ಪ್ರಿಯ ಬ್ಲಾಗ್ ಸ್ನೇಹಿತರೇ... ನಿಮ್ಮೆಲ್ಲರ ಶುಭಾಶಿರ್ವಾದದಿಂದ ನಮ್ಮ ಮಗ ಇಂದು ಸಂಜೆ ಯಾವುದೇ ತೊಂದರೆ ಇಲ್ಲದೆ ಕುವೈಟ್ ಬಂದು ತಲುಪಿದ!!!!!!
ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ಸದಾ ನಮ್ಮಮೇಲಿರಲಿ
ಬೇಸಿಗೆ ರಜೆ ಎಂದು ನಿನಗೋ ಮೂರು ತಿಂಗಳ ರಜೆ, ಈ ಬೇಸಿಗೆಯ ಬಿಸಿಯಲಿ ನೀ ಏನು ಮಾಡಲು ಸಾಧ್ಯ ಇರುವಷ್ಟು ರಜೆಯನ್ನು ಊರಿನಲ್ಲಿ ಕಳೆಯಲು ಇಬ್ಬರು ಹೊರಟೆವು, ಆದರೆ ನಾ ನಿನ್ನೊಟ್ಟಿಗೆ ೩ ತಿಂಗಳು ರಜೆ ಕಳೆಯಲಾಗದೆ ಕೆಲಸದ ನಿಮಿತ್ತ ಮರಳಿ ಮರುಭೂಮಿಗೆ ಬರಬೇಕಾಯಿತು... ನೀ ಬರಲು ಸ್ನೇಹಿತರೊಟ್ಟಿಗೆ ಬರುವಾಗೆ ತಯಾರಿ ನಡೆಸಿದ್ದೆವು... ನಿನ್ನ ಬರುವಿಕೆಗೆ ಯಾವ ಕೊರತೆಬರದಂತೆ ಎಲ್ಲ ವ್ಯವಸ್ಥೆಯೂ ನೆಡೆದಿತ್ತು...
ಇನ್ನೇನೂ ನನ್ನ ಕಂದಮ್ಮ ತಾಯ ಮಡಿಲ ಸೇರುವ ದಿನ ಬಹಳ ಹತ್ತಿರವಿತ್ತೆನ್ನುವಾಗಲೇ ಕಾರಣಾಂತರದಿಂದ ಸ್ನೇಹಿತರ ಜೊತೆಗೂಡಿ ಬರಲಾಗದೆ ಪ್ರಯಾಣ ರದ್ದಾಯಿತು ಮತ್ತೆ ನಿನ್ನ ಕರೆತರುವುದೆಂತು ಚಿನ್ನ ನನ್ನ ಮುದ್ದು ನೀ ಒಬ್ಬೊಂಟಿಯಾದೆಯಲ್ಲಾ ನಿನ್ನ ಕರೆತರಲು ನಾವೇ ಬರೋಣವೆಂದರೆ ಕೆಲಸಗಳ ಒತ್ತಡದೊಂದಿಗೆ ಹಲವಾರು ಇರುಸುಮುರುಸುಗಳು, ನನ್ನ ಮನದಲ್ಲಿ ನೀ ಬರಲಾಗದೆಂದು ತಿಳಿದೊಡೆ ನನಗೇನೋ ದುಗುಡ, ಆಘಾತ, ದುಃಖ ಎಲ್ಲವೂ ಒಮ್ಮೆಲೆ ಹೊಮ್ಮಿ ಬಂತು... ನಿನ್ನನ್ನು ಕರೆತರಲು ನಾವೇ ಹೋಗುವುದೊ ಬೇರೆ ವ್ಯವಸ್ಥೆ ಮಾಡುವುದೋ ಎಂಬ ದ್ವಂದ್ವ ಮನಸಿನಲಿದ್ದಾಗ ಸ್ನೇಹಿತರಿಂದ ತಿಳಿಯಿತು "ಜೊತೆಯಿಲ್ಲದ ಮಗುವಿನ ಪ್ರಯಾಣ(ಅನ್ಅಕಂಪನೀಡ್ ಚೈಲ್ಡ್ ಟ್ರಾವೆಲ್)" ಎಂದು ಪ್ರಯಾಣದ ಚೀಟಿ ಕಾಯ್ದಿರಿಸಿದ್ದರೆ (ಟಿಕೆಟ್ ಬುಕ್) ಯಾವುದೇ ತೊಂದರೆ ಇಲ್ಲದೆ ಕರೆದುಕೊಂಡು ಬರುತ್ತಾರೆಂದಾಗ ಮತ್ತದೇ ದುಃಖ ಚಿನ್ನ... ನಮ್ಮ ನಿಲುವನ್ನು ನಿನ್ನಪ್ಪ ಕರೆಮಾಡಿ ಹೇಳಿದಾಗ ಕಂದ ನೀನು ವಿಮಾನದಲ್ಲಿ ಒಬ್ಬನೇ ಪ್ರಯಾಣ ಮಾಡಬೇಕು, ಗಗನಸಖಿಯರು ನಿನಗೆ ಸಹಾಯ ಮಾಡುತ್ತಾರೆಂದಾಗ ನಿಜವಾಗಿಯೂ ನಾ ನಂಬದಂತಷ್ಟು ಮಟ್ಟಕ್ಕೆ ನಿನ್ನ ಉತ್ತರ ಕೇಳಿತು... "ಓಹೋ!! ಅದಕ್ಕೇನು ಬರುತ್ತೇನೆ, ನನಗೇನು ಭಯವಿಲ್ಲ" ಎಂದು ಧೈರ್ಯವಾಗಿ ನಗುವಿನಲ್ಲೇ ಒಪ್ಪಿದ್ದೇ..!! ಈ ಮಾತು ಕೇಳುತ್ತಿದ್ದಂತೆ ನನಗೆ ಒಮ್ಮೆಲೇ ದುಃಖ ತಡೆಯದೆ ಕಣ್ಣೀರ ಧಾರೆ ಹರಿದುಬಿಟ್ಟಿತ್ತು ಇದ ಕಂಡ ನಿನ್ನಪ್ಪ ನನ್ನೊಮ್ಮೆ ಮೆದುವಾಗಿ ರೇಗಿದರು ನಿನ್ನದು ಭಾವಾತಿರೇಕ. ನೀ ವಿದ್ಯಾವಂತೆ, ಬುದ್ದಿವಂತೆ, ಎಲ್ಲ ತಿಳಿದಿದ್ದು ನೀನೇ ಹೀಗೆ ಮಾಡಿದರೆ ಹೇಗೆ? ನಮ್ಮಲ್ಲಿ ವ್ಯವಸ್ಥೆ ಇದೆ ಅದನ್ನ ಉಪಯೋಗಿಸಿಕೊಳ್ಳಲು ಇದು ಒಂದು ಒಳ್ಳೆ ಸಮಯ ಎಂದೆಲ್ಲಾ ಹಲವು ಸಮಜಾಯಿಷಿ ಕೊಟ್ಟರು ಆದರೇನು ಮಾಡುವುದು ಕಂದ? ನಾ ಎಲ್ಲಿ ಏನೇ ಆಗಿರಲಿ, ಎಷ್ಟೆ ಬುದ್ದಿ ಇದ್ದರೇನು ಮಗುವಿನ ಅಮ್ಮನಲ್ಲವೇ? ನನ್ನ ಕರುಳಬಳ್ಳಿ ಇನ್ನು ಪುಟ್ಟದ್ದು ಅದಕ್ಕಿಗಾಗಲೇ ಜವಾಬ್ದಾರಿ ಕೊಟ್ಟುಬಿಟ್ಟಿರುವೇ. ಅಮ್ಮನಿಲ್ಲದಾಗ ಊಟಮಾಡುವುದು....ತಣ್ಣಗಿದ್ದ ಊಟವನ್ನು ಬಿಸಿಮಾಡುವುದು...ಶಾಲೆಯಿಂದ ಬಂದು ಮನೆ ಬಾಗಿಲು ತೆರೆದು ಅದನ್ನ ಭದ್ರಪಡಿಸಿ ಮನೆಯನ್ನ ಜೋಪಾನಿಸುವುದು ಇವಲ್ಲದೆ ಹತ್ತು ಹಲವು ನಿನ್ನ ಹೆಗಲೇರಿದೆ ನಿನ್ನ ವಯಸ್ಸಿನ ಮಕ್ಕಳನ್ನು ಇನ್ನು ಪುಟ್ಟ ಕಂದಮ್ಮರಂತೆ ನೋಡಿಕೊಳ್ಳುವ ತಾಯಂದಿರ ಕಂಡರೆ ನನಗೇನೋ ಒಂದು ರೀತಿ ನಾ ತಪ್ಪು ಮಾಡಿದೆ ನನ್ನಿಂದ ನಿನಗೆ ಸಲ್ಲಬೇಕಾದ ಪ್ರೀತಿ ಹಾರೈಕೆ ಸಲ್ಲಲಿಲ್ಲವೇನೋ ಎಂಬ ಭಾವನೆ ಮನದಾಳದಲ್ಲಿ ಆಗಾಗ ಮೂಡುತ್ತೆ, ಅಲ್ಲದೆ ಈ ಮನಸಿನಲ್ಲಿ ಕಾಡುತ್ತೆ ನಾ ಏನು ಮಾಡಲಿ ಕಂದ ನಮ್ಮ ವ್ಯವಸ್ಥೆಗಳು ಬದಲಾಗಿವೆ, ನಿನ್ನ ಭವಿಷ್ಯದ ನೆಲೆ ಹಚ್ಚ ಹಸಿರಾಗಿರಲೆಂಬುದು ನನ್ನ ಇಚ್ಚೆ...
