Thursday, March 31, 2011

ಕ್ಷಮೆಗಾಗಿ ಸಮಯವೂ ತಾಳದು..

ವಾಹ್!!! ನೀಳ ಕೇಶದ ನೀರೆ, ಸುಂದರ ಸುರದ್ರೂಪಿ ಬೆಡಗಿ ವಿಜಯನಗರ ಬಸ್ ನಿಲ್ದಾಣದಿಂದ ಕೆಂಪೇಗೌಡ ನಿಲ್ದಾಣಕ್ಕೆ ಬಸ್ ಹತ್ತಿ ಟಿಕೆಟ್ ತೆಗೆದುಕೊಂಡು ತನ್ನ ಭುಜದ ಮೇಲೆ ಪುಸ್ತಕಗಳ ಹೊರೆ ಹೊತ್ತುಕೊಂಡು ನಿಂತಿದ್ದಾಳೆ. ಸುತ್ತಮುತ್ತ ನೋಡ್ತಾಳೆ ಎಲ್ಲೂ ಸೀಟು ಖಾಲಿಯಾಗಿಲ್ಲ ಸ್ವಲ್ಪ ಸಮಯದ ನಂತರ ಬಂದ ನಿಲ್ದಾಣದಲ್ಲಿ ಯಾರೋ ಒಬ್ಬರು ಇಳಿದಿದ್ದರಿಂದ ಅವಳಿಗೆ ಕುಳಿತುಕೊಳ್ಳಲು ಸೀಟ್ ಸಿಕ್ಕಿತು........ ಅಬ್ಬಾ ಎಂದು ಧಣಿವಾರಿಸಿಕೊಳ್ಳುವಂತೆ ನೀಳ ಕೇಶದ ನೀರೆ ತನ್ನ ಕೂದಲನ್ನು ಸರಿಗೊಳಿಸಿಕೊಂಡು ಕುಳಿತುಕೊಂಡಳು.........

ಅವಳ ಹಿಂದಿನ ಸೀಟಿನಲ್ಲಿ ನಿದ್ರೆಯಲಿದ್ದವಗೆ... ಆಕೆ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಲಿದ್ದಂತೆ ಸುಮಧುರ ಸುಗಂಧ ಪರಿಮಳ ಅವನ ಮೂಗಿಗೆ ಸೆಳೆದಾಗಲೇ ಎಚ್ಚೆತ್ತಿದ್ದು....... ಇತ್ತ ತನ್ನ ಮುಂಗುರುಳ ಸರಿಪಡಿಸಿಕೊಳ್ಳುತ್ತಲೇ ಇದ್ದ ಸುಂದರಿಯ ಮುಖ ನೋಡಬೇಕೆಂದು ಎಷ್ಟು ಸಾರಿ ಆ ಕಡೆ ಈ ಕಡೆ ತಿರುಗಿದರೂ ಅವಳ ಮುಖಾರವಿಂದ ಕಾಣಲೇ ಇಲ್ಲ...... ಆ ಕ್ಷಣ ಅವನಿಗೆ ಬೇಸರ ಬಯಸದೇ ಬಂದಿತ್ತು .....


ಅವಳ ನೀಳ ಕೇಶರಾಶಿ ಎಂತವರನ್ನೂ ಮರುಳುಮಾಡುವಂತಿತ್ತು. ಜಡೆಯಾಕದೆ ಬಿಟ್ಟಿದ್ದ ಆ ಕೇಶರಾಶಿ ಆಗೊಮ್ಮೆ ಈಗೊಮ್ಮೆ ತೊಂದರೆಮಾಡುತ್ತಲಿದ್ದರಿಂದ ಆ ಕೂದಲನ್ನು ಸರಿಪಡಿಸಿಕೊಂಡು ಕುಳಿತುಕೊಂಡಳು... ಆದರೂ ಏಕೋ.. ಏನೋ ಚುಳ್ ಎಂಬಂತೆ ನೋವು ಪ್ರಾರಂಭಿಸಿತು... ಎರಡು ಮೂರು ಬಾರಿ ಸರಿಪಡಿಸಿಕೊಂಡ ಕೂದಲು ಏನು ಪ್ರಯೋಜನವಾಗದೆ ಇದ್ದ ಪೂರ್ಣ ಕೂದಲನ್ನು ಮುಂಬದಿಗೆ ತಂದಳು ಆದರೂ ತಲೆಯ ಮೇಲಿಂದ ಪುಡಿಗೂದಲೂ ಚುಳ್ಳೆಂಬಂತೆ ನೋಯಿಸಲು ಪ್ರಾರಂಭಿಸಿತು... ಅವಳ ಮನಸಲ್ಲೇ ಕೋಪ ಉದ್ವೇಗ ಒಮ್ಮೆಲೇ ಕಾಣುತ್ತಿತ್ತು ಹಿಂಬದಿ ಇರುವವನದೇ ಈ ಕೆಲಸವಿರಬೇಕು ನನ್ನ ಜುಟ್ಟು ಎಳೆಯುತ್ತಿರಬೇಕು ಎಂದು ಒಮ್ಮೆಲೆ ಕೋಪದಿ ಎದ್ದು ಹಿಂದಿರುಗಿತ್ತಿದ್ದಂತೆ ........... ಕೋಪದಲ್ಲಿದ್ದರೂ ಎಷ್ಟು ಚೆನ್ನಾಗಿದ್ದಾಳೆ, ಎಷ್ಟುಹೊತ್ತಿಂದ ಕಾಯ್ತಾ ಇದ್ದೆ ಇವಳನ್ನ ನೋಡಲು ವಾಹ್..!! ಎಂದುಕೊಳ್ಳುವಷ್ಟರಲ್ಲಿ ಕಪ್ಪಾಳ ಮೋಕ್ಷವಾಯ್ತು.... ಸುತ್ತಲಿದ್ದ ಜನರೆಲ್ಲಾ ಕಕ್ಕಾಬಿಕ್ಕಿಯಾಗಿ ಅವರಿಬ್ಬರತ್ತಿರನ್ನೇ ನೋಡಲು ಪ್ರಾರಂಭಿಸಿದರು.........


ನೀಳ ಕೇಶರಾಶಿ ನೀರೆ ಜೋರು ಧ್ವನಿಯಲ್ಲಿ ನಿನಗೆ ಅಕ್ಕ ತಂಗಿಯರು ಇಲ್ಲ್ವಾ.... ಸ್ವಲ್ಪನೂ ಮಾನಾಮರ್ಯಾದೆ ಇಲ್ಲವಾ..?? ಎಂದು ಕೇಳುತ್ತಲಿದ್ದಂತೆ ಸುತ್ತಮುತ್ತಲಿದ್ದ ಜನ ಏನಾಯತಮ್ಮ...?? ಎಂದು ಕೇಳುವುದೇ ತಡ... ನೋಡಿ ಈ ಹುಡುಗ ನನ್ನ ಕೂದಲು ಎಳಿತಾ ಇದ್ದ ನಾನು ಎಷ್ಟೊಂದು ಸರಿ ನನ್ನ ಕೂದಲನ್ನ ಮುಂಬಾಗಕ್ಕೆ ತಗೆದುಕೊಂಡರೂ ಮತ್ತೆ ಮತ್ತೆ ಎಳಿತನೇ ಇದ್ದ... ಎಂದು ಗೋಳಿಡುತ್ತಿದ್ದಂತೆ ಜನರು ಹಿಗ್ಗಾಮುಗ್ಗ ತಳಿಸಿ ಅವನಿಗೆ ಮಾತನಾಡಲೂ ಬಿಡದೆ ಕೆನ್ನೆಯನ್ನು ಊದಿಸಿ.. ತಲೆಯಲ್ಲಿ ರಕ್ತ ಹೆಪ್ಪುಗಟ್ಟುವಂತೆ ಹೊಡೆದರು.... ಇಷ್ಟೆಲ್ಲಾ ನೆಡೆಯುತ್ತಾ.... ಜೋರು ಧನಿಗಳು ಕೇಳುತ್ತಲಿದ್ದಂತೆ ಡ್ರೈವರ್ ಗಾಬರಿಯಲ್ಲಿ ಬಸ್ ನಿಲ್ಲಿಸಿ ಏನಾಗಿದೆ ಎಂದು ನೋಡಲು ಬಂದವನು ಆ ಹುಡುಗನಿಗೆ "ಯಾರು ಹೆತ್ತ ಮಗನೋ ನೀನು ಇಂತಾ ಕಚಡಾ ಕೆಲಸ ಮಾಡಿ ನಮ್ಮ ದಿನವನ್ನೂ ಹಾಳು ಮಾಡ್ತೀಯಾ ಎಂದು ಸುಪ್ರಭಾತ ಹಾಕಿದ" ಇದೆಲ್ಲ ಕೇಳಿಸಿಕೊಂಡು ಒದೆಸಿಕೊಂಡವ ಮಾತ್ರ ಹೆಚ್ಚು ಮಾತನಾಡಲಾಗದೆ ನನ್ನದೇನು ತಪ್ಪಿಲ್ಲ... ಬರಿ ಆ ಹುಡುಗಿ ಮುಖ ನೋಡಬೇಕೆಂದೆನಿಸಿದ್ದು ನಿಜ ಆದರೆ ತಪ್ಪು ಕೆಲಸ ಮಾಡುವಂತವನಲ್ಲ ಎಂದು ಮಾತ್ರ ಬಡಬಡಾಯಿಸುತ್ತಿದ್ದುದ ಕಂಡ ಯಾರೋ ಹಿರಿಯರು ಹೇ..!!! ನಡಿ... ನಡಿ... ಹಿಂದಿನ ಸೀಟಿಗೆ ಹೋಗಿ ಕೂತ್ಕೋ ಇಲ್ಲೇ ಇದ್ರೆ ಮತ್ತಿನ್ನೇನಾದರು ಮಾಡಿಬಿಟ್ಟೀಯಾ ಎಂದು ಗದರಿ ಹಿಂದೆ ಕಳಿಸಿದರು..


ಏಟು ತಿಂದ ತಪ್ಪಿಗೆ ಸದ್ದಿಲ್ಲದೆ ಹಿಂದೆ ಹೋಗಿ ದೂರದಲ್ಲೆಲ್ಲೋ ಕುಳಿತು ಬಿಟ್ಟ ಅಕ್ಕಪಕ್ಕದವರು ಅವನನ್ನೇ ನೋಡಿ ನಗುತ್ತಲಿದ್ದರು... ಇವನಿಗೆ ಮುಜುಗರದ ಮೇಲೆ ಅವಮಾನದಿ ಹನಿಗಳು ಮಾತ್ರ ಕಣ್ಣಕೊನೆಯಲಿ ನಿಂತಿತ್ತು........


ಸದ್ಯ ತೊಲಗಿದ ಎಂದು ನೀಳ ಕೇಶರಾಶಿಯವಳು ಆರಾಮಾಗಿ ಕುಳಿತುಕೊಂಡಳು... ತಪ್ಪಿತು ಕಾಟ ಎಂದುಕೊಳ್ಳುತ್ತಲಿದ್ದಂತೆ ಮತ್ತೆ ತನ್ನ ಕೂದಲು ಚುಳ್ ಏನುವಂತೆ ನೋಯಿಸಿತು.... ನನ್ನ ಭ್ರಮೆ ಎಂದು ಕೂದಲುಗಳನ್ನು ಮುಂದಕ್ಕೆ ತೆಗೆದುಕೊಂಡು ಕುಳಿತಳು. ಮತ್ತೊಮ್ಮೆ ಸುತ್ತಲೂ ಕಣ್ಣಾಡಿಸಿದಳು ಹಿಂಬದಿಯಲಿ ಯಾರೋ ವಯಸ್ಸಾದ ಮಹಿಳೆ ಕುಳಿತಿದ್ದರು... ಆ ಹುಡುಗ ಎಲ್ಲೆಂದು ನೋಡಿದರೆ ಹಿಂದೆ ಎಲ್ಲೋ ಮೂಲೆಯಲ್ಲಿ ತಲೆ ತಗ್ಗಿಸಿ ಕುಳಿತಿದ್ದ. ಸಮಾಧಾನದ ಉಸಿರು ಬಿಟ್ಟು ತಲೆಯನ್ನು ಹೊರಗಿಸಿ ಕುಳಿತವಳಿಗೆ ಪುಡಿಗೂದಲು ಮತ್ತೂ ಕಷ್ಟ ಕೊಡಲು ಶುರುವಿಟ್ಟಿತು... ಅಯ್ಯೋ ಕರ್ಮವೇ ಏನಾಗಿದೆ ಎಂದು ತಟ್ಟನೆ ತಿರುಗಿದರೆ ಸೀಟಿಗೆ ಆತುಕೊಂಡಿದ್ದ ಕಬ್ಬಿಣದ ಸಲಾಕೆ ಸ್ವಲ್ಪ ಮಟ್ಟಿ ಕತ್ತರಿಸಿತ್ತು. ಸುಂದರಿಯ "ಕೇಶರಾಶಿಯನ್ನು ಆಕರ್ಷಿಸಿ ಎಳೆದದ್ದು ಆ ಪ್ರಾಯದ ಹುಡುಗನಲ್ಲ ಈ ಬಾಯ್ಬಿಟ್ಟ ಕಬ್ಬಿಣ" ಎಂದು ಮನವರಿಕೆಯಾಗಲು ಕೆಲವೇ ಕ್ಷಣಗಳು ಬೇಕಾಯಿತು...


