Tuesday, December 24, 2013

ನೋವಿನ ಬುತ್ತಿ, ಗಂಡಾಂತರಗಳ ಗಂಟಿನ ಸುತ್ತ - ಜಿ ಎಸ್ ಎಸ್

ಒಮ್ಮೆ ತೊಟ್ಟಿಲಲ್ಲಿ ಕೂಸನ್ನು ಮಲಗಿಸಿ, ಬಾವಿಯಲ್ಲಿ ನೀರು ತರಲು ಅಮ್ಮ ತೆರಳುತ್ತಾಳೆ. ಇತ್ತ ಪಕ್ಕದ ಮನೆಯ ಹುಲ್ಲುಜೋಪಡಿಗೆ ಬೆಂಕಿ ಬಿದ್ದು ಹತ್ತಿಕೊಂಡಿದೆ. ಆ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದವರ ಮನೆಗೆಲ್ಲ ಹರಡಿದೆ. ಇತ್ತ ತೊಟ್ಟಿಲಲ್ಲಿ ಮಲಗಿದ್ದ ಕೂಸಿನ ಮನೆಗೂ ಬೆಂಕಿ ಹತ್ತಿಕೊಂಡು ಉರಿಯುತ್ತಿದೆ. ಬಾವಿಯಿಂದ ನೀರು ತರುತ್ತಿದ್ದವಳು ಮನೆ ಹತ್ತಿಕೊಂಡು ಉರಿಯುತ್ತಿರುವುದನ್ನು ಕಂಡು ಮಗು ಮಲಗಿಸಿರುವುದು ನೆನಪಾಗುತ್ತದೆ. ಭಯಭೀತಳಾಗಿ ಆ ಹೊಗೆ-ಬೆಂಕಿಯ ನಡುವೆಯೂ ಮನೆಯೊಳಗೆ ಹಾದು ಮಲಗಿದ್ದ ಕೂಸನ್ನು ತನ್ನ ಎದೆಗವಚಿಕೊಂಡು, ದುಃಖತಪ್ತಳಾಗಿ ಒಂದೇ ಉಸಿರಿಗೆ ಊರಾಚೆಯ ಬಯಲಿನಲ್ಲಿ ಬಂದು ಕೂತಳು. 

ಮತ್ತೊಮ್ಮೆ ತುಂಗಾ ನದಿಯ ಮರಳುಹಾಸಿನ ಅಂಚಿಗೆ ಕಂಕುಳಲ್ಲಿದ್ದ ಎರಡೂವರೆ ವರ್ಷದ ಕೂಸನ್ನು ಕೂರಿಸಿ, ಸ್ಕೂಲ್ ಮೇಷ್ಟ್ರು ಶಾಂತವೀರಪ್ಪ ಮತ್ತು ವೀರಮ್ಮ ಮಾತಿನಲ್ಲಿ ಮಗ್ನರಾಗಿ ತಾವು ತಂದಿದ್ದ  ಬುತ್ತಿಯನ್ನು ತೆಗೆದು ರೊಟ್ಟಿ ತಿನ್ನುತ್ತಲಿದ್ದರು. ಅತ್ತಕಡೆಯಿಂದ ಯಾರೋ ಅರಚುತ್ತಾರೆ ಅಯ್ಯೋ ಮಗು, ಮಗು ಎಂದು... ಇತ್ತ ಕೂರಿಸಿದ್ದ ಕೂಸು ಹರಿಯುವ ತುಂಗಾನದಿ ಕಡೆಗೆ ಕ್ಷಣಾರ್ಧದಲ್ಲಿ ಹೋಗಿ ನೀರಿನಲ್ಲಿ ಮುಗುಚಿಕೊಂಡಿತ್ತು. ರೊಟ್ಟಿ ಸವಿಯಲ್ಲಿದ್ದ ತಾಯಿ ಓಡಿಹೋಗಿ ನೀರಿನಲ್ಲಿದ್ದ ಮಗುವನ್ನು ಬಾಚಿ ತಬ್ಬಿ ಆಲಂಗಿಸುತ್ತಾರೆ. 

