Monday, June 8, 2015

ಅವನಿಲ್ಲದಾ ಹೊತ್ತು - How Old Are You..?

ನಿನ್ನ ವಯಸ್ಸು ಎಷ್ಟು..?


 ನನ್ನವನಿಲ್ಲದ ಹೊತ್ತು, ಟಿವಿ ರಿಮೋಟ್ ಕೈನಲ್ಲಿಯೇ ಇತ್ತು, ಚಾನಲ್ ಬದಲಿಸಿ ಬದಲಿಸಿ ಸಾಕಾಯ್ತು ಬರಿ ಅದೆ ಅತ್ತೆ-ಸೊಸೆ ವೈಷಮ್ಯ, ಮಕ್ಕಳಾಗೋಲ್ಲ ಗಂಡನಿಗೆ ಡೈವರ್ಸ್ ಇದೆ ತರಹ ಸೀರಿಯಲ್ ನೋಡಿ ದೇವಾ..!! ಇನ್ನು ನಾವು ಯಾವ ಜಮಾನದಲ್ಲಿದ್ದೀವಪ್ಪ, ನಮ್ಮ ಜನರನ್ನ ನೀನೆ ಕಾಪಾಡಬೇಕಪ್ಪ ಎಂದು ಕೊಂಡು ಟಿವಿ ಸ್ವಿಚ್ ಆಫ್ ಮಾಡಿದೆ.  

ಬೆಳಗ್ಗೆಯಷ್ಟೆ ಕೇರಳದ ಗೆಳತಿಯ ಹತ್ತಿರ ಇತ್ತೀಚೆಗೆ ಮಲಯಾಳಂನ ಒಳ್ಳೊಳ್ಳೆ ಫಿಲ್ಮ್ ಗಳನ್ನು ನೋಡಿಲ್ಲ, ಸ್ವಲ್ಪ ಲಿಸ್ಟ್ ಕೊಡು ಅಂದೆ. ಅದರಲ್ಲಿ ೪-೫ ಹೆಸರುಗಳಿದ್ದರಲ್ಲಿ ನನ್ನ ಸೆಳೆದಿದ್ದು "How Old Are You" ಚಿತ್ರದ ಹೆಸರು. ಹೇಗೂ ನನ್ನವನಿಲ್ಲ ನನ್ನಷ್ಟಕ್ಕೆ ನಾನೆ How Old Are You ಎಂದುಕೊಂಡು ಯೂಟ್ಯೂಬ್ ನಲ್ಲಿ ಹುಡುಕಿ ಎರಡೂವರೆ ಗಂಟೆಗಳ ಕಾಲ ನನ್ನನ್ನು ಹಿಡಿದಿಟ್ಟಿದ್ದು ಮಾತ್ರ ಸುಳ್ಳಲ್ಲ.  

ಸುಮಾರು ೧೩-೧೪ ವರ್ಷಗಳ ನಂತರ ಮರಳಿ ನಟನೆಗೆ ಬಂದ ಮಂಜು ವಾರಿಯರ್ ಬಹಳಷ್ಟು ಇಷ್ಟವಾದಳು, ಪಾತ್ರ ಹೇಳಿ ಮಾಡಿಸಿದಂತ್ತಿತ್ತು. ಒಂದು ಹೆಣ್ಣು ತನ್ನೊಳಗಿನ ಸಾಮರ್ಥ್ಯವನ್ನೆಲ್ಲ ಹೂತಿಟ್ಟು ಗಂಡ ಮನೆ-ಮಕ್ಕಳು ಸಂಸಾರ ಇದೆ ಜೀವನ, ಇಷ್ಟೆ ಬದುಕು ಎಂದು ಬೇಲಿ ಹಾಕಿಕೊಂಡವಳ ಯಶೋಗಾಥೆ. 

ನಿರುಪಮ ರಾಜೀವ್ ಆಗಷ್ಟೆ ೩೬ನೇ ವಯಸ್ಸಿಗೆ ಕಾಲಿಟ್ಟಿರುವಳು. ಅವಳ ವಯಸ್ಸೆ ಅವಳ ಬೆಳವಣಿಗೆಗೆ ಅಡಚಣೆಯಾದಂತೆ ಕಾಣುತ್ತದೆ. ಸಾಮಾನ್ಯ ಸರ್ಕಾರಿ ಕೆಲಸದಲ್ಲಿ ಕ್ಲರ್ಕ್ ಆಗಿರುವವಳ ಗಂಡ ತನ್ನ ಮುಂದಿನ ಭವಿಷ್ಯವನ್ನು ಐರ್ಲ್ಯಾಂಡ್ ನಲ್ಲಿ ಸೃಷ್ಟಿಸಿಕೊಳ್ಳಲು ಹೊರಡು ವ ತಯಾರಿಯಲ್ಲಿದ್ದವ. ಅವನ ಜೊತೆ ತಾನು ಕೆಲಸ ಹುಡುಕಿ ಅವನೊಟ್ಟಿಗೆ ಹೋಗಬೇಕೆಂಬ ಆಸೆಯಲಿ ಐರಿಷ್ ಕಂಪನಿಯ ಕೆಲಸಕ್ಕೆ ಇಂಟರ್ವ್ಯೂಗೆ ಹೋದವಳಿಗೆ ವಯಸ್ಸಿನ ಅಡ್ಡಿ. ಐರ್ಲ್ಯಾಂಡ್ ಗೆ ಹೋಗುವ ಗಂಡನಿಗೆ ತೊಂದರೆಯಾಗುತ್ತೆಂದು, ಗಂಡ ಮಾಡಿದ ಆಕ್ಸಿಡೆಂಟ್ ನಲ್ಲಿ ತನ್ನ ಹೆಸರು ತೂರಿಸಿಕೊಳ್ಳುವಳು. 

ಒಂದು ಬೆಳಗ್ಗೆ ನಿರುಪಮಾಗೆ ಐಜಿ ಕಚೇರಿಯಿಂದ ಕರೆ ಮಾಡಿ ಭಾರತದ ರಾಷ್ಟ್ರಪತಿ ನಿಮ್ಮನ್ನು ಭೇಟಿ ಮಾಡಬೇಕೆಂದು ಬಯಸಿದ್ದಾರೆ. ಕಾರಣ ಮಗಳು ತನ್ನ ಶಾಲೆಯಲ್ಲಿ ರಾಷ್ಟ್ರಪತಿಗಳನ್ನ ಕೇಳಿದ ಪ್ರಶ್ನೆ. ಭೇಟಿಗೂ ಮುನ್ನ ಅವಳನ್ನ ಗುರುತಿಸಿದ ಜನರೆ ಹೆಚ್ಚು. ಅದೇ ಖುಷಿಯಲ್ಲಿ ಪ್ರಧಾನಮಂತ್ರಿಗಳನ್ನ ಭೇಟಿ ಮಾಡಿದ್ದೇ ಒಂದು ದೊಡ್ಡ ದುರಂತ. ಅದಾದ ಮೇಲೆ ಎಲ್ಲೆಡೆ ನಗೆಪಾಟಲಿಗೆ ಈಡಾಗುತ್ತಾಳೆ. ಸಾಮಾಜಿಕ ತಾಣಗಳಲ್ಲಿ ಕಾರ್ಟೂನ್ ಆಗುವಳು. ಇದೇ ಕಾರಣಕ್ಕೆ ಅವಮಾನಗಳನ್ನ ಎದುರಿಸಿದ ಮಗಳು ಅಮ್ಮನನ್ನ ಕೀಳಾಗಿ ನೋಡುವುದು, ಗಂಡನ ಸ್ವಾರ್ಥ, ನಿರ್ಲಕ್ಷ್ಯತನ ಇದೆಲ್ಲವನ್ನು ಅನುಭವಿಸುತ್ತಿದ್ದ ನಿರುಪಮ ಇದ್ದಕ್ಕಿದ್ದಂತೆ ಗಂಡ-ಮಗಳು ಐರ್ಲ್ಯಾಂಡ್ ಗೆ ಹೊರಟು ನಿಂತಾಗ ಕುಗ್ಗಿ ಹೋಗುತ್ತಾಳೆ. 

ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಂಡು, ಅದೇ ಸರ್ಕಾರಿ ಕೆಲಸ,  ಜೊತೆಗೆ ಆಗೊಮ್ಮೆ ಈಗೊಮ್ಮೆ ಸ್ಕೈಪ್ ನಲ್ಲಿ ಮಗಳ ಜೊತೆ ಒಡಾನಾಟ, ಅಷ್ಟೇ ಜೀವನ. ಇವೆಲ್ಲದರ ಮಧ್ಯೆ ತನ್ನ ಹಳೆಯ ಗೆಳತಿ ಸೂಸನ್ ಭೇಟಿ. ಅವಳು ನೀಡಿದ ಧೈರ್ಯ ಕಾಲೇಜಿನಲ್ಲಿ ನಿನ್ನಲ್ಲಿದ್ದ ಹೋರಾಟದ ಕಿಚ್ಚು ಈಗಲೂ ಇರಲಿ, ಆಗಿನ ಧೈರ್ಯ ಹುಮ್ಮಸ್ಸು ಈಗೆಲ್ಲಿ ಹೋಯಿತು, ಅದನ್ನ ಅಲ್ಲೇ ಸುಟ್ಟುಹಾಕಿದ್ದೀಯಾ? ಈಗಲೂ ಕಾಲ ಮಿಂಚಿಲ್ಲ ಬದುಕಿನಲ್ಲಿ ಯಾವ ವಯಸ್ಸಿನಲ್ಲಾದರೂ ಆಸೆಗಳಿಗೆ ರೆಕ್ಕೆ ಕಟ್ಟಬಹುದು. ಜೀವನ ಎಂದಿಗೂ ಹೊಸತನವನ್ನ ಸೃಷ್ಟಿಸುತ್ತದೆ. ವಯಸ್ಸು ಯಾವುದಾದರೇನು ನಮ್ಮ ಕನಸಿಗೆ ನಾವೇ ಸಹಿ ಹಾಕಬೇಕು 'Your dream is your Signature' ಇದೊಂದು ಮಾತು ನಿರುಪಮಳಲ್ಲಿ ಮನಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇದಾದ ನಂತರ ಎಲ್ಲವೂ ಬದಲಾವಣೆಯ ಹಾದಿ.

ಮನೆಯ ಮಹಡಿಯ ಪುಟ್ಟ ಕೈತೋಟ ಮುಂದೊಂದು ದಿನ ದೇಶವೇ ಗುರುತಿಸುವಂತೆ ಮಾಡುವ ಕಥೆ. ಗಂಡ ಮತ್ತು ಮಗಳು ಅವಳ ಸಾಮರ್ಥ್ಯವನ್ನು ಗುರುತಿಸುವ ದಿನ ಹತ್ತಿರವಾದಾಗ ಹೆಂಡತಿಯಲ್ಲಿನ ಸಂತಸ. ನನ್ನಿಂದ ಏನೂ ಸಾಧ್ಯವಿಲ್ಲ ಎಂದುಕೊಂಡವಳಲ್ಲಿ ಸಾಧಿಸುವ ಛಲ ಕಾಣುವ ಚಿತ್ರ.  

ಎಷ್ಟೋ ಜನ ಗಂಡಂದಿರು ಹೆಂಡತಿಯರನ್ನ ಕೀಳಾಗೆ ಕಾಣುತ್ತಾರೆ. ಅವಳಿಂದ ಏನು ಸಾಧ್ಯ, ಅಯ್ಯೋ ನಿನ್ನ ಕೈಲಿ ಏನಾಗುತ್ತೆ.. ನೀನಿನ್ನು ಹಳೆ ಕಾಲದವಳು ಎಂದು ಹೀಯಾಳಿಸಿ ಆ ಹೆಣ್ಣಿನಲ್ಲಿರುವ ಸಾಮರ್ಥ್ಯವನ್ನೆ ಮೂಲೆಗುಂಪು ಮಾಡುತ್ತಾರೆ. ಅಂತವರು ನೋಡಲೆ ಬೇಕಾದ ಚಿತ್ರ.
ವಯಸ್ಸು ಎಷ್ಟಾದರೇನು ಸಾಧನೆಯ ಹಾದಿ ಸದಾ ಹಸಿರಾಗಿರುತ್ತದೆ. ಹೆಣ್ಣಿನ ಸಬಲೀಕರಣ,  Organic farming ಮತ್ತು ಅದರ ಅನುಕೂಲ ಇವೆಲ್ಲವನ್ನು ಬಿಚ್ಚಿಡುತ್ತಾ ಹೆಣ್ಣಿನ ಭಾವುಕತೆಯ ತುಮುಲಗಳ ಚಿತ್ರ ಎಲ್ಲರಿಗೂ ಸ್ಪೂರ್ತಿದಾಯಕ.

ರೋಷನ್ ಆಡ್ರೀವ್ಸ್ ಅವರ ಅತ್ಯುತ್ತಮ ನಿರ್ದೇಶನ ಈ ಚಿತ್ರವನ್ನು ನೋಡಿ ನೀವು? ನಿಮ್ಮೊಳಗಿನ ಸಾಮರ್ಥ್ಯವನ್ನ ಗುರುತಿಸಿಕೊಳ್ಳಿ. ಭಾಷೆಯಾವುದಾದರೇನು ಒಳ್ಳೆಯದು ಎಂದಾದರೆ ಖಂಡಿತಾ ಆಹ್ವಾನಿಸಿ ಆಹ್ಲಾದಿಸಿ. 

 https://www.youtube.com/watch?v=sbNAvwI4w8w  

Saturday, May 2, 2015

ಹುಟ್ಟು ಹಬ್ಬಕ್ಕೊಂದು ಆಶಯ

Every step, innovative
with chain of desires
as you step in with,
no dearth of dreams

Let  peak the worthy dreams
Like a store of grains
Lets  you know its price
Build a living and its efforts

Foul surrounds you
a pure soul faces it
to possess  the power
a lightening can lit

As you climb the steps of age
World of energy you have
and be aligned with dreams
and goodness to side with love
                 
-----

ಹೆಜ್ಜೆ ಹೆಜ್ಜೆಗೂ ಹೊಸತನದ
ಆಸೆಗಳ ಸರಮಾಲೆಯಲಿ
ನಡೆವ ನಿನ್ನೊಳು
ಕನಸುಗಳಿಗೇನು ಬರವಿಲ್ಲ

ಯೋಗ್ಯ ಕನಸುಗಳು ಶಿಖರವಾಗಲಿ
ಕಟ್ಟಿದ ಬುತ್ತಿಯಂತೆ
ಅದರ ಬೆಲೆ ಅರಿವಿರಲಿ
ಬದುಕು ಕಟ್ಟುವ ಶ್ರಮ ತಿಳಿದಿರಲಿ

ಹೊಲಸು ನಮ್ಮ ಸುತ್ತಲಿದೆ
ಅದನು ಎದುರಿಸುವ
ಶುದ್ಧ ಮನಸಿಗೆ
ಕತ್ತಲಲೂ ಮಿಂಚಿನ ಬಲವಿದೆ

ವಯಸ್ಸಿನ ಮೆಟ್ಟಿಲು ಹತ್ತುತಾ
ಪ್ರಪಂಚದ ಶಕ್ತಿ
ಅದರೊಡನೆ ಬೆರೆವ ಕನಸು
ಶ್ರೇಷ್ಟವಾಗಿರಲಿ, ಒಲುಮೆಯ ಪರವಿರಲಿ
                    
ಮಗನ ಹುಟ್ಟು ಹಬ್ಬಕ್ಕೊಂದು ಆಶಯ....