ಹೋ!!! ಛೇ ಎಂತಾ ಅನಾಹುತ ಮಾಡಿಬಿಟ್ಟೆ..... ಈಗ ಕ್ಷಮೆ ಕೇಳಲೂ ನಾನು ಅರ್ಹಳಲ್ಲ... ಏನಾದರಾಗಲಿ ಈಗಲೇ ಕೇಳಿಬಿಡುವ ಎಂದು ದೂರದಲ್ಲಿ ಎಲ್ಲೋ ಕುಳಿತಿದ್ದವನತ್ತ ಕಣ್ಣಾಡಿಸುತ್ತಿದ್ದವಳನ್ನು ಕಿಟಿಕಿಯಿಂದ ಯಾರೋ ಕರೆದಂತಾಯ್ತು...


ನೋಡಿ ನಾನು ಆ ತರಹ ತಪ್ಪು ಮಾಡಿಲ್ಲ....... ಕಲ್ಪನೆಯಲ್ಲಿ ಏನೆಲ್ಲಾ ಸೃಷ್ಟಿಸಿಕೊಳ್ಳಬೇಡಿ... ನಿಜವನ್ನು ತಿಳಿದು ಮಾತನಾಡಿ .... ನೀವು "ಸುಂದರವಾಗಿದ್ದೀರಿ ನೋಡಲು ಅಷ್ಟೆ... ಆದರೆ ಆಂತರಿಕ ಸೌಂದರ್ಯದಲಲ್ಲ" ಎಂದು ಹೇಳುತ್ತಿದ್ದಂತೆ ಬಸ್ ಇವಳ ಕ್ಷಮೆಗೆ ಸಮಯವನ್ನೂ ಕೊಡದೆ ಮುಂದಕ್ಕೆ ಸಾಗಿತು........

Tuesday, March 29, 2011

ಇಂಡೋ-ಪಾಕ್ ಸಮರ



ಯುದ್ಧದ ಸದ್ದಿಗೆ ಇಂದೇ ರಣರಂಗದಂತಾ ಮನಸು ನಿಶಬ್ಧಿಸಿದೆ...
ಎರಡು ದೇಶಗಳ ವೈಮನಸ್ಯ ಗಗನದೆತ್ತರಕ್ಕೆ ಬೆಳೆದರೂ
ಆಟವೆಂಬ ಯುದ್ಧಕೆ ದೇಶ ವಿದೇಶಗಳಲಿ ಎಲ್ಲರ ಮನದಲಿ
ಒಂದೆಡೆ ಗೆಲುವ ಕಾತುರ, ಮತ್ತೊಂದೆಡೆ ಏನಾಗುವುದೆಂಬ
ಭಯದ ಛಾಯೆ ಎಲ್ಲರ ಮನೆ ಮನದಲ್ಲಿ ನರ್ತನ ಮಾಡುತ್ತಲಿದೆ.

ನನ್ನವರೇ ಗೆಲ್ಲಲಿ ಎಂಬ ಭಾವನೆ ಎರಡೂ ದೇಶದವರಲ್ಲಿದೆ
ಅವರ ಗೆಲುವಿನಿಂದ ಯಾರಿಗೇನೂ ಸಿಗದಿದ್ದರೂ
ಜಿದ್ದಾಜಿದ್ದಿನ ಕದನದ ಕಹಳೆಯಂತೂ ಮೊಳಗಿದೆ
ರಾಜಕೀಯದ ಲಾಭವೋ ದೇಶಪ್ರೇಮದ ಪರಿಯೋ ತಿಳಿದಿಲ್ಲ.....

ಎರಡು ದೇಶದ ಪ್ರಧಾನಿ, ಬಣ್ಣದ ಲೋಕದ ದಿಗ್ಗಜರು
ರಾಜಕೀಯ ದುರೀಣರು, ಪ್ರಸಿದ್ಧವೆನಿಸುವ ಜನರ ಆಗಮ
ಪಾಕಿಸ್ತಾನ-ಭಾರತದ ಜೊತೆಯಾಟಕೆ ಹೊಸ ಕಳೆ ಸೃಷ್ಟಿಸಿದೆ
ಆದರೂ ಎಲ್ಲೋ ಮನದಲಿ ದ್ವಂದ್ವ ಪ್ರಶ್ನೆ-ಉತ್ತರಳ ಹುಡುಕುತಿದೆ

ಅಪ್ಪ ಅಮ್ಮನ ಜಗಳದಲಿ ಕೂಸು ಬಡವಾಯಿತು ಎಂಬಂತೆ
ಇಂಡೋ-ಪಾಕ್ ಕದನದಲ್ಲಿ ಸಾಮಾನ್ಯರು ಬಲಿಯಾಗದಿರಲಿ
ಮೋಹಲಿಯ ಕ್ರೀಡಾ ರಣರಂಗ ಕೇವಲ ಆಟಗಳ ಸಮರವಾಗಿ
ಗೆಲುವು ಭರತ ಭೂಮಿಗೆ ಮೀಸಲಿರಲಿ ಎಂದು ಆಶಿಸುವ ಬನ್ನಿ...

Saturday, March 26, 2011

ಕೆಂಪಾದವೋ ಎಲ್ಲಾ ಕೆಂಪಾದವೋ...



ಶುಕ್ರವಾರ ಸಂಜೆ ಕುವೈತ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿರೋ ಸ್ನೇಹಿತರ ಮನೆಗೆ ೬ ಗಂಟೆಗೆ ಹೋಗಿದ್ದೆವು.... ೬.೩೦ರವೇಳೆಗೆ ೮ನೇ ಮಹಡಿಯಲ್ಲಿರುವ ಅವರ ಮನೆಯಲ್ಲಿ ಮಣ್ಣಿನ ವಾಸನೆ ಬರುತ್ತಿದ್ದು ನೋಡಿ ಹೋ ಎಂದಿನಂತೆ ಎಲ್ಲೋ ಧೂಳು ಎದ್ದಿರಬೇಕು (ಕುವೈತಿನಲ್ಲಿ ವಾರದ ಕೊನೆಯಲ್ಲಿ ಸಾಮಾನ್ಯವಾಗಿ ಧೂಳಿನ ದಿನವೇ ಆಗಿರುತ್ತದೆ) ಎಂದುಕೊಂಡೆ. ಸುಮಾರು ೭.೩೦ ಇರಬೇಕು ಹೊರಡೋಣ ಎಂದು ಬಂದಾಗ ಲಿಫ್ಟ್ ಕೆಲಸ ಮಾಡುತ್ತಿಲ್ಲವೆಂದು ೯ ಮಹಡಿ ಇಳಿದೇ ಬಂದೆವು... ಹೊರಗೆ ಬಂದಕೂಡಲೆ ೪/೫ ಹೆಜ್ಜೆಯ ಅಂತರದಲ್ಲಿ ಮಾತ್ರ ಕಾಣುತ್ತಿತ್ತು ಮುಂದಕ್ಕೆ ಏನೂ ಕಾಣುತ್ತಿಲ್ಲ..... ಅಯ್ಯೋ ಏನಾಗಿದೆ ಇಷ್ಟು ವಿಚಿತ್ರವಾಗಿದೆಯಲ್ಲ ಎಂದುಕೊಂಡೆವು.... ಸರಿ ಎಂದು ನನ್ನತ್ತಿರವಿದ್ದ ಬಟ್ಟೆಯಿಂದ ತಲೆಗೆ ಕಟ್ಟಿ ಮುಂದೆ ಹೋದೆವು... ಕಾರನ್ನು ಎಲ್ಲೋ ನಿಲ್ಲಿಸಿ ಬಂದಿದ್ದೆವೋ ಗೊತ್ತೇ ಆಗುತ್ತಲ್ಲ....... ಸುತ್ತಾಡಿ ಸುತ್ತಾಡಿ ಆ ಧೂಳಿನಲ್ಲಿ ಸಾಕಾಯ್ತು ಸರಿ ಕೊನೆ ಪ್ರಯತ್ನವೆಂದು ಇನ್ನೊಂದು ಕಡೆ ಹೋಗೋಣ ಎಂದು ಹೋಗ್ತಾ ಇದ್ದರೆ ಈ ವಾಯುದೇವ ಸುಮ್ಮನಿರಬೇಕಲ್ಲ........ ಎಂತಾ ಭಯಾನಕ ಗಾಳಿ, ಇಷ್ಟು ತೂಕದ ದೇಹವನ್ನೇ ಬೀಳಿಸೋಕೆ ನೋಡ್ತಾ ಇದ್ದಾ ಹೋ ಇವಳು ಬಿದ್ದರೆ ಕಷ್ಟ ಹೊತ್ತುಕೊಂಡು ಹೋಗೋಕೆ ಆಗೋಲ್ಲ ಎಂದು ನನ್ನವರು ಕೈ ಹಿಡಿದುಕೊಂಡು ಕರೆದುಕೊಂಡು ಹೋಗ್ತಾ ಇದ್ದರು..... ಅಯ್ಯೋ ಮಗನ್ನ ಬೇರೆ ಕರೆದುಕೊಂಡು ಬಂದಿಲ್ಲ ಒಂದು ಕಡೆ ಒಳ್ಳೆದೇ ಆಯ್ತು ಇನ್ನೊಂದು ಕಡೆ ನಮಗೇನಾದರೂ ಆದ್ರೆ ಅವನೊಬ್ಬನೇ ಮನೆನಲ್ಲಿದ್ದಾನೆ ಎಂಬ ಯೋಚನೆ...... ಈ ಆರ್ಭಟಿಸುವ ಗಾಳಿಗೆ ಅವನೇನಾದರೂ ಹೆದರಿದ್ದಾನೇನೋ ಎಂದು ಕರೆ ಮಾಡಿದರೆ... ಅಯ್ಯೋ ಇಲ್ಲಿ ಏನು ಗಾಳಿ ಶಬ್ಧನೂ ಇಲ್ಲ ಎಂತದೂ ಇಲ್ಲ ಸುಮ್ಮನಿರಪ್ಪ... ನಾನು ಕ್ರಿಕೆಟ್ ನೋಡ್ತಾ ಆರಾಮಾಗಿ ಇದ್ದೀನಿ ನೀವು ಬೇಗ ಬನ್ನಿ... ಸರಿ ನಾವು ಇಲ್ಲಸಲ್ಲದನ್ನ ಯೋಚಿಸಿ ಮಗ ಗಾಬರಿಯಾಗ್ತಾನೆ ನಾವಿಲ್ಲ ಎಂದರೆ ಎಂದು ಯೋಚಿಸಿದರೆ ಕ್ರಿಕೆಟಿನ ಆರ್ಭಟದಲ್ಲಿ ಅವನ ನೆಚ್ಚಿನ ಟೀಂ ನ್ಯೂಜಿಲೆಂಡ್ ಗೆಲ್ಲುತ್ತಿರುವ ಸಂಭ್ರಮದಲ್ಲಿದ್ದ......

ಇತ್ತ ನಾವು ಸುತ್ತಾಡುವುದ ಕಂಡು ಕಾರಿನಲ್ಲಿ ಬರುತ್ತಲಿದ್ದವರೊಬ್ಬರು ನಿಮನ್ನು ಎಲ್ಲಿ ಬಿಡಬೇಕು ಎಂದು ಕೇಳುತ್ತಲಿದ್ದರೆ ನನಗೆ ಭಯವಾಗುತ್ತಿತ್ತು... ಸುತ್ತಲೂ ಸ್ಮಶಾನ ಮೌನ ರಸ್ತೆ ಬದಿ ಯಾರೂ ಇಲ್ಲ... ಯಾರೋ ಸಹಾಯ ಹಸ್ತ
ಚಾಚುವಂತೆ
ಬಂದು ತೊಂದರೆ ಕೊಟ್ಟು ಬಿಡುವರೇನೋ(ಹಲವು ಸಂಗತಿಗಳನ್ನು ಕೇಳಿದ್ದ ನಮಗೆ ಭಯ ತರಿಸಿತ್ತು ಆ ಕ್ಷಣ)... ಎಂದು ಪುಣ್ಯಕ್ಕೆ ಯಾವ ಅವಘಡವಾಗಲಿಲ್ಲ... ಪಾಪ ಅವರು ಕನಿಕರದಿಂದ ಸಹಾಯ ಕೇಳಿದ್ದಕ್ಕೆ ತಪ್ಪು ತಿಳಿಯೋ ಮನಸ್ಸು ಮಾಡ್ತೀವಿ.