ನಂತರದ ದಿನಗಳಲ್ಲಿ ಈ ಬಾಲಕ ಸುಮಾರು ೫-೬ ವರ್ಷವಿರಬೇಕು ಆಗ ತನ್ನ ಅಮ್ಮನನ್ನು ಕಳೆದುಕೊಂಡುಬಿಟ್ಟರು. ಆ ತಾಯಿಯ ಮುಖದ ನೆನಪು ಅಸ್ಪಷ್ಟ ಆದರೆ ಆಕೆಯ ಹಾಡಿನ ಕೊರಳಿನ ಇಂಪು ಮಾತ್ರ ಅವರ ಮನಸ್ಸಿನಲ್ಲಿ ಸದಾ ಅನುರಣಿಸುತ್ತಲೇ ಇರುತ್ತದೆ. ತನ್ನ ಎರಡು ಗಂಡಾಂತರಗಳಲ್ಲಿ ರಕ್ಷಿಸಿದ ತಾಯಿಯನ್ನು ಕಳೆದುಕೊಂಡ ಆ ಮನಸ್ಸು ಸದಾ ಆ ಅಮ್ಮನನ್ನೇ ಹುಡುಕುತ್ತಲಿರುತ್ತದೆ.

"ನಿನ್ನ ಅಮ್ಮ ದೇವರಲ್ಲಿ ಹೋಗಿದ್ದಾಳೆ" ಎಂದಾಗ  ಬರುತ್ತಾಳಲ್ಲವಾ..? ಮತ್ತೆ ಬಂದೇ ಬರುತ್ತಾಳೆಂಬ ಆಸೆಯಲ್ಲೇ ಬಾಲ್ಯ. ದಿನಕ್ರಮೇಣ ವಾಸ್ತವದ ಅರಿವಾದಾಗ ದುಃಖ ಒತ್ತರಿಸಿಕೊಂಡು ನೆನಪು ಕಾಡುತ್ತಲಿರುತ್ತದೆ. ಆ ನಂತರ "ಕಂಡ ಕಂಡ ಹೆಣ್ಣ ಮೊಗದಿ ತಾಯಿ ಮುಖವನರಸಿ" ಹುಡುಕುವುದೇ ಕೆಲಸ. ಎಲ್ಲಿ ಅಮ್ಮ, ಅರಿವಾಗುವ ಮುನ್ನ ಮತ್ತೆಂದೂ ಬಾರದಲೋಕಕ್ಕೆ ತೆರಳಿರುತ್ತಾಳೆ. ಈ ಅಮ್ಮನ ನೆನಪಲ್ಲಿ ಮತ್ತೊಬ್ಬ ತಾಯಿ ಶಾಂತಮ್ಮ ಅವರ ಜೀವನವನ್ನು ತುಂಬುತ್ತಾರೆ. ಹೀಗೆ ಬಾಲ್ಯದಲ್ಲೇ ನೋವಿನ ಬುತ್ತಿ, ಗಂಡಾಂತರಗಳ ಗಂಟನ್ನು ಕಟ್ಟಿಕೊಂಡು ಬೆಳೆದವರು ಜಿ ಎಸ್ ಶಿವರುದ್ರಪ್ಪನವರು. 

ಜಿ ಎಸ್ ಎಸ್ - ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪನವರ ಪೂರ್ವಿಕರು ಧಾರವಾಡ ಜಿಲ್ಲೆಯ ಗುಗ್ಗರಿ ಎಂಬ ಊರಿನವರು. ಊರಿನ ನಂಟು ಕಳಚಿದ್ದರೂ ಅವರ ಹೆಸರಿನಲ್ಲಿ ಸದಾ ಬೆರೆತುಕೊಂಡಿದೆ. 