Done in Pixlr

Tuesday, March 31, 2015

ನಿನ್ನ ನೋಡಿ ಕಲಿಯಬೇಕಿದೆ ಗುರುದೇವಾ..!!

ಮನಸಿನೊಡಲಾಳವ ಹಿಡಿದಿಡುತ
ಸ್ವಾರ್ಥತವ ದೂರವಿಟ್ಟು
ಬದುಕು ಸವೆಸುವುದೆಂದರೆ
ನಿನ್ನ ನೋಡಿ ಕಲಿಯಬೇಕಿದೆ 

ಬೆಂಗಾಡು ಭೂಮಿಯಲಿ ಬೆವರು ಸುರಿಸಿ  
ಪುಣ್ಯಕ್ಷೇತ್ರ ಕಟ್ಟಿದ ದೊರೆಯೇ
ನಿನ್ನ ಋಣದಲಿ ಬದುಕು ಸಾಗಿಸುತ
ನೆಮ್ಮದಿಯ ನೆಲೆ ಕಂಡವರು ಸಾವಿರಾರು

ಪ್ರತಿಫಲವೆನದೆ ಬಡವ-ಬಲ್ಲಿದನೆನದೆ
ಅಂಗಿ-ಅನ್ನಕೆ ದಾನಿಯಾಗಿ 
ವಿದ್ಯೆ-ಬುದ್ಧಿಗೆ ಗುರುವಾಗಿ  
ಆವರಿಸಿದ ಕತ್ತಲೆಗೆ ಬೆಳಕು ನೀ

ಹರಯದಲಿದ್ದ ಹುಮ್ಮಸ್ಸು ಇಂದಿಗೂ ಅದೇ ತೇಜಸ್ಸು
ಜಾವಕೇ ಎಚ್ಚರ ಬೆರೆವ ಮನಗಳಿಗೆ ಬಲು ಹತ್ತಿರ
ನಿನ್ನೊಳಗಿನ ಅರಿವು ಮೊಗೆದಷ್ಟು ಮುಗಿಯದ ಸರೋವರ  
ಅರಿತಷ್ಟೂ ನೀ ಶಿಖರದಂತೆ ಎತ್ತರ   

ನಿನ್ನ ಶ್ರಮದ ನಡಿಗೆ ಸಿದ್ದಗಂಗೆಯ ಮುಡಿಗೆ
ಅಂದು ನೀ ಹಿಡಿದ ಭರವಸೆಯ ಜೋಳಿಗೆ
ಈಗಲೂ ದಿನಂಪ್ರತಿ ತುಂಬುತ್ತಿದೆ 
ಅದು ಶ್ರೀಕ್ಷೇತ್ರಕೆ ನೀ ನೀಡಿದ ಕೊಡುಗೆ

ದೇವ ನಿನ್ನ ಈ ನೂರ ಎಂಟು 
ಬಯಲೊಳಗೆ ಆಸೆಗಳನು ಬೆತ್ತಲಾಗಿಸಿ
ನಾಡಿಗೆ ನೀ ಬೆಳೆಸಿದ ನಂಟು 
ಎಂದೂ ಕಳೆದುಕೊಳ್ಳಲಾರದಂತಾ ಗಂಟು 

ನೆಲ ನಾಡು ಜನ ಮನ ಕಾಯಕ 
ಎಲ್ಲವನು ಗೆಲುವುದೊಂದು ಧ್ಯಾನ
ಹೊಗಳಿಕೆ ಸನ್ಮಾನಗಳ ಬದಿಗಿಟ್ಟು
ಕೈಂಕರ್ಯದಲಿ ಸದಾ ತಲ್ಲೀನ 

ನಿನ್ನ ಆ ಮಿಂಚು ನೋಟ ಮಲ್ಲಿಗೆಯ ನಗು
ದಿಟ್ಟ ಹೆಜ್ಜೆ ಬಾಗಿದ ಬೆನ್ನಿನಲೂ ಹಲವು ಬಗೆ
ಕಾಣದ ದೇವರನು ಹುಡುಕಿದರೆ ಸಿಗುವ ನೀ
 ಅಲ್ಲಮನು ಕಂಡ ಗುಹೇಶ್ವರನೇ ಸೈ...!!!  

ಸದಾ ಒಳಿತನ್ನೇ ಬೆಳಸುತ್ತಾ, ಬೆಳಕಾಗಿರುವ ಶ್ರೀಗಳಿಗೆ ೧೦೮ನೇ ಹುಟ್ಟುಹಬ್ಬ ಹಾರ್ದಿಕ ಶುಭಾಶಯಗಳು... ಆಯಸ್ಸು ಅಕ್ಷಯವಾಗಲಿ... ಬಡವರಿಗೆ ನಿನ್ನೊಲುಮೆ ಸದಾ ದೊರಕಲಿ.

Tuesday, January 13, 2015

ನೋ ನೋ ನೋವು



ಅಯ್ಯೋ ಶಿವ್ನೇ ಇತ್ತ ಹೊರಳಿದರೆ 
ಯಾಕೋ ಚುಳ್ ಎನ್ನುತಿದೆ ಈ ಮಂಡಿ
ನಾನೇನು ಕಮ್ಮಿ ಶಕ್ತಿ ಇದೆ
ಮೊಂಡು ಮಾಡಿ ಮಂಡಿ ಮಡಚಿ ಕೂತೆ  
ಏಳುವಾಗಲೇ ಗೊತ್ತಾಗಿದ್ದು
ಅಮ್ಮಮ್ಮಾ ಅಪ್ಪಾ! ಈ ನೋವು ಯಾಕೆ ಎಂದು...

ಅಯ್ಯೋ ಇಲ್ಲಿ ಕಸ ಇಷ್ಟೊಂದು ಇದೆ
ಗುಡಿಸೋಣ ಅಂತಾ ಬಗ್ಗಿದೆ ನೋಡಿ
ಯಾಕೋ ಈ ಸೊಂಟ ಕಳ್ಕ್ ಅನ್ನುತಿದೆ
ಯಪ್ಪಾ ವಯಸ್ಸಾಯಿತಾ ಎಂದು
ಹುಟ್ಟಿದ ವರ್ಷ ಲೆಕ್ಕ ಹಾಕಿದೆ
ಇಲ್ಲಾ ಇನ್ನೂ ನಲವತ್ತು ದಾಟಿಲ್ಲ...

