Thursday, December 26, 2013

ಏನು ಬರುತ್ತದೋ ಅದನ್ನು ಎದುರಿಸುತ್ತ ಒಪ್ಪಿಕೊಳ್ಳುವುದು - ಜಿ ಎಸ್. ಎಸ್.

೧೯೪೯ರಲ್ಲಿ ಬಿ. ಎ. ಆನರ್ಸ್ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಶಿವರುದ್ರಪ್ಪನವರಿಗೆ ದಾವಣಗೆರೆ ಡಿ.ಆರ್.ಎಂ ಕಾಲೇಜಿಗೆ ತಾತ್ಕಾಲಿಕ ಕನ್ನಡ ಉಪನ್ಯಾಸಕರಾಗಿ ನೇಮಕವಾದರು. 

ಮೊಟ್ಟ ಮೊದಲ ಬಾರಿಗೆ ಲೆಕ್ಚರರ್ ಆಗಿ ಮೇಷ ಧರಿಸುವುದು ಹೇಗೆ ಎಂದು ಜಿ.ಎಸ್.ಎಸ್ ಅವರಲ್ಲಿ ಪ್ರಶ್ನೆಗಳು ಕಾಡಿದ್ದವು. ಪಂಚೆ ಉಟ್ಟರೆ ಹುಡುಗರು ಗೇಲಿ ಮಾಡಬಹುದು, ಪೈಜಾಮ ಹಾಕಿಕೊಂಡು ಹೋದರೇ ನಾನು ವಿದ್ಯಾರ್ಥಿ ದಿನಗಳಲ್ಲಿ ಅದೇ ರೀತಿಯ ವೇಷಭೂಷಣದಲ್ಲಿರುತ್ತಿದ್ದೆ. ಪಂಚೆಗಿಂತ ಕೇಡು, ಪ್ಯಾಂಟೇ ವಾಸಿ ಎಂದುಕೊಂಡು ಅದಕ್ಕೆ ಒಪ್ಪುವ ಕೋಟು ಹೊಲಿಸಿಕೊಂಡರಂತೆ ಅವರೇ ಹೇಳುವಂತೆ 'ಸೂಟಾವತಾರಿ'ಯಾಗಿದ್ದೆ ಎಂದು ಹೇಳುತ್ತಾರೆ. ಕಾಲೇಜಿಗೆ ರಿಪೋರ್ಟ್ ಮಾಡಿಕೊಳ್ಳುವ ಹಿಂದಿನ ದಿನವಷ್ಟೇ 'ಶೂ' ಕೊಂಡು ರಾತ್ರಿ ಸ್ವಲ್ಪ ಹೊತ್ತು ರಿಹರ್ಸಲ್ ಸಹ ಮಾಡಿದ್ದರಂತೆ. ಬೆಳಗ್ಗೆ ಮೊದಲ ಪಾಠ ಮಾಡುವ ಮುನ್ನ ಅವರ ಗುರುಗಳಾದ ಕುವೆಂಪು ಅವರನ್ನು ನೆನೆದೆ, ಅವರೇ ಬರೆದ ’ಚಿತ್ರಾಂಗದಾ’ ಕಾವ್ಯವನ್ನು ಕುರಿತು ಒಂದು ಘಂಟೆಗಳ ಕಾಲ ಪಾಠ ಮಾಡಿ ಎಲ್ಲರೊಂದಿಗೆ ಸೈ ಎನಿಸಿಕೊಂಡಿದ್ದರು.

ತದನಂತರ ಮೈಸೂರಿನ ಯುವರಾಜ ಕಾಲೇಜಿಗೆ ವರ್ಗವಾದರು. ೧೯೫೧ರ ವೇಳೆಗೆ ಎಂ.ಎ ಶಿಕ್ಷಣವನ್ನು ಮುಗಿಸಿಕೊಂಡರು. ಆನಂತರ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಎರಡು ವರ್ಷ ಉಪನ್ಯಾಸಕರಾಗಿದ್ದರು. 