ಬಾಲ್ಯದ ದಿನಗಳಲ್ಲಿ ಅಪ್ಪನದು ಊರೂರು ಅಲೆಸುವಂತ ವೃತ್ತಿಯಲ್ಲಿ ಅವರನ್ನು ಹೆಚ್ಚು ಆಕರ್ಷಿಸಿದ್ದು ಹೊನ್ನಾಳಿಯ ಹತ್ತಿರದ ತುಂಗಭದ್ರಾ ನದಿ, ರಾಮಗಿರಿಯ ಬಯಲಾಟಗಳ ಹುಚ್ಚು, ಕೋಟೆ ಹಾಳುವಿನ ಸುತ್ತಮುತ್ತಲಿನ ಮಲೆನಾಡ ಸೆರಗು, ಬೆಲಗೂರಿನ ತೆಂಗಿನ ತೋಟದ ಹರಹು, ಸುತ್ತಮುತ್ತಲಿನ ನೇಕಾರರ ಮನೆ, ಕುಂಬಾರರ ಬೀದಿ, ನೇಕಾರ ಮತ್ತು ಕುಂಬಾರರ ಕೈಚಳಕಗಳು ಹೀಗೆ ವಿಧವಿಧವಾದ ಸೂಕ್ಷ ಅನುಭೂತಿಗಳು ಜಿ. ಎಸ್ . ಎಸ್ ಅವರ ಬಗೆ ಬಗೆಯ ಕವಿತೆಗಳು ರೂಪ ತಾಳುವಂತೆ ಮೋಡಿ ಮಾಡಿದ್ದವು. 

 ಹೊಸದುರ್ಗದ ಹತ್ತಿರದ ಬೆಲಗೂರಿನಲ್ಲಿ ಮಿಡಲ್ ಸ್ಕೂಲ್ ಪರೀಕ್ಷೆ ಬರೆದವರಲ್ಲಿ ಎಂಟು ಜನರು, ಅವರಲ್ಲಿ ಪಾಸಾಗಿದ್ದವರು ಇಬ್ಬರೇ ಅವರಲ್ಲಿ ಜಿ ಎಸ್ ಶಿವರುದ್ರಪ್ಪರವರು ಸಹ ಒಬ್ಬರು. ಆನಂತರ ದಾವಣಗೆರೆಯಲ್ಲಿ ಹೈಸ್ಕೂಲಿಗೆ ಸೇರಿದರು.  ಶಾಂತವೀರಪ್ಪನವರಿಗೆ ಸಂಸಾರಿಕ ಕಷ್ಟಗಳು ಹೆಚ್ಚಾಗಿ ಮಗನನ್ನು ಮುಂದೆ ಓದಿಸುವ ಇಚ್ಚೆಯಿಲ್ಲ. ಬದಲು ಕೆಲಸಕ್ಕೆ ಸೇರಿಸಿದರೆ ಮನೆ ಸಾಗುವುದು ಕಷ್ಟವಿಲ್ಲವೆಂದು ಭಾವಿಸಿ ಕೆಲಸಕ್ಕೆ ಸೇರಿಕೊಳ್ಳಲು ಹೇಳುತ್ತಾರೆ. ಆದರೆ ಶಿವರುದ್ರಪ್ಪನವರಿಗೆ ಮುಂದೆ ಓದುವ ಆಸೆ ನಂತರ ತುಮಕೂರಿನಲ್ಲಿ ಇಂಟರ್ ಮೀಡಿಯೇಟ್ ಸೇರಿದರು. 