ಅಂತೂ ಇಂತೂ ಸುಮಾರು ೧೫ ನಿಮಿಷಗಳ ನಂತರ ನಾವು ನಿಲ್ಲಿಸಿದ್ದ ಕಾರು ಸಿಕ್ಕಿತು. ಅದು ಕೆಂಪು ಬಣ್ಣದ ಕಾರೋಗಿ ಕಂದು ಬಣ್ಣಕ್ಕೆ ತಿರುಗಿತ್ತು ಹಹಹ...... ಸದ್ಯ ಸಿಕ್ಕಿತಲ್ಲಾ ಎಂದು ಕಾರೊಳಗೆ ಕೂತೆವು.... ರಸ್ತೆ ಕಾಣುತ್ತಲೇ ಇಲ್ಲ ನಿಧಾನ ಗತಿಯಲ್ಲಿ ಚೆಲಿಸುತ್ತ ಸದ್ಯಕ್ಕೆ ಹೆದ್ದಾರಿಗೆ ಬಂದೆವು ಇನ್ನು ಧೈರ್ಯ ಬಿಡು ಹೇಗೋ ಮನೆ ತಲುಪುತ್ತೇವೆ ಎಂದುಕೊಂಡು ಬರ್ತಾ ಇದ್ದರೆ ಏನು ರಸ್ತೆಯಲ್ಲಿ ಯಾರದೋ ಬಟ್ಟೆ, ಮಕ್ಕಳ ಆಟಿಕೆಗಳು ಎಲ್ಲಾ ಬಿದ್ದು ಒದ್ದಾಡ್ತಾ ಇದ್ದವು... ನಿಧಾನವಾಗೇ ಸಾಗುತ್ತಿದ್ದ ಕಾರಿನಲ್ಲಿ ತೆಪ್ಪಗೆ ಕೂರದೇ ಏನೇನೋ ಅವಾಂತರಗಳನ್ನ ಯೋಚಿಸುತ್ತಿದ್ದೆ........ ಈ ಗಾಳಿ ಸುನಾಮಿಯ ಸೂಚನೆಯೇ... ಸುನಾಮಿಯಾದರೇ ಏನು ಗತಿ... ನಾನು ಈ ಗಾಳಿಗೆ ಭಯ ಬಿದ್ದೆ ಇನ್ನು ಜಪಾನಿನ ಜನ ಎಷ್ಟರ ಮಟ್ಟಿಗೆ ಭಯ ಬಿದ್ದಿರಬೇಡ ಎಂದುಕೊಳ್ಳುತ್ತ ಸುತ್ತ ಮುತ್ತ ಕಣ್ಣಾಡಿಸಿದರೆ ಎಷ್ಟೋ ಮರಳು ಸೊಂಟ ಮುರಿದುಕೊಂಡಿದ್ದವು ಇನ್ನು ಕೆಲವು ತರಗೆಲೆಗಳಂತೆ ಹಾರಿಹೋಗಿದ್ದವು.... ಬಿರುಗಾಳಿಯ ರಭಸಕ್ಕೆ ಕಬ್ಬಿಣದ ಸಲಾಕೆಗಳೂ ಸಹ ಮುರಿದು ಬಿದಿದ್ದವು....ಏನೋ ಭಯದ ಅನುಭವ, ಗಾಳಿಗೆ ಕಾರುಗಳೆಲ್ಲಿ ತೂರಿಹೋಗುತ್ತೋ ಎನ್ನುವಂತೆ ಭಾಸವಾಯಿತು. ಇಷ್ಟು ದಿನ ನಾನು ಕುವೈತಿನ ಬಿರುಗಾಳಿಯನ್ನು ನೋಡಿದ್ದೆ ಆದರೆ ಇಷ್ಟು ರಭಸದ ಗಾಳಿಯನ್ನು ಅನುಭವಿಸಿರಲಿಲ್ಲ.....

ನಾವು ಹೆದ್ದಾರಿಯಲ್ಲಿ ಸಾಗುವಾಗ ಅಕ್ಕಪಕ್ಕ ಅಷ್ಟು ಸ್ಪಷ್ಟವಾಗಿ ಕಾಣುತ್ತಲಿರಲಿಲ್ಲ ಅಲ್ಲೇ ಇದ್ದ ಬಸ್ ನಿಲ್ದಾಣದಲ್ಲಿ ೪,೫ ಜನ ಬಸ್ಸಿಗಾಗಿ ಕಾಯುತ್ತಲಿದ್ದರು ಮುಖಕ್ಕೆ ಕರವಸ್ತ್ರವನ್ನು ಕಟ್ಟಿಕೊಂಡು ಗೂಡರಿಸಿಕೊಂಡು ನಿಂತಿದ್ದ ಕಂಡು ಬೇಸರವಾಯಿತು ಇನ್ನು ಆ ಬಸ್ ಬರುವವರೆಗೂ ಇವರೆಲ್ಲಾ ಮಣ್ಣಿನ ಮನುಷ್ಯರಾಗುವುದೂ ಖಂಡಿತಾ ಎಂದುಕೊಂಡೆ... ಬೃಹತ್ ಬಂಗಲೆಗಳನ್ನು ಸಹ ಮರಳು ಆವರಿಸಿಬಿಟ್ಟಿತ್ತು.... ಪ್ರಕೃತಿ ಮಾತೆಗೆ ಇಲ್ಲಿ ಬಡವ ಬಲ್ಲಿದ ಎಂಬ ಯಾವ ಅಂತರವೂ ಇಲ್ಲ ನೋಡಿ ಎಲ್ಲವನ್ನೂ, ಎಲ್ಲರನ್ನೂ ಸಮನಾಗಿಸಿ ಧೊಳೆಬ್ಬಿಸಿಬಿಟ್ಟಿದ್ದಳು........ಒಂದೆಡೆ ಬೆಂಕಿಯ ಜ್ವಾಲೆಯೂ ಹಬ್ಬಿರುವ ತರಹವೂ ಭಾಸವಾಗುತ್ತಿತ್ತು. ವಾಯುದೇವ, ಜ್ವಾಲಾಮುಖಿ, ಎಲ್ಲರೂ ಪ್ರಕೃತಿ ಮಾತೆಗೆ ಜೊತೆಯಾಗಿದ್ದರೆಂದೆನಿಸಿತು.


ನಿಧಾನವಾಗಿ ಮನೆ ಹತ್ತಿರ ಬರುತ್ತಿದ್ದಂತೆ ಮನೆ ಮುಂದೆ ರಾಶಿ ರಾಶಿ ಕಸದ ತೊಟ್ಟಿಯಂತಿದದ್ದನ್ನು ಕಂಡು ಸರಿ ಬಿಡು ನೆನ್ನೆಯಷ್ಟೆ ಮನೆಯಲ್ಲಿದ್ದ ಧೂಳನ್ನೆಲ್ಲಾ ಕೊಡವಿ ಸ್ವಚ್ಚಗೊಳಿಸಿದ್ದೆ ಇನ್ನು ಇವತ್ತು ಅದೇ ಕೆಲಸ ಮಾಡಬೇಕೆಂದುಕೊಂಡು ಒಳಗೆ ಕಾಲಿಟ್ಟರೆ ಬರಿ ಮಣ್ಣು ಮನೆಯನ್ನೇ ಆವರಿಸಿತ್ತು ಹೇಗೆ ಅಂತೀರಾ ಕಪ್ಪು ಬಣ್ಣದ ಸೋಫಾ ಕಂದು ಬಣ್ಣಕ್ಕೆ ತಿರುಗಿತ್ತು... ಟಿವಿ, ಪಾತ್ರೆ,ಪಡಗ ಎಲ್ಲವೂ ಮಣ್ಣಿನತ್ತಿದ್ದವು.... ಆದರೆ ಮಗರಾಯ ಮಾತ್ರ ಯಾವ ಗಾಳಿ ಗಂಧದ ಅರಿವಿಲ್ಲದೇ ಟಿವಿಯಲ್ಲಿ ಮಗ್ನನಾಗಿದ್ದ ಇದೂ ಒಂತಾರ ಒಳ್ಳೆಯದೆ ಗಾಳಿಯ ಆರ್ಭಟಕ್ಕೆ ಹೆದರದೆ ಚಿಂತೆ ಇಲ್ಲದವಳು ಸಂತೆಯಲ್ಲಿ ನಿದ್ರೆ ಮಾಡಿದಂತೆ ಆರಾಮಾಗಿದ್ದ.


ಕೆಂಪಾದವೋ ಎಲ್ಲಾ ಕೆಂಪಾದವೋ... ಎಂಬ ಹಾಡಿನಂತೆ .......... ಕಪ್ಪಿದ್ದ ಗಂಡನೂ ಕೆಂಪಾದನೋ ಕೆಂಪಾದನೋ... ಹಹ್ಹಾ - ನನ್ನವರು ಧೂಳ್ ಮಯವಾದದ್ದು ಹೀಗೆ


ವಾಯುದೇವನಿಗೆ ಯಾರೊಡನೆ ಮುನಿಸಿತ್ತೋ ಗೊತ್ತಿಲ್ಲ ನಮ್ಮ ಮೇಲೆ ತೀರಿಸಿಕೊಂಡ. ಅಂತೂ ಈ ಧೂಳಿಗೆ ನಾವು ಧೂಳಿಪಟದಂತೆ ತೂರಾಡಿದ್ದಂತೂ ಸತ್ಯ...... ಒಂದು ಹೊಸ ಅನುಭವ ಇಷ್ಟವಾಯ್ತು.... ಕಷ್ಟದ ಅರಿವಾಯ್ತು.... ಒಮ್ಮೆ ಕಷ್ಟದ ಮೇಲೂ ಒಲವಾಯ್ತು. ತೂರಾಡುತ್ತಿದ್ದ ನನಗೆ ಗಂಡನ ಕೈ ಆಸರೆಯಾಯ್ತು. ಎಲ್ಲಾ ಅನುಭವ ಒಮ್ಮೆಲೆ ಮನಸು ಅನುಭವಿಸಿತು.



Monday, March 21, 2011

ದೂರದ ಬೆಟ್ಟ-೨


ಇಷ್ಟು ದಿನ ನಾನು ಮರುಭೂಮಿಗೆ ಬಂದು ಒಬ್ಬನೇ ಜೀವನ ನೆಡೆಸ್ತಾ ಇದ್ದರೂ ನನ್ನ್ಗೆ ಯಾವತ್ತೂ, ನನ್ನ ಜೀವನಕ್ಕೆ ನನ್ನ ಅರ್ಥ ಮಾಡಿಕೊಳ್ಳೋ ಜೀವ ಬೇಕು, ನಾನೇ ಆರಿಸಿಕೊಳ್ಳಬೇಕು, ಅದು ಒಂದು ಹೆಣ್ಣು ನನ್ನ ಜೀವನದಲ್ಲಿ ಬರಬೇಕು ಎಂದು ಹೆಚ್ಚು ಯೋಚಿಸಿರಲಿಲ್ಲ......... ನನ್ನವರೇ ನನ್ನಿಂದ ದೂರಾದ ಮೇಲಂತು ಯಾಕೋ ನನಗಾಗಿ ಕಾಯುವ, ನನಗಾಗಿ ಹಂಬಲಿಸುವ ಜೀವವೊಂದು ಬೇಕು ಎಂದು ಅನ್ನಿಸ್ತಾ ಇತ್ತು...........ಇರುವುದೆಲ್ಲವ ಬಿಟ್ಟು ಬಂದದ್ದು ಆಯ್ತು....ಬಂದಮೇಲೆ ನಮ್ಮವರೂ ನನ್ನನ್ನೂ ಮರೆತದ್ದು ಆಯ್ತು. ಇನ್ನು ಏನಿದ್ದರೂ ನಾನು ಬುದ್ಧಿವಂತನಾಗಬೇಕು ಜೀವನದಲ್ಲಿ ಇರುವಷ್ಟು ದಿನ ಸಂತಸ ಕಾಣಬೇಕು.........

ನನ್ನ ಅಮ್ಮ, ಅಪ್ಪ, ತಮ್ಮ, ತಂಗಿಯರು ಎಲ್ಲಾ ಇದ್ದಾರೆ. ಅವರೇ ಒಂದು ಹೆಣ್ಣು ನೋಡಿದ್ದರೆ, ಎಲ್ಲರೂ ಸಂತೋಷದಿಂದ ಮನೆ ತುಂಬಿಸಿಕೊಂಡಿದ್ದರೆ...!!!! ಎಲ್ಲಾ ಅಂತೆ ಕಂತೆಗಳು.. ಎಷ್ಟೊಂದು ಚೆಂದ ನಮ್ಮದೇ ಪಂಗಡ ನಮ್ಮ ಊರಿನ ಹುಡುಗಿ ಅಂತೇನಾದರೂ ಇದ್ದಿದ್ದರೆ ಬಹಳ ಖುಷಿಯಾಗುತ್ತಿತ್ತು.............ಆದರೇನು ಮಾಡಲಿ ನನಗೆ ಬೇರೆ ದಾರಿ ಹುಡುಕಬೇಕಿದೆ.....