"ನಾನು ನಾಳೆ ಏನಾಗಬೇಕು ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಲಿಲ್ಲ. ಏನು ಬರುತ್ತದೋ ಅದನ್ನು ಎದುರಿಸುತ್ತ ಒಪ್ಪಿಕೊಳ್ಳುವುದು ನನಗೆ ಅಭ್ಯಾಸವಾಗಿಬಿಟ್ಟಿದೆ." ಹೀಗೆ ಶಿವರುದ್ರಪ್ಪನವರು ಅವರ ಜೀವನ ತಿರುವು, ಏರಿಳಿತಗಳನ್ನು ಸ್ವೀಕರಿಸಿದ ಬಗ್ಗೆ ಹೇಳಿಕೊಳ್ಳುತ್ತಾರೆ. ಮೈಸೂರಿಗೆ ಭಾರತ ಸರ್ಕಾರದ ಫೆಲೋಷಿಪ್ ಮೇಲೆ, ಕುವೆಂಪು ಅವರ ನಿರ್ದೇಶನದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುವ ಸದಾವಕಾಶ ಇವರಿಗೆ ದೊರಕಿತು.

ಗಂಗೋತ್ರಿಯ ಸ್ನಾತಕೋತರ ಕೇಂದ್ರದಲ್ಲಿ ಪಾಠ ಹೇಳುತ್ತಿದ್ದ ಶಿವರುದ್ರಪ್ಪನವರಿಗೆ ಪರಿಚಿತರೊಬ್ಬರ ಒತ್ತಯದ ಮೇರೆಗೆ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ, ರೀಡರ್ ಹುದ್ದೆಗೆ ಅರ್ಜಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅವರ ಆತ್ಮೀಯ ಸ್ನೇಹಿತರಾದ ಪ್ರಭುಶಂಕರ್ ಅವರೂ ಸಹ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. 

ಈ ವೇಳೆಗಾಗಲೇ ಪ್ರಭುಶಂಕರ್ ಅವರು ಡಿಗ್ರಿ ಕಾಲೇಜಿನಲ್ಲಿ ಉಪನ್ಯಾಸ ಮಾಡುತ್ತಲಿದ್ದರಿಂದ, ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅವರಿಗೆ ಕೆಲಸ ಸಿಕ್ಕರೆ ಅವರೂ ನನ್ನ ಹಾಗೆ ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡವ ಅವಕಾಶ ದೊರೆಯುತ್ತದೆ. ಈ ಕಾರಣಕ್ಕೆ ಜಿ ಎಸ್ ಎಸ್ ಇಂಟರ್ವ್ಯೂಗೂ ಸಹ ಹೋಗದೆ, ಸ್ನೇಹಿತರಿಗೆ ಅವಕಾಶ ನೀಡಿದ್ದರು.  ಆದರೆ ಅವರೇ ಹೇಳಿದಂತೆ ಏನು ಬರುತ್ತೋ ಅದನ್ನು ಸ್ವೀಕರಿಸುವ ವ್ಯಕ್ತಿತ್ವವುಳ್ಳ ಜಿ ಎಸ್ ಎಸ್ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಕನ್ನಡ ವಿಭಾಗದ ರೀಡರ್ ಮತ್ತು ಮುಖ್ಯಸ್ಥರಾಗಿ ನೇಮಕಗೊಂಡಿದ್ದು ಮಾತ್ರ ಅವರಿಗೆ ಆಶ್ವರ್ಯ ನೀಡಿತ್ತು. ಕಾರಣ ಇಷ್ಟೇ ಜಿ ಎಸ್ ಎಸ್ ಅಂದು ಇಂತರ್ವ್ಯೂಗೆ ಹೋಗಿಲ್ಲ. ಆದರೂ ಈ ಆಯ್ಕೆಯನ್ನು ಮಾಡಿದ್ದು ಪ್ರೊ. ತೀ ನಂ ಶ್ರೀಕಂಠಯ್ಯನವರು  ಮತ್ತು ಅವರ ತಂಡ. ಅದು ಒಂದು ರೀತಿ ಬಯಸದೇ ಬಂದದ್ದು.  

ಮೈಸೂರು ವಿಶ್ವವಿದ್ಯಾಲಯದಿಂದ ಡೆಪ್ಯುಟೇಷನ್ ಮೇಲೆ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ತೆರಳುವ ಮುನ್ನವೂ ಜಿ ಎಸ್ ಎಸ್ ತಮ್ಮ ಪ್ರೀತಿಯ ಗುರುಗಳ ಅನುಮತಿಯನ್ನು ಪಡೆದೇ ಮುಂದುವರಿಯುತ್ತಾರೆ. 