ನೀ ಇನ್ನು ಮರುಭೂಮಿಯ ಮುಟ್ಟುವವರೆಗೂ ನನ್ನ ಹೃದಯಬಡಿತ ಅತಿರಭಸವಾಗಿರುತ್ತೆ. ಮನದ ಮೈದಾನದಲ್ಲಿ ಹಲವಾರು ಯಕ್ಷಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ನಿನ್ನ ನೋಡುವವರೆಗೂ ನಿದ್ರಾಹಾರ ಸೇರದು. ಕಣ್ಣಂಚಿನ ಕಂಬನಿ ಅಲ್ಲೇ ಮೂಡಿಬಿಟ್ಟಿದೆ ನೀ ಬರುವವರೆಗೂ ಅದು ಮಾಸುವ ಸೂಚನೆ ಕಾಣುತ್ತಿಲ್ಲ.
ನೀ ಬೆಂಗಳೂರಿಂದ ಕುವೈಟ್ಗೆ ನೇರ ಒಂದೇ ವಿಮಾನದಲ್ಲಿ ಬರುವಂತಿದ್ದರೆ ನನಗಷ್ಟು ಭಯ, ದುಃಖವೇನಿರುತ್ತಿರಲಿಲ್ಲವೇನೋ ಈಗ ದುಬೈ ವಿಮಾನ ನಿಲ್ದಾಣದಲ್ಲಿ ಸುಮಾರು ೩ ಗಂಟೆಗಳ ಕಾಲ ತಂಗಿದ್ದು ಮತ್ತೊಂದು ವಿಮಾನದಲ್ಲಿ ಬರಬೇಕು ನನಗೆ ಇಲ್ಲೇ ಹೆಚ್ಚಿನ ಆಂತಕ ನಿನಗೆಲ್ಲಿ ಬೇಸರವಾಗುತ್ತೊ, ಎಲ್ಲಿ ನೊಂದುಕೊಂಡು ಬೀಡುತ್ತೀಯೋ, ದುಃಖದಿ ನನ್ನ ಶಪಿಸಿಬಿಡುತ್ತೀಯೇನೋ...ನನ್ನಮ್ಮ ನನ್ನ ಜೊತೆಗಿದ್ದರೆ ಈ ರೀತಿ ತೊಂದರೆ ಇರುತ್ತಿತ್ತೆ ಎಂಬ ಭಾವನೆ ಬರುವಾಗೆ ಪರಿಸ್ಥಿತಿ ಎಲ್ಲಿ ಒದಗಿಬರುತ್ತೋ ಎಂಬ ಭೀತಿ ಕಾಡುತ್ತಿದೆ ನನ್ನ ಕಂದಮ್ಮ.... ನಿನಗೆ ಧೈರ್ಯ ತುಂಬುವ ಶಕ್ತಿ ಆ ಕಾಣದ ದೇವರೇ ನೀಡಬೇಕು. ಊರಲ್ಲೂ ಅಜ್ಜಿ, ತಾತ, ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಮಾವ, ಎಲ್ಲರಿಗೊ ತಡೆಯಲಾಗದ ಆತಂಕ ಅವರಿಗೊ ನಾನು ಕ್ಷಮೆಯಾಚಿಸುತ್ತೇನೆ.
ನಿನ್ನ ಬರುವಿಕೆಗಾಗಿ ಕಾದು ಕುಳಿತಿರುವೆ... ಮನದ ದುಗುಡ ಸಾವಕಾಶದಿ ತಹಬದಿಗೆ ತರಲು ಪ್ರಯತ್ನಿಸುತ್ತಲಿರುವೆ ಕಂದ.... ಈ ಎಲ್ಲಾ ಪರಿಸ್ಥಿತಿಗೆ ಕಾರಣ ಯಾರೆಂದು ತಿಳಿಯದು? ನೀನೋ, ನಾನೋ, ಅಪ್ಪನೋ, ಸಮಯವೋ, ಅಥವಾ ದಿನವೋ ತಿಳಿಯದು ಏನಾದರು ಸರಿ ನನ್ನ ಕಂದ ನೀ ಬರುವ ಹಾದಿಯಲಿ ಲೋಹದ ಹಕ್ಕಿಯು ನಿನ್ನ ಕರೆತರಲು ಆ ದೇವವೃಂದಗಳು ನಗೆಯ ಹೂವ ಚೆಲ್ಲಲೆಂದು ಆಶಿಸುತ್ತೇನೆ. ನಿನ್ನ ಪ್ರಯಾಣ ಯಾವ ಕೊರತೆಬಾರದೆ ನಿನಗೂ ಸಂತಸವಾಗುವ ಹಾಗೆ ಪ್ರಯಾಣ ಸುಖವಾಗಿ ಸಾಗಲೆಂದು ಹೃದಯಪೂರ್ವಕವಾಗಿ ಹರಸುವೆವು.
