Saturday, March 26, 2011

ಕೆಂಪಾದವೋ ಎಲ್ಲಾ ಕೆಂಪಾದವೋ...ಶುಕ್ರವಾರ ಸಂಜೆ ಕುವೈತ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿರೋ ಸ್ನೇಹಿತರ ಮನೆಗೆ ೬ ಗಂಟೆಗೆ ಹೋಗಿದ್ದೆವು.... ೬.೩೦ರವೇಳೆಗೆ ೮ನೇ ಮಹಡಿಯಲ್ಲಿರುವ ಅವರ ಮನೆಯಲ್ಲಿ ಮಣ್ಣಿನ ವಾಸನೆ ಬರುತ್ತಿದ್ದು ನೋಡಿ ಹೋ ಎಂದಿನಂತೆ ಎಲ್ಲೋ ಧೂಳು ಎದ್ದಿರಬೇಕು (ಕುವೈತಿನಲ್ಲಿ ವಾರದ ಕೊನೆಯಲ್ಲಿ ಸಾಮಾನ್ಯವಾಗಿ ಧೂಳಿನ ದಿನವೇ ಆಗಿರುತ್ತದೆ) ಎಂದುಕೊಂಡೆ. ಸುಮಾರು ೭.೩೦ ಇರಬೇಕು ಹೊರಡೋಣ ಎಂದು ಬಂದಾಗ ಲಿಫ್ಟ್ ಕೆಲಸ ಮಾಡುತ್ತಿಲ್ಲವೆಂದು ೯ ಮಹಡಿ ಇಳಿದೇ ಬಂದೆವು... ಹೊರಗೆ ಬಂದಕೂಡಲೆ ೪/೫ ಹೆಜ್ಜೆಯ ಅಂತರದಲ್ಲಿ ಮಾತ್ರ ಕಾಣುತ್ತಿತ್ತು ಮುಂದಕ್ಕೆ ಏನೂ ಕಾಣುತ್ತಿಲ್ಲ..... ಅಯ್ಯೋ ಏನಾಗಿದೆ ಇಷ್ಟು ವಿಚಿತ್ರವಾಗಿದೆಯಲ್ಲ ಎಂದುಕೊಂಡೆವು.... ಸರಿ ಎಂದು ನನ್ನತ್ತಿರವಿದ್ದ ಬಟ್ಟೆಯಿಂದ ತಲೆಗೆ ಕಟ್ಟಿ ಮುಂದೆ ಹೋದೆವು... ಕಾರನ್ನು ಎಲ್ಲೋ ನಿಲ್ಲಿಸಿ ಬಂದಿದ್ದೆವೋ ಗೊತ್ತೇ ಆಗುತ್ತಲ್ಲ....... ಸುತ್ತಾಡಿ ಸುತ್ತಾಡಿ ಆ ಧೂಳಿನಲ್ಲಿ ಸಾಕಾಯ್ತು ಸರಿ ಕೊನೆ ಪ್ರಯತ್ನವೆಂದು ಇನ್ನೊಂದು ಕಡೆ ಹೋಗೋಣ ಎಂದು ಹೋಗ್ತಾ ಇದ್ದರೆ ಈ ವಾಯುದೇವ ಸುಮ್ಮನಿರಬೇಕಲ್ಲ........ ಎಂತಾ ಭಯಾನಕ ಗಾಳಿ, ಇಷ್ಟು ತೂಕದ ದೇಹವನ್ನೇ ಬೀಳಿಸೋಕೆ ನೋಡ್ತಾ ಇದ್ದಾ ಹೋ ಇವಳು ಬಿದ್ದರೆ ಕಷ್ಟ ಹೊತ್ತುಕೊಂಡು ಹೋಗೋಕೆ ಆಗೋಲ್ಲ ಎಂದು ನನ್ನವರು ಕೈ ಹಿಡಿದುಕೊಂಡು ಕರೆದುಕೊಂಡು ಹೋಗ್ತಾ ಇದ್ದರು..... ಅಯ್ಯೋ ಮಗನ್ನ ಬೇರೆ ಕರೆದುಕೊಂಡು ಬಂದಿಲ್ಲ ಒಂದು ಕಡೆ ಒಳ್ಳೆದೇ ಆಯ್ತು ಇನ್ನೊಂದು ಕಡೆ ನಮಗೇನಾದರೂ ಆದ್ರೆ ಅವನೊಬ್ಬನೇ ಮನೆನಲ್ಲಿದ್ದಾನೆ ಎಂಬ ಯೋಚನೆ...... ಈ ಆರ್ಭಟಿಸುವ ಗಾಳಿಗೆ ಅವನೇನಾದರೂ ಹೆದರಿದ್ದಾನೇನೋ ಎಂದು ಕರೆ ಮಾಡಿದರೆ... ಅಯ್ಯೋ ಇಲ್ಲಿ ಏನು ಗಾಳಿ ಶಬ್ಧನೂ ಇಲ್ಲ ಎಂತದೂ ಇಲ್ಲ ಸುಮ್ಮನಿರಪ್ಪ... ನಾನು ಕ್ರಿಕೆಟ್ ನೋಡ್ತಾ ಆರಾಮಾಗಿ ಇದ್ದೀನಿ ನೀವು ಬೇಗ ಬನ್ನಿ... ಸರಿ ನಾವು ಇಲ್ಲಸಲ್ಲದನ್ನ ಯೋಚಿಸಿ ಮಗ ಗಾಬರಿಯಾಗ್ತಾನೆ ನಾವಿಲ್ಲ ಎಂದರೆ ಎಂದು ಯೋಚಿಸಿದರೆ ಕ್ರಿಕೆಟಿನ ಆರ್ಭಟದಲ್ಲಿ ಅವನ ನೆಚ್ಚಿನ ಟೀಂ ನ್ಯೂಜಿಲೆಂಡ್ ಗೆಲ್ಲುತ್ತಿರುವ ಸಂಭ್ರಮದಲ್ಲಿದ್ದ......