ಹೈದಾರಾಬಾದಿನಲ್ಲಿ ಡಿಪ್ಯುಟೇಷನ್ ಮೇಲೆ ತೆರಳಿದ್ದರೂ, ವಾಪಸ್ ಮೈಸೂರಿಗೆ ಬರಬೇಕೆಂಬ ಕಾತುರ ಅವರಲ್ಲಿ ಸದ ಮನೆ ಮಾಡಿತ್ತು. ಈ ಮಧ್ಯೆ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಕರೆಯಲಾದ ರೀಡರ್, ಲೆಕ್ಚರರ್, ಪ್ರೊಫೆಸರ್ ಹೀಗೆ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕನ್ನಡ ಪರಿಸರದಲ್ಲಿಯೇ ತಾನು ಬೆಳೆಯಬೇಕು ಎಂಬ ಆಸೆಗೆ ತಣ್ಣೀರೆರಚುವಂತಹ ಸನ್ನಿವೇಶಗಳು ತಲೆದೋರಿದ್ದವು. ಡೆಪ್ಯುಟೇಷನ್ ಅವಧಿ ಮುಗಿಯುತ್ತಲಿದೇ ಮುಂದೆ ಏನು ಎತ್ತ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಲೇ ಇತ್ತು. ಇದೇ ಸಮಯದಲ್ಲಿ ಅಂದಿನ ಕುಲಪತಿಯಾಗಿದ್ದ ಶ್ರೀ ಮಾಲಿಯವರಿಗೆ ಒಂದು ಪತ್ರ ಬರೆದಿದ್ದರು. "ಅಶೈಕ್ಷಣಿಕ ರಾಜಕೀಯ ಪ್ರವೃತ್ತಿಗಳು ನನ್ನನ್ನು ಮೈಸೂರು ವಿಶ್ವವಿದ್ಯಾಲಯದಿಂದಲೇ ದೂರ ಇಡಲು ಪ್ರಯತ್ನಿಸುವಂತೆ ಕಾಣುತ್ತದೆ" ತಮ್ಮೆಲ್ಲ ಬೇಸರಗಳೊಂದಿಗೆ ಹೀಗೊಂದು ಸಾಲು ಬರೆದಿದ್ದರು. ಆ ಪತ್ರ ಕೆಲಸ ಮಾಡಿತು ಎಂಬುದಕ್ಕೆ ಮೈಸೂರು ಮಹಾರಾಜ ಕಾಲೇಜಿಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕವಾದಾಗ. 

೧೯೬೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ರೀಡರ್ ಹುದ್ದೆಗಾಗಿ ನಡೆದ ಸಂದರ್ಶನದ ಒಂದು ತುಣುಕು ಓದಿ- 

ಪ್ರೋ. ಭೀಮಸೇನ ರಾಯರು ವ್ಯಾಕರಣಗಳ ಬತ್ತಳಿಕೆಗೆ ಕೈ ಹಾಕಿ ಅವರನ್ನು ಸುಲಭವಾಗಿ ಉರುಳಿಸಲು ಪ್ರಯತ್ನಿಸುವ ಮುನ್ನ ಜಿ ಎಸ್. ಎಸ್. ಒಂದು ಮಾತು ಹೇಳುತ್ತಾರೆ. ದಯಮಾಡಿ ವ್ಯಾಕರಣ ಕುರಿತು ನನಗೆ ಪ್ರಶ್ನೆ ಹಾಕಬೇಡಿ, ನನ್ನ ಕ್ಷೇತ್ರ ಅದಲ್ಲ. ಸಾಹಿತ್ಯವನ್ನು ಕುರಿತು ಅದು ಯಾವ ಕಾಲದ್ದೇ ಆಗಲಿ ಕೇಳಿ ಎಂದು ಬಿಡುತ್ತಾರೆ.