ಈಗ್ಲೇ ಹಿಂಗಾದ್ರೇ ಹೆಂಗೇ ದೇವ್ರು
ನಾನು ಕಾಶಿ-ರಾಮೇಶ್ವರ ಸುತ್ತೋದು ಹೇಗೆ
ವೈಷ್ಣೋದೇವಿಯನ್ನ ನಡಿಗೆಯಲಿ ಸಾಗಿ
ಮಾನಸ ಸರೋವವರನ್ನ ಮುಟ್ಟಿ
ಆ ಶಿವನ ಸಾನಿಧ್ಯದಲಿ ಮಂಜಾಗಿ ಕರಗದೆ
ಇನ್ನೊಂದಷ್ಟು ಪುಣ್ಯಕ್ಷೇತ್ರ ನೋಡುವಾಸೆ...

ಪರದೇಶ ಸುತ್ತುವ ಆಸೆಯಿಲ್ಲ ಸ್ವಾಮಿ
ನನ್ನ್ ದೇಶ ಸ್ವರ್ಗದ ಬೀಡು
ಆ ಕಲ್ಲು ಬಂಡೆಗಳಲಿ ಪ್ರಕೃತಿಯ ಮಡಿಲಲ್ಲಿ
ಒಂದಿಷ್ಟು ಹೆಜ್ಜೆ ಹಾಕುತ್ತ
ಒಂದಷ್ಟು ಇತಿಹಾಸ, ಚರಿತ್ರೆಗಳ ಮೆಲುಕು ಹಾಕಿ
ಭಾವ ಭಕ್ತಿ, ಜೀವನ ಶೈಲಿ ಅರಿಯುವಾಸೆ

ಈ ಚಳಿಗೆ ಕೈ ಕಾಲು ಹಿಡಿದು ಬಿಟ್ಟಿವೆ
ಹೆಜ್ಜೆ ಮುಂದೋಗುತ್ತಿಲ್ಲ ಅದ್ಯಾವ ದೇಹ ನಂದು
ಆಗೆಲ್ಲ ನಮ್ಮ ಹಿರಿಯರು ಮುದ್ದೆ, ಬಸ್ಸಾರು ಉಂಡು
ಗಟ್ಟಿ ಮೈಕಟ್ಟಿನಲಿ ಹೊಲಗದ್ದೆಗಳಲಿ ಮಿಂದು
ರಾಶಿ ಹಾಕುತ್ತಿರಲಿಲ್ಲವೇ..??
ಈಗ್ಯಾವ ಕೆಲಸ ಕಟ್ಟಿ ಹಾಕುತ್ತೇನೇ ಸ್ವಾಮಿ
ಈ ಸೋಮಾರಿ ಮಯ್ಯಿ ತಿರುಗಿದರೂ ನೋವು
ಕೂತರೂ ನಿಂತರೂ ನೋವೇ ನೋವು

ಮುಂದೆ ಕೂತಲ್ಲೇ ಕೈಲಾಸ ಸ್ವಾಮಿ
ಯಾವ ಪುಣ್ಯಕ್ಷೇತ್ರಗಳೂ ನನ್ನತ್ತ ಸರಿಯೋಲ್ಲ
ನಾನೇ ಕೂತಲ್ಲಿ ಕೈಮುಗಿದು
ಯೂಟೂಬ್ ನಲ್ಲೇ ಕೈಲಾಸ ಕಂಡು
ಆ ಮಾದೇಸ್ವರನಿಗೆ ದೀರ್ಘದಂಡವೇನೋ ಗೊತ್ತಿಲ್ಲ
ಅದ್ದುಪದ್ದು ಇಲ್ಲದ ಈ ನೋವಿಗೆ
ರುದ್ರನ ಮಂತ್ರ ಜಪಿಸಲು ರುದ್ರಾಕ್ಷಿ ತರಿಸಿಕೊಳ್ಳುವೆ
ಆಗಲಾದರೂ ಮುಕ್ತಿ ಸಿಗುವುದೇನೋ ಕಾಣೇ
ಈ ಬೆಂಬಿಡದ ನೋ..ನೋ ನೋವಿಗೆ..!! :) :)


Saturday, November 15, 2014

ಮಕ್ಕಳಾಗಿರವ್ವಾ ಮನ ತುಂಬಿ...!!

ಬಾಲ್ಯ ಮರುಕಳಿಸುವುದಿಲ್ಲ, ಮಕ್ಕಳನ್ನು ಕಂಡಾಗ ನಾವೂ ಅವರೊಂದಿಗೆ ಬೆರೆತಾಗ ಬಾಲ್ಯ ಮರುಕಳಿಸುವ ಸಾಧ್ಯತೆ ಇದೆ. ಹೌದು ನೆನ್ನೆ ಮಕ್ಕಳ ದಿನಾಚರಣೆ ಆದ್ದರಿಂದ ಕುವೈತಿನಲ್ಲಿ ನಡೆಯುವ ಕನ್ನಡ ಶಾಲೆ "ಚಿಗುರು ಬಳ್ಳಿ" ಮಕ್ಕಳೆಲ್ಲಾ ಸದಾ ಮನೆಯೊಳಗೆ ಕುಳಿತು ಸದಾ ನಾಲ್ಕು ಗೋಡೆಯ ಮಧ್ಯೆ ಓದುವುದಕ್ಕಿಂತ, ಅಲ್ಲೇ ಹತ್ತಿರದ ಉದ್ಯಾನವನದಲ್ಲಿ ಒಂದೆರಡು ಘಂಟೆಗಳ ಕಾಲ, ಆಟ-ಪಾಠ ಎರಡೂ ನಡೆಯಲೆಂದು ಕೊನೆ ಘಳಿಗೆಯಲ್ಲಿ ಸಂಧ್ಯಾ ಅರುಣ್ ನಿರ್ಧಾರ ಮಾಡಿದ್ದರು.  

ಸ್ವಲ್ಪ ತಣ್ಣನೆಯ ವಾತಾವರಣ, ಮಕ್ಕಳು ಬರುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲೇ ನಾನು ನನ್ನವರು ಮಾತನಾಡುತ್ತ ಹೋಗುತ್ತಿದ್ದೆವು. ಒಬ್ಬೊಬ್ಬರಾಗಿ ಅಪ್ಪಂದಿರು ತಮ್ಮ ಮಕ್ಕಳನ್ನು ಕರೆದುಕೊಂಡು ಬಿಡುತ್ತಿದ್ದರೆ..!! ಮಕ್ಕಳಲ್ಲಿನ ಹುಮ್ಮಸ್ಸು, ಅಪ್ಪಂದಿರಲ್ಲಿದ್ದ ಸಂತಸ ಎಲ್ಲವೂ ನಮ್ಮ ಅನುಮಾನವನ್ನು ದೂರ ಮಾಡಿತ್ತು. 