ಇತ್ತ ನಾವು ಸುತ್ತಾಡುವುದ ಕಂಡು ಕಾರಿನಲ್ಲಿ ಬರುತ್ತಲಿದ್ದವರೊಬ್ಬರು ನಿಮನ್ನು ಎಲ್ಲಿ ಬಿಡಬೇಕು ಎಂದು ಕೇಳುತ್ತಲಿದ್ದರೆ ನನಗೆ ಭಯವಾಗುತ್ತಿತ್ತು... ಸುತ್ತಲೂ ಸ್ಮಶಾನ ಮೌನ ರಸ್ತೆ ಬದಿ ಯಾರೂ ಇಲ್ಲ... ಯಾರೋ ಸಹಾಯ ಹಸ್ತ
ಚಾಚುವಂತೆ
ಬಂದು ತೊಂದರೆ ಕೊಟ್ಟು ಬಿಡುವರೇನೋ(ಹಲವು ಸಂಗತಿಗಳನ್ನು ಕೇಳಿದ್ದ ನಮಗೆ ಭಯ ತರಿಸಿತ್ತು ಆ ಕ್ಷಣ)... ಎಂದು ಪುಣ್ಯಕ್ಕೆ ಯಾವ ಅವಘಡವಾಗಲಿಲ್ಲ... ಪಾಪ ಅವರು ಕನಿಕರದಿಂದ ಸಹಾಯ ಕೇಳಿದ್ದಕ್ಕೆ ತಪ್ಪು ತಿಳಿಯೋ ಮನಸ್ಸು ಮಾಡ್ತೀವಿ.

