಿಗಳಿಗೂ ಉಳಿಗಾಲವಿದಂತೆ ಮಾಡೋ ಮಸಲತ್ತು. ಯಾವೋ ಹಸುಗಳನ್ನ ನಮ್ಮ ಹೊಲಕ್ಕೆ ಬಿಟ್ಟು ಮೇಯಿಸಿ ಎಡವಟ್ಟು ಮಾಡೋದು, ರಾತ್ರಿ ಹೊತ್ತು ನಿಮ್ಮ ಫ್ಯಾಕ್ಟರಿ ಜನ ಬಂದು ಹಲಸು, ಮಾವು, ತರಕಾರಿಗಳನ್ನ ಕದ್ದುಕೊಂಡು ಹೋಗೋದು. ಇದೆಲ್ಲಾ ನೀವುಗಳೇ ಮಾಡ್ತಾ ಇರೋ ಮಸಲತ್ತು" ಒಂದೇ ಸಮನೇ ಲಕ್ಷ್ಮಮ್ಮ ಬಡಬಡಾಯಿಸುತ್ತ ಜಮೀನಿನ  ಬೇಲಿ ದಾಟಿ ಹೊರಬಂದು  ಫ್ಯಾಕ್ಟರಿ ವಾಚ್ಮನ್  ಹತ್ತಿರ ಹೋಗುತ್ತಿದ್ದಂತೆ, ತನ್ನ ಮುಖವನ್ನ ವಾಚ್ಮನ್ ಅತ್ತ ತಿರುಗಿಸಿಕೊಳ್ಳುತ್ತಾನೆ.   

"ಮುಖ ಯಾಕ್ ಆ ಕಡೆ ಮಾಡ್ತೀಯಾ ಮಾತಾಡು ಈ ಕಡೆ" ಎನ್ನುತ್ತಾ ಹತ್ತಿರಕ್ಕೆ ಹೋದ ಲಕ್ಷ್ಮಮ್ಮನಿಗೆ ಮಾತೆ ಹೊರಡುತ್ತಿಲ್ಲ. ತಲೇ ತಗ್ಗಿಸಿ  ನಿಂತ್ತಿದ್ದ ವಾಚ್ಮನ್ನನ್ನೇ ದಿಟ್ಟಿಸಿ ನೋಡುತ್ತಾ "ಈ ಖಾಕಿದಾರಿ ನನ್ನ  ಕಿರಿಮಗ ಇದಾಂಗೆ ಇದ್ದಾನಲ್ಲಾ" ಹೇ ಅವನಲ್ಲ ಅವನ್ಯಾಕೆ ಇಲ್ಲಿ ಬರ್ತಾನೆ?" ಎಂದುಕೊಂಡರೂ,  ವಾಸ್ತ ವ   ಮಾತ್ರ ಬೇರಿಯಾಗಿತ್ತು. "ಆಸ್ತಿ ಮಾರಿದ್ದರ ಫಲ ಅದೇ ಫಾಕ್ಟರಿಯಲ್ಲಿ ಗುಲಾಮನ ಕೆಲಸ, ಜಮೀನ್ದಾರ ಈಗ ಗುಲಾಮನಾಗಿದ್ದ"  ಹಿಂದಿನದನ್ನೆಲ್ಲಾ ನೆನೆದು ಲಕ್ಷ್ಮಮ್ಮನಿಗೆ  ಚಿಕ್ಕ ಮಗನ ಮೇಲೆ ಕೋಪ ಉಕ್ಕರಿಸುತ್ತಿತ್ತು. ಮಸುಕಾಗಿ  ಕಾಣುವ ಕಣ್ಣುಗಳು ಮತ್ತಷ್ಟು ಕಂಬನಿಯಿಂದ ಮಬ್ಬಾಗಿಬಿಟ್ಟಿತ್ತು, ತೇವದ ರೆಪ್ಪೆಗಳನ್ನು ಒರೆಸುತ್ತಾ ಮೌನಕ್ಕೆ ಶರಣಾಗಿ ಮನೆಯತ್ತ  ಹೊರಟಳು.

ಇತ್ತ ರಾಜ ತನ್ನ  ತಪ್ಪುಗಳನ್ನ ಮೆಲುಕು ಹಾಕುತ್ತ ನಿರಾಶಾಭಾವದಲ್ಲಿ "ಇದ್ದ ಒಂದು ಎಕರೆ ಜಮೀನನ್ನು ಯಾವುದೋ ಕಂಪನಿಗೆ ಮಾರಿ ತನ್ನದೇ ಜಮೀನಿನಲ್ಲಿ ಕಟ್ಟಿದ ಫ್ಯಾಕ್ಟರಿಯಲ್ಲಿ ವಾಚ್ಮನ್ ಕೆಲಸ ಕೊಟ್ಟರು, ದಿನ ಬಾಗಿಲು ಕಾಯುತ್ತಾ ಅಯ್ಯೋ ನನ್ನದೇ ಜಾಮೀನು ಈಗ ಈ ಜನ ಬಂಗಾರ ಮಾಡಿಕೊಂಡು ದುಡಿತಾವ್ರೆ, ಲಕ್ಷ-ಕೋಟಿ ಸಂಪಾದನೆ ಮಾಡ್ತಾವ್ರೆ ಭೂಮಿತಾಯಿಯೂ ಇಲ್ಲ, ತ್ತ ನನ್ನದೇ ಸಂಬಂಧಗಳೂ ನನ್ನೊಂದಿಗೆ ಇಲ್ಲ. ಅಣ್ಣನ ಹತ್ತಿರ ಹೋಗಿ ಅವನಿಗೂ ಕೈಜೋಡಿಸೋ, ಮೈಮುರಿದೋ ಕೆಲಸ ಮಾಡಿದ್ದರೆ?! ನಾನು ಹೆಸರಿಗೆ ತಕ್ಕಂತೆ ರಾಜನಾಗೆ ಇರುತ್ತಿದ್ದೆ. ನನ್ನದೇ ಅಹಮ್ಮಿನ ಕೋಟೆಯಲ್ಲಿ ಹಣದ ಆಮಿಷಕ್ಕೆ ಬಲಿಯಾದೆ ಬೇಸಾಯವೂ ಇಲ್ಲ ಭೂಮಿಯೂ ಇಲ್ಲದಂತೆ ಮಾಡಿಕೊಂಡೆ ಭೂಮಿ ತಾಯಿ ಎಂದಿಗೂ ಮೋಸ ಮಾಡುವುದಿಲ್ಲ ಎಂಬುದಕ್ಕೆ ನನ್ನ ಅಣ್ಣನೇ ಸಾಕ್ಷಿ” ಎಂದು ಈಗ ರಾಜ ಪಶ್ಚಾತಾಪದ ಪರಮಾವಧಿಯಲ್ಲಿದ್ದಾನೆ.   

"ಮಣ್ಣಿನಹಾದಿ ಬಳಸಿದಷ್ಟು ಭಾವನೆಗಳನ್ನ ತೀರಿಸುತ್ತದೆ, ಬವಣೆಗಳನ್ನ ನೀಗಿಸುತ್ತದೆ.ಆದರೆ ಹಾದಿ ಮಾತ್ರ ಹಸನಾದ ಆಯ್ಕೆಗಾಗಬೇಕು
-ಅಂತಿಮ-

1 comment:

sunaath said...

ನಾಲ್ಕು ಭಾಗಗಳಲ್ಲಿ ಬಂದ ಈ ಕಥೆ ಮನದುಂಬುವಂತಿದೆ.