Tuesday, December 3, 2013

ಜಾತಿ ಹಿಂದೆ ಹೋಗುವುದು ಬೇಡ..!!

ನಿನ್ನೆ ದಿನ...

ನಿಮ್ಮ ಬಾಸ್ ಇಲ್ವಾ..? ಅವರ ರೂಮ್ ನಲ್ಲಿ ಕಾಣುತ್ತಿಲ್ಲ, ಎಂದ ಮೆದು ಸ್ವರ ಅತ್ತ ಬಾಗಿಲಿನ ಕಡೆ ಕಣ್ಣು ತೆರೆಯುವಂತೆ ಮಾಡಿತು. (ಆತ ಕಾಂಟ್ರಾಕ್ಟ್ ಕಂಪನಿಯಲ್ಲಿ ನಮ್ಮದೇ ಪ್ರಾಜಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದವ,  ಸುಮಾರು ೪ ವರ್ಷಗಳಿಂದ ಒಂದೇ ಕಡೆ ಕೆಲಸಮಾಡುತ್ತಿದ್ದರಿಂದ ಚಿರಪರಿಚಿತ).

ಇಲ್ಲ ಅನ್ಸುತ್ತೆ
ಯಾಕೆ ಏನ್ ಸಮಚಾರ..? ಎಂದು ಕೇಳುತ್ತಿದ್ದಂತೆ

ಏನಿಲ್ಲ ನನ್ನ ಮಗಳ ಮದುವೆ ಅದಕ್ಕೆ ಅವರಿಗೆ ಪತ್ರಿಕೆ ಕೊಡಬೇಕಿತ್ತು. ಎಂದು ಖುಷಿ ಖುಷಿಯಲ್ಲಿ ಹೇಳುತ್ತ ನಿಂತ.

ಓಹ್ ಹೌದಾ..!! ಯಾಕೆ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ನಿಮಗೆ ಅಷ್ಟು ಪರಿಚಿತರೇ..? ಅದು ಅಲ್ಲದೇ ಆಕೆ ಈಜಿಪ್ಟ್ ನವರು, ಭಾರತಕ್ಕೆ ಬರುತ್ತಾರಾ..?? ಎಂದು ನಾನು ಪ್ರಶ್ನಿಸಿದೆ. 

ಏನಿಲ್ಲ ಸುಮ್ಮನೆ ಮದುವೆ ಅಲ್ವಾ ಅದಕ್ಕೆ ಎಂದ... !! - ಹಾಗೂ ಮುಂದುವರಿದು ಮತ್ತಷ್ಟು ಪ್ರಶ್ನೆ ಕೇಳಿದೆ

ಅದು ಸರಿ ನಾನು ಮತ್ತೆ ಮಿಕ್ಕುಳಿದವರು ನಮ್ಮ ಕಚೇರಿ, ವಿನ್ಯಾಸ ಸಲಹಗಾರ ಕಚೇರಿಯವರಲ್ಲಿ ಎಷ್ಟು ಜನ ಭಾರತಿಯರಿದ್ದಾರೆ. ನಿನ್ನ ಮಗಳು ನನಗೆ ಎಷ್ಟು ಚೆನ್ನಾಗಿ ಪರಿಚಯ (ಆತನ ಮಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವಳನ್ನು ಬಹಳಷ್ಟು ಬಾರಿ ಭೇಟಿ ಮಾಡಿದ್ದೆ) ನಮಗೆಲ್ಲ ಪತ್ರಿಕೆ ಕೊಡಬೇಕು ಎಂದೆನಿಸಲಿಲ್ಲವೇ..?  ಅದೂ ಅಲ್ಲದೇ ನಿಮ್ಮ ಕೇರಳದವರೇ ಆದ ಎಲೆಕ್ಟ್ರಿಕಲ್ ಇಂಜಿನಿಯರ್ ಅವರು ನಿಮ್ಮ ಪಕ್ಕದ ಊರಿನವರು. ಕಳೆದ ಬಾರಿ ಏನೋ ೪-೫ ಕೇಜಿಗಟ್ಟಲೆ ಪಾರ್ಸೆಲ್ ಕಳುಹಿಸಿದ್ದೆ ನಿನ್ನ ಹೆಂಡತಿಗೆ. ಅವರಿಗಾದರೂ ಕೊಡಬಹುದಿತ್ತು ಅಲ್ಲವಾ..? ಅವರು ಮದುವೆಗೆ ಬರಲಾಗದಿದ್ದರೆ ಅವರ ಮನೆ ಕಡೆಯಿಂದ ಯಾರನ್ನಾದರೂ ಕಳುಹಿಸುತ್ತಿದ್ದರು. - ಏಕೆ ಹೀಗೆ ??