ನನ್ನದೇನೇ ತಪ್ಪಿದ್ದರೂ ಕ್ಷಮಿಸಿಬಿಡು ಕಂದ ಪೂರ್ಣಪ್ರಮಾಣದ ತಾಯಾಗಲಿಲ್ಲ.... ನಿನ್ನ ಹಾರೈಕೆ ಮಾಡುವುದರಲಿ ಎಲ್ಲೋ ಸೋತಿರುವೆನು...
ಇಷ್ಟೆಲ್ಲ ಅನುಭವದಿ ಒಂದಂತು ನಿಜ, ನಿನ್ನ ಹಾದಿಯಲಿ ಕಷ್ಟ ಸುಖ ಏನೇ ಬಂದರೂ ಎದುರಿಸಿ ನೀ ಬಾಳುವೆ ಎಂಬ ನಂಬಿಕೆ ನನಗಿದೆ ಅಂತೆಯೇ ಜೀವನಪೂರ್ತಿ ಯಾರನ್ನು ಆಶ್ರಯಿಸದೆ ನಿನ್ನ ಕಾಲಮೇಲೆ ನೀ ನಿಲ್ಲುವೆ... ನೀ ನಮ್ಮ ಹೆಮ್ಮೆಯ ಪುತ್ರನಾಗಿ ಬಾಳು. ನಿನ್ನ ಅಮ್ಮ ಅಪ್ಪನ ಸಾಕಬೇಕೆಂಬ ಬೇಡಿಕೆ ಏನಿಲ್ಲ.... ದೈನೆ ಎಂದು ಬಂದ ಜನರಿಗೆ ನೆಲೆಯಾಗು, ಹತ್ತಾರು ಜನಸಮೂಹಕ್ಕೆ ಮಾದರಿಯಾಗಿ ಬಾಳು ಆಶ್ರಯ ಬೇಡಿ ಬಂದವರಿಗೆ ಆಶ್ರಯನೀಡಿ ಅವರ ದುಃಖ ಮರೆಸುವ ಶಕ್ತಿ ನಿನ್ನಲ್ಲಿ ಮೂಡಲಿ.
ಒಲವಿನ ಕುಡಿಗೆ ಪ್ರಯಾಣದ ಬಿಸಿ ಮುಟ್ಟದಿರಲಿ ಎಂದು ಆಶಿಸುತ್ತ ಶುಭಪ್ರಯಾಣ....ನನ್ನ ಕಂದಮ್ಮಗೆ....
ಪ್ರೀತಿಯಿಂದ
ಮೃದುಮನಸಿನ ಅಮ್ಮ...
ಸವಿಗನಸಿನ ಅಪ್ಪ..
ತಾಯಿ ಮಗನ ಸಮಾಗಮ ಮುಂದಿನ ಭಾಗದಲ್ಲಿ....
18 comments:
ಮನಸ್ಸು ಮೇಡಮ್,
ಮಗ ಜೊತೆಯಲ್ಲಿರದ ದುಗುಣ ದುಮ್ಮಾನಗಳು, guilt, ಶರಣಾಗತಿ, ಎಲ್ಲಾ ಭಾವನೆಗಳು ನಿಮ್ಮ ಲೇಖನದಲ್ಲಿದ್ದು ಓದುತ್ತಾ ಮನಕಲಕುತ್ತವೆ.....ಇದರಿಂದಾದರೂ ನಿಮ್ಮ ಮನಸ್ಸು ಹಗುರಾಗುವುದೆಂಬ ಭಾವನೆ ನನ್ನದು...
ಆಗಲಿಕೆಯ ನೋವು ಮನದಲ್ಲಿ ಮೂಡಿ ಒಮ್ಮೆ ಕಣ್ಣುತುಂಬಿ ಬಂತು..
ಧನ್ಯವಾದಗಳು.
ಸುಗುಣಕ್ಕಾ,
ನಿಮ್ಮಕುಟುಂಬದ ಮೇಲೆ ಸಮಸ್ತ ಬ್ಲಾಗಿಗರ ಹಾರೈಕೆ ಇದೆ ಯೋಚನೆ ಮಾಡಬೇಡಿ ಎಲ್ಲಾ ಸರಿ ಹೋಗುತ್ತದೆ.