ಚಿತ್ರ : ಅಂತರ್ಜಾಲ ಕೃಪೆ

೧೯೪೨ ಆಗ ಸ್ವಾತಂತ್ರ್ಯ ಚಳುವಳಿ ಭರಾಟೆ, ಶಿವರುದ್ರಪ್ಪನವರೂ ಮೆರವಣಿಗೆಗಳಲ್ಲಿ ಭಾಗವಹಿಸಿ ವಂದೇ ಮಾತರಂ ಕೂಗಿದ್ದರು. ಈ ವಿಷಯ ತಿಳಿದ ಶಿವರುದ್ರಪ್ಪನವರ ತಂದೆಗೆ ಗಾಭರಿ. ಈ ಮೊದಲು ಮೇಷ್ಟ್ರು  ಅವರು ಶಿಕ್ಷಕರಾಗಿದ್ದ ರಾಮಗಿರಿಯಲ್ಲಿ, ಒಮ್ಮೆ ಶಾಲಾ ಕುರ್ಚಿಗಳನ್ನು ಕಾಂಗ್ರೆಸ್ ಪರವಾದ ಸಭೆಗೆ ಕಳುಹಿಸಿದ್ದದ್ದೇ ದೊಡ್ಡ ಪ್ರಮಾದವಾಗಿತ್ತು, ವಿಷಯ ಹಿರಿಯ ಅಧಿಕಾರಿಗಳಿಂದ "ಇದು ದೇಶದ್ರೋಹದ ಕೆಲಸ" ಎಂದು ನೋಟೀಸ್ ಜಾರಿಗೊಳಿಸಿದ್ದರು. ಮೊದಲೇ ಕಷ್ಟದಲ್ಲಿದ್ದ ಮೇಷ್ಟ್ರಿಗೆ ಶಿವರುದ್ರಪ್ಪನವರ ವಂದೇ ಮಾತರಂ ಮೆರವಣಿಗೆಯಲ್ಲಿ ಭಾಗವಹಿಸುವುದರಿಂದ ತನ್ನ  ಕೆಲಸ ಎಲ್ಲಿ ಕಳೆದುಕೊಳ್ಳುವೆನೆಂಬ ಭಯ. ಇದೆಲ್ಲವನ್ನು ಮನಗಂಡ ತಂದೆ "ಸದ್ಯಕ್ಕೆ ಓದು ಬೇಡ, ಏನೂ ಬೇಡ, ನೆಟ್ಟಗೆ ಮನೆಗೆ ಬಾ" ಒಂದು ಒತ್ತಾಯದಿಂದ ಕರೆಸಿಕೊಂಡರು.

ಅರ್ಧಕ್ಕೆ ಓದನ್ನು ನಿಲ್ಲಿಸಿ ಸುಮಾರು ಮೂರು ತಿಂಗಳು ಹಳ್ಳಿಯಲ್ಲೇ ಪುಸ್ತಕಗಳಲ್ಲಿ ಮುಳುಗಿಹೋಗುತ್ತಾರೆ. ಒಮ್ಮೆ ಏರೋಪ್ಲೇನ್ ಫ್ಯಾಕ್ಟರಿಯಲ್ಲಿ ಯುವಕರು ಬೇಕಿದ್ದಾರೆ ಎಂಬ ಜಾಹಿರಾತಿನಿಂದ ಶಿವರುದ್ರಪ್ಪನವರ ತಂದೆ ಮಗನನ್ನು ಕೆಲಸಕ್ಕೆ ಸೇರಲು ಪ್ರೋತ್ಸಾಹಿಸಿ ಬೆಂಗಳೂರಿಗೆ ಇಂಟ್ರವ್ಯೂಗೆ ಕಳುಹಿಸುತ್ತಾರೆ. ಅಲ್ಲಿ Physical fitness ನಂತರ ಡಾಕ್ಟರ್  your are unfit for this job. ಹೋಗು ಮನೆಗೆ ಎಂದು ಕಳುಹಿಸಿಬಿಡುತ್ತಾರೆ. ಕೊನೆಗೆ ಹ್ಯಾಪ್ ಮೋರೆ ಹಾಕಿಕೊಂಡು ಬಂದ ಶಿವರುದ್ರಪ್ಪನವರು ತಂದೆಯೊಂದಿಗೆ ಸದ್ಯಕ್ಕೆ ಕೆಲಸ ಖಾಲಿ ಇಲ್ಲವಂತೆ ಎಂದು ಸುಳ್ಳು ಹೇಳುತ್ತಾರೆ. 

