Monday, July 15, 2013

- ವೈಷಮ್ಯತೆ -

ಎಲ್ಲರಿಗೂ ಅವರದೇ ಸಂಪ್ರದಾಯ
ಅವರದೇ ನೀತಿ ನಿಯಮಗಳು
ಅವುಗಳ ದೂಷಣೆ, ಧೋರಣೆ
ನಮ್ಮದಲ್ಲದ ಪಾತ್ರಗಳು....

ಸಂಬಂಧ, ಸಂಸ್ಕೃತಿ
ಬೆಳೆದು ಬಂದ ಹಾದಿ
ಅವರೇ ಪೋಣಿಸಿಕೊಂಡ
ದಾರದೊಳಗಿನ ಮಣಿಗಳು..

ತನ್ನ ಇರುವಿಕೆ ಪರರ ಬದುಕಾಗದೆ
ಸ್ವಇಚ್ಚೆ, ಸ್ವಸಾಮರ್ಥ್ಯ ಗುರುತು
ಹಚ್ಚಿ ಬಾಳು ಬೆಳಗುವ ಹಸ್ತ
ಎಲ್ಲರೊಳಗು ಹುದುಗಬೇಕಿದೆ....

ಮೇಲ್ದರ್ಜೆ, ಕೀಳುದರ್ಜೆ
ಎಲ್ಲ ಹಳತು ಮಾಡಿ
ಹೊಸ ಹೆಜ್ಜೆಯ ಸೂತ್ರದಿ
ನಡೆವ ವಿದ್ಯಾವಂತನಾಗಲಿ...

ಬದುಕು ಬವಣೆಗಳ ಪಟ್ಟಿ
ಇಲ್ಲಿ ಜಾತಿ ವೈಷಮ್ಯ
ಭಾವನೆಗಳ ಶೋಷಣೆ
ಎಲ್ಲ ಬಲ್ಲವನಿಗೆ ಸಲ್ಲದು...

ಯಾರೋ ಬಿತ್ತಿದ ವಿಷ ಬೀಜವನು
ಫಸಲು ಮಾಡುವ ಹೊಣೆ ಹೊತ್ತಂತೆ
ಹಸಿವಿಗೆ ಆಹಾರವಾಗದೆ
ದ್ವೇಷದಾ ಕೊಳ್ಳಿಗೆ ಆಹುತಿಯಾಗದಿರಲಿ..

ಮನುಕುಲದ ವೈಷಮ್ಯ
ಪ್ರಕೃತಿ ದಹಿಸೋ ಸಾಮರ್ಥ್ಯ
ಭುಗಿಲೇಳುವ ಕ್ರೋಧಕೆ
ಹೊಲಸು ಮರೆತು; ಅಳಿಸಿ ತಾರತಮ್ಯ...

ಯಾವುದೋ ಜಾತಿ ಯಾರದೋ ನೀತಿ
ಉಸಿರು, ಹೃದಯ ಬಡಿತಕೆ ಯಾವ ಜಾತಿ
ಏನೊಂದು ಎಣಿಸದೆ ಸಾಗುತಿರುವ ದಿನಚರಿಗೆ
ವಿಚಾರವಾದಿಗಳು ನೆಡುವ ದ್ವೇಷ ಸಸಿಗಳು
ಹೆಮ್ಮರವಾಗಿ ಬೆಳೆಯದಂತೆ ಕಟಾವು ಮಾಡಲಿ...!!!


ನನ್ನ "ಮೃದುಮನಸು" ಕೂಸಿಗೆ ಐದು ವರ್ಷಗಳು ಕಳೆದಿವೆ. ಈ ಪಂಚವಾರ್ಷಿಕ ಬ್ಲಾಗಿನಡಿ ಈ ಪುಟ್ಟ ಸಾಲುಗಳು. ಇತ್ತೀಚೆಗೆ ಜನರಲ್ಲಿ ವೈಷಮ್ಯಗಳು ಮತ್ತು ನಮ್ಮನಮ್ಮಲ್ಲೇ ಇರುಸುಮುರುಸುಗಳು ಹೆಚ್ಚುತ್ತಿವೆ. ಅವೆಲ್ಲವನ್ನೂ ದೂಡಿ ವಿದ್ಯಾವಂತ ಜನರು ಸಂತೃಷ್ಟಿ ನೆಲೆ ಕಾಣಲೆಂಬುದೇ ನನ್ನ ಈ ಕವನದ ಆಶಯ.  