ಅಂತೂ ಇಂತೂ ಸುಮಾರು ೧೫ ನಿಮಿಷಗಳ ನಂತರ ನಾವು ನಿಲ್ಲಿಸಿದ್ದ ಕಾರು ಸಿಕ್ಕಿತು. ಅದು ಕೆಂಪು ಬಣ್ಣದ ಕಾರೋಗಿ ಕಂದು ಬಣ್ಣಕ್ಕೆ ತಿರುಗಿತ್ತು ಹಹಹ...... ಸದ್ಯ ಸಿಕ್ಕಿತಲ್ಲಾ ಎಂದು ಕಾರೊಳಗೆ ಕೂತೆವು.... ರಸ್ತೆ ಕಾಣುತ್ತಲೇ ಇಲ್ಲ ನಿಧಾನ ಗತಿಯಲ್ಲಿ ಚೆಲಿಸುತ್ತ ಸದ್ಯಕ್ಕೆ ಹೆದ್ದಾರಿಗೆ ಬಂದೆವು ಇನ್ನು ಧೈರ್ಯ ಬಿಡು ಹೇಗೋ ಮನೆ ತಲುಪುತ್ತೇವೆ ಎಂದುಕೊಂಡು ಬರ್ತಾ ಇದ್ದರೆ ಏನು ರಸ್ತೆಯಲ್ಲಿ ಯಾರದೋ ಬಟ್ಟೆ, ಮಕ್ಕಳ ಆಟಿಕೆಗಳು ಎಲ್ಲಾ ಬಿದ್ದು ಒದ್ದಾಡ್ತಾ ಇದ್ದವು... ನಿಧಾನವಾಗೇ ಸಾಗುತ್ತಿದ್ದ ಕಾರಿನಲ್ಲಿ ತೆಪ್ಪಗೆ ಕೂರದೇ ಏನೇನೋ ಅವಾಂತರಗಳನ್ನ ಯೋಚಿಸುತ್ತಿದ್ದೆ........ ಈ ಗಾಳಿ ಸುನಾಮಿಯ ಸೂಚನೆಯೇ... ಸುನಾಮಿಯಾದರೇ ಏನು ಗತಿ... ನಾನು ಈ ಗಾಳಿಗೆ ಭಯ ಬಿದ್ದೆ ಇನ್ನು ಜಪಾನಿನ ಜನ ಎಷ್ಟರ ಮಟ್ಟಿಗೆ ಭಯ ಬಿದ್ದಿರಬೇಡ ಎಂದುಕೊಳ್ಳುತ್ತ ಸುತ್ತ ಮುತ್ತ ಕಣ್ಣಾಡಿಸಿದರೆ ಎಷ್ಟೋ ಮರಳು ಸೊಂಟ ಮುರಿದುಕೊಂಡಿದ್ದವು ಇನ್ನು ಕೆಲವು ತರಗೆಲೆಗಳಂತೆ ಹಾರಿಹೋಗಿದ್ದವು.... ಬಿರುಗಾಳಿಯ ರಭಸಕ್ಕೆ ಕಬ್ಬಿಣದ ಸಲಾಕೆಗಳೂ ಸಹ ಮುರಿದು ಬಿದಿದ್ದವು....ಏನೋ ಭಯದ ಅನುಭವ, ಗಾಳಿಗೆ ಕಾರುಗಳೆಲ್ಲಿ ತೂರಿಹೋಗುತ್ತೋ ಎನ್ನುವಂತೆ ಭಾಸವಾಯಿತು. ಇಷ್ಟು ದಿನ ನಾನು ಕುವೈತಿನ ಬಿರುಗಾಳಿಯನ್ನು ನೋಡಿದ್ದೆ ಆದರೆ ಇಷ್ಟು ರಭಸದ ಗಾಳಿಯನ್ನು ಅನುಭವಿಸಿರಲಿಲ್ಲ.....

ನಾವು ಹೆದ್ದಾರಿಯಲ್ಲಿ ಸಾಗುವಾಗ ಅಕ್ಕಪಕ್ಕ ಅಷ್ಟು ಸ್ಪಷ್ಟವಾಗಿ ಕಾಣುತ್ತಲಿರಲಿಲ್ಲ ಅಲ್ಲೇ ಇದ್ದ ಬಸ್ ನಿಲ್ದಾಣದಲ್ಲಿ ೪,೫ ಜನ ಬಸ್ಸಿಗಾಗಿ ಕಾಯುತ್ತಲಿದ್ದರು ಮುಖಕ್ಕೆ ಕರವಸ್ತ್ರವನ್ನು ಕಟ್ಟಿಕೊಂಡು ಗೂಡರಿಸಿಕೊಂಡು ನಿಂತಿದ್ದ ಕಂಡು ಬೇಸರವಾಯಿತು ಇನ್ನು ಆ ಬಸ್ ಬರುವವರೆಗೂ ಇವರೆಲ್ಲಾ ಮಣ್ಣಿನ ಮನುಷ್ಯರಾಗುವುದೂ ಖಂಡಿತಾ ಎಂದುಕೊಂಡೆ... ಬೃಹತ್ ಬಂಗಲೆಗಳನ್ನು ಸಹ ಮರಳು ಆವರಿಸಿಬಿಟ್ಟಿತ್ತು.... ಪ್ರಕೃತಿ ಮಾತೆಗೆ ಇಲ್ಲಿ ಬಡವ ಬಲ್ಲಿದ ಎಂಬ ಯಾವ ಅಂತರವೂ ಇಲ್ಲ ನೋಡಿ ಎಲ್ಲವನ್ನೂ, ಎಲ್ಲರನ್ನೂ ಸಮನಾಗಿಸಿ ಧೊಳೆಬ್ಬಿಸಿಬಿಟ್ಟಿದ್ದಳು........ಒಂದೆಡೆ ಬೆಂಕಿಯ ಜ್ವಾಲೆಯೂ ಹಬ್ಬಿರುವ ತರಹವೂ ಭಾಸವಾಗುತ್ತಿತ್ತು. ವಾಯುದೇವ, ಜ್ವಾಲಾಮುಖಿ, ಎಲ್ಲರೂ ಪ್ರಕೃತಿ ಮಾತೆಗೆ ಜೊತೆಯಾಗಿದ್ದರೆಂದೆನಿಸಿತು.