ನಂತರ ಪ್ರೊ.ಮಾಳಾವಾಡರು ಷಡಕ್ಷರ ಕವಿಯ "ಶಬರಶಂಕರವಿಲಾಸ" ಗ್ರಂಥ ತೆಗೆದು ಈ ಪದ್ಯದ ಅರ್ಥವನ್ನು ಹೇಳಿ ಎಂದು ಕೇಳುತ್ತಿದ್ದಂತೆ ನಾನು ಅರ್ಥ ಹೇಳುವುದಿಲ್ಲ. ಯಾಕೇ? ಎನ್ನುತ್ತಿದ್ದಂತೆ, ಜಿ ಎಸ್ ಎಸ್ ಅವರದು ದಿಟ್ಟ ಉತ್ತರ "ನೋಡಿ ಸರ್ ನಾನು ಒಬ್ಬ ಅಧ್ಯಾಪಕ, ಹದಿನೈದು ವರ್ಷಗಳಿಗೂ ಮೀರಿದ ಕಾಲದಲ್ಲಿ ಪಾಠ ಹೇಳಿದ್ದೇನೆ. ತರಗತಿಗೆ ಹೋಗುವ ಮುನ್ನ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡೇ ಹೇಳುವುದು ನನ್ನ ಪದ್ಧತಿ, ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಯಾವುದೋ ಪದ್ಯವನ್ನು ತಾವು ತೋರಿಸಿ ಅರ್ಥ ಹೇಳು ಅನ್ನುತ್ತೀರಿ?" ಇದರ ಮೇಲೆ ರೀಡರ್ ಅಂಥ ಹುದ್ದೆಗೆ ಬಂದ ನನ್ನನ್ನು ಯಾವುದೋ ಪದ್ಯವೊಂದರ ಅರ್ಥವನ್ನು ನಾನು ಹೇಳಬಲ್ಲೆನೋ ಇಲ್ಲವೋ ಎಂದು ಶಂಕಿಸುತ್ತೀರಿ. ಈ ಕಾರಣಗಳಿಂದ ನಾನು ಈ ಪದ್ಯಕ್ಕೆ ಅರ್ಥ ಹೇಳುವಿದಿಲ್ಲ. ಎಂದು ಜಿ ಎಸ್ ಎಸ್ ಹೇಳಿಬಿಟ್ಟರಂತೆ.

ನಂತರ ಮಾಳವಾಡರು ಹೋಗಲಿ ಬಿಡಿ... Please enlighten me about this poem ಎಂದು ಹೇಳಿದಾಗ. ಜಿ ಎಸ್ ಎಸ್ ಆ ಪದ್ಯವನ್ನು ಓದಿ ಹೀಗೆ ಹೇಳಿದರು ‘sir there is no light in this poem to enlighten you’ ಅಲ್ಲಿದ್ದ ಕುಲಪತಿಗಳು, ರಿಜಿಸ್ಟ್ರಾರ್ ಎಲ್ಲರೂ ಜೋರು ನಕ್ಕು ವಾತಾವರಣ ತಿಳಿಗೊಂಡಿತು.

 ಅಲ್ಲೇ ಇದ್ದ ರಿಜಿಸ್ಟ್ರಾರ್ ಮಲ್ಲಿಕಾರ್ಜುನಪ್ಪನವರು ಜಿ ಎಸ್ ಎಸ್ ಕುರಿತು ನೀವು ಒಳ್ಳೆಯ ಕವಿ ನಿಮ್ಮ ಕಾವ್ಯವಾಚನವಾಗಲಿ ಎಂದು ಕೇಳುಕೊಂಡ ನಂತರ ಸಂದರ್ಶನ ಹೋಗಿ ಗೋಷ್ಠಿಯಾಯಿತು ಎಂದು ಜಿ ಎಸ್ ಎಸ್ ಅವರು ಹೇಳುತ್ತಾರೆ.

ಈ ಸಂದರ್ಶನದ ಬಗ್ಗೆ ತಿಳಿದವರು ಬೆಂಗಳೂರು ವಿವಿ ಕನ್ನಡ ವಿಭಾಗ ಹಾಳಾಗಿ ಹೋಯಿತು. ಮಹಾಕವಿ ಷಡಕ್ಷರ ದೇವನ ಪದ್ಯದ ಅರ್ಥ ಗೊತ್ತಿಲ್ಲದಿರುವವರೆಲ್ಲಾ ವಿಭಾಗದ ಮುಖ್ಯಸ್ಥರು ಹೀಗೆ ಮಾಡಿದರೆ ನಮ್ಮ ಶಿಕ್ಷಣ ಎಲ್ಲಿಗೆ ನಿಲ್ಲುತ್ತದೆ ಎಂದು ದೊಡ್ಡ ಮನುಷ್ಯರೊಬ್ಬರು ಮೂದಲಿಸಿದ್ದರಂತೆ.