ಮುಂದೆ ನಗರಸಭೆಗೆ ಬಿಲ್ ಕಲೆಕ್ಟರ್ ವೃತಿಗಾಗಿ ಇಂಟರ್ವ್ಯೂಗೆ ತಂದೆಯವರೇ ಶಿವರುದ್ರಪ್ಪನವರನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಕಮೀಷನರ್ ನಿನ್ನ ವಯಸ್ಸು ಎಷ್ಟು ಎಂದಾಗ ೧೬ ಎಂದು ಕೇಳಿ, "ನೀನು ಮನೆಗೆ ಹೋಗು, ನೀನು ಇನ್ನು ಚಿಕ್ಕವನು ಈ ಕೆಲಸ ನಿನ್ನದಲ್ಲ" ಎಂದುಬಿಡುತ್ತಾರೆ. ಅಲ್ಲೇ ಇದ್ದ ಶಾಂತವೀರಪ್ಪನವರನ್ನು ಕರೆಸಿ 'ಇಷ್ಟು ಚಿಕ್ಕ ಹುಡುಗನ್ನ ಈಗಲೇ ಕೆಲಸಕ್ಕೆ ಸೇರಿಸಲು ಯಾಕ್ರಿ ಕರಕೊಂಡು ಬಂದಿದ್ದೀರಿ? ಈ ಕೆಲಸ ಎಂಥದು ಗೊತ್ತೆ? ಕರೆದುಕೊಂಡು ಹೋಗಿ ಮುಂದಕ್ಕೆ ಓದಿಸಿ’ ಎಂದು ಆ ಕಮೀಷನರ್ ಹೇಳಿ ಕಳುಹಿಸಿಬಿಡುತ್ತಾರೆ. 

ಸ್ವಾತಂತ್ರ್ಯ ಹೋರಾಟದ ನಡುವೆ ತಮ್ಮ ವಿದ್ಯಾಭ್ಯಾಸ ನಿಂತುಹೋಗಿತ್ತು. ೧೯೪೩ರ ಜೂನ್ ವೇಳೆಗೆ ಮತ್ತೆ ತುಮಕೂರು ಇಂಟರ್ ಮೀಡಿಯೇಟ್ ಕಾಲೇಜನ್ನು ಸೇರಿದರು. ಆನಂತರದ ದಿನಗಳಲ್ಲಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಇದ್ದುಕೊಂಡು ದಿನವೂ ಕಾಲೇಜಿಗೆ ಹೋಗಿಬರುತ್ತಲಿದ್ದರು. ಜೂನಿಯರ್ ಇಂಟರ್ ಪರೀಕ್ಷೆ ಪಾಸಾದ ನಂತರ ಸಕಲೇಶಪುರದ ರೇಂಜ್ ಇನ್ಸ್ಪೆಕ್ಟರ್ ಕಛೇರಿಯಲ್ಲಿ ಗುಮಾಸ್ತರಾಗಿ ಬೇಸಿಗೆ ರಜೆಯನ್ನು ಕಳೆದರು. ಮುಂದೆ ಬಿ.ಎ ಓದಬೇಕು ಎಂಬ ಆಸೆಯಿದ್ದರೂ ತಮ್ಮ ತಂದೆಯ ಆಶಯದ ಮೇರೆಗೆ ಆಹಾರ ಧಾನ್ಯಗಳ ಡಿಪೋನಲ್ಲಿ "ರೇಷನ್ ಗುಮಾಸ್ತ"ರಾದರು. ಈ ವೃತ್ತಿಯಿಂದ ಸುತ್ತಮುತ್ತಲ ಜನರ ಬವಣೆ ಮತ್ತು ತಾಕಲಾಟಗಳನ್ನು ನೋಡಿ "ಚಕ್ರವ್ಯೂಹ" ಕಾದಂಬರಿ ಬರೆಯುವಂತೆ ಮಾಡಿತು.  ವಿಪರ್ಯಾಸವೆಂದರೆ ಈ ಕಾದಂಬರಿಯ ಹಸ್ತಪ್ರತಿ ಓದಲು ತೆಗೆದುಕೊಂಡು ಹೋದವರು ಹಿಂದಿರುಗಿಸುವುದೇ ಇಲ್ಲ.