ನಿಧಾನವಾಗಿ ಮನೆ ಹತ್ತಿರ ಬರುತ್ತಿದ್ದಂತೆ ಮನೆ ಮುಂದೆ ರಾಶಿ ರಾಶಿ ಕಸದ ತೊಟ್ಟಿಯಂತಿದದ್ದನ್ನು ಕಂಡು ಸರಿ ಬಿಡು ನೆನ್ನೆಯಷ್ಟೆ ಮನೆಯಲ್ಲಿದ್ದ ಧೂಳನ್ನೆಲ್ಲಾ ಕೊಡವಿ ಸ್ವಚ್ಚಗೊಳಿಸಿದ್ದೆ ಇನ್ನು ಇವತ್ತು ಅದೇ ಕೆಲಸ ಮಾಡಬೇಕೆಂದುಕೊಂಡು ಒಳಗೆ ಕಾಲಿಟ್ಟರೆ ಬರಿ ಮಣ್ಣು ಮನೆಯನ್ನೇ ಆವರಿಸಿತ್ತು ಹೇಗೆ ಅಂತೀರಾ ಕಪ್ಪು ಬಣ್ಣದ ಸೋಫಾ ಕಂದು ಬಣ್ಣಕ್ಕೆ ತಿರುಗಿತ್ತು... ಟಿವಿ, ಪಾತ್ರೆ,ಪಡಗ ಎಲ್ಲವೂ ಮಣ್ಣಿನತ್ತಿದ್ದವು.... ಆದರೆ ಮಗರಾಯ ಮಾತ್ರ ಯಾವ ಗಾಳಿ ಗಂಧದ ಅರಿವಿಲ್ಲದೇ ಟಿವಿಯಲ್ಲಿ ಮಗ್ನನಾಗಿದ್ದ ಇದೂ ಒಂತಾರ ಒಳ್ಳೆಯದೆ ಗಾಳಿಯ ಆರ್ಭಟಕ್ಕೆ ಹೆದರದೆ ಚಿಂತೆ ಇಲ್ಲದವಳು ಸಂತೆಯಲ್ಲಿ ನಿದ್ರೆ ಮಾಡಿದಂತೆ ಆರಾಮಾಗಿದ್ದ.


ಕೆಂಪಾದವೋ ಎಲ್ಲಾ ಕೆಂಪಾದವೋ... ಎಂಬ ಹಾಡಿನಂತೆ .......... ಕಪ್ಪಿದ್ದ ಗಂಡನೂ ಕೆಂಪಾದನೋ ಕೆಂಪಾದನೋ... ಹಹ್ಹಾ - ನನ್ನವರು ಧೂಳ್ ಮಯವಾದದ್ದು ಹೀಗೆ


ವಾಯುದೇವನಿಗೆ ಯಾರೊಡನೆ ಮುನಿಸಿತ್ತೋ ಗೊತ್ತಿಲ್ಲ ನಮ್ಮ ಮೇಲೆ ತೀರಿಸಿಕೊಂಡ. ಅಂತೂ ಈ ಧೂಳಿಗೆ ನಾವು ಧೂಳಿಪಟದಂತೆ ತೂರಾಡಿದ್ದಂತೂ ಸತ್ಯ...... ಒಂದು ಹೊಸ ಅನುಭವ ಇಷ್ಟವಾಯ್ತು.... ಕಷ್ಟದ ಅರಿವಾಯ್ತು.... ಒಮ್ಮೆ ಕಷ್ಟದ ಮೇಲೂ ಒಲವಾಯ್ತು. ತೂರಾಡುತ್ತಿದ್ದ ನನಗೆ ಗಂಡನ ಕೈ ಆಸರೆಯಾಯ್ತು. ಎಲ್ಲಾ ಅನುಭವ ಒಮ್ಮೆಲೆ ಮನಸು ಅನುಭವಿಸಿತು.24 comments:

Kirti said...

jivanadali irabeku ell reetiya anubhav
sihi kahigu samanaad i maanav
japaanin sunaamiyu kuwaitin birugaaliyu
hattirviruva gandanannu aasareyaagi needide
hedarike bittu bidi kempu bann mechchi bidi
aaguvudu olleyade kaaran i lekhanave nenapaagide bloggige....take care next time ..