ಸಂಜೆ ಹೊತ್ತಿಗೆ ಬಿಡುವಿನ ಸಮಯದಲ್ಲಿ ಪಾರ್ಟ್ ಟೈಮ್ ಕೆಲ್ಸ ಮಾಡ್ತಾ ಇದ್ದೆ.....ನನಗೆ ಬೇಸರವಾದಗಲೆಲ್ಲಾ ಪಿಲಿಫಿನೋ ದೇಶದ ಒಬ್ಬಳು, ಪ್ಯಾಮ್ ಅವಳ ಹೆಸರು, ಆ ಸ್ನೇಹಿತೆಯತ್ತಿರ ನನ್ನ ವಿಷಯ ಎಲ್ಲಾ ಹೇಳಿ ಮನಸ್ಸು ಹಗುರ ಮಾಡ್ಕೋತಾ ಇದ್ದೆ. ಬೇಸರದ ಬಿಸಿ ಹಾರಿಸಲು ಯಾವುದಾದರೊಂದು ದಾರಿ ಬೇಕಿತ್ತು. ಅದೇ ಸಮಯಕ್ಕೆ ಪ್ಯಾಮ್ ಸಹ ಸಿಕ್ಕಿದ್ದಳು, ಬಹಳ ಒಳ್ಳೆಯ ಹುಡುಗಿ, ಮನೆ, ಸಂಸಾರ ಎಲ್ಲರ ಕಷ್ಟ ಸುಖ ಬಲ್ಲವಳು, ನಾನು ನನ್ನ ದುಃಖ, ಬೇಸರ ಎಲ್ಲವನ್ನೂ ಅವಳಲ್ಲಿ ಆಗಾಗ ಹೇಳಿಕೊಳ್ಳುತ್ತಿದ್ದೆ. ಅವಳೂ ಸಹ ನನ್ನ ಬೇಸರಕ್ಕೆ ಮದ್ದಾಗಿ ಹಿತವಚನ, ತಾಳ್ಮೆಯ ಸಹಾನುಭೂತಿ ನೀಡ್ತಾ ಇದ್ದಳು. ಅವಳ ಸಲಹುವ ಮಾತೇ ನನ್ನ ನೋವನ್ನ ಮರೆಸ್ತಾ ಇತ್ತು.

ಅವತ್ತೊಂದು ದಿನ ಅವಳು ಮೊದಲಿನ ಸ್ನೇಹಿತೆ ತರಹ ಕಾಣಲೇ ಇಲ್ಲ.....ಮಾತು ಸಹ ಬದಲಾಗಿತ್ತು....... ನಾನಿರುವ ಜಾಗಕ್ಕೆ ಬಂದು ನಿನ್ನತ್ತಿರ ಒಂದು ಮಾತನಾಡಬೇಕೆಂದಾಗ ಇದೇನು ಮಾತನಾಡಲು ಅನುಮತಿಯೇ..!!! ಎಂದು ಕೀಟಲೆ ಮಾಡಿದ್ದೆ........ ಮಾತು ತೊದಲುತ್ತಲೇ ಪ್ರಾರಂಭಿಸಿದವಳು ನಾನು ಒಂದು ವಿಷಯ ಹೇಳ್ತೀನಿ. ನೀನು ಸರಿಯಾಗಿ ಯೋಚಿಸಿ ನಿರ್ಧಾರಕ್ಕೆ ಬಾ.......... ನಿನ್ನ ಮನಸಿಗೆ, ನಿನ್ನ ಜೀವನಕ್ಕೆ ನಾನು ಸೋತಿದ್ದೀನಿ ನೀನು ಒಪ್ಪುವುದಾದರೆ ನಿನ್ನ ಮದುವೆಯಾಗಿ ನಿನ್ನೊಟ್ಟಿ ಇರುವ ಆಸೆ ಇದೆ...........ಯೋಚಿಸು ಎಂದಾಗ ನಾನು ಶಾಕ್ ಆದೆ...... ಅರೆ ಇವಳಿಗೇನು ಹುಚ್ಚು ಹಿಡಿದಿದೆಯಾ....... ನಾನು ಯಾವುದೋ ಊರಿಂದ ಬಂದು ಹೊಟ್ಟೆ ಪಾಡಿಗೆ ಜೀವನ ಮಾಡ್ತಾ ಇದ್ದೀನಿ......... ಇವಳಿಗೂ ಅದೇ ರೀತಿ ಅವರ ಊರು ಅವಳ ಕಡೆಯವರೂ ಯಾರು ಇಲ್ಲವಾ.......ನನ್ನಿಂದೆ ಬಿದ್ದಿದ್ದಾಳಲ್ಲ, ಅಲ್ಲದೆ ನಾನು ನನ್ನ ಬೇಸರ ಎಲ್ಲಾ ಅವಳ ಹತ್ತಿರ ಹೇಳಿದ್ದೇ ತಪ್ಪಾಯ್ತಾ.......... ನನ್ನ ನೋವು, ನನಗಾರಿಲ್ಲ ಅನ್ನೋವುದಕ್ಕೋ, ಅಥವಾ ಅಯ್ಯೋ ಪಾಪ ಎಂದು ನನ್ನ ಇಷ್ಟ ಪಡ್ತಾ ಇದಾಳ....? ನನಗೆ ಮನಸಲ್ಲೇ ದ್ವಂದ್ವ ಕಾಡ್ತಾ ಇತ್ತು.......... ಎರಡು ದಿನದ ಕಾಲವಕಾಶ ತೆಗೆದುಕೊಂಡು, ನಾನು ಒಬ್ಬನೇ ರೊಮ್ ನಲ್ಲಿ ಕೂತು ಯೋಚಿಸೋಕ್ಕೆ ಪ್ರಾರಂಭಿಸಿದೆ.........

ನನ್ನೆದುರು ಇದ್ದು ಪ್ರೀತಿಸೋರನ್ನ ಸ್ವೀಕರಿಸಲಾ.........ನನ್ನಿಂದ ಸಹಕಾರ ಬಯಸಿ ನನ್ನ ದುಡುಮೆಯ ದುಡ್ಡಿಗೆ ಕಾಯುವ ನನ್ನವರ ಪ್ರೀತಿಸಿ ಅವರಿಗಾಗಿ ದುಡಿಯಲಾ......... ನಾನು ಬರುವ ಇನ್ನೆರಡು ತಿಂಗಳಿದ್ದರೂ ತಮ್ಮನ ಮದುವೆಯನ್ನು ಅಣ್ಣ ಬರುವವರೆಗೂ ಕಾಯುವ ವ್ಯವಧಾನವಿಲ್ಲದಂತ ತಮ್ಮಂದಿರಿಗೆ ಅವರ ಸಂಸಾರಕ್ಕೆ ದುಡಿಯಲಾ....!!!!!! ನನಗೂ ಒಂದು ಜೀವವಿದೆ, ನನ್ನದು ಒಂದು ಹೃದಯ ಪ್ರೀತಿ, ಮೋಹ, ಕಾಮ ಎಲ್ಲವನ್ನೂ ಬಯಸುತ್ತೆ ಎಂದು ಯಾಕೆ ನನ್ನವರಿಗೆ ಅರ್ಥವಾಗಲಿಲ್ಲ ನನ್ಗೆ ಗೊತ್ತಿಲ್ಲ.................

ಅಂದು ಹೀಗೆ ಯೋಚುಸ್ತಾ ಇದ್ದೆ.........ಮನಸಲ್ಲಿ ಪ್ರಶ್ನೆ ಉತ್ತರಗಳ ಸಮೀಕ್ಷೆ ನೆಡಿತನೇ ಇತ್ತು....... ಅವಳಾವುದೋ ದೇಶದವಳು, ನನ್ನ ಜೊತೆ ರಕ್ತ ಹಂಚಿಕೊಂಡು ಬೆಳೆದ ಅಣ್ಣ ತಮ್ಮಂದಿರೇ ನನಗಿಲ್ಲ.......ಇನ್ನು ಯಾವದೋ ದೇಶದ ವಾತಾವರಣದಲ್ಲಿ ಬೆಳೆದು ಬಂದು ಕೇವಲ ೪,೫ ವರ್ಷ ಪರಿಚಯದಲ್ಲಿ ಇವಳನ್ನ ಪ್ರೀತಿಸಲಾ....ಮೊದಲೆ ಊರು ಬಿಟ್ಟು ಬಂದವಳು ಅವಳಿಗ್ಯಾರು ಇಲ್ಲವಾ...... ಮುಂದಿನ ಜೀವನ ಹೇಗೆ ಇರುವಷ್ಟು ದಿನ ಮರುಭೂಮಿಯಲ್ಲಿ ಹೇಗಿರಲಿ. ನನ್ನದೆಂಬುದು ಏನಿಲ್ಲ......... ಹಲವು ಚಿತ್ರಗಳು ಕಣ್ಣ ಮುಂದೆ ಬಂದೋದವು.........

ಮರುದಿನ ಕೆಲಸಕ್ಕೇನೋ ಹೋದೆ......ಊರಿಂದ ಕರೆ ಬಂದಿತ್ತು ನನ್ನೂರ ಕೋಡ್ ನಂಬರ್ ಕಂಡು ನನಗೆ ಖುಷಿ .......... ಅಷ್ಟೆಲ್ಲಾ ಆದರು ನನ್ನವರತ್ತ ಸೆಳೆಯುತ್ತಲೇ ಇದೆ. ಹಲೋ ಎಂದಕೂಡಲೇ ಹಲೋ...!!!! ನಾನು ನಿಮ್ಮಪ್ಪ.......... ನಿಮ್ಮಮ್ಮನಿಗೆ ಆರೋಗ್ಯ ಸರಿ ಇಲ್ಲ........ನಿನ್ನ ನೋಡುವ ಹಂಬಲದಿಂದಿದ್ದಾಳೆ ಆದಷ್ಟು ಬೇಗ ಬಂದು ಬಿಡು........ ಈ ಮಾತು ಕೇಳುತಿದ್ದಂತೆ ನಾನೀಗಲೇ ಊರಿಗೆ ಹೋಗಿಬಿಡಲೇ.......ಅಮ್ಮ!!! ಏನೇ ಹಾಗಲಿ ಅಮ್ಮನಲ್ಲವೇ..... ಅವಳ ಧ್ವನಿಯೂ ಕೇಳಲಿಲ್ಲ..... ಆ ಕರೆ ಬರುತ್ತಿದ್ದಂತೆ ಊರಿಗೆ ಹಾರುವ ಮನಸು ಮಾಡಿದೆ. ಇದ್ದ ವಿಷಯವನ್ನು ಸ್ನೇಹಿತೆ ಪ್ಯಾಮ್ ಹತ್ತಿರ ಹೇಳಿ, ನೀನು ಹೇಳಿದ್ದ ವಿಚಾರವನ್ನು ಊರಿಂದ ಬಂದ ಕೂಡಲೇ ತಿಳುಸ್ತೀನಿ ಎಂದಷ್ಟೇ ಹೇಳಿ ಹೊರಟೆ.........

ನಾ ಬರುವ ದಾರಿಯನ್ನೇ ಕಾದಿದ್ದ ಅಮ್ಮ........ನನ್ನ ನೋಡಿ ಖುಷಿ ಪಟ್ಟಳು ಸಂತೋಷದ ದಿನಗಳಂತು ನನ್ನೊಟ್ಟಿಗೆ ಹಂಚಿಕೊಳ್ಳಲಿಲ್ಲ...... ಈಗ ತನ್ನ ನೋವಿನ ಸಮಯಕ್ಕಾದರೂ ನನ್ನ ಕರೆದರಲ್ಲಾ.....!! ಎಂಬ ಖುಷಿಯಂತೂ ಇದೆ...... ಅಮ್ಮ ನನ್ನ ಕೈ ಹಿಡಿದು ಮಗನೇ, ನಿನ್ನ ಜೀವನವೆಲ್ಲಾ ನಮ್ಮೆಲ್ಲರಿಗಾಗಿ ಕಳೆದಿದ್ದೀಯಾ......... ನಿನ್ನ ನೋಡುವಾಸೆ ಮಾತ್ರ ನನ್ನಲ್ಲಿತ್ತು ಮಗನೇ........... ಎಂದು ಖುಷಿ ಪಟ್ಟಳು.........ಅಮ್ಮನ ಪ್ರೀತಿಗೆ ನಾನು ಮಾರುಹೋದೆ, ಮರುಭೂಮಿಯಲ್ಲಿದ್ದ ಪ್ರೀತಿಯೇ ಬೇಡವೆನಿಸುವಷ್ಟು ಅಮ್ಮ ನನ್ನ ಪ್ರೀತಿಯಲ್ಲೇ ಹಾರೈಕೆಯ ಮಾತಾಡಿದಳು......