ವಂದನೆಗಳು
ಮನಸು

13 comments:

ಚುಕ್ಕಿಚಿತ್ತಾರ said...

ಕವನ ಚನ್ನಾಗಿದೆ.. ನಿಮ್ಮ ಆಶಯ ನೆರವೇರಲಿ.. ಮನಸಿನ ಹುಟ್ಟು ಹಬ್ಬಕ್ಕೆ ಶುಭ ಹರಕೆಗಳು...

Suresh said...

ನಿಮ್ಮ ಸಾಮಾಜಿಕ ಕಳಕಳಿಯನ್ನು ಎತ್ತಿತೋರಿಸುವ ಸೊಗಸಾದ ಕವನ! ಮೃದುಮನಸಿನ ಸುಂದರ ಸಂದೇಶ ನೀಡಿದ ಬ್ಲಾಗಿಗೆ ಐದು ವರುಷದ ಹುಟ್ಟುಹಬ್ಬದ ಶುಭ ಹಾರೈಕೆಗಳು!

Suresh said...

ನಿಮ್ಮ ಸಾಮಾಜಿಕ ಕಳಕಳಿಯನ್ನು ಎತ್ತಿತೋರಿಸುವ ಸೊಗಸಾದ ಕವನ! ಮೃದುಮನಸಿನ ಸುಂದರ ಸಂದೇಶ ನೀಡಿದ ಬ್ಲಾಗಿಗೆ ಐದು ವರುಷದ ಹುಟ್ಟುಹಬ್ಬದ ಶುಭ ಹಾರೈಕೆಗಳು!

ಜಲನಯನ said...

ಮನಸುಗಳ ಮಧ್ಯೆ ಬಿರುಕುಗಳು ಬರಲು ಸ್ವಾರ್ಥ-ಅಹಂ ಮೂಲ ಕಾರಣ ಅದನ್ನು ಅಳಿಸಿಕೊಂಡರೆ ಜೀವನದ ಹಾದಿ ಎಷ್ಟು ಸುಗಮ ಸುಲಲಿತ..ಚನ್ನಾಗಿದೆ ಸುಗುಣ ಕವನ ಮತ್ತು ಆಶಯ.

ಭಾವಲಹರಿ said...

ಮೃದುಮನಸಿನ ಕೂಸಿಗೆ ಹುಟ್ಟು ಹಬ್ಬದ ಶುಭಾಶಯಗಳು. ಯಾರ ಜಾತಿ, ಮತ ಪಂಥಗಳೆಲ್ಲಾ ಹುಟ್ಟಿನಿಂದ ಬಂದದ್ದಲ್ಲ,ಕಾಯಕದ ಕುಲುಮೆಯಲ್ಲಿ ಬೆಂದು,ನೊಂದು ಹೊಟ್ಟೆಪಾಡಿಗೆ ಆರಿಸಿಕೊಂಡ ಕೆಲಸಕ್ಕೆ ಜಾತಿಯ ಹೆಸರು.ನಮ್ಮ ನಡೆ ನುಡಿ, ಮಾನವೀಯತೆಗೆ ಸ್ಪಂದಿಸುವ ಮನವಿದ್ದರೆ ಸಾಕು. ಅವನೇ ನಿಜವಾದ ವಿಶ್ವಮಾನವ ನಿಮ್ಮೆಲ್ಲಾ ಆಶಯಯುಕ್ತ ಸಾಲುಗಳು ಮುಂದೊಂದು ದಿನ ಕಾರ್ಯರೂಪಕ್ಕೆ ಬರುವುದು. ತುಂಬ ಚೆಂದದ ಭಾವ ಪ್ರಸ್ತುತಿ.

bilimugilu said...

Lovely Suguna.........
ಕವನದಲ್ಲಿರುವ ಸಹ ಬಾಳ್ವೆಯ ಅಪೇಕ್ಷೆ ಚೆನ್ನಾಗಿ ಮೂಡಿಬ೦ದಿದೆ!
Congrats on completion of 5 years of Blogging :)

Srikanth Manjunath said...