ಜಲನಯನ said...

ಧೂಳಾಯೊತೋ ಎಲ್ಲಾ ಧೂಳಾಯಿತೋ...
ಮಹೇಶ್ ಕಾರು ಬಟ್ಟೆ ಬರೆ ಮುಖಾಕೂಡ
ಧೂಳಾಯಿತೋ...ಹಹಹಹ
ನನಗೆ ಮಿತ್ರ ವಿನೋದ್ ಫೋನ್ ಮಾಡಿದಾಗ ಇಲ್ಲಿನ ಮಾಮೂಲಿ ಡಸ್ಟ್ ಸ್ಟಾರ್ಮ್ ಅಂದ್ಕೊಂಡೆ..ಆದ್ರೆ ಕಿಟಕಿಯಿಂದ ನೋಡಿದಾಗಲೇ...ಬಪ್ಪರೇ..ಏನಿದು ಅಂತ ಅನ್ಸಿದ್ದು...
ಹೌದು ಇದೂ ಒಂಥರಾ ಅನುಭಾವನೇ..ಭಯಾನಕ...ಇದರಲ್ಲಿ ಸಿಕ್ಕವರು ಉಸಿರ್ಕಟ್ಟೋದು ತಡ ಆಗೊಲ್ಲ...ಅನುಭವಾನ ಚನ್ನಾಗಿ ಹಂಚಿಕೊಂಡ್ರಿ..

ವಿ.ರಾ.ಹೆ. said...

ಹೀಗೆ ಅಲ್ಲಿ ಧೂಳುಗಾಳಿ ಬೀಸುತ್ತಾ ಇರುತ್ತಾ ಅಲ್ಲಿ ಆಗಾಗ?
ಇದ್ನೆಲ್ಲಾ ನೋಡಿದರೆ ನಾವು ಕರ್ನಾಟಕದಲ್ಲಿರುವವರೇ ಅನ್ಸುತ್ತೆ ;)

ಮನಸು said...

ಕೀರ್ತಿ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ ಹಾಗೆ ಮುಂದೆ ಹುಷಾರಾಗಿ ಇರುತ್ತೇವೆ...

ಮನಸು said...

ಅಜಾದ್ ಸರ್,
ಧೂಳ್ ಮಗ ಧೂಳ್ ಎಂದಂಗಿತ್ತು ಆದರೆ ನಿಜಕ್ಕೂ ಆ ಸಮಯ ಭಯವನ್ನೇ ಸೃಷ್ಟಿಸಿತ್ತು... ಯಾಕಾದರೂ ಹೊರಗಡೆ ಬಂದೆವೋ ಅನ್ನಿಸಿಬಿಟ್ಟಿತು. ನಿಮಗೆ ಗೊತ್ತಲ್ಲಾ ಕುವೈತ್ ಯುನಿವರ್ಸಿಟಿಯಲ್ಲಿನ ಮನೆಗಳ ಹತ್ತಿರ ಕಾರ್ ಪಾರ್ಕ್ ಮಾಡೋಕ್ಕೆ ಎಷ್ಟೋಂದು ಸ್ಥಳ ಇದೆ ಎಂದು... ಈ ಧೂಳಿನಲ್ಲಿ ನಮಗೆ ಗೊತ್ತೇ ಆಗಲಿಲ್ಲ ನಮ್ಮ ಕಾರು ಎಲ್ಲಿದೆ ಎಂದು... ಒಳ್ಳೆ ಅನುಭವ ಮಾತ್ರ... ಹಹಹ

ಮನಸು said...