ಆಸ್ಪತ್ರೆಯಲ್ಲಿದ್ದ ಅಮ್ಮನ ಆರೋಗ್ಯ ವಿಚಾರಿಸಲು ಡಾಕ್ಟರ್ ಹತ್ತಿರ ತೆರೆಳಿದಾಗ ತಿಳಿದ್ದಿದ್ದು, ಅಮ್ಮನಿಗೆ ಕ್ಯಾನ್ಸರ್ ಇದೆ ಅವಳ ಉಳಿಸಲು ಸುಮಾರು ಲಕ್ಷಗಳು ಬೇಕೆಂದು...... ಅದನ್ನ ಕೇಳಿ ಹೊರ ಬರುತ್ತಿದ್ದಂತೆ ತಮ್ಮಂದಿರಿಬ್ಬರು ಗುಸುಗುಸು ಎನ್ನುತ್ತಿದ್ದರು.........ಅವನೇ ಬಂದಿದ್ದಾನಲ್ಲ ಎಲ್ಲವನ್ನು ನೋಡಿಕೊಳ್ಳುತ್ತಾನೆ ಮತ್ತ್ಯಾವ ಹೊಣೆಗಾರಿಕೆ ನಮಗೆ ಬೇಡ ಅವನ ಕೈನಿಂದ ಜಾರುವುದು ವಾಸೆ ..... ಆಮೇಲೆ ಏನಾದರೂ ನಮ್ಮಗಳ ಮೇಲೆ ಹೊರೆ ಹೊರಿಸಿಬಿಟ್ಟಾನು, ಅಮ್ಮನ್ನ ನೋಡಿಕೊಳ್ಳೂಕೆ ಚೆನ್ನಗಿರೋ ಮನೆಬೇಕು ನಿಮ್ಮಗಳ ಮನೆಗೆ ಕರೆದುಕೊಂಡು ಇರಿಸಿಕೊಳ್ಳಿ, ಹಾರೈಕೆ ಮಾಡಿ ಎಂದುಬಿಟ್ಟರೆ. ಬೇಗ ನಡಿ ಕೆಲಸ ಇದೆ ಎಂದು ಹೊರಡೋಣ ಎಂದು ನನ್ನ ತಮ್ಮಂದಿರು ಮಾತ್ನಾಡೋದು ಕೇಳಿ ನನಗೆ ಎಲ್ಲಿಲ್ಲದ ಕೋಪ.......ಮನಸಲ್ಲಿದ್ದ ದುಗುಡ ಎಲ್ಲವೂ ಕೆರೆಯ ನೀರು ಹರಿದಂತೆ ಹರಿದು ಹೋಯ್ತು.......ಅವರ ಮಾತುಗಳು ನನ್ನ ಕೆರಳುವಂತೆಯೂ ಮಾಡಿತ್ತು. ನನ್ನ ಭಾವನೆಯನ್ನು ನುಂಗಿ ನೀರು ಕುಡಿಯುವ ಮನಸ್ಸಾದರೂ ನಿಮಗೆ ಹೇಗೆ ಬಂತು.........ನನ್ನದೂ ಒಂದು ಜೀವ, ನಾನು ನಿಮ್ಮಂತೆ ಇರಬೇಕು ಎಂದು ಬಯಸುವುದು ಬೇಡ. ನನ್ನ ಪಾಡಿಗೆ ನಾ ಇರಲೂ ಬಿಡುವುದೂ ಇಲ್ಲ, ಎಂದು ರಪ್ಪನೆ ತಮ್ಮಂದಿರ ಕಪ್ಪಾಳಕ್ಕೆ ಎರಡು ಬಿಗಿದೆ. ನನಗೂ ತಾಳ್ಮೆಯ ಕಟ್ಟೆ ಹೊಡೆದಿತ್ತು. ನಾನು ದುಡಿಯುವುದೇ ತಪ್ಪಾ....!! ದುಡ್ಡು ಇದೆ ಎಂದ ಮಾತ್ರಕ್ಕೆ, ಪ್ರೀತಿ, ವಿಶ್ವಾಸ, ಕಾಳಜಿ ಯಾವುದೂ ಒಬ್ಬರಿಗೊಬ್ಬರು ವಿನಿಯೋಗಿಸಿಕೊಳ್ಳಬಾರದ. ಅಮ್ಮನಿಗೆ ಎಷ್ಟು ಖರ್ಚಾಗುತ್ತೋ ಅದನ್ನೆಲ್ಲ ನಾನು ಭರಿಸ್ತೀನಿ ಆದರೆ ನಿಮಗಿರೋ ಈ ರೀತಿ ನೀಚಬುದ್ದಿ ನನಗೆ ನನ್ನ ಮನಸಿಗೆ ಆಘಾತ ಮಾಡಿದೆ.... ಇಂದು ಕೆನ್ನೆಗೆ ಎರಡು ಕೊಟ್ಟ ಏಟು, ಅಂದು ಮನೆ ಮತ್ತು ಮನೆಯವರನ್ನು ಮರೆತು ಪ್ರೀತಿಸಿ ಮದುವೆಯಾಗಲು ಹೊರಟಿದ್ದಲ್ಲ ಅಂದೇ ಈ ಕೆಲಸ ಮಾಡಿದ್ದರೆ ನಾನು ಕಾಲ ಕಸವಾಗುತ್ತಿರಲಿಲ್ಲ............ ನಾ ದುಡಿವ ದುಡ್ಡು ಬೇಕು, ನಾನು ಬೇಡವೇ ಬೇಡ........ ನನ್ನ ಮನಸ್ಥಿತಿಗೂ ಒಂದು ಇತಿಮಿತಿ ಇದೆ ಅದನ್ನ ಮೀರಿ ನಾನು ಮುಂದೆ ಹೋಗೋಲ್ಲ.......ಇಂದೇ ಕೊನೆ ನಿಮ್ಮ ಒಡನಾಟ ನನಗೆ ಬೇಡವೇ ಬೇಡ.......ಕೋಪದಿ ನೇರವಾಗಿ ಡಾಕ್ಟರ್ ಹತ್ತಿರ ಹೋಗಿ ಖರ್ಚುವೆಚ್ಚ ಎಷ್ಟಾಗುತ್ತೋ ನೀಡಿ ಅಮ್ಮನ ಆರೋಗ್ಯ ಸರಿಯಾಗುವವರೆಗೂ ಇದ್ದು.......ಅಮ್ಮನ್ನನ್ನು ಹಾರೈಕೆ ಮಾಡಲು ಒಬ್ಬ ಕೆಲಸದಾಕೆಯನ್ನಿಟ್ಟು ಅಮ್ಮ ನೀನು ಬದುಕಿರುವವರೆಗೂ ನಿನ್ನ ಅಪ್ಪನ್ನ ನೋಡಿಕೊಳ್ಳಲು ಈ ಹುಡುಗಿ ನಿಮ್ಮ ಜೊತೆ ಇರ್ತಾಳೆ. ನನ್ನಿಂದ ಸಹಾಯ ಬೇಕಾದಾಗ ಕರೆಮಾಡು, ಸಾಧ್ಯವಾದಷ್ಟು ನಿಮ್ಮನ್ನು ತೃಪ್ತಿ ಪಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿ, ಮರಗಟ್ಟಿದ ಮನಸಿನೊಂದಿಗೆ ಮರುಭೂಮಿಗೆ ಮರಳಿ ಬಂದು ಸೇರಿದೆ............

ಇತ್ತ ನನಗಾಗಿ ಕಾದಿದ್ದ ಪ್ರೀತಿ....ನನಗಾಗೇ ಕಾಯುತ್ತಿತ್ತು.......ಬಂದೊಡನೆ ನನ್ನ ಕಷ್ಟವೆಲ್ಲ ವಿಚಾರಿಸಿ ಸವಿಸವಿಯಾಗಿ ಮಾತನಾಡಿ ಮುದುಡಿದ ಹೃದಯವನ್ನು ಅರಳಿಸಿದಳು........ ಆ ಮುದ್ದು ಮುಖಕ್ಕೆ ಮನಸ್ಸು ಮರುಳಾಗದೆ ಇರುವವ ಯಾರೂ ಇಲ್ಲ. ನನಗೂ ಯಾಕೋ ನನ್ನವರ ಮೇಲಿನ ಕೋಪಕೋ ಏನೋ ನಾ ಸೋತು ಯಾವ ದೇಶದವಳಾದರೇನು ಪ್ರೀತಿ ಎಂಬುದಕೆ ದೇಶ, ಭಾಷೆ, ಆಚಾರ ವಿಚಾರ ಎನ್ನುವುದಿಲ್ಲ...........ನನಗಾಗಿ ನೀಡೋ ಪ್ರೀತಿಗೆ ನಾ ಸೋತು ಶರಣಾದೆ.....

ಅರಬೀ ಕಡಲಲಿ ಅಲೆ ಅಲೆಯಾಗಿ ತೇಲಿ ಬಂದ ಪ್ರೀತಿ ತಂಗಾಳಿ ನೀಡಿ ತಂಪಲ್ಲೇ ಮೀಯುವೆನೆಂಬ ಆತ್ಮವಿಶ್ವಾಸದಿ ಹೊಸ ಜೀವನ ಪ್ರಾರಂಭಿಸುವೆ.

Monday, March 7, 2011

ದೂರದ ಬೆಟ್ಟ-1

ನನ್ನದು ದೊಡ್ಡ ಸಂಸಾರ ಬಾಂಗ್ಲಾ ದೇಶದ ಪುಟ್ಟ ಹಳ್ಳಿಲಿ ನನ್ನ ಅಪ್ಪ ಅಮ್ಮ ೪ ತಂಗಿಯರು ೩ ತಮ್ಮಂದಿರು ಇದ್ದಾರೆ..... ಜೀವನ ಸಾಗಿಸೋದೆ ಕಷ್ಟ ಹಾಗಿಬಿಟ್ಟಿದೆ ಯಾರೋ ಹೇಳಿದ್ರು ಅರಬಿ ದೇಶಕ್ಕೆ ಹೋದರೆ ಒಳ್ಳೆ ದುಡ್ಡು ಮಾಡಬಹುದು ಎಂದು, ಅದಕ್ಕೆ ಈ ಏಜೆಂಟರುಗಳಿಗೆ ಲಕ್ಷ ಕಕ್ಕಿ, ಆಕಾಶದಲ್ಲಿ ಹಾರಾಡಿಕೊಂಡು ಬಂದೆ...... ಈ ಬೃಹತ್ ನಗರ ಎಲ್ಲೆಲ್ಲೂ ಬಣ್ಣ ಬಣ್ಣ ಕಟ್ಟಡ, ಐಷಾರಾಮಿ ಜೀವನ ಜನ ನೋಡಿ ನನ್ನ ಜೀವನವೂ ಇವರಂಗೆ ಚೆನ್ನಾಗಿ ಹಾಗುತ್ತೆ, ನನ್ನ ತಂಗೀರ ಮದುವೆ ಮಾಡಬಹುದು ಎಂದು ಮರುಭೂಮಿ ಪ್ರವೇಶಿಸಿದೆ. ನನ್ನವರು ಯಾರು ಇಲ್ಲ ಏಜೆಂಟ್ ಕೊಟ್ಟಿದ್ದ ವಿಳಾಸಕ್ಕೆ ಹೇಗೋ ಬಂದು ಕೂತೆ..... ಆ ವಿಳಾಸ ಕೂಡ ಏಜೆಂಟ್ ತರಹವೇ ಇವರ ಮೂಲಕ ಯಾವುದಾದ್ರು ಒಂದು ಕಂಪನಿ ಕೆಲಸಕ್ಕೆ ಸೇರಿಸ್ತಾರೆ ಎಂದುಕೊಂಡು ಅಲ್ಲೇ ಇದ್ದ ಅಧಿಕಾರಿ ಹತ್ತಿರ ಮಾತಾಡಿದೆ, ಅವರು ನಾಳೆ ಬರಲು ಹೇಳಿದ್ರು......ನಾಳೆ...ನಾಳೆ... ಓ ಈ ನಾಳೆಯ ಪ್ರಶ್ನೆ ನನ್ನ ಕಾಡಿತು..? ನಾಳೆವರೆಗು ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿತ್ತು. ಉಳಿಯಲು ಮನೆ, ಮಠ ಏನಿಲ್ಲ.......... ಅಲ್ಲೇ ಪಕ್ಕದಲ್ಲಿದ್ದವನ ಕೇಳಿದೆ ರಾತ್ರಿ ಉಳಿಯಲು ಏನು ಮಾಡಬೇಕಿಲ್ಲಿ.... ಎಂದಾಗ ಪುಣ್ಯಾತ್ಮ ಹಸುನಗೆಯಿಂದ ನನ್ನ ಮಾತನಾಡಿಸಿ ಅವನೊಟ್ಟಿಗೆ ಕರೆದುಕೊಂಡೋಗಿ ಅವನ ಮನೆಯಲ್ಲಿಯೇ ಇರಿಸಿಕೊಂಡ, ನಂತರ ಬೆಳಗ್ಗೆ ತನ್ನೊಟ್ಟಿಗೆ ಕರೆದುಕೊಂಡು ಅದೇ ಕಛೇರಿಗೆ ತಲುಪಿಸಿದ.... ಬಾಯಾರಿಕೆಗೆ ಒಂದು ಗುಟುಗು ನೀರು ದಣಿವಾರಿಸುವುದು ಎಂದೆನಿಸಿತು...!!!!