ನಿಮ್ಮ ಲೇಖನ ಓದುವಾಗ ನನ್ನಮ್ಮ ನಮ್ಮನ್ನ ಊರಲ್ಲಿ ಬಿಟ್ಟು ಬೆಂಗಳೂರಲ್ಲಿ ಇದ್ದಾಗ ಅನುಭವಿಸಿದ ಯಾತನೆ ನೆನಪಾಯಿತು.
"ಕಾಲಾಯ ತಸ್ಮೈ ನಮಃ"
ಮೃದು ಮನಸು ಇಷ್ಟೊಂದು ಮೃದುವೆಂದು ಈಗಲೇ ತಿಳಿದದ್ದ್ದು..ತಪ್ಪಿಲ್ಲ ಬಿಡಿ..ಬೆಳೆದ ಮಗ ಹೊರ ದೇಶಕ್ಕೆ ಹೊರಟಾಗ ನನ್ನಮ್ಮ ದುಃಖ ಪಟ್ಟಿಲ್ಲವೇ...?? ಇನ್ನೂ ಬಾಲ್ಯದ ಮಗನನ್ನು ಒಬ್ಬಂಟಿ ಪ್ರಯಾಣಿಸುವಂತಾಯಿತೇ ಎಂಬ ನಿಮ್ಮ ಕೊರಗುವುದು ಸಹಜ. ಆದ್ರೆ..ಮನು ತುಂಬಾ ಚೂಟಿ..ಅವ್ನಿಗೆ ಏನೂ ಕಷ್ಟವಾಗದು..ಎಲ್ಲ ಸುಗಮವಾಗಿ ನಿಮ್ಮ ಮಗು ನಿಮ್ಮ ತೆಕ್ಕೆ ಸೇರಲೆಂದು ಹಾರೈಸೋಣ.
ಮನಸು ಅವರೆ,,
ನಿಮ್ಮ ಈ ಲೇಖನ ನಿಮ್ಮ ಎಲ್ಲಾ ಬರಹಗಳಿಗಿಂತ ತುಂಬಾ ತುಂಬಾ ಚೆನ್ನಾಗಿದೆ ಅಂತ ಅನಿಸಿತು.
ಈ ಬರಹವನ್ನು ನಾನು ಬರಿ ಓದಲಿಲ್ಲ, ಅದರಲ್ಲಿನ ಆ ಭಾವನೆಗಳನ್ನ ಮನಸಿನ ತಳಮಳಗಳನ್ನ ಅನುಭವಿಸಿದೆ. ಏನೋ ಬಹಳ ದಿನದ ನಂತರ ಹೃದಯ ತಟ್ಟುವ ಬರಹ ಓದಿದೆ.
ಮೆದುಳಿನ ಯೋಚನೆಗೂ ಮನಸಿನ ಯೋಚನೆಗೂ ತುಂಬಾ ಅಂತರವಿದೆ.
ಬೇರೆಯವರಿಗೆ ಹೇಳುವುದು ಸುಲಭ ಅದನ್ನು ಅನುಭವಿಸಿದರಿಗೆ ಗೊತ್ತು. ಮನಸ್ಸಿಗೆ ವಿದ್ಯೆ,ಬುದ್ದಿ,ಜಾಣತನ ಯಾವದು ಗೊತ್ತಾಗುವದಿಲ್ಲ.
ಬೇರೆಲ್ಲ ಬರಹಗಳಲ್ಲಿ ಸ್ವಲ್ಪವಾದರು ಕಾಲ್ಪನಿಕತೆ , ಪದಗಳ ಅಲಂಕಾರ ಇರುತ್ತೆ ಆದರೆ ಈ ಬರಹ ನೇರವಾಗಿ ಮನದಾಳದಿಂದ ಆಕ್ಷರಕ್ಕಿಳಿದಿದೆ.
ಮುಂದಿನ ಲೇಖನದ ನೀರಿಕ್ಷೆಯಲ್ಲಿ…………
ಲಕ್ಷ್ಮಣ ಬಿರಾದಾರ
ಮನಸು ಅವರೇ,
ಭಯಪಡಬೇಡಿ.. ನಿಮ್ಮ ಮಗ ಯಾವುದೇ ತೊಂದರೆಯಿಲ್ಲದೆ ಬರುತ್ತಾನೆ.
ನಿಮ್ಮ ಮಗ ಅಲ್ಲಿಗೆ ಬರಲು ಬೇಕಾದ ಮಾಹಿತಿಗಳನ್ನು ಅವನಿಗೆ ಫೋನಿನಲ್ಲಿ ತಿಳಿಸಿ.