"ಯಾರೋ ಬಿತ್ತಿದ ವಿಷ ಬೀಜವನು
ಫಸಲು ಮಾಡುವ ಹೊಣೆ ಹೊತ್ತಂತೆ
ಹಸಿವಿಗೆ ಆಹಾರವಾಗದೆ
ದ್ವೇಷದಾ ಕೊಳ್ಳಿಗೆ ಆಹುತಿಯಾಗದಿರಲಿ.." Super lines

ಅತಿ ಸುಂದರವಾದ ಕವನ... ವಸ್ತು ಸ್ಥಿತಿ ಹಾಗೆ ಕಣ್ಣಿಗೆ ರಾಚುವಂತಿದೆ ಕವನದ ಧಾಟಿ ಸೂಪರ್ ಅಕ್ಕಯ್ಯ
ಹಾಗೆಯೇ ಮೃದುಮನಸ್ಸಿಗೆ ಐದು ವಸಂತಗಳನ್ನು ಕಂಡ ಖುಷಿ.. ಅಭಿನಂದನೆಗಳು ಸುಂದರ ಕವನಕ್ಕೆ ಹಾಗೂ ಪಂಚ ವಾರ್ಷಿಕವನ್ನು ಮುಟ್ಟಿದ್ದಕ್ಕೆ

ಅನಂತ್ ರಾಜ್ said...

Nimma aashaya saakaravagali. Mnasu taana da pancha varshika dinada shubhashayagalu. :)

sunaath said...

ಮನಸು,
ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸದಭಿರುಚಿಯ ಬ್ಲಾ‍^^ಗು ಸದಾ ನಮ್ಮ ಮನಸ್ಸನ್ನು ಅರಳಿಸುತ್ತಲೇ ಇರಲಿ ಎಂದು ಹಾರೈಸುತ್ತೇನೆ.

ದಿನಕರ ಮೊಗೇರ said...

Modalige congrats.......
Sundara sadaashayada kavanakke abhinandane.... tumbaa chennaagide... khushi aaytu..

Badarinath Palavalli said...

ತುಂಬಾ ಖುಷಿಯಾಯಿತು ಮೇಡಂ, ತಮ್ಮ ಬ್ಲಾಗಿಗೆ 5 ವರ್ಷಗಳು ತುಂಬಿದ್ದು ಸಂತಸದ ವಿಚಾರ. ಇಲ್ಲಿಯವರೆಗೂ ನಮ್ಮನ್ನು ಓದಿಕೊಂಡು ಬಂದ ಸತ್ವಪೂರ್ಣ ಬರಹಗಳು ಮುಂದೆಯೂ ಮುಂದುವರೆಯಲಿ.

ಪ್ರಸಕ್ತ ಕವಿತೆಯ ಆಶಯ ನನಗೆ ತುಂಬಾ ಮೆಚ್ಚಿಗೆಯಾಯಿತು. ಮನುಕುಲವೆಲ್ಲ ಒಂದೇ ಇಲ್ಲಿ ಲಿಂಗ ಬೇಧ, ವರ್ಣ ಬೇಧಗಳಿಲ್ಲದೆ. ದೇಶ - ಕೋಶ - ನೆಲ - ನೀರು ರಾಜಕಾರಣವಿಲ್ಲದೆ ನೆಮ್ಮದಿ ನೆಲೆಸಲಿ. ಮನೆಗಳ ಅಂತರಂಗದಲ್ಲೂ ಮನಗಳು ಅರಳಲಿ. ಊರೂರು ನಂದನವನವಾಗಲಿ.

ಮೌನರಾಗ said...

ಶುಭಾಶಯಗಳು ಅಕ್ಕ.. ವರುಷಗಳು ಮತ್ತಷ್ಟು ಮಗದಷ್ಟು ಕೂಡುತ್ತಾ ಹೋಗಲಿ.. ಹ್ಯಾಪಿ ಬರ್ತ್ ಡೇ ಟು ಯುವರ್ ಬ್ಲಾಗ್...

KalavathiMadhusudan said...

nimma barahada aashayakkaagi dhanyavaadagalu,5 varshada kuusige shubhaashayagalu.