ಅಧಿಕಾರಿ ಎಲ್ಲವನ್ನು ವ್ಯವಸ್ಥೆ ಮಾಡಿದ್ದೇನೆ....... ಒಂದು ಕಂಪನಿಯವರು ಬರ್ತಾರೆ ಅವರ ಜೊತೆ ಹೋಗು ನಿನ್ಗೆ ಕೆಲಸ ಕೊಡ್ತಾರೆ ಎಂದೇಳಿ ಅಲ್ಲೇ ಕೂರಲು ಹೇಳಿದ್ರು......ಸುಮಾರು ೧೦ ಗಂಟೆ ಇರಬೇಕು ದಢೂತಿ ಮನುಷ್ಯ ಬಂದ ಅಧಿಕಾರಿಯತ್ತಿರ ಅರಬಿನಲ್ಲಿ ಬಡ ಬಡನೇ ಮಾತಾಡಿ......ನನ್ನ ಕೈ ಸನ್ನೆ ಮಾಡಿ ಕರೆದುಕೊಂಡು ಹೋದ ನಾನು ಅವನನ್ನೇ ಹಿಂಬಾಲಿಸಿ ನಾಯಿ ಕೈಯ್ಯಲ್ಲಿರೋ ಬಿಸ್ಕತ್ತಿಗೆ ಓಡಿದಂತೆ....ನಡೆದೆ......... ಅವನ ಕಾರಿನಲ್ಲಿ ಕುಳಿತಿರುವಂತೆ.. ವಾಹ್..!!! ಒಳ್ಳೆಯ ಕಾರು ಎಷ್ಟು ಚೆನ್ನಾಗಿದೆ. ಎಂತಾ ಅದೃಷ್ಟವಂತ ಎಂದುಕೊಳ್ಳುತ್ತಲಿದ್ದೆ ಅಷ್ಟರಲ್ಲಿ ಆ ಕಛೇರಿ ಬಂತು. ಒಳಗೆ ಕರೆದೊಯ್ದವನೇ ಅಲ್ಲಿ ಯಾರೋ ಕುಳಿತಿದ್ದವರತ್ತ ಬೆರಳು ಮಾಡಿತೋರಿಸಿ ನಡೆಯೆಂದ..........ಅಲ್ಲಿ ಅವರತ್ತ ಹೋಗಿ ನಮಸ್ಕಾರವೆಂದು ಹೇಳಿದೆ....ಅವನು ಸಹ ಬಾಂಗ್ಲಾ ದೇಶದವನಾದ್ದರಿಂದ ನನಗೆ ಭಾಷೆ ತೊಂದರೆಯೆನಿಸಲಿಲ್ಲ...... ನೀನು ಉಳಿದುಕೊಳ್ಳಲು, ಮತ್ತೆ ಊಟ ಕೆಲಸಕ್ಕೆ ಕರೆದೊಯ್ಯುವ ವಾಹನ ಎಲ್ಲ ವ್ಯವಸ್ಥೆ ಇದೆ. ಬೆಳ್ಳಿಗ್ಗೆ ೫ ಗಂಟೆಗೆ ಮನೆಯತ್ತಿರ ವ್ಯಾನ್ ಬರುತ್ತೆ ತಯಾರಾಗಿರಬೇಕು. ಈಗ ಹೊರಡು ನಿನಗೆ ನಿನ್ನ ರೂಂ ತೋರಿಸುವೆನೆಂದು ಅಲ್ಲೇ ಇದ್ದ ಬ್ಯಾಚುಲರ್ ಮನೆಗಳತ್ತ ಕರೆತಂದು ಬಿಟ್ಟರು.......

ಇತ್ತ ಮನೆಯಲ್ಲಿ ಯಾರೂಬ್ಬರು ಇರಲಿಲ್ಲ, ಕೆಲವು ಬಟ್ಟೆಬರೆಗಳು ಮಾತ್ರ ಇದ್ದವೂ. ಆಗ ಅನ್ನಿಸಿತು ಬೇರೊಬ್ಬರೂ ಇರಬಹುದೆಂದು.... ಸಂಜೆಯಾಗುತ್ತಲಿದ್ದಂತೆ ೪ ಜನ ಅದೇ ರೂಮಿನಲ್ಲುಳಿದರು ಆಗಲೇ ಅರ್ಥವಾಗಿದ್ದು ಈ ಪುಟ್ಟ ಕೋಣೆಯಲ್ಲಿ ೫ ಜನರಿಗೆ ವಾಸವೆಂದು.... ನನ್ನ ಜೊತೆಯಿದ್ದವರು ಪರಿಚಯವಾಯ್ತು ಅವರೆಲ್ಲರೂ ನನ್ನೂರಿನ ಕಡೆಯವರೆಂದು ತಿಳಿದು ಕುಷಿಯಾಯಿತು...... ಬೆಳ್ಳಿಗ್ಗೆ ೪ ಗಂಟೆಗೆ ಎದ್ದು ತಯಾರಾದೆ ಏನೋ ದೊಡ್ಡ ಕೆಲಸವೆಂದು ಅಮ್ಮ ಕೊಡಿಸಿದ್ದ ಗರಿ ಗರಿಯಾದ ಬಿಳಿ ಶರ್ಟ್ ತೊಟ್ಟು ಎಲ್ಲರ ಜೊತೆ ನಡೆದೆ........... ಯಾವುದೋ ನಿರ್ಜನ ಪ್ರದೇಶದ ತರವಿತ್ತು. ರಸ್ತೆ ಬದಿಯಲ್ಲಿ ಯಾರೊಬ್ಬರೂ ಇರಲಿಲ್ಲ, ಸುತ್ತ ನೋಡುತ್ತಿದ್ದಂತೆ ನನ್ನ ಕಣ್ಣಾಯಿಸ ದೂರಕ್ಕೂ ಢಾಂಬರಿನ ರಸ್ತೆ ಮಾತ್ರ ಕಾಣುತ್ತಿತ್ತು. ನನ್ನ್ ವ್ಯಾನಿಂದ ಇಳಿಸಿದವರೇ ಇವನಿಗೆ ಕೆಲಸ ಏನೆಂದು ತಿಳಿಸಿಕೊಡು ಎಂದೇಳಿ ನಡೆದೇ ಬಿಟ್ಟನು ವ್ಯಾನಿನ ಚಾಲಕ......

ಪಕ್ಕದಲ್ಲಿದ್ದವ್ನು ಹಳದಿ ಬಣ್ಣದ ಮೇಲಿಂದ್ದ ಕೆಳಗೆ ಒಂದೇ ಬಣ್ಣದ ಶರ್ಟ್ ಪ್ಯಾಂಟ್ ಒಂದೇ ಒಲಿಗೆಯಲ್ಲಿರುವಂತ ಬಟ್ಟೆ ಕೊಟ್ಟು ನೀನು ಇದನ್ನ ನಿನ್ನ ಬಟ್ಟೆ ಮೇಲೆ ತೊಟ್ಟಿಕೋ ಎಂದ ಎಲ್ಲರೂ ಅದೇ ಸಮವಸ್ತ್ರದಲ್ಲಿದ್ದರೂ........ನಾನು ತೊಟ್ಟುಕೊಂಡು ಏನು ಕೆಲಸವೆಂದು ಕೇಳಿದೆ ಕೈಗೆ ಕಸ ಗುಡಿಸುವ ಪೊರಕೆ ತರಹದ್ದು....ಜೊತೆಗೊಂದು ಮೊರವನ್ನು ಕೊಟ್ಟು ನೋಡು......... ಈ ರಸ್ತೆಯನ್ನೆಲ್ಲಾ ಗುಡಿಸಿ, ಆನಂತರ ಅದೋ ಅಲ್ಲಿ ಕಾಣುತ್ತಲ್ಲ ದೊಡ್ಡ ಕಸದ ಬುಟ್ಟಿಗೆ ಹಾಕಬೇಕೆಂದ...........ಏನೋ ಆಫೀಸಿನ ಕೆಲಸ, ಘನತೆ, ಗೌರವ ಇರುತ್ತೆ, ನಾನು ಒಂದು ಡಿಗ್ರಿ ಮಾಡಿದ್ದೇನೆ ಅದಕ್ಕೆ ತಕ್ಕಂತೆ ಕೊಡುತ್ತಾರೆಂದು ಭಾವಿಸಿ ಬಂದರೆ ನನಗೆ ಇದು ಆಘಾತವೇ ಸರಿ......... ಮನಸ್ಸು ಒಮ್ಮೆಲೇ ಕದಡಿ ಹೋಯ್ತು........ ಗೊತ್ತಾಯ್ತ ನಿನ್ನ ಕೆಲಸವೇನೆಂದು...?? ಜೋರು ಧ್ವನಿ ಆ ಕಡೆಯಿಂದ ಕೇಳಿದಾಗಲೇ ನಾನು ವಾಸ್ತವಕ್ಕೆ ಬಂದದ್ದು.......... ಆಗಲೆನ್ನುವಂತೆ ಕತ್ತಾಡಿಸಿ ಸುಮ್ಮನೆ ಮುಂದೆ ನೆಡೆದೆ............ ರಸ್ತೆ ಬದಿ ಗುಡಿಸುತ್ತಾ........... ನನ್ನಪ್ಪನ ಜಮೀನು ಕಡಿಮೆಯಿದ್ದರೂ, ಭೂಮಿ ತಾಯಿ ಸೇವೆ ಮಾಡಿ ನಾನು ಒಡೆಯನಂತಿದ್ದೆ........ ನಗುವ ಅಮ್ಮ, ಸಲಹುವ ತಂಗಿಯರು, ಸ್ನೇಹದ ಸ್ನೇಹಿತರು, ಹಾರೈಸೋ ಅಪ್ಪ ಎಲ್ಲರೂ ಒಮ್ಮೆಲೇ ನನ್ನ ಕಣ್ಣ ಮುಂದೆ ಬಂದರು.......... ನನ್ನ ಕಣ್ಣು ಒದ್ದೆಯಾಗಿ ಹನಿ ಹನಿಯಾಗಿ ನಾ ಗುಡಿಸುತ್ತಿದ್ದ ಕಸದಲ್ಲಿ ಬೆರೆತು ಹೋಯ್ತು....

ಅಮ್ಮ ನಿನ್ನ ಕೈ ತುತ್ತಿಲ್ಲ, ನಾ ರಾಜನಂತಿದ್ದ ಹಾವಭಾವವಿಲ್ಲ........... ನನ್ನ ಮನೆ ಉದ್ದರಿಸಲು ಇಲ್ಲಿ ಬಂದೆ ಇಲ್ಲಿಯೂ ನಾನಂದುಕೊಂಡಂತಿಲ್ಲ........... ಮನಸ್ಸಲ್ಲೇ ಊರಿನ ಚಿತ್ರಣವನ್ನು ಚಿತ್ರಿಸುತ್ತಾ............ಆ ರಸ್ತೆಯ ಉದ್ದಗಲ ಗುಡಿಸಿ ಕಣ್ಣೀರಿನಲ್ಲೇ ಸಾರಿಸಿಬಿಟ್ಟೆ.......... ಇದೆಲ್ಲದರ ನೆನಪಲ್ಲಿ ಮರುಭೂಮಿಯ ಉರಿಬಿಸಿಲು ನನ್ನ ಸುಟ್ಟು ಕರಕಲು ಮಾಡಿತ್ತು. ಯಾವ ಕಡೆ ಗಮನವೇ ಇರಲಿಲ್ಲ......... ಅಷ್ಟು ನೊಂದುಬಿಟ್ಟಿತ್ತು ನನ್ನ ಮನಸ್ಸು......... ಹಾಗಿದ್ದು ಆಯ್ತು ಇನ್ನೇನು ಮಾಡುವುದು ಇರುವ ಕೆಲಸವೇ ಚೆನ್ನ ಎಂದು ಜೀವಿಸೋಣ ನನಗೆ ಬೇರೆ ಈ ಊರು ಹೊಸದು ಏನು ಮಾಡಲಾಗದು, ಅದೂ ಅಲ್ಲದೆ ನನ್ನ ಪಾಸ್ ಪೋರ್ಟ್ ಬೇರೆ ಕೆಲಸ ಕೊಟ್ಟಿರುವವ ಹತ್ತಿರವಿದೆ.....ನಾ ಊರಿಗೆ ಓಡಿಹೋಗುವ ಹಾಗೂ ಇಲ್ಲ.!?? ಹೃದಯವೇಕೋ ಭಾರವಾಗಿತ್ತು, ಉಸಿರಾಡಲು ಜೀವ ಏಕೋ ಮನಸುಮಾಡ್ತಾನೇ ಇಲ್ಲ ಅನ್ನಿಸ್ತಾ ಇತ್ತು. ರಾತ್ರಿ ಕೆಲಸವೆಲ್ಲ ಮುಗಿಸಿ ಹೋದಾಗ ರಾತ್ರಿ ಹತ್ತೊವರೆಯಾಗಿತ್ತು.......ಊಟವೇನು ಬೇಡವೆನಿಸಿ ಮಲಗಿಬಿಟ್ಟೆ ........... ಬೆಳಿಗ್ಗೆ ಮಾಮೂಲಿ ಕೆಲಸ ಜೊತೆಗಾರರಿಂದ ಹಿತವಚನ ಇಲ್ಲಿನ ಜೀವನವೇ ಹೀಗೆ ............... ಸ್ವಲ್ಪದಿನ ಎಲ್ಲ ಸರಿಹೋಗುವುದು.....ಎಂದು ಸಮಾಧಾನ ಮಾಡಿದರು.........ನಾನು ನನ್ನನ್ನೇ ಸಮಾಧಾನಿಸಿದೆ ನಿನ್ನ ಹಣೆಬರಹದಂತಾಗುವುದೆಂದು ನನ್ನ ದುಃಖಕ್ಕೆ ನಾನೇ ಸಂತೈಸಿಕೊಂಡೆ.