ಮೊದಲೇ ಪಾರ್ಕ್ ಎಂದರೆ ಕೇಳಬೇಕಾ..? ವಾರಾಂತ್ಯ ಪೂರ ಮಜವಿರುತ್ತೆ ಎಂದು ಫುಲ್ 'ದಿಲ್ ಖುಷ್ ' ನಮ್ಮ ಮಕ್ಕಳು, ಇನ್ನು ಮಕ್ಕಳು ಬರುವರಿದ್ದರು ಅಷ್ಟರಲ್ಲಾಗಲೇ ಬಂದಿದ್ದ ಮಕ್ಕಳು ಆಟ ಶುರುಹಚ್ಚಿಕೊಂಡಿದ್ದರು, ಪಾಠ ಇರುವುದಿಲ್ಲ ಬರಿ ಆಟ ಇರಬೇಕು ಎಂದುಕೊಂಡಿದ್ದರೇನೋ ಪಾಪಾ..!! ಬನ್ನಿ ಮಕ್ಕಳ ಕುಳಿತುಕೊಳ್ಳಿ ಅಂದ್ರೇ "ಓಹ್ ಆಟ ಇಲ್ವಾ ಆಂಟಿ... ಪ್ಲೀಸ್ ಸ್ವಲ್ಪ ಆಟವಾಡ್ತೀವಿ" ಎಂದು ಕೇಳುತ್ತಿದ್ದರು.

ಮೊದಲು ಪಕ್ಕಾ ಇಂಗ್ಲೀಷ್-ಕನ್ನಡದ ಗಣಪತಿ ಹಾಡಿನಿಂದ ಸ್ವಲ್ಪ ಮಕ್ಕಳ ಗಮನ ಪಾಠದತ್ತ ಗಮನ ಸೆಳೆಯಲು  ನಮ್ಮ ಅರುಣ್ ಅವರು ಹೇಳಿಕೊಟ್ರು. ಆನಂತರ ಮಕ್ಕಳ ದಿನಾಚಾರಣೆ ಆದ್ದರಿಂದ ನಿಮ್ಮ ಆಸೆ ಏನಿದೆ ಹೇಳಿ ಮಕ್ಳಾ ಅಂತಾ ಸಂಧ್ಯಾ ಅವರು ಕೇಳಿದ್ರೆ, ಒಬ್ಬೊಬ್ಬರದೂ ಒಂದೊಂದು ಆಸೆ ನನಗೆ ಮೊಬೈಲ್ ಬೇಕು, ಆ ಆಟಿಕೆ ಬೇಕು, ವಿಡಿಯೋ ಗೇಮ್ ಬೇಕು, ನಾನು ಆಟ ಆಡ್ಬೇಕು, ನಾನು ಕನ್ನಡ ಚೆನ್ನಾಗಿ ಕಲಿಬೇಕು, ಕನ್ನಡ ಓದೋದು ಕಲಿಬೇಕು ಹೀಗೆ ಹಲವಾರು ಆಸೆ ಹಂಚಿಕೊಂಡ್ರು. ಅಲ್ಲೇ ಇದ್ದಾ ನಮ್ಮ ರಾಜೀವ್ ಅವರು ಮಕ್ಕಳೊಂದಿಗೆ ಮಾತಿಗೆ ಶುರುವಿಟ್ಟರು ಕನ್ನಡದ ಅಂಕಿಗಳು ಗೊತ್ತಾ ಅಂದಿದ್ದೇ ತಡಾ... ಒಂದು, ಎರಡು, ಮೂರು.......... ಹತ್ತು ..... ಸಾವಿರ ಹೀಗೆ.  ನಿಲ್ಲಿಸಿ ಮಕ್ಕಳ ಸಾಕು ಎಂದರೂ ಬಿಡದೆ ಕೋಟಿವರೆಗು ಕನ್ನಡ ಅಂಕಿ ಹೇಳುವಷ್ಟು ಹುಮ್ಮಸ್ಸಿನಿಂದಿದ್ದರು. ನಂತರ ನಾನು ಇಂಗ್ಲೀಷ್ ನಲ್ಲಿ ಮಾತು-ಕತೆ ನಡೆಸಿದ್ದನ್ನು ಕನ್ನಡದಲ್ಲಿ ಹೇಳಿ ಮಕ್ಕಳಾ ಅಂದ್ರೇ ಅಬ್ಬಾ...!! ಆಶ್ಚರ್ಯವಾಗುತ್ತೇ ಪಕ್ಕಾ ಕನ್ನಡ ಭಾಷೆಯನ್ನೇ ಬಳಸಿ ಮಾತನಾಡಿದ್ರು ಗೊತ್ತಾ..!!. 

                

ಇಷ್ಟೆಲ್ಲಾ ಆಯ್ತು ಇನ್ನೇನು ಮುಗಿತು ಆಟಕ್ಕೆ ಹೋಗಬಹುದು ಅಂದುಕೊಂಡ್ರೆ ಛೇ..!! ಪೇಪರ್ ತಗೊಳ್ಳಿ ಬರಿರಿ, ನಾವು ಹೇಳಿದ್ದನ್ನ ಅನ್ನೋದೇ ಈ ಸಂಧ್ಯಾ ಆಂಟಿ, ಸರಿ ಎಲ್ಲರೂ ಪೇಪರ್ ಪೆನ್ಸಿಲ್ ತೆಗೆದ್ರು, ಅಗಸ, ಗರಗಸ, ಸರ, ಘಂಟೆ, ಎಲ್ಲಾ ನಾವು ಒಂದು ವರ್ಷದ ಹಿಂದೆ ಹೇಳಿಕೊಟ್ಟ ಪದಗಳನ್ನೆಲ್ಲ ಬರೆದಿದ್ದು ನೋಡಿ ನನಗೆ ನಿಜಕ್ಕೂ ಖುಶಿ ಆಯ್ತು... ಸುಳ್ಳು ಅಂದುಕೋಬೇಡಿ ನೋಡಿ ಇಲ್ಲಿ ಅವರ ಮುದ್ದಾದ ಅಕ್ಷರಗಳು ಹೇಗಿ ನಿಜ ಹೇಳ್ತಾ ಇವೆ.


ಈ ಚಿತ್ರ ಸ್ವಲ್ಪ ದೊಡ್ಡದು ಮಾಡಿ ನೋಡಿ... ಮುದ್ದಾದ ಅಕ್ಷರಗಳನ್ನು.. 

ಮತ್ತೊಂದು ವಿಷಯ ಹೇಳಲೇಬೇಕು, ಇಲ್ಲಿನ ಎಷ್ಟೋ ಮಕ್ಕಳಲ್ಲಿ ಕನ್ನಡ ಮಾತೃಭಾಷೆ ಅಲ್ಲದಿದ್ದರೂ, ಇಷ್ಟು ಚೆನ್ನಾಗಿ ಕನ್ನಡ ಕಲಿಯುತ್ತಿದ್ದಾರೆ. - ಇದು ನಮಗೆಲ್ಲಾ ಹೆಮ್ಮೆಯ ವಿಷಯ.



               

ಅದಾಗಲೇ ೩೦ನೇ ಪದ ಬರಿರಿ ಮಕ್ಕಳಾ ಅಂದ್ರೇ ಇಲ್ಲೊಬ್ಬ ನಮ್ಮ ಪುಟ್ಟ ಪೋರಾ ಹೇಳಿದಾ... ಏನಿದು ಇವತ್ತು ಚಿಲ್ಡ್ರನ್ಸ್ ಡೇ ನಾ..!! ರೈಟಿಂಗ್ ಡೇ ನಾ ಅಂತಾ ಹಹಹ, ನನಗೆ ನಗು ತಡೆಯಲಾಗಲಿಲ್ಲ.... ಇವತ್ತು ಎರಡೂ ದಿನ ಸ್ವಲ್ಪ ಹೊತ್ತು, ಆಮೇಲೆ ಆಟವಾಡಿ ಎಂದಾಗ ಎಲ್ಲರ ಮುಖದಲ್ಲಿ ಮಂದಹಾಸ ಮೊಳಗುತ್ತಿತ್ತು... 