ವಿ.ರಾ.ಹೆ
ಹೌದು ಇಲ್ಲಿ ಆಗಾಗ ಅದರಲ್ಲೂ ವಾರದ ಕೊನೆ ದಿನವೇ ಇರುತ್ತೆ ಬಿರುಗಾಳಿ... ಆದರೆ ಈ ಸಾರಿ ಏನೋ ವಿಚಿತ್ರವಾಗಿತ್ತು. ನಿಜ ನೀವು ಹೇಳುವುದು ಏನಾದರೂ ಸರಿ ನಮ್ಮೂರಲ್ಲಿದ್ದರೆ ಸರಿ ಅನ್ನಿಸುತ್ತೆ... ಒಳ್ಳೆ ಅನುಭವ ಒಟ್ಟಲ್ಲಿ...

ವನಿತಾ / Vanitha said...

Manu is really great !!

prabhamani nagaraja said...

ಅಬ್ಬ! ಅದ್ಭುತ ಅನುಭವ. ಸಧ್ಯ ಜೋಪಾನವಾಗಿ ಮನೆ ಸೇರಿದಿರಲ್ಲ! ಇನ್ನು ಮು೦ದೆ ಜಾಗ್ರತೆ. ನಿಮ್ಮ 'ಧೂಳ್ , ಧೂಳ್, ಧೂಳ್, ಧೂಳ್, ಎಲ್ಲೆಲ್ಲು ಧೂಳ್' ಅನುಭವವನ್ನು ಬಹಳ ಚೆನ್ನಾಗಿ ನಿರೂಪಿಸಿ ನಗಿಸಿದ್ದೀರಿ. ಅಭಿನ೦ದನೆಗಳು.

ಮನಸು said...

ಯೆಸ್... ವನಿತಾ ಮನು ಗ್ರೇಟ್.....

ಮನಸು said...

ಹಾ ಪ್ರಭ... ಜೋಪಾನವಾಗಿ ಮನೆ ಸೇರಿದೆವು.... ಕುವೈತ್ ದೇಶವನ್ನೇ ಧೂಳೆಬ್ಬಿಸಿತ್ತು. ಏನೇ ಅನುಭವವಾದರೂ ನಗುತ್ತ ತಗೋಳೋಣ ಅಂತ ಈ ಪ್ರಯತ್ನ...ಹಹ ಧನ್ಯವಾದಗಳು

sunaath said...

ಅಬ್ಬಾ! ಈ ಬಿರುಗಾಳಿಯ ಅರ್ಭಟೆಯನ್ನು ಓದಿಯೇ ನಾನು ತಣ್ಣಗಾದೆ. ನೀವು ಹೇಗೆ ಎದುರಿಸಿದರೋ ಆಶ್ಚರ್ಯವಾಗುತ್ತದೆ. ಅಂತೂ ಮರಳುಗಾಡಿನ ವೈಶಿಷ್ಟ್ಯವೊಂದನ್ನು ಅರಿತುಕೊಂಡಂತಾಯಿತು. ಅದರಲ್ಲೂ ಸಮಯಪ್ರಜ್ಞೆಯಿಂದ ನೀವು ಫೋಟೋ ಹಿಡಿದದ್ದು ಒಳ್ಳೆಯದಾಯಿತು. ಮೊದಲಿನ ಫೋಟೋದಲ್ಲಿ ಕಾಣುವದನ್ನು ಮರಳಿನ ಸುನಾಮಿ ಎಂದೇ ಹೇಳಬೇಕು!

ಮನಸು said...

ಕಾಕ, ನಿಜ ಭಯ ಅಂತೀರಾ ಆ ಸಮಯ ನನಗೆ ಇಲ್ಲ ಸಲ್ಲದೆಲ್ಲಾ ಯೋಚಿನೆ ಬಂದು ಬಿಟ್ಟಿತ್ತು.... ಇವತ್ತು ನಮ್ಮ ಕಚೇರಿಯಲ್ಲಿ ಹೇಳ್ತಾ ಇದ್ದರು ಯಾರೋ ಒಬ್ಬರು ಈ ಬಿರುಗಾಳಿಗೆ ಸುಮಾರು ೬ ಕಿ.ಮೀ ದೂರಕ್ಕೆ ಹೋಗಿ ಬಿದಿದ್ದನಂತೆ... ಹೇಗಿರಬೇಕು ಆತನ ಪರಿಸ್ಥಿತಿ ಎಂದು ಯೋಚಿಸಿದೆ... ಹೌದು ಕಾಕ ಸುನಾಮಿಯೇ ಬಂದಪ್ಪಳಿಸಿತು ಎಂದುಕೊಂಡೆ... ಮರುಭೂಮಿಯ ಬಿರುಗಾಳಿ ಆಗಾಗ ತನ್ನ ಆಟ ತೋರಿಸುತ್ತಲಿರುತ್ತೆ...