ಹಾಗೇನಿಲ್ಲ, ಕೊಡಬಾರದೆಂದೇನಲ್ಲಾ "ನಿಮ್ಮ ಪ್ರಾಜೆಕ್ಟ್ ಮ್ಯಾನೇಜರ್ "ಕ್ರಿಶ್ಚಿಯನ್ " ಅದಕ್ಕೆ ಪತ್ರಿಕೆ ಕೊಡೋಣ ಎಂದು ಬಂದೆ..!!" ಈ ಮಾತು ಕೇಳಿದ ಕೂಡಲೆ ನನಗೇಕೋ ಕಸಿವಿಸಿ ಎನಿಸಿತು. ಆದರೂ ಸಾವರಿಸಿಕೊಂಡೆ.

ಚಿತ್ರ- ನೆಟ್ ಲೋಕ

ಹೀಗೆ ಮಾಡುತ್ತಿರುವುದು ಸರಿಯಲ್ಲಾ, ಆಕೆ ಈಜಿಪ್ಟ್ ನವಳು ಅದೂ ಅಲ್ಲದೇ ಭಾರತ ದೇಶದ ಗಂಧಗಾಳಿಯಿಲ್ಲದವರೂ,  ಅವರಿಗೂ ಪತ್ರಿಕೆ ಕೊಡಿ ಬೇಡವೆಂದು ಹೇಳುತ್ತಿಲ್ಲ, ಯಾವ ದೇಶದವರಾದರೇನು ಎಲ್ಲರ ಆಶೀರ್ವಾದ ನಿಮ್ಮ ಮಗಳಿಗೆ ಬೇಕು. ಜಾತಿ ಒಂದೇ ಎಂದ ಮಾತ್ರಕ್ಕೆ ಮಿಕ್ಕವರನ್ನು ನಿರ್ಲಕ್ಷಿಸುವುದು ಒಳಿತಲ್ಲ. ಜಾತಿ ಯಾರು ಮಾಡಿದರು ನೀವು ಹಿಂದು ಹೆಸರಿನಲ್ಲೇ ಕರೆಯಲ್ಪಡುತ್ತೀರಿ ನಿಮ್ಮ ಹೆಸರಿನಲ್ಲಿ ಭಾರತೀಯ ಮೂಲತೆ ಇದೆ. ಎಲ್ಲರಲ್ಲೂ ಏಕತೆಯನ್ನು ಕಾಣಿ.

ಅದರಲ್ಲೂ ಹೊರ ದೇಶಕ್ಕೆ ಬಂದಾಗ ನಾವು ಜಾತಿಯನ್ನಿಟ್ಟುಕೊಂಡು ಬಂದವರಲ್ಲ, ಭಾರತೀಯರು ಎಂಬುದೊಂದೇ ನಮ್ಮ ಮಂತ್ರ...!! ಜಾತಿಯ ಹಿಂದೆ ಹೋಗದಿರಿ. ಇಂತಹ ನಡವಳಿಕೆ ನಿಮಗೆ ಶೋಭೆ ತರುವಂತಹುದಲ್ಲ. - ಇಷ್ಟು ಮಾತನಾಡುತ್ತಿದ್ದಂತೆ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಬಂದಳು.. ಈತ ಸರಿ ಹೊರಡುವೆ ಎಂದು ಹೇಳಿ ಹೊರಡುತ್ತಿದ್ದವನನ್ನು ತಡೆದು.

"ನಾನು ಇದನ್ನು ಖಂಡಿಸುತ್ತೇನೆ" ಎಂದಷ್ಟೇ ಹೇಳಿ ಸಾಗಾಕಿದೆ..!!

ಸಂಜೆ ಮನೆಗೆ ಹೋದನಂತರ ಈ-ಮೈಲ್ ತೆರೆದಾಗ ಕಂಡಿದ್ದು ಮದುವೆಯ ಕರೆಯೋಲೆ ಜೊತೆಗೆ ೧೦ ಜನರಿಗೂ ಲಗತ್ತಿಸಲಾಗಿತ್ತು. 

ಇಂದು ಬೆಳ್ಳಗ್ಗೆ ಆತ ಬಂದು ಕ್ಷಮೆ ಕೋರಿ ನಾನು ಹಾಗೆ ಮಾಡಬಾರದಿತ್ತು. ತೆಗೆದುಕೊಳ್ಳಿ ಪತ್ರಿಕೆ ಮಗಳಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಹೇಳಿ ಹೊರಟ.

ಇತ್ತ ನಮ್ಮ ಕಚೇರಿಯವರೆಲ್ಲ ಆತನ ಮಗಳಿಗೊಂದು ಉಡುಗೊರೆ ಕೊಟ್ಟು ಆಶೀರ್ವಾದಕ್ಕೆ ಗ್ರೀಟಿಂಗ್ ಕಳುಹಿಸೋಣ ಎಂದು ಎಲ್ಲರೂ ನಿರ್ಧರಿಸಿದರು. ಆದರೆ ಪ್ರಾಜೆಕ್ಟ್ ಮ್ಯಾನೇಜರ್ ಗೆ ಕೊಟ್ಟ ಪತ್ರಿಕೆ ಮಾತ್ರ ಕಸದ ಬುಟ್ಟಿಯಲ್ಲಿತ್ತು ಅದನ್ನು ತಂದು ನನ್ನ ಆಫೀಸ್ ಬಾಯ್ ನನ್ನ ಕೈಗೆ ಕೊಟ್ಟ. 