ಅವನು ಅಲ್ಲಿಗೆ ಬಂದಾಗ "ನಾನು ಒಬ್ಬನೇ ಬಂದೆ" ಎಂದು ಹೇಳಿ ಹೆಮ್ಮ ಪಡುತ್ತಾನೆ.
ಅವನಿಗೆ ಅದರಲ್ಲಿ ಸಿಗುವ ಸಂತೋಷವನ್ನು ಒಮ್ಮೆ ನೋಡಿ.
ನಿಮ್ಮ ಮಗನ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುವೆ...
ಶಿವೂ ಸರ್,
ಬಹಳ ಧನ್ಯವಾದಗಳು ನಿಮ್ಮ ಒಲವಿನ ಹಾರೈಕೆ ನನ್ನ ಕಂದಮ್ಮನಲ್ಲಿರಲೆಂದು ಆಶಿಸುತ್ತೇನೆ. ನಿಜ ನನ್ನ ಮನಸಿನ ದುಗುಡ ಬ್ಲಾಗ್ ಮೂಲಕ ಸ್ವಲ್ಪ ಕಡಿಮೆ ಆಗಿದೆ.
ಮೂರ್ತಿ
ಎಲ್ಲರ ಹಾರೈಕೆ ಇದ್ದಾರೆ ನಾವು ಬಹಳ ಧನ್ಯರು.. ಎಲ್ಲಾ ಅಮ್ಮಂದಿರು ಹಾಗೆ ಅಲ್ಲವೇ ದುಃಖ ಇದ್ದೆ ಇರುತ್ತೆ.. ಅಮ್ಮ ನೆನಪಾದರೆ ಒಮ್ಮೆ ಕರೆಮಾಡಿ ಮಾತನಾಡಿಸಿಬಿಡಿ ಅವರಿಗೂ ಖುಷಿ ನಿಮಗೂ ಖುಷಿ...
ಅಜಾದ್ ಸರ್,
ಅನಿಸಿಕೆಗೆ ಧನ್ಯವಾದಗಳು ನಾಳೆ ಸಂಜೆ ನನ್ನ ಮಗನ ನೋಡುವವರೆಗೂ ಭಯ ಆತಂಕ ಕಡಿಮೆಯಾಗದು. ನನ್ನ ಮಗ ಎಲ್ಲದ್ದಕ್ಕೋ ಹೊಂದಿಕೊಳ್ಳುತ್ತಾನೆ. ಎಲ್ಲವನ್ನು ನಿಭಾಯಿಸಿ ಬರಬಲ್ಲನೆಂಬ ನಂಬಿಕೆಯಲಿ ನಾಳೆಯ ದಿನಕೆ ಕಾದಿರುವೆ.
ಲಕ್ಷ್ಮಣ್ ಸರ್,
ಮನಸ್ಸಿನ ಕೆಲಸವೇ ಬೇರೆ ಮೆದುಳಿನ ಕೆಲಸವೇ ಬೇರೆ ಅಲ್ಲವೇ..? ಮೆದುಳು ಮನಸಿನ ಮಧ್ಯೆ ಪ್ರೀತಿ ಎಂಬ ಬೃಹದಾಕಾರದ ಪರ್ವತ ಮನೆಮಾಡಿ ಕುಳಿತುಬಿಟ್ಟಿರುತ್ತೆ... ಯಾವುದೇ ಪರಿಸ್ಥಿತಿಯನ್ನು ಅನುಭವಿಸಿದಾಗಲೇ ಅದರ ಆಳ ಅರಿವಾಗುವುದು ಅಲ್ಲವೇ.. ಬಹಳ ಧನ್ಯವಾದಗಳು ನನ್ನ ಮನದ ಮಂತನಕ್ಕೆ ಸ್ಪಂದಿಸಿದಕ್ಕೆ..
ಶಿವಪ್ರಕಾಶ್,
ಹೌದು ನನ್ನ ಮಗ ಬಂದ ನಂತರ ಹೆಮ್ಮೆಯಿಂದ ಬೀಗುತ್ತಾನೆ. ಭಯ ಅವನು ಬಂದೊಡನೆ ಮಾಯವಾಗಿ ಬಿಡುತ್ತೆ... ಧನ್ಯವಾದಗಳು
ಎಲ್ಲರ ಹಾರೈಕೆ ನನ್ನ ಕಂದಮ್ಮನೊಟ್ಟಿಗಿರಲಿ..
ಎಲ್ಲರಿಗು ಮನಪೂರ್ವಕ ಧನ್ಯವಾದಗಳು
ಮನಸು,
ತಾಯಕರುಳಿಗೆ ತಳಮಳವು ಸಹಜ. ಧೈರ್ಯದಿಂದಿರಿ. ನಿಮ್ಮ ಮಗ ಸುಖರೂಪವಾಗಿ ನಿಮ್ಮೊಡನೆ ಸೇರುತ್ತಾನೆ.