Shashi jois said...

ಸುಗುಣ ಓದಿ ಭಯ ಆಯ್ತು....ಮನುನ ಕರೆದು ಕೊಂಡು ಹೋಗದೆ ಇದ್ದದ್ದು ಒಳ್ಳೆದಾಯ್ತು ಆಲ್ವಾ!!!!
ಪ್ರಕೃತಿ ಯ ಆಟದ ಮುಂದೆ ಮನುಷ್ಯನ ಆಟ ಏನು ನಡೆಯದು ಅಲ್ವ!!!!
ನಿಜಕ್ಕೂನೀವು ಬರೆದದ್ದು ಓದಿಯೇ ಮೈ ಜುಮ್ ಅನ್ನುತ್ತೆ..ಇನ್ನೂ ಅದನ್ನು ಎದುರಿಸಿದವರಿಗೆ ಹೇಗಾಗಬೇಡ ಆಲ್ವಾ??
ಕೆಂಪಣ್ಣ ನನ್ನು ಗುರುತು ಹಿಡಿಯಲು ಆಗಿಲ್ಲ ಹ ಹ ಹ .....

Anonymous said...

ಸು,
ಎಂತಾ ಅನುಭವನೇ... ಅಬ್ಬಾ ಅನ್ನಿಸಿತು... ಹುಷಾರು... ಚಿಂಟು ಬರದಿದ್ದು ಒಳ್ಳೇದಾಯಿತು ಬಿಡು... ಮಹೇಶ್ ಏನು ಬೂದಿಮುಕ್ಕನಂತಾಗಿದ್ದಾರೆ ಹಾಹಹ ಚೆನ್ನಾಗಿದೆ ವೇಷ..!!!!!!

ಶಿವಪ್ರಕಾಶ್ said...

enakka idu bhayankaravaagide...!!!

Subrahmanya said...

ಓಹ್ ! ಅವಘಡಗಳ ಅರಿವೇ ಇರದ ಕರ್ನಾಟಕದ ಜನತೆಗೆ ಈ ಮರಳಿನ ಸುನಾಮಿಯ ಅನುಭವ ಹೇಗಾದೀತು ? ಅಲ್ಲಿ ಇದ್ದೇ ತಿಳಿಯಬೇಕೇನೋ . ಅಷ್ಟೆತ್ತರದ ಧೂಳಿನ ಅಲೆಯನ್ನು ನೋಡಿ ಬೆರಗಾದೆ, ಇನ್ನು ನಿಮ್ಮ ಪಾಡು ಹೇಗಿರಬೇಕು ! ನಿಮ್ಮ ಸಮಯಪ್ರಜ್ಞೆ ನೋಡಿ ಆಶ್ಚರ್ಯವಾಯ್ತು.

ತೇಜಸ್ವಿನಿ ಹೆಗಡೆ said...

ಅಬ್ಬಾ! ನೀವು ಬರೆದದ್ದು ಓದುವಾಗಲೇ ಕಳವಳವಾಗುತ್ತದೆ.. ಇನ್ನು ಅನುಭವಿಸಿದ ನಿಮ್ಮ ಕತೆ....!? ೧೫ ನಿಮಿಷಗಳ ಕಾಲ ಕಾರಿಗಾಗಿ ಪರದಾಡಿದಿರಿ... ನಾನಾಗಿದ್ದಿದರೆ ೫ ನಿಮಿಷಕ್ಕೇ ಗಾಭರಿಗೊಂಡಿರುತ್ತಿದ್ದೆ! ಹೊಸ ಅನುಭವ ಹಂಚಿಕೊಂಡಿರಿ... ನಿಜ... ನಮ್ಮ ನಾಡೇ ಸ್ವರ್ಗಕ್ಕಿಂತ ಮಿಗಿಲು.

Pradeep Rao said...

ಚೆನ್ನಾಗಿದೆ. ಕುವೈತ್‍ನಲ್ಲಿ ಈ ರೀತಿ ಧೂಳು ಗಾಳಿ ಬರುತ್ತದೆ ಎಂದು ತಿಳಿದಿರಲಿಲ್ಲ. ನಿಮ್ಮ ಅನುಭವ ಕೇಳಿ ಮತ್ತೊಮ್ಮೆ ಜಪಾನಿನ ನೆನಪಾಯ್ತು!