                

ಸರಿ ಮುಗಿತಪ್ಪಾ ಇನ್ನು ಪಾಠ ಆಯ್ತು, ಈಗ ಆಟ ಎನ್ನುವಾಗಲೇ ಕೈಗೊಂದು ಗುಲಾಬಿ ಕೊಟ್ಟು ತಿಂಡಿ ತೀರ್ಥ ಕೊಡುತ್ತಿದ್ದರೆ... ಇವ್ರೇನು ಆಟಕ್ಕೆ ಬಿಡ್ತಾರೋ ಇಲ್ವೊ ಅನ್ನೋ ಹಾಗೆ ನಮ್ಮನ್ನ ನೋಡ್ತಾ ಇದ್ರು ಮಕ್ಕಳು. ತಿಂಡಿ ನಂತರ ಆಟವೂ ಆಯ್ತು ಇನ್ನೂ ಆಟದ ಮನಸ್ಸು ಇರುವಾಗಲೇ ಅಪ್ಪಂದಿರು ಬಂದು ಬನ್ನಿ ಸಾಕು ಎಂದು ಮನೆ ಕಡೆ ಕರೆದುಕೊಂಡು ಹೋದರು.





ಮಕ್ಕಳ ದಿನಾಚಾರಣೆ ಒಂದು ರೀತಿ ಖುಷಿಯಿತ್ತು, ಆ ಮಕ್ಕಳಲ್ಲಿ ನನ್ನ ಮಗನ ಕಂಡೆ ಮನಸ್ಸು ಪೂರ್ತಿ ಸೊಗಸುಕಂಡೆ... ಮಕ್ಕಳ ಆಸಕ್ತಿ, ಶ್ರದ್ಧೆ, ಹೊನಲು-ಬೆಳಕು, ತರಲೆ, ಆಟದ ಹುರುಪು ಎಲ್ಲವನ್ನೂ ಕಂಡೆ... ಒಂದು ನಲಿವಿನ ದಿನವಾಯ್ತು ನನ್ನದು.

                                 

Monday, September 8, 2014

ಪೂರ್ಣಚಂದ್ರ ತೇಜಸ್ವಿ ಎಂದರೆ ನನ್ನ ಅಣ್ಣ(ಪ್ಪ) ನೆನಪಾಗುತ್ತೆ....!!


ನಾನಿನ್ನು ಚಿಕ್ಕವಳು ೫-೬ನೇ ತರಗತಿ ಇರ್ಬೇಕು... ಟಿವಿಯಲ್ಲಿ ತಬರನ ಕಥೆ ನೋಡ್ತಾ ಇದ್ವಿ.. ನೋಡೋದೇನು ಬಂತು ಸೊರಾ ಬುಸಾ ಅಳ್ತಾನೇ ಇದ್ವಿ... ಪಾಪ ಆ ಚಿತ್ರದ ನಾಯಕ ಏನೆಲ್ಲಾ ಕಷ್ಟಪಡ್ತಾನಪ್ಪಾ, ತಡೆಯಲಾರದ ನೋವಿಗೆ ನನ್ನ ಲಂಗ ಕಣ್ಣು-ಮೂಗಿನಲ್ಲಿ ಬರುವುದನ್ನೆಲ್ಲಾ ಒರೆಸಿಕೊಳ್ತಿತ್ತು. ಒಂದು ಕಡೆ ಅಮ್ಮಾ, ನಿಮ್ಮ ಅಪ್ಪನೇ ನೋಡು ಆ ತಬರ... ಎಂದು ಕಣ್ಣು ಒದ್ದೆ ಮಾಡಿಕೊಳ್ತಿದ್ದ್ರು... ನಿಮ್ಮ ಅಪ್ಪನ ಕಥೆ ನೋಡಿಯೇ ಕಥೆ ಬರೆದ್ರೇನೋ ಆ ಮಹಾನುಭಾವ ಅಂತಾ ಇದ್ರು.

ಅಮ್ಮ ಹೇಳೋಕ್ಕು ಕಾರಣ ಇದೆ. ಅಣ್ಣ (ಅಪ್ಪ) ದೇವನಹಳ್ಳಿಯಿಂದ ಬೆಂಗಳೂರಿಗೆ ಬರಬೇಕೆಂದರೆ ಸಾಧನೆ, ಬಸ್ಸುಗಳ ತೊಂದರೆ ಆದ್ದರಿಂದ ಆಗೆಲ್ಲ ಅಣ್ಣ ವಾರಕ್ಕೊಮ್ಮೆ ಮನೆಗೆ ಬರೋರು, ಇದನ್ನೆಲ್ಲಾ ತಪ್ಪಿಸಲು ಅಣ್ಣ ಮಾಗಡಿ ಹತ್ತಿರದ ಊರಿಗೆ ವರ್ಗಾವಣೆ ಮಾಡಿಸಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದರು. ಅಣ್ಣನ ವರ್ಗಾವಣೆ ಏನೋ ಆಯ್ತು, ದಿನ ಅಣ್ಣನ ಜೊತೆ ಇರುವ ಹಾಗೂ ಆಯ್ತು, ಆದ್ರೆ ಅಣ್ಣನಿಗೆ ಸಂಬಳವೇ ಬರುತ್ತಿರಲಿಲ್ಲ. ಇದೇ ಸಮಯದಲ್ಲಿ ಹೊಸ ಮನೆ ಬೇರೆ ಕಟ್ಟಿಸುತ್ತಿದ್ದ್ವು. ಅಣ್ಣನ ಸಂಬಳವೇ ಜೀವನಕ್ಕೆ ಆಧಾರ, ಅಂತಹದರಲ್ಲಿ ಸುಮಾರು ೧-೨ ವರ್ಷದವರೆಗೇ ಸಂಬಳವೇ ಬರಲಿಲ್ಲವೆಂದರೆ ಜೀವನ ಹೇಗೆ..?? ಅಬ್ಬಾ ಊಹಿಸಲೂ ಸಾಧ್ಯವಿಲ್ಲ ಅಮ್ಮನ ಅಳಲು, ಅಣ್ಣನ ಮೌನ ಎರಡೂ ಅರ್ಥವಾಗ್ತಿತ್ತು ಆದರೆ ನಾವೆಲ್ಲ ಚಿಕ್ಕವರು ಏನೂ ಮಾಡಲು ಸಾಧ್ಯವಾಗಿರಲಿಲ್ಲ..