ಮನಸು ಅವರೇ...
ಮುಂದೆ ತಾಯಿ ಮಗನ ಸಮಾಗಮ ನೋಡುವ ತನಕ ಮಾತುಗಳು ಹೊರಡುವುದಿಲ್ಲ ಎನ್ನುತ್ತಿವೆ..
--ಗುರುಪ್ರಸಾದಗೌಡ.ಎ.ಕಾ. :- balipashu.blogspot.com, hanebaraha@gmail.com
ಮನಸು ಅವರೇ,
ನಿಮ್ಮ ಭಾವನೆ, ತಳಮಳ , ದುಗುಡ ದುಮ್ಮಾನಗಳು ಮನಸ್ಸಿಗೆ ನಾಟುತ್ತವೆ.
ನಾನು ಈ ಲೇಖನ ಓದಿ ಪ್ರತಿಕ್ರಿಯೆ ನೀಡುವುದರೊಳಗೆ, ನಿಮ್ಮ ಕರುಳ ಕುಡಿ ನಿಮ್ಮನ್ನು ಸೇರಿರುತ್ತದೆ ಎಂದು ಆಶಿಸುತ್ತೇನೆ.
ಒಮ್ಮೆ ಅವನು ನಿಮ್ಮಲ್ಲಿ ತಲುಪಿದ ಮೇಲೆ ನಿಮ್ಮೆಲ್ಲಾ ನೋವು ದುಃಖ ಮರೆತು ಅವನ ಸಾಹಸಕ್ಕೆ, ಪ್ರಯಾಣದ ಅನುಭವ ಕೇಳಿ ಪ್ರಶಂಸಿಸುತ್ತೀರಿ ಅಲ್ಲವಾ.....?
mrudumanasu!!!!
that was a sweet and touching write up. when your son grows up , i hope he will read this post of yours and feel and understand your love for him
He must be with you now.
good post. my best wishes
malathi S
ಮನಸು,
ಚಿಂತಿಸದಿರಿ,
ಕ್ಷೇಮವಾಗಿ ಬರುತ್ತಾನೆ, ವಿಮಾನ ಪ್ರಯಾಣ ದಲ್ಲಿ ಎಲ್ಲರೂ ಸಹಾಯ ಮಾಡುತ್ತಾರೆ,
ಅವನಿಗೆ ಶುಭ ಪ್ರಯಾಣ ದ ಹಾರೈಕೆ
ಸುನಾತ್ ಸರ್,
ಧನ್ಯವಾದಗಳು ನಿಮ್ಮ ಆಶೀರ್ವಾದ ಸದಾ ಇರಲಿ..
ಗುರುಪ್ರಸಾದ್,
ಖಂಡಿತ ಮಗ ಅಮ್ಮನ ಸಮಾಗಮನದ ವಿವರ ತಿಳಿಸುತ್ತೇನೆ...ಧನ್ಯವಾದಗಳು
ಎಸ್,ಎಸ್,ಕೆ
ಏನು ಮಾಡೋದು ತಾಯಂದಿರು ಹಾಗೆ ಅಲ್ಲವೇ..? ಇನ್ನು ಮಗ ಬಂದಿಲ್ಲ ಇಂದು ಶುಕ್ರವಾರ ಸಂಜೆ ೫.೩೦ಕ್ಕೆ (ಭಾರತದ ಕಾಲಮಾನ ಪ್ರಕಾರ ೮.೦೦ಗಂಟೆಗೆ) ಬರುತ್ತಾನೆ... ಖಂಡಿತ ಇದು ಅವನಿಗೆ ಸಾಹಸ ಪ್ರಯಾಣವೇ ಸರಿ..ಪ್ರಶಂಸಿಸಲೇ ಬೇಕು!!!
ಮಾಲತಿ,
ನಿಮ್ಮ ಶುಭಹಾರೈಕೆಗೆ ಧನ್ಯವಾದಗಳು.... ಮಗ ನನ್ನ ಬ್ಲಾಗ್ ಖಂಡಿತ ಓದೇ ಓದುತ್ತಾನೆ.
ಗುರುಪ್ರಸಾದ್,
ಹೌದು, ವಿಮಾನದಲ್ಲಿ ಸಹಾಯ ಮಾಡುತ್ತಾರೆ ಅದೇ ನಂಬಿಕೆ ನಮಗೆ. ಈಗಷ್ಟೆ ಕರೆ ಮಾಡಿದ್ದೆ ಬೆಂಗಳೂರು ವಿಮಾನನಿಲ್ದಾಣದಲ್ಲಿದ್ದಾನೆ, ಮಗ ಬಹಳ ಖುಷಿಯಾಗಿದ್ದಾನೆ. ಏನು ತೊಂದರೆ ಇಲ್ಲ ಬರುತ್ತೆನೆಂಬ ವಿಶ್ವಾಸ ಮೂಡಿಸಿದ್ದಾನೆ ನನ್ನ ಮಗ.