PARAANJAPE K.N. said...

ವಾರ೦ತ್ಯದ ಧೂಳುಸೇವನೆ ಪ್ರಕರಣವನ್ನು ಚೆನ್ನಾಗಿ ಬರೆದಿದ್ದೀರಿ. ಕೆ೦ಪಣ್ಣ ನವರ ಜೊತೆಗೆ ಕೆ೦ಪಮ್ಮನವರ ಫೋಟೋ ನೂ ಹಾಕಬೇಕಿತ್ತು.

ಮನಸು said...

ಶಿವು... ಲೈಫು ಇಷ್ಟೇನೆ..ಹಹಹ

ಸುಬ್ರಮಣ್ಯರವರೆ ನಮಗೂ ಒಂದುರೀತಿ ಅನುಭವಗಳು ಅಷ್ಟೆ... ಒಳೆಯದಾದರೆ ಸರಿ ಇಲ್ಲವ ಬಂದಿದ್ದು ಅನುಭವಿಸಬೇಕು ಅಷ್ಟೆ

ಮನಸು said...

ಶಶಿ ಅಕ್ಕ,
ಧೂಳಿನ ಸೇವೆ ಚೆನ್ನಾಗಿಯೇ ಇತ್ತು. ಮನು ಬರದಿದ್ದು ಒಳ್ಳೆಯದೇ ಆಗಿತ್ತು. ನಿಜ ಭಯವಾಗುತ್ತೆ ಏನು ಮಾಡೋದು ಅನುಭವ ಅಷ್ಟೆ..... ಕೆಂಪಣ್ಣ ಸೂಪರ್ ಅಲ್ಲವೇ?? ಹಹ್ಹಹ...

Anonymous
ಧನ್ಯವಾದಗಳು ನಿನ್ನ ಉತ್ತರಕ್ಕೆ... ಬೂದಿಮುಕ್ಕರ ವೇಷ ನೋಡಿ ನಗು ಬಂದಿರಬೇಕು ಹಹಹ

ಮನಸು said...

ತೇಜು,
ಒಮ್ಮೆ ಕಳವಳವಾಗುವುದಂತೂ ನಿಜ... ನಾನು ಗಾಭರಿಯಾಗಿದ್ದೆ.... ಆ ಸಮಯದಲ್ಲಿ ಅಳು ಕೂಡ ಬಂದಿತ್ತು ಎಂತ ಕರ್ಮನಪ್ಪ ಇದೇ ಸಮಯದಲ್ಲೇ ನಾವು ಹೊರಗಡೆ ಬರಬೇಕಿತ್ತಾ ಅಂದುಕೊಂಡೆ...... ಒಂದು ರೀತಿ ಹೊಸ ಅನುಭವ... ನಮ್ಮೂರೇ ನಮಗೆ ಮೇಲು...

ಪ್ರದೀಪ್
ನಿಜ ಜಪಾನಿನ ನೆನಪು ನನಗೂ ಆ ಕ್ಷಣದಲ್ಲಿ ಮರುಕಳಿಸಿತು... ಪ್ರಕೃತಿಯ ಕೋಪ ಇಳಿಸುವವರು ಯಾರು ಎಂಬಂತಾಗಿದೆ...

ಮನಸು said...

ಪರಂಜಪೆ ಸರ್,
ಧೂಳಿನ ಸೇವೆ ಚೆನ್ನಾಗಿಯೇ ಆಯ್ತು... ಕೆಂಪಣ್ಣನವ್ರು ತಲೆಗೆ ಬಟ್ಟೆ ಕಟ್ಟಿಕೊಂಡಿರಲಿಲ್ಲ ಆದರೆ ಕೆಂಪಣ್ಣನ ಹೆಂಡತಿ ಮಾತ್ರ ಬಟ್ಟೆ ಕಟ್ಟಿಕೊಂಡು ಯಾವುದೇ ಕೆಂಪಮ್ಮನ ರೂಪಕ್ಕೆ ಸಾಕ್ಷಿಯಾಗಲಿಲ್ಲ... ನನ್ನ ಬಟ್ಟೆಗಳು ಮಾತ್ರ ಬೂದಿಬಣ್ಣಕ್ಕೆ ಬಂದವು ಅಷ್ಟೆ ಹಹಹ...

ashokkodlady said...

Nimma Bhayanaka, adbhuta anubhavavannu nammodane hanchikondiddakke dhanyavadagalu....