 ಆಗೆಲ್ಲ ಅಣ್ಣ ವಾರಕ್ಕೆ ಒಮ್ಮೆಯಾದರೂ ಡಿಡಿ ಆಫೀಸ್, ಅಲ್ಲಿ ಇಲ್ಲಿ ಎಂದು ಅಲೆಯೋದೆ ಕೆಲಸವಾಗಿತ್ತು. ಯಾವ ಕಚೇರಿ ಮೆಟ್ಟಿಲು ಹತ್ತಿದರೂ, ಯಾರನ್ನ ಕೇಳಿದರೂ ಏನೂ ಪ್ರಯೋಜನವಾಗದೇ ಅಣ್ಣ ಬೇಸತ್ತು ಬಸವಳಿದು ಹೋಗಿದ್ದರು.. ಅಣ್ಣನಿಗೆ ಆಗ ಸಂಬಳವೂ ಇಲ್ಲ, ಇತ್ತ ಮನೆಯಲ್ಲಿನ ಪಾಡು ಹೇಳತೀರದು, ತುತ್ತಿಗೂ ಕಷ್ಟಪಡುವಂತಾಗಿದ್ದ ಕಾಲವದು... ಸರ್ಕಾರಿ ಕಚೇರಿಗೆ ಅಲೆದು ಅಲೆದು ಕೊನೆಗೆ ನಿಂತು ಹೋಗಿದ್ದ ಸಂಬಳವೇನೋ ಪ್ರಾರಂಭವಾಯ್ತು ಆದರೆ ಆ ೨ವರ್ಷದ ಸಂಬಳ ತೆಗೆದುಕೊಳ್ಳಲು ಸುಮಾರು ೭-೮ ವರ್ಷ ಸರ್ಕಾರಿ ಮೆಟ್ಟಿಲು ಸವೆಸಿದ್ದರು.

ಇಂತಹ ಸಮಯದಲ್ಲಿ ತಬರನ ಕಥೆ ಪೂರ್ಣ ಅಣ್ಣನಿಗೆ ಒಪ್ಪುತ್ತಿತ್ತು... ತಬರನ ಚಪ್ಪಲಿಯೂ ಸಹ... ಅಣ್ಣ ಲಂಚ ಕೊಡುವವನಲ್ಲ, ನ್ಯಾಯಕ್ಕೆ ತಲೆಬಾಗುವವ. ಸದಾ ನಾನು ನ್ಯಾಯವಾಗಿ ಮಕ್ಕಳಿಗೆ ವಿದ್ಯೆ ಹೇಳಿಕೊಟ್ಟಿದ್ದರೆ, ಖಂಡಿತಾ ಆ ಹಣ ಬರುತ್ತೆ ಎಂದು ವೇದಾಂತಿಯಾಗಿಬಿಡುತ್ತಿದ್ದರು.

ಅಮ್ಮಾ ಸುಮಾರು ಸರಿ ಈ ಚಿತ್ರ ನೋಡಿದಾಗೆಲ್ಲ ತೇಜಸ್ವಿಯವರನ್ನ ನೆನಪು ಮಾಡಿಸೋರು... ಅದೇ ಕಾರಣಕ್ಕೆ ತಬರನ ಕಥೆಯನ್ನು ಓದಬೇಕೆಂದು ಏಳನೇ ತರಗತಿಯಲ್ಲಿದ್ದಾಗ ದಾಸರಹಳ್ಳಿಯ ಲೈಬ್ರೆರಿಯ ಮೂಲೆಯಲ್ಲೆಲ್ಲೋ ಕುಳಿತು ದಿನವೆಲ್ಲಾ ಓದಿ ಕಣ್ಣೀರುಟ್ಟು ಬಂದಿದ್ದೆ.. ಇದೇ ಕಾರಣ ತೇಜಸ್ವಿ ಎಂದರೆ ನನ್ನ ಅಣ್ಣ ನೆನಪಾಗ್ತಾರೆ...  ಮುಂದೆ ಹಲವಾರು ಓದಿದ್ದೇನೇ ಮನಸ್ಸಿಗೂ ಮುಟ್ಟಿದೆ ಆದರೆ ನನ್ನಣ್ಣನಾದ ತಬರನಷ್ಟಲ್ಲ.!!


                                           ಚಿತ್ರ ಬಿಡಿಸೋಕ್ಕೆ ಪ್ರಯತ್ನಿಸಿದೆ ಆದರೆ ಸರಿ ಬರಲಿಲ್ಲ...

ಅಣ್ಣನಿಗೆ ಈ ಕಥೆ ನೆನಪಿಸುವುದಿಲ್ಲ ಈಗ ನಿವೃತ್ತಿ ಜೀವನದಲ್ಲಿ ಖುಷಿಯಾಗಿದ್ದಾರೆ ಅಲ್ವಾ ಅಣ್ಣಾ... :) :)

Monday, August 18, 2014

ನೋವು

           


ಒಲವಿನ ಮನೆ-ಮನ ಹಲವು
ತಿರುಗಿ ಮಗುಚಿದರೆ ಕೆಲವು
ಹೆಸರಿಸಲಾಗದಷ್ಟು ನೋವು
ಅದಕ್ಕೆ ಒಂದಿಲ್ಲೊಂದು ಬಾವು

ಭಾವನೆಗಳು ಬಿಕರಿಯಾದರೆ 
ಪರಸ್ಪರರಲಿ ಭಿನ್ನತೆಯ ಬೇನೆ
ಮೇಲು-ಕೀಳು ಎಂದು ಮೆರೆದರೆ
ಜಗವೆಲ್ಲಾ ವ್ಯಥೆಯ ಸೋನೆ

ಸೂಜಿಯ ಮೊನಚಿನಲಿ 
ಹಿತವಲ್ಲದ ಮಾತು ಬೆರೆಸುವುದರಲಿ 
ಆಯುಧಗಳ ಬಳಕೆಯಲಿ
ಸಾವಿನ ಸುದ್ದಿಗಳಲಿ ನೋವು ಅಡಗಿದೆ

ದಣಿವು,ಧಾವಂತ  ಅತೃಪ್ತಿ,ಆಲಸ್ಯ
ನಂಜಿನ ಅಂಚು ತಲುಪಿದಾಗ
ತೃಪ್ತಿಯಲೂ ಅಜೀರ್ಣ ತಟ್ಟಿದರೆ
ಅನುಭವಿಸಲಾಗದ ರುಚಿಯೇ ನೋವು...

Wednesday, July 16, 2014

ನಿಶ್ಯಬ್ದ


ಚಿತ್ರ @ ಅಂತರ್ಜಾಲ


ಮೋಟಾರುಗಳ ಸದ್ದಿಲ್ಲ, ತಣ್ಣನೆ ಮಲಗಿರುವ ನಗರ
ದಿನಪತ್ರಿಕೆ, ಹಾಲು, ಹೂ ಮಾರುವವರ ಧ್ವನಿಯಿಲ್ಲ
ಮನೆಗಳ ಮುಂದೆ ರಂಗೋಲಿ ಇರಲಿ, ಬೀದಿ ನಾಯಿಗಳ ಓಡಾಟವಿಲ್ಲ
ಸಾಲು ಸಾಲು ಮರಗಳು ತಮ್ಮ್ ತಮ್ಮ ನೆರಳ ಮೇಳದಲಿವೆ

ಬಾಯ್ತೆರೆದು ನಿಂತಿರುವ ಆಗಸದಲಿ ಪ್ರಶಾಂತ ಮೋಡಗಳು
ಆಗಸನ ಪ್ರತಿಬಿಂಬ, ಕನ್ನಡಿಯಲಿ ಮುಖ ತೋರುವಂತಾ ಕೊಳ
ಹಸಿರ ಹಾಸಿಗೆಯಲ್ಲಿ ಇಬ್ಬನಿಗಳ ಹನಿ ಮಿಣುಕು ಬೆಳಕಂತೆ
ಯಾರ ಕಾಲ್ತುಳಿತಕೂ ಸಿಗದೆ ಬೀರುತಿವೆ ಮಂದಹಾಸ...!!

ತುಂಬು ರಸ್ತೆಯಲಿ ಶಬ್ದವಿಲ್ಲದ  ಏಕಾಂತ
ಸ್ವರ್ಗ ಸೃಷ್ಟಿಸಿದೆ ಆ ಸಾಲು ಮರಗಳಿಗೆ
ತೊಟ್ಟು ಕಳಚಿ ಬಿದ್ದ ಬಿನ್ನಾಣದ ತರಗೆಲೆಗಳು 
ಮಾತ್ರ ಸಂತೃಪ್ತಿಯಲಿ ಸರಿದಾಡುವುದೇ  ಸದ್ದು!!

Tuesday, July 8, 2014

ಜೀವ-ಭಾವ

ಜೀವ-ಭಾವ

ನಾವೇ ಬೆಳೆಸಿದ ಬಂಧನಗಳಲಿ
ಕೂಡು ಕುಟುಂಬದ ಒಕ್ಕಲಲಿ
ಸಂಬಂಧಗಳ ಹೊನಲಿನಲಿ
ನಾವಿರುವುದು ಹರಿವ ತೊರೆಗಳಲಿ 

ಬಿರುಕು ಮನೆಗಳ ಹೊಡೆತ
ಒಂಟಿ ನೆಲೆಗಳ ಸೆಳೆತ
ಒಡಕು ಮನಗಳ ಮಿಡಿತ
ದೂರ ನೆಲೆಸುವ ತುಡಿತ 

ಸಂಸ್ಕೃತಿ-ಜನರ ನಡುವೆ
ಬದಲಾವಣೆಯ ಕೊಳವೆ
ಹಿಂದಿನದು ಇಂದಿಗೆ ದಾವೆ
ಮರುಕಳಿಸುವುದು ಅಸಾಧ್ಯವೆ

ಬಂಧುತ್ವ ಬೆಸುಗೆಗಳ ಭಾವ
ನಶ್ವರತೆಯಲಿ  ಹಾವಭಾವ
ಜನಪದದ ಹಿರಿಮೆಯ ಜೀವ
ಪ್ರಸ್ತುತ ನಲುಗುತಿದೆ ಅನುಭಾವ

ಪೂರ್ಣ ಸೊಗಡಿನ ತೆನೆಗಳು
ಅರಳದೆ ಮೊಗಚಿದೆ ದಿನಗಳು
ಸಾಂಪ್ರದಾಯದ ಚಿಲುಮೆಗಳು
ಈಗ ನೇತಾಡುವ ಬಾವುಲಿಗಳು

Thursday, February 20, 2014

ನಲ್ಲೆ..ಓರೆನೋಟ..!!

ಇತ್ತೀಚೆಗೆ ಕನ್ನಡ ಸಂಪದದಲ್ಲಿ ಬಂದಿದ್ದ ದ.ರಾ ಬೇಂದ್ರೆಯವರ "ನಾನು ಬಡವಿ ಆತ ಬಡವ" ಸಾಹಿತ್ಯಕ್ಕೆ ಸೂಕ್ತವಾಗಿ ಈ ಚಿತ್ರ ಬಳಸಿದ್ದರು.. ಆ ಮಾಹಿತಿಯನ್ನು ಸ್ನೇಹಿತೆಯೊಬ್ಬರು ಮುಖಪುಟದ ಗೋಡೆಯ ಮೇಲೆ  ಹಂಚಿಕೊಂಡಿದ್ದರು, ಆಗ ನನ್ನನ್ನು ಈ ಜೋಡಿಗಳ ಚಿತ್ರ ಹೆಚ್ಚು ಆಕರ್ಷಿಸಿ ಚಿತ್ರ ಬಿಡಿಸುವಂತಾಯಿತು. ಕೊನೆಗೆ ಚಿತ್ರವೊಂದೇ ಇದ್ದರೆ ಸಾಕೇ ಸಾಲುಗಳನು ಗೀಚಿಬಿಟ್ಟೆ.. ಸೂಕ್ತವಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರು ನನ್ನ ಭಾವಗಳ ಸಾಲು ನಿಮ್ಮೊಂದಿಗೆ


 ಬಿಡಿಸಿದ್ದು-ಗೀಚಿದ್ದು.. ನಾನೇ..!!

ನಲ್ಲೆ, ಮೌನದ ಮುಂಗುರುಳು
ನಿನ್ನ ನಯನಗಳ ತಬ್ಬಿರಲು
ನನ್ನಾಸರೆಯ ಹೆಗಲು ಹುಡುಕುತಿದೆ
ಆ ಮಿಂಚು ಕಣ್ ಗಳ ಹೊಂಬೆಳಕು

ನಲ್ಲೆ, ನಿನ್ನ ಸ್ಪರ್ಶದ ಒನಪು 
ಮಿರ ಮಿರ ಮಿರುಗಿ
ಎನ್ನ ಹೃದಯದೊಳು 
ಮೂಡಿದೆ ಒಲವ ಹೊಳಪು

ಬಾಹು ಬಂಧನದ ಸೆರೆ
ನೀ ಬಯಸಿ ಬಂದರೆ 
ಒಂದು ನವಿರು ಚುಂಬನ
ನನ್ನ ಸೆಳೆವ ಈ  ಕಿರುನೋಟಕೆ

Saturday, February 15, 2014

ಮರುಳು..ಹೂ.. ಮರಳು


ಡೈಸಿ ಬೆಳೆದು ನಿಂತಿಹಳು
ಮರುಧರೆಯ ಒಡಲೊಳು
ಯಾರ ಬಿತ್ತನೆಯಿಲ್ಲ
ನಿಸರ್ಗ ಕೃಪೆಗೆ
ಬೆಳೆದು ನಗುತಿಹಳು
ಬಯಸಿ ತಂದನವನು
ಗುಲಾಬಿಯೊಂದೇ ಪ್ರೇವವಲ್ಲ ಗೆಳತಿ
ಭಾವ ತುಂಬಿ ನೀಡುವ
ಹೂ ಯಾವುದಾದರೂ
ಪ್ರೀತಿ ಉಸಿರು ನನ್ನೊಡತಿ 
ಎಂಬವನ ಒಲುಮೆ
ತುಂಬಿ ನಗುತಿಹುದು
ನನ್ನ ಮನೆ-ಮನದ ಹೂದಾನಿಯಲಿ






ನನ್ನೂರ ರಸ್ತೆ ಬದಿ
ಹಾದು ಹೋದರೆ
ನನ್ನೊಳಗೊಂದು ಆಶ್ಚರ್ಯ
ತನ್ ತಾನೆ ಬೆಳೆವ
ಈ ಹೂಗಳ ನಾಟಿ ಮಾಡಿ
ಕಳೆ ಕಿತ್ತವರಾರು..?

ಮರುಳುಗಾಡಲೂ
ಹಸಿರ ಗರ್ಭಕೆ ಪ್ರಸವವುಂಟೆ..??

ಡೈಸಿ, ಲ್ಯಾವೆಂಡರ್ ಹೆಸರಿನ 
ಕೂಸುಗಳು ಈ ಮಾಸದಲಿ
ಬಂದು ಹೋಗುವವರ
ನೋಡಿ ಮರುಳಾಗದವರುಂಟೆ..??
                           

ಈ ಹೂಗಳು ಮರುಭೂಮಿಯಲ್ಲಿ ಬೆಳೆದು ನಿಂತಿವೆ.. ಕಣ್ಣು ಹಾಯ್ದಡೆಲ್ಲಾ ಈ ಹೂಗಳೇ ಕಾಣುತಿವೆ.