೧೯೪೬ರ ನಂತರ ಮತ್ತೆ ಓದುವ ಮನಸ್ಸು ಮಾಡಿದರು ಆಗ ಮೈಸೂರಿಗೆ ಬಂದು ಬಿ.ಎ ಆನರ್ಸ್ನಲ್ಲಿ ಕನ್ನಡ  ಸೇರಿಕೊಂಡರು. ಅಲ್ಲಿಂದಾಚೆಗೆ ಕೆ.ವಿ ಪುಟ್ಟಪ್ಪ (ಕುವೆಂಪು) ಅವರ ಪಾಠ ಕೇಳುವ ಯೋಗ ಕೂಡಿಬಂದಿತು. 

ಮುಂದೆ ಮತ್ತಷ್ಟು ವಿಷಯಗಳು ನಿಮ್ಮೊಂದಿಗೆ .... 

8 comments:

Mallikarjun Danannavar chikodi said...

ಜಿ ಎಸ್ ಶಿವರುದ್ರಪ್ಪನವರ ಬಗ್ಗೆ ಬರೆದ ಲೇಖನ ಚೆನ್ನಾಗಿದೆ ಜಿ ಎಸ್ ಶಿವರುದ್ರಪ್ಪನವರನ್ನು ಕಳೆದುಕೊಂಡ ನಮಗೆ ತುಂಬಲಾರದ ನಷ್ಟವಾಗಿದೆ.

sunaath said...

ಉತ್ತಮ ಮಾಹಿತಿಪೂರ್ಣ ಲೇಖನ. ಮುಂದಿನ ಭಾಗವನ್ನು ಬೇಗನೇ ನೀಡಿರಿ.

ಚಿನ್ಮಯ ಭಟ್ said...

ಮಾಹಿತಿಗಾಗಿ ಧನ್ಯವಾದ ಸುಗುಣಕ್ಕಾ :)

Badarinath Palavalli said...

ಹಿರಿಯ ಚೇತನ ಜಿ.ಎಸ್.ಎಸ್ ಬಗೆಗೆ ಸಂಗ್ರಹ ಯೋಗ್ಯ ನುಡಿ ನಮನ.

prabhamani nagaraja said...

ಜಿ ಎಸ್ ಶಿವರುದ್ರಪ್ಪನವರ ಬಗ್ಗೆ ಉತ್ತಮ ಮಾಹಿತಿ ನೀಡುತ್ತಿದ್ದೀರಿ ಸುಗುಣರವರೆ, ಮು೦ದಿನ ಭಾಗಕ್ಕಾಗಿ ನಿರೀಕ್ಷಿಸುವ೦ತಾಗಿದೆ.

bilimugilu said...

G.S.S Sir bagge maahiti - chennaagide Suguna.

Pradeep Rao said...

ಜಿ ಎಸ್ ಎಸ್ ಅವರ ಬಗ್ಗೆ ಉತ್ತಮ ಮಾಹಿತಿ... ಅವರು ಶಿಕ್ಷಣದ ದಾರಿಯಲ್ಲಿ ಎದುರಿಸಿದ ಕಷ್ಟಗಳು ಹಾಗು ಒದುವ ಹಂಬಲವನ್ನು ಅವರು ಕಾಪಾಡಿಕೊಂಡಿದ್ದು ನಿಜಕ್ಕೂ ಗಮನಸೆಳೆಯಿತು! ಮುಂದಿನ ಭಾಗಕ್ಕಾಗಿ ಕಾಯುತ್ತಿರುತೇನೆ. ಧನ್ಯವಾದಗಳು!

Abhishek Umesh said...

ತುಂಬಾ ಧನ್ಯವಾದಗಲು..
ನಿಜವಾದ ನುಡಿ ನಮನ