ಏಕೋ ಮನಸ್ಸಿನೊಳಗೆ ಒಂದು ರೀತಿ. ಆತನಿಗೂ ಮನವರಿಕೆ ಪೂರ್ಣ ಪ್ರಮಾಣದಲ್ಲಾಗಿದೆ ಎಂದುಕೊಂಡಿದ್ದೇನೆ. ಆದರೆ ಯಾರೂ ಜಾತಿ ಹಿಂದೆ ಹೋಗುವುದು ಬೇಡ ಮಾನವೀಯತೆಯೊಂದೇ ಧರ್ಮ ಅದನ್ನು ಪಾಲಿಸಬೇಕಿದೆ ಅಷ್ಟೇ..!!

5 comments:

ಸತೀಶ್ ನಾಯ್ಕ್ said...

ಜಾತಿ.. ಧರ್ಮ.. ಮತ, ಇವುಗಳು ಈ ದೇಶದ ಪರಿಧಿಯನ್ನೂ ದಾಟಿ ಅದು ಅಲ್ಲೂ ಬಾಧಿಸಬಲ್ಲದು ಅಂದ್ರೆ ಜಾತಿಯ ಮೇಲಿನ ಮೋಹ.. ಅದರ ಬಲ, ಮನುಷ್ಯ ಸಹಜ ಪ್ರೀತಿಯನ್ನ ಎಷ್ಟು ಬಲಹೀನವನ್ನಾಗಿಸಿದೆ ಅನ್ನೋ ಕಳವಳ ಆಗುತ್ತದೆ. ಮನುಷ್ಯ ಜಾತಿಯನ್ನ ಧಿಕ್ಕರಿಸುವುದು ಬೇಡ, ಆದರೆ ಜಾತಿ ಧರ್ಮದ ಹೆಸರಲ್ಲಿ ಮನುಷ್ಯತ್ವದ ದಿಕ್ಕೆಡಿಸುವಿಕೆ ಆಗದಿರಲಿ.

Badarinath Palavalli said...

ದೇಶದ ಹೊರಗೂ ಜಾತೀಯತೆಯ ಭೂತ ಕಾಡುತ್ತಿದೆ ಎಂದು ಅಮೇರಿಕಾದಲ್ಲಿ ನೆಲೆಸಿರುವ ನನ್ನ ಅಣ್ಣ ಒಮ್ಮೆ ಹೇಳಿದ್ದರು. ಈ ಕಾಲದಲ್ಲೂ ಈ ರೀತಿ ಮುಂದುವರೆದದ್ದರ ಬಗ್ಗೆ ನಮಗೇ ಖೇದವಾಗಬೇಕಾಷ್ಟೇ!

sunaath said...

ಈ ಜಾತಿ ಎನ್ನುವ ಭೂತ ಭಾರತೀಯರ ಬೆನ್ನನ್ನು ಏರಿ ಕೂತಿದೆ. ಎಲ್ಲೇ ಹೋದರೂ ಅವರನ್ನು ಬಿಡದು ಈ ಭೂತ! ನಿಮ್ಮ ನಿಲುವಿಗಾಗಿ ಸಂತಸವಾಗುತ್ತಿದೆ.

ಚಿನ್ಮಯ ಭಟ್ said...

ಜಾತಿಯ ಬಗ್ಗೆ ಅಭಿಮಾನ ಒಳ್ಳೆಯದೇ ಆದರೆ ಅದೇ ಕೂಪದಲ್ಲಿ ಕೂರಬಾರದಷ್ಟೇ :)

Pradeep Rao said...

ನಿಜ ನಿಜ... ನಮ್ಮವರು ಭಾರತೀಯರು ಎನ್ನುವುದನ್ನು ಬಿಟ್ಟು ಬೇರೆ ದೇಶದವರಾದರೂ ನಮ್ಮ ಜಾತಿ ಎಂಬ ಕಾರಣಕ್ಕೆ ನಮ್ಮವರನ್ನು ನಿರ್ಲಕ್ಷಿಸಿದ್ದು ಖಂಡನೀಯ. ಇಂದಿನ ಆಧುನಿಕ ಯುಗದಲ್ಲೂ ಜನ ತಮ್ಮ ಧೋರಣೆ ಬದಲಿಸಿಕೊಳ್ಳಲು ತಯಾರಿಲ್ಲ ನೋಡಿ!