ಹೀಗೆ ಕೆಲಸ ಸಾಗಿಸಿದೆ..... ಅಮ್ಮನ್ನಿಗೆ ಆಗೊಮ್ಮೆ ಈಗೊಮ್ಮೆ ಕರೆಮಾಡಿ ಸಂತಸದಿ ಹೇಳಿದೆ ಅಮ್ಮ, ನನ್ನ ಕೆಲಸ ದೊಡ್ಡದು ನನಗೆ ಒಂದು ದೊಡ್ಡ ಕಛೇರಿ ಕೊಟ್ಟಿದ್ದಾರೆ. ನನ್ನ ರಸ್ತೆಗೆ ನಾನೇ ರಾಜನಮ್ಮ???!!! ಯಾವ ಕೊರತೆಯಿಲ್ಲ ನೀ ಸಂತಸದಿರು ಮುಂಬರುವ ತಿಂಗಳು ಬರುವ ಸಂಬಳದಿ ನಿನಗೆ ಹಣ ಕಳಿಸುವೆ ....... ತಮ್ಮ, ತಂಗಿಯರಿಗೆ ಶಾಲೆಗೆ ಕಳಿಸು ಎಂದೇಳಿ ಫೋನ್ ಕೆಳಗಿಟ್ಟು.... ಗಳಗಳನೇ ಗಂಡ್ಸು, ಹೆಣ್ಣು ಅಳುವಂತೆ ಅತ್ತು ಬಿಟ್ಟೆ.......... ಹೀಗೆ ದಿನಗಳು ಉರುಳಿ ತಿಂಗಳು ಬಂದಿತು ಮೊದಲ ಸಂಬಳ ಮನಸ್ಸಲ್ಲಿ ಎಷ್ಟು ಸಂಬಳ ಕೊಡುವರೆಂದು ಯೋಚಿಸುತ್ತಿದ್ದೆ...........ನಾವು ಬರುವಾಗ ಊರಲ್ಲಿ ಏಜೆಂಟ್ ಹೇಳಿದ್ದ ಸಂಬಳ ತಿಂಗಳಿಗೆ ೨೦ ಸಾವಿರ ಕೊಡುತ್ತಾರೆಂದು ಅಬ್ಬಾ...!!!!!!!!! ಈ ದುಡ್ಡಲ್ಲಿ ಅರ್ಧ ಕಳಿಸಿದರೆ ನಮ್ಮ ಮನೆಮಂದಿ ತಿಂದು ತೇಗಬಹುದೆಂದುಕೊಂಡೆ ಆದರೆ ಇವರು ಬರಿ ೮ ಸಾವಿರ ಕೊಟ್ಟಾಗಲೇ ಅರಿತಿದ್ದು........ ಮೋಸ ಹೋದೆನೆಂದು ಬಡವ ಬೇರೆ, ಊರಿಗೆ ಹೊಸಬ ಏನು ಮಾತನಾಡುವುದು ಕಂಡೋರ ದೇಶದಲ್ಲಿ ನಮ್ಮದೇನು ದರ್ಬಾರು ನಡೆಯೋಲ್ಲ.......ಎಂದು ಅಲ್ಲೂ ನನ್ನ ಹೃದಯ ಸಾವರಿಸಿಕೊಳ್ಳ ಬೇಕಾಯಿತು.........

ಬಂದ ದುಡ್ಡಲ್ಲಿ ಕೇವಲ ೫೦೦ ರುಪಾಯಿಯಷ್ಟು ನನ್ನತ್ತಿರ ಇಟ್ಟುಕೊಂಡು ಉಳಿದದ್ದೆಲ್ಲಾ ಊರಿಗೆ ಕಳಿಸಿಬಿಟ್ಟೆ.........ಮನೆಮಂದಿ ಸಂತಸವಾಗಿರಲಿ.......ಎಲ್ಲರೂ ಚೆನ್ನಾಗಿರಲೆಂದು ಇದು ವರ್ಷಗಟ್ಟಲೆ ನೆಡೆಯಿತು.........ನಾನು ಬಂದ ಎರಡು ವರ್ಷಕ್ಕೆ ತಂಗಿ ಇಬ್ಬರ ಮದುವೆಯಾಯಿತು. ಇನ್ನೊಬ್ಬಳ ತಂಗಿಯ ಮದುವೆ ತಯಾರಿಯಲ್ಲಿದೆ ಯಾರೊಬ್ಬರೂ ನೀನು ಬರಬೇಕು ಮದುವೆಗೆ ಎನ್ನಲಿಲ್ಲ.....ಅಮ್ಮನಿಗೆ ಕರೆ ಮಾಡಿದರೆ ನೀನು ವಿಮಾನದಲ್ಲಿ ಬರುವ ಖರ್ಚಿಗೆ ನಿನ್ನ ಇನ್ನೊಬ್ಬಳ ತಂಗಿ ಮದುವೆ ಮುಗಿಸಬಹುದು ನೀನು ಅಲ್ಲಿದ್ದೇ ಹಣ ಕಳಿಸೆಂದಾಗ ನನ್ನ ಎದೆಭಾರ ಇಳಿಸಲು ಸಾಧ್ಯವೇ ಹಾಗಲಿಲ್ಲ.......ಅಮ್ಮನರ್ಥ ಬೇರೆ ಇದ್ದರೂ, ಮೂರುವರ್ಷ ಊರಿಗೆ ಹೋಗಿಲ್ಲ ನನ್ನವರ ಮುಖ ನೋಡಿಲ್ಲ....ನನ್ನೂರ ಗಾಳಿ ಕುಡಿದಿಲ್ಲ, ಎಂಬ ಆಸೆ ಅಲ್ಲದೆ ನನ್ನ ಒಡಹುಟ್ಟಿದ ತಂಗಿ ಮದುವೆ ನೋಡುವಾಸೆ ಎಲ್ಲವೂ ನಶಿಸಿ ಹೋಯ್ತು.............
ಅಮ್ಮನಾಸೆಯಂತೆ ನಾನು ನೆಡೆದುಕೊಂಡೆ.......... ಈಗಾಗಲೇ ೫ ವರ್ಷಕ್ಕೆ ಬಂತು ನಾನು ಊರು ಬಿಟ್ಟು.......ಈಗ ಊರಿನ ಜನ, ಮನೆವಾತಾವರಣ ಎಲ್ಲಾ ನೆನಪು ಮಾತ್ರ .... ನನಗೀಗಾಗಲೇ ೩೫ ವರ್ಷ ಮಿಕ್ಕ ಒಬ್ಬ ತಂಗಿಯ ಮದುವೆಯೂ ಮುಗಿಯಿತು ಈಗಲಾದರೂ ಊರಿಗೆ ಹೋಗಿ ನನ್ನ ಮದುವೆಯಾಗೋಣ ಎಂದಿನಿಸ್ತಾ ಇದೆ....... ಮದುವೆ ಈಗಲ್ಲದೆ ಇನ್ನು ಎಷ್ಟು ದಿನ ಕಾಯಲಿ............ನಾ ಇಲ್ಲಿ ಕಷ್ಟ ಪಟ್ಟಿರುವೆ ಇನ್ನಾದರೂ ಮದುವೆ ಮಾಡಿಕೊಳ್ಳೋಣ ಹೇಗೋ ಕಸ ಗುಡಿಸೋ ಕೆಲಸದಿಂದ ಜನರ ಕೈ ಕಾಲು ಹಿಡಿದು ಇಂದು ಆಫೀಸ್ ಬಾಯ್ ಕೆಲಸಕ್ಕೆ ಬಂದು ಬಿಟ್ಟೆ. ಇದೇ ನನ್ನ ದೊಡ್ಡ ಸಾಧನೆ....... ಈ ಕೆಲಸ ಮುಗಿಸಿ ರಾತ್ರಿ ಹೊತ್ತು ಕೆಲಸವೂ ಮಾಡಿದೆ. ಎರಡು ಕಡೆ ದುಡಿದಿದ್ದಕ್ಕೆ ನನ್ನ ಮನೆ ಒಂದು ದಾರಿಗೆ ಬಂದಿದೆ ಎಂದು ಊರಲ್ಲಿ ಜನರು ಭಾವಿಸುತ್ತಾರೆ.....ಬಡತನದ ಕರಿ ನೆರಳು ಕಾಡುತ್ತಿದ್ದ ದಿನಗಳು ಕಳೆದಿವೆ ...........ನನ್ನ ಮನಸ್ಸು ಈಗ ಹಗುರಾಗಿದೆ............ಅಮ್ಮ ಅಪ್ಪನಿಗೆ ಕರೆಮಾಡಿ ಮಾತನಾಡಿ ಊರಿಗೆ ಬರುತ್ತೀನಿ ಅಂತೇಳಿ ಬಿಡ್ತೀನಿ ಖುಷಿ ಆಗ್ತಾರೆ...........

ಅಪ್ಪ ನಾನು ಊರಿಗೆ ಬರೋಣ ಅಂತ ಇದ್ದೀನಿ ........... ಆದಷ್ಟು ಬೇಗ ಬರ್ತೀನಿ ಎಂದರೆ ಅಪ್ಪನ್ಯಾಕೋ ಬೇಸರ ಪಟ್ಟುಕೋತಾ ಇದ್ದಂಗೆ ಅನ್ನಿಸಿತು...ಏನಾಯ್ತು....ಎಂದರೆ ಮಗನೇ ನಾನೇ ಫೋನ್ ಮಾಡೋಣ ಎಂದಿದ್ದೇ ಏನು ಗೊತ್ತ ಸ್ವಲ್ಪ ದುಡ್ಡು ಬೇಕಾಗಿತ್ತು.... ನಿನ್ನ ತಮ್ಮ ಇದ್ದಾನಲ್ಲ, ಅವನು ಯಾರನ್ನೋ ಪ್ರೀತಿಸಿದ್ದಾನಂತೆ ಮದುವೆ ಮಾಡಿಬಿಡೋಣ ಎಂದು ಹಂಗೆ ಇನ್ನೊಬ್ಬ ಚಿಕ್ಕ ತಮ್ಮನಿಗೂ ಹುಡುಕಿದ್ದೇವೆ. ಇಬ್ಬರ ಮದುವೆ ಮುಗಿಸಿಬಿಡುವೆವು........ ಸ್ವಲ್ಪ ದುಡ್ಡು ಕಳಿಸು ನಿನ್ಗೆ ಬರೋಕ್ಕಾದರೆ ಬಾ ಇಲ್ಲವೆಂದರೆ ತೊಂದರೆ ಇಲ್ಲ......ನಾವಿದ್ದು ಎಲ್ಲಾ ನಿಭಾಯಿಸುತ್ತೇವೆ. ಎಂದಾಗ ನನ್ನ ಹೃದಯಕ್ಕೆ ಹೇಗಾಗಿರಬೇಡ ............. ಕೈಕಾಲು ಕುಗ್ಗಿ ಬಿದ್ದಂತೆನಿಸಿತು....... ನಾನು ನನ್ನವರಿಗಾಗಿ ಮಾಡಿದ್ದು ಏನು ಫಲಿಸಲಿಲ್ಲ.........೫ ವರ್ಷ ಕಳೆದರೂ ಯಾರೊಬ್ಬರೂ ನನ್ನ ನೋಡುವ ಹಂಬಲ ತಿಳಿಸಲಿಲ್ಲ......ಬರುವೆನಮ್ಮ ನಿನ್ನ ಮಡಿಲಿಗೆಂದರೂ ಯಾರೊಬ್ಬರೂ ಬಾ ಕಂದ ನಿನಗಾಗಿ ಕಾದಿರುವೆ ನಾನಿಲ್ಲಿ ಎನ್ನಲಿಲ್ಲ.......... ವಿಧಿಯೇ ನನ್ನಲ್ಲಿ ಸಂಬಂಧಗಳನ್ನ ಜೋಡಿಸಲು ಸೋತಿರುವೆಯಾ.........ನನ್ನವರು ನನಗಾಗಿ ಯಾರು ಇಲ್ಲವೇ......... ನಾ ಇಷ್ಟು ದಿನ ನನ್ನತನವನ್ನೆಲ್ಲಾ ಬಿಟ್ಟು ದುಡಿದದ್ದು ಯಾರಿಗಾಗಿ........ಏಕೆ ಹೀಗೆ ಎಲ್ಲ ದುಡ್ಡಿನಿಂದೆ ನನಗಾಗಿ ನನ್ನ ಒಳಿತಿಗಾಗಿ ಯಾರೊಬ್ಬರೂ ಆಶಿಸುತ್ತಿಲ್ಲ.....ನಾನಿಲ್ಲಿ ಹೊತ್ತೊತ್ತಿಗೆ ಊಟ ಮಾಡದೆ, ಬಿಸಿಲ ಬೇಗೆಯಲಿ ಬೆಂದು, ಅದನ್ನು ಕೊಂಡುಕೊಂಡರೆ ಖರ್ಚು, ಇದನ್ನು ತಿಂದರೆ ಖರ್ಚು, ಎಂದು ಉಳಿಸಿದ್ದು ಆ ನನ್ನ ಮನೆಗಾಗಿ ಅಲ್ಲವೆ..? ಏಕೆ ಇಂದು ಆ ಮನೆಯೇ ನನ್ನನ್ನೇ ಬಯಸದಾಗಿದೆ.......ನನ್ನ ಮನ ಬೇಸತ್ತು ಕಣ್ಣು ಧೋ ಎಂದು ಮಳೆಯನ್ನೇ ಸುರಿಸಿಬಿಟ್ಟಿತು............