ಧನ್ಯವಾದಗಳು.
ಮನಸು....
ತಾಯಿ ಕರಳು...
ಮುದ್ದಿನ ಮಗನ ಬಗೆಗೆ ದುಗುಡ ಆತಂಕ ಸಹಜ...
ಧೈರ್ಯವಾಗಿರಿ...
ನನ್ನ ಅಳಿಯ ತುಂಬ ಬುದ್ಧಿವಂತ...
ತುಂಬಾ ಚೂಟಿ...
ಯಾರನ್ನೂ ಬೇಕಾದರೂ ಮಾತಾಡಿಸಿ ಕೆಲಸ ಮಾಡಿಕೊಂಡು ಬರುತ್ತಾನೆ...
ವಯಸ್ಸಿಗೆ ಮೀರಿದ ತಿಳುವಳಿಕೆ ಇದೆ...
ಮಹೇಶ್ ಮತ್ತು ನೀವು ಕೊಟ್ಟ ಸಂಸ್ಕಾರ ಜೊತೆಯಲ್ಲಿದೆ...
ನಮ್ಮೆಲ್ಲರ ಶುಭಾಶೀರ್ವಾದ ಅವನಿಗಿದೆ..
ಪುಟ್ಟ ಬಂದ ವಿಷಯ ನಮಗೆಲ್ಲ ತಿಳಿಸಿ...
ಧನ್ಯವಾದಗಳು ಪ್ರಕಾಶಣ್ಣ,
ಈಗಷ್ಟೇ ಕರೆಮಾಡಿದ್ದೆ ಮಗ ವಿಮಾನದಲ್ಲಿದ್ದಾನೆ... ಯಾವ ತೊಂದರೆಯಿಲ್ಲ ಸಂಜೆ ಬಂದು ಮುಟ್ಟಿದ ಕೂಡಲೇ ತಿಳಿಸುವೆ..
ಮತ್ತದೇ ಕೆಲಸ, ಕೆಲಸ, ಕೆಲಸ... ಯಾವುದೇ ಬ್ಲಾಗ್ ಬರೆಯಲು, ಓದಲು ಸಮಯವೇ ಸಿಗಲಿಲ್ಲ... ನಿಮ್ಮ ಮಗ ಕ್ಷೇಮವಾಗಿ ನಿಮ್ಮನ್ನು ಸೇರುತ್ತಾನೆ... ಚಿಂತಿಸದಿರಿ... ನಿಮ್ಮ ಕಂದಮ್ಮನಿಗೆ ಶುಭ ಹಾರೈಕೆಗಳು...
ನಿಮ್ಮ ಮನಃಸ್ಥಿತಿಯನ್ನು ಸ್ವತಃ ತಾಯಿಯಾಗಿರುವ ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ಧೈರ್ಯಗೆಡದಿರಿ. ಖಂಡಿತ ನಿಮ್ಮ ಮುದ್ದಿನ ಕುವರ ಬಹು ಬೇಗ ನಿಮ್ಮೊಂದಿಗೆ ಸೇರುತ್ತಾನೆ. ಆತನ ಶುಭ ಪಯಾಣಕ್ಕಾಗಿ ನಾನೂ ಪ್ರಾರ್ಥಿಸುವೆ. ಬಹು ಬೇಗ ನಿಮ್ಮಿಬ್ಬರ ಸಮಾಗಮದ ಶುಭವಾರ್ತೆ ನಮ್ಮೆಲ್ಲರ ತಲುಪುವಂತಾಗಲಿ.
ನಿಮ್ಮ ದುಗುಡಗಳನ್ನು ಹಂಚಿಕೊಂಡ ಎಲ್ಲ ನಮ್ಮ ಬ್ಲಾಗುಮಿತ್ರರಿಗೆ...ಸಿಹಿ ಸುದ್ದಿಯನ್ನೂ ಮುಟ್ಟಿಸಿದಿರಿ...ನೋಡಿದಿರಾ..ನಾನು ಹೇಳಿರಲಿಲ್ಲವೇ...ಮನು ಬಹಳ ಸ್ಮಾರ್ಟ್ ಅಂತ...ಬಂದ ತಾನೇ..ಏನೇನೂ ತೊಂದರೆಗಳಿಲ್ಲದೇ....ಅಬ್ಬಾ...!!! ಈಗ ಮನಸು ಒಂದು ಸ್ಥಿಮಿತಕೆ ಬಂದಿರಬೇಕು....ಅಭಿನಂದನೆಗಳು
Post a Comment