ನಾನು ಓದಿದ ಜಿ ಎಸ್. ಎಸ್. ಅವರ ಹಲವಾರು ಪುಸ್ತಕಗಳು, ಅಂತರ್ಜಾಲದ ಹಲವಾರು ಲೇಖನಗಳು ಅವರ ಮೇಲಿನ ಅಪಾರ ಗೌರವ ಹೆಚ್ಚಿಸಿದೆ.


 ಮುಂದೆ ಕವನದ ಗೀಳು ಮತ್ತು ಬೆಳವಣಿಗೆ... 

(ತಪ್ಪಿದ್ದಲ್ಲಿ ಕ್ಷಮಿಸಿ. ನಾ ಓದಿದ ಮಾಹಿತಿಗಳನ್ನೆಲ್ಲ ಕಲೆಹಾಕಿ ನೆನಪು ಮಾಡಿಕೊಂಡು ಬರೆಯುತ್ತಿರುವೆ)

ಮೊದಲ ಭಾಗ ಓದಿಲ್ಲದೇ ಇರುವವರು ಈ ಕೆಳಕಂಡ ಲಿಂಕ್ ಗೆ ಭೇಟಿ ನೀಡಿ:
http://mrudhumanasu.blogspot.com/2013/12/blog-post_24.html

4 comments:

Pradeep Rao said...

ನಿರೀಕ್ಷೆಯಂತೆ ಈ ಕಂತು ಬಹಳ ಕುತೂಹಲಕಾರಿಯಾಗಿದೆ... ಅಪಾರ ಮಾಹಿತಿ.. ಸಂದರ್ಶನದ ಸನ್ನಿವೇಷ ಚೆನ್ನಾಗಿತ್ತು! ಮತ್ತೊಂದು ಅಚ್ಚರಿಯ ಸುದ್ದಿ ಎಂದರೆ, ಅವರು ದಾವಣಗೆರೆಯ ಧ.ರಾ.ಮ. ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ವಿಷಯ! ಇದು ನನಗೆ ತಿಳಿದೇ ಇಲ್ಲ.. ನಾನು ನನ್ನ ಮೊದಲನೆಯ ಹಾಗು ದ್ವಿತೀಯ ಪಿಯುಸಿ ಓದಿದ್ದು ಅದೇ ಕಾಲೇಜಿನಲ್ಲಿ! ಮುಂದಿನ ಕಂತಿಗಾಗಿ ಕಾಯುತ್ತಿರುತ್ತೇನೆ..

ಜಲನಯನ said...

ಮೂರು ದಿನಕ್ಕೆ ಹಿಂದೆಯೇ ನೋಡಿದ್ದೆ ಆದರೆ ಪೂರ್ತಿ ಓದದೇ ಕಾಮೆಂಟ್ ಬೇಡ ಎಂದು ಸುಮ್ಮನಿದ್ದೆ. ರಾಷ್ಟ್ರ ಕವಿಯ ಜೀವನದ ಕೆಲ ವೃತ್ತಾಂತ ಮತ್ತು ಅವರ ನಿಲುವುಗಳ ಬಗ್ಗೆ ಚನ್ನಾಗಿ ವಿವರಣೆ ನೀಡಿದ್ದೀರಿ, ಚನ್ನಾಗಿದೆ ಲೇಖನ..ಸುಗುಣ.

Badarinath Palavalli said...

ಶೈಕ್ಷಣಿಕ ಕ್ಷೇತ್ರದಲ್ಲಿ ಜಿ.ಎಸ್.ಎಸ್. ಸಮರ್ಥವಾಗಿ ಕಟ್ಟಿಕೊಟ್ಟಿದ್ದೀರಾ.

ಓ ಮನಸೇ, ನೀನೇಕೆ ಹೀಗೆ...? said...

ಮಾಹಿತಿ ಪೂರ್ಣ ಲೇಖನ ಸುಗುಣ..ಜಿ‌ಎಸ್‌ಎಸ್ ಬಗ್ಗೆ ಹೆಚ್ಚು ತಿಳಿದುಕೊಂಡೆ. ಥ್ಯಾಂಕ್ಸ್ ಟು ಯು ..