ಯಾವುದೋ ಆಸೆಗೆ ಬಂದು ಏನೂ ಬೇಡ ಎನ್ನುವಂತಾಯಿತು ......... ಇನ್ನು ಅವರಾಗೆ ಕರೆಯಲಿ ನನ್ನ ನೋಡುವಾಸೆ ಇದ್ದರೆ ಎಂದೆನಿಸಿತು..........ಆದರೆ ಹುಟ್ಟೂರು ನೋಡಬೇಕು ಅವರಿಗೆ ಬೇಡವಾದರೇನು ನಾನು ಹೋಗಬೇಕೆಂದು ಹೋದರೆ.........ಅಲ್ಲಿ ಎರಡು ಅಂತಸ್ಥಿನ ಮನೆ ಕಟ್ಟಿ ತಮ್ಮಂದಿರಿಬ್ಬರೂ ಒಂದೊಂದು ಮನೆಯಲಿದ್ದರೂ, ಅಪ್ಪ ಅಮ್ಮ ಹಳೆ ಮನೆಯನ್ನೇ ಹೊಸ ಮೆರುಗು ಕೊಟ್ಟು ಮೊಮ್ಮೊಕ್ಕಳೊಂದಿಗೆ ಸಂತಸದಿಂದಿದ್ದರು, ತಂಗಿಯರೆಲ್ಲ ತಮ್ಮ ತಮ್ಮ ಸಂಸಾರದಲ್ಲಿ ಮುಳುಗಿದ್ದರು......... ನಾನು ಬಂದೆನೆಂದು ಎಲ್ಲರೂ ನನ್ನ ಮುತ್ತಿಕೊಂಡರು.........ನನಗೂ ಸಂತೋಷವಾಯ್ತು.......ಎಲ್ಲರಿಗೂ ಉಡುಗೊರೆಯೆಲ್ಲವನ್ನಿತ್ತು, ಊರೂರು ಸುತ್ತಿ, ಅಪ್ಪ ಅಮ್ಮನೊಂದಿಗೆ ಕಾಲ ಕಳೆದು, ಇನ್ನೇನು ಒಂದು ವಾರವಿದೆ ಮರಳಿ ಮರುಭೂಮಿ ಕಡೆ ಹೊರಡಬೇಕಿದೆ............. ಮನೆಯಲ್ಲಿ ಮದುವೆ ಪ್ರಸ್ತಾಪವೇ ಇಲ್ಲ..... ಪಕ್ಕದ ಮನೆಯವರು ಅಪ್ಪ ಅಮ್ಮನಲ್ಲಿ ಕೇಳಿದರು ಇವನ ಮದುವೆ ಮುಗಿಸಿದ್ದರೆ ಚೆನ್ನಾಗಿರುತ್ತಿದ್ದೆಂದು ಆಗ ಅಪ್ಪ ಬಾಯಿ ಬಿಟ್ಟರು..........ಅವನಿಗಾಗಲೇ ೩೬ ದಾಟಿದೆ ಇನ್ನು ಹೆಣ್ಣು ಯಾರು ಕೊಡುವುದಿಲ್ಲ, ಅರ್ಧ ಜೀವ ಸಾಗಿದೆ ಇನ್ನುಳಿದ ಜೀವನ ಹೇಗೋ ನೆಡೆಯುತ್ತೆ ಬಿಟ್ಟು ಬಿಡಿ .............. ಏನೋ ತಿಳುವಳಿಕೆಯಿಲ್ಲ...... ಮಾತನಾಡಿಬಿಟ್ಟರೆಂದು ಮನಸು ಭಾರವಾದರೂ ಊರ ಬಿಟ್ಟು ಮರುಭೂಮಿ ಸೇರಿದೆ....... ಅಂದಿನಿಂದ ಅಪ್ಪ ಅಮ್ಮನಿಗೆ ಪ್ರತೀ ತಿಂಗಳು ದುಡ್ಡು ಕಳಿಸುತ್ತಿದ್ದೆ. ಅವರ ಆರೋಗ್ಯದ ಖರ್ಚು ವೆಚ್ಚ ಭರಿಸುತ್ತಿದ್ದೆ........... ನನ್ನ ಹೆತ್ತು ಹೊತ್ತ ಋಣ ತೀರಿಸಲು ಕೊನೆವರೆಗೂ ಹೀಗೆ ಇದ್ದುಬಿಡೋಣವೆಂದುಕೊಂಡೆ. ಕೊನೆಗೆ ಒಂದು ದಿನ ಕರೆ ಮಾಡಿ ನಿಮ್ಮ ಕೈಲಾಗದಿದ್ದಾಗ ನನ್ನ ಕರೆಯಿರಿ ನಿಮ್ಮ ಸೇವೆ ಮಾಡುವೆ ಎಂದಾಗ ಅಮ್ಮ ಅಪ್ಪ ಇಬ್ಬರದೂ ಒಂದೇ ಮಾತು...... ಇಲ್ಲಿ ನಮ್ಮ ನೋಡಲು ಬಹಳಷ್ಟು ಜನರಿದ್ದಾರೆ. ನೀನು ದುಡಿದು ನಿನ್ನ ತಂಗಿ ತಮ್ಮಂದಿರಿಗೇನಾದರೂ ಸಹಾಯವಾಗುತ್ತೋ ಏನೋ ನೋಡಿಕೊಳ್ಳುತ್ತಿರು. ನಾವು ಸತ್ತರೂ ಅವರನ್ನು ಕೈಬಿಡಬೇಡ ಎಂದು ಆಣೆ, ಪ್ರಮಾಣಗಳೇ ಸಾಗಿದವು...........ಆದರೆ ತಮ್ಮ ತಂಗಿಯರಾರೂ ನಾನೊಬ್ಬನಿರುವೆ ಎಂಬ ಪರಿಜ್ಞಾನವೂ ಇರಲಿಲ್ಲ. ಇಷ್ಟು ವರ್ಷವಾದರೂ ಒಂದು ಯೋಗಕ್ಷೇಮದ ಪತ್ರವನ್ನೂ ಕಳಿಸಿರಲಿಲ್ಲ, ಅಣ್ಣ ತಂಗಿ ತಮ್ಮಂದಿರ ನಡುವೆ ಮಾತುಕತೆಯೇ ಇಲ್ಲದಂತಾಗಿ ಹೋಗಿ ಬಹಳ ವರುಷಗಳೇ ಕಳೆದಿದ್ದವು.........

ನನ್ನ ದಾರಿ ನನ್ನದು, ಅವರ ಜೀವನ ಅವರದು ಬದುಕಿಗೆ ಹಣವೊಂದೇ ಸಾಕೆಂಬುವವರಿಗೆ ದುಡ್ಡು ಮಾತ್ರ ಕೊಟ್ಟು ಪ್ರೀತಿ ಹುಟ್ಟಿಸುವಾಸೆ ನನ್ನ ಜೀವನದಲ್ಲಿ ನಶಿಸಿ ಹೋಯ್ತು.........ಅಂದು ಮನೆಗಾಗಿ ಹೊರಬಂದೆ ಇಂದು ನಾ ಆ ಮನೆ ಪ್ರೀತಿಯನ್ನೇ ಕಳೆದುಕೊಂಡೆ. ಇನ್ನು ನಾನು ವಯಸ್ಸಾಗಿ ನನ್ನ ಕೈಲಾಗದಿದ್ದಾಗ ನನಗೆ ಸಲಹೋ ಜೀವ ಹುಡುಕಬೇಕಾಗಿದೆ. ಇನ್ನು..!! ಹುಡುಕುತ್ತಲೇ ಇದ್ದೇನೆ......... ನನಗಾಗಿ ಮರುಗೋ ಪ್ರೀತಿ, ನನ್ನತನವನ್ನು ಪ್ರೀತಿಸೋ ಪ್ರೀತಿಯನ್ನು ಹುಡುಕುತ್ತಲಿರುವೆ ಸಿಗುವುದೆಂಬ ಭರವಸೆಯಲ್ಲಿ.....???!!!

ಅಂದು ದೂರದ ಬೆಟ್ಟ ನುಣ್ಣಗಿರುವುದು ಕಂಡು ನನ್ನವರ ಜೀವನ ಸೊಗಸುಗೊಳಿಸಲು ಬಂದೆ. ದೂರದ ಬೆಟ್ಟ ಹತ್ತಿರವಾಗುತ್ತಿದ್ದಂತೆ ನುಣುಪು ಹಾರಿತು...... ಮರಳಿ ನನ್ನ ಗೂಡಿಗೆ ಬಂದರೂ ಅಲ್ಲಿನ ಪ್ರೀತಿಯನ್ನೂ ಕಳೆದುಕೊಂಡೆ.............ಮುಂದೆ ಯಾವ ಬೆಟ್ಟ ಸಿಗುವುದೋ....... ಅದು ನುಣುಪೋ ನಾಜೂಕೋ ಗೊತ್ತಿಲ್ಲ............ಕಾಯುವ ಕಹಿ ಅನುಭವಿಸಿ ಅನುಭವವಿದೆ.....ಕಾಯುವೆ ನನಗಾಗಿ ಸಿಗುವ ಅಜಾತ ಪ್ರೀತಿಗಾಗಿ..............!!!!!!!!?

ಮುಂದುವರಿಯುವುದು.........

ಚಿತ್ರ: ಶಿವಪ್ರಕಾಶ್

Tuesday, March 1, 2011

ದೇವರು


ದೇವರು ಹಲವು, ಪೂಜಾವಿಧಾನಗಳು ಕೆಲವು
ಯಾವುದೆಷ್ಟೆ ಆದರೇನು ಭಕ್ತಿಯೊಂದೆ ಅಲ್ಲವೇನು..!!!

ಭಕ್ತಿ ಮೂಡಿಸುವ ಆ ಮೂರ್ತಿಗೆ ವಿವಿಧಾತೀತ ಮಂದಿರಗಳು
ವಿವಿಧ ದೇವರಿಗೆ ವಿಧ ವಿಧ ಹೆಸರ ನೀಡಿ ಪೂಜಿಸುವೆವು
ಇಂತ ದೇವರಿಗೆ ಇವರೇ ಒಕ್ಕಲು ಎಂಬಂತೆ ಪಂಗಡಗಳು ಇರುವವು
ಹೆಸರು ಬೇರೆ, ಪಂಗಡ ಬೇರೆಯಾದರೇನು ಮನಸು ಒಂದೇ ಅಲ್ಲವೇ...?

ದೇಹ ಒಂದೇ ಅದರ ಭಾಗ ಎಷ್ಟೋ ಇರುವ ಹಾಗೆ
ಹಲವು ಜಾತಿ, ಹಲವು ಮತ ಇರುವುದು ಒಂದೇ ದೇಶಕೆ
ದೇವನಿಗೂ ಜನರಿಗೂ ಹಲವು, ಕೆಲವುಗಳ ಅಂತರ
ಯಾವ ಅಂತರ ಇದ್ದರೇನು ದೇವನಿರುವನು ನಿರಂತರ....

ಒಂದೇ ಜೀವಕೆ ಹಲವು ವೇಷ, ಒಂದು ಮನಸಿಗೆ ಹಲವು ಕನಸು
ಎಲ್ಲ ನಮ್ಮ ನಮ್ಮ ಆಸೆ ಆಮಿಷಕೆ ಬಯಕೆ ತೋಟ ಬೆಳೆದು ನಿಂತಿದೆ
ಸ್ವಂತ ಜೀವಕೆ ಬೆಳದ ಆಸೆ ದೇವನಿಗೂ ಮೀಸಲಿಟ್ಟ ನಾವುಗಳು
ಹೆಚ್ಚು ಹೆಚ್ಚು ಹೆಸರಿನಲ್ಲಿ ತೃಪ್ತಿಯನ್ನು ಕಂಡು ಪೂಜೆ ಸಲ್ಲಿಸಿದೆವೇನೋ ಅಲ್ಲವೇ...?

ದೇವರು ಹಲವು, ಪೂಜಾವಿಧಾನಗಳು ಕೆಲವು
ಯಾವುದೆಷ್ಟೆ ಆದರೇನು ಭಕ್ತಿಯೊಂದೆ ಅಲ್ಲವೇನು..!!!



ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು...